Thursday, 19th July 2018  

Vijayavani

ತೆರೆದ ವಾಹನದಲ್ಲಿ ಶೀರೂರು ಶ್ರೀ ಮೆರವಣಿಗೆ - ಉಡುಪಿ ತಲುಪಿದ ಶ್ರೀಗಳ ಪಾರ್ಥಿವ ಶರೀರ - ಭಕ್ತರಲ್ಲಿ ಮಡುಗಟ್ಟಿದ ಶೋಕ        ಶೀರೂರು ಶ್ರೀ ಅಸಹಜ ಸಾವು - ರಥಬೀದಿಯಲ್ಲಿ 45 ನಿಮಿಷ ಸಾರ್ವಜನಿಕ ದರ್ಶನ - ಶೀರೂರಿಗೆ ಡಿಸಿ, ಜಿಪಂ ಸಿಇಓ ಆಗಮನ        ಶೀರೂರು ಶ್ರೀ ಅಹಸಜ ಸಾವು ಹಿನ್ನೆಲೆ - ಶೀರೂರು ಮಠಕ್ಕೆ ಫೋರೆನ್ಸಿಕ್ ತಜ್ಞರ ಭೇಟಿ - ಶ್ರೀಗಳ ಲ್ಯಾಪ್​ಟಾಪ್ ಪರಿಶೀಲನೆ        ರಾಜ್ಯದಲ್ಲಿ ಮಹಾ ಮಳೆಯ ಅಬ್ಬರ - ಮಡಿಕೇರಿಯ ಹಾರಂಗಿ ಜಲಾಶಯ ಭರ್ತಿ - ವಿಶೇಷ ಪೂಜೆ ಸಮರ್ಪಿಸಿದ ಸಿಎಂ        ನಾಳೆ ಕೇಂದ್ರ ಸರ್ಕಾರಕ್ಕೆ ಅವಿಶ್ವಾಸ ಪರೀಕ್ಷೆ - ಮೋದಿ ಸರ್ಕಾರದ ಬೆಂಬಲಕ್ಕೆ ನಿಂತ ಶಿವಸೇನೆ -ನಡೆಯೋದಿಲ್ವಾ ಸೋನಿಯಾ ಆಟ?        ಐನೂರಾಯ್ತು, 2 ಸಾವಿರ ಆಯ್ತು - ಆರ್​ಬಿಐನಿಂದ ಈಗ 100ರ ಹೊಸ ನೋಟು ಬಿಡುಗಡೆ - ನೇರಳೆ ಬಣ್ಣದಲ್ಲಿ ಬರಲಿದೆ ನೂರು ರೂ.       
Breaking News

ಮತ್ತೆ ತಲೆಯೆತ್ತಿದೆ ಕಸ್ತೂರಿ ರಂಗನ್ ವರದಿಯ ಗುಮ್ಮ

Saturday, 11.03.2017, 7:42 AM       No Comments

ಕಸ್ತೂರಿ ರಂಗನ್ ವರದಿ ಭಾರಿ ಅಪಾಯವೇನೂ ಅಲ್ಲ. ಅದು ಕಾಡೊಳಗೆ ಹುಟ್ಟಿಕೊಳ್ಳಬಹುದಾದ ಕಾರ್ಖಾನೆಗಳು, ರಸ್ತೆಗಳಂಥ ನವನಾಗರಿಕ ಸ್ಥಾವರಗಳಿಗೆ ಅಡ್ಡಿ ಒಡ್ಡುತ್ತಿದೆಯಷ್ಟೇ. ಕಾಡಂಚಿನ ಕೃಷಿಕರನ್ನು ಖಂಡಿತ ಅದು ಒಕ್ಕಲೆಬ್ಬಿಸುವುದಿಲ್ಲ. ಆದರೆ ಸಮಸ್ಯೆ ಏನೆಂದರೆ ಆ ವರದಿಯನ್ನು ಸಂಪೂರ್ಣವಾಗಿ ಓದಿ ಗ್ರಾಮ್ಯರಿಗೆ ಅವರದ್ದೇ ಭಾಷೆಯಲ್ಲಿ ಅರ್ಥೈಸುವಲ್ಲಿ ವ್ಯತ್ಯಾಸವಾಗಿದೆ.

 ಕೃಷಿಯ ನಿಜವಾದ ಪ್ರೀತಿಯೋ, ನಗರದ ಪೆಟ್ಟೋ ಗೊತ್ತಾಗುವುದಿಲ್ಲ. ನಗರಕೇಂದ್ರಿತ ಸರ್ಕಾರಿ ಉದ್ಯೋಗಿಗಳ ಪೈಕಿ ಇತ್ತೀಚೆಗೆ ಹಳ್ಳಿಗಳಲ್ಲಿ ಒಂದಷ್ಟು ಭೂಮಿ ಖರೀದಿಸಿ ಕೃಷಿ ಮಾಡುವವರು ಅರ್ಥಾತ್ ನಿವೃತ್ತಿಯ ನಂತರ ಪೇಟೆಗಿಂತ ಹಳ್ಳಿ-ಹಸಿರೇ ಹೆಚ್ಚು ಸುರಕ್ಷಿತ, ಕ್ಷೇಮ ಅನ್ನುವವರು ಅರಣ್ಯ ಇಲಾಖೆಯವರು. ಕರಾವಳಿ, ಮಲೆನಾಡಿನ ಬಹಳಷ್ಟು ಉನ್ನತ ಅರಣ್ಯಾಧಿಕಾರಿಗಳು ಅಧಿಕಾರದಲ್ಲಿರುವಾಗಲೇ ಒಂದು ಕಾಲನ್ನು ಕಾಡಿನಲ್ಲೂ ಇನ್ನೊಂದನ್ನು ತೋಟದಲ್ಲೂ ಇಟ್ಟದ್ದನ್ನು ನಾವು ಕಂಡಿದ್ದೇವೆ. ಅದು ಅವರು ಕಾಡಿನಲ್ಲಿ ಅನುಭವಿಸಿದ, ಕಂಡುಕೊಂಡ ಸತ್ಯವೋ, ವರ್ತಮಾನದ ಅನಿವಾರ್ಯವೋ ಗೊತ್ತಾಗುವುದಿಲ್ಲ. ಇಂಥವರು ಕೃಷಿಗಿಳಿದರೆ ಭಾಗಶಃ ಭೂಮಿಯ ಅದೃಷ್ಟ. ಬೇರಿನ ಪರಿಣತಿ ಮೊದಲೇ ಇರುತ್ತದೆ. ಕಾಡಿನ, ಪ್ರಕೃತಿಯ ಸಾವಯವ ಸಂಬಂಧ, ಗಿಡಬಳ್ಳಿಗಳ ಪರಿಚಯ, ಕೃಷಿ ಆದಾಯ, ಮಾನಸಿಕ ಧೈರ್ಯ ಎಲ್ಲವನ್ನೂ ತುಂಬಿಕೊಂಡು ಬಂದೇ ಸಾಗುವಳಿಗೆ ಮುಖಾಮುಖಿಯಾಗುತ್ತಾರೆ. ಇಂಥ ಅನೇಕ ಮಂದಿಯ ಕೃಷಿ, ತೋಟ ನೋಡಿದ್ದೇನೆ. ಅವರ ಹೊಸ ಹಿಡುವಳಿಯೊಳಗಡೆ ಒಂದು ತುಂಡುಕಾಡು ಇದ್ದೇ ಇರುತ್ತದೆ. ಅಭಿನಂದನೆಗಳು.

ವಿಶ್ವವಿದ್ಯಾಲಯಗಳಲ್ಲಿ ಓದಿದವರಲ್ಲ: ಕಾಡು, ಬೆಟ್ಟ, ಕಣಿವೆ ದಾಟಿಕೊಂಡು ಊರಿಗೆ ಇಳಿದುಬರುವಾಗ ದಣಿವಾಗದಂತೆ ಕಾಣುವ ಇಂಥ ಕಾಡುಗೆಳೆಯರೊಂದಿಗೆ ಹರಟೆ ಹೊಡೆಯುವುದೆಂದರೆ ತುಂಬಾ ಇಷ್ಟ. ಇವರ್ಯಾರು ಹೆಚ್ಚಿನವರು ಕೀಟಶಾಸ್ತ್ರ, ಸಸ್ಯಶಾಸ್ತ್ರಗಳನ್ನು ವಿಶ್ವವಿದ್ಯಾಲಯಗಳಲ್ಲಿ ಓದಿದವರಲ್ಲ. ಇತ್ತೀಚೆಗೆ ಆಯ್ಕೆಯಾಗುವವರು ಇರಬಹುದು. ಆದರೆ ಗಾರ್ಡ ಆಗಿದ್ದು ಅಲ್ಲಿಂದ ಫಾರೆಸ್ಟರ್ ಆಗಿ ಮುಂದೆ ರೇಂಜರ್ ಬಡ್ತಿ ಪಡೆದು, ಮುಂದೆ ಎಸಿಎಫ್, ಡಿಎಎಫ್ ಆದವರೆಲ್ಲ ಬೇರುಮೂಲದಿಂದ ಬಂದವರೇ. ನೆಲಕ್ಕೆ ಕಾಲಿಟ್ಟುಕೊಂಡೇ ಬಾಲ್ಯ ಕಳೆದವರು. ಇಂಥವರಲ್ಲಿ ಸಮೃದ್ಧ ಕಾಡುಕತೆಗಳಿವೆ. ಕನ್ನಡದಲ್ಲಿ ಇಂಥ ಕಾಡುಕತೆಗಳು ದಾಖಲಾದುದು ತುಂಬಾ ಕಮ್ಮಿ. ಇದು ಹೇಳುವವರ ಕೊರತೆಯಲ್ಲ; ಬಗೆಯುವವರ, ಬರೆಯುವವರ ಕೊರತೆ.

ಹಿರಿಯ ಅರಣ್ಯಾಧಿಕಾರಿ ಸದಾಶಿವ ಭಟ್ ನನಗೆ ಮುಖ್ಯವಾಗುವುದು ಬರೀ ಕೃಷಿ ಮತ್ತು ಅರಣ್ಯದ ಕಾರಣಕ್ಕಾಗಿಯಷ್ಟೇ ಅಲ್ಲ. ತಮ್ಮೊಳಗಡೆ ಇರುವ ಕಾಡಿನಕತೆ ದಾಖಲಾಗಬೇಕೆಂಬ ಅವರ ತುಡಿತಕ್ಕಾಗಿ. ಹೊಸ ತಲೆಮಾರು ಖಂಡಿತಾ ಕಾಡಿಗೆ ಬರುವುದಿಲ್ಲ. ಕಾಡಿನಂಚಿನ ಊರು ಬಿಟ್ಟು, ಹಣ, ನಗರದ ಬೆನ್ನಿಗೆ ಬಿದ್ದು ಮಹಾನಗರ ಸೇರಿರುವ ಅವರೆಲ್ಲಾ ಹಸಿರು ಅಂಚಿನಲ್ಲಿ ಬದುಕಿದ್ದ ತಮ್ಮ ಮೂಲನಿವಾಸಿಗಳ ಜೀವನವಿನ್ಯಾಸವನ್ನು ಅರಿತರೆ ತಮ್ಮೊಳಗೆ ಒಂದಷ್ಟು ಹಸಿರು ತುಂಬಿಕೊಂಡಂತೆ. ಅದಕ್ಕಾದರೂ ಅವರು ಕಾಡಿನಕತೆ ಓದಬೇಕು, ಬೇರಿಗೆ ಇಳಿಯಬೇಕು ಎಂಬುದು ಭಟ್ಟರ ಇರಾದೆ. ಮುಂದೆ ತಾನೇ ಕುಂತು ಬರೆಯುತ್ತೇನೆಂದು ಅವರು ಭರವಸೆ ಕೊಟ್ಟಿದ್ದಾರೆ.

ಬೆಂಕಿಬೀಳುವ ಸಾಧ್ಯತೆ ಜಾಸ್ತಿ: ಇರಲಿ, ನಾನು ಹೇಳಹೊರಟದ್ದು ಬೇರೆ ಕತೆ. ಕಸ್ತೂರಿ ರಂಗನ್ ವರದಿಯ ಮರುಅನುಷ್ಠಾನದ ಸುದ್ದಿ ಮತ್ತೆ ಚಾಲ್ತಿಗೆ ಬಂದಿದೆ. ಯಾವ್ಯಾವ ಹಳ್ಳಿ-ಗ್ರಾಮಗಳು ವರದಿಯ ಸುಪರ್ದಿಗೆ ಸೇರಿವೆಯೋ ಅಲ್ಲೆಲ್ಲಾ ಮತ್ತೆ ಗುಲ್ಲೆದ್ದಿದೆ. ಅದೇ ಪ್ರದೇಶದಲ್ಲಿ ಬದುಕುವ ಗೆಳೆಯರೊಬ್ಬರು ಹೇಳುವ ಪ್ರಕಾರ, ಮುಂದಿನ ಒಂದೆರಡು ವಾರದಲ್ಲಿ ನಮ್ಮ ಪಶ್ಚಿಮಘಟ್ಟಕ್ಕೆ ಬೆಂಕಿಬೀಳುವ ಸಾಧ್ಯತೆ ಜಾಸ್ತಿಯಂತೆ. ಕಾರಣ ಈ ಪಶ್ಚಿಮಘಟ್ಟ ಮತ್ತೆ ಅಲ್ಲಿಯ ನಿವಾಸಿಗಳನ್ನು ಕಾಡಲಾರಂಭಿಸಿದೆ. ಇದೇ ಕಾಡಲ್ಲವೇ ನಮ್ಮ ಬದುಕಿಗೆ ಉರುಳಾದುದು; ಕಾಡೇ ಇಲ್ಲದಿದ್ದರೆ ಕಸ್ತೂರಿಯೂ ಇಲ್ಲ ರಂಗನ್ನೂ ಇಲ್ಲ, ಅರಣ್ಯವೇ ಬೇಡ ಎಂದು ಅಲ್ಲಲ್ಲಿ ಕಡ್ಡಿಗೀರುವ ಪ್ರಯತ್ನಗಳಾಗುತ್ತಿವೆ.

ತಮ್ಮ ಮನೆಗೆ, ತಮ್ಮ ಉಸಿರಿಗೆ ತಾವೇ ಕೊಳ್ಳಿ ಇಡುವ ಪ್ರಯತ್ನದ ಹಿಂದಿನ ತರ್ಕವೂ ಅಷ್ಟೇ ಮಾನವೀಯವಾದುದು. ಅಪಾರ ಜೀವಸಂಕುಲ ಸಮೇತ ಪಶ್ಚಿಮಘಟ್ಟವನ್ನು ರಕ್ಷಿಸುವ ಕಸ್ತೂರಿ ರಂಗನ್ ಸಮಿತಿ ಜೀವಭಾಷೆಯಲ್ಲೇ ವರದಿ ರಚಿಸಿದೆ. ವರದಿ ರಚಿಸುವಾಗ ಕಾಡೊಳಗಡೆಯ ಜೀವಿಗಳ ಲೆಕ್ಕ ತೆಗೆದಿದ್ದಾರೆ. ಈ ಕಾಡುಭಾಗದೊಳಗೆ ಬದುಕುವ ಆನೆ, ಹುಲಿ, ಕಾಳಿಂಗ, ಸಿಂಗಳೀಕಗಳ ಲೆಕ್ಕ, ಅಳಿಯುತ್ತಿರುವ ಕಾಡಾಡಿ-ಬಾನಾಡಿಗಳ ಎಲ್ಲ ಲೆಕ್ಕ, ಮರಗಳ ಲೆಕ್ಕ, ಬೇರು-ನಾರುಗಳ ಲೆಕ್ಕ, ಇವುಗಳೊಂದಿಗೆ ಶತಶತಮಾನಗಳಿಂದ ಬದುಕಿಕೊಂಡು ಬಂದಿರುವ ಮನುಷ್ಯನ ಲೆಕ್ಕ ಯಾಕೆ ಇಲ್ಲ!

ಸಂವೇದನೆ ಇಲ್ಲವಾಗಿದೆ: ಇದೇ ಮನುಷ್ಯ, ಬಹಳ ಅಲ್ಲ, ಕೇವಲ ಹತ್ತು ವರ್ಷ ಹಿಂದಿನವರೆಗೆ ಕಾಡು ಎಂಬ ತನ್ನ ಮನೆಯ ಬಗ್ಗೆ ಎಷ್ಟು ಸುರಕ್ಷಿತ, ಸೂಕ್ಷ್ಮವಾಗಿದ್ದ ಅಂದರೆ, ಬೆಂಕಿ ಎಲ್ಲಿ, ಹೇಗೆಯೇ ಹೊತ್ತಿಕೊಳ್ಳಲಿ ಕ್ಷಣಕ್ಕೆ ಅಲ್ಲಿ ಇಡೀ ಊರಿಗೆ ಊರೇ ಸೇರಿಕೊಂಡು ಬೆಂಕಿಯ ನೆಲದ ಮೇಲೆ ಉರುಳಾಡಿಕೊಂಡು ನಂದಿಸುತ್ತಿದ್ದ. ಕಾರಣ ಅದು ಅವನ ಮನೆಯಲ್ಲಾದ ಅವಘಡ. ‘ಬೆಂಕಿ ಬಿದ್ದಿದೆ ಎಂದು ಸುದ್ದಿ ತಲುಪಿ ನಾನು ಆ ಬಾಗಿಮಲೆಗೆ ತಲುಪುವಾಗ ಅದಾಗಲೇ ನೂರೈವತ್ತು ಜನ ಹೋರಾಡಿ ಬೆಂಕಿಯನ್ನು ಪೂರ್ತಿ ನಂದಿಸಿ ನಿಟ್ಟುಸಿರು ಬಿಡುತ್ತಿದ್ದರು. ಅವರಿಗೆ ಕೃತಜ್ಞತೆ ಹೇಳಿ ಪಕ್ಕದ ಮನೆಗೆ ಹೋಗಿ ಮಜ್ಜಿಗೆ ಕುಡಿದುದನ್ನು ಬಿಟ್ಟರೆ ಅರಣ್ಯಾಧಿಕಾರಿಯಾಗಿ ಆಗ ನಾನು ಬೇರೇನೂ ಮಾಡಿಲ್ಲ. ಅದೇ ವರ್ಷ ಪಶ್ಚಿಮಘಟ್ಟದ ಮತ್ತೊಂದು ತುದಿಗೆ ಬೆಂಕಿ ಬಿದ್ದಿತ್ತು. ಸಂಪರ್ಕ-ಸಂವಹನ ಕಡಿಮೆ ಇದ್ದ ಕಾಲವದು. ನಮಗೆ ಗೊತ್ತಾಗಿ ಮರುದಿನ ನಾನು ಕಾಡು ಹತ್ತುವಾಗ ಹತ್ತಾರು ಹಳ್ಳಿಮಂದಿ ಬೆಟ್ಟ ಇಳಿದುಬರುತ್ತಿದ್ದರು. ಅವರೆಲ್ಲ ಹಿಂದಿನ ದಿನ ಬೆಂಕಿ ನಂದಿಸಿ ಬಂದವರು. ಅದು ಸರಿಯಾಗಿ, ಪೂರ್ತಿ ನಂದಿದೆಯಾ ಎಂದು ತಿಳಿದುಬರಲು ತಿರುಗಿ ಆ ದಿನ ಮತ್ತೆ ಬೆಟ್ಟ ಹತ್ತು ನೋಡಿಬಂದವರು. ಈಗ ಎಲ್ಲಿದೆ ಇಂಥ ಬದ್ಧತೆ?’ ಎನ್ನುತ್ತಾರೆ ನಿವೃತ್ತಿಯ ಅಂಚಿನಲ್ಲಿರುವ ಸದಾಶಿವ ಭಟ್.

ಭಾರತದ ಕಾಡುಗಳನ್ನು ಕಾಯಲು ಈಗ ಇರುವ ಕಾನೂನುಗಳೇ ಸಾಕಿತ್ತು. ಅದಕ್ಕೆಲ್ಲ ಹಳ್ಳಿಮಂದಿಯ ಒಪ್ಪಿಗೆಯೂ ಇತ್ತು. ಹಾಗಂತ ಕಸ್ತೂರಿ ರಂಗನ್ ವರದಿ ಭಾರಿ ಅಪಾಯವೇನೂ ಅಲ್ಲ. ಅದು ಕಾಡೊಳಗೆ ಹುಟ್ಟಿಕೊಳ್ಳಬಹುದಾದ ಕಾರ್ಖಾನೆಗಳು, ರಸ್ತೆಗಳಂಥ ನವನಾಗರಿಕ ಸ್ಥಾವರಗಳಿಗೆ ಅಡ್ಡಿ ಒಡ್ಡುತ್ತದೆಯಷ್ಟೇ. ಕಾಡು ಅಂಚಿನಲ್ಲಿ ಇರುವ ಕೃಷಿಕರನ್ನು ಖಂಡಿತ ಅದು ಒಕ್ಕಲೆಬ್ಬಿಸುವುದಿಲ್ಲ. ಬರೀ ಸಾವಯವ ಕೃಷಿಗಾಗಿಯೇ ಸಾವಿರಾರು ಕೋಟಿ ಹಣ ವಿನಿಯೋಗಿಸಲಾಗುತ್ತಿದೆ ಎಂದು ವರದಿಯಲ್ಲಿದೆ. ಆದರೆ ಸಮಸ್ಯೆ ಏನೆಂದರೆ ಆ ವರದಿಯನ್ನು ಸಂಪೂರ್ಣವಾಗಿ ಓದಿ ಗ್ರಾಮ್ಯರಿಗೆ ಅವರದ್ದೇ ಭಾಷೆಯಲ್ಲಿ ಅರ್ಥೈಸುವಲ್ಲಿ ವ್ಯತ್ಯಾಸವಾಗಿದೆ. ಇಲಿಯ ಜಾಗದಲ್ಲಿ ಹುಲಿ ಎಂದೇ ಭ್ರಮಿಸುವ ಗ್ರಾಮಮುಗ್ಧತೆ ಈಗ ಕಾಡಿಗೆ ತಿರುಗಿಬಿದ್ದಿದೆ. ಇದರ ಪರಿಣಾಮ, ಭೀಕರ ಬರದ ಸಂದರ್ಭದಲ್ಲಿ ಮತ್ತೆ ವರದಿಯ ಗುಲ್ಲು ಭುಗಿಲೇಳುವ ಸಾಧ್ಯತೆ ತುಂಬಾ ಇದೆ. ಮುಂದೆ ಕಾಡಿಗೆ ಬೆಂಕಿಬಿದ್ದರೆ ನಂದಿಸುವವರು ಬಿಡಿ, ನಗುವವರೇ ಹೆಚ್ಚು.

ಬೆರಳೆಣಿಕೆಯ ವನಪಾಲಕರು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಓಡಾಡುವಾಗ ನಗುವ ಗ್ರಾಮ್ಯರ ಮನಸ್ಸು ಬದಲಾಯಿಸುವ ಮನಸ್ಥಿತಿ ಅರಣ್ಯಾಧಿಕಾರಿಗಳಲ್ಲೂ ಈಗ ಉಳಿದಿಲ್ಲ. ಕಾಡಿನೊಳಗೆ ಬದುಕುವವರ ಕೆಲವರ ಮನಸ್ಸಿನಲ್ಲೇ ಕಿಚ್ಚು ಇದ್ದಾಗ ಅದು ಕಾಡುಗಿಚ್ಚಾಗಿ ಬದಲಾಗುವುದು ಬಹಳ ಬೇಗ. ಅದೇ ಕಾಡೊಳಗೆ ಬದುಕುವ, ಅದೇ ಕಾಡನ್ನು ಜೀವದಾರಿಯನ್ನಾಗಿಸಿಕೊಂಡ ಒಂದು ಆನೆಯೋ, ಒಂದು ಹುಲಿಯೋ, ಒಂದು ಕೋಗಿಲೆಯೋ ಪ್ರಕೃತಿಗೆ ವಿರುದ್ಧವಾಗಿ ನಡೆದುಕೊಂಡ ನಿದರ್ಶನಗಳಿಲ್ಲ.

(ಲೇಖಕರು ಕನ್ನಡ ಪ್ರಾಧ್ಯಾಪಕರು ಮತ್ತು ಪರಿಸರಾಸಕ್ತ ಕೃಷಿಕರು)

 

Leave a Reply

Your email address will not be published. Required fields are marked *

Back To Top