Friday, 20th July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

ಭಾರತದ ನಿಲುವಿಗೆ ಸಿಕ್ಕ ಬಲ

Tuesday, 05.09.2017, 3:01 AM       No Comments

ಡೋಕ್ಲಂ ಪ್ರದೇಶದ ಗಡಿಬಿಕ್ಕಟ್ಟಿಗೆ ಸಂಬಂಧಿಸಿ ಭಾರತ ಮತ್ತು ಚೀನಾ ಪರಸ್ಪರ ತೊಡೆತಟ್ಟಿ ನಿಂತಿದ್ದು ಮತ್ತು ಅದು ಸಮರಸನ್ನದ್ಧ ಸ್ಥಿತಿಯಂಥ ಕಾವೇರಿದ ವಾತಾವರಣ ನಿರ್ವಣವಾಗುವುದಕ್ಕೆ ಕಾರಣವಾಗಿದ್ದು ಈಗಾಗಲೇ ಗೊತ್ತಿರುವ ವಿಷಯ. ಭಾರತೀಯ ಸೇನಾಪಡೆಗಳ ಬಿಗಿನಿಲುವು ಮತ್ತು ವ್ಯೂಹಾತ್ಮಕ ಚಟುವಟಿಕೆ, ದೇಶದ ರಾಜತಾಂತ್ರಿಕರು ಮೆರೆದ ಸಮಯಸ್ಪೂರ್ತಿಯ ಕಾರಣದಿಂದಾಗಿ ಡೋಕ್ಲಂ ಬಿಕ್ಕಟ್ಟಿಗೆ ಸಂಬಂಧಿಸಿ ಭಾರತಕ್ಕೆ ಜಯವೇ ಸಿಕ್ಕಿದೆ ಎನ್ನಬೇಕು. ಈ ರಾಜತಾಂತ್ರಿಕ ವಿಜಯವನ್ನು ಬೆನ್ನಿಗಿಟ್ಟುಕೊಂಡು ಚೀನಾಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ, ಅಲ್ಲಿ ಆಯೋಜನೆಯಾಗಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದರ ಜತೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಜತೆಯಲ್ಲಿ ಡೋಕ್ಲಂ ಬಿಕ್ಕಟ್ಟೂ ಸೇರಿದಂತೆ ಹಲವು ವಿಷಯಗಳ ಕುರಿತು ರ್ಚಚಿಸಲಿದ್ದಾರೆ. ಆದರೆ, ಅದಕ್ಕೂ ಮುನ್ನವೇ ಭಾರತಕ್ಕೆ ಮತ್ತೊಂದು ಗಮನಾರ್ಹ ರಾಜತಾಂತ್ರಿಕ ಗೆಲುವು ದಕ್ಕಿದೆ. ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದ್ದ ರಾಷ್ಟ್ರಗಳು ಇದೇ ಮೊದಲ ಬಾರಿಗೆ ಪಾಕ್-ಮೂಲದ ಭಯೋತ್ಪಾದಕ ಸಂಘಟನೆಗಳ ಕುರಿತು ದನಿಯೆತ್ತಿರುವುದು ಇದಕ್ಕೆ ಕಾರಣ. ಲಷ್ಕರ್-ಎ-ತೊಯ್ಬಾ, ಜೈಶ್-ಎ-ಮೊಹಮ್ಮದ್ ಮತ್ತು ಹಕಾನಿ ಜಾಲದಂಥ ಪಾಕಿಸ್ತಾನ ಮೂಲದ ಸಂಘಟನೆಗಳು ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿ ಶಾಂತಿ-ನೆಮ್ಮದಿಗೆ ಸಂಚಕಾರ ತಂದಿರುವುದನ್ನು ಈ ರಾಷ್ಟ್ರಗಳು ಕಟುಶಬ್ದಗಳಲ್ಲಿ ಖಂಡಿಸಿವೆ ಎಂಬುದು ಉಲ್ಲೇಖನೀಯ.

ಹಾಗೆ ನೋಡಿದರೆ, ಭಯೋತ್ಪಾದಕ ಕೃತ್ಯಗಳು ಮತ್ತು ಅದರಿಂದಾಗುವ ದೂರಗಾಮಿ ದುಷ್ಪರಿಣಾಮಗಳ ಕುರಿತು ಭಾರತ ಎಂದಿನಿಂದಲೋ ದನಿಯೆತ್ತುತ್ತ ಬಂದಿದ್ದರೂ, ಪಾಶ್ಚಾತ್ಯ ರಾಷ್ಟ್ರಗಳು ಉಗ್ರನಿಗ್ರಹದ ಕುರಿತು ಅಷ್ಟೊಂದು ತಲೆಕೆಡಿಸಿಕೊಂಡಿರಲಿಲ್ಲ ಎಂದೇ ಹೇಳಬೇಕು. ಆದರೆ ವಿಶ್ವದ ವಿವಿಧೆಡೆ ಇಂಥ ವಿಧ್ವಂಸಕ ಕೃತ್ಯಗಳ ಅವತಾರವಾದಾಗ ಅವು ಅನಿವಾರ್ಯವಾಗಿ ಎಚ್ಚೆತ್ತುಕೊಳ್ಳಬೇಕಾಗಿ ಬಂತು. ‘ಬ್ರಿಕ್ಸ್ ರಾಷ್ಟ್ರಗಳಲ್ಲಿ ಸಂಭವಿಸಿದ ದಾಳಿಗಳೂ ಸೇರಿದಂತೆ ವಿಶ್ವಾದ್ಯಂತದ ಎಲ್ಲ ಭಯೋತ್ಪಾದಕ ಕೃತ್ಯಗಳ ಕುರಿತು ನಾವು ವಿಷಾದಿಸುತ್ತೇವೆ ಮತ್ತು ಇಂಥ ಕುಕೃತ್ಯಗಳು ಯಾವುದೇ ಸ್ವರೂಪದಲ್ಲಿ, ಯಾವುದೇ ಮುಖವಾಡ ಹೊತ್ತು ಘಟಿಸಿದರೂ ಅವನ್ನು ಮತ್ತು ಅವುಗಳ ಹಿಂದಿರುವವರನ್ನು ತೀವ್ರವಾಗಿ ಖಂಡಿಸುತ್ತೇವೆ. ಭಯೋತ್ಪಾದನೆಯಂಥ ಕರಾಳಕೃತ್ಯವನ್ನು ಇನ್ನು ಸಮರ್ಥಿಸಲಾಗದು‘ ಎಂಬರ್ಥದ ಠರಾವನ್ನು ಈ ರಾಷ್ಟ್ರಗಳು ಹೊಮ್ಮಿಸಿರುವುದರಿಂದಾಗಿ, ಭಾರತದ ದನಿಗೆ ಮತ್ತಷ್ಟು ಬಲ ಬಂದಂತಾಗಿದೆ ಎನ್ನಲಡ್ಡಿಯಿಲ್ಲ.

ಗಡಿ ಭಾಗದಲ್ಲಿನ ಅತಿಕ್ರಮಣ, ಪ್ರತ್ಯೇಕತಾವಾದ ಮತ್ತು ವಿಧ್ವಂಸಕ ಕೃತ್ಯಗಳಿಗೆ ಪ್ರಚೋದನೆ ಮಾತ್ರವಲ್ಲದೆ ಭಯೋತ್ಪಾದನೆಯ ಪ್ರಮುಖ ಪ್ರಾಯೋಜಕ ಎನಿಸಿಕೊಂಡಿರುವುದೂ ಪಾಕಿಸ್ತಾನವೇ ಎಂಬುದು ಈಗಾಗಲೇ ಬಹಿರಂಗ ಗುಟ್ಟು. ಪಾಕ್​ನ ಈ ಮುಖವಾಡವನ್ನು ಅಂತಾರಾಷ್ಟ್ರೀಯ ಸಮುದಾಯದೆದುರು ಕಳಚುವ ಮತ್ತು ರಾಜತಾಂತ್ರಿಕವಾಗಿ ಒಬ್ಬಂಟಿಯಾಗಿಸುವ ವ್ಯೂಹಾತ್ಮಕ ತಂತ್ರಗಳನ್ನು ಪ್ರಧಾನಿ ಮೋದಿ ಹಲವು ಅಂತಾರಾಷ್ಟ್ರೀಯ ಸಭೆ-ಸಮಾವೇಶಗಳಲ್ಲಿ ಮೆರೆದಿದ್ದಾರೆ. ಇದು ತಡವಾಗಿಯಾದರೂ ವಿಶ್ವದ ಮಿಕ್ಕ ರಾಷ್ಟ್ರಗಳ ಅರಿವಿಗೆ ಬಂದಿದ್ದು, ಈ ನಿಟ್ಟಿನಲ್ಲಿ ಸಂಘಟಿತ ಯತ್ನಗಳಾದರೆ ಉಗ್ರವಾದಕ್ಕೊಂದು ಚರಮಗೀತೆ ಹಾಡಿ, ಇಡೀ ವಿಶ್ವವನ್ನು ನೆಮ್ಮದಿಯ ನೆಲೆಯಾಗಿಸುವುದು ದುಸ್ಸಾಧ್ಯ ಸಂಗತಿಯೇನಲ್ಲ. ಬ್ರಿಕ್ಸ್ ಶೃಂಗಸಭೆಯಲ್ಲಿ ಹೊಮ್ಮಿದ ಠರಾವು ಅದಕ್ಕೊಂದು ಮುನ್ನುಡಿಯಾಗಲಿ. ತನ್ಮೂಲಕ ‘ಉಜ್ವಲ ಭವಿಷ್ಯಕ್ಕಾಗಿ ಬಲಿಷ್ಠ ಪಾಲುದಾರಿಕೆ‘ ಎಂಬ ಬ್ರಿಕ್ಸ್ ಶೃಂಗಸಭೆಯ ಈ ಬಾರಿಯ ಘೋಷವಾಕ್ಯ ಸಾರ್ಥಕ್ಯವನ್ನು ಕಾಣುವಂತಾಗಲಿ.

Leave a Reply

Your email address will not be published. Required fields are marked *

Back To Top