Saturday, 18th August 2018  

Vijayavani

ಭಾರೀ ಮಳೆಗೆ ತತ್ತರಿಸಿದ ಕೇರಳದಲ್ಲಿ ಮೋದಿ ವೈಮಾನಿಕ ಸಮೀಕ್ಷೆ: ಐನೂರು ಕೋಟಿ ನೆರವು ಘೋಷಣೆ        ಕೊಡಗಿಗೆ ಮಳೆ ಸಂಕಷ್ಟ: ಹಾನಿ ಬಗ್ಗೆ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿಗೆ ಮುಖ್ಯಕಾರ್ಯದರ್ಶಿ ವರದಿ        ಕೊಡಗಿನ ಗೋಣಿಕೊಪ್ಪದಲ್ಲಿ ಮಳೆಯ ಅಬ್ಬರಕ್ಕೆ ಕುಸಿದ ಮನೆ: ನಾಲ್ಕು ಮಂದಿ ದುರ್ಮರಣ        ಚಾರ್ಮಾಡಿ ಘಾಟ್​​ನ ತಿರುವಿನಲ್ಲಿ ಕೆಟ್ಟು ನಿಂತ ವಾಹನ: ಧರ್ಮಸ್ಥಳ ಮಾರ್ಗದಲ್ಲಿ ವಿಪರೀತ ಟ್ರಾಫಿಕ್​ ಜಾಮ್        ಅರಕಲಗೂಡನಲ್ಲಿ 200 ಮನೆಗಳು ಜಲಾವೃತ: ದ್ವೀಪದಂತಾದ ರಾಮನಾಥಪುರ, ಮುಳುಗಿದ ನಿಮಿಷಾಂಭ ದೇಗುಲ       
Breaking News

ಮಕ್ಕಳಿಗೆ ಸಿಗಲಿ ನೈತಿಕ ವಾತಾವರಣ

Tuesday, 17.07.2018, 3:02 AM       No Comments

| ಶಾಂತಾ ನಾಗರಾಜ್ , ಆಪ್ತ ಸಲಹಾಗಾರ್ತಿ

# ನಾನು 45 ವರ್ಷದ, ಒಳ್ಳೆಯ ಉದ್ಯೋಗದಲ್ಲಿರುವ ವ್ಯಕ್ತಿ. ನನಗೆ ಮದುವೆಯಾಗಿ 17 ವರ್ಷಗಳಾಗಿವೆ. ಇಬ್ಬರು ಗಂಡು ಮಕ್ಕಳಿದ್ದಾರೆ. ನನ್ನ ಹೆಂಡತಿ ಮತ್ತು ನಾನು ಈಗ್ಗೆ ಎರಡು ವರ್ಷಗಳ ಹಿಂದಿನವರೆಗೂ ನೋಡಿದವರು ಹೊಟ್ಟೆಕಿಚ್ಚು ಪಡುವಷ್ಟು ಚೆನ್ನಾಗಿದ್ದೆವು. ಎರಡು ವರ್ಷಗಳ ಕೆಳಗೆ ನನ್ನ ಹೆಂಡತಿ ತನ್ನ ಅಕ್ಕ ಹಳ್ಳಿಯಲ್ಲಿರುವುದರಿಂದ ಅವಳ ಮಗಳನ್ನು ನಾವೇ ಓದಿಸೋಣವೆಂದು ಮನೆಗೆ ಕರೆತಂದಳು. ನನಗೂ ಸಹಾಯ ಮಾಡುವ ಹುಮ್ಮಸ್ಸು ಇರುವುದರಿಂದ ಒಪ್ಪಿದೆ. ಸ್ವಲ್ಪ ದಿನಗಳ ನಂತರ ಅವಳ ಅಕ್ಕನ ಗಂಡ ತುಂಬ ಕೆಟ್ಟವನೆಂದೂ, ಅಕ್ಕ ಅವನನ್ನು ಬಿಟ್ಟಿದ್ದಾಳೆಂದೂ, ಅವಳು ಹಳ್ಳಿಯಲ್ಲೇ ಇದ್ದರೆ ಜನ ‘ಗಂಡ ಬಿಟ್ಟವಳು’ ಎಂದು ಹೀಯಾಳಿಸುತ್ತಾರೆಂದೂ ಹೇಳಿ, ಅಕ್ಕನನ್ನೂ ಅವಳ ಚಿಕ್ಕ ಮಗನನ್ನೂ ನಮ್ಮ ಮನೆಗೇ ಕರೆಸಿಕೊಂಡಳು. ಹೆಂಡತಿಗೆ ಆಗಲೇ ಹೇಳಿದೆ ‘ನಿಮ್ಮಕ್ಕನಿಗೆ ಇನ್ನೂ 40 ವರ್ಷ ವಯಸ್ಸು, ನೋಡಲು ಬೇರೆ ಚೆನ್ನಾಗಿದ್ದಾರೆ, ಇಲ್ಲಿ ಬಂದು ಅವರು ಏನಾದರೂ ಮಾಡಿಕೊಂದರೆ ನಮಗೆ ಕೆಟ್ಟ ಹೆಸರು ಬರುತ್ತದೆ’ ಅಂತ. ಇವಳು ಕೇಳಲಿಲ್ಲ. ಆಕೆ ಬಂದು ನಮ್ಮ ಮನೆಯ ಹತ್ತಿರವೇ ಒಂದು ಕೆಲಸಕ್ಕೂ ಸೇರಿಕೊಂಡರು. ಕ್ರಮೇಣ ನನಗೆ ಮತ್ತು ಆಕೆಗೆ ಪರಸ್ಪರ ಆಕರ್ಷಣೆ ಪ್ರಾರಂಭವಾಯಿತು. ನಮ್ಮ ಸಂಬಂಧವೂ ಗಾಢವಾಗುತ್ತ ಹೋಯಿತು. ಇದನ್ನು ಕಂಡ ನನ್ನ ಹೆಂಡತಿ ತಗಾದೆ ಶುರು ಮಾಡಿದಳು. ದಿನ ಬೆಳಗಾದರೆ ಅಕ್ಕ-ತಂಗಿಯರ ಜಗಳ ತಾರಕ್ಕೇರುತ್ತದೆ. ನಾನು ಹೆಂಡತಿಯನ್ನು ಎಷ್ಟೋ ಸಮಾಧಾನ ಮಾಡುತ್ತೇನೆ. ‘ಅವಳೂ ಇರಲಿ, ನೀನೂ ಇರು, ನಿನಗೆ ನಾನೇನೂ ಕಮ್ಮಿ ಮಾಡುವುದಿಲ್ಲ, ನಾನು ಬೇರೆ ಯಾರನ್ನೋ ಕಟ್ಟಿಕೊಂಡಿಲ್ಲವಲ್ಲ, ನಿನ್ನ ಅಕ್ಕ ತಾನೆ? ಅವಳ ಜತೆಯಲ್ಲಿ ಹೊಂದಿಕೊಳ್ಳಲು ಆಗುವುದಿಲ್ಲವೇ’? ಅಂತ. ನೀವೊಮ್ಮೆ ಇದೇ ಅಂಕಣದಲ್ಲಿ ಬರೆದಿದ್ದರಲ್ಲ ಮೇಡಂ? ಅಣ್ಣ ಸತ್ತು ಹೋದ ಅಂತ ಒಂದು ಮಗುವಿನ ತಾಯಿಯಾದ ಅತ್ತಿಗೆಯನ್ನು ಮೈದುನನೇ ಮದುವೆಯಾಗಲಿ, ಅತ್ತಿಗೆಯನ್ನು ಮದುವೆಯಾಗುವುದು ತಪ್ಪಿಲ್ಲ ಅಂತ. ಅದನ್ನೂ ಇವಳಿಗೆ ತೋರಿಸಿದೆ ಮೇಡಂ. ಆದರೆ ಇವಳು ನಾನು ಹೇಳಿದ ಮಾತನ್ನೇ ಕೇಳುವುದಿಲ್ಲ. ಪಾಪ, ನನ್ನ ಈ ಅತ್ತಿಗೆ ಈಗ ಎರಡು ಮಕ್ಕಳನ್ನು ಕಟ್ಟಿಕೊಂಡು ಎಲ್ಲಿಗೆ ಹೋಗಬೇಕು? ಗಂಡಸಾದವನು ಇಬ್ಬರು ಹೆಂಗಸರ ಜತೆ ಬದುಕಬಹುದಲ್ಲವೇ? ಅದರಲ್ಲಿ ಏನು ತಪ್ಪಿದೆ? ದಯವಿಟ್ಟು ನನ್ನ ಹೆಂಡತಿಗೆ ಸ್ವಲ್ಪ ಬುದ್ಧಿ ಹೇಳಿ. ನಾವೆಲ್ಲ ನಿಮ್ಮ ಕಾಲಂ ಓದುತ್ತೇವೆ.

ಸ್ವಾಮಿ ಮಹಾನುಭಾವರೇ, ಅನ್ಯಾಯದ ಕಟ್ಟೆಗೆ ನನ್ನನ್ನು ಎಳೆಯುತ್ತಿದ್ದೀರಲ್ಲ? ನಿಮ್ಮ ಜಾಣತನಕ್ಕೆ ಏನೆನ್ನಲಿ? ನನ್ನ ಇಷ್ಟೂ ದಿನದ ಬರವಣಿಗೆಯಲ್ಲಿ ಗಂಡಸಾಗಲೀ ಹೆಂಗಸಾಗಲೀ ಎರಡೆರಡು ಸಂಗಾತಿಗಳ ಜತೆ ಬದುಕುವುದನ್ನು ಎಂದಾದರೂ ಪ್ರೋತ್ಸಾಹಿಸಿದ್ದೇನೆಯೇ? ಖಂಡಿತ ಇಲ್ಲ. ನೀವು ಕೊಟ್ಟಿರುವ ಉದಾಹರಣೆಯಲ್ಲಿ ಅಣ್ಣ ಸತ್ತು ಹೋಗಿದ್ದ, ಒಂದು ಪುಟ್ಟ ಮಗುವಿರುವ ಅತ್ತಿಗೆಯನ್ನು ಈ ಮೈದುನನೂ ಇಷ್ಟಪಟ್ಟಿದ್ದ. ಆದರೆ ಅವನಿಗೆ ‘ಅತ್ತಿಗೆ ತಾಯಿಯ ಸಮಾನ’ ಎನ್ನುವ ಹಳೆಯ ನಂಬಿಕೆ ಮದುವೆಯಾಗಲು ಅಡ್ಡ ಬರುತ್ತಿತ್ತು. ಆ ಮಗು ಅನಾಥವಾಗುವ ಬದಲು ‘ನೀನೇ ಒಳ್ಳೆಯ ತಂದೆಯಾಗಪ್ಪ’ ಎಂದು ಬರೆದಿದ್ದೆ. ನೀವು ನೋಡಿದರೆ ನಿಮ್ಮ ಹೆಂಡತಿ ಬದುಕಿದ್ದೂ ಅವರ ಅಕ್ಕನನ್ನು ಮತ್ತೊಬ್ಬ ಹೆಂಡತಿ ಎಂದು ಪರಿಗಣಿಸುತ್ತೇನೆ ಎನ್ನುತ್ತೀರಲ್ಲ? ಇದು ಯಾವ ನ್ಯಾಯ? ಈ ನಿಮ್ಮ ಸ್ವೇಚ್ಛಾಚಾರವನ್ನು ನಾನು ಮೆಚ್ಚಿಕೊಂಡು ನಿಮ್ಮ ಹೆಂಡತಿಗೆ ಬುದ್ಧಿ ಹೇಳಬೇಕೇ? ನೀವು ನಿಮ್ಮ ತಲೆಯಲ್ಲಿರುವ ‘ಗಂಡಸು ಏನು ಮಾಡಿದರೂ ಸರಿ’ ಎನ್ನುವ ಹೊಲಸು ವಿಚಾರವನ್ನು ತೆಗೆದುಹಾಕಿ. ನಿಧಾನವಾಗಿ ಸ್ವಲ್ಪ ಕುಳಿತು ಯೋಚಿಸಿ. ನಿಮ್ಮ ಮನೆಯಲ್ಲೀಗ ನಾಲ್ಕು ಮಕ್ಕಳಿದ್ದಾರೆ. ಅವರಿಗೆ ಯಾವ ನೈತಿಕ ವಾತಾವರಣವನ್ನು ನೀವು ಕೊಡುತ್ತಿದ್ದೀರಿ? ಹೆಂಡತಿಯ ಜತೆಗೂ ಅವರಕ್ಕನ ಜತೆಗೂ ಚಕ್ಕಂದ ಆಡುವ ನೀವು ಮಕ್ಕಳ ಕಣ್ಣಲ್ಲಿ ಏನಾಗುತ್ತೀರಿ? ನೀವು ಇಬ್ಬರು ಹೆಂಗಸರ ಜತೆ ವ್ಯವಹಾರ ಮಾಡಿದರೆ ನಾಳೆ ನಿಮ್ಮ ಮಗ ನಾಲ್ಕು ಹೆಣ್ಣುಗಳನ್ನು ಬಯಸಬಹುದಲ್ಲವೇ? ನಿಮ್ಮ ಮನೆಯಲ್ಲಿರುವ ಹುಡುಗಿ ಸಿಕ್ಕಸಿಕ್ಕವರ ಜತೆ ಓಡಾಡಬಹುದಲ್ಲವೇ? ನೀವು ಬುದ್ಧಿ ಹೇಳಲು ಹೋದರೆ, ‘ನೀವು ಇಬ್ಬರೊಂದಿಗೆ ಫ್ಲರ್ಟ್ ಮಾಡುತ್ತಿಲ್ಲವೇ’ ಎಂದು ಕೇಳಿದರೆ ಏನು ಉತ್ತರ ಹೇಳುತ್ತೀರಿ? ನಿಮ್ಮ ಹೆಂಡತಿಯ ಸಂಕಟವನ್ನು ಸ್ವಲ್ಪ ಅರ್ಥ ಮಾಡಿಕೊಳ್ಳಿ. ಅವರು ಕಷ್ಟದಲ್ಲಿರುವ ಅಕ್ಕನಿಗೆ ಸಹಾಯ ಮಾಡಲು ಬಯಸಿದರೇ ವಿನಃ ನೀವೇ ಅವರನ್ನು ಇಟ್ಟುಕೊಳ್ಳಲಿ ಅಂತ ಅಲ್ಲ. ಆ ಅಕ್ಕನಾದರೂ ಎಷ್ಟೂ ನೈತಿಕತೆ ಇಲ್ಲದವರು. ಸಹಾಯ ಮಾಡಿದ ತಂಗಿಯ ಬದುಕನ್ನೇ ನಾಶ ಮಾಡಲು ಹೊರಟಿದ್ದಾರಲ್ಲ? ನಿಮಗೆ ಅದು ಗೊತ್ತಾಗುತ್ತಿಲ್ಲವೇ? ಕಾಮದ ಕಣ್ಣು ಕುರುಡಾಗಿರುವುದು ನಿಮ್ಮಿಬ್ಬರ ವಿಷಯದಲ್ಲಿ ಸತ್ಯವಾಗಿದೆಯಲ್ಲ! ಮೊದಲು ಹೆಂಡತಿಯ ಅಕ್ಕನನ್ನು ನಿಮ್ಮ ಬದುಕಿನಿಂದ ದೂರವಿಡಿ. ಕಾನೂನಿನ ದೃಷ್ಟಿಯಲ್ಲಿ ನೀವು ಮಾಡುತ್ತಿರುವುದು ಅಪರಾಧ ಎನ್ನುವ ಅರಿವು ನಿಮಗೆ ಇರಲಿ. ನೀವು ಈ ಕಾಲಂ ಅನ್ನು ಸರಿಯಾಗಿ ಓದಿ ಅರ್ಥಮಾಡಿಕೊಳ್ಳಿ. ನಿಮಗೆ ಬೇಕಾದಂತೆ ತಿರುಗಿಸಿಕೊಳ್ಳಬೇಡಿ.‘ಒಬ್ಬ ಗಂಡಸಿಗೆ ಒಬ್ಬಳೇ ಹೆಂಡತಿ ಮತ್ತು ಒಬ್ಬ ಹೆಂಗಸಿಗೆ ಒಬ್ಬನೇ ಗಂಡ’ ಇದು ಆರೋಗ್ಯವಾದ ಸಮಾಜದಲ್ಲಿ ಒಪ್ಪಿತವಾದ ಮೌಲ್ಯ. ಅದು ಬಿಟ್ಟು ಹೆಂಡತಿಯೂ ಇರಲಿ, ಅವಳಕ್ಕನೂ ಇರಲಿ ಎನ್ನುವುದು ದುರಾಸೆ. ನಿಮ್ಮ ಹೆಂಡತಿಯೂ ನಿಮ್ಮ ತಮ್ಮನನ್ನೋ ಅಣ್ಣನನ್ನೋ ಬಯಸಿ ‘ಅವನೂ ಇರಲಿ, ನೀನೂ ಇರು’ ಎಂದರೆ ನಿಮ್ಮ ಮನೆ ಸುತ್ತಲಿನರ ಕಣ್ಣಲ್ಲಿ ಏನಾಗುತ್ತದೆ ಎನ್ನುವ ಎಚ್ಚರಿಕೆ ನಿಮಗೆ ಬೇಕಲ್ಲವೇ?

ಶಾಂತಾ ನಾಗರಾಜ್ ಅವರನ್ನು ಪ್ರತಿ ಸೋಮವಾರ ಸಂಜೆ 6 ಗಂಟೆಗೆ ಪ್ರಸನ್ನ ಆಪ್ತಸಲಹಾ ಕೇಂದ್ರ ಅರುಣಚೇತನದಲ್ಲಿ ಸಂರ್ಪಸಬಹುದು. ಸಲಹೆ ಉಚಿತ. ಸೋಮವಾರ ಮಧ್ಯಾಹ್ನ 11ರಿಂದ 1ರವರೆಗೆ ಕರೆ ಮಾಡಿ ಅಪಾಯಿಂಟ್​ವೆುಂಟ್ ಪಡೆದುಕೊಳ್ಳಬಹುದು.

ಸಂಖ್ಯೆ: 9480999959. ಪತ್ರ ಬರೆಯುವವರು ವಿಜಯವಾಣಿ ಲಲಿತಾ ಪುರವಣಿಗೆ ಬರೆಯಬೇಕು.

Leave a Reply

Your email address will not be published. Required fields are marked *

Back To Top