Friday, 20th July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

ಭ್ರಷ್ಟಾಚಾರದ ವಿರುದ್ಧ ಯೋಗಿ ಬ್ರಹ್ಮಾಸ್ತ್ರ

Monday, 03.04.2017, 3:09 AM       No Comments

ಉತ್ತರಪ್ರದೇಶದಲ್ಲಿ ಸಂನ್ಯಾಸಿಯೊಬ್ಬ ಸಿಎಂ ಹುದ್ದೆ ಅಲಂಕರಿಸಿರುವುದು ಈ ದೇಶದ ತಥಾಕಥಿತ ಬುದ್ಧಿಜೀವಿಗಳಲ್ಲಿ ತಳಮಳ ಮೂಡಿಸಿದೆ. ಆದರೆ, ಜಾತಿಮತದ ಗೋಡೆಗಳನ್ನು ಕೆಡವಿ, ಅಸ್ಪೃಶ್ಯತೆಯ ಶಾಪವನ್ನು ತೊಲಗಿಸಿ ಇಡೀ ಸಮುದಾಯದ ಏಳ್ಗೆಗೆ ಶ್ರಮಿಸುವ ಸಂನ್ಯಾಸಿಗಳಿಗೆ ರಾಷ್ಟ್ರೋತ್ಥಾನವೇ ಪರಮಧ್ಯೇಯವಾಗಿರುತ್ತದೆ ಎಂಬುದು ಮುಖ್ಯ.

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಚುನಾವಣಾ ತಂತ್ರದ ಫಲವಾಗಿ ದೇಶಾದ್ಯಂತ ಕೇಸರಿ ಅಲೆ ಪಸರಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಉತ್ತರಪ್ರದೇಶ ಮತ್ತು ಉತ್ತರಾಖಂಡದಲ್ಲಿ ರಾಷ್ಟ್ರೀಯವಾದಿ ವಿಚಾರಧಾರೆ ಮತ್ತು ಕಾರ್ಯಕರ್ತರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಕೇವಲ ಪಕ್ಷ ಸಂಘಟನೆಯ ಮನೋಬಲವನ್ನಷ್ಟೇ ಬಲಿಷ್ಠಗೊಳಿಸಲಿಲ್ಲ, ದೇಶದ ಇತರ ಪಕ್ಷಗಳೆದುರು ಅದ್ಭುತ ಉದಾಹರಣೆಯೊಂದನ್ನು ಇರಿಸಿದ್ದಾರೆ. ಓರ್ವ ಮುಖ್ಯಮಂತ್ರಿಯ ಆಯ್ಕೆಯಿಂದಾಗಿ ದೇಶಾದ್ಯಂತ ಚರ್ಚೆಗಳಾಗಿರುವುದು ಯೋಗಿ ಆದಿತ್ಯನಾಥ ಪ್ರಕರಣದಲ್ಲಿ ಮಾತ್ರ ಎನಿಸುತ್ತದೆ. ಹಿಂದೂ ಸಂನ್ಯಾಸಿಯೊಬ್ಬ ಮುಖ್ಯಮಂತ್ರಿ ಹುದ್ದೆ ಏರಿರುವುದು ಸ್ವಾಭಾವಿಕವಾಗಿಯೇ ಈ ದೇಶದ ತಥಾಕಥಿತ ಜಾತ್ಯತೀತರ ಕಣ್ಣು ಕೆಂಪಾಗಿಸಿದೆ.

ತಮ್ಮನ್ನು ಸೆಕ್ಯುಲರ್​ಗಳೆಂದು ಹೇಳಿಕೊಳ್ಳುವವರು ವರ್ತಮಾನದಲ್ಲಿ ಹಿಂದೂ ಧರ್ಮದ ಎರಡು ಪ್ರಮುಖ ಸಂಗತಿಗಳಾದ ಸಂನ್ಯಾಸ ಮತ್ತು ಗೀತಾ ಪ್ರೆಸ್ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಹೊಂದಿಲ್ಲ. ಇಂತಹವರು ಯೋಗಿಯ ಆಯ್ಕೆಯ ಬಗ್ಗೆಯೂ ಅಸಮಾಧಾನ ಹೊರಹಾಕುತ್ತಲೇ ಇದ್ದಾರೆ. ಗೀತಾ ಪ್ರೆಸ್ ಹಿಂದೂ ಧರ್ಮದ ಬಗೆಗಿರುವ ಪ್ರಖರ, ವೈಚಾರಿಕ ಸಾಹಿತ್ಯವನ್ನು ಲಾಭದ ಅಲೋಚನೆಯನ್ನೇ ಮಾಡದೆ ಪ್ರಸಾರ-ಪ್ರಚಾರ ಮಾಡುತ್ತಿದೆ. ಗೀತಾ ಪ್ರೆಸ್​ನ ಸೇವೆಗೆ ಎಂಥ ಪರಮೋಚ್ಚ ಪ್ರಶಸ್ತಿ ನೀಡಿ ಗೌರವಿಸಿದರೂ ಕಡಿಮೆಯೇ. ಆದರೆ, ಸದ್ಯ ನಮ್ಮೆದುರಿಗೆ ಹುಟ್ಟಿಕೊಂಡಿರುವ ಪ್ರಶ್ನೆ ಏನೆಂದರೆ- ಯೋಗಿ ಆದಿತ್ಯನಾಥರನ್ನು ಉತ್ತರಪ್ರದೇಶದ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದ್ದು, ಅಷ್ಟೊಂದು ಗದ್ದಲ ಸೃಷ್ಟಿಸಿರುವುದೇಕೆ? ಸುದ್ದಿಯಾಗುತ್ತಿರುವುದು ಏನಕ್ಕೆ?

ಪ್ರತಿನಿತ್ಯ ದರೋಡೆ, ಅತ್ಯಾಚಾರ, ಅಪಹರಣ, ದಂಗೆ ಮುಂತಾದ ಅಪರಾಧ ಸುದ್ದಿಗಳಿಗೆ ಕುಖ್ಯಾತಿಯಾಗಿದ್ದ ಉತ್ತರಪ್ರದೇಶದಲ್ಲಿ ಮಹತ್ತರ ಬದಲಾವಣೆ ತಂದು ಜನರು ನೆಮ್ಮದಿಯುತ ಬದುಕು ಸಾಗಿಸುವಂತೆ ಮಾಡುವುದು ತಪ್ಪೇ? ಈ ನಿಟ್ಟಿನಲ್ಲಿ ನಾಯಕತ್ವ ಗುಣ ಹಾಗೂ ಜನರ ಭಾವನೆಗಳನ್ನು ಅರಿಯಬಲ್ಲ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಿದರೆ ಜಾತ್ಯತೀತತೆ ಮುಖವಾಡ ಹಾಕಿಕೊಂಡವರಿಗೇಕೆ ಹೊಟ್ಟೆಯುರಿ? ವಾಸ್ತವವಾಗಿ, ಯೋಗಿ ಆದಿತ್ಯನಾಥ ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ನಿಯೋಜಿಸಿ ಭ್ರಷ್ಟಾಚಾರ ಮತ್ತು ಅಪರಾಧಗಳ ವಿರುದ್ಧ ಬ್ರಹ್ಮಾಸ್ತ್ರವನ್ನೇ ಪ್ರಯೋಗಿಸಲಾಗಿದೆ. ಇಂಥ ಬದಲಾವಣೆಗಾಗಿಯೇ ಉತ್ತರಪ್ರದೇಶದ ಜನತೆ ಕಾಯುತ್ತಿದ್ದರು ಎಂಬುದು ನಿರ್ವಿವಾದ. ಕಳೆದ ಒಂದೂವರೆ ದಶಕದಲ್ಲಿ ಈ ರಾಜ್ಯದ ಸ್ಥಿತಿ ದಯನೀಯವಾಗಿದೆ. ಅಭಿವೃದ್ಧಿಯ ವಿಷಯವಂತೂ ಬಿಡಿ, ಜನರ ರಕ್ಷಣೆ ಮಾಡುವಲ್ಲಿಯೂ ಈ ಹಿಂದಿನ ಸರ್ಕಾರಗಳು ವಿಫಲವಾಗಿದ್ದವು. ಸಮಾಜವಾದಿ ಪಕ್ಷ ನೇತೃತ್ವದ ಸರ್ಕಾರದ ಅವಧಿಯಲ್ಲಂತೂ ಭ್ರಷ್ಟಾಚಾರ ಹುಲುಸಾಗಿ ಬೆಳೆಯಿತು. ಇದರಿಂದ, ಜನಸಾಮಾನ್ಯರ ಗೋಳು ಮತ್ತಷ್ಟು ಹೆಚ್ಚಿತು. ಹಾಗಾಗಿ, ಈ ಸಮಸ್ಯೆ, ಪಿಡುಗುಗಳ ವಿರುದ್ಧ ಬ್ರಹ್ಮಾಸ್ತ್ರ ಪ್ರಯೋಗಿಸುವ ನಾಯಕನ ಅವಶ್ಯಕತೆ ರಾಜ್ಯಕ್ಕೆ ಇತ್ತು. ಯೋಗಿಯ ರೂಪದಲ್ಲಿ ಅದು ಸಾಕಾರಗೊಂಡಿದೆ ಎನ್ನಬಹುದು.

ಉತ್ತರಪ್ರದೇಶದ ಜನರು ತಮ್ಮನ್ನು ತಾವು ಲೋಹಿಯಾವಾದಿಗಳೆಂದು ಹೇಳುತ್ತಾರೆ. ಆದರೆ ಅದೇ ರಾಮ ಮನೋಹರ ಲೋಹಿಯಾ ಭಾರತವನ್ನು ಯಾವ ಮೂರು ಕನಸುಗಳಿಂದ ವ್ಯಾಖ್ಯಾನಿಸಿದ್ದರು ಎಂಬುದನ್ನು ಮರೆತೇ ಬಿಟ್ಟಿದ್ದಾರೆ. ಅದುವೇ ರಾಮ, ಕೃಷ್ಣ ಮತ್ತು ಶಿವ. ಲೋಹಿಯಾ ಈ ಬಗ್ಗೆ ವಿಸõತವಾದ ಪ್ರಬಂಧವನ್ನೂ ಬರೆದಿದ್ದಾರೆ. ಆದರೆ ಸಮಾಜವಾದಿಗಳೆಂದು ಹೇಳಿಕೊಳ್ಳುವವರು ಇಂಥದ್ದನ್ನು ಓದುವುದೂ ಇಲ್ಲ, ಇತರರನ್ನು ಓದಲು ಪ್ರೇರೇಪಿಸುವುದೂ ಇಲ್ಲ. ಆದರೆ ಈಗ ಪಂಡಿತ ದೀನದಯಾಳ ಉಪಾಧ್ಯಾಯರ ಅನುಯಾಯಿಗಳು ಉತ್ತರಪ್ರದೇಶದಲ್ಲಿ ಲೋಹಿಯಾರ ಕನಸುಗಳನ್ನು ನನಸು ಮಾಡಬಹುದು.

ಉತ್ತರಪ್ರದೇಶದಲ್ಲಿ ರಾಮ, ಕೃಷ್ಣ ಮತ್ತು ಶಿವನಿಗೆ ಸಂಬಂಧಿಸಿದ ಪವಿತ್ರ ಕ್ಷೇತ್ರಗಳಿವೆ. ಆದರೆ ಈ ಹಿಂದಿನ ಸರ್ಕಾರ ಹಿಂದೂಗಳ ತೀರ್ಥಕ್ಷೇತ್ರಗಳನ್ನು ನಿರ್ಲಕ್ಷಿಸಿತು. ಮತ್ತೂ ವಿಪರ್ಯಾಸವೆಂದರೆ ಒಂದು ಕೋಮಿನ ಮತಗಳಿಗಾಗಿ ತುಷ್ಟೀಕರಣ ನೀತಿಗೆ ಇಳಿಯಿತು. ವಿಶ್ವದ ಬೃಹತ್ ಹಿಂದೂ ಧಾರ್ವಿುಕ ಆಯೋಜನೆಯಾದ ಕುಂಭಮೇಳದ ಆಯೋಜನೆ ಸಮಿತಿ ಅಧ್ಯಕ್ಷರನ್ನಾಗಿ ಆಜಂ ಖಾನ್​ರನ್ನು ನೇಮಕ ಮಾಡಿದ್ದು ಮುಸ್ಲಿಂ ಮತಗಳನ್ನು ಸೆಳೆಯಲು ಮಾಡಿದ ತಂತ್ರವಲ್ಲದೆ ಮತ್ತೇನು? ಕೈರಾನಾದಿಂದ ಹಿಂದೂಗಳಿಗೆ ಅವರ ಮನೆ, ವ್ಯಾಪಾರ, ಸಂಪತ್ತು ಎಲ್ಲವನ್ನೂ ಬಿಟ್ಟು ಪಲಾಯನ ಮಾಡುವಂತೆ ಒತ್ತ ಹೇರಲಾಗಿತ್ತು. ಇದು ಎಲ್ಲರಿಗೂ ತಿಳಿದಿರುವ ವಿಚಾರವೇ. ಆದರೆ ಅವರು ಹಿಂದೂಗಳಾಗಿದ್ದರು ಎಂಬ ಕಾರಣಕ್ಕಾಗಿ ಅವರ ದುಃಖ, ನೋವನ್ನು ಮುಚ್ಚಿಡಲಾಯಿತು. ಮಾಧ್ಯಮಗಳೂ ಆ ಬಗ್ಗೆ ಹೆಚ್ಚು ಮಾತನಾಡಲಿಲ್ಲ. ಇದು ಯಾವ ರೀತಿಯ ನ್ಯಾಯ? ಹಿಂದೂಗಳು ಇರುವುದೇ ಬವಣೆ, ಕಷ್ಟ ಎದುರಿಸಲು ಎಂಬಂಥ ಭಾವನೆ ಇವರಲ್ಲಿ ಬೇರೂರಿದೆ.

ಬಡತನ ಮತ್ತು ಸಾಮಾಜಿಕ ನ್ಯಾಯಕ್ಕೆ ಯಾವುದೇ ಧಾರ್ವಿುಕ ಮುಖವಾಡವಿರಲು ಸಾಧ್ಯವೇ? ಬಡ ಹಿಂದೂಗಳು ಮತ್ತು ಬಡ ಮುಸ್ಲಿಮರ ನೋವಿಗೆ ವ್ಯತ್ಯಾಸವಿದೆಯೇ? ಮಹಿಳಾ ಅಧಿಕಾರ ಮತ್ತು ಸಮಾನತೆ ವಿಚಾರವನ್ನು ಈಗಲೂ ಶರಿಯತ್ ಅಥವಾ 14ನೇ ಶತಮಾನದ ಕನ್ನಡಿಯಲ್ಲೇ ನೋಡಲು ಸಾಧ್ಯವೇ? ಈ ವಾಸ್ತವಗಳನ್ನು ರಾಜಕಾರಣಿಗಳು ಏಕೆ ಪರಿಗಣಿಸುವುದಿಲ್ಲ ಎಂಬುದೇ ಅಚ್ಚರಿ ಮೂಡಿಸುತ್ತದೆ.

ತಾರತಮ್ಯರಹಿತ, ಪಾರದರ್ಶಕ ಆಡಳಿತದ ಮೂಲಕವೇ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂಬುದನ್ನು ಮರೆಯಬಾರದು. ಮತಬ್ಯಾಂಕಿನ ರಾಜಕಾರಣದಲ್ಲಿ ಸಾಮಾಜಿಕ ನ್ಯಾಯ, ವಿವೇಕದಂಥ ಮೌಲ್ಯಗಳು ಕೊಚ್ಚಿಹೋಗಬಾರದು.

ಮುಸ್ಲಿಂ ಮಹಿಳೆಯರಿಗೆ ಮೂರು ಬಾರಿ ತಲಾಕ್ ಹೇಳಿ ದಾಂಪತ್ಯವನ್ನೇ ಕಡಿದುಕೊಳ್ಳುವ ಪದ್ಧತಿಗೆ 10 ಲಕ್ಷ ಮುಸ್ಲಿಮರು ಸಹಿ ಹಾಕಿ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಶೇ.90ರಷ್ಟು ಸಹಿಗಳು ಮುಸ್ಲಿಂ ಮಹಿಳೆಯರದ್ದೇ ಆಗಿದೆ. ಈ ಮಹಿಳೆಯರ ನೋವನ್ನು ಆಲಿಸಿ, ಅದನ್ನು ಪರಿಹರಿಸುವ ಇಚ್ಛಾಶಕ್ತಿ ಈಗಲಾದರೂ ವ್ಯಕ್ತವಾಗುತ್ತಿರುವುದಕ್ಕೆ ಬುದ್ಧಿಜೀವಿಗಳು ಖುಷಿಪಡಬೇಕೆ ವಿನಾ ಕಳವಳ ಪಡಬಾರದು.

ಅದೇನೇ ಇದ್ದರೂ, ಜನರು ರಾಷ್ಟ್ರವಾದಿ ಶಕ್ತಿಗಳಿಗೆ ಮನ್ನಣೆ ನೀಡುತ್ತಿರುವುದು ಸಂತಸದ ವಿಷಯ. ಇತ್ತೀಚಿನ ಅಭೂತಪೂರ್ವ ಗೆಲುವುಗಳಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರ ವ್ಯಕ್ತಿತ್ವ ಮತ್ತಷ್ಟು ಪ್ರಜ್ವಲಿಸುತ್ತಿದೆ. ಭ್ರಷ್ಟಾಚಾರ ಮತ್ತು ಕಾಳಧನಿಕರ ವಿರುದ್ಧದ ಯುದ್ಧದಲ್ಲಿ ನಿರ್ಣಾಯಕ ಗೆಲುವು ಸಾಧಿಸುವ ಮೂಲಕ ಭಾರತೀಯ ರಾಜಕಾರಣದಲ್ಲಿ ಹೊಸ ಭಾಷ್ಯ ಬರೆದಿದ್ದಾರೆ.

ಯೋಗಿ ಆದಿತ್ಯನಾಥ ಭೇದಭಾವ, ಅಸ್ಪೃಶ್ಯತೆ ವಿರುದ್ಧ ಹೋರಾಟ ನಡೆಸಿದ ಹಿಂದೂ ಸಂನ್ಯಾಸಿ ಪರಂಪರೆಯಿಂದ ಬಂದವರಾಗಿದ್ದಾರೆ. ಇಂತಹ ಸಂನ್ಯಾಸಿಗಳು ಯಾರೊಂದಿಗೂ ಭೇದಭಾವ ಮಾಡಿಲ್ಲ. ಬದಲಾಗಿ ವಿಶ್ವಾದ್ಯಂತ ನೋವನ್ನು ಎದುರಿಸಿದ ಭಿನ್ನ ಭಿನ್ನ ಮತಾವಲಂಬಿಗಳನ್ನು ತಮ್ಮ ಬಳಿ ಶರಣಾರ್ಥಿಗಳನ್ನಾಗಿ ಇರಿಸಿಕೊಂಡಿದ್ದಾರೆ. ಹೀಗಾಗಿ ಉತ್ತರಪ್ರದೇಶವನ್ನು ಸವೋತ್ತಮ ಪ್ರದೇಶವನ್ನಾಗಿ ಮಾಡುವ ಕ್ಷಣ ಮತ್ತೆ ಬಂದಿದೆ.

Leave a Reply

Your email address will not be published. Required fields are marked *

Back To Top