Sunday, 19th August 2018  

Vijayavani

ರಣಚಂಡಿ ಮಳೆಗೆ ಕುಸಿಯುತ್ತಿದೆ ಕೊಡಗು - ಮತ್ತೆ ಜೋರಾಯ್ತು ಮಳೆ ಅಬ್ಬರ - ಮುಕ್ಕೋಡ್ಲು ಗ್ರಾಮದಲ್ಲಿ 80 ಜನರ ರಕ್ಷಣೆ        ಕ್ಷಣ ಕ್ಷಣಕ್ಕೂ ಆತಂಕ, ಬಿರುಕು ಬಿಟ್ಟ ಧರೆ - ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದೆ ಬೆಟ್ಟ,ಗುಡ್ಡ - ಕಣ್ಮುಂದೆಯೇ ನೆಲಸಮ ವಾಗ್ತಿದೆ ಬದುಕು        ಕೊಡಗಲ್ಲಿ ಇಂದು ಸಿಎಂ ಎಚ್​ಡಿಕೆ ಪ್ರವಾಸ - ಸಂತ್ರಸ್ಥರ ನೋವು ಆಲಿಸಲಿರುವ ಬಿಎಸ್​ವೈ - ನಿರಾಶ್ರಿತರಿಗೆ ನೆರವು ಅಂದ್ರು ರೇವಣ್ಣ        ಸಂತ್ರಸ್ಥರಿಗೆ ಸ್ಯಾಂಡಲ್​ವುಡ್​​​​​​​​​ ನೆರವಿನ ಹಸ್ತ - ಅಗತ್ಯವಸ್ತುಗಳ ಪೂರೈಸಿದ ಸ್ಟಾರ್ಸ್​​​​​​​​​​​ - ಕೈಲಾದ ಸಹಾಯ ಮಾಡ್ತಿದ್ದಾರೆ ಕರುನಾಡ ಜನರು        ಕೇರಳದಲ್ಲಿ ಕಡಿಮೆಯಾಗ್ತಿಲ್ಲ ನೆರೆ ಅಬ್ಬರ - ಸಾವಿನ ಸಂಖ್ಯೆ 357ಕ್ಕೇ ಏರಿಕೆ - ದೇವರನಾಡಿಗೆ ಹರಿದು ಬರ್ತಿದೆ ನೆರವಿನ ಮಹಾಪೂರ        ಭಾರತ - ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​​​​ ಪಂದ್ಯ - ಬೃಹತ್ ಮೊತ್ತದತ್ತ ಟೀಂ ಇಂಡಿಯಾ - ಶತಕದ ಗಡಿಯಲ್ಲಿ ಎಡವಿದ ಕೊಹ್ಲಿ       
Breaking News

ಮಧ್ಯಪ್ರಾಚ್ಯದಲ್ಲಿ ಕೊನೆಗೊಳ್ಳದ ಧರ್ಮಯುದ್ಧ

Tuesday, 20.06.2017, 3:04 AM       No Comments

ಮಧ್ಯಪ್ರಾಚ್ಯದಲ್ಲಿ ಸಂಘರ್ಷಗಳು ಮುಗಿಯುವ ಲಕ್ಷಣಗಳೇ ಇಲ್ಲ. ಮೂರು ಪ್ರಮುಖ ಧರ್ಮಗಳು ಉದಯಿಸಿದ ಈ ಭೂಮಿಯಲ್ಲಿ ಶಾಂತಿ ಮರೀಚಿಕೆಯಾಗಿಯೇ ಉಳಿದಿರುವುದು ದುರ್ದೈವದ ಸಂಗತಿ. ಮನುಷ್ಯರ ಈ ಅಸಹನೆ, ಅಸಮಾಧಾನಕ್ಕೆ ಕೊನೆ ಯಾವಾಗ ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿರುವುದು ಕಾಲದ ವ್ಯಂಗ್ಯ.

ಮಧ್ಯಪ್ರಾಚ್ಯದ ಇತಿಹಾಸವೇ ಒಂದರ್ಥದಲ್ಲಿ ಭಯಂಕರ. ಅಲ್ಲಿ ಮನುಷ್ಯನ ಜನನವಾಗಿ ‘ನಾಗರಿಕತೆ’ (?!) ಹುಟ್ಟಿದಾಗಿನಿಂದಲೂ ಕಣ್ಣಿಗೆ ಢಾಳಾಗಿ ಕಾಣುವ ಸಂಗತಿ ಒಂದೇ, ಅದು ಮಾನವ-ಮಾನವರ ನಡುವಿನ ಸಂಘರ್ಷ. ಹಿಂದೆಲ್ಲ ಮಾನವರು-ರಾಕ್ಷಸರು, ದೇವ-ದಾನವರ ಹೋರಾಟದ ಬಗ್ಗೆ ಕೇಳುತ್ತಿದ್ದೆವು. ಆದರೆ ಇಲ್ಲಿ ಮನುಷ್ಯರ ವಿರುದ್ಧ ಸಂಘರ್ಷ ಸಾರಿರುವುದು ಮನುಷ್ಯರೇ. ಒಂದು ಮುಗಿಯಿತು ಅಂದುಕೊಳ್ಳುವಾಗ ಮತ್ತೊಂದು, ಮಗದೊಂದು ಘರ್ಷಣೆ ಸ್ಪೋಟವಾಗಿ ಶಾಂತಿಯನ್ನು ನುಂಗಿಹಾಕುವ ವಿದ್ಯಮಾನ ಹಿಂದಿನಿಂದಲೂ ಇಲ್ಲಿ ನಡೆದುಕೊಂಡು ಬಂದಿದೆ.

ಈಗ ಜನಸಂಖ್ಯೆ, ಜನದಟ್ಟಣೆ, ಜನರ ಆಕಾಂಕ್ಷೆಗಳು, ಬಯಕೆಗಳು ಎಲ್ಲವೂ ಹೆಚ್ಚಿರುವುದರಿಂದ ಸಂಘರ್ಷವೂ ಹೆಚ್ಚಿದೆ ಎನ್ನಬಹುದು. ಆದರೆ ಹಿಂದೆಲ್ಲ ಹೀಗಿರಲಿಲ್ಲ. ಆಗ ಇದ್ದದ್ದು ಸೀಮಿತ ಜನಸಮುದಾಯ. ಆದರೂ ಸಂಘರ್ಷಗಳು ಹುಟ್ಟಿಕೊಂಡವು, ಒಂದು ಸಂಘರ್ಷ ಮತ್ತೊಂದನ್ನು ಹುಟ್ಟುಹಾಕಿ, ಬದುಕೇ ಸಂಘರ್ಷಮಯವಾಯಿತು. ಒಂದು ಧರ್ಮದವರು ಇನ್ನೊಂದು ಧರ್ಮದ ವಿರುದ್ಧ, ಅವರು ಮಗದೊಂದು ಧರ್ಮದ ವಿರುದ್ಧ ಕತ್ತಿಮಸೆಯುವ ಚಾಳಿಗೆ ಕಡಿವಾಣ ಬೀಳಲಿಲ್ಲ.

ಅಷ್ಟಕ್ಕೂ ಮಧ್ಯಪ್ರಾಚ್ಯ ಅಂತಿಂಥ ಭೂಮಿಯೇನಲ್ಲ. ಈ ನೆಲದಲ್ಲೇ ವಿಶ್ವದ ಮೂರು ಪ್ರಮುಖ ಧರ್ಮಗಳು ಉದಯಿಸಿವೆ. ಮೊದಲಿಗೆ ಇಲ್ಲಿ ಯಹೂದಿ ಧರ್ಮ ಹುಟ್ಟಿಕೊಂಡಿತು. ಬಳಿಕ ಏಸು ಕ್ರಿಸ್ತ, ಕ್ರೖೆಸ್ತ ಧರ್ಮವನ್ನು ಸ್ಥಾಪಿಸಿದರೆ, ನಂತರ ಮೊಹಮ್ಮದ್ ಪೈಗಂಬರರು ಇಸ್ಲಾಂ ಧರ್ಮವನ್ನು ಸ್ಥಾಪಿಸಿದರು. ಹಾಗೆನೋಡಿದರೆ, ವಿಶ್ವಕ್ಕೆ ಮೂರು ಧರ್ಮಗಳನ್ನು ನೀಡಿದ ಭೂಮಿಯಲ್ಲಿ ಸದಾ ಶಾಂತಿ ನೆಲೆಸಿರಬೇಕು. ಸದಾಚಾರ, ಸಾತ್ವಿಕತೆಯಂಥ ಸದ್ಗುಣಗಳು, ಉತ್ತಮ ಮೌಲ್ಯಗಳು ಸದಾ ನೆಲೆಸಿರಬೇಕು ಎಂಬ ಆಶಯ ತಪ್ಪಲ್ಲ. ಆದರೆ, ಮಧ್ಯಪ್ರಾಚ್ಯದಲ್ಲಿ ಎಂದೂ ಹೀಗೆ ಆಗಿಯೇ ಇಲ್ಲ. ಕೆಲವೊಮ್ಮೆ ಭೂಮಿಯ ತುಣುಕಿಗಾಗಿ, ಕೆಲವೊಮ್ಮೆ ನೀರಿಗಾಗಿ, ಮತ್ತೊಮ್ಮೆ ಯಾವುದೋ ಸಣ್ಣಪುಟ್ಟ ಕಾರಣಕ್ಕಾಗಿ ಸಂಘರ್ಷಗಳ ಜ್ವಾಲೆ ಸದಾ ಧಗಧಗಿಸುತ್ತಲೇ ಇತ್ತು. ಇದೇ ಭೂಮಿಯಲ್ಲಿ 1.24 ಲಕ್ಷ ಪ್ರವಾದಿಗಳು ಜನಿಸಿದರು ಎಂದು ಧರ್ಮಗ್ರಂಥ ಹೇಳುತ್ತದೆ. ಜಗದಲ್ಲಿ ಶಾಂತಿ-ಸೌಹಾರ್ದತೆ ಸ್ಥಾಪಿಸಬೇಕಾದ ಧರ್ಮಗಳೇ ಪರಸ್ಪರ ಕಿತ್ತಾಟಕ್ಕೆ ಇಳಿದವು. ಇವುಗಳ ನಡುವಿನ ಘರ್ಷಣೆಗೆ ‘ಧರ್ಮಯುದ್ಧ’ ಎನ್ನಲಾಯಿತು. ಅಷ್ಟಕ್ಕೂ ಧರ್ಮಗಳು ಯುದ್ಧಕ್ಕೆ ನಾಂದಿ ಹಾಡಬೇಕೇ ಎಂಬುದು ಮೂಲಜಿಜ್ಞಾಸೆ.

ಮೊದಲಿಗೆ ನಡೆದದ್ದು ಕ್ರಿಶ್ಚಿಯನ್ನರು ಹಾಗೂ ಯಹೂದಿಗಳ ಸಂಘರ್ಷ. ಇದು ಹಲವು ವರ್ಷಗಳವರೆಗೆ ಮುಂದುವರಿದು ತಲ್ಲಣ, ಆತಂಕಗಳನ್ನು ಸೃಷ್ಟಿಸಿತು. ಇವರ ನಡುವಿನ ಕಿತ್ತಾಟ ತಣಿಸಲು ನಡೆಸಲಾದ ಪ್ರಯತ್ನಗಳೆಲ್ಲ ಬೋರಲು ಬಿಂದಿಗೆ ಮೇಲೆ ನೀರು ಸುರಿದ ಹಾಗಾಯಿತು. ಎರಡೂ ಧರ್ವಿುಯರಲ್ಲಿ ಅಸಹನೆ ವ್ಯಾಪಕವಾಗಿದ್ದರಿಂದ ಸಂಘರ್ಷದ ಜ್ವಾಲೆ ಭೀಕರವಾಗಿಯೇ ಇತ್ತು. ಆಗ ಮಧ್ಯಪ್ರಾಚ್ಯದಲ್ಲಿ ಇದ್ದದ್ದೇ ಇವೆರಡು ಧರ್ಮಗಳು. ಆದರೂ ಇವರ ಕಚ್ಚಾಟ ಮಾನವೀಯತೆಯನ್ನೇ ಅಣಕಿಸಿತು. ಬಳಿಕ ಮಧ್ಯಪ್ರಾಚ್ಯದಲ್ಲಿ ಇಸ್ಲಾಂನ ಉದಯವಾಯಿತು. ಅದರೊಂದಿಗೆ, ಸಂಘರ್ಷ ಹೊಸರೂಪ ಪಡೆದುಕೊಂಡು,

ಕ್ರೖೆಸ್ತ ಹಾಗೂ ಇಸ್ಲಾಂ ಎದುರುಬದುರಾದವು. ಹೊಸ ಅಪಾಯ ಬಂದೊಡನೆ, ಇಷ್ಟು ವರ್ಷ ಪರಸ್ಪರ ಕಾದಾಡುತ್ತಿದ್ದ ಯಹೂದಿಗಳು-ಕ್ರೖೆಸ್ತರ ಮಧ್ಯೆ ಒಪ್ಪಂದ ಏರ್ಪಟ್ಟಿತು! ಇದರ ಪರಿಣಾಮ, ಕ್ರೖೆಸ್ತ-ಇಸ್ಲಾಂ ಸಮರಮತ್ತಷ್ಟು ತೀವ್ರತೆ ಪಡೆಯಿತು.

ಇಲ್ಲಿಗಾದರೂ ಸಂಘರ್ಷ ಮುಗಿಯುತ್ತದೆ ಅಂದುಕೊಂಡವರಿಗೆ ಮತ್ತೆ ನಿರಾಶೆ ಕಾದಿತ್ತು. ಕಾರಣ, ಮರಳುಭೂಮಿಯನ್ನೇ ಹೆಚ್ಚಾಗಿ ಹೊಂದಿರುವ ಮಧ್ಯಪ್ರಾಚ್ಯದಲ್ಲಿ ತೈಲಬಾವಿಗಳು ಪತ್ತೆಯಾದ ಬೆನ್ನಲ್ಲೇ ಮತ್ತೊಂದು ಸುತ್ತಿನ ಘರ್ಷಣೆ ಶುರುವಾಯಿತು! ಈ ಸಂಘರ್ಷ ಧರ್ಮದ ಹೆಸರಲ್ಲಿ ನಡೆದರೂ ಮೂಲೋದ್ದೇಶ ತೈಲಬಾವಿಗಳನ್ನು ಕೈವಶ ಮಾಡಿಕೊಳ್ಳುವುದೇ ಆಗಿತ್ತು ಎಂಬುದು ಬಹಿರಂಗ ರಹಸ್ಯ. ಕ್ರೖೆಸ್ತರು ಬೇರೆಬೇರೆ ಕಾರಣಗಳಿಂದಾಗಿ ಪ್ರಪಂಚದ ವಿವಿಧ ಭಾಗಗಳಿಗೆ ಹೋಗಿ ನೆಲೆಸಿದರು. ಆದರೆ ಯಹೂದಿಗಳು ಹಾಗೂ ಮುಸಲ್ಮಾನರು ಈ ಭೂಮಿಯನ್ನು (ಮಧ್ಯಪ್ರಾಚ್ಯ) ಬಿಟ್ಟು ಕದಲಲಿಲ್ಲ. ದ್ವಿತೀಯ ಮಹಾಯುದ್ಧದ ಬಳಿಕ ಯಹೂದಿಗಳು ಪ್ರತ್ಯೇಕ ರಾಷ್ಟ್ರಕ್ಕಾಗಿ ಒತ್ತಾಯಿಸತೊಡಗಿದರು. ಸುದೀರ್ಘ ಹೋರಾಟದ ಬಳಿಕ ಯಹೂದಿಯರಿಗೆ ಇಸ್ರೇಲ್ ರೂಪದಲ್ಲಿ ಪ್ರತ್ಯೇಕ ರಾಷ್ಟ್ರ ದೊರಕಿತು. ಜತೆಗೆ, ಅರಬ್ ಮುಸಲ್ಮಾನರ 26 ರಾಷ್ಟ್ರಗಳು ಈ ಭಾಗದಲ್ಲಿ ಸೃಷ್ಟಿಯಾದವು. ಮುಸಲ್ಮಾನರು ಈ 26 ರಾಷ್ಟ್ರಗಳಿಗೆ ಸೀಮಿತರಾಗಲಿಲ್ಲ. ತಮ್ಮ ಜನಸಂಖ್ಯೆ ಹೆಚ್ಚಿದಂತೆಲ್ಲ ಪ್ರಪಂಚದ ಇತರೆ ರಾಷ್ಟ್ರಗಳಿಗೂ ಹಬ್ಬಿದರು. ಆದರೆ ಜನಸಂಖ್ಯೆಯಲ್ಲಿ ತೃಣಮಾತ್ರವಿದ್ದ ಯಹೂದಿಯರಿಗೆ ಇದು ಸಾಧ್ಯವಿರಲಿಲ್ಲ. ಹಾಗಾಗಿ ಕ್ರೖೆಸ್ತರ ನೆರವಿನೊಡನೆ ತಮ್ಮ ಜನ್ಮಭೂಮಿ ಇಸ್ರೇಲನ್ನೇ ಕರ್ಮಭೂಮಿಯಾಗಿಸಿಕೊಳ್ಳಲು ನಿರ್ಧರಿಸಿದರು. ಆದರೆ ಇದರ ಅಕ್ಕಪಕ್ಕದ ಇಸ್ಲಾಮಿಕ್ ರಾಷ್ಟ್ರಗಳಿಗೆ ಇಸ್ರೇಲ್ ಅಸ್ತಿತ್ವವೇ ಸಹಿಸದಂತಾಯಿತು. ಇಂದಿಗೂ ಇದೇ ಪರಿಸ್ಥಿತಿ ಮುಂದುವರಿದಿದೆ. ಸುತ್ತಮುತ್ತ ಇರುವ ಇಸ್ಲಾಮಿಕ್ ರಾಷ್ಟ್ರಗಳು ಇಸ್ರೇಲ್​ಗೆ ಸಮಾಧಾನದಿಂದ ಉಸಿರು ತೆಗೆದುಕೊಳ್ಳಲೂ ಬಿಡುತ್ತಿಲ್ಲ. ಈ ಕಾರಣದಿಂದಲೇ ಕಾಲಕಾಲಕ್ಕೆ ಆ ದೇಶಗಳೊಂದಿಗೆ ಇಸ್ರೇಲ್​ನ ಸಂಘರ್ಷ ನಡೆಯುತ್ತಿರುತ್ತದೆ.

ಈವರೆಗೆ ಇಂಥ ಮೂರು ಮಹಾಸಂಘರ್ಷಗಳು ಅಥವಾ ಮಹಾಸಮರಗಳು ನಡೆದಿವೆ. ಈ ಪೈಕಿ 1967ರ ಯುದ್ಧವನ್ನು ಅತ್ಯಂತ ಭೀಕರವೆಂದು ಪರಿಗಣಿಸಲಾಗಿದೆ. ವಿಶ್ವಸಂಸ್ಥೆಯಿಂದ ಹಿಡಿದು ಜಗತ್ತಿನಲ್ಲಿ ಶಾಂತಿ ನೆಲೆಸಲು ಪ್ರಯತ್ನಿಸುವ ಹಲವಾರು ರಾಷ್ಟ್ರಗಳು, ಈ ಎರಡೂ ಶಕ್ತಿಗಳ ನಡುವೆ ಸಮತೋಲನ ಸಾಧಿಸಿ, ಶಾಂತಿ ಸ್ಥಾಪಿಸಲು ಪದೇಪದೆ ಪ್ರಯತ್ನ ನಡೆಸಿವೆ. ಇಸ್ರೇಲಿನ ಗಡಿಗೆ ತಾಗಿಕೊಂಡಿರುವ ದೊಡ್ಡಭಾಗವನ್ನೇ ಪ್ಯಾಲೆಸೆôನ್ ಎಂದು ಕರೆಯಲಾಗುತ್ತದೆ. ಅಲ್ಲಿ ಅಧಿಕ ಸಂಖ್ಯೆಯಲ್ಲಿ ಮುಸ್ಲಿಮರು ನೆಲೆಸಿರುವ ಪರಿಣಾಮ ಮುಸಲ್ಮಾನರ ಪ್ರತ್ಯೇಕ ಪ್ಯಾಲೆಸೆôನ್ ನಿರ್ವಣವಾಯಿತು. ಪ್ರಪಂಚದ ಮಹಾಶಕ್ತಿಗಳು ಏನೇನೋ ಕಸರತ್ತು ಮಾಡಿ ಪ್ರತ್ಯೇಕ ರಾಷ್ಟ್ರ ಕೊಡಿಸಿದವು (ಈ ಕಾಲಘಟ್ಟದ ಹೋರಾಟದಲ್ಲಿ ಯಾಸರ್ ಅರಾಫತ್ ಮುಂಚೂಣಿಯಲ್ಲಿದ್ದರು). ಆದರೆ ಮುಸಲ್ಮಾನರ ಪ್ರತ್ಯೇಕ ಪ್ಯಾಲೆಸೆôನನ್ನು ಮೂಲಭೂತವಾದಿ ಯಹೂದಿಗಳು ಒಪ್ಪಿಕೊಳ್ಳಲು ತಯಾರಿಲ್ಲ. ಪ್ರತ್ಯೇಕ ಪ್ಯಾಲೆಸೆôನ್ ಅವರಲ್ಲಿ ವ್ಯಾಪಕ ನೋವು, ಅಸಹನೆ ಹುಟ್ಟುಹಾಕಿತು. ಹಾಗಾಗಿಯೇ ಇಂದಿಗೂ ಇಲ್ಲಿ ರಕ್ತಪಾತ ನಿಂತಿಲ್ಲ.

ಯಾಸರ್ ಅರಾಫತ್ ಬಳಿಕ ಹಮಾಸ್ ಎಂಬ ಸಂಘಟನೆ ಈ ಸಂಘರ್ಷದ ನೇತೃತ್ವವನ್ನು ಕೈಗೆ ತೆಗೆದುಕೊಂಡಿದೆ. ಇಸ್ರೇಲಿನ ಗಡಿಭಾಗಕ್ಕೆ ಹೊಂದಿಕೊಂಡಿರುವ ಗಾಜಾ ಭಾಗದಲ್ಲಿ ಈ ಸಂಘರ್ಷ ಇನ್ನೂ ತಣಿದಿಲ್ಲ. ಈವರೆಗೆ ಒಂದು ಸಾವಿರಕ್ಕೂ ಅಧಿಕ ಪ್ಯಾಲೆಸೆôನಿಯರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ, ಮಧ್ಯಪ್ರಾಚ್ಯದ ಕೆಲ ಇಸ್ಲಾಮಿಕ್ ರಾಷ್ಟ್ರಗಳು ತಮ್ಮತಮ್ಮಲ್ಲೇ ಬಡಿದಾಡಿಕೊಳ್ಳುತ್ತಿರುವುದು ಗೊತ್ತಿರುವ ಸಂಗತಿಯೇ. ಸಿರಿಯಾ-ಇರಾಕ್ ನಡುವಿನ ಸಂಘರ್ಷ ಶಿಯಾ-ಸುನ್ನಿ ಸ್ವರೂಪವನ್ನು ಪಡೆದುಕೊಂಡಾಗಿದೆ. ಹಾಗಾಗಿ ಈ ಘರ್ಷಣೆಯೂ ಸದ್ಯಕ್ಕೆ ತಣಿಯುವ ಲಕ್ಷಣಗಳಿಲ್ಲ. ಕಾರಣ, ಶಿಯಾ-ಸುನ್ನಿ ಸಂಘರ್ಷಗಳು ಅಲ್ಪಾವಧಿಯಲ್ಲಿ ಕೊನೆಗೊಂಡ ಉದಾಹರಣೆಯೇ ಇತಿಹಾಸದಲ್ಲಿಲ್ಲ. ಇನ್ನು, ಈ ಸಂಘರ್ಷ ತನಗೆ ವರದಾನ; ಎರಡು ಮುಸ್ಲಿಂ ರಾಷ್ಟ್ರಗಳು ಪರಸ್ಪರ ಕಿತ್ತಾಡಿಕೊಳ್ಳುತ್ತಿದ್ದರೆ ಅದು ತನಗೆ ಒದಗಿಬಂದ ಸದವಕಾಶ ಎಂದೇ ಇಸ್ರೇಲ್ ಭಾವಿಸಿದೆ.

ಇರಾಕ್​ನಲ್ಲಿ ಈಗ ಶಿಯಾ ಆಡಳಿತವಿದೆ. ಸದ್ದಾಂ ಹುಸೇನ್ ಕಾಲದವರೆಗೂ ಇಲ್ಲಿ ಸುನ್ನಿಗಳದ್ದೇ ಆಡಳಿತವಿತ್ತು. ಇರಾಕ್​ನ ಜನಸಂಖ್ಯೆಯಲ್ಲಿ ಶೇ.55ರಷ್ಟು ಶಿಯಾಗಳಿದ್ದರೆ, ಶೇ.45ರಷ್ಟು ಸುನ್ನಿಗಳು. ಅಂದರೆ ಶಿಯಾಗಳೇ ಬಹುಸಂಖ್ಯಾತರು. ಆದರೆ ಇಲ್ಲಿಯವರೆಗೆ ಆಡಳಿತ ನಡೆಸಿದ್ದು ಮಾತ್ರ ಸುನ್ನಿಗಳೇ. ಸದ್ದಾಂ ಹುಸೇನ್ ಪತನದ ಬಳಿಕ ಅಮೆರಿಕವು ನೂರುಲ್ ಮಾಲೀಕಿ ನೇತೃತ್ವದಲ್ಲಿ ಇರಾಕ್​ನಲ್ಲಿ ಶಿಯಾ ಸರ್ಕಾರವನ್ನು ಸ್ಥಾಪಿಸಿತು.

ನೆರೆಯ ರಾಷ್ಟ್ರ ಸಿರಿಯಾ ಸುನ್ನಿಬಾಹುಳ್ಯದ್ದಾಗಿರುವುದರಿಂದ ಅಲ್​ಕೈದಾದಿಂದ ತರಬೇತಿ ಪಡೆದುಕೊಂಡಿತು. ಒಸಾಮಾ ಬಿನ್ ಲಾಡೆನ್​ನ ಬಲಗೈಯೆಂದೇ ನಂಬಲಾಗಿದ್ದ ಸುನ್ನಿ ನಾಯಕ ಅಲ್ ಬಗ್ದಾದಿ ತನ್ನನ್ನು ತಾನು ಸುನ್ನಿಗಳ ಖಲೀಫಾ ಎಂದು ಘೊಷಿಸಿಕೊಂಡ. ಈಗ ಸಿರಿಯಾ ಇರಾನ್​ನೊಂದಿಗೂ ಕತ್ತಿ ಮಸೆಯಲು ತಯಾರಾಗಿದೆ. ಇರಾಕ್-ಸಿರಿಯಾ ನಡುವಿನ ಶಿಯಾ-ಸುನ್ನಿ ಸಂಘರ್ಷ ಹೀಗೇ ಮುಂದುವರಿದಲ್ಲಿ ಅದರ ಲಾಭ ಬಗ್ದಾದಿಗೆ ಸಿಗಲಿದೆ. ಅಲ್ಲಿನ ಪ್ರಸಕ್ತ ಸ್ಥಿತಿಯನ್ನು ಅವಲೋಕಿಸಿದರೆ ಸಂಘರ್ಷದ ಇನ್ನಷ್ಟು ಕಿಡಿಗಳು ಹೊತ್ತಿಕೊಳ್ಳುವ ಹಾಗೆ ಕಾಣುತ್ತಿದೆ. ಈ ತಿಕ್ಕಾಟದಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳಲು ಇಸ್ರೇಲ್ ಉತ್ಸುಕವಾಗಿದೆ.

ಗಾಜಾ ಈಗ ಸ್ವತಂತ್ರ ಪ್ಯಾಲೆಸೆôನಿನ ಭಾಗವಾಗಿದ್ದರೂ 1949ರ ಯುದ್ಧದಿಂದಲೂ ಇಸ್ರೇಲ್ ಗಾಜಾದ ಮೇಲೆಯೇ ದೃಷ್ಟಿ ನೆಟ್ಟಿದೆ. ಹಮಾಸ್ ಆಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಗೆರಿಲ್ಲಾ ಯುದ್ಧಕ್ಕಿಳಿದರೆ ಇಸ್ರೇಲ್​ಗೆ ಪೇಚಾಟ ತಪ್ಪಿದ್ದಲ್ಲ. ಆದರೆ ಇದನ್ನು ಮಾಡು-ಇಲ್ಲವೆ ಮಡಿ ಹೋರಾಟದಂತೆ ಸ್ವೀಕರಿಸಿರುವ ಇಸ್ರೇಲ್ ಯಾವುದೇ ಅಪಸವ್ಯಕ್ಕೂ ಅವಕಾಶ ಮಾಡಿಕೊಡಲು ಬಯಸುತ್ತಿಲ್ಲ. ಅಲ್ಲದೆ ಯಾವುದೇ ಒಪ್ಪಂದ-ರಾಜಿಯನ್ನು ಅದು ಬಯಸುತ್ತಿಲ್ಲ. 1967ರಲ್ಲಿ ಅರಬ್ ದೇಶಗಳು-ಇಸ್ರೇಲ್ ನಡುವೆ ನಡೆದ ಆರು ದಿನದ ಯುದ್ಧದಲ್ಲಿ ಇಸ್ರೇಲ್ ಗಾಜಾವನ್ನು ಗೆದ್ದುಕೊಂಡಿತ್ತು. ಅದೇ ಗೆಲುವನ್ನು ಮರುಕಳಿಸಲು ಇಸ್ರೇಲ್ ಹರಸಾಹಸ ಪಡುತ್ತಿದೆ. ಹಾಗಾಗಿ ಈಗ ಇಸ್ರೇಲ್-ಪ್ಯಾಲೆಸೆôನ್ ನಡುವೆ ಯಾವುದೇ ಒಪ್ಪಂದ-ರಾಜಿ ಏರ್ಪಡುವ ಸಾಧ್ಯತೆ ವಿರಳ; ಅಲ್ಲದೆ ಇಸ್ರೇಲ್ ಅಂತಾರಾಷ್ಟ್ರೀಯ ಒತ್ತಡಕ್ಕೂ ಮಣಿಯುವ ಸಾಧ್ಯತೆಯಿಲ್ಲ. ಅತ್ತ ಹಮಾಸ್ ಕೂಡ ಸೋಲೊಪ್ಪಿಕೊಳ್ಳುವ ಮನಸ್ಥಿತಿಯಲ್ಲಿಲ್ಲ. ಈ ಸಮರದಲ್ಲದು ತನ್ನೆಲ್ಲ ಶಕ್ತಿಯನ್ನೂ ಪ್ರಯೋಗಿಸುತ್ತಿದೆ. ಅಂದರೆ ಒಂದೆಡೆ ಸಿರಿಯಾ-ಇರಾಕ್ ನಡುವಿನ ಶಿಯಾ-ಸುನ್ನಿ ಸಂಘರ್ಷ. ಮತ್ತೊಂದೆಡೆ ಇಸ್ರೇಲ್-ಪ್ಯಾಲೆಸೆôನ್ ನಡುವಿನ ಮುಗಿಯದ ಕದನದಿಂದಾಗಿ ಮಧ್ಯಪ್ರಾಚ್ಯ ನಲುಗಿಹೋಗಿದೆ. ಹಿಂದೆ ಧರ್ಮದ ಆಧಾರದಲ್ಲಿ ಆರಂಭವಾದ ಕದನಗಳು ಇಂದಿನ ಆಧುನಿಕ ದಿನಗಳಲ್ಲೂ ಬೇರೆಬೇರೆ ಸ್ವರೂಪದಲ್ಲಿ ಮುಂದುವರಿದಿವೆ. ಇದೆಲ್ಲದರ ನಡುವೆ ಭಾರತ ಕಣ್ಮುಚ್ಚಿಕೊಂಡು ಪ್ಯಾಲೆಸೆôನ್​ಗೆ ಬೆಂಬಲ ನೀಡುತ್ತಿದೆ! ಮಾತ್ರವಲ್ಲ, ಪಿಎಲ್​ಒ (ಕಚ್ಝಛಿಠಠಿಜ್ಞಿಛಿ ಔಜಿಚಿಛ್ಟಿಚಠಿಜಿಟ್ಞ ಣ್ಟಜಚ್ಞಜ್ಢಿಚಠಿಜಿಟ್ಞ)ಗೆ ಪ್ರತಿ ವರ್ಷ ಒಂದು ಕೋಟಿ ಡಾಲರ್​ನ ಹಣಕಾಸು ನೆರವು ನೀಡುತ್ತಿದೆ.

ಒಟ್ಟಾರೆ, ಮಧ್ಯಪ್ರಾಚ್ಯ ಸದ್ಯಕ್ಕಂತೂ ತಣಿಯುವ ಲಕ್ಷಣವಿಲ್ಲ. ಈಗ ನಡೆಯುತ್ತಿರುವ ಕದನಗಳು ನಿಲ್ಲುವ ಹಾಗೆ ಕಾಣುತ್ತಿಲ್ಲ. ಇದೆಲ್ಲದರ ನಡುವೆ ಮಧ್ಯಪ್ರಾಚ್ಯದ ವರ್ತಮಾನ, ಭವಿಷ್ಯ ಏನಾಗಲಿದೆ? ಯಾರಿಗೂ ಗೊತ್ತಿಲ್ಲ. ಒಂದು ವೇಳೆ ಈ ಸಂಘರ್ಷದಲ್ಲಿ ಇಸ್ರೇಲ್ ಹಮಾಸನ್ನು ಸೋಲಿಸಿದರೆ ಸಂಘರ್ಷ ಕೊನೆಗೊಳ್ಳಲಿದೆಯೇ ಎಂಬ ಪ್ರಶ್ನೆಗೂ ‘ಇಲ್ಲ’ವೆಂದೇ ಉತ್ತರಿಸಬೇಕಾಗುತ್ತದೆ. ಭೂಮಿಯ ತುಂಡಿಗಾಗಿ, ನೀರಿಗಾಗಿ ನಡೆಯುವ ಕದನಗಳು ಜಗತ್ತಿನಲ್ಲಿ ಸುಖಾಂತ್ಯಗೊಂಡ ಅಥವಾ ಶಾಶ್ವತವಾಗಿ ಕೊನೆಗೊಂಡ ಉದಾಹರಣೆಗಳೇ ಇಲ್ಲ. ಇನ್ನು, ಶಿಯಾ-ಸುನ್ನಿ ಸಂಘರ್ಷ ನಿಲ್ಲುವ ಮಾತಿರಲಿ, ಇದು ಪೂರ್ತಿ ಇಸ್ಲಾಂ ಜಗತ್ತಿನಲ್ಲಿ ಹರಡಿಕೊಳ್ಳದಿದ್ದರೆ ಸಾಕು ಎಂಬ ಸ್ಥಿತಿಯಿದೆ. ಒಟ್ಟಾರೆ, 1.24 ಲಕ್ಷ ಪ್ರವಾದಿಗಳನ್ನು ನೀಡಿದ ಮಧ್ಯಪ್ರಾಚ್ಯದಲ್ಲಿ ಶಾಂತಿಯನ್ನು ಸ್ಥಾಪಿಸುವವರಾರು? ಸದ್ಯಕ್ಕಂತೂ ಯಾರ ಬಳಿಯೂ ಇದಕ್ಕೆ ಉತ್ತರವಿಲ್ಲ. ಧರ್ಮಯುದ್ಧ ಯುಗ ಕೊನೆಗೊಂಡು ನಿಜಕ್ಕೂ ಧರ್ಮದ ಯುಗ ಅವತರಿಸುವುದೇ? ಹಾಗಾಗಬೇಕಾದರೆ ಏನು ಮಾಡಬಹುದು ಎಂದು ಚಿಂತಿಸುವುದಕ್ಕೆ ಇದು ಸೂಕ್ತ ಕಾಲ.

(ಲೇಖಕರು ರಾಷ್ಟ್ರೀಯ ಉರ್ದು ವಿಕಾಸ ಪರಿಷದ್​ನ ಉಪಾಧ್ಯಕ್ಷರು ಮಧ್ಯಪ್ರಾಚ್ಯ, ಪಾಕಿಸ್ತಾನ ವಿದ್ಯಮಾನಗಳ ನುರಿತ ವಿಶ್ಲೇಷಕರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಖ್ಯಾತ ಬರಹಗಾರರು)

Leave a Reply

Your email address will not be published. Required fields are marked *

Back To Top