Sunday, 19th August 2018  

Vijayavani

ರಣಚಂಡಿ ಮಳೆಗೆ ಕುಸಿಯುತ್ತಿದೆ ಕೊಡಗು - ಮತ್ತೆ ಜೋರಾಯ್ತು ಮಳೆ ಅಬ್ಬರ - ಮುಕ್ಕೋಡ್ಲು ಗ್ರಾಮದಲ್ಲಿ 80 ಜನರ ರಕ್ಷಣೆ        ಕ್ಷಣ ಕ್ಷಣಕ್ಕೂ ಆತಂಕ, ಬಿರುಕು ಬಿಟ್ಟ ಧರೆ - ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದೆ ಬೆಟ್ಟ,ಗುಡ್ಡ - ಕಣ್ಮುಂದೆಯೇ ನೆಲಸಮ ವಾಗ್ತಿದೆ ಬದುಕು        ಕೊಡಗಲ್ಲಿ ಇಂದು ಸಿಎಂ ಎಚ್​ಡಿಕೆ ಪ್ರವಾಸ - ಸಂತ್ರಸ್ಥರ ನೋವು ಆಲಿಸಲಿರುವ ಬಿಎಸ್​ವೈ - ನಿರಾಶ್ರಿತರಿಗೆ ನೆರವು ಅಂದ್ರು ರೇವಣ್ಣ        ಸಂತ್ರಸ್ಥರಿಗೆ ಸ್ಯಾಂಡಲ್​ವುಡ್​​​​​​​​​ ನೆರವಿನ ಹಸ್ತ - ಅಗತ್ಯವಸ್ತುಗಳ ಪೂರೈಸಿದ ಸ್ಟಾರ್ಸ್​​​​​​​​​​​ - ಕೈಲಾದ ಸಹಾಯ ಮಾಡ್ತಿದ್ದಾರೆ ಕರುನಾಡ ಜನರು        ಕೇರಳದಲ್ಲಿ ಕಡಿಮೆಯಾಗ್ತಿಲ್ಲ ನೆರೆ ಅಬ್ಬರ - ಸಾವಿನ ಸಂಖ್ಯೆ 357ಕ್ಕೇ ಏರಿಕೆ - ದೇವರನಾಡಿಗೆ ಹರಿದು ಬರ್ತಿದೆ ನೆರವಿನ ಮಹಾಪೂರ        ಭಾರತ - ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​​​​ ಪಂದ್ಯ - ಬೃಹತ್ ಮೊತ್ತದತ್ತ ಟೀಂ ಇಂಡಿಯಾ - ಶತಕದ ಗಡಿಯಲ್ಲಿ ಎಡವಿದ ಕೊಹ್ಲಿ       
Breaking News

ಮತ್ತೆ ನೆಲಕ್ಕೆ ಬರುವುದೆಂದರೆ ಹುಡುಗಾಟದ ಮಾತೇ..

Saturday, 16.09.2017, 3:02 AM       No Comments

ಕೃಷಿಯ ಸೋಲು ಸೃಷ್ಟಿಶೀಲ ಮನಸ್ಸಿಗೆ ಅತ್ಯಗತ್ಯ. ಕಾರಣ, ಕೃಷಿಕರ ಪಾಲಿಗೆ ಇಡೀ ಕೃಷಿರಂಗವೇ ಒಂದು ಅರಾಜಕತೆ. ಕ್ಷಣಕ್ಷಣಕ್ಕೂ ಸವಾಲುಗಳು. ಯಾವುದು ಬುಡ, ಯಾವುದು ತುದಿ, ಯಾವುದರ ಬುಡ ಯಾವುದರ ತುದಿ ಯಾವುದೂ ಗೊತ್ತಾಗದಷ್ಟು ಹಸಿರು ಒಂದಕ್ಕೊಂದು ನೇಯ್ದುಕೊಂಡಿರುತ್ತದೆ.

ಮನುಷ್ಯಕೃತ ಒಂದೇ ಅಲ್ಲ, ನಿಸರ್ಗಸಹಜ ಸ್ಥಿತ್ಯಂತರಗಳು ಕೃಷಿಕರಿಗೆ ಒಡ್ಡುವ ಸಹಜ-ತೀವ್ರ ಸವಾಲುಗಳನ್ನು ಗಮನಿಸಿ ಈ ಕ್ಷೇತ್ರವನ್ನು ಪ್ರೀತಿಸಿ ಹೊಸದಾಗಿ ಬರುವ ಒಂದಷ್ಟು ಹೊಸಮುಖಗಳನ್ನು ಹೇಗೆ ನಿಭಾಯಿಸುವುದೆಂದು ಯೋಚಿಸುತ್ತಿದ್ದೆ. ಹಾಗಂತ ಅವರು ಮಾಧ್ಯಮಗಳ ಹಸಿರು ಪುಟಗಳನ್ನು ಕಂಡು ಓಡೋಡಿ ಬಂದು ನೆಲಕ್ಕೆ ಹಣೆ ತಾಗಿಸಿದವರಲ್ಲ.

ಈ ಪೂರ್ವಪೀಠಿಕೆಗೆ ಒಂದು ಕಾರಣವಿದೆ. ಆರು ತಿಂಗಳ ಹಿಂದೆ ನಾನು ಭೇಟಿಯಾದ ಹುಣಸೂರಿನ ಯುವರೈತ ರಂಗರಾಜು ದೆಹಲಿಯಲ್ಲಿ ಕೈತುಂಬ ವೇತನ ಪಡೆದು ಸುಖವಾಗಿ ಬದುಕುತ್ತಿದ್ದ ಟೆಕ್ಕಿ. ಆತ ಹುದ್ದೆಗೆ ರಾಜೀನಾಮೆ ನೀಡಿ ತೌರುಹಳ್ಳಿಗೆ ಮರಳಿದ್ದ. ಅಬ್ಬಬ್ಬಾ ಅಂದರೆ ಅವನಿಗೆ ಅಲ್ಲಿ ಆರೂವರೆ ಎಕರೆ ಜಾಗ ನೀರಾವರಿ-ಸಾರಯುಕ್ತ ಮಣ್ಣು. ಎಲ್ಲರ ಹಾಗೆ ರಂಗರಾಜು ಊರಿಗೆ, ಕೆಸರಿಗೆ, ಹಸಿರಿಗೆ ತಿರುಗಿ ಬಂದಿದ್ದಾನೆ. ಅಪ್ಪ, ಅಮ್ಮನಿಗೆ ಆತ ತಿರುಗಿ ಬರುವುದು ಚೂರೂ ಇಷ್ಟವಿರಲಿಲ್ಲ. ಅವರಿಗೆ ಅಷ್ಟೇನೂ ವಯಸ್ಸೂ ಆಗಿರಲಿಲ್ಲ. ಅವರಿಗೆ ತಿಂಗಳಾ ತಿಂಗಳಾ ಮಗನಿಂದ ಇಪ್ಪತೆôದು ಸಾವಿರ ರೂ. ಬರುತ್ತಿತ್ತು. ಆ ಹಣ ನಿಂತುಹೋದ, ಮಗ ವಾಪಾಸಾದ ನೋವು ಸಿಟ್ಟಾಗಿ ಬದಲಾಗಿತ್ತು. ಆಸೆ ಇಟ್ಟುಕೊಂಡು ನೆಲಕ್ಕೆ ಬಂದ ರಂಗರಾಜು ಸಾಕಷ್ಟು ವಿಚಲಿತಗೊಂಡಂತೆ ಕಂಡರು. ಕೆಲಸದವರಿಂದಲೂ ಅಸಹಕಾರ. ನೆರೆಹೊರೆಯವರಿಗೆ ಅನುಮಾನ. ‘ರಂಗ ಕೆಲಸ ಬಿಟ್ಟದ್ದಲ್ಲ, ಅವನನ್ನೇ ಕಂಪನಿ ಬಿಟ್ಟಿರಬೇಕು‘- ಕಲ್ಪಿತ ಹತ್ತಾರು ಕತೆಗಳು ಬೇರೆ. 28ರ ಹರೆಯದ ರಂಗರಾಜು ಮದುವೆಯಾಗಿರಲಿಲ್ಲ. ಇನ್ನು ಬಿಡಿ, ಅವನು ಬ್ರಹ್ಮಚಾರಿ ಗ್ಯಾರಂಟಿ- ಅಪ್ಪನೇ ಬೇಲಿಪಕ್ಕ ಮಾತು ಹರಡುವುದನ್ನು ಕಿವಿಯಾರೆ ಕೇಳಿದ್ದ ರಂಗರಾಜು ಯಾವುದಕ್ಕೂ ಮರುಗದೆ ಹುಚ್ಚು ಹಿಡಿದಂತೆ ಮಣ್ಣಿನಲ್ಲಿ ದುಡಿಯುತ್ತಿದ್ದ.

ಅದ್ಯಾವುದೋ ಮೊದಲ ಬೆಳೆಯಲ್ಲೇ ರಂಗಣ್ಣನಿಗೆ ಲಕ್ಷಕ್ಕಿಂತ ಮೇಲೆ ಲಾಭ ಬಂದಿದೆಯಂತೆ. ನಾನು ಆ ಮನೆಯ ಜಗಲಿಯಲ್ಲಿ ಕೂತು ಆ ಲೆಕ್ಕ ಬಿಚ್ಚಿದೆ. ಬೀಜ, ಗೊಬ್ಬರ, ಕೊಯ್ಲು, ಸಾಗಾಟ, ಬಾಡಿಗೆ, ಶ್ರಮ ಎಲ್ಲ ಲೆಕ್ಕಹಾಕಿ ಅದರಿಂದ ಕಳೆದೆ. ಅಪ್ಪಯ್ಯನ ಎದುರೇ ಅಷ್ಟೆಲ್ಲ ಮಾಡಿದ್ದು ಅವನಿಗೆ ಇರಿಸು ಮುರಿಸಾಗಿ ಕಂಡಿತು. ಎಲ್ಲವನ್ನೂ ಕಳೆದಾಗ ಲಾಭ ಬರೀ 20 ಸಾವಿರ ಮಾತ್ರ. ಅದು ಅವನು ಪ್ರತಿತಿಂಗಳು ಡೆಲ್ಲಿಯಿಂದ ಅಪ್ಪನಿಗೆ ಕಳಿಸುತ್ತಿದ್ದ ಹಣಕ್ಕಿಂತಲೂ ಕಡಿಮೆ!

ಟೆಕ್ಕಿಯಾಗಿದ್ದ ನಿಮ್ಮ ಸಂಬಳ ಎಷ್ಟೆಂದು ಕೇಳಿದೆ. ಅಪ್ಪನಿಗೆ ಗೊತ್ತಾಗದಂತೆ ಗುಟ್ಟಾಗಿ ಬೆರಳು ಮಡಿಚಿದ. ಅವನ ತಿಂಗಳ ವೇತನ ಎರಡು ಲಕ್ಷ! ನನಗೆ ಒಳಗೊಳಗೇ ಕಾಡಲಾರಂಭಿಸಿತು, ಕೃಷಿಗೆ ಬನ್ನಿ ಬನ್ನಿ ಎಂದೆಲ್ಲ ಬಾ ಕರೆಯುವ ಮಂದಿಗೆ ಕನಿಷ್ಠ ಒಂದು ನೈತಿಕತೆ ಬೇಡವೇ ಎಂದು. ನಾಲ್ಕು ತಿಂಗಳು ದುಡಿದು ರಂಗರಾಜು ಗಳಿಸಿದ ಆದಾಯವನ್ನು ತಿಂಗಳಿಗೆ ವಿಂಗಡಿಸಿದರೆ ಗಳಿಕೆ ಬರೀ ಐದು ಸಾವಿರ. ಬೆಚ್ಚಿಬಿದ್ದೆ. ಅಪ್ಪ-ಅಮ್ಮನ ಆ ಸಿಟ್ಟು-ಪ್ರತಿರೋಧಕ್ಕೆ ಅರ್ಥವಿತ್ತು. ಇಂಥ ಹುಚ್ಚುಪ್ರೀತಿಗೆ ಧಿಕ್ಕಾರವಿರಲಿ ಎಂದು ನಾನು ಅವನ ಅಪ್ಪನ ಬದಿಗೆ ನಿಂತು ಮಾತನಾಡಬೇಕೆಂದು ಬಯಸಿದೆ. ರಂಗರಾಜು ಮಾತ್ರ ಏನೂ ಆಗೇ ಇಲ್ಲ ಎಂಬಂತೆ ಜಗಲಿಯಲ್ಲಿ ಕೂತಿದ್ದ. ಇದೆಲ್ಲ ಬೇಕಿತ್ತಾ ಎಂಬ ಪ್ರಶ್ನೆಗೆ ಆತ ಆಕಾಶ ನೋಡುತ್ತಿದ್ದ.

‘ಇದೆಲ್ಲ ನನಗೆ ಬೇಕಿತ್ತು‘ ಎನ್ನುವ ಇನ್ನೊಬ್ಬ ಯುವ ಟೆಕ್ಕಿ ವಸಂತ ಕಜೆ. ಕರಾವಳಿಯ ಯುವಕ. ಮೊನ್ನೆ ಮೊನ್ನೆ ರಾಜೀನಾಮೆ ನೀಡಿ ಕೃಷಿಯಿಂದಲೇ ಬದುಕಬಲ್ಲೆ ಎನ್ನುವ ಧೈರ್ಯವಂತ. ನೆಲಕ್ಕೆ ಬರುವ ಮುಂಚೆ ಗಂಭೀರವಾಗಿ ಯೋಚಿಸಿದವರು, ಬರೆದವರು. ಹೆಣ್ಣು ಕೊಟ್ಟ ಇವರ ಮಾವ ಪ್ರಸಿದ್ಧ ಸಾವಯವ ಕೃಷಿಕ, ಮೈಸೂರಿನ ‘ಇಂದ್ರಪ್ರಸ್ಥ‘ದ ಎ.ಪಿ. ಚಂದ್ರಶೇಖರ್. ಅಳಿಯನಿಗೆ ಬಿಡಿ, ನಾನೂ ಈ ತೋಟಕ್ಕೆ ಹೋದಾಗಲೆಲ್ಲ, ನೆಲ ಇದ್ದೂ ಅದರಾಚೆ ದುಡಿಯುವುದು ಇದೆಯಲ್ಲಾ ಅದು ಒಂದು ಹಂಗು, ಪರಕೀಯತೆ ಎಂದೇ ಭಾವಿಸಿದವನು. ಇಂದ್ರಪ್ರಸ್ಥಕ್ಕೆ ಒಂದು ಸುತ್ತು ಬಂದಾಗ ನೆಲಸಾಧ್ಯತೆಯ ಬಹುರೂಪಗಳು ಜತೆಗೆ ಅದೇ ಬುಡಬುಡಗಳಿಂದ ಎದ್ದುಬರುವ ಎ.ಪಿ.ಯವರ ಮಾತುಗಳು ಸಹಜವಾಗಿಯೇ ಮಣ್ಣಿಗೆ ಶರಣಾಗುವಂತೆ ಮಾಡುತ್ತವೆ. ನಗರೀಕೃತ ಯಾಂತ್ರಿಕ ಬದುಕಿಗೆ ಬೇಸತ್ತ ವಸಂತ ಕಜೆ, ಮೇಲ್ನೋಟಕ್ಕೆ ಸ್ವಲ್ಪ ಅವಸರ ಮಾಡಿದರೆಂದೇ ಅನ್ನಿಸಿದರೂ ಅವರ ದೂರದೃಷ್ಟಿಯಲ್ಲಿರುವ ಖಚಿತತೆ ನಿಖರವಾದುದು. ಬಾಕಿಯವರೆಲ್ಲಾ ನೆಡುತ್ತಾರೆ, ಬೆಳೆಸುತ್ತಾರೆ, ಪಡೆಯುತ್ತಾರೆ. ಕೃಷಿಯನ್ನೊಂದು ಜೀವನವಿಧಾನವೆಂದು ನಿರೂಪಿಸುವಲ್ಲಿ ಸೋಲುತ್ತಾರೆ- ಇಂಥ ಗಟ್ಟಿತನ ಎ.ಪಿ. ಚಂದ್ರಶೇಖರ್ ಅವರ ಕುಟುಂಬದ ಬೀಜಧಾನ್ಯ. ಇವರ ತಮ್ಮ ಎ.ಪಿ. ಸದಾಶಿವ ಮತ್ತೊಬ್ಬ ಆದರ್ಶವಾದಿ ಸಾವಯವ ಕೃಷಿಕ. ಇಂಥ ಮನೆಯಿಂದ ವಸಂತ ಕಜೆಯವರಿಗೆ ಪ್ರೇರಣೆ ಸಿಕ್ಕಿರಬೇಕು.

‘ನನ್ನ ದಾರಿಯಲ್ಲಿ ಬರುವವರು ತುಂಬಾ ಅವಸರ ಮಾಡುವುದು ಬೇಡ. ಅಂಥವರಿಗೆ ನಾನು ಏನು ಹೇಳಬೇಕೋ ಅದನ್ನೀಗ ಕಲಿಯುತ್ತಿದ್ದೇನೆ. ನಾನೀಗ ಕಲಿಯುತ್ತಿರುವುದು, ಮನುಷ್ಯ, ಪುಸ್ತಕ, ಶಾಲೆಗಳಿಗಿಂತ ಹೆಚ್ಚು ಕಲಿಯುವುದು ನೆಲದಿಂದ ಎಂಬುದನ್ನು. ಅವನ್ನೆಲ್ಲ ಇದಮಿತ್ಥಂ ಆಗಿ ಹೇಳಲು ನನಗೆ ಒಂದಷ್ಟು ಸಮಯ ಬೇಕು‘ ಎನ್ನುವ ಕಜೆ, ಭಾಗಶಃ ಇದೀಗ ಕೃಷಿಯಲ್ಲಿ ಸೋಲುವುದನ್ನು ಕಲಿಯುತ್ತಿದ್ದಾರೆ ಮತ್ತು ಕೃಷಿಯಲ್ಲಿ ಸೋಲುವುದು ಬಹುದೊಡ್ಡ ಅನುಭವ ಎಂದು ಅವರು ಭಾವಿಸಿದ್ದಾರೆ.

ಕೃಷಿಯ ಸೋಲು ಸೃಷ್ಟಿಶೀಲ ಮನಸ್ಸಿಗೆ ಬಹಳ ಅಗತ್ಯ. ಕಾರಣ, ಕೃಷಿಕರ ಪಾಲಿಗೆ ಇಡೀ ಕೃಷಿರಂಗವೇ ಒಂದು ಅರಾಜಕತೆ. ಕ್ಷಣಕ್ಷಣಕ್ಕೂ ಸವಾಲುಗಳು. ಯಾವುದು ಬುಡ, ಯಾವುದು ತುದಿ, ಯಾವುದರ ಬುಡ ಯಾವುದರ ತುದಿ ಯಾವುದೂ ಗೊತ್ತಾಗದಷ್ಟು ಹಸಿರು ಒಂದಕ್ಕೊಂದು ಕೋದುಕೊಂಡಿರುತ್ತದೆ. ಇವುಗಳ ಬುಡದಲ್ಲೇ ನಿಂತು ಕಜೆ ಇವುಗಳ ಸಿಕ್ಕು ಬಿಡಿಸುತ್ತಿದ್ದಾರೆ ಮತ್ತು ಅವುಗಳನ್ನು ನಾಜೂಕಾಗಿ ತಿಳಿಯುವ, ಬೇರೆಯವರಿಗೆ ತಿಳಿಸುವ ಇರಾದೆ ಅವರದು. ಈ ಕಾರಣಕ್ಕಾಗಿಯೇ ನನಗೆ ಬೇರೆ ಟೆಕ್ಕಿಗಳಿಗಿಂತ ವಸಂತ್ ಹೆಚ್ಚು ಭಿನ್ನವಾಗುತ್ತಾರೆ. ಕೃಷಿಯಲ್ಲಿರುವ ಸರಳತೆ, ಸತ್ಯ, ಶಾಶ್ವತತೆ, ನೈತಿಕ ಔನ್ನತ್ಯಗಳನ್ನು ಮನಗಂಡರೆ ಕೃಷಿಯನ್ನು ಅದರ ಕಷ್ಟಗಳೊಂದಿಗೆ ಪ್ರೀತಿಸುವುದು ಸಾಧ್ಯವಿದೆ ಎಂಬುದು ಕಜೆಯವರ ನೆಲವಾದ.

‘‘ಟೆಕ್ಕಿಯಾಗಿದ್ದಾಗ ಪ್ರತಿತಿಂಗಳು ನನಗೆ ದೊರೆಯುತ್ತಿದ್ದ ವೇತನ ಖುಷಿಗಿಂತ ಆಶ್ಚರ್ಯವನ್ನುಂಟುಮಾಡುತ್ತಿತ್ತು. ಹೊಸ ತಲೆಮಾರು ಹಿರಿಯರ ಆದಾಯ ಮೀರಿ ಗಳಿಸುವುದರ ಪರಿಣಾಮವನ್ನು ಸೂಕ್ಷ್ಮವಾಗಿ ಊಹಿಸಿದೆ. ವರ್ಷಕ್ಕೊಮ್ಮೆ ಬಟ್ಟೆ ಕೊಳ್ಳಲು ಅಪ್ಪ ನಗರಕ್ಕೆ ಕರೆದೊಯ್ಯುವುದಕ್ಕೂ, ಪ್ರತಿವಾರ ಶಾಪಿಂಗ್ ಮಾಡುವುದಕ್ಕೂ ವ್ಯತ್ಯಾಸವಿದೆ. ಹೊಸ ತಲೆಮಾರು ಅಪ್ಪಿಕೊಂಡ ಈ ಹೊಸ ಜೀವನ ವಿನ್ಯಾಸದ ಇತಿಮಿತಿಗಳ ಕುರಿತು ಗಂಭೀರವಾಗಿ 9 ವರ್ಷ ಚಿಂತಿಸಿದೆ…..

‘‘ಪಡೆದ ವೇತನಕ್ಕೆ ಸರಿಯಾಗಿ ದುಡಿಯುವುದು ಮತ್ತು ಸರ್ಕಾರಕ್ಕೆ ತೆರಿಗೆ ಕಟ್ಟುವುದು ಇವೆರಡೂ ಶಿಸ್ತುಗಳಿಗೆ ನಿಯತವಾಗಿ ಬದ್ಧವಾದರೆ ನಾವು ಪ್ರಾಮಾಣಿಕರು, ನೈತಿಕವಾಗಿ ಹೆಚ್ಚು ಸರಿ ಎಂಬ ಭ್ರಮೆ ನಮ್ಮದು. ನಗರದ ಶ್ರೀಮಂತ ಉದ್ಯೋಗಗಳು ನೀಡುವ ಗರಿಷ್ಠ ವೇತನವನ್ನು ನಾವು ಮತ್ತಷ್ಟು ಹಿಗ್ಗಿಸುವ ಹಾಗೆ ಬೇರೆಬೇರೆ ಕಡೆ ಹೂಡುತ್ತೇವೆ. ನಮಗೆ ಹಣ ಮುಖ್ಯವೇ ಹೊರತು ನಾವು ಹಣ ತೊಡಗಿಸಿದ ಕಂಪನಿಯವರು ಏನು ಮಾಡುತ್ತಾರೆ ಎಂಬುದನ್ನು ನಾವು ಪ್ರಶ್ನಿಸುವುದಿಲ್ಲ. ನಮ್ಮ ಮಕ್ಕಳು ಮದ್ಯ ಕುಡಿಯಬಾರದೆಂದು ಬಯಸುವ ನಾವು, ಅದೇ ಮದ್ಯದ ಕಂಪನಿಯಲ್ಲಿ ಹಣ ಹೂಡುವುದು, ಗಣಿಗಾರಿಕೆಯ ಬಗ್ಗೆ, ಕಾಡು, ಕಾಂಕ್ರೀಟ್ ಕಾಡಾಗುವ ಬಗ್ಗೆ ಹತಾಶರಾಗುವ ನಾವು ಕಾರು ಕೊಳ್ಳುವಾಗ ಅದೇ ವಾಹನದ ಲೋಹ ಎಲ್ಲಿಂದ ಬಂತೆಂದು ವಿವೇಚಿಸುವುದಿಲ್ಲ. ನಗರದ ಹುದ್ದೆಗಳು ಹಾಗೂ ಇಂಥ ಹೂಡಿಕೆಯ ಪ್ರತಿಫಲಗಳು ನಮ್ಮ ವಸ್ತುಸುಖವನ್ನಷ್ಟೇ ಹೆಚ್ಚಿಸಿ ನಮ್ಮ ವ್ಯಕ್ತಿತ್ವದ ಘನತೆಯನ್ನೂ, ಸಹಜಜ್ಞಾನವನ್ನೂ ವೃದ್ಧಿಸಲು ಯಾವುದೇ ಸಹಾಯ ಮಾಡದಿರುವುದು ನನಗೆ ಸ್ಪಷ್ಟವಾಯಿತು….

‘‘ಕಾಣದ ವಿದೇಶಿಯರಿಗಾಗಿ ನಮ್ಮ ಶ್ರಮವನ್ನು ಮಾರಿ, ಅಲ್ಲಿಯ ಕೊಳ್ಳುಬಾಕ ವ್ಯವಸ್ಥೆಗಳಿಗೆ ತಂತ್ರಜ್ಞಾನದ ಬಲವನ್ನು ಕೊಡುವ ನನ್ನ ವೃತ್ತಿಯ ಬಗ್ಗೆ ಹಿರಿಯರ, ಅನುಭವಿಗಳ ಜತೆಗೆ ರ್ಚಚಿಸಿದೆ. ಅಮೆರಿಕದ ಕೃಷಿಕ ವೆಂಡಲ್ ಚೆರ್ರಿ ಅನುಭವ, ಮಾವ ಎ.ಪಿ. ಚಂದ್ರಶೇಖರ್ ಚಿಂತನೆಗಳು ನನ್ನ ನಿಲುವಿಗೆ ದಾರಿದೀಪಗಳಾದವು‘ ಎನ್ನುತ್ತಾರೆ ಕಜೆ. ನಗರ, ಶ್ರೀಮಂತ ಉದ್ಯೋಗ, ತಾಂತ್ರಿಕತೆ ಹೀಗೆ ಎಲ್ಲವನ್ನೂ ಕಳಚಿಕೊಂಡು ತೌರಿಗೆ ವಾಪಸಾದ ಯುವಕರಲ್ಲಿ ಬಹುಪಾಲು ಮಂದಿಗೆ ಆರಂಭಶೂರತ್ವ ಇದೆಯೇ ಹೊರತು ವಸಂತ ಕಜೆಯವರಷ್ಟು ಬಹುಶಃ ಸ್ಪಷ್ಟತೆ ಇಲ್ಲ. ಈಗ ವಸಂತ್ ನಿರ್ವಿುತಿಯ ‘ಕಜೆ ವೃಕ್ಷಾಲಯ‘ ಇದೇ ದಾರಿಯಲ್ಲಿ ಬರುವ ನಗರ, ತಂತ್ರ, ಹಣತ್ಯಾಗಿಗಳಿಗೆ ಹೊಸ ಅರಿವಿನ ಕೇಂದ್ರವಾಗಲಿ ಎಂಬುದು ನನ್ನ ಹಾರೈಕೆ (ಸಂಪರ್ಕ ಸಂಖ್ಯೆ: 9008666266)

(ಲೇಖಕರು ಕನ್ನಡ ಪ್ರಾಧ್ಯಾಪಕರು ಮತ್ತು ಪರಿಸರಾಸಕ್ತ ಕೃಷಿಕರು)

Leave a Reply

Your email address will not be published. Required fields are marked *

Back To Top