Wednesday, 17th October 2018  

Vijayavani

ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ -  ಸಂಜೆ 6.15ರಿಂದ 6.45ರೊಳಗೆ ಉಕ್ಕಿಹರಿಯಲಿದೆ ಜೀವನದಿ ಕಾವೇರಿ        ಪವಿತ್ರ ತೀರ್ಥಕ್ಕಾಗಿ ಹರಿದು ಬಂದಿದೆ ಭಕ್ತರ ದಂಡು - ತಲಕಾವೇರಿಯಲ್ಲಿ ಬಿಗಿ ಬಂದೋಬಸ್ತ್​ - ಸಿಎಂ ಕುಮಾರಸ್ವಾಮಿ ಉಪಸ್ಥಿತಿ        ನಿಗದಿಯಂತೆ ಬಾಗಿಲು ತೆರೆದ ಅಯ್ಯಪ್ಪ ದೇಗುಲ - ಮಹಿಳಾ ಭಕ್ತರಿಗೆ ಸಿಗಲೇ ಇಲ್ಲ ಮಣಿಕಂಠನ ದರ್ಶನ        ಶಬರಿಮಲೆಯಲ್ಲಿ ಭಾರೀ ಹಿಂಸಾಚಾರ ಹಿನ್ನೆಲೆ - ಪಂಪಾ, ನೀಲಕ್ಕಲ್ ಸೇರಿ 4 ಕಡೆ ನಿಷೇಧಾಜ್ಞೆ ಜಾರಿ - 144 ಸೆಕ್ಷನ್ ಆದೇಶ        ಮೀಟೂ ಅಭಿಯಾನಕ್ಕೆ ಮೊದಲ ವಿಕೆಟ್‌ ಪತನ - ಕೇಂದ್ರ ಸಚಿವ ಸ್ಥಾನಕ್ಕೆ ಅಕ್ಬರ್‌ ರಾಜೀನಾಮೆ       
Breaking News

ಭಾರತದ ಪ್ರಥಮಪ್ರಜೆ ರಾಮನಾಥ

Friday, 21.07.2017, 3:03 AM       No Comments

ಕಳೆದ ಕೆಲ ತಿಂಗಳುಗಳಿಂದ ವ್ಯಾಪಕ ಕುತೂಹಲ ಮೂಡಿಸಿದ್ದ ರಾಷ್ಟ್ರಪತಿ ಚುನಾವಣೆಗೆ ತೆರೆ ಬಿದ್ದಿದೆ. ಹೊಸ ಸಾರಥಿಯಾಗಿ ರಾಷ್ಟ್ರಪತಿ ಭವನಕ್ಕೆ ರಾಮನಾಥ ಕೋವಿಂದ ಆಗಮಿಸಲಿದ್ದಾರೆ. ಹೊಸ ಯಜಮಾನನನ್ನು ಸ್ವಾಗತಿಸಲು ರಾಷ್ಟ್ರಪತಿ ಭವನವೂ ಸಜ್ಜಾಗಿದೆ.

 

ದೇಶದ 14ನೇ ರಾಷ್ಟ್ರಪತಿಯಾಗಿ ರಾಮನಾಥ ಕೋವಿಂದ ಆಯ್ಕೆಯಾಗಿದ್ದಾರೆ. ಚಲಾವಣೆಯಾದ ಮತಗಳ ಪೈಕಿ ಶೇ.65ಕ್ಕೂ ಅಧಿಕ ಮತಗಳನ್ನು ಪಡೆದು ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. 71 ವರ್ಷದ ಕೋವಿಂದ, ದೇಶದ ಮೊದಲ ಬಿಜೆಪಿ ಮೂಲದ ರಾಷ್ಟ್ರಪತಿಯಾಗಿರುವುದು ಮಾತ್ರವಲ್ಲದೆ, ದೇಶದ ಅತ್ಯುನ್ನತ ಹುದ್ದೆ ಅಲಂಕರಿಸಿದ ಎರಡನೇ ದಲಿತ ವ್ಯಕ್ತಿಯಾಗಿದ್ದಾರೆ. ಕೋವಿಂದ 7,02,044 ಮತ ಮೌಲ್ಯದೊಂದಿಗೆ 2,930 ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿ ಲೋಕಸಭೆಯ ಮಾಜಿ ಸ್ಪೀಕರ್ ಆಗಿದ್ದ ಮೀರಾ ಕುಮಾರ್ 3,67,314 ಮತಮೌಲ್ಯಗಳೊಂದಿಗೆ 1,844 ಮತ ಪಡೆದಿದ್ದಾರೆ ಎಂದು ಚುನಾವಣಾಧಿಕಾರಿ ಅನೂಪ್ ಮಿಶ್ರಾ ಘೋಷಿಸಿದರು. ಕೆಲವು ರಾಜ್ಯಗಳಲ್ಲಿ ಎನ್​ಡಿಎ ಅಭ್ಯರ್ಥಿ ಕೋವಿಂದ ಪರ ವಿಪಕ್ಷಗಳು ಒಲವು ತೋರಿದ್ದರಿಂದ ಅಡ್ಡ ಮತದಾನ ನಡೆದಿದೆ ಎನ್ನಲಾಗಿದೆ. ಉಪರಾಷ್ಟ್ರಪತಿ ಹುದ್ದೆಗೆ ಆಗಸ್ಟ್ 5ರಂದು ಚುನಾವಣೆ ನಡೆಯಲಿದ್ದು, ಬಿಜೆಪಿ ನೇತೃತ್ವದ ಎನ್​ಡಿಎ ವೆಂಕಯ್ಯ ನಾಯ್ಡು ಅವರನ್ನು ವಿಪಕ್ಷಗಳು ಪಶ್ಚಿಮ ಬಂಗಾಳದ ಮಾಜಿ ಗವರ್ನರ್ ಗೋಪಾಲಕೃಷ್ಣ ಗಾಂಧಿ ಅವರನ್ನು ಕಣಕ್ಕಿಳಿಸಿವೆ.

ರಾಷ್ಟ್ರಪತಿ ಚುನಾವಣೆಯಲ್ಲಿ ಒಟ್ಟಾರೆ ಶೇ. 99 ರಷ್ಟು ಮತದಾನ ನಡೆದು ದಾಖಲೆ ನಿರ್ವಣವಾಗಿತ್ತು. ದೇಶಾದ್ಯಂತ ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶ ಹಾಗೂ ಸಂಸತ್ ಭವನ ಸೇರಿ ಒಟ್ಟು 32 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಒಟ್ಟು 4,109 ಶಾಸಕರು ಮತ್ತು 771 ಸಂಸದರು ಮತದಾನ ಮಾಡಲು ಅರ್ಹತೆ ಪಡೆದಿದ್ದರು. ಇವರ ಪೈಕಿ 4,083 ಶಾಸಕರು ಮತ್ತು 768 ಸಂಸದರು ಮತದಾನದಲ್ಲಿ ಪಾಲ್ಗೊಂಡಿದ್ದರು.

ಕೋವಿಂದಗೆ 522 ಸಂಸದರ ಮತ, ಮೀರಾಗೆ 225 ಸಂಸದರ ಬೆಂಬಲ

ರಾಷ್ಟ್ರಪತಿ ಚುನಾವಣೆಯಲ್ಲಿ ಎನ್​ಡಿಎ ಅಭ್ಯರ್ಥಿ ರಾಮನಾಥ ಕೋವಿಂದ ಅವರಿಗೆ 522 ಸಂಸದರ ಮತಗಳು ದೊರೆತಿದ್ದರೆ, ಕಾಂಗ್ರೆಸ್ ನೇತೃತ್ವದ ಯುಪಿಎ ಅಭ್ಯರ್ಥಿ ಮೀರಾ ಕುಮಾರ್​ಗೆ 225 ಮತಗಳು ಲಭಿಸಿವೆ.

ಸಂಸದರ ಮತಗಳ ಒಟ್ಟು ಮೌಲ್ಯ

5,49,408

ಶಾಸಕರ ಮತಗಳ ಮೌಲ್ಯ

5,49,495

ಶಾಸಕರು ಮತ್ತು ಸಂಸದರ

ಮತಗಳ ಒಟ್ಟು ಮೌಲ್ಯ

10,98,903.

 ನೂತನ ರಾಷ್ಟ್ರಪತಿಯಾಗಿ ರಾಮನಾಥ ಕೋವಿಂದ ಆಯ್ಕೆಯಾಗಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರ ಎದುರು ಸ್ಪರ್ಧಿಸಿದ್ದ ಮೀರಾ ಕುಮಾರ್ ಪರಾಭವಗೊಂ ಡಿದ್ದಾರೆ. ಚುನಾವಣಾ ರಾಜಕಾರಣದಲ್ಲಿ ಸ್ಪರ್ಧೆ ಇರುತ್ತದೆ. ಒಬ್ಬರು ಗೆದ್ದರೆ ಮತ್ತೊಬ್ಬರು ಸೋಲುವುದು ಸಾಮಾನ್ಯ.

| ಸಿದ್ದರಾಮಯ್ಯ ಮುಖ್ಯಮಂತ್ರಿ

 

ಕರ್ನಾಟಕದಲ್ಲಿ ಪಕ್ಷೇತರರ ಮತ ಪಡೆದ ಕೋವಿಂದ

ಕಳೆದ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿದ್ದ ಕರ್ನಾಟಕದ ಬಹುತೇಕ ಪಕ್ಷೇತರ ಶಾಸಕರು ಈ ಬಾರಿಯ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್​ಡಿಎ ಅಭ್ಯರ್ಥಿ ಪರವಾಗಿ ನಿಂತಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಒಂದೊಮ್ಮೆ ಪಕ್ಷೇತರರು ಕಾಂಗ್ರೆಸ್ ಪರವಾಗಿದ್ದರೆ, ರಾಜ್ಯದಲ್ಲಿಯೂ ಅಡ್ಡ ಮತದಾನವಾಗಿರುವ ಸಾಧ್ಯತೆಯಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್​ನ ಯಾವುದೇ ಶಾಸಕರ ಮತ ಅಸಿಂಧು ಎಂದಾಗಿಲ್ಲ ಎಂದಾದರೆ ಓರ್ವ ಪಕ್ಷೇತರರಿಂದ ಕಾಂಗ್ರೆಸ್ ಅಭ್ಯರ್ಥಿಗೆ ಮತ ಬಂದಿರುವ ಸಾಧ್ಯತೆಯಿದೆ.

 ಉತ್ತರಾಧಿಕಾರಿಗೆ ಪ್ರಣಬ್ ಅಭಿನಂದನೆ

ಭಾರತದ ಮುಂದಿನ ರಾಷ್ಟ್ರಪತಿಯಾಗಿ ಕೋವಿಂದ ಆಯ್ಕೆಯಾಗಿರುವುದನ್ನು ಸ್ವಾಗತಿಸಿರುವ ನಿರ್ಗಮಿತ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಕೋವಿಂದ ಅವರಿಗೆ ಶುಭ ಹಾರೈಸಿದ್ದಾರೆ.

 ರಾಜ್ಯದಲ್ಲಿನ ಪಕ್ಷಗಳ ಬಲಾಬಲ

ಕಾಂಗ್ರೆಸ್-124 ಜೆಡಿಎಸ್-40(ಇಬ್ಬರು ಗೈರು) ಬಿಜೆಪಿ- 44 ಇತರರು- 16 ರಾಮನಾಥ ಕೋವಿಂದ ಪರ ಮತ- 56 ಮೀರಾ ಕುಮಾರ್ ಪರ ಮತ- 163 ಅಸಿಂಧು ಮತ- 3

 ಪ್ರಣಬ್​ಗೆ 25ರಂದು ಬೀಳ್ಕೊಡುಗೆ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಧಿಕಾರಾವಧಿ ಜು 24ರಂದು ಪೂರ್ಣಗೊಳ್ಳಲಿದ್ದು, ಜು.25ರಂದು ಸಂಸತ್ತಿನ ಸೆಂಟ್ರಲ್ ಹಾಲ್​ನಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಲಿದೆ. ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಪಾಲ್ಗೊಳ್ಳಲಿರುವ ಈ ಕಾರ್ಯಕ್ರಮದಲ್ಲಿ ಎಲ್ಲ ಸಂಸದರ ಸಹಿಗಳುಳ್ಳ ಪುಸ್ತಕ ಮತ್ತು ಸ್ಮರಣಿಕೆಯನ್ನು ನೀಡಿ ಮುಖರ್ಜಿಯವರನ್ನು ಸನ್ಮಾನಿಸಲಾಗುವುದು.

ಬಿಜೆಪಿ ಹಾದಿ ಸಲೀಸು

ಬಿಜೆಪಿಗೆ ಲೋಕಸಭೆಯಲ್ಲಿ ಬಹುಮತವಿದೆ. 17 ರಾಜ್ಯಗಳಲ್ಲೂ ಬಿಜೆಪಿ ಆಡಳಿತವಿದೆ. ಈಗ ರಾಮನಾಥ ಕೋವಿಂದ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವುದರಿಂದ ಕೇಂದ್ರ ಸರ್ಕಾರಕ್ಕೆ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯಕವಾಗಲಿದೆ. ಭೂಸ್ವಾಧೀನ ಮಸೂದೆ ಮತ್ತೆ ಜಾರಿಗೆ ತರುವ ಸಾಧ್ಯತೆಯಿದೆ. 3 ಬಾರಿ ಸುಗ್ರೀವಾಜ್ಞೆ ಜಾರಿಗೊಳಿಸಿದ ಹೊರತಾಗಿಯೂ ಇದನ್ನು ಕೈಬಿಡಬೇಕಾಯಿತು. ಲೋಕಸಭೆ, ವಿಧಾನಸಭೆ ಚುನಾವಣೆಯನ್ನು ಜತೆಯಲ್ಲಿಯೇ ಮಾಡುವುದಕ್ಕಾಗಿ ಅಗತ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳ ಬಹುದು. ಚುನಾವಣೆಗಳಲ್ಲಿ ರಾಜ್ಯದ ಫಂಡಿಂಗ್ ಬಗ್ಗೆ ಸಾಕಷ್ಟು ವಿವಾದಗಳಿವೆ. ಇದರ ಪರಿಹಾರಕ್ಕಾಗಿ ಹೊಸ ಕಾನೂನು ಜಾರಿಗೆ ತರುವ ಸಾಧ್ಯತೆಯಿದೆ.

ಪ್ರಜಾಪ್ರಭುತ್ವದ ಅದ್ಭುತ

ರಾಷ್ಟ್ರಪತಿ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿದ ಬಳಿಕ ಗುರುವಾರ ನವದೆಹಲಿಯಲ್ಲಿ ಪ್ರತಿಕ್ರಿಯಿಸಿದ ನಿಯೋಜಿತ ರಾಷ್ಟ್ರಪತಿ ರಾಮನಾಥ ಕೋವಿಂದ, ಇದೊಂದು ಪ್ರಜಾಪ್ರಭುತ್ವದ ಅದ್ಭುತ ಎಂದು ಬಣ್ಣಿಸಿದ್ದಾರೆ. ದೇಶದ ಒಳಿತಿಗಾಗಿ ಕೆಲಸ ಮಾಡಲು ಉತ್ಸುಕನಾಗಿದ್ದು, ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವುದಾಗಿ ಹೇಳಿದ್ದಾರೆ. ‘‘ಇದೊಂದು ಅತ್ಯಂತ ಭಾವನಾತ್ಮಕ ದಿನವಾಗಿದೆ. ಇಂದು (ಗುರುವಾರ) ದೆಹಲಿಯಲ್ಲಿ ಬೆಳಗ್ಗೆಯಿಂದ ಮಳೆ ಸುರಿಯುತ್ತಿದೆ. ಈ ವಾತಾವರಣದಲ್ಲಿ ನನಗೆ ಬಾಲ್ಯದ ನನ್ನ ಊರು ನೆನಪಾಗುತ್ತಿದೆ. ಮಣ್ಣಿನ ಗೋಡೆ ಮತ್ತು ಹುಲ್ಲಿನ ಛಾವಣಿಯಿಂದ ನೀರು ಸೋರುತ್ತಿದ್ದರೆ ನಾನು ಮತ್ತು ಸೋದರಿ ಗೋಡೆಯ ಮೂಲೆಯಲ್ಲಿ ನಿಂತು ಈ ಮಳೆ ಯಾವಾಗ ನಿಲ್ಲುವುದು ಎಂದು ಯೋಚಿಸುತ್ತಿದ್ದೆವು. ಹೀಗೆ ಅದೆಷ್ಟೋ ರಾಮನಾಥ ಕೋವಿಂದರು ಗದ್ದೆಯಲ್ಲಿ ಕೃಷಿ ಕೆಲಸ ಮಾಡುತ್ತ, ಕೂಲಿ ಮಾಡುತ್ತ ಮಳೆಯಲ್ಲಿ ನೆನೆಯುತ್ತಿರಬಹುದು, ಜೀವನ ಸಾಗಿಸಲು ಸಂಘರ್ಷ ಪಡುತ್ತಿರಬಹುದು. ಪರೌಂಖ್ ಗ್ರಾಮದ ಈ ಕೋವಿಂದ ಈ ಎಲ್ಲ ಬಡವರ ಪ್ರತಿನಿಧಿಯಾಗಿ ರಾಷ್ಟ್ರಪತಿ ಭವನಕ್ಕೆ ಹೋಗುತ್ತಿದ್ದಾನೆ. ಈ ಹುದ್ದೆ (ರಾಷ್ಟ್ರಪತಿ)ಗೆ ಆಯ್ಕೆಯಾಗುವುದು ನನ್ನ ಗುರಿಯಾಗಿರಲಿಲ್ಲ. ಅಷ್ಟೇ ಅಲ್ಲ, ಎಂದಿಗೂ ರಾಷ್ಟ್ರಪತಿ ಹುದ್ದೆಯ ಕನಸೂ ಕಂಡವನಲ್ಲ. ದೇಶಕ್ಕಾಗಿ ಸಮರ್ಪಣಾ ಭಾವದಿಂದ ಮಾಡಿದ ಸೇವೆ ನನ್ನನ್ನು ಇಷ್ಟು ಎತ್ತರಕ್ಕೆ ಕರೆದುಕೊಂಡು ಬರುತ್ತದೆ ಎಂದು ಊಹಿಸಿರಲಿಲ್ಲ. ಸಂವಿಧಾನದ ರಕ್ಷಣೆ ಹಾಗೂ ಅದರ ಗೌರವವನ್ನು ಮುಂದುವರಿಸಲು ಅತ್ಯಂತ ಪ್ರಾಮಾಣಿಕವಾಗಿ ಮತ್ತು ಕಠಿಣ ಪರಿಶ್ರಮದಿಂದ ಕೆಲಸ ಮಾಡುವೆ. ರಾಷ್ಟ್ರಸೇವೆಯಲ್ಲಿ ನಿರಂತರ ತೊಡಗಿರುವೆ’ ಎಂದು ಕೋವಿಂದ ಅಭಿಪ್ರಾಯಪಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ಪ್ರತಿಸ್ಪರ್ಧಿಯಾಗಿದ್ದ ಮೀರಾ ಕುಮಾರ್ ಅವರಿಗೂ ಕೋವಿಂದ ಧನ್ಯವಾದ ಅರ್ಪಿಸಿದ್ದಾರೆ. ಅದಕ್ಕೂ ಮೊದಲು ಕೋವಿಂದ ಅವರಿಗೆ ಮೀರಾ ಕುಮಾರ್ ಅಭಿನಂದನೆ ಸಲ್ಲಿಸಿದ್ದರು. ಚುನಾವಣೆ ಮುಗಿದಿದ್ದರೂ, ತಾವು ತಮ್ಮ ಮೌಲ್ಯಗಳು ಮತ್ತು ಸಿದ್ಧಾಂತಗಳನ್ನು ಎಂದಿಗೂ ಎತ್ತಿಹಿಡಿಯುವುದಾಗಿ ಮೀರಾ ಹೇಳಿಕೊಂಡಿದ್ದಾರೆ. ಚುನಾವಣೆಯಲ್ಲಿ ಪರಾಜಿತಗೊಂಡ ಮಾತ್ರಕ್ಕೆ ತಾನು ಪ್ರತಿಪಾದಿಸುತ್ತಿರುವ ಪ್ರಜಾಪ್ರಭುತ್ವದ ಮೌಲ್ಯಗಳ ಸಿದ್ಧಾಂತ ಕೊನೆಗೊಳ್ಳುವುದಿಲ್ಲ. ದೇಶಕ್ಕಾಗಿ ಮತ್ತು ಜನರಿಗಾಗಿ ತನ್ನ ಹೋರಾಟ ಮುಂದುವರಿಯಲಿದೆ ಎಂದು ಮೀರಾ ಪ್ರತಿಕ್ರಿಯಿಸಿದ್ದಾರೆ.

 20 ವರ್ಷಗಳ ಒಡನಾಟ ಸ್ಮರಿಸಿದ ಮೋದಿ

ನೂತನ ರಾಷ್ಟ್ರಪತಿಯಾಗಿ ರಾಮನಾಥ ಕೋವಿಂದ ಆಯ್ಕೆಯಾಗುತ್ತಲೇ ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ಮೂಲಕ ಅಭಿನಂದಿಸಿದ್ದಾರೆ. ಕೋವಿಂದ ಅವರಿಗೆ ವಿವಿಧ ರಾಜ್ಯಗಳ ಸಂಸದರು ಮತ್ತು ಶಾಸಕರ ಬೆಂಬಲ ಕಂಡು ಸಂತಸ ವಾಗಿದೆ ಎಂದಿರುವ ಮೋದಿ, ಕೋವಿಂದ್ ಜತೆ ತಮಗೆ ಕಳೆದ 20 ವರ್ಷಗಳಿಂದ ಒಡನಾಟವಿತ್ತು ಎಂದು ಸ್ಮರಿಸಿಕೊಂಡು, ಜತೆಗಿರುವ ಹಳೆಯ ಫೋಟೋ ಒಂದನ್ನು ಟ್ವೀಟ್ ಮಾಡಿದ್ದಾರೆ. ಜತೆಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಅಭ್ಯರ್ಥಿ, ಲೋಕಸಭಾ ಮಾಜಿ ಸ್ಪೀಕರ್ ಮೀರಾ ಕುಮಾರ್ ಅವರಿಗೂ ಅಭಿನಂದನೆ ಸಲ್ಲಿಸಿರುವ ಮೋದಿ, ಅವರು ಚುನಾವಣೆಯಲ್ಲಿ ಪ್ರತಿಪಾದಿಸಿದ ಪ್ರಜಾಪ್ರಭುತ್ವ ಮೌಲ್ಯಗಳ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

 ಗೆಲುವಿನ ನಂತರ ಕೋವಿಂದ ಪ್ರತಿಕ್ರಿಯೆ ದಲಿತ ನಾಯಕನ ಹೋರಾಟದ ಹಾದಿ

ಉತ್ತರಪ್ರದೇಶದ ಕಾನ್ಪುರದ ಡೇರಾಪುರ ತಾಲೂಕಿನ ಪರೋಖ ಗ್ರಾಮದಲ್ಲಿ 1945ರಲ್ಲಿ ಬಡ ಕೃಷಿ ಕುಟುಂಬದಲ್ಲಿ ಮೂವರು ಮಕ್ಕಳಲ್ಲಿ ಕೊನೆಯವರಾಗಿ ಜನಿಸಿದ ರಾಮನಾಥ ಕೊವಿಂದ ಪ್ರಾಥಮಿಕ ಶಿಕ್ಷಣವನ್ನು ಕಾನ್ಪುರದಲ್ಲಿಯೇ ಪೂರ್ಣಗೊಳಿಸಿದರು. ಕಾನ್ಪುರದ ಡಿಎವಿ ಕಾಲೇಜಿನಲ್ಲಿ ಬಿಕಾಂ ಮತ್ತು ಡಿಎವಿ ಲಾ ಕಾಲೇಜಿನಲ್ಲಿ ಎಲ್​ಎಲ್​ಬಿ ಪೂರ್ಣಗೊಳಿಸಿದರು. 1974ರಲ್ಲಿ ಸವಿತಾ ಕೊವಿಂದರನ್ನು ವರಿಸಿದ್ದು, ಇವರಿಗೆ ಓರ್ವ ಪುತ್ರಿ ಮತ್ತು ಓರ್ವ ಪುತ್ರನಿದ್ದಾನೆ. 1971ರಲ್ಲಿ ದೆಹಲಿಯ ಬಾರ್​ಕೌನ್ಸಿಲ್​ನಲ್ಲಿ ಹೆಸರು ನೋಂದಾಯಿಸಿಕೊಂಡರು. 1977-1979ರ ಅವಧಿಯಲ್ಲಿ ದೆಹಲಿ ಹೈಕೋರ್ಟ್​ನಲ್ಲಿ ಕೇಂದ್ರ ಸರ್ಕಾರದ ವಕೀಲರಾಗಿ ಆಯ್ಕೆಯಾದರು. 1980-1993ರ ಅವಧಿಯಲ್ಲಿ ಸುಪ್ರೀಂಕೋರ್ಟ್​ನಲ್ಲಿ ಕೇಂದ್ರದ ಸ್ಟಾಂಡಿಂಗ್ ಕೌನ್ಸಿಲ್​ನಲ್ಲೂ ಸೇವೆಸಲ್ಲಿಸಿದರು.

ಐಎಎಸ್ ಉತ್ತೀರ್ಣರಾಗಿದ್ದರು!: ಎಲ್​ಎಲ್​ಬಿ ಪದವೀಧರರಾದ ರಾಮನಾಥ ಕೊವಿಂದ ಐಎಎಸ್ ಕೋಚಿಂಗ್ ಸಲುವಾಗಿ ದೆಹಲಿಗೆ ಬಂದಿದ್ದರು. ಎರಡು ಬಾರಿ ಪರೀಕ್ಷೆ ಬರೆದು ಅನುತ್ತೀರ್ಣರಾಗಿದ್ದ ಕೊವಿಂದ ಮೂರನೇ ಪ್ರಯತ್ನದಲ್ಲಿ ಉತ್ತೀರ್ಣರಾದರು. ಆದರೆ ಅಖಿಲ ಭಾರತ ಸೇವೆಗಳ ಬದಲಾಗಿ ಕೇಂದ್ರ ಸೇವೆಗಳಿಗೆ ನಿಯೋಜಿಸಿದ್ದರಿಂದ ಸೇವೆಗೆ ಸೇರದೆ ವಕೀಲಿ ವೃತ್ತಿಗೆ ಹಿಂತಿರುಗಿದ್ದರು.

ವಾಜಪೇಯಿಗೆ ಆತ್ಮೀಯರು: ರಾಮನಾಥ ಕೊವಿಂದರು ಅಟಲ್ ಬಿಹಾರಿ ವಾಜಪೇಯಿ ಆತ್ಮೀಯರಲ್ಲಿ ಗುರುತಿಸಿಕೊಂಡಿದ್ದರು. ಆಡ್ವಾಣಿ ಮತ್ತು ರಾಜನಾಥ್ ಸಿಂಗ್ ಜತೆಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. 1977ರಲ್ಲಿ ಪ್ರಧಾನಿಯಾಗಿದ್ದ ಮೊರಾರ್ಜಿ ದೇಸಾಯಿಯವರ ಆಪ್ತ ಕಾರ್ಯದರ್ಶಿಯಾಗಿದ್ದ ಕೊವಿಂದ 1990ರಲ್ಲಿ ಘಾಟಂಪುರ ಕ್ಷೇತ್ರದಿಂದ ಲೋಕಸಭೆ ಚುನಾವಣೆ ಎದುರಿಸಿ ಸೋಲುಂಡಿದ್ದರು. 2007ರಲ್ಲಿ ಉತ್ತರಪ್ರದೇಶದ ಭೋಗನಿಪುರ ಕ್ಷೇತ್ರದಿಂದಲೂ ಸ್ಪರ್ಧಿಸಿ ಸೋತಿದ್ದರು.

ಹಲವು ಜವಾಬ್ದಾರಿಗಳು: ಕೊವಿಂದ 1994ರಿಂದ 2000ದ ಅವಧಿಗೆ ಉತ್ತರ ಪ್ರದೇಶದಿಂದ ಆಯ್ಕೆಯಾಗಿ ರಾಜ್ಯಸಭಾ ಸದಸ್ಯರಾಗಿದ್ದರು. 2000ದಿಂದ 2006ರಲ್ಲಿ ಎರಡನೇ ಅವಧಿಗೆ ರಾಜ್ಯಸಭೆಗೆ ಆಯ್ಕೆಯಾದರು. ಆ ಅವಧಿಯಲ್ಲಿ ಎಸ್​ಸಿ/ಎಸ್ಟಿ ಕಲ್ಯಾಣ, ಗೃಹ ವ್ಯವಹಾರಗಳು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮುಂತಾದ ಸಂಸದೀಯ ಸಮಿತಿಗಳಲ್ಲಿ ಸದಸ್ಯರಾಗಿದ್ದರು. 1998-2002ರವರೆಗೆ ಬಿಜೆಪಿ ದಲಿತ ಮೋರ್ಚಾದ ಅಧ್ಯಕ್ಷರಾಗಿದ್ದರು. ಅಖಿಲ ಭಾರತ ಕೋಲಿ ಸಮಾಜದ ಅಧ್ಯಕ್ಷರೂ ಆಗಿದ್ದರು. ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು, 2002ರಲ್ಲಿ ಅದರ ಸಭೆಯಲ್ಲಿ ಭಾಷಣವನ್ನೂ ಮಾಡಿದ್ದರು. ಲಖನೌನ ಬಿ.ಆರ್. ಅಂಬೇಡ್ಕರ್ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಸದಸ್ಯರಾಗಿ, ಕೋಲ್ಕತ ಐಐಎಂನ ಆಡಳಿತ ಮಂಡಳಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಬಿಜೆಪಿಯ ಪ್ರಧಾನ ಕಾರ್ಯ ದರ್ಶಿಯಾಗಿ ಉತ್ತರಪ್ರದೇಶಕ್ಕೆ ನಿಯೋಜಿಸಲಾಗಿತ್ತು. ಒಂದು ವರ್ಷಕ್ಕಿ ಂತಲೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದರು. 2015ರ ಆಗಸ್ಟ್ 8ರಂದು ಕೋವಿಂದರನ್ನು ಬಿಹಾರದ ರಾಜ್ಯಪಾಲರಾಗಿ ನೇಮಿಸಲಾಯಿತು.

 ಸಮಾಜ ಸೇವೆಯಲ್ಲೂ ಮುಂದು

ಕೊವಿಂದ ಅವರು ಹರಿದ್ವಾರದಲ್ಲಿ ಕುಷ್ಠರೋಗಿಗಳ ಸೇವೆಗೆಂದು ಆರಂಭಿಸಲಾಗಿರುವ ದಿವ್ಯ ಪ್ರೇಮ ಸೇವಾ ಮಿಷನ್​ನ ಆಜೀವ ಸಂರಕ್ಷಕರಾಗಿದ್ದಾರೆ. ಉತ್ತರಪ್ರದೇಶದ ಪರೋಖ ಗ್ರಾಮದಲ್ಲಿರುವ ತಮ್ಮ ಪೂರ್ವಜರ ನಿವಾಸವನ್ನು ಕಲ್ಯಾಣಮಂಟಪದ ರೂಪದಲ್ಲಿ ಬಳಸಲು ದಾನ ಮಾಡಿದ್ದಾರೆ. ವಕೀಲರಾಗಿದ್ದಾಗ ಎಸ್​ಸಿ/ಎಸ್​ಟಿ ಮಹಿಳೆಯರು, ಬಡವರು ಮತ್ತು ಮಹಿಳೆಯರಿಗೆ ದೆಹಲಿಯ ಫ್ರೀ ಲೀಗಲ್ ಏಡ್ ಸೊಸೈಟಿಯ ಮೂಲಕ ಸಹಾಯ ಮಾಡಿದ್ದರು. ಸಂಸದರಾಗಿದ್ದಾಗ ಸಂಸದ ನಿಧಿಯಿಂದ ಗ್ರಾಮೀಣ ಪ್ರದೇಶದ ಶಿಕ್ಷಣಸಂಸ್ಥೆಗಳಲ್ಲಿ ಮೂಲಸೌಕರ್ಯ ಕಲ್ಪಿಸುವ ಮತ್ತು ಶಾಲಾ ಕಟ್ಟಡ ನಿರ್ಮಾಣ ಕಾರ್ಯಕ್ಕೆ ನೆರವು ನೀಡಿದ್ದಾರೆ.

 

ರಾಷ್ಟ್ರಪತಿ ಭವನಕ್ಕೆ ಆಗಮಿಸುವ ಪ್ರಕ್ರಿಯೆ

ಸಣ್ಣ ಹಳ್ಳಿಯಾಗಿತ್ತು ರೈಸಿನಾ ಬೆಟ್ಟ

ರೈಸಿನಾ ಬೆಟ್ಟದ 400 ಎಕರೆ ಭೂಪ್ರದೇಶದಲ್ಲಿ ಬ್ರಿಟಿಷರು ವೈಸ್​ರಾಯ್ ಹೌಸ್ (ಈಗ ರಾಷ್ಟ್ರಪತಿ ಭವನ) ನಿರ್ಮಾಣ ಮಾಡುವ ಮುನ್ನ ಇದು ಬಡರೈತರು ನೆಲೆಸಿದ್ದ ಸಣ್ಣ ಹಳ್ಳಿಯಾಗಿತ್ತು. ಈಗ ಆ ಹಳ್ಳಿಯಲ್ಲಿದ್ದ ಜನರ ನಂತರದ ತಲೆಮಾರಿನ ಮಂದಿ ಪಕ್ಕದ ರಾಜ್ಯಗಳು ಮತ್ತು ದೆಹಲಿಯ ಬೇರೆಡೆ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ರಾಷ್ಟ್ರಪತಿ ಭವನದ ಎಲ್ಲ ಸಿಬ್ಬಂದಿಗೆ ಭವನದ ವ್ಯಾಪ್ತಿಯಲ್ಲೇ ಮನೆಗಳನ್ನು ನೀಡಲಾಗಿದೆ. ಹಾಗೆ ನೋಡಿದರೆ ಇಡೀ ದೆಹಲಿಯಲ್ಲಿ ರಾಷ್ಟ್ರಪತಿ ಭವನ ಎಂಬುದೇ ಒಂದು ಪ್ರತ್ಯೇಕ ಜಗತ್ತು ಎನ್ನುವುದು ಅತಿಶಯದ ಮಾತಲ್ಲ.

 

|ಕೆ. ರಾಘವ ಶರ್ಮ, ನವದೆಹಲಿ

ರಾಷ್ಟ್ರಪತಿ ಚುನಾವಣೆ ಗೆದ್ದಿರುವ ರಾಮನಾಥ ಕೋವಿಂದ, ದೆಹಲಿಯ ಹೃದಯಭಾಗದಲ್ಲಿರುವ ರೈಸಿನಾ ಬೆಟ್ಟದ ರಾಷ್ಟ್ರಪತಿ ಭವನದಲ್ಲಿ 14ನೇ ರಾಷ್ಟ್ರಪತಿಯಾಗಲಿದ್ದಾರೆ. ಭಾರತದ ರಾಷ್ಟ್ರಪತಿಯಾಗಿ ಆಯ್ಕೆಯಾದವರು ರಾಷ್ಟ್ರಪತಿ ಭವನ ಪ್ರವೇಶಿಸುವ ಪ್ರಕ್ರಿಯೆಯೇ ಅತ್ಯಂತ ಕುತೂಹಲದ್ದು ಮತ್ತು ವಿಭಿನ್ನವಾದದ್ದು. ಜುಲೈ 24ರಂದು ಅವಧಿ ಪೂರ್ಣಗೊಳಿಸುತ್ತಿರುವ ಪ್ರಣಬ್ ಮುಖರ್ಜಿ ಅವರು ರಾಮನಾಥ ಕೋವಿಂದರ ಪ್ರಮಾಣವಚನದ ದಿನದಂದು (ಜುಲೈ 25) ರಾಷ್ಟ್ರಪತಿ ಭವನದ ಗಾರ್ಡ್ ಮತ್ತು ಉನ್ನತಾಧಿಕಾರಿಗಳನ್ನು ಕೋವಿಂದ ನಿವಾಸಕ್ಕೆ ಕಳುಹಿಸಿಕೊಡುತ್ತಾರೆ. ಈ ಸಿಬ್ಬಂದಿ ಜತೆಗೆ ಕೋವಿಂದ ರಾಷ್ಟ್ರಪತಿ ಭವನಕ್ಕೆ ಸೇರಿದ ಕಾರಿನಲ್ಲಿ ಸಂಸತ್ತಿಗೆ ತೆರಳುತ್ತಾರೆ. ರಾಷ್ಟ್ರಪತಿ ಪ್ರಮಾಣವಚನ ಕಾರ್ಯಕ್ರಮ ಸಂಸತ್ತಿನ ಸೆಂಟ್ರಲ್ ಹಾಲ್​ನಲ್ಲಿ ಜರುಗುತ್ತದೆ ಮತ್ತು ಪ್ರಧಾನ ಮಂತ್ರಿ, ಕೇಂದ್ರ ಮಂತ್ರಿ ಮಂಡಲದ ಸದಸ್ಯರು, ವಿಪಕ್ಷಗಳ ಮುಖಂಡರು, ರಾಜ್ಯಪಾಲರು ಸೇರಿದಂತೆ ಸಾಂವಿಧಾನಿಕ ಮತ್ತು ಸರ್ಕಾರದ ಉನ್ನತ ಹುದ್ದೆಯಲ್ಲಿರುವ ಎಲ್ಲರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ರಾಮನಾಥರ ಪ್ರಮಾಣವಚನ ಪೂರ್ಣಗೊಳ್ಳುವ ತನಕ ಪ್ರಣಬ್ ಮುಖರ್ಜಿ ಅವರು ರಾಷ್ಟ್ರಪತಿಗಾಗಿ ಮೀಸಲಿಟ್ಟ ಆಸನದಲ್ಲೇ ಆಸೀನರಾಗಿರುತ್ತಾರೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ಪ್ರಮಾಣವಚನ ಬೋಧಿಸಿದ ನಂತರ, ಪ್ರಣಬ್ ಮುಖರ್ಜಿಯವರೇ ರಾಮನಾಥ ಕೋವಿಂದರನ್ನು ಕರೆತಂದು ತಾವು ಕೂತಿದ್ದ ಆಸನದಲ್ಲಿ ಕೂರಿಸುತ್ತಾರೆ. ಅಲ್ಲಿಗೆ ಪ್ರಣಬ್ ರಾಷ್ಟ್ರಪತಿಯಾಗಿ ತಮ್ಮೆಲ್ಲ ಜವಾಬ್ದಾರಿಗಳಿಂದ ಅಧಿಕೃತವಾಗಿ ಮುಕ್ತರಾಗಿ, ಕೋವಿಂದರಿಗೆ ಆ ಜವಾಬ್ದಾರಿಯನ್ನು ನೀಡಿದಂತಾಗುತ್ತದೆ. ತದನಂತರ ಪ್ರಣಬ್ ಮತ್ತು ಕೋವಿಂದ ಇಬ್ಬರನ್ನೂ ನೇರವಾಗಿ ರಾಷ್ಟ್ರಪತಿ ಭವನಕ್ಕೆ ಕರೆದೊಯ್ಯಲಾಗುತ್ತದೆ. ನೂತನ ರಾಷ್ಟ್ರಪತಿಗಳು ಭವನ ಪ್ರವೇಶಿಸುವ ಹಿನ್ನೆಲೆಯಲ್ಲಿ ಕೋವಿಂದರನ್ನು ಭವನದ ಸಿಬ್ಬಂದಿ ‘ಗೌರವರಕ್ಷೆ‘ (‘ಗಾರ್ಡ್ ಆಫ್ ಆನರ್’) ಮೂಲಕ ಸ್ವಾಗತಿಸುತ್ತಾರೆ. ಇದಾದ ಬಳಿಕ, ನಿರ್ಗಮಿತ ರಾಷ್ಟ್ರಪತಿ ಮತ್ತು ಹೊಸ ರಾಷ್ಟ್ರಪತಿ ಇಬ್ಬರಿಗೂ ರಾಷ್ಟ್ರಪತಿ ಭವನದಲ್ಲಿ ಗೌರವಪೂರ್ವಕ ಚಹಾಕೂಟ ಏರ್ಪಡಿಸಲಾಗುತ್ತದೆ, ಸಿಬ್ಬಂದಿ ಪರಿಚಯ ಸೇರಿದಂತೆ ನೂತನ ರಾಷ್ಟ್ರಪತಿಗೆ ರಾಷ್ಟ್ರಪತಿ ಭವನದ ಪರಿಚಯ ಮಾಡಿಕೊಡಲಾಗುತ್ತದೆ. ಈ ಎಲ್ಲ ಪ್ರಕ್ರಿಯೆ ಬಳಿಕ ರಾಷ್ಟ್ರಪತಿ ಭವನವನ್ನು ಪ್ರಣಬ್ ಅಧಿಕೃತವಾಗಿ ತೊರೆಯುತ್ತಾರೆ. ಪ್ರೆಸಿಡೆಂಟ್ ಗಾರ್ಡ್​ಗಳು ಅವರನ್ನು ಗೌರವಾದರದೊಂದಿಗೆ, ಸರ್ಕಾರ ಮಾಜಿ ರಾಷ್ಟ್ರಪತಿಗೆಂದು ಉಚಿತವಾಗಿ ನೀಡುವ ಅಧಿಕೃತ ನಿವಾಸಕ್ಕೆ ಕರೆದುಕೊಂಡು ಹೋಗುತ್ತಾರೆ. ಈ ಸಂದರ್ಭದಲ್ಲಿ ಕೋವಿಂದ ಕೂಡ ಪ್ರಣಬ್​ರಿಗೆ ಸಾಥ್ ನೀಡುತ್ತಾರೆ. ಮಾಜಿ ರಾಷ್ಟ್ರಪತಿ ದಿವಂಗತ ಡಾ. ಎಪಿಜೆ ಅಬ್ದುಲ್ ಕಲಾಂ ನೆಲೆಸಿದ್ದ ನಿವಾಸವನ್ನು ಪ್ರಣಬ್​ರಿಗೆ ನೀಡಲಾಗಿದ್ದು, ಅಲ್ಲಿ ಎಲ್ಲ ಕಾಮಗಾರಿ ಪೂರ್ಣಗೊಂಡು ಪ್ರಣಬ್ ಆಗಮನಕ್ಕೆ ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ಪ್ರಣಬ್ ಪುತ್ರಿ, ಕಾಂಗ್ರೆಸ್ ನಾಯಕಿ ಶರ್ವಿುಷ್ಟ ಮುಖರ್ಜಿ ಅವರೇ ಪ್ರಣಬ್​ರ ಅಗತ್ಯಾನುಸಾರ ಈ ಮನೆಯನ್ನು ಸಜ್ಜುಗೊಳಿಸಿದ್ದಾರೆ ಎನ್ನಲಾಗಿದೆ. ಪ್ರಣಬ್​ರನ್ನು ಅವರ ನಿವಾಸಕ್ಕೆ ಬಿಟ್ಟ ಬಳಿಕ ಅದೇ ಪ್ರೆಸಿಡೆಂಟ್ ಗಾರ್ಡ್​ಗಳು ಕೋವಿಂದರನ್ನು ಮತ್ತೆ ರಾಷ್ಟ್ರಪತಿ ಭವನಕ್ಕೆ ಕರೆತರುತ್ತಾರೆ. ಅಲ್ಲಿಗೆ ರಾಷ್ಟ್ರಪತಿಯಾಗಿ ರಾಮನಾಥ ಕೋವಿಂದರ 5 ವರ್ಷಗಳ ಅಧಿಕಾರಾವಧಿ ಪ್ರಾರಂಭವಾಗುತ್ತದೆ.

 

ಸಂಬಳ-ಸೌಲಭ್ಯಗಳು

ರಾಷ್ಟ್ರಪತಿಗೆ ನೀಡಬೇಕಾದ ಸಂಬಳ, ಸಾರಿಗೆ, ಸೌಲಭ್ಯಗಳನ್ನು 1951ರಲ್ಲಿ ರೂಪಿಸಿದ ‘ದಿ ಪ್ರೆಸಿಡೆಂಟ್ಸ್ ಇಮಾಲ್ಯುಮೆಂಟ್ಸ್ ಅಂಡ್ ಪೆನ್ಷನ್ ಆಕ್ಟ್’ನಲ್ಲಿ ವಿವರಿಸಲಾಗಿದೆ. ( 1951 ಮೇ 13 ರಂದು ರಾಷ್ಟ್ರಪತಿ ಒಪ್ಪಿಗೆ ಪಡೆದು ಅದೇ ಮೇ 17ರಂದು ಭಾರತ ಸರ್ಕಾರದ ಗೆಜೆಟ್​ನಲ್ಲಿ ಪ್ರಕಟವಾಯಿತು.) ಈ ಆಕ್ಟ್​ಗೆ 26-12-85, 1998, 1-1-2006 ಮತ್ತು 30-12-2008 ರಲ್ಲಿ ತಿದ್ದುಪಡಿ ತರಲಾಯಿತು. ಇತ್ತೀಚಿನ ತಿದ್ದುಪಡಿಯ ಪ್ರಕಾರ ರಾಷ್ಟ್ರಪತಿ ಈ ಕೆಳಕಂಡ ಸಂಬಳ-ಸೌಲಭ್ಯಗಳನ್ನು ಹೊಂದಿದ್ದಾರೆ.

 

  • ಸಂಬಳ- ಪ್ರಸ್ತುತ ತಿಂಗಳಿಗೆ 1,50,000 ರೂಪಾಯಿಗಳು.
  • ವಾಸಕ್ಕೆ ನಿರ್ವಹಣಾ ವೆಚ್ಚಸಹಿತ, ಬಾಡಿಗೆರಹಿತವಾಗಿ ಸುಸುಜ್ಜಿತ ಮನೆ(ಬಂಗಲೆ).
  • ಎರಡು ಸಂಪೂರ್ಣ ಉಚಿತ ಸಂಪರ್ಕದ ಟೆಲಿಫೋನ್​ಗಳು (ಒಂದು ಇಂಟರ್​ನೆಟ್ ಮತ್ತು ಬ್ರಾಡ್​ಬ್ಯಾಂಡ್ ಸಂಪರ್ಕಕ್ಕೆ). ಒಂದು ದೇಶಾದ್ಯಂತ ರೋಮಿಂಗ್ ಹೊಂದಿರುವ ಮೊಬೈಲ್.
  • ನಿರ್ವಹಣಾ ವೆಚ್ಚ (ನಿಯಮಕ್ಕೆ ಒಳಪಟ್ಟು) ಸಹಿತ ಒಂದು ಮೋಟಾರ್ ಕಾರ್.
  • ಆಡಳಿತಾತ್ಮಕ ಸಿಬ್ಬಂದಿ ವರ್ಗ: ಒಬ್ಬರು ಖಾಸಗಿ ಕಾರ್ಯದರ್ಶಿ (ಪಿಎಸ್), ಒಬ್ಬರು ಹೆಚ್ಚುವರಿ ಖಾಸಗಿ ಕಾರ್ಯದರ್ಶಿ(ಅಡಿಷನಲ್ ಪಿಎಸ್), ಒಬ್ಬರು ವೈಯಕ್ತಿಕ ಸಹಾಯಕ(ಪಿಎ), ಇಬ್ಬರು ಅಟೆಂಡರ್​ಗಳು ಹಾಗೂ ವರ್ಷಕ್ಕೆ 60,000 ಮೀರದಂತೆ ಕಚೇರಿ ನಿರ್ವಹಣಾ ವೆಚ್ಚ.
  • ಉಚಿತ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆ (ಪತಿ/ ಪತ್ನಿಗೂ ಸಹ) ವ್ಯವಸ್ಥೆ.
  • ವಿಮಾನ, ರೈಲು ಮತ್ತು ಸ್ಟೀಮರ್​ನಲ್ಲಿ ಒಬ್ಬ ವ್ಯಕ್ತಿಯೊಡನೆ ಅತ್ಯುನ್ನತ ದರ್ಜೆಯ ಪ್ರಯಾಣ ಸೌಲಭ್ಯ.

ನಿವೃತ್ತಿಯ ಬಳಿಕ

ರಾಷ್ಟ್ರಪತಿ ಹುದ್ದೆಯ ಅವಧಿ ಪೂರ್ಣಗೊಳಿಸದಿದ್ದರೂ, ‘ದಿ ಪ್ರೆಸಿಡೆಂಟ್ಸ್ ಇಮಾಲ್ಯುಮೆಂಟ್ಸ್ ಅಂಡ್ ಪೆನ್ಷನ್ ಆಕ್ಟ್’ ಪ್ರಕಾರ ಈ ಸೌಲಭ್ಯಗಳಿಗೆ ಅರ್ಹರಾಗಿರುತ್ತಾರೆ. ್ಝ್ರತಿ ತಿಂಗಳಿನ ಸಂಬಳದ ಅರ್ಧಭಾಗವು ಪಿಂಚಣಿಯ ರೂಪದಲ್ಲಿ ಪ್ರತಿ ತಿಂಗಳೂ ಸಂದಾಯ. ್ಝಾಡಿಗೆ ರಹಿತ, ನಿರ್ವಹಣಾ ವೆಚ್ಚ ಸಹಿತ ಸುಸಜ್ಜಿತ ಮನೆ. ್ಝಬ್ಬರು ಖಾಸಗಿ ಕಾರ್ಯದರ್ಶಿ(ಪಿಎಸ್), ಒಬ್ಬ ಅಟೆಂಡರ್ ಮತ್ತು ವರ್ಷಕ್ಕೆ 12 ಸಾವಿರ ರೂ. ಮೀರದಂತೆ ಕಚೇರಿ ನಿರ್ವಹಣಾ ವೆಚ್ಚ. ್ಝಂಗಳಿಗೊಮ್ಮೆಯಂತೆ ವರ್ಷಕ್ಕೆ 12 ಬಾರಿ ಓರ್ವ ಸಹಾಯಕನೊಂದಿಗೆ ಪ್ರಥಮ ದರ್ಜೆಯ ವಿಮಾನ, ರೈಲು, ಸ್ಟೀಮರ್ ಪ್ರಯಾಣ. ರಾಷ್ಟ್ರಪತಿ ಭವನದ ಖರ್ಚುವೆಚ್ಚಗಳಿಗಾಗಿಯೇ ಪ್ರತಿ ವರ್ಷದ ಬಜೆಟ್​ನಲ್ಲಿ 22.5 ಕೋಟಿ ರೂಪಾಯಿ ಮೀಸಲಿರಿಸಲಾಗುತ್ತಿದೆ.

 ಘಟಾನುಘಟಿಗಳ ಸಮಾಗಮ

ದೇಶದ ರಾಷ್ಟ್ರಪತಿಯಾಗಿ ಇದುವರೆಗೂ ಕಾರ್ಯನಿರ್ವಹಿಸಿದವರ ಹಿನ್ನೆಲೆ ನೋಡಿದರೆ, ಈ ಹುದ್ದೆಯ ಘನತೆ, ಹಿರಿಮೆ ಮತ್ತು ಪ್ರಭಾವಳಿ ವೇದ್ಯವಾಗುತ್ತದೆ. ದೇಶದ ಪ್ರಪ್ರಥಮ ಚುನಾಯಿತ ರಾಷ್ಟ್ರಪತಿಗಳಾಗಿ ಎರಡು ಅವಧಿಗೆ ಕಾರ್ಯನಿರ್ವಹಿಸಿದ ಡಾ.ರಾಜೇಂದ್ರ ಪ್ರಸಾದ್ ಪ್ರಸಿದ್ಧ ವಕೀಲ ಹಾಗೂ ಸಂವಿಧಾನ ತಜ್ಞರಾಗಿದ್ದರು. ಡಾ.ರಾಧಾಕೃಷ್ಣನ್ ಶ್ರೇಷ್ಠ ತತ್ತ್ವಜ್ಞಾನಿ ಹಾಗೂ ಉತ್ತಮ ಶಿಕ್ಷಕರಾಗಿದ್ದರು. ವರಹ ವೆಂಕಟಗಿರಿ ಕಾರ್ವಿುಕ ನಾಯಕರಾಗಿದ್ದರೆ, ಡಾ.ಅಬ್ದುಲ್ ಕಲಾಂ ಪ್ರಖ್ಯಾತ ಅಣು ವಿಜ್ಞಾನಿಯಾಗಿದ್ದರು. ಬಹುಭಾಷಾ ವಿದ್ವಾಂಸರಾಗಿದ್ದ ಡಾ.ಶಂಕರ ದಯಾಳ ಶರ್ಮ ಉತ್ತಮ ಆಡಳಿತಗಾರರಾಗಿದ್ದರೆ, ಜೇಲ್ ಸಿಂಗ್ ದೇಶದ ಗೃಹ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಪ್ರಣಬ್ ಮುಖರ್ಜಿ ಆರ್ಥಿಕ ತಜ್ಞ ಹಾಗೂ ನುರಿತ ಆಡಳಿತಗಾರರಾಗಿದ್ದರೆ, ಈಗ ಆಯ್ಕೆಯಾಗಿರುವ ನೂತನ ರಾಷ್ಟ್ರಪತಿ ರಾಮನಾಥ ಕೋವಿಂದ ಉತ್ತಮ ನಾಯಕ ಎಂಬ ವರ್ಚಸ್ಸು ಹೊಂದಿದ್ದಾರೆ.

Leave a Reply

Your email address will not be published. Required fields are marked *

Back To Top