Friday, 21st September 2018  

Vijayavani

ಮತ್ತೆ ದೇವಸ್ಥಾನಕ್ಕೆ ಹೊರಟ ಸಿಎಂ - ಇಂದು ಸಂಜೆ ಶೃಂಗೇರಿ ಶಾರದಾಂಬೆಯ ದರ್ಶನ - ನಂತರ ಜಗದ್ಗುರಗಳ ಭೇಟಿ        ಕೊಡಗಿನಲ್ಲಿ ತಹಸೀಲ್ದಾರ್ ಮೇಲೆ‌ ಹಲ್ಲೆ ಪ್ರಕರಣ - ಪ್ರಕರಣ ಸಂಬಂಧ 12 ಆರೋಪಿಗಳ ಬಂಧನ        ಸಿಎಂ ದಂಗೆ ಹೇಳಿಕೆಗೆ ಆಕ್ರೋಶ - ಇಂದು ರಾಜ್ಯಪಾಲರಿಗೆ ಬಿಜೆಪಿ ನಿಯೋಗದ ದೂರು - ಬಿಎಸ್​​ವೈ ನಿವಾಸಕ್ಕೆ ಬಿಗಿ ಭದ್ರತೆ        ಸಂಪುಟ ಸಭೆಯಲ್ಲಿ ಸಿಎಂ ದಂಗೆ ಹೇಳಿಕೆ ಪ್ರಸ್ತಾಪ - ಎಚ್​ಡಿಕೆ ಮಾತಿಗೆ ಹಿರಿಯ ಸಚಿವರಿಂದಲೇ ಆಕ್ಷೇಪ        ಎಸ್. ಗಿರೀಶ್​​ರಿಂದ ಆಪರೇಷನ್ ಕ್ಲೀನ್ - ಸಿಸಿಬಿ ಎಸ್ಪಿಯಾಗಿ ಬಂದ 24 ಗಂಟೆಯಲ್ಲೇ 5 ಸಿಬ್ಬಂದಿ ಎತ್ತಂಗಡಿ        ಬಾಗಲಕೋಟೆಯ ಬನಹಟ್ಟಿಯಲ್ಲೊಬ್ಬ ಪೋಲಿ ಶಿಕ್ಷಕ - ವಿದ್ಯಾರ್ಥಿನಿ ಮೊಬೈಲ್​​​ಗೆ ಐ ಲವ್ ಯೂ ಮೆಸೇಜ್       
Breaking News

ಭಾರತದ ಸ್ಕಾರ್ಲೆಟ್ ಪಿಂಪರ್ನಲ್ ರಾಸ್​ಬಿಹಾರಿ ಬೋಸ್

Thursday, 05.10.2017, 3:05 AM       No Comments

ವೈಸ್ರಾಯ್ ಬಾಂಬ್ ಪ್ರಕರಣ ಭಾರತದಾದ್ಯಂತ ಸಂಚಲನ ಮೂಡಿಸಿತು. ವಿದೇಶಗಳಲ್ಲಿ ಮಾರ್ದನಿಸಿತು. ಲಂಡನ್ನನ್ನು ಗದಗುಟ್ಟಿಸಿತು. ಇಂಗ್ಲೆಂಡಿನ ಸ್ವಾಭಿಮಾನಕ್ಕೆ ಪೆಟ್ಟು ಬಿತ್ತು. ಅಷ್ಟೇ ಅಲ್ಲದೆ ಭಾರತದಲ್ಲಿನ ಹಿಡಿಯಷ್ಟು ಕ್ರಾಂತಿಕಾರಿಗಳು ನೀಡುತ್ತಿದ್ದ ಪೆಟ್ಟುಗಳಿಗೆ ಒಡ್ಡಿದ್ದ ಸವಾಲಿಗೆ ಬ್ರಿಟಿಷ್ ಸರ್ಕಾರ ಥರಗುಟ್ಟಿತ್ತು. ವಿಶ್ವಾದ್ಯಂತ ಪತ್ರಿಕೆಗಳಲ್ಲಿ ಅದು ಪ್ರತಿಧ್ವನಿಸಿತು.

 ಬ್ರಿಟಿಷ್ ಸಾಮ್ರಾಜ್ಯದ ಮೇಲೆ ಭಾರತೀಯ ಯುವ ಕ್ರಾಂತಿಕಾರಿಗಳು ಗುರಿಯಿಟ್ಟು ನೇರ ಬಾಂಬ್ ಎಸೆದು ಬ್ರಿಟಿಷ್ ಸರ್ಕಾರ ಥರಗುಟ್ಟುವಂತೆ ಮಾಡಿದ ದಿವಸ 1912ರ ಡಿಸೆಂಬರ್ 23.

ಅಂದಿನ ವೈಸ್ರಾಯ್ ಲಾರ್ಡ್ ಹಾರ್ಡಿಂಜ್ ವಿಜೃಂಭಣೆಯಿಂದ ದೆಹಲಿಯ ಚಾಂದನಿ ಚೌಕ್ ಪ್ರದೇಶದಲ್ಲಿ ಮೆರವಣಿಗೆ ಹೊರಟಿದ್ದ. ಎಂಥ ವೈಭವವದು! ನೋಡಲು ಎರಡು ಕಣ್ಣು ಸಾಲದು. ದೆಹಲಿಯ ಸುತ್ತಮುತ್ತಲ ಪ್ರದೇಶಗಳಿಂದ ಬಂದಿದ್ದ ಜನ ಆ ಜನಸಂದಣಿಯನ್ನು ತುಂಬಿ ತುಳುಕುವಂತೆ ಮಾಡಿದ್ದರು.

ಲಾರ್ಡ್ ಹಾರ್ಡಿಂಜ್ ಕಲ್ಕತೆಯಿಂದ ಅಲ್ಲಿಗೆ ರೈಲಿನಲ್ಲಿ ಬರುವಾಗಲೇ ಭಯಕಂಪಿತನಾಗಿದ್ದ. ಅವನಿಗೆ ಕ್ಷಣಕ್ಷಣಕ್ಕೂ ಅಪಶಕುನಗಳು ಕಂಡುಬಂದವು. ಜ್ಯೋತಿಷಿಯೊಬ್ಬ ಅವನಿಗೆ ಅಪಾಯ ಕಾದಿದೆ ಎಂದು ಹೇಳಿ ಬೆವರುವಂತೆ ಮಾಡಿದ್ದ. ಹೆಂಡತಿ ವಿನ್ನಿ ಹಾರ್ಡಿಂಜ್ ಎಷ್ಟೇ ಧೈರ್ಯ ತುಂಬಿದರೂ ಅವನ ನಡುಕ ನಿಂತಿರಲಿಲ್ಲ. ಅದಕ್ಕೆ ಕಾರಣ ಬಂಗಾಳದಲ್ಲಿನ ಕ್ರಾಂತಿಕಾರಿಗಳು, ಅವರ ಬಾಂಬುಗಳು! ಪೂರ್ವ ಹಾಗೂ ಪಶ್ಚಿಮ ಬಂಗಾಳಗಳಲ್ಲಿ ‘ಈ ಕ್ರಾಂತಿಕಾರಿಗಳ ಕಾರಣ ಸರ್ಕಾರವೇ ಅಸ್ತಿತ್ವದಲ್ಲಿಲ್ಲದಂತಾಗಿದೆ’ ಎಂದು ಅವನೇ ಲಂಡನ್ನಿಗೆ ವರದಿ ಕಳಿಸಿರಲಿಲ್ಲವೇ. ಅವನಿಗೆ ಹಗಲಿರುಳು, ಜಾಗೃತ ಸ್ಥಿತಿ ಅಥವಾ ನಿದ್ರಾವಸ್ಥೆಯಲ್ಲಿ ಕ್ರಾಂತಿಕಾರಿಗಳೂ ಅವರ ಬಾಂಬುಗಳೂ ಪಿಸ್ತೂಲುಗಳೇ ಕಾಣಿಸುತ್ತಿದ್ದವು. ಅಂದಮೇಲೆ ಅಂದು ಅವನು ಹೆದರಿ ನಡುಗುತ್ತಿದ್ದುದು ಬಹಳ ಸಹಜವೇ ಆಗಿತ್ತು. ಅವನ ಎಣಿಕೆ ತಪ್ಪಾಗಲಿಲ್ಲ.

ಬ್ರಿಟಿಷ್ ಸಾಮ್ರಾಜ್ಯದ ಮುಖಕ್ಕೆ ಬಡಿದ ಬಾಂಬ್!: ಲಾರ್ಡ್ ಹಾರ್ಡಿಂಜ್ ಮತ್ತು ಅವನ ಪತ್ನಿ ವಿನ್ನಿ ಹಾರ್ಡಿಂಜ್ ಅಂಬಾರಿಯಲ್ಲಿ ಕುಳಿತಿದ್ದ, ಭವ್ಯವಾಗಿ ಅಲಂಕರಿಸಲಾದ, ಆನೆ ಚಾಂದನಿ ಚೌಕದ ಒಂದು ಸ್ಥಳಕ್ಕೆ ಬಂದಾಗ ಅವನ ಭಯ ನಿಜರೂಪ ಪಡೆದಿತ್ತು. ಅವನ ಮೇಲೆ ಬಾಂಬೊಂದು ಭಯಂಕರವಾಗಿ ಸಿಡಿಯಿತು! ಕಿವಿಗಡುಚಿಕ್ಕಿದ ಆಸ್ಪೋೕಟ!! ಅಂಬಾರಿಯಲ್ಲಿ ಹಾರ್ಡಿಂಜಿನ ಹಿಂದಿದ್ದ ಅಂಗರಕ್ಷಕ ಮೇಲಿನಿಂದ ನೆಲಕ್ಕೆ ಬಿದ್ದು ಅಸುನೀಗಿದ. ಅಲ್ಲೋಲಕಲ್ಲೋಲ! ಜನ ದಿಕ್ಕಾಪಾಲು. ಆ ನೂಕುನುಗ್ಗುಲಿನಲ್ಲಿ ಕಾಲ್ತುಳಿತಕ್ಕೆ ಸಿಕ್ಕವರೆಷ್ಟೋ! ಹಾರ್ಡಿಂಜ್ ಹಾಗೂ ವಿನ್ನಿಯರ ಅದೃಷ್ಟ ಚೆನ್ನಾಗಿತ್ತು. ಸಣ್ಣ ಪುಟ್ಟ ಗಾಯಗಳಾದರೂ ಬದುಕುಳಿದರು. ಬ್ರಿಟಿಷ್ ಸರ್ಕಾರದ ಬುಡವನ್ನು ನಡುಗಿಸಿದ ಈ ಐತಿಹಾಸಿಕ ಕೃತ್ಯದ ಸೂತ್ರಧಾರಿ, ಪಾತ್ರಧಾರಿ ಘಟನಾ ಸ್ಥಳದಲ್ಲಿ ಹಾಜರಿದ್ದ. ಘಟನೆಯಾದ ಮರುಕ್ಷಣವೇ ಜನಜಂಗುಳಿಯಲ್ಲಿ ಸೇರಿ ಅಲ್ಲಿಂದ ಜಾರಿಕೊಂಡು ಡೆಹ್ರಾಡೂನ್​ಗೆ ಹೋಗಿಬಿಟ್ಟ. ಫ್ರೆಂಚ್ ರೆವಲ್ಯೂಷನ್ ಹಿನ್ನೆಲೆಯ ‘ದಿ ಸ್ಕಾರ್ಲೆಟ್ ಪಿಂಪರ್ನಲ್’ ಎಂಬ ಎಮ್ಮಾ ಆರ್ಕ್ಸಿ ಎಂಬ ಲೇಖಕರ ಕಾದಂಬರಿಯ ರೋಮಾಂಚಕಾರಿ ಪಾತ್ರ ಜಗತ್ಪ್ರಸಿದ್ಧ. ಆ ಪಾತ್ರದ ಜೀವಂತ ರೂಪವೋ ಎಂಬಂತೆ ಜೀವಿಸಿದ ರಾಸ್ ಬಿಹಾರಿ ಬೋಸ್​ನ ತಂತ್ರಗಾರಿಕೆ ಇಲ್ಲಿ ವಿಜೃಂಭಿಸಿತ್ತು. ಬಂಗಾಳದ ಬರ್ದ್ವಾನ್ ಜಿಲ್ಲೆಯ ಸುಬಲ್​ದಾಹಾ ಎಂಬ ಗ್ರಾಮದಲ್ಲಿ ರಾಸ್ ಬಿಹಾರಿ ಜನ್ಮ ಆಯಿತು. ವಿವೇಕಾನಂದ, ಸುಭಾಷ್ ಬೋಸ್ ಹಾಗೂ ನೂರಾರು ಕ್ರಾಂತಿಕಾರಿಗಳನ್ನು, ಸ್ವಾತಂತ್ರ್ಯ ಯೋಧರನ್ನು ನಾಡಿಗೆ ನೀಡಿದ ಕಾಯಸ್ಥ ಪಂಗಡವೇ ರಾಸ್ ಬಿಹಾರಿ ಬೋಸನನ್ನು ದೇಶಕ್ಕೆ ನೀಡಿತ್ತು. 1886ರ ಮೇ 25ರಂದು ಸುಬಲ್​ದಾಹಾದ ಸೋದರಮಾವನ ಮನೆಯಲ್ಲಿ ಅವನ ಜನನ. ತಂದೆ ವಿನೋದ್ ಬಿಹಾರಿ ಬೋಸ್ ಶಿಮ್ಲಾದಲ್ಲಿ ಸರ್ಕಾರಿ ಮುದ್ರಣಾಲಯದಲ್ಲಿ ಅಧಿಕಾರಿ.

ತುಂಟ ತುಪಾಕಿ: ಫ್ರೆಂಚ್ ಆಡಳಿತದಲ್ಲಿದ್ದ ಚಂದನ್ ನಗರದಲ್ಲಿ ರಾಸ್​ಬಿಹಾರಿಯ ಶೈಶವದ ಪಾಲನೆ ಪೋಷಣೆ ಆಗಿ ಕಲ್ಕತ್ತೆಯಲ್ಲಿ ಶಿಕ್ಷಣವೂ ದೊರೆಯಿತು. ಬೆಳೆಯುವ ಪೈರು ಮೊಳಕೆಯಲ್ಲಿಯೇ ಎಂಬಂತೆ ಮುಂದೆ ಮಹಾನ್ ಕ್ರಾಂತಿಕಾರಿ ಚತುರ ನಾಯಕನಾದ ರಾಸ್​ಬಿಹಾರಿ ಚಿಕ್ಕಂದಿನಿಂದಲೂ ಚೇಷ್ಟೆ, ತುಂಟತನಗಳಲ್ಲೇ ಮೆರೆದವನು. ನೆರೆಹೊರೆಯವರ ಶಾಪಕ್ಕೆ ಗುರಿಯಾಗುತ್ತಿದ್ದ. ಕಲ್ಕತ್ತೆಯಲ್ಲಿ ಅವನು ಓದಿದ್ದು ಮಾರ್ಟಿನ್ ಶಾಲೆಯಲ್ಲಿ. ಓದಿಗೂ ಅವನಿಗೂ ಕೂಡಿ ಬಂದಿರಲಿಲ್ಲ. ಪ್ರಾಯಕ್ಕೆ ಬಂದಾಗ ಸೈನ್ಯ ಸೇರಬೇಕೆಂಬ ಬಯಕೆಯಿಂದ ಸೈನ್ಯದ ಕಚೇರಿಗೆ ಹೋದಾಗ-‘ನೀನು ಬಂಗಾಳಿ. ನೀನು ಸೈನ್ಯದಲ್ಲಿ ಸೇರಲು ಅರ್ಹನಲ್ಲ. ದುರ್ಬಲ. ಆದ್ದರಿಂದ ನಿನಗೆ ಸೈನ್ಯದಲ್ಲಿ ಪ್ರವೇಶವಿಲ್ಲ’ ಎಂದು ಅಲ್ಲಿನ ಸಿಬ್ಬಂದಿ ಅವನನ್ನು ಹೊರಕ್ಕೆ ದೂಕಿ ಬಿಡುತ್ತಾರೆ. ಆಗಲೇ ಅವನಲ್ಲಿ ಬಂಗಾಳಿಗಳ ಕ್ಷಾತ್ರತೇಜವನ್ನು ಜಗತ್ತಿಗೆ ಪರಿಚಯಿಸಬೇಕೆಂಬ ಛಲ ಮೂಡುತ್ತದೆ. ತೀವ್ರವಾಗಿ ವ್ಯಾಯಾಮ ಮಾಡಿ ದಷ್ಟಪುಷ್ಟನಾಗುತ್ತಾನೆ.

ರಾಸ್​ಬಿಹಾರಿಯದು ಎಲ್ಲ ನಿಯಂತ್ರಣಗಳನ್ನು ಮೀರಿದ ಜೀವನಶೈಲಿ. ತಂದೆ-ತಾಯಿಗೆ ಸದಾ ತಲೆನೋವು. ತಾಯಿ ಅವನಿಗೆ ಬುದ್ಧಿ ಹೇಳಿ ತಮ್ಮೊಂದಿಗಿರಿಸಿಕೊಳ್ಳಲು ಶಿಮ್ಲಾಕ್ಕೆ ಕರೆದೊಯ್ದಳು. ಅಪ್ಪ ಸರ್ಕಾರಿ ಮುದ್ರಣಾಲಯದಲ್ಲಿ ಕೆಲಸಕ್ಕೆ ಹಾಕಿದ. ಆದರೆ ಅವನ ದಾರಿ ಅವನಿಗೆ. ಅಲ್ಲೂ ಕಾರ್ವಿುಕರ ಗಲಾಟೆಯಲ್ಲಿ ಭಾಗವಹಿಸಿ ಕೆಲಸಕ್ಕೆ ತಿಲಾಂಜಲಿ ನೀಡಿದ. ಅನಂತರ ಡೆಹರಾಡೂನ್​ನಲ್ಲಿ ಅರಣ್ಯ ಸಂಶೋಧನಾ ಇಲಾಖೆಯ ಕಚೇರಿಯಲ್ಲಿ ರಸಾಯನಶಾಸ್ತ್ರಜ್ಞ ಪೂರ್ಣ ಸಿಂಗ್ ಎಂಬುವನಿಗೆ ಸಹಾಯಕ ಹುಡುಗನಾಗಿ ಕೆಲಸ ಮಾಡಿದ. ಅದೇ ವೇಳೆ ಬಂಗಾಳದಲ್ಲಿ ಕ್ರಾಂತಿಕಾರಿ ಚಟುವಟಿಕೆಗಳು ಗರಿಗೆದರಿದ್ದವು. ಬಂಗಾಳದ ಸ್ವಾಭಿಮಾನಿ ಗಣ್ಯಾತಿಗಣ್ಯರು ಬೆನ್ನುಲುಬಾಗಿ ನಿಂತು ಯುವಜನಕ್ಕೆ ಪ್ರೇರಣೆ ನೀಡಿದ ಕ್ರಾಂತಿಕಾರಿ ಹೋರಾಟ ಬ್ರಿಟಿಷ್ ಸರ್ಕಾರದ ನಿದ್ದೆಗೆಡಿಸಿತ್ತು. ರಾಸ್​ಬಿಹಾರಿ ಇದರಿಂದ ದೂರವಿರಲು ಹೇಗೆ ಸಾಧ್ಯ? ಅನುಶೀಲನ ಸಮಿತಿಯೊಂದಿಗೆ ಇವನ ಸಂಬಂಧ ಬೆಳೆಯಿತು. ಕಲ್ಕತ್ತಾ ಕ್ರಾಂತಿಕಾರಿಗಳು ಯಶಸ್ವಿಯಾಗಿ ಬಾಂಬ್​ಗಳನ್ನು ಸಿದ್ಧಗೊಳಿಸಿದ್ದರು. ಖುದಿರಾಂ ಬೋಸ್-ಪ್ರಫುಲ್ಲ ಚಾಕಿ ಮುಝುಪ್ಪರಪುರದಲ್ಲಿ ಬಾಂಬ್ ಆಸ್ಪೋಟಿಸಿ ಬಾಂಬ್ ಯುಗವನ್ನು ಆರಂಭಿಸಿದ್ದರು. ಅಂದಿನ ಬಾಂಬ್ ಎಂದರೆ ಶ್ರೀಕೃಷ್ಣನ ಚಕ್ರಾಯುಧ, ಶ್ರೀರಾಮನ ಕೋದಂಡ, ಹನುಮ-ಭೀಮರ ಗದೆಗಳಿದ್ದಂತೆ, ಶತ್ರುಸಂಹಾರದ ಅಸ್ತ್ರಗಳು! ಅವನಿಗೂ ಅನುಶೀಲನ ಸಮಿತಿಗೂ ಸಂಪರ್ಕ ಬಂದು ಅವನೂ ಮುಂದಿನ ಹೋರಾಟದ ಸಲುವಾಗಿ ಸಿದ್ಧನಾದ. ಅವನು ಕೆಲಸ ಮಾಡುತ್ತಿದ್ದ ಡೆಹರಾಡೂನಿನಲ್ಲಿ ಪಿ.ಎನ್. ಟಾಗೋರ್ ಎಂಬ ಶ್ರೀಮಂತನಿಗೆ ಸೇರಿದ ‘ಟಾಗೋರ್ ವಿಲ್ಲಾ’ ಎಂಬ ಭಾರಿ ಬಂಗಲೆ ಇತ್ತು. ಅದರ ಸುತ್ತಲೂ ದಟ್ಟವಾದ ತೋಟ. ಅಲ್ಲಿ ರಹಸ್ಯವಾಗಿ ಬಾಂಬ್ ತಯಾರಿಕಾ ಕೇಂದ್ರ ಆರಂಭಿಸಿದ. ಬಾಂಬುಗಳೂ ಸಿದ್ಧಗೊಂಡವು. ಆಗ ಬಂಗಾಳದಲ್ಲಲ್ಲದೆ ಲಖನೌ, ಕಾನ್​ಪುರ, ಸಹರಾನ್​ಪುರ ಮುಂತಾದ ಸಂಯುಕ್ತ ಪ್ರಾಂತಗಳ ಊರುಗಳಲ್ಲಿಯೂ ಲಾಹೋರ್, ಅಮೃತಸರ ಮುಂತಾದ ಪಂಜಾಬ್ ಪ್ರಾಂತ್ಯದ ಊರುಗಳಲ್ಲಿಯೂ ದೆಹಲಿಯಲ್ಲೂ ಕ್ರಾಂತಿಕಾರಿ ಕೇಂದ್ರಗಳು ಸ್ಥಾಪನೆಗೊಂಡಿದ್ದವು. ಸಹರಾನ್​ಪುರದ ಜೀತೇಂದ್ರಮೋಹನ ಮುಖರ್ಜಿ ಎಂಬ ಕ್ರಾಂತಿಕಾರಿಯ ಮೂಲಕ ಸಂಯುಕ್ತ ಪ್ರಾಂತ ಹಾಗೂ ಪಂಜಾಬ್​ಗಳ ಕ್ರಾಂತಿಕಾರಿ ವಲಯಕ್ಕೆ ಪರಿಚಿತನಾದ.

ದೆಹಲಿಯಿಂದ ಪರಾರಿ: ಅರವಿಂದರು ಬರೋಡಾದಲ್ಲಿದ್ದಾಗಲೇ ಬಂಗಾಳದಲ್ಲಿ ಕ್ರಾಂತಿ ಸಂಘಟನೆಯನ್ನು ಬೆಳೆಸಲು ಜತೀಂದ್ರನಾಥ ಬ್ಯಾನರ್ಜಿ ಎಂಬ ಅಪ್ರತಿಮ ಯೋಧನನ್ನು ಕಲ್ಕತ್ತೆಗೆ ಕಳಿಸಿದ್ದರು. ಆತ ಆನಂತರ ಸಂನ್ಯಾಸ ಸ್ವೀಕರಿಸಿ ನಿರಾಲಂಬ ಸ್ವಾಮಿ ಎಂಬ ಹೆಸರಿನಿಂದ ಮಥುರಾದಲ್ಲಿ ನೆಲೆಸಿದರು. ಕ್ರಾಂತಿಕಾರಿ ವಲಯದಲ್ಲಿ ಅತಿ ಹೆಚ್ಚಿನ ಗೌರವ ಸ್ಥಾನ ಪಡೆದಿದ್ದ ಜತೀಂದ್ರನಾಥ ಮುಖರ್ಜಿಗೆ ರಾಸ್​ಬಿಹಾರಿಯನ್ನು ನಿರಾಲಂಬ ಸ್ವಾಮಿ ಜತೀನ್ ತೀರ್ಥಯಾತ್ರೆಗೆ ಮಥುರಾಗೆ ಬಂದಿದ್ದಾಗ ಪರಿಚಯಿಸಿದ್ದರು. ಅಂದು ಬೆಂಕಿ-ಬಿರುಗಾಳಿಗಳು ಸೇರಿದಂತಾಗಿತ್ತು! ಅಂದಿನಿಂದ ಇಬ್ಬರ ನಡುವೆ ಪರಸ್ಪರ ಸಂಬಂಧ ಬೆಳೆದು ಕ್ರಾಂತಿಕಾರಿ ಚಟುವಟಿಕೆಗಳಿಗೆ ಎರಡು ಪ್ರತಿಭೆ ಹಾಗೂ ಶಕ್ತಿಗಳ ಕೊಡುಗೆ ಸಿಗುವಂತಾಯಿತು. ಹಾಗೆಯೇ ಚಂದನಾಗೊರಿನ ಅರವಿಂದರ ಪಟ್ಟ ಶಿಷ್ಯ ಮೋತಿಲಾಲ್ ರಾಯ್ ಎಂಬ ಕ್ರಾಂತಿಕಾರಿಯೂ ಕೂಡ ರಾಸ್​ಬಿಹಾರಿಯ ಆಪ್ತವಲಯಕ್ಕೆ ಸೇರಿದರು.

1912ರ ಡಿಸೆಂಬರ್ 23ರಂದು ದೆಹಲಿಯ ವೈಸ್ರಾಯ್ ಮೆರವಣಿಗೆಯ ಮೇಲೆ ಬಾಂಬ್ ಆಸ್ಪೋಟಿಸಿದವನು ಬಸಂತ್ ಕುಮಾರ್ ಬಿಶ್ವಾಸ್. ರಾಸ್​ಬಿಹಾರಿ ಆರಿಸಿ ಆ ಕೆಲಸಕ್ಕೆ ತರಬೇತುಗೊಳಿಸಿದ ಒಬ್ಬ ಸುಕುಮಾರ ಯುವಕ. ಆ ಘಟನೆಯ ಅನಂತರ ಒಂದರೆಕ್ಷಣವೂ ದೆಹಲಿಯಲ್ಲಿ ನಿಲ್ಲದ ಗುರು-ಶಿಷ್ಯರಿಬ್ಬರೂ ದೆಹಲಿಯಿಂದ ಪರಾರಿಯಾದರು. ರಾಸ್​ಬಿಹಾರಿ ಬೆಳಗಿನ ವೇಳೆಗೆ ಡೆಹ್ರಾಡೂನ್​ನಲ್ಲಿ ಹಾಜರ್! ಎಂದಿನಂತೆ ಕೆಲಸಕ್ಕೆ ಬಂದ. ಅಷ್ಟೇ ಅಲ್ಲದೆ ವೈಸ್ರಾಯ್ ಮೇಲಿನ ಬಾಂಬ್ ಎಸೆತವನ್ನು ಖಂಡಿಸಲು ಸಭೆ ಸೇರಿಸಿ ಆ ಕೃತ್ಯವನ್ನು ಉಗ್ರವಾಗಿ ಪ್ರತಿಭಟಿಸಿ ಸ್ಥಳೀಯ ಬ್ರಿಟಿಷ್ ಅಧಿಕಾರಿ ಹಾಗೂ ಪೊಲೀಸರ ಪ್ರಶಂಸೆಯನ್ನು ಗಳಿಸಿದ. ಅವನ ರಾಜಭಕ್ತಿಯನ್ನು ಕಂಡು ಅವರು ನಿಬ್ಬೆರಗಾಗಿದ್ದರು. ರಾಸ್​ಬಿಹಾರಿಯ ನಾಟಕ ಎಷ್ಟು ಫಲಕಾರಿಯಾಗಿತ್ತೆಂದರೆ ಅಲ್ಲಿನ ಪೊಲೀಸ್ ಅಧಿಕಾರಿ ‘ಡೆಹ್ರಾಡೂನಿನ ಬಂಗಾಳಿಗಳೆಲ್ಲರ ಪೈಕಿ ರಾಸ್​ಬಿಹಾರಿಯೊಬ್ಬನೇ ಪೊಲೀಸರಿಗೆ ಸುದ್ದಿ ಕೊಡುವ ಗೂಢಚಾರಿ’ ಎಂದು ಟಿಪ್ಪಣಿ ಬರೆದಿದ್ದ.

ಅದೇ ವೇಳೆ ವೈಸ್ರಾಯ್ ಬಾಂಬ್ ಪ್ರಕರಣದ ಪ್ರತಿಧ್ವನಿಯಾಗಿ ಅಮೆರಿಕದ ಸ್ಯಾನ್​ಫ್ರಾನ್ಸಿಸ್ಕೊದಲ್ಲಿದ್ದ ಲಾಲಾ ಹರದಯಾಳರು ಬರೆದ ‘ದೆಹಲಿ ಬಾಂಬ್’ ಎಂಬ ದೀರ್ಘ ತಾತ್ತಿ್ವಕ ಚಿಂತನೆ ವಿಶ್ವದ ಎಲ್ಲ ಕ್ರಾಂತಿಕಾರಿ ಕೇಂದ್ರಗಳಿಗೂ ತಲುಪಿ ಹೊಸ ಚೈತನ್ಯ ಚಿಮ್ಮಿಸಿತು. ಬಾಂಬ್ ದಾಳಿಗೆ ಒಂದು ತಾತ್ತಿ್ವಕ ಹಿನ್ನೆಲೆ ಕಲ್ಪಿಸಿತು.

ಗದರ್ ವೀರರೊಂದಿಗೆ ನಂಟು: 1913ರ ವೇಳೆಗೆ ರಾಸ್​ಬಿಹಾರಿ, ಬಾಘಾ ಜತೀನ್, ಶಚೀಂದ್ರನಾಥ ಸನ್ಯಾಲ್, ಅಮರೇಂದ್ರನಾಥ ಚಟರ್ಜಿ ಎಂಬ ಕ್ರಾಂತಿಕಾರಿಗಳು ಸೇರಿ ಮುಂಬರಲಿದ್ದ ಪ್ರಥಮ ವಿಶ್ವಯುದ್ಧದ ವೇಳೆ ಭಾರತ ಕ್ರಾಂತಿ ಏಳಲು ಸುಸಮಯವೆಂದು ಆಲೋಚಿಸಿ ಯೋಜನೆ ರೂಪಿಸಿ ಕಲ್ಕತ್ತೆಯ ಫೋರ್ಟ್ ವಿಲಿಯಂನಲ್ಲಿದ್ದ ರೆಜಿಮೆಂಟುಗಳನ್ನು ಸಂರ್ಪಸಿದ್ದರು.

ವೈಸ್ರಾಯ್ ಬಾಂಬ್ ಆಸ್ಪೋಟದ ಸಂಬಂಧ ದೆಹಲಿಯಲ್ಲಿ ಪೊಲೀಸ್ ತಪಾಸಣೆ ನಡೆಯುತ್ತಿದ್ದಾಗ ಅದರಲ್ಲಿ ಪ್ರಮುಖ ಪಾತ್ರ ರಾಸ್​ಬಿಹಾರಿಯದೆಂಬುದು ದೊರೆತ ಪತ್ರಗಳಿಂದ ಖಚಿತಪಟ್ಟಿತು. ಕಲ್ಕತ್ತೆಯ ಡೆಹ್ರಾಡೂನ್​ನಲ್ಲಿ ರಾಸ್​ಬಿಹಾರಿ ಇರುವ ಸುಳಿವು ಸಿಕ್ಕಿತು. ಕಲ್ಕತ್ತೆಯ ಪೊಲೀಸರು ಡೆನ್​ಹ್ಯಾಮ್ ಮತ್ತು ಚಾರ್ಲ್ಸ್

ಟೆಗಾರ್ಟ್ ನೇತೃತ್ವದಲ್ಲಿ ಅಲ್ಲಿಗೆ ಬಂದು ಅವನು ಇರಬಹುದೆಂಬ ಗುಮಾನಿಯ ಮೇಲೆ ಪಿ.ಎನ್. ಟಾಗೋರನ ತೋಟದ ಮನೆಯ ಮೇಲೆ ದಾಳಿ ಮಾಡಿದರು. ಅಲ್ಲಿಯೇ ಇದ್ದ ರಾಸ್​ಬಿಹಾರಿ ಪೊಲೀಸ್ ಕಾರ್ಯಾಚರಣೆಯನ್ನೆಲ್ಲ ನೋಡಿ ಅಲ್ಲಿಂದ ಪಲಾಯನ ಮಾಡಿದ. ಸರ್ಕಾರ ಅವನ ಸುಳಿವು ಕೊಟ್ಟವರಿಗೆ 12,000 ರೂ. ಬಹುಮಾನ ಘೊಷಿಸಿತು. ಡೆಹ್ರಾಡೂನ್​ನಿಂದ ವಾರಾಣಸಿಗೆ ತನ್ನ ನೆಲೆಯನ್ನು ಬದಲಾಯಿಸಿದ ರಾಸ್​ಬಿಹಾರಿ ಅಲ್ಲಿಯೇ ತನ್ನ ಕಾರ್ಯಚಟುವಟಿಕೆ ಆರಂಭಿಸಿದ. ಆ ವೇಳೆಗೆ ಭಾರತದ ಸ್ವಾತಂತ್ರ್ಯದ ಸಲುವಾಗಿ ಕೆನಡಾ, ಅಮೆರಿಕ, ಜರ್ಮನಿ ಮುಂತಾದ ಕಡೆ ಇದ್ದ ಕ್ರಾಂತಿಕಾರಿಗಳು ‘ಗದರ್’ ಚಳವಳಿಯನ್ನು ಪ್ರಾರಂಭಿಸಿದರು. ಅದು ಕ್ರಾಂತಿ ಹೋರಾಟವೇ. ಭಾರತದಲ್ಲಿ, ವಿಶೇಷವಾಗಿ, ಪಂಜಾಬ್​ನಲ್ಲಿ ಗದರ್ ಚಳವಳಿಯ ಬಾಹುಗಳು ಚಾಚಿಕೊಂಡವು. ವಿದೇಶಗಳಿಂದ ಗದರ್ ಸಲುವಾಗಿ ಸಾವಿರಾರು ಸಿಖ್ಖರು ಹಡಗುಗಳಲ್ಲಿ ಭಾರತಕ್ಕೆ ಬಂದಿಳಿದರು. ರಹಸ್ಯವಾಗಿ ಅವರ ಸಂಘಟನೆ ಇಲ್ಲಿ ರೂಪುಗೊಂಡಿತು. ಕರ್ತಾರ್ ಸಿಂಗ್ ಸರಾಬಾ, ವಿಷ್ಣು ಗಣೇಶ ಪಿಂಗಳೆ, ಅವಧ ಬಿಹಾರಿ, ಮಾಸ್ಟರ್ ಅಮೀರ್ ಚಂದ್ ಮುಂತಾದ ಹಲವರು ಚಾಣಾಕ್ಷರೂ ಅಸೀಮ ದೇಶಭಕ್ತರೂ ಆದ ಯೋಧರು ಮುಖ್ಯ ಪಾತ್ರಧಾರಿಗಳು. ಎಲ್ಲರಿಗಿಂತ ಹೆಚ್ಚಿನ ಕೀಲಕ ಪಾತ್ರ ರಾಸ್​ಬಿಹಾರಿಯದು. ಆ ಭಾರಿ ಬಂಡಾಯಕ್ಕೆ ರಾಸ್​ಬಿಹಾರಿ ಸೊಂಟಕಟ್ಟಿ ನಿಂತ.

(ಮುಂದುವರಿಯುವುದು)

(ರಾಸ್​ಬಿಹಾರಿ ಬೋಸ್ ಸಂಬಂಧಿತ ಎಲ್ಲ ವಿವರಗಳೂ ಇದೇ ಅಂಕಣಕಾರರ ‘ರುಧಿರಾಭಿಷೇಕ’ ಕಾದಂಬರಿಯಲ್ಲಿ ಲಭ್ಯವಿದೆ.)

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *

Back To Top