Sunday, 15th July 2018  

Vijayavani

ಬಾಲಕನ ವಿಡಿಯೋ ಹಿಂದೆ ಬಿಜೆಪಿ ಕೈವಾಡ ಆರೋಪ - ವಿಡಿಯೋ ತನಿಖೆಗೆ ಸದಾನಂದಗೌಡ ಆಗ್ರಹ - ರಾಜಕಾರಣಿಗಳ ಆಟಕ್ಕೆ ಕೊಡವರ ಆಕ್ರೋಶ        26 ವರ್ಷ ಲಿಂಗಾಯತರೇ ರಾಜ್ಯ ಆಳಿದ್ದಾರೆ - ಕುಮಾರಸ್ವಾಮಿ ಸಿಎಂ ಆಗಿ 2 ತಿಂಗಳಾಗಿದೆ - ಉತ್ತರ ಕರ್ನಾಟಕ ನಿರ್ಲಕ್ಷ್ಯ ಆರೋಪಕ್ಕೆ ದೇವೇಗೌಡ ತಿರುಗೇಟು        ಕೊನೆಗೂ ಶಿರಾಡಿ ಘಾಟ್‌ ಲೋಕಾರ್ಪಣೆ - ವಾಸ್ತು ಪ್ರಕಾರ ರೇವಣ್ಣ ಉದ್ಘಾಟನೆ - ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ        ಮಟನ್ ಬಿರಿಯಾನಿ, ಚಿಕನ್ ಚಾಪ್ಸ್, ಬೋಟಿ ಗೊಜ್ಜು, ಮೊಟ್ಟೆ - 25 ಸಾವಿರ ಮಂದಿಗೆ ಭರ್ಜರಿ ಬಾಡೂಟ - ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ಜಿಟಿಡಿ ಕೃತಜ್ಞತೆ        ಒಂದು ದೇಶ ಒಂದೇ ಚುನಾವಣೆ - ಮೋದಿ ಪರಿಕಲ್ಪನೆಗೆ ಸೂಪರ್‌ಸ್ಟಾರ್‌ ಬೆಂಬಲ - ಹಣ, ಸಮಯ ಉಳಿತಾಯ ಎಂದ ರಜನಿ        ಉಕ್ಕಿಹರಿಯುತ್ತಿರೋ ಕೃಷ್ಣೆ - ಬೆಳಗಾವಿ, ಚಿಕ್ಕೋಡಿ ಭಾಗದಲ್ಲಿ ಪ್ರವಾಹ ಪರಿಸ್ಥಿತಿ - ಇತ್ತ ತಮಿಳುನಾಡಿನಲ್ಲಿ ಕಾವೇರಿ ಭೋರ್ಗರೆತ       
Breaking News

ಮನರಂಜನೆ ಮಾರಕವಾಗದಿರಲಿ

Saturday, 12.08.2017, 3:00 AM       No Comments

ನರಂಜನೆಯ ಮೂಲಸೆಲೆಯಾಗಬೇಕಾದಂಥ ಬಾಬತ್ತುಗಳೇ ಮಾರಕವಾಗಿ ಪರಿಣಮಿಸುತ್ತಿರುವುದು ಆತಂಕಕಾರಿ ಬೆಳವಣಿಗೆ. ಆನ್​ಲೈನ್ ಆಟ ಎಂಬ ಹಣೆಪಟ್ಟಿ ಹೊತ್ತಿರುವ ‘ಬ್ಲೂ ವೇಲ್‘ ಇದಕ್ಕೊಂದು ಉದಾಹರಣೆ. ಇದರ ಸೆಳೆತಕ್ಕೆ ಸಿಕ್ಕವರು ಆರಂಭಿಕ ಹಂತದಲ್ಲೇ ಎಚ್ಚೆತ್ತುಕೊಳ್ಳದಿದ್ದರೆ, ಹಿಂದಿರುಗಿ ಬರಲಾಗದಂಥ ಹಂತಕ್ಕೆ ತಲುಪಿಬಿಡುತ್ತಾರೆ ಎಂಬುದಕ್ಕೆ ಹಲವು ನಿದರ್ಶನಗಳಿವೆ. ಮುಂಬೈನಲ್ಲಿ ಬಾಲಕನೊಬ್ಬ ಈ ಮಾರಕ ಆಟದ ಬಲೆಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದು ನೆನಪಿಂದ ಮಾಸುವ ಮುನ್ನವೇ, ಮಧ್ಯಪ್ರದೇಶದ ಇಂದೋರ್​ನಲ್ಲಿ ಈ ಆಟ ಒಡ್ಡುವ 50 ದಿನಗಳ 50 ಸವಾಲುಗಳನ್ನು ಬೆನ್ನತ್ತಿದ 7ನೇ ತರಗತಿಯ ವಿದ್ಯಾರ್ಥಿಯೊಬ್ಬ, ಅದರ ಅಂತಿಮ ಟಾಸ್ಕ್ ಎನ್ನಲಾಗುವ ಆತ್ಮಹತ್ಯೆಗೆ ಮುಂದಾಗಿದ್ದ ಆಘಾತಕಾರಿ ಸಂಗತಿ ವರದಿಯಾಗಿದೆ. ಸಕಾಲದಲ್ಲಿ ಸ್ನೇಹಿತನೊಬ್ಬ ನೆರವಿಗೆ ಬಂದ ಕಾರಣ ಸಂಭಾವ್ಯ ಅವಘಡ ತಪ್ಪಿತು.

ಆನ್​ಲೈನ್ ಆಟಗಳ ಗೀಳು ಎಷ್ಟರಮಟ್ಟಿಗೆ ಜೀವಕ್ಕೆ, ಅದರಲ್ಲೂ ಪ್ರಪಂಚವನ್ನೇ ಸರಿಯಾಗಿ ನೋಡದ ಮಕ್ಕಳಿಗೆ ಸಂಚಕಾರ ತಂದೊಡ್ಡುತ್ತಿದೆ ಎಂಬುದಕ್ಕೆ ಇಂಥ ಪ್ರಕರಣಗಳೇ ಸಾಕ್ಷಿ. ‘ಜ್ಞಾನದ ಕಿಟಕಿ‘ ಅಂತರ್ಜಾಲವು, ಅಶ್ಲೀಲ ಚಿತ್ರಗಳ ವೀಕ್ಷಣೆಗೆ ಹೆದ್ದಾರಿಯಾಗಿ ಪರಿಣಮಿಸಿ, ತನ್ಮೂಲಕ ಮಕ್ಕಳಲ್ಲಿ ಹಲವು ತೆರನಾದ ವಿಕೃತಿಗೆ ಕಾರಣವಾಗುತ್ತಿರುವ ದುರಂತ ಒಂದೆಡೆಯಾದರೆ, ಲಗಾಮಿಲ್ಲದ ಇಂಥ ಆನ್​ಲೈನ್ ಆಟಗಳ ಪಿಡುಗು ಮತ್ತೊಂದೆಡೆ ಕಾಡುತ್ತಿದೆ. ಮಾನಸಿಕವಾಗಿ ದುರ್ಬಲರಾಗಿರುವ ಯಾರು ಬೇಕಾದರೂ ಇಂಥ ಪ್ರಲೋಭನಕಾರಿ ಮತ್ತು ಮಾರಕ ಆಟಗಳ ಬಿಗಿಮುಷ್ಟಿಗೆ ಸಿಲುಕಬಹುದಾದ ಸಾಧ್ಯತೆ ಇರುವುದರಿಂದ, ಪಾಲಕರು ಈ ನಿಟ್ಟಿನಲ್ಲಿ ಮಕ್ಕಳ ಮೇಲೆ ಹೆಚ್ಚೆಚ್ಚು ಗಮನ ಹರಿಸಬೇಕಾಗಿಬಂದಿದೆ.

ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ದುಡಿಮೆಯ ಕೈಗಳಲ್ಲಿ ಮಾತ್ರವೇ ಕಾಣಬರುತ್ತಿದ್ದ ಸ್ಮಾರ್ಟ್​ಫೋನ್, ಟ್ಯಾಬ್, ಲ್ಯಾಪ್​ಟಾಪ್ ಮೊದಲಾದ ಅತ್ಯಾಧುನಿಕ ಗ್ಯಾಜೆಟ್​ಗಳಿಂದು ಮಕ್ಕಳ ಕೈಯಲ್ಲಿ ನಲಿಯುವ ಆಟಿಕೆಗಳಾಗಿಬಿಟ್ಟಿವೆ. ಈ ಸಾಧನಗಳ ಮೂಲಕ ಆನ್​ಲೈನ್ ಸಂಪರ್ಕಕ್ಕೆ ತೆರೆದುಕೊಳ್ಳುವ ಮಕ್ಕಳು, ಯುಕ್ತಾಯುಕ್ತ ವಿವೇಚನೆ ಇಲ್ಲದ ಕಾರಣಕ್ಕೋ, ಕೆಟ್ಟ ಕುತೂಹಲದಿಂದಲೋ ಹಲವು ಅನಪೇಕ್ಷಿತ ವಲಯಗಳಿಗೆ ಪ್ರವೇಶಿಸುವ ಅಪಾಯವಿದೆ. ಅದರಲ್ಲೂ ನಿರ್ದಿಷ್ಟ ವೆಬ್​ಸೈಟ್ ಅಥವಾ ಆಪ್ ಅನ್ನು ಹೊಂದಿಲ್ಲದೆ ಆನ್​ಲೈನ್​ನಲ್ಲಿ ಸ್ವೇಚ್ಛೆಯಾಗಿ ಹರಿದಾಡುವ ಬ್ಲೂ ವೇಲ್ ಗಾಳಕ್ಕೆ ಮಕ್ಕಳು ಮತ್ತು ದುರ್ಬಲ ಮನಸ್ಸಿನವರು ಸುಲಭಕ್ಕೆ ಸಿಕ್ಕಿಬೀಳುತ್ತಾರೆ. ಟಾಸ್ಕ್ ಹಣೆಪಟ್ಟಿಯಡಿ ಒಂದೊಂದೇ ಕಾರ್ಯಭಾರವನ್ನು ಆಟಗಾರರ ಮೇಲೆ ಹೇರುತ್ತ ಹೋಗುವ ಬ್ಲೂ ವೇಲ್, ಟಾಸ್ಕ್​ನಿಂದ ಹಿಂದೆ ಸರಿದರೆ ಉಂಟಾಗುವ ಅಪಾಯಗಳ ಬಗ್ಗೆ ಬೆದರಿಕೆಯನ್ನೂ ಹಾಕುತ್ತದೆ. ಬ್ಲೇಡ್​ನಿಂದ ಕೈಯನ್ನು ಕೊಯ್ದುಕೊಳ್ಳುವಂತೆ ಪ್ರಚೋದಿಸುವುದರಿಂದ ಮೊದಲ್ಗೊಂಡು, ಆತ್ಮಹತ್ಯೆಯ ಹೊಸ್ತಿಲವರೆಗೆ ತಂದು ನಿಲ್ಲಿಸುವಷ್ಟರವರೆಗಿನ ಅಪಾಯಕಾರಿ ಕಾರ್ಯಭಾರಗಳು ಈ ಆಟದಲ್ಲಿವೆ. ಇಂಥ ಆಟಗಳಲ್ಲಿ ಭಾಗವಹಿಸುವವರು ಕ್ರಮೇಣ ಖಿನ್ನತೆ, ಬಳಲಿಕೆ, ಮಂಕಾಗುವಿಕೆಯಂಥ ಅಪಸಾಮಾನ್ಯ ಸ್ಥಿತಿಗಳ ಬಲಿಪಶುವಾಗಬಹುದು. ಆದ್ದರಿಂದ ಪಾಲಕರು ಮಕ್ಕಳಲ್ಲಿ ಅರಿವು ತುಂಬಬೇಕಿದೆ. ಆನ್​ಲೈನ್ ಆಟಗಳು ಯಾವೊಂದು ನಿರ್ದಿಷ್ಟ ದೇಶದ ಕಾನೂನಿಗೆ ಬಗ್ಗುವುದು-ತಗ್ಗುವುದು ಅಂದುಕೊಂಡಷ್ಟು ಸುಲಭವಲ್ಲವಾದರೂ, ಈ ನಿಟ್ಟಿನಲ್ಲೊಂದು ನಿಯಂತ್ರಕ ವ್ಯವಸ್ಥೆಯನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಶಿಕ್ಷಣ ತಜ್ಞರು, ಮನಶ್ಶಾಸ್ತ್ರಜ್ಞರು ಮತ್ತು ಆಳುಗರು ಜತೆಗೂಡಿ ಸಮಾಲೋಚಿಸಬೇಕಿದೆ.

Leave a Reply

Your email address will not be published. Required fields are marked *

Back To Top