Friday, 20th July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

ಮಂಗ್ಳೂರಲ್ಲಿ ಕೇಸರಿ ಕಹಳೆ

Friday, 08.09.2017, 3:07 AM       No Comments

ಮಂಗಳೂರು: ಭಾರತೀಯ ಜನತಾ ಪಕ್ಷ ಹಾಗೂ ರಾಜ್ಯ ಸರ್ಕಾರದ ನಡುವೆ ಪ್ರತಿಷ್ಠೆಯ ಪ್ರಶ್ನೆಯಾಗಿ ಮಾರ್ಪಟ್ಟಿದ್ದ ‘ಮಂಗಳೂರು ಚಲೋ’ ಬೈಕ್ ರ‍್ಯಾಲಿ ಗುರುವಾರ ಭಿನ್ನ ರೀತಿಯಲ್ಲಿ ಸಮಾಪ್ತಿ ಕಂಡಿತು. ಬೈಕ್ ರ್ಯಾಲಿಯನ್ನು ಹತ್ತಿಕ್ಕಲೇಬೇಕೆಂದು ಕರಾವಳಿ ಜಿಲ್ಲೆಯಲ್ಲಿ ಖಾಕಿ ಕೋಟೆ ನಿರ್ವಿುಸಿದ್ದ ಸರ್ಕಾರದ ತಂತ್ರ ಫಲಿಸಿತಾದರೂ, ಪೊಲೀಸ್ ಸರ್ಪಗಾವಲು ಭೇದಿಸಿದ ಕಮಲ ಪಡೆ, ಒಗ್ಗಟ್ಟಿನ ಶಕ್ತಿಪ್ರದರ್ಶನ ಮಾಡುವಲ್ಲಿ ಯಶಸ್ವಿಯಾಯಿತು.

ನಿರ್ಬಂಧದ ಆದೇಶವನ್ನು ಧಿಕ್ಕರಿಸಿ ಬೈಕ್ ರ‍್ಯಾಲಿ ಹಾಗೂ ಪಾದಯಾತ್ರೆಗೆ ಬಂದ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಗೇಟ್​ವರೆಗೆ ಬೃಹತ್ ಸಂಖ್ಯೆಯಲ್ಲಿ ತೆರಳಿ ಮುತ್ತಿಗೆ ಹಾಕಿ ಪೊಲೀಸರಿಂದ ಬಂಧನಕ್ಕೊಳಗಾದರು.

ಯಾರ್ಯಾರು ಭಾಗಿ: ಅಂಬೇಡ್ಕರ್ ವೃತ್ತದ ವೇದಿಕೆಯಲ್ಲಿ ಬಿಜೆಪಿ ನಾಯಕರಾದ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಆರ್. ಅಶೋಕ್, ಪ್ರಲ್ಹಾದ ಜೋಶಿ, ಶೋಭಾ ಕರಂದ್ಲಾಜೆ, ಪ್ರತಾಪ ಸಿಂಹ ಮತ್ತಿತರರು 3 ಗಂಟೆ ಸುಡುಬಿಸಿಲಿನಲ್ಲೇ ನಿಂತು ಭಾಷಣ ಮಾಡಿದರು.

 ಬಿಜೆಪಿ ಬೇಡಿಕೆ ಏನು?

 * ರಾಜ್ಯದ ವಿವಿಧ ಭಾಗಗಳಲ್ಲಿ ನಡೆದಿರುವ ಹಿಂದು ಸಂಘಟನೆ ಕಾರ್ಯಕರ್ತರ ಹತ್ಯೆ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಬೇಕು.

 * ರಾಷ್ಟ್ರದ್ರೋಹ ಕೃತ್ಯಗಳ ಜತೆಯಲ್ಲೇ ಹಿಂದುಗಳನ್ನು ಟಾರ್ಗೆಟ್ ಮಾಡುತ್ತಿರುವ ಪಿಎಫ್​ಐ, ಕೆಎಫ್​ಡಿ ಸಂಘಟನೆಗಳನ್ನು ನಿಷೇಧಿಸಬೇಕು.

 * ಕರಾವಳಿ ಭಾಗದಲ್ಲಿ ಹಿಂದುಗಳ ಕಗ್ಗೊಲೆಗೆ ಸಚಿವ ರಮಾನಾಥ ರೈ ಪ್ರೇರಣೆ ನೀಡುತ್ತಿದ್ದು, ಅವರ ರಾಜೀನಾಮೆ ಪಡೆಯಬೇಕು.

 

ಸಿದ್ದರಾಮಯ್ಯ ಸರ್ಕಾರ ನಾಲ್ಕೂಕಾಲು ವರ್ಷದಲ್ಲೇ ಕನ್ನಡ ನಾಡನ್ನು ಸರ್ವಜನಾಂಗದ ಅಶಾಂತಿಯ ತೋಟವನ್ನಾಗಿ ಪರಿವರ್ತಿಸಿದೆ. ಡಿವೈಎಸ್ಪಿ ಗಣಪತಿ ಅನುಮಾನಾಸ್ಪದ ಸಾವು ಪ್ರಕರಣವನ್ನು ಸುಪ್ರೀಂಕೋರ್ಟ್ ಸಿಬಿಐಗೆ ವಹಿಸಿದೆ. ಜಾರ್ಜ್​ರನ್ನು ಉಳಿಸಿಕೊಳ್ಳಲು ಮಾಡಿದ ಪ್ರಯತ್ನಕ್ಕೆ ಸರ್ಕಾರಕ್ಕೂ ಛೀಮಾರಿ ಹಾಕಿದೆ, ಹಾಗಾಗಿ ಮುಖ್ಯಮಂತ್ರಿ ತಕ್ಷಣ ಸಚಿವ ಜಾರ್ಜ್ ರಾಜೀನಾಮೆ ಪಡೆದು ಸಿಬಿಐ ತನಿಖೆ ನಿಷ್ಪಕ್ಷಪಾತವಾಗಿ ನಡೆಯಲು ಬಿಡಬೇಕು.

| ಬಿ.ಎಸ್.ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ

 

ನಾಯಕರು ಬೈಕ್ ರ‍್ಯಾಲಿ ಪ್ರಾರಂಭಿಸಲು ಮುಂದಾದಾಗ ಪೊಲೀಸರು ಬಸ್, ಬ್ಯಾರಿಕೇಡ್ ಅಡ್ಡ ಇಟ್ಟು ತಡೆದರು. ಈ ನಡುವೆ ತಳ್ಳಾಟದಲ್ಲಿ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಸ್ಕೂಟರ್ ಸ್ಕಿಡ್ ಆಗಿ ಉರುಳಿತು. ಕೆಳಗೆ ಬಿದ್ದ ಅಶೋಕ್ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರಲ್ಲದೆ ರಸ್ತೆಯ ಮೇಲೆಯೇ ಕುಳಿತು ಪ್ರತಿಭಟಿಸಿದರು. ಈ ನಡುವೆ ಯಡಿಯೂರಪ್ಪ ಮತ್ತಿತರ ನಾಯಕರನ್ನು ಪೊಲೀಸರು ಬಂಧಿಸಿ ಬಸ್​ನಲ್ಲಿ ಕೂರಿಸಿದರು.

ಈ ನಡುವೆ, ಸಂಸದರಾದ ನಳಿನ್ ಕುಮಾರ್ ಕಟೀಲ್, ಪ್ರತಾಪ್​ಸಿಂಹ, ಶಾಸಕ ಸುನೀಲ್ ಕುಮಾರ್ ಮುಂತಾದವರು ಬೈಕ್​ಗಳಲ್ಲಿ ಪೊಲೀಸರ ಕಣ್ತಪ್ಪಿಸಿ ಜಿಲ್ಲಾಧಿಕಾರಿ ಕಚೇರಿಯತ್ತ ತೆರಳಿದರು. ಇನ್ನೊಂದೆಡೆ, ಪೊಲೀಸರ ಬ್ಯಾರಿಕೇಡ್ ಕಿತ್ತೆಸೆದು ಮುನ್ನುಗ್ಗಿದ ಕಾರ್ಯಕರ್ತರು ಕಾಲ್ನಡಿಗೆಯಲ್ಲೇ ಸಾಗಿದರು. ಪ್ರತಿಬಂಧಕಾಜ್ಞೆ, ಪೊಲೀಸರ ಹದ್ದಿನಗಣ್ಣಿನ ನಡುವೆಯೂ ಘೊಷಣೆ ಕೂಗುತ್ತ, ಸಿಎಂ ಸಿದ್ದರಾಮಯ್ಯ, ಸಚಿವ ರಮಾನಾಥ ರೈ ವಿರುದ್ಧ ಧಿಕ್ಕಾರ ಹಾಕುತ್ತ ಹಂಪನಕಟ್ಟೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಗೇಟ್​ವರೆಗೂ ತೆರಳಿದರು. ಆದರೆ ಜಿಲ್ಲಾಧಿಕಾರಿ ಕಚೇರಿ ಗೇಟ್​ಗೆ ಭದ್ರ ಪೊಲೀಸ್ ಬಂದೋಬಸ್ತ್ ಹಾಕಿದ್ದಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಪೊಲೀಸರು ಕಾರ್ಯಕರ್ತರನ್ನು ಅಲ್ಲಿಂದಲೇ ಬಂಧಿಸಿ ಬಸ್​ಗಳಿಗೆ ತುಂಬಿ ಕಳುಹಿಸಿದರು.

ಇಬ್ಬರಿಗೆ ಗಾಯ

ರ‍್ಯಾಲಿ ಬಹುತೇಕ ಶಾಂತಿಯುತವಾಗಿತ್ತು. ಒಬ್ಬ ಕಾರ್ಯಕರ್ತ ಲಾಠಿಯೇಟಿನಿಂದ ಗಾಯಗೊಂಡಿದ್ದಾನೆ. ಕಾಲಿನ ಮೇಲೆ ವಾಹನದ ಟೈರ್ ಹಾಯ್ದ ಪರಿಣಾಮ ಓರ್ವ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಸ್ಟೇಟ್​ಬ್ಯಾಂಕ್ ಪ್ರದೇಶದಲ್ಲಿ ಕಾರ್ಯಕರ್ತನೊಬ್ಬ ಗುದ್ದಿದ ಪರಿಣಾಮ ಬಸ್ಸೊಂದರ ಗ್ಲಾಸ್ ಹುಡಿಯಾಗಿದೆ.

ರ್ಯಾಲಿಗೆ ವಿವಿಧೆಡೆಯಿಂದ ಆಗಮಿಸಿದ್ದ ಕಾರ್ಯಕರ್ತರು

ರಾಜ್ಯದ ವಿವಿಧೆಡೆಗಳಿಂದ ಕಾರ್ಯಕರ್ತರು ಮಂಗಳೂರು ಚಲೋ ರ್ಯಾಲಿಗೆ ಆಗಮಿಸಿದ್ದರು. ಹಿಂದಿನ ದಿನವೇ ನೂರಾರು ಕಾರ್ಯಕರ್ತರು ಬಂದು ಲಾಡ್ಜ್​ಗಳಲ್ಲಿ ಉಳಿದುಕೊಂಡಿದ್ದರು. ಬೆಳಗ್ಗೆ 9.30ರ ವೇಳೆಗೆ ಅಂಬೇಡ್ಕರ್ ವೃತ್ತದಲ್ಲಿ ಸೇರಿದರೂ ಬೈಕ್​ಗಳಿಗೆ ಬರುವುದಕ್ಕೆ ಅವಕಾಶವಿರಲಿಲ್ಲ. ಆದರೆ ಕೆಲವು ಕಾರ್ಯಕರ್ತರು ಇದಕ್ಕಾಗಿ ಮಾರ್ಗದ ಮಧ್ಯೆ ಅಲ್ಲಲ್ಲಿ ಹಿಂದಿನ ದಿನವೇ ಕೆಲವು ಬೈಕ್​ಗಳನ್ನು ತಂದು ಇರಿಸಿದ್ದರು. ಪಾದಯಾತ್ರೆ ಮಧ್ಯೆಯೇ ಈ ಬೈಕ್​ಗಳನ್ನೇರಿ ಕೆಲ ಕಾರ್ಯಕರ್ತರು ಸವಾರಿ ಮಾಡಿದರೂ ಜಿಲ್ಲಾಧಿಕಾರಿ ಕಚೇರಿ ಬಳಿ ಬಂಧಿಸಲಾಯಿತು.


 ಅಶಾಂತಿಯ ತೋಟವಾದ ಕನ್ನಡ ನಾಡು

ಮಂಗಳೂರು: ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಾಲ್ಕೂಕಾಲು ವರ್ಷದಲ್ಲೇ ಕನ್ನಡ ನಾಡನ್ನು ಸರ್ವಜನಾಂಗದ ಅಶಾಂತಿಯ ತೋಟವನ್ನಾಗಿ ಪರಿವರ್ತಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳೂರು ಚಲೋ ರ‍್ಯಾಲಿ ವೇಳೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ತುಘಲಕ್ ದರ್ಬಾರ್ ಮಾಡುತ್ತಿರುವ ಸಿದ್ದರಾಮಯ್ಯ ಸರ್ಕಾರವನ್ನು ಕ್ಷಮಿಸಲಾಗದು. ಕೇರಳದಲ್ಲಿ ಕೊಲೆಗಡುಕರಿಗೆ ಬೆಂಬಲಕೊಟ್ಟ ಕೆ.ಸಿ.ವೇಣುಗೋಪಾಲ್ ಕರ್ನಾಟಕದಲ್ಲಿ ಕಾಂಗ್ರೆಸ್ ಉಸ್ತುವಾರಿಯಾಗಿ ಬಂದ ಬಳಿಕ ಹಿಂಸಾಚಾರ ಹೆಚ್ಚಾಗಿದೆ. ಅವರು ಬಂದಿರುವುದೇ ಕೋಮುದಳ್ಳುರಿ ಹೆಚ್ಚಿಸುವುದಕ್ಕೆ ಎಂಬಂತಾಗಿದೆ ಎಂದು ಆರೋಪಿಸಿದರು.

ನೀವೇನು ಕಳಕೊಳ್ಳುತ್ತಿದ್ದಿರಿ?: 15 ಸಾವಿರ ಮೋಟಾರ್ ಬೈಕ್​ಗಳಲ್ಲಿ ಶಾಂತಿಯುತವಾಗಿ ನಮ್ಮ ಕಾರ್ಯಕರ್ತರು ಇಲ್ಲಿಗೆ ಬಂದಿದ್ದರೆ ನೀವೇನು ಕಳೆದುಕೊಳ್ಳುತ್ತಿದ್ದಿರಿ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದ ಬಿಎಸ್​ವೈ, ರಾಜ್ಯದಲ್ಲಿ ಪೊಲೀಸರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅಘೊಷಿತ ತುರ್ತು ಪರಿಸ್ಥಿತಿ ಉಂಟಾಗಿದೆ. ನಮ್ಮ ಕಾರ್ಯಕರ್ತರ ಹತ್ಯೆಯಾಗುತ್ತಿರುವಾಗ ಪ್ರತಿಭಟಿಸುವ ಹಕ್ಕೂ ನಮಗಿಲ್ಲವೇ? ಈ ರಾಜಕೀಯ ಆಟಗಳು ಬಹಳ ದಿನ ನಡೆಯದು ಎಂದು ಎಚ್ಚರಿಕೆ ನೀಡಿದರು.

ಜಾರ್ಜ್, ರೈ ರಾಜೀನಾಮೆ ಕೊಡಿ

ಡಿವೈಎಸ್ಪಿ ಗಣಪತಿಯ ಅನುಮಾನಾಸ್ಪದ ಸಾವು ಪ್ರಕರಣವನ್ನು ಸುಪ್ರೀಂ ಕೋರ್ಟ್ ಸಿಬಿಐಗೆ ವಹಿಸಿದೆ. ಕೆ.ಜೆ.ಜಾರ್ಜ್​ರನ್ನು ಸಚಿವ ಸ್ಥಾನದಲ್ಲಿ ಉಳಿಸಿಕೊಳ್ಳಲು ಮಾಡಿದ ಪ್ರಯತ್ನಕ್ಕೆ ಸರ್ಕಾರಕ್ಕೆ ಛೀಮಾರಿ ಕೂಡ ಹಾಕಿದೆ. ಹಾಗಾಗಿ ಸಿಎಂ ತಕ್ಷಣ ಜಾರ್ಜ್ ರಾಜೀನಾಮೆ ಪಡೆದು ಸಿಬಿಐ ತನಿಖೆ ನಿಷ್ಪಕ್ಷಪಾತವಾಗಿ ನಡೆಯಲು ಬಿಡಬೇಕು ಎಂದು ಬಿಎಸ್​ವೈ ಒತ್ತಾಯಿಸಿದರು. ಪೊಲೀಸ್ ಅಧಿಕಾರಿಗಳ ಜತೆ ಸೇರಿ ಹಿಂದು ಕಾರ್ಯಕರ್ತರ ಬಂಧನಕ್ಕೆ ಸೂಚಿಸುತ್ತಿರುವ ರಮಾನಾಥ ರೈ ಕೂಡ ಸಚಿವರಾಗಿ ಮುಂದುವರಿಯಬಾರದು ಎಂದು ಆಗ್ರಹಿಸಿದರು. ಮುಸ್ಲಿಮರ ವಿರುದ್ಧ ನಮ್ಮ ಹೋರಾಟ ಅಲ್ಲ. ಪಿಎಫ್​ಐ ಕುಕೃತ್ಯಗಳನ್ನು ಖಂಡಿಸದೆ ಬೆಂಬಲ ನೀಡುತ್ತಿರುವ ಸರ್ಕಾರದ ವಿರುದ್ಧ ಹೋರಾಟ ಎಂದೂ ಸ್ಪಷ್ಟಪಡಿಸಿದರು.

 ರ್ಯಾಲಿಯಲ್ಲಿ ಏನೇನಾಯ್ತು?

9.00 ಅಂಬೇಡ್ಕರ್ ವೃತ್ತದಲ್ಲಿ ಸೇರಲಾರಂಭಿಸಿದ ಕಾರ್ಯಕರ್ತರು

10.30 ಸ್ಕೂಟರ್​ನಲ್ಲಿ ಸ್ಥಳಕ್ಕಾಗಮಿಸಿದ ಸಿ.ಟಿ.ರವಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು

10.40 ಆರ್.ಅಶೋಕ್, ಲಿಂಬಾವಳಿ ಆಗಮನ

10.45 ಬಿ.ಎಸ್.ಯಡಿಯೂರಪ್ಪ, ಪ್ರಲ್ಹಾದ್ ಜೋಶಿ, ಶೋಭಾ ಮತ್ತಿತರರ ಆಗಮನ

10.50 ಪ್ರತಿಭಟನಾ ಸಭೆ ಆರಂಭ, ನಾಯಕರಿಂದ ಭಾಷಣ

12.10 ಸಭೆ ಮುಗಿದು ರ್ಯಾಲಿಗೆ ಮುಂದಾದ ಕಾರ್ಯಕರ್ತರು, ಪೊಲೀಸರೊಂದಿಗೆ ತಳ್ಳಾಟ

12.20 ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಆರ್.ಅಶೋಕ್ ಮತ್ತಿತರರ ಬಂಧನ

12.30 ಬ್ಯಾರಿಕೇಡ್ ಕಿತ್ತೆಸೆದು ಪಾದಯಾತ್ರೆ

12.50 ಬೈಕ್​ನಲ್ಲಿ ತೆರಳಿದ್ದ ಪ್ರತಾಪ್​ಸಿಂಹ, ನಳಿನ್, ಸುನೀಲ್ ಕುಮಾರ್ ಮತ್ತಿತರರ ಬಂಧನ

1.10 ಜಿಲ್ಲಾಧಿಕಾರಿ ಕಚೇರಿ ಗೇಟ್ ಬಳಿ ಬಂದ ಕಾರ್ಯಕರ್ತರ ಅರೆಸ್ಟ್

 

ಇನ್​ಸ್ಪೆಕ್ಟರ್ ವಿರುದ್ಧ ಸಂಸದ ನಳಿನ್ ಕಿಡಿ

ರ‍್ಯಾಲಿ ವೇಳೆ ಬಂಧಿಸಲ್ಪಟ್ಟ ಕಾರ್ಯಕರ್ತರನ್ನು ಕಮಿಷನರ್ ಆದೇಶದ ಹೊರತಾಗಿಯೂ ಬಿಡುಗಡೆ ಗೊಳಿಸದ ಪೊಲೀಸ್ ನಿರೀಕ್ಷಕರ ವಿರುದ್ಧ ಸಂಸದ ನಳಿನ್ ಹರಿಹಾಯ್ದಿರುವ ವಿಡಿಯೋ ವೈರಲ್ ಆಗಿದೆ. ಕದ್ರಿ ಇನ್​ಸ್ಪೆಕ್ಟರ್ ಮಾರುತಿ ನಾಯಕ್ ರನ್ನು ನಳಿನ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದು, ಏನೆಂದು ತಿಳಿದುಕೊಂಡಿದ್ದಿ? ಆಟ ಆಡ್ತೀಯಾ? ನಿನ್ನ ಹೆಸರಲ್ಲಿ ಬಂದ್​ಗೆ ಕರೆ ಕೊಡುತ್ತೇವೆ.. ಅನುಭವಿಸು ಎಂದೂ ಹೇಳಿರುವುದು ವಿಡಿಯೋ ಕ್ಲಿಪ್​ನಲ್ಲಿ ದಾಖಲಾಗಿದೆ.

50 ನಾಯಕರು, 200 ಕಾರ್ಯಕರ್ತರ ವಿರುದ್ಧ ಕೇಸ್

ಸಮಾವೇಶಕ್ಕೆ ಪೊಲೀಸ್ ಇಲಾಖೆ ನೆಹರು ಮೈದಾನದಲ್ಲಿ ಮಾತ್ರ ಅನುಮತಿ ನೀಡಿದ್ದು, ಆದೇಶ ಉಲ್ಲಂಘಿಸಿ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಮಾಡಿದ ಬಿ.ಎಸ್. ಯಡಿಯೂರಪ್ಪ ಸಹಿತ 50 ಮುಖಂಡರ ವಿರುದ್ಧ ಬಂದರು ಪೊಲೀಸರು ಸ್ವಯಂಪ್ರೇರಿತ ಕೇಸು ದಾಖಲಿಸಿದ್ದಾರೆ. ಕಾರ್ಯಕರ್ತರೊಬ್ಬರು ಕೆಎಸ್​ಆರ್​ಟಿಸಿ ಬಸ್​ನ ಗಾಜಿಗೆ ಗುದ್ದಿ ಪುಡಿ ಮಾಡಿದ್ದು, ಇದರ ವಿರುದ್ಧ ಹಾಗೂ ಬಸ್​ಗಳ ಚಕ್ರದ ಗಾಳಿ ತೆಗೆದು ತೊಂದರೆ ಉಂಟು ಮಾಡಿದ ಬಗ್ಗೆ 200 ಕಾರ್ಯಕರ್ತರ ಮೇಲೆ ಪಾಂಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

 ಮಂಗಳೂರಿನಲ್ಲಿ ಬಿಜೆಪಿಯವರಿಗೆ ಜನ ಬೆಂಬಲವೇ ಸಿಕ್ಕಿಲ್ಲ. ಮೂರು ಸಾವಿರ ಜನ ಮಾತ್ರ ಸೇರಿದ್ದು, ಸಮಾವೇಶ ವಿಫಲವಾಗಿದೆ. ಯಡಿಯೂರಪ್ಪ ಹೇಳುವುದೆಲ್ಲ ಸುಳ್ಳು, ಮಾಡುವುದೆಲ್ಲ ಎಡವಟ್ಟು.

| ಸಿದ್ದರಾಮಯ್ಯ ಮುಖ್ಯಮಂತ್ರಿ

 

ಬಿಜೆಪಿ ನಡೆಸಿದ ಶಾಂತಿ ಕದಡುವ ರಾಜಕೀಯಕ್ಕೆ ಜನ ಬೆಂಬಲ ದೊರೆತಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ಸೂಕ್ರ ಕ್ರಮ ತೆಗೆದುಕೊಂಡಿದೆ.

| ಡಾ.ಜಿ.ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷ

 

ಪೊಲೀಸ್ ನಾಕಾಬಂದಿ

ರ್ಯಾಲಿಗೆ ಬೈಕ್​ನಲ್ಲಿ ಆಗಮಿಸಿದ ಕಾರ್ಯಕರ್ತರನ್ನು ತಡೆಯಲು ಪೊಲೀಸರು ಪ್ರಮುಖ ರಸ್ತೆಗಳಲ್ಲಿ ತಪಾಸಣೆ ನಡೆಸುತ್ತಿದ್ದು, ತಾತ್ಕಾಲಿಕ ಗೇಟ್​ಗಳನ್ನು ನಿರ್ವಿುಸಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

 

 ಕಾಂಗ್ರೆಸ್ ಸರ್ಕಾರದ ಅಂತ್ಯ ಪ್ರಾರಂಭವಾಗಿದೆ. ಸಿದ್ದರಾಮಯ್ಯ ಕಾಂಗ್ರೆಸ್​ನ ಕೊನೆಯ ಸಿಎಂ. ಜಾರ್ಜ್ ಕೈ ಪಾಳಯಕ್ಕೆ ಎಟಿಎಂ ಇದ್ದ ಹಾಗೆ. ಹಾಗಾಗಿ ಮಂತ್ರಿ ಸ್ಥಾನ ನೀಡಲಾಗಿದೆ. ಸಿಬಿಐ ತನಿಖೆಯಲ್ಲಿ ಸತ್ಯ ಬಹಿರಂಗ ವಾಗಲಿದೆ. ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ.

| ಜಗದೀಶ್ ಶೆಟ್ಟರ್ ವಿಧಾನಸಭೆ ಪ್ರತಿಪಕ್ಷ ನಾಯಕ

 

ರಾಹುಲ್ ಗಾಂಧಿ ಒಬ್ಬ ಬಚ್ಚಾ. ಅವಿವೇಕದ ಹೇಳಿಕೆ ನೀಡುತ್ತಿದ್ದಾರೆ. ಶಿವಮೊಗ್ಗದಲ್ಲಿ ಮತಾಂಧರು ಪಾಕಿಸ್ತಾನ್ ಜಿಂದಾಬಾದ್ ಹೇಳಿದ ವಿಡಿಯೋ ಇದೆ. ಈ ವಿಡಿಯೋ ಸುಳ್ಳಾದರೆ ನಾನು ರಾಜಕೀಯ ತೊರೆಯಲು ಸಿದ್ಧ. ತಾಕತ್ ಇದ್ದರೆ ಸಿದ್ದರಾಮಯ್ಯ ತನಿಖೆ ನಡೆಸಲಿ.

| ಕೆ.ಎಸ್.ಈಶ್ವರಪ್ಪ ಮೇಲ್ಮನೆ ಪ್ರತಿಪಕ್ಷ ನಾಯಕ

 

ರಾಜ್ಯದಲ್ಲಿ ಸರಣಿ ಹತ್ಯೆಗಳು ನಡೆಯುತ್ತಿದ್ದರೂ ಸರ್ಕಾರ ಎಚ್ಚೆತ್ತಿಲ್ಲ. ನಮ್ಮ ಹೋರಾಟ ಪೊಲೀಸರ ವಿರುದ್ಧ ಅಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ. ಕಾಂಗ್ರೆಸ್ ಸರ್ಕಾರದ ವ್ಯಾಲಿಡಿಟಿ ಇನ್ನು ಕೇವಲ 4 ತಿಂಗಳು. ಬಿಜೆಪಿ ಕಾರ್ಯಕರ್ತರ ಮೈ ಮುಟ್ಟಿದರೆ ಎಚ್ಚರ.

| ಆರ್.ಅಶೋಕ್ ಮಾಜಿ ಡಿಸಿಎಂ

 

ಹಿಂದು ನಾಯಕರು, ಗೌರಿ ಲಂಕೇಶ್, ಕಲಬುರ್ಗಿ ಹಂತಕರನ್ನು ಬಂಧಿಸಲು ತಾಕತ್ತಿಲ್ಲದ ಹೇಡಿ ಕಾಂಗ್ರೆಸ್ ಸರ್ಕಾರ, ಬಿಜೆಪಿ ಕಾರ್ಯಕರ್ತರನ್ನು ಬಂಧಿಸುತ್ತಿದೆ. ದುಷ್ಟರಿಗೆ ಮಾತ್ರ ರಕ್ಷಣೆ ನೀಡುತ್ತಿದೆ. ಕಾಂಗ್ರೆಸ್ ಸರ್ಕಾರ ಶಾಶ್ವತ ಅಲ್ಲ. ಪೊಲೀಸರೇ, ಕಾಂಗ್ರೆಸ್​ನ ಚೇಲಾಗಳಂತೆ ವರ್ತಿಸಬೇಡಿ.

| ಶೋಭಾ ಕರಂದ್ಲಾಜೆ ಸಂಸದೆ

 

ಸಿದ್ದರಾಮಯ್ಯ ಸರ್ಕಾರ ಹಂತಕರಿಗೆ ಬೆಂಬಲ ನೀಡುತ್ತಿದೆ. ದ.ಕ. ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರ ಪ್ರೇರಣೆಯಿಂದಲೇ ಹಿಂದು ನಾಯಕರ ಹತ್ಯೆ ನಡೆಯುತ್ತಿದೆ. ಅವರ ರಾಜೀನಾಮೆಗೆ ಆಗ್ರಹಿಸುತ್ತಿದ್ದೇವೆ. ರಾಜ್ಯದಲ್ಲಿ ಮುಂದೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬರುವುದು ನಿಶ್ಚಿತ. ಆಗ ರಾಷ್ಟ್ರದ್ರೋಹಿ ಸಂಘಟನೆಗಳಾದ ಪಿಎಫ್​ಐ, ಕೆಎಫ್​ಡಿ ನಿಷೇಧಿಸುವುದು ಖಚಿತ.

| ನಳಿನ್​ಕುಮಾರ್ ಕಟೀಲ್ ಸಂಸದ

 

ಕರಾವಳಿಯ ಕ್ಷೇತ್ರಗಳು ಬಿಜೆಪಿ ಕೈತಪ್ಪಿದ ಕಾರಣ ಹಿಂದು ಕಾರ್ಯಕರ್ತರ ಕಗ್ಗೊಲೆ ನಡೆಯುತ್ತಿದೆ. ವೀರ ರಾಣಿ ಅಬ್ಬಕ್ಕನ ನಾಡಿನಲ್ಲಿ ಪಿಎಫ್​ಐ, ಕೆಎಫ್​ಡಿ ಮತಾಂಧರು ದುಷ್ಕೃತ್ಯಗಳನ್ನು ನಡೆಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ನೋಡಿದಾಗ ಸುಲ್ತಾನ ಸಂತತಿ ನೆನಪಾಗುತ್ತಿದೆ.

| ಪ್ರತಾಪ್ ಸಿಂಹ ರಾಜ್ಯಾಧ್ಯಕ್ಷ, ಬಿಜೆಪಿ ಯುವಮೋರ್ಚಾ

 

ರಮಾನಾಥ ರೈಗೆ ರಾಜೀನಾಮೆ ನೀಡುವ ಯೋಗ್ಯತೆಯೂ ಇಲ್ಲ. ಮುಖ್ಯಮಂತ್ರಿಯೇ ಅವರನ್ನು ವಜಾ ಮಾಡಲಿ. ಹಂತಕರಿಗೆ ರಕ್ಷಣೆ ನೀಡುವ ರಮಾನಾಥ ರೈ ಸಾಮರಸ್ಯ ನಡಿಗೆ ಹಾಸ್ಯಾಸ್ಪದ. ಇದು ಕಾಂಗ್ರೆಸ್​ನ ಶವಯಾತ್ರೆ. ಸಾಮರಸ್ಯ ನಡಿಗೆ ಬಳಿಕ ಮಂಗಳೂರು ಕಾಂಗ್ರೆಸ್ ಮುಕ್ತವಾಗುವುದು ಖಚಿತ.

| ಅರವಿಂದ ಲಿಂಬಾವಳಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಬಿಜೆಪಿ

 

ರ್ಯಾಲೀಲೂ ಸ್ವಚ್ಛ ಭಾರತ್

ಪ್ರತಿಭಟನೆ ವೇಳೆ ಪರಿಸರ ಗಲೀಜು ಮಾಡದಂತೆ ಕಾರ್ಯಕರ್ತರು ಎಚ್ಚರಿಕೆ ನೀಡುತ್ತಿದ್ದು, ಸ್ಥಳದಲ್ಲಿದ್ದ ಕಸವನ್ನು ಹೆಕ್ಕಿ ಮಾದರಿಯಾದರು. ಭದ್ರತೆಗಾಗಿ ಹೊರ ಜಿಲ್ಲೆಯಿಂದ ಆಗಮಿಸಿದ ಪೊಲೀಸರಿಗೆ ಇಲಾಖೆ ಅನ್ನ, ನೀರಿನ ವ್ಯವಸ್ಥೆ ಮಾಡಿರಲಿಲ್ಲ.

 

ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟರು ಹಿಂದು ನಾಯಕರನ್ನು ಹತ್ಯೆ ಮಾಡುತ್ತಿರುವ ಮಾದರಿಯಲ್ಲೇ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಹಿಂದುಗಳ ಹತ್ಯೆ ಮೂಲಕ ರಾಜಕೀಯ ನಡೆಸುತ್ತಿದೆ.

| ಪ್ರಲ್ಹಾದ್ ಜೋಶಿ ಸಂಸದ

 

ಸಿದ್ದರಾಮಯ್ಯ ಮುಖ್ಯಮಂತ್ರಿ ಎಂಬ ಪರಿಜ್ಞಾನ ಇಲ್ಲದೆ ವರ್ತಿಸುತಿದ್ದಾರೆ. ಇದಕ್ಕಿಂತ ಗ್ರಾಮ ಪಂಚಾಯಿತಿ ಅಧ್ಯಕ್ಷ ಚೆನ್ನಾಗಿ ಆಡಳಿತ ನಡೆಸುತ್ತಾನೆ.

| ಡಿ.ವಿ.ಸದಾನಂದ ಗೌಡ ಕೇಂದ್ರ ಸಚಿವ

Leave a Reply

Your email address will not be published. Required fields are marked *

Back To Top