Friday, 21st September 2018  

Vijayavani

ಮತ್ತೆ ದೇವಸ್ಥಾನಕ್ಕೆ ಹೊರಟ ಸಿಎಂ - ಇಂದು ಸಂಜೆ ಶೃಂಗೇರಿ ಶಾರದಾಂಬೆಯ ದರ್ಶನ - ನಂತರ ಜಗದ್ಗುರಗಳ ಭೇಟಿ        ಕೊಡಗಿನಲ್ಲಿ ತಹಸೀಲ್ದಾರ್ ಮೇಲೆ‌ ಹಲ್ಲೆ ಪ್ರಕರಣ - ಪ್ರಕರಣ ಸಂಬಂಧ 12 ಆರೋಪಿಗಳ ಬಂಧನ        ಸಿಎಂ ದಂಗೆ ಹೇಳಿಕೆಗೆ ಆಕ್ರೋಶ - ಇಂದು ರಾಜ್ಯಪಾಲರಿಗೆ ಬಿಜೆಪಿ ನಿಯೋಗದ ದೂರು - ಬಿಎಸ್​​ವೈ ನಿವಾಸಕ್ಕೆ ಬಿಗಿ ಭದ್ರತೆ        ಸಂಪುಟ ಸಭೆಯಲ್ಲಿ ಸಿಎಂ ದಂಗೆ ಹೇಳಿಕೆ ಪ್ರಸ್ತಾಪ - ಎಚ್​ಡಿಕೆ ಮಾತಿಗೆ ಹಿರಿಯ ಸಚಿವರಿಂದಲೇ ಆಕ್ಷೇಪ        ಎಸ್. ಗಿರೀಶ್​​ರಿಂದ ಆಪರೇಷನ್ ಕ್ಲೀನ್ - ಸಿಸಿಬಿ ಎಸ್ಪಿಯಾಗಿ ಬಂದ 24 ಗಂಟೆಯಲ್ಲೇ 5 ಸಿಬ್ಬಂದಿ ಎತ್ತಂಗಡಿ        ಬಾಗಲಕೋಟೆಯ ಬನಹಟ್ಟಿಯಲ್ಲೊಬ್ಬ ಪೋಲಿ ಶಿಕ್ಷಕ - ವಿದ್ಯಾರ್ಥಿನಿ ಮೊಬೈಲ್​​​ಗೆ ಐ ಲವ್ ಯೂ ಮೆಸೇಜ್       
Breaking News

ಮಂದಹಾಸದೊಡತಿಗೆ ಅರುವತ್ತರ ಹದಿಹರೆಯ!

Thursday, 01.06.2017, 3:03 AM       No Comments

ಬದುಕಿನ ಪ್ರತಿ ಕ್ಷಣವನ್ನೂ ಹಾಸ್ಯಕನ್ನಡಕದ ಮೂಲಕವೇ ನೋಡುವ ಖ್ಯಾತ ಲೇಖಕಿ ಭುವನೇಶ್ವರಿ ಹೆಗಡೆಯವರಿಗೆ ಈಗ ಅರುವತ್ತರ ಸಂಭ್ರಮ. ಅವರ ಒಂದೊಂದು ಲೇಖನವೂ ಭರಪೂರ ನಗುವಿನ ಮೂಟೆ, ಉತ್ಸಾಹದ ಊಟೆ. ಈಗಲೂ ಹೊಸತನ್ನು ಕಲಿಯುವ ಸಡಗರವಿಟ್ಟುಕೊಂಡಿರುವ ಭುವನೇಶ್ವರಿಯವರ ಬರಹಗಳಲ್ಲಿ ಹೊಸತನಕ್ಕೆ ತೆರೆದುಕೊಳ್ಳುವ ತುಡಿತವಿರುತ್ತದೆ ಎಂಬುದು ವಿಶೇಷ.

ನದಿಯೊಂದು ಎಲ್ಲೋ ಹುಟ್ಟುತ್ತದೆ. ತಿರುವು-ಮುರುವುಗಳಲ್ಲಿ ಹರಿಯುತ್ತದೆ. ಎತ್ತರದಿಂದ ಧುಮುಕುತ್ತದೆ. ಬಿದ್ದ ನೋವರಿಯದಂತೆ ಕುಣಿಯುತ್ತಲೇ ಸಾಗಿ ಗಮ್ಯ ಸೇರುತ್ತದೆ. ಆಗಷ್ಟೇ ತೊಟ್ಟು ಕಳಚಿ ಬಿದ್ದ ಪಾರಿಜಾತದ ಹೂವನ್ನು ಮಡಿಲಿಗೆಳೆದುಕೊಂಡು ಸಾಗಿಸಿದಂತೆಯೇ ಕಸ ಕೊಳೆಗಳನ್ನೂ ಬೇಸರವಿಲ್ಲದೇ ಎಳೆದೊಯ್ಯುತ್ತದೆ. ಸಾರ್ಥಕ ಮನುಷ್ಯ ಜೀವನವೂ ಹೀಗೆಯೇ.. ತನ್ನ ಜತೆಗೆ ಬಂದ ಎಲ್ಲರಿಗೂ ಸಂತಸವನ್ನು ಹಂಚುತ್ತಲೇ ಸಾಗುತ್ತದೆ.

ಬದುಕಿನ ಬಿರುಬೇಸಿಗೆಯಲ್ಲಿ ಇಂಥವರ ಸಹವಾಸ ಪಚ್ಚೆ ಬನದ ನೆರಳಿನಂತೆ. ತಂಪು ಹಿತ, ಇನ್ನಷ್ಟು ಅದೇ ನೆರಳಿನಾಸೆ ಬೇಡುವಂಥದ್ದು. ಇವರ ಸಹಚರ್ಯದಿಂದ ಕಲಿಯುವುದು ಎಷ್ಟೋ ಇರುತ್ತದೆ. ಯಾರೂ ಪರಿಪೂರ್ಣರಲ್ಲ. ಅದು ಸಹಜಸತ್ಯ. ತಮ್ಮ ಕುಂದು ಕೊರತೆಗಳ ಬಗ್ಗೆ ತಾವೇ ಆರೋಗ್ಯಕರ ಹಾಸ್ಯ ಮಾಡಿಕೊಳ್ಳುತ್ತಾ ಉಳಿದವರ ಮುಖದಲ್ಲೂ ನಗೆ ಮಿಂಚರಳಿಸುವ, ತಮ್ಮ ಆ ಕ್ಷಣದ ನೋವನ್ನು ನಗೆಯ ಕ್ಷಣಗಳಾಗಿ ಲೇಖನಿಯಲ್ಲಿಳಿಸಿ ಓದುಗರೆಡೆಗೆ ಹರಿಸುವ ಕಲೆ ಎಲ್ಲರಿಗೂ ಸಿಗುವಂಥದ್ದಲ್ಲ. ಅಂತಹ ಕೆಲಸ ಮಾಡುತ್ತಿರುವವರಲ್ಲಿ ಕನ್ನಡದ ಖ್ಯಾತ ಲೇಖಕಿ ಭುವನೇಶ್ವರಿ ಹೆಗಡೆಯವರು ಒಬ್ಬರು.

ಅವರ ಬರಹದ ರುಚಿಯನ್ನು ಓದಿಯೇ ಸವಿಯಬೇಕು. ‘ಹಳ್ಳದಾಳದಿಂದ’ ಎಂಬ ಲಘುಬರಹದಲ್ಲಿ ಮೊದಲ ಬಾರಿಗೆ ಹಳ್ಳಿಯ ಕಾಲೇಜಿನಲ್ಲಿ ಪಾಠಮಾಡಲು ಹೋದ ಉಪನ್ಯಾಸಕಿಯ ಪರಿಪಾಟಲನ್ನು ಯಾವ ಬಗೆಯಲ್ಲಿ ವಿವರಿಸಿದ್ದಾರೆಂದರೆ ನಾವೂ ಆ ಅನುಭವವನ್ನು ಪಡೆಯೋಣ ಎಂದನ್ನಿಸುವಷ್ಟು. ಸ್ವಂತ ಕಾಲೇಜು ಕಟ್ಟಡವಿಲ್ಲದ ಹಳ್ಳಿಯಲ್ಲಿ ಅಲ್ಲಿನ ಪಂಚಾಯತ್ ಕೋಣೆಯಲ್ಲೇ ಪ್ರಾರಂಭವಾದ ಕಾಲೇಜು, ಬಾಗಿಲು ಹಾಕದಿದ್ದರೆ ಒಳನುಗ್ಗುವ ದನಕರು, ನಾಯಿ ಬೆಕ್ಕುಗಳೆಂಬ ಪ್ರಾಣಿ ಸಂಕುಲಗಳು, ಹಾಕಿದರೆ ಆಗಾಗ ಅವರಿವರು ಟಕಟಕನೆ ಬಾಗಿಲು ಬಡಿವ ಸದ್ದಿಗೆ ತೆಗೆಯಬೇಕಾದ ಅನಿವಾರ್ಯತೆ……

ಅದರಲ್ಲಿನ ಒಂದು ಸಂದರ್ಭವಂತೂ ನೆನಪಾದರೇ ನಕ್ಕು ನಕ್ಕು ಹೊಟ್ಟೆ ಹುಣ್ಣಾಗುವಂತೆ ಮಾಡುತ್ತದೆ. ಊರಿನ ಚೇರ್ಮನ್ನರ ಕೃಪಾಕಟಾಕ್ಷದಿಂದ ಪ್ರಾರಂಭವಾದ ಕಾಲೇಜದು. ಒಂದು ದಿನ ಉಪನ್ಯಾಸಕಿ ಪಾಠ ಮಾಡುತ್ತಿರುವಾಗ ಬಾಗಿಲು ಸದ್ದಾಯಿತು. ತೆರೆದು ನೋಡಿದರೆ ಚೇರ್ಮನ್ನರ ಸೊಸೆ ತನ್ನ ಮಗನ ಕೈ ಹಿಡಿದುಕೊಂಡು ಹೊರಗೆ ನಿಂತಿದ್ದಳು. ‘ಶಾಲೆಗೆ ಹೋಗು ಅಂದ್ರೆ ಹೋಗೋದಿಲ್ಲ ಅಂತ ಹಠ ಹಿಡೀತಿದ್ದ ನನ್ನ ಮಗ ಕಾಲೇಜಿಗೆ ಹೋಗ್ತೀಯಾ ಅಂದಾಗ ಒಪ್ಪಿ ತಲೆಯಾಡಿಸಿದ್ದಾನೆ. ಇಲ್ಲೇ ಒಂದಿಷ್ಟು ಕೂರಿಸಿಹೋಗ್ತೀನಿ..’ ಎಂದು ಹೇಳುತ್ತಲೇ ತನ್ನ ಮಗನನ್ನು ಒಳತಳ್ಳಿ, ಬಾಗಿಲು ಮುಚ್ಚುತ್ತಾ ಹೊರನಡೆದ ಆಕೆಯನ್ನು ಕಂಡು ಅವಳ ಮುಗ್ಧತೆಗೆ ನಗಬೇಕೋ, ತನ್ನೆದೆರು ನಿಂತ ಆ ಪುಟ್ಟಪೋರನನ್ನು ನೋಡಿ ಅಳಬೇಕೋ ತಿಳಿಯದ ಪರಿಸ್ಥಿತಿ….

ದಿನನಿತ್ಯದ ಆಗು-ಹೋಗುಗಳನ್ನು ಡೈರಿಯಲ್ಲಿ ನಮೂದಿಸಿ ಅದನ್ನು ಜೀವನಪೂರ್ತಿ ಕಾಪಿಡುವವರ ಬಗೆಗೆ ಅವರು ಬರೆದ ‘ಡೈರಿ ಬರೆಯುವುದು’ ಎಂಬ ಬರಹ ಅದರ ಅಪಾಯವನ್ನು ಹೇಳುವಾಗ ನಗಿಸಿದರೂ ಅದರ ಗಾಂಭೀರ್ಯವೂ ಅರಿವಿಗೆ ಬಾರದೇ ಹೋಗುವುದಿಲ್ಲ. ಶ್ಯಾಮಲಾ ಕುಲಕರ್ಣಿ (ಅದರಲ್ಲಿ ಬರುವ ಒಂದು ಪಾತ್ರ) ತನ್ನ ಡೈರಿಯಲ್ಲಿ ‘ಅಪ್ಪ ಕೊಟ್ಟ ಯಾವ ಬಂಗಾರವೂ ಅಸಲಿಯಲ್ಲ ಎಂಬ ವಿಚಾರ ತಿಳಿದರೆ ತನ್ನ ಅತ್ತೆಯವರು ಹೇಗೆ ಎಗರಾಡಬಹುದು ಎಂಬುದನ್ನು ನೆನೆಸಿಕೊಂಡರೇ ನಗು ಬರುತ್ತದೆ. ಹೇಗೂ ಮೂರು ವರ್ಷದ ಗ್ಯಾರಂಟಿ ಮುಗೀತಾ ಬಂತು. ಅತ್ತೆ ಇಲ್ಲದ ಸಮಯದಲ್ಲಿ ಎಲ್ಲಾ ಬಂಗಾರ ತೆಗೆದುಕೊಂಡು ಹೋಗಿ ಒಂದು ಕೋಟಿಂಗ್ ಕೊಡಿಸಿಬಿಟ್ಟರೆ ನಿಶ್ಚಿಂತೆ’ ಎಂದು ಬರೆದಿರುತ್ತಾಳೆ. ಪ್ರಾಣಾಪಾಯ ತರುವ ಇಂಥ ಸಂಗತಿಯನ್ನು ಆಕೆ ಯಾಕೆ ಬರೆಯಬೇಕಿತ್ತೋ?! ಆ ಅತ್ತೆಯ ಮಗಳು ವಿದ್ಯಾವಂತೆ, ಅತ್ತಿಗೆ ಇಲ್ಲದ ಹೊತ್ತಿನಲ್ಲಿ ಡೈರಿ ತೆಗೆದು ಓದಿ ‘ಅಮ್ಮಾ ಬಾ ಇಲ್ಲಿ ನೋಡು’ ಎಂದು ಹೇಳಿದ ಪರಿಣಾಮ ಶ್ಯಾಮಲಾ ಬೀದಿಪಾಲಾಗಲಿದ್ದಳು. ಆದರೆ ಆಕೆಯ ಪತಿ ಮಹಾಶಯ ‘ಅವಳಪ್ಪ ಕೊಟ್ಟ ಬಂಗಾರ ನಕಲಿಯೇ ಇರಬಹುದು. ಆದರೆ ಅದನ್ನು ಧರಿಸಿದಾಕೆ ನನ್ನ ಪಾಲಿನ ಅಸಲಿ ಬಂಗಾರ’ ಎಂದು ಪರಿಸ್ಥಿತಿಯನ್ನು ನಿಭಾಯಿಸಿದ್ದನ್ನು ನೆನೆಸಿಕೊಳ್ಳುತ್ತಾ ಒಂದು ವರದಕ್ಷಿಣೆ ಸಾವಿನ ಕೇಸ್ ದಾಖಲಾಗುವುದು ಉಳಿಯಿತು. ಅದೇ ಬರಹದ ಕೊನೇ ಪ್ಯಾರಾದಲ್ಲಿ ಲೇಖಕಿ, ಈ ರೀತಿಯ ಎಡವಟ್ಟುಗಳಿಗೆ ಬದಲಾಗಿ ಡೈರಿ ಬರೆಯಲೇಬೇಕೆಂದಿದ್ದರೆ ನಮೂದಿಸಬೇಕಾದ ವಿಷಯಗಳನ್ನು ಉಲ್ಲೇಖಿಸಿರುವುದು ನೋಡಿದರೆ ಯಾವ ಅರಸಿಕನಿಗೂ ನಗೆಬುಗ್ಗೆ ಒಡೆದು ಮನ ಹಗುರಾಗದಿರದು- ‘ಇಷ್ಟಾದರೂ ನಿಮಗೆ ಡೈರಿ ಬರೆಯಬೇಕೆನ್ನಿಸುತ್ತದೆಯೇ? ಬರೆಯಿರಿ. ಆದರೆ ನನ್ನದೊಂದು ನಮ್ರ ಸೂಚನೆ. ನಿಮ್ಮ ದಿನಚರಿಯಲ್ಲಿ ಆದಷ್ಟೂ ನಿಮ್ಮ ವೈಯುಕ್ತಿಕ ವ್ಯವಹಾರಗಳನ್ನು ಕೈಬಿಡಿ. ನಿಮ್ಮ ಅನಿವಾರ್ಯ ಪೀಡೆಗಳಾದ ಗಂಡ/ಹೆಂಡತಿ, ಅತ್ತೆ ಮಾವ ಇಂಥವರ ಕುರಿತು ಏನೂ ಬರೆದು ಸಿಕ್ಕಿಬೀಳಬೇಡಿ. ಆದಷ್ಟೂ ಸಮಾಜದ ಕುರಿತು ರಾಷ್ಟ್ರೀಯ ಸಮಸ್ಯೆಗಳ ಕುರಿತು ಅರ್ಥವಾಗದ ಘನ ಗಂಭೀರ ವಿವರಗಳನ್ನು ಬರೆದರೆ ಒಳ್ಳೆಯದು. ಅಂತಾರಾಷ್ಟ್ರೀಯ ವಿಷಯಗಳ ಮೇಲೆ ಬರೆದರಂತೂ ಇನ್ನೂ ಒಳ್ಳೆಯದು. ಯಾರಿಗೆ ಗೊತ್ತು ನಿಮ್ಮ ಅಮೂಲ್ಯ ಡೈರಿ ಮುಂದೊಂದು ದಿನ ಅಪಾರ ಪ್ರಸಿದ್ಧಿ ಹೊಂದಿ ಬಿಡಲೂಬಹುದು..!!’.

ಎಲ್ಲರೂ ‘ಬದುಕಲು ಕಲಿಯಿರಿ’ ಎಂದರೆ ‘ಭು.ಹೆ.’ಯವರು ‘ಬಯ್ಯಲು ಕಲಿಯಿರಿ’ ಎಂದು ಉಪದೇಶಿಸಿದ್ದಾರೆ! ಈ ಬೈಗಳುಗಳ ತಯಾರಿಗಾಗಿ ‘ಬೈಭಾಷಿಕ’ ಪದಗಳ ಪುಂಜಗಳು, ಬಯ್ಯಲು ಬೇಕಾದ ಎಲ್ಲಾ ಪರಿಕರಗಳ ಬಗ್ಗೆ ನಿಮಗೆ ಪರಿಚಯ ಇಲ್ಲಿ ಸಿಗುತ್ತದೆ. ನೀವು ಬಯ್ಯುವಾಗ ಬಯ್ಗಳಿಗೊಂದು ‘ಕಳೆ’ ಇರಬೇಕಾದರೆ ನಿಮಗೆ ದೈವದತ್ತ ದಪ್ಪಸ್ವರ ಇರಬೇಕಾಗುತ್ತದೆಯಂತೆ. ಬೈಗಳುಗಳಲ್ಲಿನ ವೈವಿಧ್ಯಗಳ ಕುರಿತು ಹೇಳುತ್ತಾ ‘ಕನ್ನಡ ಬೈಗಳು, ಇಂಗ್ಲಿಷ್ ಬೈಗಳು, ನಾಗರಿಕ ಬೈಗಳು, ಅನಾಗರಿಕ ಬೈಗಳು, ನಗರದ ಬೈಗಳು, ಗ್ರಾಮೀಣ ಬೈಗಳು ಎಂತೆಲ್ಲಾ ಇದೆ’ ಎನ್ನುತ್ತಾರೆ. ನೀವು ಬೈಗಳುಗಳ ಬಗ್ಗೆ ಥೀಸಿಸ್ ಬರೆದು ಪಿಎಚ್​ಡಿ ಗಿಟ್ಟಿಸುವ ಇರಾದೆಯುಳ್ಳವರಾಗಿದ್ದರೆ ಅವರ ಈ ಬರಹ ಓದುವುದೊಳ್ಳೆಯದು.

ಉತ್ತರಕನ್ನಡದಿಂದ ದಕ್ಷಿಣಕನ್ನಡಕ್ಕೆ ಬಂದು ಇಲ್ಲಿನ ನಿವಾಸಿಯಾದ ಭು.ಹೆ.ಯವರು ತಮ್ಮ ಹಾಸ್ಯದ ಕನ್ನಡಕದಿಂದ ಎಲ್ಲರನ್ನೂ ನೋಡಿದವರೇ. ಅದರಲ್ಲೂ ಅವರ ‘ಮಂಗಳೂರಿನ ಬಸ್ಸುಗಳು’ ಎಂಬ ಪ್ರಬಂಧ ಬಹುಶಃ ನಮ್ಮೂರಿನವರು ಮರೆಯದ ಪ್ರಬಂಧವೇ ಇರಬಹುದು. ಅದು ಶುರುವಾಗುವುದೇ ಗಮ್ಮತ್ತಿನಿಂದ. ‘‘ಕಳೆದ ಒಂದು ವರ್ಷದಲ್ಲಿ ನನ್ನ ಹದಿಮೂರು ಪರ್ಸಗಳು ಕೈಯಿಂದ ಜಿಗಿದು ಅನಂತದಲ್ಲಿ ಲೀನವಾಗಿದೆ. ಎಂಟು ವ್ಯಾನಿಟಿ ಬ್ಯಾಗುಗಳ ಕೈಗಳನ್ನು ಇಪ್ಪತ್ತೆರಡು ಸಲ ಹರಿದುಕೊಂಡು ಹೊಸದಾಗಿ ಹಾಕಿಸಿದ್ದೇನೆ. ತಿಂಗಳಿಗೆರಡು ಜೊತೆ ಚಪ್ಪಲಿ ಖರೀದಿಸುತ್ತೇನೆ. ಅದನ್ನು ವಾರಕ್ಕೆರಡು ಬಾರಿ ರಿಪೇರಿ ಮಾಡಿಸುತ್ತೇನೆ. ದಿನಕ್ಕೊಂದು ಸೀರೆಯ ತುದಿ ಹರಿದುದನ್ನು ಕಂಡು ಅಳುತ್ತೇನೆ. ಕೈಗೆ ಬಳೆ ಹಾಕುವುದನ್ನು ಬಿಟ್ಟಿದ್ದೇನೆ. ಕಾಲುಂಗುರ ತ್ಯಜಿಸಿದ್ದೇನೆ. ಒಂದು ಸಲ ಕಿವಿ ಹರಿದುಕೊಂಡು ಹೊಲಿಗೆ ಹಾಕಿಸಿದ್ದೇನೆ. ಮೈನರ ಮೂಳೆ ಮುರಿತ, ತರಚು ಪರಚು ಗಾಯಗಳಿಗಂಜಿ ರಜೆ ಹಾಕದೇ ಆಫೀಸಿಗೆ ಹೋಗಿಬರುತ್ತಾ ನೋವು ನುಂಗಿ ನಗುವ ಯೋಗಿಗಳ ಸಾಲಿಗೆ ಸೇರಿದ್ದೇನೆ. ಇದೇನು ತಲೆಕೆಟ್ಟವಳ ಆತ್ಮಕತೆ ಎಂದುಕೊಳ್ಳಬೇಡಿ. ನಾನು ಮಂಗಳೂರಿನ ‘ದುಂಪೋಲೆ, ಪಿರಪೋಲೆ’ (ಮುಂದೆ ಹೋಗಿ, ಹಿಂದೆ ಹೋಗಿ) ಬಸ್ಸುಗಳಲ್ಲಿ ಪ್ರಯಾಣಿಸುತ್ತೇನೆ. ಹಾಗಿದ್ದೂ ಬದುಕಿದ್ದೇನಾದ್ದರಿಂದ ನಿಮ್ಮೆಲ್ಲರ ಅಭಿನಂದನೆಗೆ ಪಾತ್ರಳೆಂದು ಅಂದುಕೊಳ್ಳುತ್ತೇನೆ..’’ ಹೀಗೆ ಪ್ರಾರಂಭವಾಗುವ ಬರಹ ಕಚಗುಳಿ ಇಡುತ್ತಲೇ ಸಾಗುತ್ತದೆ.

‘‘ದಿನವೂ ಕಾಲೇಜಿಗೆಂದು ಮನೆ ಬಿಡುವಾಗ ‘ಸಂಪೂರ್ಣಾಂಗಪೂರ್ಣೆ’ಯಾದ ನಾನು ನನ್ನ ಯಾವತ್ತೂ ಚರಾವಶ್ಯಕ ವಸ್ತುಗಳೊಡನೆ ಬಸ್ಸೇರುತ್ತೇನಾದರೂ ಇಳಿಯುವಾಗ ಇದೇ ಸ್ಥಿತಿಯಲ್ಲಿ ಇರುತ್ತೇನೆಂದು ಹೇಳಲು ಸಾಧ್ಯವಿಲ್ಲ. ಮಂಗಳೂರಿನ ಬಸ್ಸುಗಳಲ್ಲಿ ಬೆಳಗ್ಗಿನ ಎಂಟು ಗಂಟೆಯಿಂದ ಹತ್ತರ ತನಕ ನೂಕುನುಗ್ಗಲಿನ ‘ನೂಕ್ ಅವರ್’……’’ -ಹೀಗೆ ಮುಂದುವರಿಯುತ್ತಾ ಹೋಗುವ ಬರಹ ಬಸ್ಸಿನಲ್ಲಿ ಕಳೆದುಕೊಂಡ ಅಮೂಲ್ಯ ವಸ್ತು- ‘ಪತಿ ಬರೆದ ಮೊದಲ ಪ್ರೇಮಪತ್ರ’ಕ್ಕಾಗಿ ಮರುಗಲು ಅವರು ಕೊಡುವ ಕಾರಣಗಳೂ ಗಮ್ಮತ್ತಿನದ್ದೇ. ‘ಬಸ್ಸುಗಳು ಹಾರುವ ಊರಲ್ಲಿರುವ ಪ್ರಿಯೇ’ ಎಂದು ಶುರುವಾಗುವ ಆ ಪತ್ರ ‘ಜೀವನದಲ್ಲಿ ನೀನು ಉಪ್ಪಿಟ್ಟಿನಂತಹ ಇಡ್ಲಿ, ಇಡ್ಲಿಯಂತಹಾ ಉಪ್ಪಿಟ್ಟು … ಏನೇ ಕೊಟ್ಟರೂ ನನಗದು ನಗಣ್ಯ. ಬದುಕು, ಪ್ರೀತಿ, ಗೌರವ, ಹೃದಯ..’ (ಎಲ್ಲಾ ವಿವಾಹಪೂರ್ವ ಪದಪುಂಜಗಳೂ ಬಳಸಲ್ಪಟ್ಟಿದ್ದವು). ‘‘ಅನಿವಾರ್ಯವೆನಿಸಿದಾಗೆಲ್ಲಾ ನಾನು ಈ ಪತ್ರವನ್ನು ನನ್ನವರೆದುರು ಹಿಡಿದು ಅಡುಗೆ, ಉಡುಗೆಗಳ ವಿಷಯದಲ್ಲಿ ಬಚಾವು ಮಾಡುವ ಅಸ್ತ್ರವನ್ನಾಗಿಸಿದ್ದೆ. ಇನ್ನು ನಿರಾಯುಧಪಾಣಿಯಾಗಿ ಪಾಣಿಗ್ರಹಣಗೈದ ಪತಿಯೊಡನೆ ಗೆಲ್ಲುವುದು ಹೇಗೆ?’’.

ಹೀಗೆ ಇವರ ಲೇಖನಗಳು ಒಂದೊಂದೂ ನಗೆಬಾಂಬುಗಳೇ. ಓದಿದಲ್ಲೆಲ್ಲಾ ಸಿಡಿಯುವಂಥವುಗಳು. ಬರಹದಷ್ಟೇ ಆಪ್ತ ಅವರ ಮಾತುಗಳು ಕೂಡಾ. ಅವರ ಭಾಷಣಗಳನ್ನು ಕೇಳುತ್ತಿದ್ದಷ್ಟು ಹೊತ್ತೂ ಜೀವನದ ಜಂಜಡಗಳನ್ನು ಮರೆಯುವುದು ಖಂಡಿತಾ. ದೇಶ ವಿದೇಶಗಳಲ್ಲೂ ನಗೆಬಾಂಬು ಎಸೆದು ಬಚಾವಾಗಿ ಬಂದ ಧೀಮಂತೆ ಈಕೆ. ಸದಾ ಲವಲವಿಕೆಯಿಂದ ಹದಿ ಹರೆಯದವರನ್ನು ನಾಚಿಸುವ ‘ಭು.ಹೆ.’ ಈಗ ಅರುವತ್ತರ ಬೆಡಗಿ.

ಈಗಲೂ ಹೊಸತನ್ನು ಕಲಿಯುವ ಸಡಗರ, ಹೊಸತನಕ್ಕೆ ತೆರೆದುಕೊಳ್ಳುವ ಬರಹಗಳು ಅವರ ವೈಶಿಷ್ಟ್ಯ ಸಾವಿರಾರು ಮಂದಿ ಶಿಷ್ಯವರ್ಗ, ಊರ-ಪರವೂರ ಅಭಿಮಾನಿ ಬಳಗವು ಅವರನ್ನು ಜೂನ್ 3ರಂದು ಅವರ ವೃತ್ತಿಕ್ಷೇತ್ರವಾದ ಮಂಗಳೂರಿನಲ್ಲಿ ಅಭಿನಂದಿಸಲು ಹೆಮ್ಮೆಪಡುತ್ತದೆ.

ಇಷ್ಟು ಬೇಗ ನಿವೃತ್ತಿಯೇ ಎಂಬ ಪ್ರಶ್ನೆಯ ಜತೆಗೇ ವಿಶ್ರಾಂತಜೀವನ ನೀಡುವ ವಿರಾಮದ ವೇಳೆಯಲ್ಲಿ ಪಳಗಿದ ಅವರ ಲೇಖನಿಯ ಮೊನಚು ಇನ್ನಷ್ಟು ಬರಹಗಳನ್ನು ಸೃಜಿಸಿ ಅಭಿಮಾನಿವರ್ಗಕ್ಕೆ ಆನಂದವನ್ನುಂಟುಮಾಡಲಿ ಎಂಬ ಕೊಂಚ ಸ್ವಾರ್ಥ ನನ್ನದು. ನಿಮ್ಮದೂ ಅದೇ ಅಲ್ಲವೇ.. !!

Leave a Reply

Your email address will not be published. Required fields are marked *

Back To Top