Tuesday, 17th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಮಗಳ ಅಗಲುವಿಕೆಯ ನೋವು ಮರೆಯಲು 800 ಮಕ್ಕಳ ತಾಯಿಯಾದಳು!

Wednesday, 31.05.2017, 3:05 AM       No Comments

ಜೀವನದಲ್ಲಿ ಅನಿರೀಕ್ಷಿತ ಆಘಾತಗಳು ಬಂದೆರಗಿದಾಗ ಆ ದುಃಖದಿಂದ ಆಚೆಬರುವುದು ಸವಾಲಿನ ಕೆಲಸ. ನಮ್ಮ ನೋವಿನಿಂದ ಹೊರಬರಲು ಇರುವ ಸಾರ್ಥಕ ದಾರಿ ಮತ್ತೊಬ್ಬರ ಮೊಗದಲ್ಲಿ ನಗು ಅರಳಿಸುವುದು, ಸಂಕಷ್ಟದಲ್ಲಿರುವವರಿಗೆ ನೆರವಾಗುವುದು. ಇಂಥ ದಾರಿಯಲ್ಲಿ ಸಾಗಿದ ಸರೋಜಿನಿ ಅಗ್ರವಾಲ್ ಸ್ಪೂರ್ತಿಕಥನ ಇಲ್ಲಿದೆ.

ತಾಯಿಯ ಹೃದಯ ಅದೆಷ್ಟು ವಿಶಾಲವೆಂದರೆ ಅಲ್ಲಿ ಜಗತ್ತೇ ನೆಲೆಸುವಷ್ಟು ಸ್ಥಳವಿದೆ, ಎಲ್ಲ ನೋವುಗಳನ್ನು ಮೀರುವ ಶಕ್ತಿ ಇದೆ. ಅದಕ್ಕೇ ಇರಬೇಕು ‘ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ’ ಎಂದಿರುವುದು. ತಾಯ್ತನಕ್ಕೆ ಇರುವ ಶಕ್ತಿಯೇ ಅಸೀಮ ಹಾಗೂ ಅಚ್ಚರಿ ಮೂಡಿಸುವಂಥದ್ದು. ಸ್ವಾರ್ಥಗಳೆಲ್ಲ ಕರಗಿಹೋಗಿ ಆಕೆ ತನ್ನ ಮಗುವಿನ ಭವಿಷ್ಯದ ಬಗ್ಗೆ ಸುಂದರ ಕನಸುಗಳನ್ನು ಹೆಣೆಯುತ್ತಾಳೆ, ಮಗುವಿಗಾಗಿಯೇ ಬದುಕನ್ನು ಮುಡುಪಾಗಿಡುತ್ತಾಳೆ. ಇಂಥ ತಾಯಿಹೃದಯ ಸಮಾಜದ ಸಂವೇದನೆಗಳಿಗೆ ಸ್ಪಂದಿಸಿದಾಗ, ನೋವುಂಡ ಹೃದಯಗಳ ಕಣ್ಣೀರು ಒರೆಸಲು ಮುಂದಾದಾಗ ಆ ಮಾತೃತ್ವದ ಶಕ್ತಿಯು ಪವಾಡಸದೃಶ ಬದಲಾವಣೆಯನ್ನು ತರುತ್ತದೆ. ಇಂಥದ್ದೇ ಒಬ್ಬ ಮಹಾತಾಯಿ ದೂರದ ಉತ್ತರಪ್ರದೇಶದ ಲಖನೌದಲ್ಲಿ ನೆಲೆಸಿದ್ದಾರೆ. ಅವರಿಗೆ 800ಕ್ಕಿಂತ ಹೆಚ್ಚು ಹೆಣ್ಣುಮಕ್ಕಳು…! ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಮಾಜಿ ರಾಜ್ಯಪಾಲ ವಿಷ್ಣುಕಾಂತ್ ಶಾಸ್ತ್ರಿ, ಖ್ಯಾತ ಕ್ರಿಕೆಟಿಗ ಸುರೇಶ್ ರೈನಾ ಸೇರಿದಂತೆ ಹಲವು ದಿಗ್ಗಜರು ‘ತಾಯಿ, ನಿನ್ನ ಜೀವನ ನಮಗೆ, ಸಮಾಜಕ್ಕೆ ಸ್ಪೂರ್ತಿ’ ಎಂದಿದ್ದಾರೆ.

ಡಾ.ಸರೋಜಿನಿ ಅಗ್ರವಾಲ್ ಅವರ ಹೆಸರು. ಲಖನೌ ಬಳಿಯ ಗ್ರಾಮವೊಂದರಲ್ಲಿ ಜನಿಸಿದ ಅವರಿಗೆ ಭೌತಿಕ ಸೌಕರ್ಯಗಳ ಯಾವುದೇ ಕೊರತೆ ಇರಲಿಲ್ಲ. ಓದಿನಲ್ಲೂ ಜಾಣೆ ಜತೆಗೆ ಬರವಣಿಗೆಯ ಹವ್ಯಾಸವೂ ಕೈಹಿಡಿಯಿತು. ಬಿ.ಎ. ನಂತರ ಎಂ.ಎ ಮಾಡಬೇಕೆಂದು ಲಖನೌಗೆ ಬಂದರು. ಒಳ್ಳೆ ಹುಡುಗ ಸಿಕ್ಕಿದನೆಂದು ಮನೆಯವರು ಮದುವೆ ಮಾಡಿಬಿಟ್ಟರು. ಸಂಸಾರದ ಜಟಕಾ ಬಂಡಿ ಸಾಗುತ್ತಿರುವಾಗ ಇಬ್ಬರು ಗಂಡುಮಕ್ಕಳ ಜನನವಾಯಿತು. ಮುಂದೆ ಓದುವ ತುಡಿತ ಇನ್ನೂ ಜಾಗೃತವಾಗಿತ್ತು. ಇಬ್ಬರು ಮಕ್ಕಳನ್ನು ಸಲಹುತ್ತಲೇ ಎಂ.ಎ ಪೂರೈಸಿದರು. ಗಂಡನ ಮನೆಯಲ್ಲಿ ಯಾವುದಕ್ಕೂ ಕೊರತೆ ಇರಲಿಲ್ಲ. ಆದರೆ, ಸರೋಜಿನಿಯವರ ಮನದ ಕಡಲಲ್ಲಿ ಬಯಕೆಯ ಅಲೆಯೊಂದು ಅಪ್ಪಳಿಸುತ್ತಲೇ ಇತ್ತು-‘ಹೆಣ್ಣು ಮಗು ಬೇಕು’. ಮತ್ತೆ ಗರ್ಭವತಿಯಾದಾಗ ಕಂಡಕಂಡ ದೇವರ ಕೈಮುಗಿದು ‘ಮುದ್ದಾದ ಹೆಣ್ಮಗು ಕೊಡಪ್ಪ’ ಎಂದು ಬೇಡಿದರು. ಅವಳಿ-ಜವಳಿ ಮಕ್ಕಳು ಹುಟ್ಟಿದರು. ಆ ಪೈಕಿ ಒಂದು ಗಂಡು ಒಂದು ಹೆಣ್ಣು. ಹೆಣ್ಣುಮಗುವಿಗೆ ಮನೀಷಾ ಎಂಬ ಹೆಸರಿಡಲಾಯಿತು. ಹಿಂದಿ ಸಾಹಿತ್ಯದಲ್ಲಿ ಪಿಎಚ್​ಡಿಯನ್ನು ಪೂರೈಸಿದ ಸರೋಜನಿ ಅವರು ಕಥೆ, ಕಾದಂಬರಿ, ಕವನಗಳನ್ನು ಬರೆಯತೊಡಗಿದರು. ಒಟ್ಟಾರೆ, ಆ ಮನೆ ಖುಷಿ-ನೆಮ್ಮದಿಯ ನೆಲೆವೀಡಾಗಿತ್ತು. ಆದರೆ, ಅದ್ಯಾಕೋ ಭಗವಂತನಿಗೆ ಈ ಖುಷಿ ನೋಡಲಾಗಲಿಲ್ಲ.

ಅಂದು 1978ರ ಏಪ್ರಿಲ್ 1. ಸರೋಜಿನಿಯವರು ಪತಿ, ಮನೀಷಾ ಹಾಗೂ ಕಿರಿಯ ಮಗನೊಂದಿಗೆ ಸಂಬಂಧಿಕರನ್ನು ಭೇಟಿ ಮಾಡಿ ಮನೆಗೆ ಮರಳುತ್ತಿದ್ದರು. ರಸ್ತೆಯಲ್ಲೇ ಕಾದುನಿಂತಿದ್ದ ಜವರಾಯ ಅಪಘಾತದಲ್ಲಿ ಮನೀಷಾಳನ್ನು ಕಿತ್ತುಕೊಂಡ! ಮಗನಿಗೆ ಗಾಯಗಳಾದವು. ಯಾವುದನ್ನು ಹಂಬಲಿಸಿ, ಮೊರೆಯಿಟ್ಟು ತಾಯಿಹೃದಯ ಪಡೆದಿತ್ತೋ ಆ ಜೀವವೇ ಇಲ್ಲವೆಂದ ಮೇಲೆ ಏನು ಗತಿ? ಈ ತಾಯಿಗೆ ಯಾವುದೂ ಬೇಡವಾಯಿತು. ಪಿಎಚ್​ಡಿ ಪೂರ್ಣಗೊಳಿಸಿದ್ದರಿಂದ ವಿಶ್ವವಿದ್ಯಾಲಯದಿಂದ ಉತ್ತಮ ಉದ್ಯೋಗದ ಆಫರ್ ಕೂಡ ಬಂತು. ಆದರೆ, ಮನೀಷಾಳನ್ನು ಕಳೆದುಕೊಂಡ ಬದುಕು ಬರಡಾಗಿತ್ತು. ಭರವಸೆ, ಉತ್ಸಾಹಗಳೆಲ್ಲ ಇಂಗಿಹೋಗಿದ್ದವು, ಕೆಲಸಕ್ಕೆ ಹೋಗಲು ನಿರಾಕರಿಸಿಬಿಟ್ಟರು.

ಅದೊಂದು ದಿನ ಇವರ ಪರಿಚಯದ ವೈದ್ಯೆಯೊಬ್ಬರು ಫೋನ್ ಮಾಡಿ- ‘‘ನಮ್ಮ ಆಸ್ಪತ್ರೆಯಲ್ಲಿ ಹೆರಿಗೆಗೆ ದಾಖಲಾಗಿದ್ದ ಮಹಿಳೆ ಹೆಣ್ಣುಮಗುವಿಗೆ ಜನ್ಮನೀಡಿ ಪ್ರಾಣಬಿಟ್ಟಿದ್ದಾಳೆ. ಆಕೆಯ ಗಂಡ ಓಡಿಹೋಗಿದ್ದಾನೆ. ನವಜಾತ ಶಿಶು ಅನಾಥವಾಗಿದೆ. ನೀನು ಅದನ್ನು ಪೋಷಿಸಲು ಸಿದ್ಧಳಿದ್ದರೆ ಕಾನೂನು ಪ್ರಕ್ರಿಯೆ ಪೂರೈಸಿ ಮಗುವನ್ನು ನೀಡುತ್ತೇನೆ’’ ಎಂದರು. ಆಸ್ಪತ್ರೆಗೆ ಹೋಗಿ ಆ ಮುದ್ದಾದ ಮಗು ನೋಡಿದಾಗ ಅದರಲ್ಲಿ ಮನೀಷಾಳನ್ನೇ ಕಂಡ ಸರೋಜಿನಿ ಇದೆಲ್ಲ ‘ದೇವರ ಆಟ’ವೇ ಇರಬೇಕು ಎಂದುಕೊಂಡು ಮಗುವನ್ನು ಮನೆಗೆ ಕರೆತಂದರು. ಆಗ ಅಂತಃಕರಣದ ಸೆಲೆಯೊಂದು ಜಾಗೃತವಾಯಿತು, ಇಂಥ ಅನಾಥ-ನಿರ್ಗತಿಕ ಮಕ್ಕಳನ್ನು ಅದರಲ್ಲೂ ಹೆಣ್ಣುಮಕ್ಕಳ ಬದುಕನ್ನು ಯಾರು ಕಟ್ಟುತ್ತಾರೆ? ಇವರಿಗೆ ತಾಯಿಯ ಪ್ರೀತಿ, ಮಮತೆಯನ್ನು ಯಾರು ನೀಡುತ್ತಾರೆ? ಎಂಬೆಲ್ಲ ಪ್ರಶ್ನೆಗಳು ಕಾಡಿ ‘ಇಲ್ಲ ಇಂಥವರಿಗೆ ನಾನೇ ತಾಯಿಯಾಗುತ್ತೇನೆ. ಮಮತೆ ಹಂಚುತ್ತೇನೆ’ ಎಂದು ದಿಟ್ಟ ಸಂಕಲ್ಪ ಮಾಡಿದರು. ‘ಇದು ಉತ್ತಮ ಚಿಂತನೆಯೇ, ಆದರೆ ಪ್ರಾಯೋಗಿಕವಾಗಿ ಜಾರಿಗೆ ತರುವುದು ತುಂಬ ಕಷ್ಟ, ಈಗ ದತ್ತು ಪಡೆದಿರುವ ಒಂದು ಮಗುವನ್ನು ನೋಡಿಕೋ ಸಾಕು’ ಎಂದು ಕುಟುಂಬದವರು, ಸಂಬಂಧಿಕರು ಹೇಳಿದರೂ ತಮ್ಮ ನಿರ್ಧಾರದಿಂದ ವಿಚಲಿತರಾಗಲಿಲ್ಲ. ಹೆರಿಗೆಯ ವೇಳೆ ಹೀಗೆ ಅನಾಥಗೊಂಡ ಮತ್ತೆರಡು ಹೆಣ್ಣುಮಕ್ಕಳನ್ನು ತಂದು ಸಾಕತೊಡಗಿದರು. ಕ್ರಮೇಣ ಮಕ್ಕಳ ಸಂಖ್ಯೆ ಹೆಚ್ಚಿ, ಮನೆಯಲ್ಲಿ ಇರಿಸಿಕೊಳ್ಳುವುದು ಕಷ್ಟವಾಯಿತು.

1984ರಲ್ಲಿ ಈ ಕಾರ್ಯಕ್ಕೊಂದು ಸ್ಪಷ್ಟದಿಕ್ಕು ಕೊಡಲು ‘ಮನೀಷಾ ಮಂದಿರ’ ಹೆಸರಿನಲ್ಲಿ ಅನಾಥಾಶ್ರಮವನ್ನು ಸ್ಥಾಪಿಸಿ ಅನಾಥ ಹಾಗೂ ನಿರ್ಗತಿಕ ಹೆಣ್ಣುಮಕ್ಕಳಿಗೆ ವಸತಿ, ಊಟ, ಶಿಕ್ಷಣ, ಪ್ರೀತಿ, ಉತ್ತಮ ಭವಿಷ್ಯ ನೀಡಲು ಸಂಕಲ್ಪಿಸಿದರು. ಮೊದಲಿಗೆ ಬಾಡಿಗೆ ಕಟ್ಟಡದಲ್ಲಿ ಮನೀಷಾ ಮಂದಿರ ಆರಂಭಗೊಂಡಿತು. ಚರಂಡಿಯಲ್ಲಿ, ಬೀದಿಬದಿಯಲ್ಲಿ ಎಸೆದ ಹಸೂಗುಸುಗಳು, ಆಸ್ಪತ್ರೆಯಲ್ಲಿ ದಿಕ್ಕುಕಾಣದೆ ಅನಾಥವಾಗಿದ್ದ ನವಜಾಶ ಶಿಶುಗಳು, ಬಡತನದ ಬೇಗೆಯಲ್ಲಿ ಜೀವನ ನಡೆಸಲಾರದೆ ನರಳುತ್ತಿದ್ದ ಪುಟ್ಟ ಮಕ್ಕಳು ಇವರಿಗೆಲ್ಲ ಮನೀಷಾ ಮಂದಿರ ಕೇವಲ ಆಸರೆಯಲ್ಲ ಮಮತೆಯ ಮಡಿಲಾಯಿತು, ಬದುಕು ಕಟ್ಟಿಕೊಳ್ಳುವ ಸಾರ್ಥಕ ತಾಣವಾಯಿತು. ಆರಂಭದಲ್ಲೆಲ್ಲ ಸರೋಜಿನಿ ಒಬ್ಬರೇ ಸಂಸ್ಥೆ ಕಾರ್ಯ ನಿಭಾಯಿಸುತ್ತಿದ್ದರು. ಮಕ್ಕಳ ಸ್ನಾನದಿಂದ ಹಿಡಿದು ಎಲ್ಲ ಕೆಲಸಗಳು, ಮುಂದೆ ಶಾಲೆ, ಮುಂದೆ ಕಾಲೇಜಿಗೆ ಪ್ರವೇಶ ಕೊಡಿಸುವುದು, ಈ ಎಲ್ಲ ಕೆಲಸಕ್ಕೆ ಅಗತ್ಯವಾದ ಆರ್ಥಿಕ ಸಂಪನ್ಮೂಲವನ್ನು ಸಮಾನ ಮನಸ್ಕರಿಂದ ಒಟ್ಟುಮಾಡುವುದು… ಹೀಗೆ ಬೆಳಗ್ಗೆ 5 ಗಂಟೆಗೆ ಆರಂಭಗೊಳ್ಳುವ ದಿನಚರಿ ರಾತ್ರಿ 12ಗಂಟೆವರೆಗೂ ದಣಿವರಿಯದೆ ನಡೆಯುತ್ತಿತ್ತು. ಇವರ ಸೇವಾತತ್ಪರತೆ, ಮಕ್ಕಳ ಬಗೆಗಿನ ಅತೀವ ಕಾಳಜಿ ಇದೆಲ್ಲವೂ ಮತ್ತಷ್ಟು ಜನರನ್ನು ಸೇವೆಗೆ ಪ್ರೇರೇಪಿಸಿ ಸಂಸ್ಥೆಗೆ ಜೋಡಿಸಿತು. ಬಲಿಷ್ಠ ತಂಡ ಎದ್ದುನಿಂತಿತು.

ಕಳೆದ 33 ವರ್ಷಗಳಲ್ಲಿ ಇಲ್ಲಿ 800ಕ್ಕೂ ಅಧಿಕ ಹೆಣ್ಣುಮಕ್ಕಳು ಬದುಕು ಕಟ್ಟಿಕೊಂಡಿದ್ದಾರೆ. ಅವರಿಗೆಲ್ಲ ಸ್ವಂತ ತಾಯಿಗಿಂತಲೂ ಹೆಚ್ಚಾಗಿ ಪ್ರೀತಿ ಸುರಿದಿರುವ ಸರೋಜಿನಿ ಅವರು ಆ ಮಕ್ಕಳಿಗೆ ಶಿಕ್ಷಣ, ಉದ್ಯೋಗ ಮಾರ್ಗದರ್ಶನ ನೀಡಿ ಸ್ವಾವಲಂಬಿಯಾಗಿ ನಿಲ್ಲುವಂತೆ ಮಾಡಿದ್ದಾರೆ. 20ಕ್ಕೂ ಹೆಚ್ಚು ಹೆಣ್ಣುಮಕ್ಕಳ ಮದುವೆಯನ್ನು ತಾವೇ ನಿಂತು ಮಾಡಿದ್ದಾರೆ. ಅದೆಷ್ಟೋ ಹುಡುಗಿಯರು ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆದುಕೊಂಡಿದ್ದು ಈ ಮಾತೃಮಂದಿರಕ್ಕೆ ತಮ್ಮಿಂದ ಸಾಧ್ಯವಾದ ನೆರವನ್ನು ನೀಡುತ್ತಿದ್ದಾರೆ. ಎಲ್ಲ ಮಕ್ಕಳಿಗೂ ಇದು ಒಂದೇ ಕುಟುಂಬ ಎಂಬ ಭಾವ ಮೂಡಬೇಕು ಎಂಬ ಕಾರಣಕ್ಕೆ ಮಕ್ಕಳ ಹೆಸರ ಕೊನೆಯಲ್ಲಿ ಎಲ್ಲರಿಗೂ ಭಾರತಿ ಉಪನಾಮವನ್ನು ಜೋಡಿಸಲಾಗಿದೆ. ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡೆ ಸೇರಿದಂತೆ ಹಲವು ರಂಗಗಳಲ್ಲಿ ಈ ಮಕ್ಕಳು ಸಾಧನೆಯ ಹೆಜ್ಜೆಗುರುತು ಮೂಡಿಸಿದ್ದಾರೆ. ಸಂಸ್ಥೆಯ ಹೊಸ ಕಟ್ಟಡ ಉದ್ಘಾಟಿಸಲು ಬಂದಿದ್ದ ವಾಜಪೇಯಿ ಸರೋಜಿನಿಯವರ ಕಾರ್ಯವನ್ನು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ. 2010ರಲ್ಲಿ ರಾಷ್ಟ್ರಪತಿಯಾಗಿದ್ದ ಪ್ರತಿಭಾ ಪಾಟೀಲ್ ಅವರಿಂದ ರಾಜೀವ್ ಗಾಂಧಿ ಮಾನವ ಸೇವಾ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಹತ್ತಾರು ಗೌರವ, ಸನ್ಮಾನಗಳಿಗೆ ಡಾ.ಅಗ್ರವಾಲ್ ಪಾತ್ರರಾಗಿದ್ದಾರೆ.

ಪ್ರಸಕ್ತ ಮನೀಷಾ ಮಂದಿರದಲ್ಲಿ (www.manishamandir.org)  35 ಬಾಲಕಿಯರಿದ್ದು, ಸರೋಜಿನಿ ಅವರು 78ರ ಇಳಿವಯಸ್ಸಿನಲ್ಲೂ ಇಲ್ಲಿನ ಹೆಣ್ಣುಮಕ್ಕಳ ಉತ್ಕರ್ಷಕ್ಕಾಗಿ ಶ್ರಮಿಸುತ್ತಿದ್ದಾರೆ. ಪತಿ ಹಾಗೂ ಮೂರೂ ಮಕ್ಕಳು ಇವರ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಮಾತ್ರವಲ್ಲ, ಪುತ್ರರು ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಜನಜಾಗೃತಿ ಮೂಡಿಸುತ್ತಿದ್ದಾರೆ. ‘ಕೊನೆಯುಸಿರಿನವರೆಗೂ ಹೀಗೆ ಸೇವೆ ಮಾಡುತ್ತೇನೆ. ಒಬ್ಬ ಮನೀಷಾಳನ್ನು ಕಳೆದುಕೊಂಡರೂ ಆ ದೇವರು 800ಕ್ಕೂ ಹೆಚ್ಚು ಹೆಣ್ಣುಮಕ್ಕಳ ತಾಯಿಯಾಗಿ ಮಾಡಿದ. ಇದಕ್ಕಿಂತ ಜೀವನದಲ್ಲಿ ಬೇರೇನು ಸಾರ್ಥಕತೆ ಬೇಕು?’ ಎನ್ನುವ ಸರೋಜಿನಿ ([email protected]) ಅವರು ಬದುಕಿನ ಹೊಸ ಅರ್ಥ, ಮಾತೃತ್ವದ ಮಿಡಿತ, ಮಾನವೀಯತೆಯ ಸೊಬಗನ್ನು ಪರಿಚಯಿಸಿದ್ದಾರೆ.

ಇದನ್ನೆಲ್ಲ ಕಂಡು ಆ ಮನೀಷಾ ಮೇಲಿಂದಲೇ ಸಂತೃಪ್ತಿಯ ನಗೆ ಬೀರುತ್ತಿರಬಹುದು, ಜತೆಗೆ ಆ ದೇವರೂ!

(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

Leave a Reply

Your email address will not be published. Required fields are marked *

Back To Top