Sunday, 19th August 2018  

Vijayavani

ರಣಚಂಡಿ ಮಳೆಗೆ ಕುಸಿಯುತ್ತಿದೆ ಕೊಡಗು - ಮತ್ತೆ ಜೋರಾಯ್ತು ಮಳೆ ಅಬ್ಬರ - ಮುಕ್ಕೋಡ್ಲು ಗ್ರಾಮದಲ್ಲಿ 80 ಜನರ ರಕ್ಷಣೆ        ಕ್ಷಣ ಕ್ಷಣಕ್ಕೂ ಆತಂಕ, ಬಿರುಕು ಬಿಟ್ಟ ಧರೆ - ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದೆ ಬೆಟ್ಟ,ಗುಡ್ಡ - ಕಣ್ಮುಂದೆಯೇ ನೆಲಸಮ ವಾಗ್ತಿದೆ ಬದುಕು        ಕೊಡಗಲ್ಲಿ ಇಂದು ಸಿಎಂ ಎಚ್​ಡಿಕೆ ಪ್ರವಾಸ - ಸಂತ್ರಸ್ಥರ ನೋವು ಆಲಿಸಲಿರುವ ಬಿಎಸ್​ವೈ - ನಿರಾಶ್ರಿತರಿಗೆ ನೆರವು ಅಂದ್ರು ರೇವಣ್ಣ        ಸಂತ್ರಸ್ಥರಿಗೆ ಸ್ಯಾಂಡಲ್​ವುಡ್​​​​​​​​​ ನೆರವಿನ ಹಸ್ತ - ಅಗತ್ಯವಸ್ತುಗಳ ಪೂರೈಸಿದ ಸ್ಟಾರ್ಸ್​​​​​​​​​​​ - ಕೈಲಾದ ಸಹಾಯ ಮಾಡ್ತಿದ್ದಾರೆ ಕರುನಾಡ ಜನರು        ಕೇರಳದಲ್ಲಿ ಕಡಿಮೆಯಾಗ್ತಿಲ್ಲ ನೆರೆ ಅಬ್ಬರ - ಸಾವಿನ ಸಂಖ್ಯೆ 357ಕ್ಕೇ ಏರಿಕೆ - ದೇವರನಾಡಿಗೆ ಹರಿದು ಬರ್ತಿದೆ ನೆರವಿನ ಮಹಾಪೂರ        ಭಾರತ - ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​​​​ ಪಂದ್ಯ - ಬೃಹತ್ ಮೊತ್ತದತ್ತ ಟೀಂ ಇಂಡಿಯಾ - ಶತಕದ ಗಡಿಯಲ್ಲಿ ಎಡವಿದ ಕೊಹ್ಲಿ       
Breaking News

ಮದನ್​ಲಾಲ್ ಧಿಂಗ್ರಾ ಎಂಬ ದಿಟ್ಟ ದೇಶಪ್ರೇಮಿ

Thursday, 17.08.2017, 3:02 AM       No Comments

ಮೇಲ್ನೋಟಕ್ಕೆ ಷೋಕಿಲಾಲನಂತೆ ಕಾಣುತ್ತಿದ್ದ ಆ ಯುವಕನ ಎದೆಯಲ್ಲಿ ದೇಶಭಕ್ತಿಯ ಕಿಡಿಗಳು ನಿಗಿನಿಗಿಸುತ್ತಿದ್ದವು. ಕರ್ನಲ್ ವಾಯಲಿ ಎಂಬ ಆಂಗ್ಲ ಧೂರ್ತನನ್ನು ಕೊಂದುದಕ್ಕಾಗಿ ಕೋರ್ಟ್ ಗಲ್ಲುಶಿಕ್ಷೆ ವಿಧಿಸಿದಾಗ ‘ಥ್ಯಾಂಕ್ಸ್‘ ಎಂದ ಅಮರಜೀವಿ ಧಿಂಗ್ರಾ.

ಲಂಡನ್ನಿನ ಒಂದು ರಸ್ತೆ. ಅಲ್ಲೊಂದು ಭವನ. ಆ ಭವನದ ಕಿಟಕಿಯ ಬಳಿ ಒಬ್ಬ ತರುಣ. ಅವನ ವೇಷ ನೋಡಿದರೆ ಶುದ್ಧ ಪೋಕರಿ ಎನ್ನಬಹುದಿತ್ತು. ಪ್ರಣಯೋನ್ಮಾದದ ಗೀತೆ ಹಾಡುತ್ತಾ ಕಿಟಕಿಯಲ್ಲಿ ಆಸೀನವಾಗಿದ್ದ ಗ್ರಾಮಾಫೋನು.

ಭವನದ ಹೊರಗಡೆ ಗುಂಪುಗೂಡಿರುವ ಪಡ್ಡೆ ಹುಡುಗಿಯರು. ಪದೇಪದೆ ಹಾಡಿದ್ದೇ ಪ್ರಣಯಗೀತೆಯ ಸಾಲುಗಳನ್ನು ಹಾಡುತ್ತಿದ್ದ ಗ್ರಾಮಾಫೋನನ್ನು, ಅದಕ್ಕೆ ತಕ್ಕಂತೆ ಕಣ್ಣು ಮಿಟುಕಿಸಿ ಅಭಿನಯಿಸುತ್ತಿದ್ದ ಪೋಕರಿಯನ್ನು ನೋಡಿ ಆ ಹುಡುಗಿಯರಿಗೆ ಖುಷಿಯೋ ಖುಷಿ. ಕಚಗುಳಿ ಇಡಿಸಿಕೊಂಡವರಂತೆ ನಕ್ಕು ಸುಸ್ತಾದರು ಅವರು. ಅರೆ ಇದೇನಿದು? ಶಿವಪೂಜೆಯಲ್ಲಿ ಕರಡಿ? ಕನ್ನಡಕ ಧರಿಸಿದ್ದ ಸುಮಾರು 26-27ರ ಹರೆಯದ ಒಬ್ಬ ‘ಧೂರ್ತ‘ ಅಲ್ಲಿ ಬಂದವನೇ ಗವಕ್ಕನೆ ಈ ‘ಮನ್ಮಥ‘ ‘ರತಿ‘ಯರ ಮಧ್ಯೆ ಗುಂಡೆಸೆಯುವಂತೆ ಅಬ್ಬರಿಸಿದ: ‘ಏನಿದು? ಒಳಗೆ ಸಭೆ ನಡೆಯುತ್ತಿದೆ ಎಂಬುದು ಗೊತ್ತಿಲ್ಲವೆ? ನೀನಂತೂ ಸಭೆಗೆ ಬಂದಿಲ್ಲ. ಬೇರೆಯವರನ್ನೇಕೆ ಕೆಡಿಸುತ್ತೀಯೆ? ಇದೇನಿದು ನಿನ್ನ ಶೃಂಗಾರಚೇಷ್ಟೆ?‘ ಬಾಲ ಕತ್ತರಿಸಿದ ನರಿಯಂತೆ ಈ ಮನ್ಮಥ ಗ್ರಾಮಾಫೋನನ್ನು ಕಂಕುಳಲ್ಲಿ ಏರಿಸಿ ಅಲ್ಲಿಂದ ಕಾಲ್ತೆಗೆದ. ಹುಡುಗಿಯರೂ ದಿಕ್ಕಾಪಾಲು.

ಉಚ್ಚ ಶಿಕ್ಷಣಕ್ಕಾಗಿ ಇಂಗ್ಲೆಂಡಿಗೆ: ಆ ಯುವಕನ ಹೆಸರು ಮದನ್​ಲಾಲ್ ಧಿಂಗ್ರಾ. ಅಮೃತಸರದ ಪ್ರಖ್ಯಾತ ವೈದ್ಯ, ಬ್ರಿಟಿಷ್ ಆಳರಸರ ಆಪ್ತಬಂಧು ಸಾಹಿಬ್ ಡಿತ್ತಾರ ಎರಡನೆ ಸುಪುತ್ರ. ಆರಂಭಿಕ ವಿದ್ಯಾಭ್ಯಾಸ ಅಮೃತಸರ, ಲಾಹೋರ್​ಗಳಲ್ಲಿ. ಕೆಲಕಾಲ ಡಾರ್ಜಿಲಿಂಗ್​ನ ಒಂದು ಇಲಾಖೆಯಲ್ಲಿ ಶಿಮ್ಲಾ-ಕೊಲ್ಕಾ ಟೊಂಗಾ ಸೇವೆಯಲ್ಲಿ ವೃತ್ತಿ ಜೀವನ. ಆನಂತರ ಇಂಗ್ಲೆಂಡಿನಲ್ಲಿ ಇಂಜಿನಿಯರಿಂಗ್ ಉಚ್ಚ ವಿದ್ಯಾಭ್ಯಾಸದ ಆಸೆ. 1906ರ ಜುಲೈನಲ್ಲಿ ಇಂಗ್ಲೆಂಡಿಗೆ ಪಯಣ. ಅದೇ ವರ್ಷ ಅಕ್ಟೋಬರ್ 19ರಂದು ಯೂನಿವರ್ಸಿಟಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿ ದಾಖಲು.

ಕಾಲಸಂದಂತೆ ಲಂಡನ್ನಿನಲ್ಲಿದ್ದ ಸ್ವಾತಂತ್ರ್ಯವೀರ ವಿನಾಯಕ ಸಾವರ್ಕರ್ ಭೇಟಿ. ಅವರ ಭಾಷಣಗಳೆಂದರೆ ಇವನಿಗೆ ಪರಮಪ್ರೀತಿ. ಅವರೆಂದರೆ ಬಹು ಭಕ್ತಿ. ಭಾರತ ಭವನ (ಸಾವರಕರ್ ಮತ್ತು ಇತರ ಕ್ರಾಂತಿಕಾರಿಗಳ ಕೇಂದ್ರ)ದೊಂದಿಗೆ ಸ್ನೇಹ ಹೆಚ್ಚಿ, 1908ರ ಏಪ್ರಿಲ್ ವೇಳೆಗೆ ಅಲ್ಲೇ ಅವನ ಕಾಯಂ ನಿವಾಸ.

ಒಮ್ಮೆ ಜಪಾನೀಯರ ಶೌರ್ಯ ಪರಾಕ್ರಮಗಳ ಬಗ್ಗೆ ಮಾತು ನಡೆಯುತ್ತಿತ್ತು. ‘ನಾವು ಹಿಂದುಗಳೇನು ಕಡಿಮೆ ಇಲ್ಲ‘ ಎಂದ ಮದನ್. ಅಲ್ಲಿದ್ದವರು ಗಹಗಹಿಸಿದರು. ‘ನಾನು ಹೇಳುವುದು ನಿಜ. ಬೇಕಾದರೆ ಪರೀಕ್ಷಿಸಿ‘ ಎಂದ ಮದನ್. ಸರಿ, ಒಬ್ಬ ಒಂದು ಉದ್ದನೆ ಸೂಜಿ ತೆಗೆದುಕೊಂಡು ಅವನ ಅಂಗೈಯನ್ನು ಮೇಜಿನ ಮೇಲಿಟ್ಟು ಸೂಜಿಯಿಂದ ಚುಚ್ಚಿದ. ಸೂಜಿ ಅಂಗೈ ಮಧ್ಯೆ ಇಳಿದು ಮೇಜಿನ ಹಲಗೆ ತಲಪಿತು. ರಕ್ತ ಚಿಮ್ಮಿತು, ಆದರೆ ಮದನನ ಮುಖದ ಮೇಲೆ ಅದೇ ಮಂದಹಾಸ!

ಇನ್ನೊಮ್ಮೆ ಭಾರತ ಭವನದ ಮೇಲಿನ ಮಹಡಿಯಲ್ಲಿ ಬಾಂಬ್ ತಯಾರಿಕೆಯ ಪ್ರಯೋಗಾಲಯದಲ್ಲಿ ಇವನಿದ್ದ. ಸಾವರ್ಕರ್ ಅಲ್ಲಿಯೇ ಇದ್ದರು. ಇಬ್ಬರೂ ಮಾತಿನಲ್ಲಿ ಮಗ್ನರು. ಅಲ್ಲಿ ಒಲೆಯ ಮೇಲೆ ಗಾಜಿನ ಪಾತ್ರೆಯಲ್ಲಿ ರಾಸಾಯನಿಕ ಮಿಶ್ರಣ ಕುದಿಯುತ್ತಿತ್ತು. ಅದರ ಉಷ್ಣ 300 ಡಿಗ್ರಿ ಸೆಂಟಿಗ್ರೇಡ್ ದಾಟಲಿತ್ತು. ದಾಟಿದರೆ ಅನಾಹುತ, ಆಸ್ಪೋಟನೆ! ಭಾರತ ಭವನದ ಗುಟ್ಟು ಬಟ್ಟಬಯಲು! ಕೂಡಲೇ ಸಾವರ್ಕರ್ ಇಕ್ಕಳಕ್ಕಾಗಿ ಹುಡುಕಲಾರಂಭಿಸಿದರು. ಅದು ತಕ್ಷಣಕ್ಕೆ ಸಿಗಲಿಲ್ಲ. ಅಷ್ಟರಲ್ಲೇ ಮದನ್ ತನ್ನ ಎರಡೂ ಕೈಗಳಿಂದ ಆ ಗಾಜಿನ ಪಾತ್ರೆಯನ್ನು ಹಿಡಿದು ಒಲೆಯಿಂದ ಕೆಳಗಿಳಿಸಿದ. ಕೈ ಸುಟ್ಟಿತು. ಮಾಂಸ ಸುಟ್ಟ ವಾಸನೆ. ಮದನ್ ಶಾಂತನಾಗಿದ್ದ. ಸಾವರ್ಕರ್ ಮನಸ್ಸಿನಲ್ಲೇ ‘ಶಹಭಾಸ್‘ ಅಂದರು.

ಆಗ ಭಾರತದಲ್ಲಿ ವಾತಾವರಣ ಕೊತ ಕೊತ ಕುದಿಯುತ್ತಿತ್ತು. ಖುದಿರಾಂ ಬೋಸ್, ಪ್ರಫುಲ್ಲಚಂದ್ರ ಚಾಕಿಗಳು ಮೊಟ್ಟ ಮೊದಲ ಬಾಂಬ್ ಸಿಡಿಸಿದ್ದರು. ಯುಗಾಂತರ, ಅಭಿನವ ಭಾರತ, ಲೋಕಮಾನ್ಯ ತಿಲಕ್, ಲಜಪತರಾಯ್-ಇವೇ ತರುಣರ ಮನಸ್ಸನ್ನು ತುಂಬಿದ್ದ ಶಬ್ದಗಳು. ಕ್ರಾಂತಿದಾಹ ತರುಣರಲ್ಲಿ ಹೊಕ್ಕಿತ್ತು. ಅಂತೆಯೇ ಮದನನ ಮನಸ್ಸಿನಲ್ಲೂ ಬೃಹದಾಕಾರ ತಾಳಿದ್ದವು ಕ್ರಾಂತಿಯ ಜ್ವಾಲೆಗಳು. 1907ರ ಮೇ ತಿಂಗಳಿನಲ್ಲಿ ಭಾರತ ಭವನದಲ್ಲಿ ಸಾವರ್​ಕರ್ ‘1857ರ ಮಹಾ ಸ್ವಾತಂತ್ರ್ಯ ಸಂಗ್ರಾಮದ ಸುವಣೋತ್ಸವ‘ ಆಚರಿಸಿದರು.

ಭಾರತೀಯ ವಿದ್ಯಾರ್ಥಿಗಳು ಎದೆಯ ಮೇಲೆ ಸ್ವಾತಂತ್ರ್ಯ ಸಂಗ್ರಾಮದ ಬ್ಯಾಡ್ಜ್ ಗಳನ್ನು ಧರಿಸಿ ಕಾಲೇಜಿಗೆ ಹೋದರು. ಮದನ್ ಕೂಡ. ಯಾರೋ ಒಬ್ಬ ಆಂಗ್ಲ ತರುಣ ಇವನ ಬ್ಯಾಡ್ಜ್ ಕೀಳಲು ಕೈ ಹಾಕಿದ. ಇನ್ನು ಕೆಲವರು ಇವನನ್ನು ಮುತ್ತಿದರು. ಅಷ್ಟೆ. ಸರಕ್ಕನೆ ಇವನ ಜೇಬಿನಿಂದ ಚೂರಿ ಹೊರಬಂತು. ಒಂದಿಬ್ಬರಿಗೆ ಬಲವಾಗಿ ಜಾಡಿಸಿದ. ಒಮ್ಮೆಲೆ ಎಲ್ಲರೂ ಅಲ್ಲಿಂದ ಪರಾರಿ!

ಸೇಡಿನ ಕಿಡಿ: ಒಮ್ಮೆ ಸಾವರ್ಕರ್ ಕೈಲಿ ಬೈಗುಳ ತಿಂದ ಮದನ್ ಕೆಲದಿನ ಅವರಿಗೆ ಮುಖ ತೋರಿಸಲಿಲ್ಲ. ಒಂದು ಸಂಜೆ ಇದ್ದಕ್ಕಿದ್ದಂತೆ ಭಾರತ ಭವನದಲ್ಲಿ ಪ್ರತ್ಯಕ್ಷನಾಗಿ ಕೇಳಿದ; ‘ಹುತಾತ್ಮನಾಗುವ ಸಮಯ ಬಳಿ ಸಾರಿದೆಯೇ? ನಿಮಗೆ ಹಾಗನ್ನಿಸುತ್ತದೆಯೇ?’

ಸಾವರ್ಕರ್ ಉತ್ತರಿಸಿದರು: ‘ಹುತಾತ್ಮನಾಗಬಯಸುವವನ ಹೃದಯದಲ್ಲಿ ಅದು ಸುಳಿದಿದ್ದರೆ ಅದರರ್ಥವೇ ಹಾಗೆಂದು.‘ ‘ಹಾಗಾದರೆ ನಾನು ತಯಾರಾಗಿದ್ದೇನೆ‘ ಎಂದ ಮದನ್. ಅಂದಿನ ದಿನಗಳಲ್ಲಿ ಮದನನ ಮನಸ್ಸಿನಲ್ಲಿ ಸೇಡಿನ ಭಾವನೆ ತುಂಬಿಕೊಂಡಿತ್ತು. ಅದಕ್ಕೆ ಕಾರಣ 1909ರ ಜೂನ್ 8ರಂದು ಸಾವರ್ಕರ್​ರ ಹಿರಿಯಣ್ಣ ಬಾಬಾ ಸಾಹೇಬ್​ಗೆ ಕರಿನೀರಿನ ಶಿಕ್ಷೆ ಆಗಿ ಅಂಡಮಾನಿನ ಕತ್ತಲ ಕೂಪಕ್ಕೆ ತಳ್ಳಲ್ಪಟ್ಟಿದ್ದರು. ಮುಂದಿನ ಮಹತ್ ಕಾರ್ಯಕ್ಕೆ ಮದನನ ಸಿದ್ಧತೆಗಳು ಆರಂಭಗೊಂಡವು. ನ್ಯಾಷನಲ್ ಇಂಡಿಯನ್ ಅಸೋಸಿಯೇಷನ್ನಿನ ಟೈಪಿಸ್ಟ್ ಏಮಾ ಜೋಸೆಫಿನ್ ಬೆಕ್​ಳೊಂದಿಗೆ ಸ್ನೇಹ ಬೆಳೆಸಿದ. ಆ ಸಂಸ್ಥೆಯ ಸದಸ್ಯನಾದ. ಈ ಅಸೋಸಿಯೇಷನ್ ಭಾರತೀಯ ವಿದ್ಯಾರ್ಥಿಗಳನ್ನು ಆಂಗ್ಲ ಸಾಮ್ರಾಜ್ಯನಿಷ್ಠರನ್ನಾಗಿ ಮಾಡುವುದನ್ನೇ ತನ್ನ ಉದ್ದೇಶವನ್ನಾಗಿರಿಸಿಕೊಂಡಿತ್ತು. ಅಲ್ಲಿ ಒಬ್ಬ ಆಂಗ್ಲನಿದ್ದ. ಹೆಸರು ಸರ್ ವಿಲಿಯಮ್ ಕರ್ಜನ್ ವಾಯಲಿ. ಅವನು ಭಾರತದಲ್ಲಿ ಮೊದಲು ಸೈನ್ಯ ಖಾತೆಯಲ್ಲಿದ್ದ. ಈಗ ಭಾರತ ಸರ್ಕಾರದ ಕಾರ್ಯದರ್ಶಿಯ ಆಪ್ತ ಕಾರ್ಯದರ್ಶಿ. ಅವನ ಕೆಲಸವೂ ಅದೇ. ಭಾರತೀಯರನ್ನು ಸಾಮ್ರಾಜ್ಯನಿಷ್ಠರನ್ನಾಗಿ ಮಾಡುವುದು. ಮದನನ ಕಣ್ಣು ಅವನ ಕಡೆ ತಿರುಗಿತು. 1907ರ ಜುಲೈ 1! ಅಂದು ನ್ಯಾಷನಲ್ ಇಂಡಿಯನ್ ಅಸೋಸಿಯೇಷನ್ನಿನ ವಾರ್ಷಿಕೋತ್ಸವ ಇಂಪೀರಿಯಲ್ ಇನ್​ಸ್ಟಿಟ್ಯೂಟಿನ ಜಹಾಂಗೀರ್ ಹಾಲ್​ನಲ್ಲಿ ನಡೆಯುವುದಿತ್ತು. ಅಲ್ಲಿಗೆ ಕರ್ಜನ್ ವಾಯಲಿ ಹಾಜರಿರುವವನಿದ್ದ.

ಅಂದು ಸಂಜೆ 6 ಘಂಟೆಗೆ ಧಿಂಗ್ರಾ ಸಿದ್ಧನಾದ. ನೀಲಿ ಪಂಜಾಬಿ ಪೇಟ, ಗಾಗಲ್ಸ್ ಧರಿಸಿದ. ಮೂರು ಪಿಸ್ತೂಲುಗಳನ್ನು, ಎರಡು ಚೂರಿಗಳನ್ನು ತೆಗೆದುಕೊಂಡು ಹೊರಬಿದ್ದ. ಕರ್ಜನ್ ವಾಯಲಿ ಸಭಾಸ್ಥಾನಕ್ಕೆ ಬಂದ.

ಸೇಡು ತೀರಿತ್ತು: ಭಾಷಣ ಮುಗಿದು ಗಾಯನ, ನರ್ತನಗಳು ಆರಂಭವಾದವು. ವಾಯಲಿ ವೇದಿಕೆಯಿಂದ ಕೆಳಗಿಳಿದು ಬಂದು ಸಭಿಕರೊಡನೆ ನೃತ್ಯ ಮಾಡಲಾರಂಭಿಸಿದ. ಮದನ್ ಕೂಡ ಅಲ್ಲಿಗೆ ಬಂದ. ಸರಕ್ಕನೆ ಮದನ್ ಪಕ್ಕಕ್ಕೆ ಬಂದು ಪಿಸ್ತೂಲು ಹೊರತೆಗೆದು ಒಂದರ ನಂತರ ಒಂದರಂತೆ ಐದು ಗುಂಡುಗಳನ್ನು ಹಾರಿಸಿದ. ವಾಯಲಿ ಅರಚುತ್ತಾ ಕೆಳಕ್ಕೆ ಕುಸಿದ. ಬಲಗಣ್ಣು ಪೂರ್ತಿ ಕಿತ್ತುಹೋಗಿತ್ತು. ಮುಖ ಛಿದ್ರವಾಗಿತ್ತು. ಕೂಡಲೇ ಮದನನನ್ನು ಹಿಡಿಯಲು ಕವಾಸ್​ಜಿ ಲಾಲ್​ಕಾಕಾ ಎಂಬ ಪಾರ್ಸಿ ತರುಣ ಮುಂದೆ ಧಾವಿಸಿದ. ಮದನನ ಆರನೇ ಗುಂಡು ಅವನನ್ನು ಆಹುತಿ ತೆಗೆದುಕೊಂಡಿತು (ಕೆಲ ದಿನಗಳ ನಂತರ).

ಕೆಲಸ ಮುಗಿದಿತ್ತು. ತನ್ನನ್ನು ಹಿಡಿಯಲು ಬಂದ ಒಬ್ಬನನ್ನುದ್ದೇಶಿಸಿ ಮದನ್ ಹೇಳಿದ; ‘ಸ್ವಲ್ಪ ತಾಳು. ಕನ್ನಡಕ ಸರಿಪಡಿಸಿಕೊಳ್ಳುತ್ತೇನೆ. ‘ಒಬ್ಬ ಡಾಕ್ಟರ್ ಧಾವಿಸಿ ವಾಯಲಿಯ ನಾಡಿ ಹಿಡಿದ. ನಾಡಿಬಡಿತ ಸ್ಥಗಿತಗೊಂಡಿತ್ತು. ಪೊಲೀಸ್ ಠಾಣೆಗೆ ಧಿಂಗ್ರಾನನ್ನು ಕರೆದೊಯ್ದರು. ರಾತ್ರಿ ಠಾಣೆಯಲ್ಲಿಯೇ ಮಲಗಿದ. ಗೊರಕೆ ಹೊಡೆಯುತ್ತಾ ನಿದ್ದೆ ಮಾಡಿದ. ಮದನನ ಸಿದ್ಧ ಮಾಡಿದ ಹೇಳಿಕೆ ಒಂದು ಇತ್ತು. ಅದನ್ನು ಮತ್ತು ಅವನ ನಿವಾಸದಲ್ಲಿದ್ದ ಅದರ ಪ್ರತಿಯನ್ನು ಪೊಲೀಸರು ಬಚ್ಚಿಟ್ಟರು.

ಲಂಡನ್ನಿನ ಜಹಾಂಗೀರ್ ಹಾಲ್​ನಲ್ಲಿ ಹಾರಿದ ಗುಂಡುಗಳು ಭಾರತದಲ್ಲಿ ಮತ್ತು ಯೂರೋಪಿನಲ್ಲಿಯೂ ದೊಡ್ಡ ಗೊಂದಲ ಉಂಟು ಮಾಡಿತು. ಭಾರತದಿಂದ ಮದನನ ತಂದೆ ತಂತಿ ಕೊಟ್ಟರು, ‘ಅವನು ನನ್ನ ಮಗನೇ ಅಲ್ಲ. ಮೂರ್ಖ, ನನ್ನ ಮುಖಕ್ಕೆ ಮಸಿ ಬಳಿದಿದ್ದಾನೆ!‘ ಲಂಡನ್ನಿನಲ್ಲಿದ್ದ ಸೋದರನೂ ಹಾಗೆಯೇ ಹೇಳಿದ.

ಲಂಡನ್ನಿನಲ್ಲಿ ನಡೆದ ಮದನನ ಕೃತಿಯ ಖಂಡನಾ ಸಭೆಯಲ್ಲಿ ಸಾವರ್ಕರ್ ಗೆಳೆಯರ ಉಗ್ರ ಪ್ರತಿಭಟನೆಗಳು ನಡೆದವು. ಪತ್ರಿಕೆಗಳಲ್ಲಿ ಮದನನ ಕೃತ್ಯವನ್ನು ಮೆಚ್ಚಿ ಲೇಖನಗಳು, ಹೇಳಿಕೆಗಳು ಬಂದವು. ‘ಟೈಮ್್ಸ‘ ಪತ್ರಿಕೆಯಲ್ಲಿ ಶ್ಯಾಮಜಿ ಕೃಷ್ಣವರ್ಮ ಬರೆದರು: ‘ಮದನ್​ಲಾಲ್ ಧಿಂಗ್ರಾನ ಈ ಕೃತ್ಯವನ್ನು ನಾನು ಒಪ್ಪುತ್ತೇನೆಂದು ನಿಸ್ಸಂಶಯವಾಗಿ ಹೇಳುತ್ತೇನೆ. ಇದರ ಕರ್ತೃ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹುತಾತ್ಮನೆಂದು ನಾನು ಪರಿಗಣಿಸುತ್ತೇನೆ.‘ಮರುದಿನದಿಂದಲೇ ವಿಚಾರಣೆ ಪ್ರಾರಂಭ. ವಿಚಾರಣೆಯಲ್ಲಿ ಪೂರ್ಣ ನಿರಾಸಕ್ತ ಮದನ್. ‘ನಾನು ಹೇಳಬೇಕಾಗಿರುವ ಒಂದೇ ಸಂಗತಿ ಎಂದರೆ ನಾನು ಲಾಲ್​ಕಾಕಾನನ್ನು ಕೊಲ್ಲಬೇಕೆಂದಿರಲಿಲ್ಲ. ಆತ್ಮರಕ್ಷಣೆಯ ಪ್ರಯತ್ನದಲ್ಲಿ ಗುಂಡು ಹಾರಿಸಿದೆ‘ ಎಂದು ಮಾತ್ರ ಹೇಳಿದ.

ಅಮರ ಜೀವಿ: ಸಾವರ್ಕರ್ ಮದನನನ್ನು ಬ್ರಿಕ್ಸ್​ಟನ್ ಜೈಲಿನಲ್ಲಿ ಭೇಟಿ ಮಾಡಿದರು. ‘ಅಬ್ಬಾ, ಅವನದೆಂತಹ ದೃಢಮನಸ್ಸು! ಸ್ಥಿತಪ್ರಜ್ಞನೋ ಅಥವಾ ಮಹಾಯೋಗಿಯೋ ಹೊಂದಿರಬಹುದಾದಂತಹ ಅವಿಚಲ ಮನಸ್ಸು ಅವನದು‘ ಎಂದು ಹೊಗಳಿದರು. ಮದನ್ ಹೇಳಿದ, ‘ಸಾವರ್​ಕರ್​ಜೀ! ನನ್ನ ಶವಸಂಸ್ಕಾರ ಹಿಂದೂ ಪದ್ಧತಿಯಲ್ಲಿ ನಡೆಯಬೇಕು. ನನ್ನ ತಮ್ಮನೇ ಆಗಲಿ ಅಥವಾ ಯಾವ ಅಹಿಂದುವೇ ಆಗಲಿ ನನ್ನನ್ನು ರ್ಸ³ಸದಿರಲಿ. ನನ್ನ ವಸ್ತು ಹರಾಜು ಹಾಕಿ ಹಣವನ್ನು ‘ರಾಷ್ಟ್ರೀಯ ನಿಧಿ‘ಗೆ ಕೊಡಿ.’

ಓಲ್ಡ್ ಬೈಲೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಮದನನಿಗೆ ಘಾಸಿ ಶಿಕ್ಷೆ. ಮದನ ಉತ್ತರಿಸಿದ; ‘ಥ್ಯಾಂಕ್ಸ್. ತಾಯಿನಾಡಿಗಾಗಿ ನನ್ನ ಈ ಅಲ್ಪಜೀವವನ್ನು ಧಾರೆ ಎರೆಯುತ್ತಿರುವುದಕ್ಕಾಗಿ ಹೆಮ್ಮೆಯಾಗುತ್ತಿದೆ.‘ 1909ರ ಆಗಸ್ಟ್ 17 ಘಾಸಿಗೆ ಹಾಕುವ ದಿನ.

ಸರಕಾರಿ ಪೊಲೀಸರು ಇವನ ಹೇಳಿಕೆಯನ್ನು ಕದ್ದು ಮುಚ್ಚಿಟ್ಟಿದ್ದರು. ಸಾವರ್​ಕರ್ ಅದನ್ನು ಮದನನ ಫಾಸಿಗೆ ಮುನ್ನ ಪ್ರಕಟಿಸಲು ವ್ಯವಸ್ಥೆ ಮಾಡಿದರು. ಅಂತೆಯೇ ಪ್ಯಾರಿಸ್ ಮುಂತಾದ ಕಡೆಗಳಲ್ಲಿ ಪ್ರಕಟವಾಯಿತು. ಲಂಡನ್ನಿನ ಡೈಲಿ ನ್ಯೂಸ್ ಪತ್ರಿಕೆ ಕೂಡ ಪ್ರಕಟಿಸಿತು. ಶಿರೋನಾಮೆ ‘ಸವಾಲು.‘ ಚರಿತ್ರಾರ್ಹವಾದ ಆ ಹೇಳಿಕೆಯಲ್ಲಿ, ‘ನಾನು ಬ್ರಿಟಿಷರ ರಕ್ತ ಹರಿಸಲು ಯತ್ನಿಸಿದ್ದು ನಿಜ. ಅದು ನಮ್ಮ ದೇಶದ ಅಪಮಾನದ ವಿರುದ್ಧ ನನ್ನ ಸೇಡು. ಅದಕ್ಕೆ ಕಾರಣ ನನ್ನ ಆತ್ಮಪ್ರಜ್ಞೆ. ನನ್ನ ದೇಶದ ಅಪಮಾನ, ನನ್ನ ದೇವರ ಅಪಮಾನ ಎಂದು ಹಿಂದುವಾದ ನನ್ನ ಭಾವನೆ. ಮಾತೃಭೂಮಿಯ ಕಾರ್ಯ ಶ್ರೀರಾಮನ, ಶ್ರೀಕೃಷ್ಣನ ಕಾರ್ಯ. ಆ ಕಾರ್ಯದಲ್ಲಿ ನಾನು ಹೆಮ್ಮೆಯಿಂದ ಹುತಾತ್ಮನಾಗುತ್ತಿದ್ದೇನೆ. ಧ್ಯೇಯದ ಪೂರ್ತಿಗಾಗಿ ನಾನು ಇದೇ ತಾಯಿಯ ಉದರದಲ್ಲಿ ಮತ್ತೆ ಮತ್ತೆ ಹುಟ್ಟಿ ಪ್ರಾಣಾರ್ಪಣೆ ಮಾಡುವಂತಾಗಲಿ. ಇದೇ ದೇವರಲ್ಲಿ ನನ್ನ ಕೊನೆಯ ಪ್ರಾರ್ಥನೆ. ವಂದೇಮಾತರಂ‘-ಎಂಬ ಮಾತುಗಳಿದ್ದವು. ಕೊನೆಗೆ, ‘ಬುದ್ಧಿ, ಹಣದಲ್ಲಿ ಬಡವನಾಗಿರುವ ನಾನು ನನ್ನ ಪ್ರಾಣವನ್ನಲ್ಲದೆ ಮತ್ತಿನ್ನೇನು ತಾನೆ ತಾಯಿನಾಡಿಗೆ ಸಮರ್ಪಿಸಬಲ್ಲೆ?‘ ಎಂದು ಪ್ರಶ್ನಿಸಿದ್ದ.

ಆಗಸ್ಟ್ 17ರಂದು ಪೆಂಟೋನ್​ವಿಲ್ಲೆಯಲ್ಲಿ ಮದನ್​ಲಾಲ್ ಧಿಂಗ್ರಾನಿಗೆ ಫಾಸಿಯಾಯಿತು. ಸಾವರ್ಕರ್ ಗೆಳೆಯರು ಅಂದು ಮುಂಜಾನೆ ಲಂಡನ್ನಿನ ರಸ್ತೆ ರಸ್ತೆಯಲ್ಲಿ ಕರಪತ್ರ ಹಂಚುತ್ತಿದ್ದರು. ‘ಇದು ರಕ್ತಾಕ್ಷರಗಳ ದಿನ! ಇಂದು ಮಹಾನ್ ದೇಶಭಕ್ತ ಧಿಂಗ್ರಾ ಫಾಸಿಗೇರಿದ್ದಾನೆ. ಅವನ ಆತ್ಮ ನಮ್ಮೊಡನೆ ಇದೆ. ಸ್ವಾತಂತ್ರ್ಯ ಸಂಗ್ರಾಮದ ದಾರಿದೀಪ ಅವನು‘ ಎಂದು ಅದರಲ್ಲಿ ಬರೆದಿತ್ತು.

ಮುಂದೆ ಬ್ರಿಟನ್ನಿನ ಪ್ರಧಾನಿಗಳಾದ ಲಾಯ್್ಡ ಜಾರ್ಜ್, ವಿನ್​ಸ್ಟನ್ ರ್ಚಚಿಲ್ಲರು ‘ಅಬ್ಬ‘ ಎಂದು ಉದ್ಗಾರ ತೆಗೆದು ಮದನನನ್ನು ಮೆಚ್ಚಿಕೊಂಡರು. ಆಂಗ್ಲ ಸಾಹಿತಿ ಡಬ್ಲೂ್ಯ. ಎಸ್. ಬ್ಲಂಟ್ ಬರೆದ; ‘ಭಾರತದಲ್ಲಿ 500 ಧಿಂಗ್ರಾಗಳು ಹುಟ್ಟಿದರೆ ಸಾಕು, ಅದು ಸ್ವಾತಂತ್ರ್ಯ ಗಳಿಸುತ್ತದೆ. ಪ್ರಾಚೀನ ಕ್ರಿಶ್ಚಿಯನ್ ಹುತಾತ್ಮರಾರೂ ಅವನಷ್ಟು ಧೈರ್ಯ ಪಡೆದಿರಲಿಲ್ಲ.’ ಪ್ಯಾರಿಸ್ಸಿನ ಅಭಿನವ ಭಾರತದ ಪತ್ರಿಕೆ ‘ವಂದೇಮಾತರಂ‘ನಲ್ಲಿ ಲಾಲಾ ಹರದಯಾಳ್ ಹೀಗೆ ಬರೆದರು; ‘ಧಿಂಗ್ರಾ ಹೆಜ್ಜೆ ಹೆಜ್ಜೆಯಲ್ಲೂ ಪ್ರಾಚೀನ ವೀರರಂತೆ ವರ್ತಿಸಿದ್ದಾನೆ. ಇಂಗ್ಲೆಂಡ್ ಅವನನ್ನು ಕೊಂದಿರಬಹುದೆಂದು ಭಾವಿಸಿದ್ದರೆ ಅದು ಸುಳ್ಳು. ಅವನು ಅಮರ ಜೀವಿ. ಭಾರತದ ಆಂಗ್ಲಶಾಹಿಗೆ ತತ್ತರಿಸುವಂತಹ ಮಾರಣಾಂತಿಕ ಪೆಟ್ಟು ಕೊಟ್ಟಿದ್ದಾನೆ.’

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *

Back To Top