Friday, 17th August 2018  

Vijayavani

ಬಿಜೆಪಿ ಕಚೇರಿಯಲ್ಲಿ ಅಟಲ್​ ಅಂತಿಮ ದರ್ಶನ, ಮೋದಿ ಸೇರಿ ಹಲವು ಗಣ್ಯರಿಂದ ಅಂತಿಮ ನಮನ         ಅಟಲ್​​ಗೆ ವಿಶ್ವದಾದ್ಯಂತ ಕಂಬನಿ: ಅಂತಿಮ ದರ್ಶನಕ್ಕೆ ವಿದೇಶಿ ನಾಯಕರ ಆಗಮನ, ಪಾಕ್​​ ನಿಯೋಗಕ್ಕೆ ಭಾರತ ವೀಸಾ        14 ಕಿ.ಮೀ. ಸಾಗಲಿದೆ ವಾಜಪೇಯಿ​​ ಅಂತಿಮ ಯಾತ್ರೆ: ಭಾಗಿಯಾಗಲಿದ್ದಾರೆ ಪ್ರಧಾನಿ, 4 ಗಂಟೆಗೆ ಸ್ಮೃತಿ ಸ್ಥಳದಲ್ಲಿ ಅಂತ್ಯಕ್ರಿಯೆ        ಕೊಡಗಿನಲ್ಲಿ ಮುಂದುವರಿದ ಮಳೆ: ಪ್ರವಾಹಕ್ಕೆ ಸಿಲುಕಿ ಜನಜೀವನ ತತ್ತರ, ಸಹಾಯಕ್ಕೆ ಅಂಗಲಾಚುತ್ತಿದ್ದಾರೆ ಜನ        ಕೇರಳದಲ್ಲಿ ಮುಂದುವರಿದ ರಕ್ಷಣಾ ಕಾರ್ಯ: ವಿಮಾನದಿಂದ ಆಹಾರ ಪೂರೈಕೆ, ಲಕ್ಷಾಂತರ ಮಂದಿ ಸ್ಥಳಾಂತರ       
Breaking News

ಭಾರತದ ಮಹಿಳೆಯರೇಕೆ ನೌಕರಿ ತ್ಯಜಿಸುತ್ತಿದ್ದಾರೆ..?

Tuesday, 05.12.2017, 3:03 AM       No Comments

ಎಲ್ಲ ರಂಗಗಳ ಅಭಿವೃದ್ಧಿಯಲ್ಲಿ ಪುರುಷರಷ್ಟೇ ಮಹತ್ವದ ಪಾತ್ರವಹಿಸಿರುವ ಮಹಿಳೆಯರು ಸ್ವಾವಲಂಬಿ ಬದುಕು ಸಾಗಿಸುತ್ತ ಯಶಸ್ಸಿನ ಹೊಸ ಮಜಲುಗಳನ್ನು ತಲುಪುತ್ತಿರುವುದು ಗೊತ್ತೇ ಇದೆ. ಆದರೆ, ಮಹಿಳೆಯರು ಕೆಲಸ ಬಿಡುವ ಪ್ರಮಾಣವೂ ವೇಗದಲ್ಲಿ ಹೆಚ್ಚುತ್ತಿದೆ ಎಂಬುದು ಕಳವಳಕಾರಿ ಅಂಶ.

 ಭಾರತೀಯ ಸಂಸ್ಕೃತಿಯಲ್ಲಿ ವಿವಾಹಿತ ಮಹಿಳೆಗೆ ‘ಅರ್ಧಾಂಗಿ’ ಶಬ್ದವನ್ನು ಉಪಯೋಗಿಸುತ್ತಾರೆ. ವಿವಾಹದ ಬಳಿಕ ಗಂಡು-ಹೆಣ್ಣು ಇಬ್ಬರೂ ಒಬ್ಬರಿಗೊಬ್ಬರು ಪೂರಕವಾಗಿ ಜೀವನದ ರಥವನ್ನು ಎಳೆಯುತ್ತಾರೆ ಮತ್ತು ಬದುಕನ್ನು ಕುಟುಂಬದೊಂದಿಗೆ ಕಳೆಯುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಅಲ್ಲದೆ, ಹಿಂದುಗಳಲ್ಲಿ ವಿವಾಹ ಸಂಬಂಧ ಏಳು ಜನ್ಮಗಳದ್ದು ಎಂದು ನಂಬಲಾಗಿದೆ. ಈ ಕುಟುಂಬ ವ್ಯವಸ್ಥೆಗೆ ಅನುಗುಣವಾಗಿ ನಮ್ಮ ಸಾಮಾಜಿಕ ವ್ಯವಸ್ಥೆಗಳು ರೂಪುಗೊಂಡಿವೆ ಮತ್ತು ಕಾಲಕ್ಕೆ ತಕ್ಕಂತೆ ಅವು ಬದಲಾಗಿವೆ. ಹಿಂದೆಲ್ಲ ಮದುವೆಯಾದ ಬಳಿಕ ಗಂಡ ಹೊರಗೆ ಹೋಗಿ ದುಡಿದು, ಕುಟುಂಬವನ್ನು ಆರ್ಥಿಕವಾಗಿ ಪೋಷಿಸಬೇಕು ಮತ್ತು ಹೆಂಡತಿಯಾದವಳು ಗೃಹಕೃತ್ಯಗಳನ್ನು ನಿಭಾಯಿಸಬೇಕು ಎಂಬ ರೂಢಿಯಿತ್ತು. ಇದಕ್ಕೆ ತಕ್ಕಂತೆ, ಮಹಿಳೆಯರು ಆಗ ಆರ್ಥಿಕ ವ್ಯವಹಾರಗಳ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಪತಿ ತಂದ ಸಂಬಳದಲ್ಲೇ ಸಂಸಾರವನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗಲು ಯತ್ನಿಸುತ್ತಿದ್ದರು. ಈ ವ್ಯವಸ್ಥೆ ಬಹುಕಾಲದವರೆಗೂ ಮುಂದುವರಿಯಿತು.

ಮುಂದೆ, ಶಿಕ್ಷಣದ ಅರಿವು ಹೆಚ್ಚುತ್ತಾ ಹೋದಂತೆ ಹೆಣ್ಣು ಹೆಚ್ಚೆಚ್ಚು ಸಾಕ್ಷರರಾಗತೊಡಗಿದಳು. ಶಿಕ್ಷಣ ಪ್ರಸಾರದ ಮೊದಲ ಹಂತದಲ್ಲಿ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ ಎಟಕುತ್ತಿರಲಿಲ್ಲ. ಹಾಗಾಗಿ, 10-12ನೇ ತರಗತಿವರೆಗೆ ಓದಿ ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಕ್ರಮೇಣ ಉನ್ನತ ಶಿಕ್ಷಣ ಪಡೆಯುವಲ್ಲಿ ಹೆಣ್ಣು ಮುಂದಡಿ ಇಟ್ಟಾಗ ಸ್ಪರ್ಧೆ ಆರಂಭವಾಯಿತು. ಶಿಕ್ಷಣ, ಆರೋಗ್ಯ, ರಾಜಕೀಯ, ಬಾಹ್ಯಾಕಾಶ, ಸಮಾಜ ವಿಜ್ಞಾನ, ಸಾಹಿತ್ಯ, ಪತ್ರಿಕೋದ್ಯಮ, ಉದ್ಯಮ, ಕ್ರೀಡೆ… ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಸಾಧನೆಯ ಶಿಖರವೇರಿ ಹೆಣ್ಣು ಪುರುಷರಿಗಿಂತ ತಾನು ಯಾವುದೇ ರೀತಿಯಲ್ಲೂ ಕಡಿಮೆ ಇಲ್ಲ ಎಂಬುದನ್ನು ಸಾಬೀತು ಮಾಡಿದ್ದಾಳೆ. ಅಲ್ಲದೆ, ಭಾರತೀಯ ಸಂಸ್ಕೃತಿ ಮುಂಚೆಯಿಂದಲೂ ಹೆಣ್ಣನ್ನು ಶಕ್ತಿಯ ಸ್ವರೂಪವಾಗಿಯೇ ಆರಾಧಿಸಿಕೊಂಡು ಬರುತ್ತಿದೆ.

21ನೇ ಶತಮಾನದಲ್ಲಿ ಹೆಣ್ಣು ಎಲ್ಲ ರಂಗಗಳಲ್ಲಿ ಗಮನಾರ್ಹ ಸಾಧನೆ ಮಾಡುತ್ತಿರುವ ದೃಶ್ಯವನ್ನು ನಾವಿಂದು ಕಾಣುತ್ತಿರುವಾಗ ಒಂದಿಷ್ಟು ಕಳವಳ ಹುಟ್ಟಿಸುವಂಥ ಬೆಳವಣಿಗೆಗಳೂ ಘಟಿಸಿವೆ. ಭಾರತದಲ್ಲಿ ಮಹಿಳೆಯರು ಉದ್ಯೋಗ ತ್ಯಜಿಸುವ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಅದರಲ್ಲೂ, ಗ್ರಾಮೀಣ ಪ್ರದೇಶದಲ್ಲಿ ಕೂಲಿ, ಕೃಷಿ ಕೆಲಸ ಮಾಡುವ ಮಹಿಳೆಯರ ಪ್ರಮಾಣ ಗಮನಾರ್ಹ ಸಂಖ್ಯೆಯಲ್ಲಿ ಇಳಿಕೆ ಆಗಿರುವುದರಿಂದ ಹಲವು ರಂಗಗಳ ಮೇಲೆ ನಕಾರಾತ್ಮಕ ಪರಿಣಾಮಗಳಾಗಿವೆ. ಅಲ್ಲದೆ, ಗ್ರಾಮೀಣ ಭಾಗದಲ್ಲಿ ಕೆಲಸಕ್ಕೆ ಜನರು ಸಿಗುತ್ತಿಲ್ಲ ಎಂಬ ಅಳಲಿಗೆ ಕಾರಣವೇನು ಎಂಬುದು ಇದರಿಂದ ಸ್ಪಷ್ಟವಾಗಿದೆ.

‘National Sample Survey of Organisation’ ನಡೆಸಿರುವ ಸಮೀಕ್ಷೆಯಲ್ಲಿ ಭಾರತದ ದುಡಿಯುವ ಮಹಿಳಾ ವರ್ಗದ ಸಂಖ್ಯೆ ಕುಸಿಯುತ್ತಿದೆ ಎಂದು ಬೊಟ್ಟು ಮಾಡಲಾಗಿದೆ. ಈ ವರದಿಯನ್ನು ಆಧಾರವಾಗಿಟ್ಟುಕೊಂಡು ಹಲವು ಪ್ರತಿಷ್ಠಿತ ಸಂಸ್ಥೆಗಳು ಪ್ರತ್ಯೇಕ ಅಧ್ಯಯನ ನಡೆಸಿದ್ದು, ಮಹಿಳೆಯರು ನೌಕರಿ ಅಥವಾ ಪಾರಂಪರಿಕ ಉದ್ಯೋಗ ತೊರೆಯಲು ಕಾರಣವಾಗಿರುವ ಅಂಶಗಳನ್ನು ಪಟ್ಟಿ ಮಾಡಿವೆ. ವರದಿಯಲ್ಲಿ ತಿಳಿಸಿರುವಂತೆ 2004-2012ರ ಅವಧಿಯಲ್ಲಿ 2 ಕೋಟಿ ಮಹಿಳೆಯರು ಕೆಲಸ ತ್ಯಜಿಸಿದ್ದು, ಆದಾಯ ವರ್ತಲದಿಂದ ಹೊರಗುಳಿದಿದ್ದಾರೆ. 1993-94ರಲ್ಲಿ ನಮ್ಮ ದೇಶದಲ್ಲಿ ಕೂಲಿ ಮಾಡುವ ಒಟ್ಟು ಜನಸಂಖ್ಯೆಯ ಪೈಕಿ ಮಹಿಳೆಯರ ಪ್ರಮಾಣ ಶೇ.42ರಷ್ಟಿತ್ತು. 2012ರಲ್ಲಿ ಈ ಪ್ರಮಾಣ ಶೇ.31ಕ್ಕೆ ಕುಸಿದಿದೆ. ಅದೇ ರೀತಿ ಗ್ರಾಮೀಣ ಪ್ರದೇಶದತ್ತ ದೃಷ್ಟಿ ಹಾಯಿಸಿದರೆ 2004ಲ್ಲಿ ಕೂಲಿ ಮಾಡುವ ಒಟ್ಟು ಜನಸಂಖ್ಯೆಯ ಪೈಕಿ ಶೇಕಡ ಮಹಿಳೆಯರ ಪ್ರಮಾಣ ಶೇ.48ರಷ್ಟಿತ್ತು. 2012ರಲ್ಲಿ ಇದು 37.8ಕ್ಕೆ ಕುಸಿದಿದೆ. ಸಾಂಪ್ರದಾಯಿಕ ವೃತ್ತಿ ತ್ಯಜಿಸಿದವರ ಪೈಕಿ 15ರಿಂದ 24 ವಯೋಮಾನದವರ ಸಂಖ್ಯೆ ಹೆಚ್ಚಿದೆ. 2004-2012ರ ಅವಧಿಯಲ್ಲಿ ದುಡಿಯುವ ವರ್ಗಕ್ಕೆ 2.40 ಕೋಟಿ ಪುರುಷರು ಹೊಸದಾಗಿ ಸೇರ್ಪಡೆಯಾಗಿದ್ದರೆ, 2.17 ಕೋಟಿ ಮಹಿಳೆಯರು ಕಡಿಮೆಯಾಗಿದ್ದಾರೆ.

ನಗರಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಈ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದರ ಹಿಂದೆ ಸಾಮಾಜಿಕ, ಶೈಕ್ಷಣಿಕ ಕಾರಣಗಳು ಇದ್ದು, ಈ ಸಮಸ್ಯೆಗಳ ನಿವಾರಣೆ ನಿಟ್ಟಿನಲ್ಲಿ ಪರಿಹಾರ ಹುಡುಕುವ ಯತ್ನವನ್ನು ಈಗಲೇ ಮಾಡದಿದ್ದರೆ ಮತ್ತೆ ಪುರುಷ-ಮಹಿಳೆಯರ ನಡುವೆ ಆಳವಾದ ಕಂದಕ ನಿರ್ವಣವಾಗಿ ಹಿಂದಿನ ಸ್ಥಿತಿಯೇ ಮರುಕಳಿಸಿದಂತಾದಲ್ಲಿ ಅಚ್ಚರಿ ಪಡಬೇಕಿಲ್ಲ.

ಹೆಣ್ಣುಮಕ್ಕಳು ಕೂಲಿ ಅಥವಾ ಸಾಂಪ್ರದಾಯಿಕ ವೃತ್ತಿ ತೊರೆಯಲು ತಜ್ಞರು ಪಟ್ಟಿ ಮಾಡಿರುವ ಕಾರಣಗಳು ಇಂತಿವೆ.

ಕಡಿಮೆ ವಯಸ್ಸಿಗೇ ವಿವಾಹ: ನಮ್ಮಲ್ಲಿ ಮದುವೆಗೆ ಗಂಡಿಗೆ 21 ಮತ್ತು ಹೆಣ್ಣಿಗೆ 18 ವಯಸ್ಸು ಎಂದು ನಿಗದಿಪಡಿಸಲಾಗಿದೆಯೇನೋ ನಿಜ. ಆದರೆ, ಸಾಮಾನ್ಯವಾಗಿ ಈಗಲೂ ಹಳ್ಳಿಗಳಲ್ಲಿ 18 ವರ್ಷದೊಳಗೇ ಹೆಣ್ಣುಮಕ್ಕಳ ಮದುವೆ ಮಾಡುವ ಪ್ರಕರಣಗಳು ಕಡಿಮೆಯೇನಿಲ್ಲ. ಇನ್ನು, ಕೆಲವು ವಿವಾಹಗಳು ಪ್ರಾಪ್ತ ವಯಸ್ಸಿಗೆ ನಡೆಯುತ್ತವೆಯಾದರೂ ಮದುವೆಯಾದ ಬಳಿಕ ಅವರನ್ನು ಉದ್ಯೋಗಕ್ಕೆ ಕಳುಹಿಸುವ ಗಂಡಸರ ಪ್ರಮಾಣ ಕಡಿಮೆ. ವಿಚಿತ್ರವೆಂದರೆ, ನಗರಪ್ರದೇಶಗಳಲ್ಲೂ ಇಂಥ ಪ್ರವೃತ್ತಿ ಕಂಡುಬರುತ್ತಿದೆ. ಹುಡುಗಿ ಉನ್ನತ ಶಿಕ್ಷಣ ಪಡೆದು ಉತ್ತಮ ಉದ್ಯೋಗದಲ್ಲಿದ್ದರೂ ಮದುವೆ ಬಳಿಕ ಕೆಲಸ ಬಿಟ್ಟು, ಮನೆನಿರ್ವಹಣೆಯನ್ನಷ್ಟೇ ನೋಡಿಕೊಳ್ಳಬೇಕಾಗುತ್ತದೆ. ಅದೆಷ್ಟೋ ಹುಡುಗರಂತೂ ‘ಕೆಲಸ ತೊರೆದರಷ್ಟೇ ಮದುವೆ’ ಎಂಬ ಷರತ್ತನ್ನು ವಿವಾಹದ ಮುಂಚೆಯೇ ಹಾಕಿಬಿಡುತ್ತಾರೆ. ಪರಿಣಾಮ, ಜ್ಞಾನ, ಕೌಶಲ ಇರುವ ಮಹಿಳೆಯರು ಉದ್ಯೋಗ ಕ್ಷೇತ್ರದಿಂದ ತನ್ಮೂಲಕ ಸ್ವಾವಲಂಬಿ ಬದುಕಿನಿಂದ ದೂರವುಳಿಯುವ ಸನ್ನಿವೇಶ ನಿರ್ವಣವಾಗುತ್ತಿದೆ. ಅದೇ ಹಳ್ಳಿಗಳಲ್ಲಿ ಈ ಸಮಸ್ಯೆಯಿಂದ ದುಡಿಯುವ ಮಾನವ ಸಂಪನ್ಮೂಲ ಕಡಿಮೆಯಾಗಿ ಕೃಷಿ ಸೇರಿದಂತೆ ಹಲವು ಕ್ಷೇತ್ರಗಳು ಸೊರಗುತ್ತಿವೆ.

ಸಂತಾನ: ಮಕ್ಕಳಾದ ನಂತರ ವೃತ್ತಿಜೀವನದಿಂದ ಒಂದಿಷ್ಟು ಬಿಡುವು ತೆಗೆದುಕೊಳ್ಳುವುದು ಹೆಣ್ಣುಮಕ್ಕಳಿಗೆ ಅವಶ್ಯವೂ ಹೌದು, ಅನಿವಾರ್ಯವೂ ಹೌದು. ಆದರೆ, ಹೀಗೆ ವೃತ್ತಿಬಿಡುವು ತೆಗೆದುಕೊಳ್ಳುತ್ತಿರುವ ಮಹಿಳೆಯರ ಪೈಕಿ ದೊಡ್ಡಪ್ರಮಾಣದಲ್ಲಿ ವಾಪಸ್ ವೃತ್ತಿ ಮುಂದುವರಿಸುತ್ತಿಲ್ಲ ಎಂಬುದು ಕಳವಳಕಾರಿ ಅಂಶ. ಶಿಶುವಿನ ಜನನದ ಬಳಿಕ ಲಾಲನೆ-ಪೋಷಣೆ ಮಾಡುತ್ತ ಅದರ ಜವಾಬ್ದಾರಿ ನಿರ್ವಹಿಸುವುದರಲ್ಲಿಯೇ ಮಹಿಳೆಯರು ಸುಸ್ತಾಗಿ ಹೋಗುತ್ತಾರೆ. ವೈಯಕ್ತಿಕ ಬದುಕು-ವೃತ್ತಿ ಬದುಕು ಎರಡನ್ನೂ ಸಮತೋಲನ ಮಾಡಿಕೊಂಡು ಮುಂದೆ ಸಾಗುತ್ತಿರುವ ಮಹಿಳೆಯರ ಸಂಖ್ಯೆಗೆ ಕೊರತೆಯಿಲ್ಲ. ಆದರೂ, ಶಿಶು ಜನನದ ಬಳಿಕ ಉದ್ಯೋಗಕ್ಕೆ ಬೆನ್ನು ತಿರುಗಿಸುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಿರುವುದಂತೂ ನಿಚ್ಚಳ.

ಉದ್ಯೋಗದಲ್ಲಿ ಅಸಂತುಷ್ಟಿ: ಇಂಟರ್​ನ್ಯಾಷನಲ್ ಲೇಬರ್ ಆರ್ಗನೈಸೇಶನ್ ವರದಿಯ ಪ್ರಕಾರ, ಭಾರತದಲ್ಲಿ ಉದ್ಯೋಗರಂಗದಲ್ಲಿರುವ ಮಹಿಳೆಯರ ಪೈಕಿ ಹೆಚ್ಚಿನವರು ತಮ್ಮ ಕೆಲಸದಲ್ಲಿ ಸಂತೃಪ್ತಿ ಕಂಡುಕೊಳ್ಳುತ್ತಿಲ್ಲ. ಗಟ್ಟk ಠಚಠಿಜಿಠ್ಛಚ್ಚಠಿಜಿಟ್ಞ ಪಟ್ಟಿಯಲ್ಲಿ 133 ರಾಷ್ಟ್ರಗಳ ಪೈಕಿ ಭಾರತದ ಸ್ಥಾನ 121ನೆಯದ್ದಾಗಿದೆ ಎಂದರೆ ಪರಿಸ್ಥಿತಿಯ ಅಂದಾಜು ಆಗಬಹುದು. ಮಹಿಳೆಯರು ಕೆಲಸ ಬಿಡಲು ಇದೂ ಕೂಡ ಮುಖ್ಯ ಕಾರಣ. ಕಚೇರಿಗಳಲ್ಲಿ ಸೂಕ್ತ ಸಹಕಾರ, ಬೆಂಬಲ ಸಿಗದಿರುವುದು, ಪುರುಷ ಸಿಬ್ಬಂದಿಯ ದಬ್ಬಾಳಿಕೆ ಅಥವಾ ವಿಚಿತ್ರ ವರ್ತನೆ ಕೆಲಸ ತ್ಯಜಿಸಲು ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ಮಹಿಳೆಯರಿಗೆ ಉದ್ಯೋಗಪೂರಕ ವಾತಾವರಣ ಕಲ್ಪಿಸಿಕೊಡಲು ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಶ್ರಮಿಸಬೇಕಿದೆ ಎಂದು ವರದಿ ಹೇಳಿದೆ. ಇನ್ನೊಂದೆಡೆ, ಕೃಷಿಯಿಂದ ದೊಡ್ಡ ಸಮುದಾಯವೇ ವಿಮುಖವಾಗುತ್ತಿರುವಾಗ ಈ ಪೈಕಿ ಮಹಿಳೆಯರ ಪ್ರಮಾಣವೂ ದೊಡ್ಡದಿದೆ. ಕೃಷಿಯಲ್ಲಿ ಕಡಿಮೆಯಾಗುತ್ತಿರುವ ಲಾಭ, ನಗರಜೀವನದ ಆಕರ್ಷಣೆ, ಹೊಸ ಅವಕಾಶಗಳನ್ನು ಅರಸಿಕೊಂಡು ಹೋಗುವುದು ಸೇರಿದಂತೆ ಹಲವು ಕಾರಣಗಳಿಂದ ಮಹಿಳೆಯರು ಗ್ರಾಮೀಣ ಉದ್ಯೋಗಗಳಿಂದ ದೂರವಾಗುತ್ತಿದ್ದಾರೆ.

ಭದ್ರತೆಯ ಕೊರತೆ: ಮಹಿಳೆಯರು ಮತ್ತೆ ಮನೆಗೆ ಸೀಮಿತವಾಗಿ ಉಳಿದುಕೊಳ್ಳಲು ಭದ್ರತೆಯ ಕೊರತೆ ಪ್ರಮುಖ ಕಾರಣವಾಗಿದೆ. ನಗರ ಮತ್ತು ಗ್ರಾಮೀಣ ಎರಡೂ ಪ್ರದೇಶದಲ್ಲಿ ಈ ಸಮಸ್ಯೆಯಿದೆ. ಈ ಬಗ್ಗೆ ಈಗಾಗಲೇ ಹಲವು ಬಾರಿ ಸಾರ್ವತ್ರಿಕ ಚರ್ಚೆ ನಡೆದು, ಮಾಧ್ಯಮಗಳಲ್ಲಿ ಚರ್ಚೆಯಾಗಿದ್ದರೂ ಹೇಳಿಕೊಳ್ಳುವಂಥ ಪ್ರಯೋಜನವಾಗಿಲ್ಲ.

ಹೀಗೆ ಒಂದೆಡೆ ಅಭಿವೃದ್ಧಿಯೆಡೆ ದಾಪುಗಾಲು ಹಾಕುತ್ತ ಅದರಲ್ಲಿ ಮಹಿಳೆಯರ ಕೊಡುಗೆ ಗಮನ ಸೆಳೆಯುತ್ತಿರುವಾಗಲೇ ಒಳಸುಳಿಯಂತೆ ಈ ಅಪಸವ್ಯಗಳು ಕಂಡುಬರುತ್ತಿವೆ. ಇಂದಿನ ಕಾಲಮಾನದಲ್ಲಿ ಗಂಡು-ಹೆಣ್ಣು ಸಮಾನ ಎಂಬ ಸೂತ್ರದಡಿ ನಡೆಯುತ್ತಿದ್ದು, ಸಮಗ್ರ ಅಭಿವೃದ್ಧಿಗೆ ಅದು ಪೂರಕ ಕೂಡ ಹೌದು. ಆದರೆ, ಇಂಥ ಸಮಸ್ಯೆಗಳನ್ನು ಆಯಾ ಕಾಲಘಟ್ಟದಲ್ಲೇ ನಿವಾರಿಸಿಕೊಳ್ಳಲು ಮುಂದಾಗಬೇಕು. ಈ ಬೆಳವಣಿಗೆಗಳಿಂದ ದೇಶದ ದುಡಿಯುವ ಮಾನವ ಸಂಪನ್ಮೂಲ ಕಡಿಮೆಯಾಗುತ್ತದೆ ಅಲ್ಲದೆ ಸಮಾಜದಲ್ಲಿ ಮತ್ತೆ ಅಸಮಾನತೆಯ ಭೂತ ಸೃಷ್ಟಿಯಾಗುತ್ತದೆ. ಯಾವ ನಿಟ್ಟಿನಲ್ಲಿ ಅವಲೋಕಿಸಿದರೂ ಇಷ್ಟೊಂದು ಸಂಖ್ಯೆಯಲ್ಲಿ ಮಹಿಳೆಯರು ಉದ್ಯೋಗ ತೊರೆಯುತ್ತಿರುವುದು ಉತ್ತಮ ಲಕ್ಷಣವಲ್ಲ. ಈ ಸಮಸ್ಯೆಗೆ ಇರುವ ಕಾರಣಗಳನ್ನೇನೋ ಪಟ್ಟಿ ಮಾಡಲಾಗಿದೆ. ಆದರೆ, ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾದರೆ ಇಡೀ ಸಮುದಾಯ ಶ್ರಮಿಸಬೇಕಿದೆ. ಸಾಮಾಜಿಕ, ಭದ್ರತಾ ದೋಷಗಳನ್ನು ನಿವಾರಿಸಿ ಕೆಲಸದ ಸ್ಥಳದಲ್ಲೂ ಪೂರಕ ವಾತಾವರಣ ಕಲ್ಪಿಸಿ ಮಹಿಳೆಯರು ನಿರಾಂತಕವಾಗಿ ಉದ್ಯೋಗದಲ್ಲಿ ತೊಡಗುವಂತೆ ಮಾಡಬೇಕಿದೆ. ಜತೆಗೆ, ಗ್ರಾಮೀಣ ಪ್ರದೇಶದಲ್ಲಿ ಸಾಂಪ್ರದಾಯಿಕ ಕಸುಬುಗಳು ಅಳಿದರೆ ಒಂದು ಸಂಸ್ಕೃತಿಯೇ ನಶಿಸಿದಂತೆ. ಆ ನಿಟ್ಟಿನಲ್ಲೂ ಗಮನವಹಿಸಿ ಸಾಂಪ್ರದಾಯಿಕ ಕುಲಕಸಬುಗಳಿಗೆ ಪ್ರೋತ್ಸಾಹ, ನೆರವು ಕೊಟ್ಟು ಹೆಣ್ಣುಮಕ್ಕಳು ಆ ಕ್ಷೇತ್ರದಲ್ಲಿ ಹೆಚ್ಚೆಚ್ಚು ತೊಡಗುವಂತೆ ಮಾಡಬೇಕಿದೆ. ಆಗಲೇ, ಮಹಿಳಾ ಸಬಲೀಕರಣದ ಕನಸು ನನಸಾಗಲು ಸಾಧ್ಯ. ದೇಶ ಅಭಿವೃದ್ಧಿಯ ಹಾದಿಯಲ್ಲಿ ಮುಂದಡಿ ಇಡಲು ಶಕ್ಯ. ಈಗ ಮೊಳಗಿರುವ ಎಚ್ಚರಿಕೆ ಗಂಟೆಗೆ ಜಾಗೃತರಾಗಿ, ಪರಿಹಾರದ ನಿಟ್ಟಿನಲ್ಲಿ ಮುಂದೆ ಸಾಗಬೇಕಿದೆ. ಶಿಥಿಲಗೊಳ್ಳುತ್ತಿರುವ ಸಾಮಾಜಿಕ ವ್ಯವಸ್ಥೆಯನ್ನು ಮತ್ತೆ ಕಟ್ಟಿ, ಗಂಡು-ಹೆಣ್ಣು ಸಮಾಜದ ಆಧಾರಸ್ತಂಭಗಳು ಎಂದು ಸಾಬೀತು ಮಾಡಬೇಕಿದೆ. ಸ್ತ್ರೀಶಕ್ತಿಯನ್ನು ಪೂಜಿಸುವ ನಾಡಿನಲ್ಲಿ ಹೆಣ್ಣು ಮತ್ತೆ ಸಮಸ್ಯೆಗಳಿಂದ ನಲುಗದಿರಲಿ ಎಂಬುದೇ ಈ ಹೊತ್ತಿನ ಆಶಯ, ಕಳಕಳಿ.

(ಲೇಖಕರು ರಾಷ್ಟ್ರೀಯ ಉರ್ದು ವಿಕಾಸ ಪರಿಷದ್​ನ ಉಪಾಧ್ಯಕ್ಷರು, ಮಧ್ಯಪ್ರಾಚ್ಯ, ಪಾಕಿಸ್ತಾನ ವಿದ್ಯಮಾನಗಳ ನುರಿತ ವಿಶ್ಲೇಷಕರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಖ್ಯಾತ ಬರಹಗಾರರು)

Leave a Reply

Your email address will not be published. Required fields are marked *

Back To Top