Tuesday, 17th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಭಾರತದ ಧೀರರಮಣಿಯರು ವಿಶ್ವಕ್ಕೆ ಮಾದರಿ

Saturday, 01.07.2017, 3:05 AM       No Comments

ಹಲವು ವರ್ಷಗಳ ಹಿಂದೆ ಸಸ್ಯಾಹಾರದ ಹೋಟೆಲ್ ಹುಡುಕಿಕೊಂಡು ಲಾಸ್​ವೆಗಾಸ್​ನಲ್ಲಿ ಟ್ಯಾಕ್ಸಿ ಹತ್ತಿದಾಗ, ಟ್ಯಾಕ್ಸಿ ಚಾಲಕ ಸಂತಸ-ಸಂಭ್ರಮದಿಂದ ‘ನಮಸ್ತೆ’ ಎಂದರು. ಆ ಕಪ್ಪು ಅಮೆರಿಕನ್ ಚಾಲಕನ ಖುಷಿ ಕಂಡು ನಾನು ಚಕಿತಳಾಗಿಯೇ ‘ನಮಸ್ತೆ’ ಅಂದೆ. ಆಗ ಅವರು ನನ್ನೊಂದಿಗೆ ಮಾತು ಶುರುಮಾಡುತ್ತ ‘‘ನೀವು ‘ಮದರ್ ಇಂಡಿಯಾ’ ಚಿತ್ರ ನೋಡಿದ್ದೀರಾ? ಎಂಥ ಅದ್ಭುತ ಚಿತ್ರ! ನಾನು ಎಂಟು ವರ್ಷದ ಹುಡುಗನಾಗಿದ್ದಾಗ ತಾಯಿಯ ಜತೆಗೆ ಆ ಚಿತ್ರ ನೋಡಿದ್ದೆ. ತಾಯಿ ಬಿಕ್ಕಿಬಿಕ್ಕಿ ಅತ್ತಿದ್ದು ಇನ್ನೂ ಚೆನ್ನಾಗಿ ನೆನಪಿದೆ. ‘ಮದರ್ ಇಂಡಿಯಾ’ ತರಹದ ಭಾವನಾತ್ಮಕ ಚಿತ್ರಗಳನ್ನು ಮಾಡಲು ಈ ಹಾಲಿವುಡ್​ನವರಿಗೆ ಬರುವುದಿಲ್ಲ’’ ಎಂದರು ಆ ಭಾರತಾಭಿಮಾನಿ!

‘ಮದರ್ ಇಂಡಿಯಾ’ ಚಿತ್ರದಲ್ಲಿ ನಾಯಕಿ ನರ್ಗಿಸ್, ತನ್ನ ಮಗ ಅಪರಾಧ ಮಾಡುತ್ತ, ಊರಿನ ಹೆಣ್ಣನ್ನು ಹಾರಿಸಿಕೊಂಡು ಹೋಗುವಾಗ ಗುಂಡಿಕ್ಕಿ ತನ್ನ ಮಗನನ್ನೇ ಕೊಲ್ಲುತ್ತಾಳೆ! ಶ್ರಮದಿಂದ ಬೆಳೆಸಿದ ಮಗನಿಗಿಂತಲೂ ಅವಳಿಗೆ ತನ್ನ ಊರಿನ ಮರ್ಯಾದೆ ಮತ್ತು ಇನ್ನೊಬ್ಬ ಅಸಹಾಯಕ ಹೆಣ್ಣನ್ನು ರಕ್ಷಿಸುವುದು ಹೆಚ್ಚು ಮುಖ್ಯವಾಯಿತು. ಇಂಥ ಆದರ್ಶ ತಾಯಂದಿರು ಇಂದು ಕಡಿಮೆ ಆಗಿದ್ದರಿಂದ ಹದಿಹರೆಯದ ಹುಡುಗರು ಮಾಡುವ ಅತ್ಯಾಚಾರ-ಅನಾಚಾರ ಹೆಚ್ಚುತ್ತಿದೆ. ಚಿತ್ರದ ಕತೆ ಆದರ್ಶವನ್ನು ವೈಭವೀಕರಿಸಿದೆ ಎನ್ನಬಹುದು. ಆದರೆ ನಿಜಜೀವನದಲ್ಲಿ ಧರ್ಮಪಾಲನೆಗೆ ಏಕೈಕ ಮಗನಿಗೆ ಆನೆಕಾಲಲ್ಲಿ ತುಳಿಸಿ ಸಾಯಿಸುವ ಕಠಿಣ ಶಿಕ್ಷೆ ವಿಧಿಸಿದ ಮಹಾನ್ ಚೇತನ ಇಂದೋರಿನ ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್!

‘Philosopher Queen’ ಎಂದು ಸರ್ ಜಾನ್ ಮಾಲ್ಕಂ ಅವರಿಂದ ಕರೆಸಿಕೊಂಡ ದೈವಭಕ್ತೆ ಮಹಾರಾಣಿ ಈಕೆ. ಕಾಶಿ ವಿಶ್ವನಾಥ, ಗಯಾ, ಸೌರಾಷ್ಟ್ರದ ಸೋಮನಾಥ, ಅಯೋಧ್ಯ, ಬದರೀನಾಥ, ರಾಮೇಶ್ವರ, ಪುರಿಯ ಜಗನ್ನಾಥದಂಥ 21 ಪ್ರಖ್ಯಾತ ದೇವಸ್ಥಾನಗಳನ್ನು ಪುನರುದ್ಧಾರ ಮಾಡಿದ ಮಹಾಶಕ್ತಿ! ಎಲ್ಲೆಲ್ಲಿ ಮೊಘಲರ ದಾಳಿಗೆ ದೇವಸ್ಥಾನಗಳು ನಾಶವಾಗಿದ್ದವೋ ಅವುಗಳನ್ನೆಲ್ಲ ಪುನಃ ನಿರ್ವಿುಸಿದ ದೇಶಭಕ್ತೆ! ತನ್ನ ಪ್ರಜೆಗಳಿಗಾಗಿ ನೂರಾರು ಬಾವಿ, ಅತಿಥಿ ಗೃಹ, ಧರ್ಮಶಾಲೆ, ಘಾಟ್, ರಸ್ತೆ ಮತ್ತು ಕೋಟೆ-ಕೊತ್ತಲ ಕಟ್ಟಿದ ಮಹಾಮಹಿಮ ಮಹಾರಾಣಿ. ಆದರೆ ದುರಂತವೆಂದರೆ, ಏನೇ ಎಷ್ಟೇ ಪ್ರಯತ್ನಪಟ್ಟರೂ ಮಹಾದುಷ್ಟನಾದ ತನ್ನ ಮಗನನ್ನು ತಿದ್ದಲು ಆಗಲಿಲ್ಲ. ಜನರಿಗೆ ವಿಷಕಾರಿ ಚೇಳನ್ನು ಕಚ್ಚಿಸಿ, ಅವರು ವಿಲಿವಿಲಿ ಒದ್ದಾಡುವುದನ್ನು ನೋಡಿ ಸಂತೋಷಪಡುತ್ತಿದ್ದ ಆ ವಿಘ್ನಸಂತೋಷಿ, ವಿಕೃತ ಮನಸ್ಸಿನ ಮಗ. ಸುಧಾರಣೆಯ ಎಲ್ಲ ಯತ್ನಗಳೂ ವಿಫಲವಾದಾಗ, ಇಂಥ ದುಷ್ಟಮಗ ರಾಜನಾಗುವ ಬದಲು ಇಲ್ಲದಿರುವುದೇ ಪ್ರಜೆಗಳಿಗೆ ಕ್ಷೇಮವೆಂದು ಸ್ವಂತ ಮಗನನ್ನು ಆನೆಕಾಲಲ್ಲಿ ತುಳಿಸಿ ಸಾಯಿಸುವ ಶಿಕ್ಷೆ ವಿಧಿಸಿದ ವಿಲಕ್ಷಣ ಜಗನ್ಮಾತೆ ಈಕೆ!

ಇನ್ನು, ‘ದಾನ ಚಿಂತಾಮಣಿ’ ಎಂದೇ ಖ್ಯಾತಿಪಡೆದ ಅತ್ತಿಮಬ್ಬೆ ವಿಶ್ವದ ಪ್ರಪ್ರಥಮ ಪ್ರಕಾಶಕಿ! ಕ್ರಿ.ಶ. 950ರಲ್ಲಿ ಪುಂಗನೂರಿನಲ್ಲಿ (ಚಿತ್ತೋರ ಜಿಲ್ಲೆ) ಹುಟ್ಟಿ, ಚಾಲುಕ್ಯ ರಾಜ ತೈಲಪನ ಆಸ್ಥಾನದಲ್ಲಿ ಮಹಾಮಂತ್ರಿಯಾಗಿದ್ದ ದಲ್ಲಪನ ವೀರ ಪರಾಕ್ರಮಿ ಪುತ್ರ ನಾಗದೇವನ ಹೆಂಡತಿ. ಗಂಡ ವೀರಗತಿ ಸೇರಿದ ನಂತರ ಸಂಪೂರ್ಣ ಸಮಾಜಮುಖಿಯಾದ ಈ ಮಹಾಸಾಧಿ್ವ ದೇಶ, ಭಾಷೆ, ಸಾಹಿತ್ಯ, ಸಂಸ್ಕೃತಿಗೆ ಅವಶ್ಯ ಸೇವೆ ಸಲ್ಲಿಸಿದ ಅರ್ನ್ಯಘರತ್ನ. ಕವಿ ಪೊನ್ನರ ‘ಶಾಂತಿಪುರಾಣ’ ಕೃತಿಯನ್ನು ತಾಳೆಗರಿಯ ಮೇಲೆ ಸಾವಿರ ಪ್ರತಿಗಳನ್ನಾಗಿಸಿ ಜತೆಗೆ ರತ್ನಖಚಿತ ಚಿನ್ನದ ಗೊಮ್ಮಟ ಮತ್ತು ಗಂಟೆಗಳನ್ನು ದಶದಿಕ್ಕಿನ ಜೈನಮುನಿವರರಿಗೆ, ಸಾಹಿತ್ಯ ಸಂರಕ್ಷಕರು, ಸಂತರು ಮತ್ತು ರಾಜಕುಲೋತ್ತಮರಿಗೆ ಗೌರವಪೂರ್ವಕ ‘ಶಾಸ್ತ್ರದಾನ’ವೆಂದು ಮಾಡಿದ ಮಹಾಸಾಧಿ್ವ ಕವಿ ರನ್ನನಿಂದ ಅಜಿತ ತೀರ್ಥಂಕರರ ಪುರಾಣ ಬರೆಸಿದ ಮಹಾನ್ ಶ್ರಾವಕಿ. ಲಕ್ಕುಂಡಿಯಲ್ಲಿ ಬ್ರಹ್ಮಜಿನಾಲಯವಲ್ಲದೆ, ಒಟ್ಟು 1,500 ಜೈನಬಸದಿ ನಿರ್ವಿುಸಿದ ಖ್ಯಾತಿ ಅತ್ತಿಮಬ್ಬೆಯದು.

12ನೇ ಶತಮಾನಕ್ಕೆ ಬಂದರೆ, ಕನ್ನಡದ ಪ್ರಪ್ರಥಮ ಕವಯಿತ್ರಿ ಅಕ್ಕಮಹಾದೇವಿ. ಅಪರಿಮಿತ ರೂಪವತಿ, ಗುಣವತಿ, ಮೇಲಾಗಿ ಪರಮೇಶ್ವರನನ್ನೇ ಪತಿಯಾಗಿ ಸ್ವೀಕರಿಸಿದ ಸರ್ವಸ್ವವನ್ನೂ ಚೆನ್ನಮಲ್ಲಿಕಾರ್ಜುನನಿಗೆ ಸಮರ್ಪಿಸಿದ ಮಹಾನ್ ದಾರ್ಶನಿಕಳು! ಗಿರಿಧರ ಗೋಪಾಲನ ಭಕ್ತೆ ಮೀರಾಬಾಯಿ ಕೇವಲ ಭಕ್ತಿಮಾರ್ಗದಲ್ಲಿ ನಡೆದರೆ, ನಮ್ಮ ಅಕ್ಕಮಹಾದೇವಿ ಜ್ಞಾನ, ಭಕ್ತಿ ಮತ್ತು ವೈರಾಗ್ಯ ಮೂರೂ ಮಾರ್ಗಗಳನ್ನೂ ತನ್ನದಾಗಿಸಿಕೊಂಡು, ಜ್ಞಾನದ ಮೇರುಪರ್ವತವಾದ ಅಲ್ಲಮಪ್ರಭುಗಳಿಂದ ‘ನಮೋ ನಮಃ’ ಎನ್ನಿಸಿಕೊಂಡಾಕೆ; ಭಕ್ತಿಭಂಡಾರಿ ಬಸವಣ್ಣನವರಿಂದ ‘ಭಲೆ ಮಗಳೆ’ ಎನ್ನಿಸಿಕೊಂಡ ಅಕ್ಕಮಹಾದೇವಿ ಜ್ಞಾನ, ವಿಜ್ಞಾನ ಮತ್ತು ತತ್ತ್ವಜ್ಞಾನದ ಸುಂದರ ಸಮ್ಮಿಶ್ರಣವಾಗಿದ್ದಳು!

ಇಂದು ಮಿತಿಮೀರಿ ತಿಂದು ಬೊಜ್ಜುಬೆಳೆಸಿಕೊಂಡು ಅಕಾಲಿಕವಾಗಿ ‘Metabolic Syndrome’ನಿಂದ ಸಾಯುತ್ತಿರು ವವರಿಗೆ, 900 ವರ್ಷಗಳ ಹಿಂದೆಯೇ ಅಕ್ಕಮಹಾದೇವಿ- ‘ಆಹಾರವ ಕಿರುದು ಮಾಡಿರಣ್ಣಾ, ಆಹಾರವು ಕಿರಿದು ಮಾಡಿ, ಆಹಾರದಿಂದ ವ್ಯಾಧಿ ಹಬ್ಬಿ ಬಲಿಯುವುದಯ್ಯ, ಆಹಾರದಿಂದ ನಿದ್ರೆ, ನಿದ್ರೆಯಿಂ ತಾಮಸ, ಅಜ್ಞಾನ, ಮೈಮರೆವು, ಅಜ್ಞಾನದಿಂ ಕಾಮವಿಕಾರ, ಮನೋವಿಕಾರ, ಇಂದ್ರಿಯವಿಕಾರ, ಭಾವವಿಕಾರ, ವಾಯುವಿಕಾರವನ್ನುಂಟುಮಾಡಿ ಸೃಷ್ಟಿಗೆ ತಹುದಾದ ಕಾರಣಕಾಯದ ಅತಿಪೋಷಣೆ ಬೇಡ; ಅತಿಪೋಷಣೆ ಮೃತ್ಯುವೆಂದುದು. ಜಪ, ತಪ, ಧ್ಯಾನ, ಧಾರಣ ಪೂಜೆಗೆ ಸೂಕ್ಷ್ಮದಿಂದ ತನುಮಾತ್ರವಿದ್ದರೆ ಸಾಲದೆ?’ ಎಂದು ವೈಜ್ಞಾನಿಕ ಸಾರ್ವಕಾಲಿಕ ಸತ್ಯವನ್ನು ಸಾರಿದ, ವಿಶ್ವದ ಆರೋಗ್ಯಕ್ಕೆ ಸರಳಸೂತ್ರ ನೀಡಿದ ಮಹಾನ್ ದಾರ್ಶನಿಕಳು!

ಇನ್ನು, ವಿಶ್ವದ ಧಾರ್ವಿುಕ ಇತಿಹಾಸದಲ್ಲಿ ಧ್ರುವತಾರೆಯಂತೆ ಮಿನುಗುತ್ತಿರುವ ಮೇರುವ್ಯಕ್ತಿತ್ವ ನಮ್ಮ ಅಕ್ಕನಾಗಮ್ಮನವರದು. ಅವರು ಜಗಜ್ಜ್ಯೊತಿ ಬಸವಣ್ಣನವರ ಅಕ್ಕನಾಗಿ, ಸದಾ ಮಾರ್ಗದರ್ಶಕರಾಗಿ ಅವರ ಬೆನ್ನೆಲುಬಾಗಿ ನಿಂತವರು. ಚೆನ್ನಬಸವಣ್ಣನಂಥ ಶೂರ, ವೀರ, ಧೀರ ಮಗನನ್ನು ಷಟ್​ಸ್ಥಲ ಬ್ರಹ್ಮಿಯಾಗಿ ಬೆಳೆಸಿದ ಮಹಾಸಾಧಕಿ. ಬಸವಣ್ಣ ಕಲ್ಯಾಣ ಬಿಟ್ಟುಹೋದಾಗ, ಶರಣರನ್ನು ಮತ್ತು ವಚನಸಾಹಿತ್ಯವನ್ನು ಉಳಿಸಲು ಖಡ್ಗ ಹಿಡಿದು ಹೋರಾಡಿದ ಸಾಹಸಿ! ಗಂಡ, ತಮ್ಮ, ಅವನ ಇಬ್ಬರೂ ಹೆಂಡಂದಿರು ಲಿಂಗೈಕ್ಯರಾದ ನಂತರವೂ ಶರಣಸಂಸ್ಕೃತಿಯ ಬೀಜವನ್ನು ನಾಡಲ್ಲಿ ಬಿತ್ತುತ್ತ ನಡೆದ ಧೀರ ಶರಣಶ್ರೇಷ್ಠೆ! ಉಳವಿಯ ದಂಡಕಾರಣ್ಯಕ್ಕೂ ಬೆನ್ನತ್ತಿಬಂದ ಅಳಿಯ ಬಿಜ್ಜಳ ನಿಶ್ಶಸ್ತ್ರನಾದ ತನ್ನ ಏಕೈಕ ಪುತ್ರ ಚೆನ್ನಬಸವಣ್ಣನ ವಧೆಮಾಡಿದರೂ, ಅಪಾರ್ಥದಿಂದ ಆದ ಅನರ್ಥವೆಂದು ಅವನಿಗೆ ಜೀವದಾನ ಮಾಡಿದ ಮಹಾನ್ ಕ್ಷಮಯಾಧರಿತ್ರಿ!

‘ಮನದೊಡೆಯ ಮಹಾದೇವ, ಮನವ ನೋಡಿಹನೆಂದು ಮನುಜರ ಕೈಯಿಂದ ಒಂದೊಂದು ನುಡಿಸುವನು. ಇದಕ್ಕೆ ಕಳವಳಿಸದಿರು ಮನವೆ, ಇದಕ್ಕೆ ಕಾತರಿಸದಿರುವ ತನುವೆ, ನಿಜವ ಮರೆಯದಿರು ಕಂಡಾ, ನಿಶ್ಚಿಂತವಾಗಿರು ಮನವೆ, ಬಸವಣ್ಣಪ್ರಿಯ ಸಂಗಯ್ಯನು ಬೆಟ್ಟದನಿತಪರಾಧವನು ಒಂದು ಬೊಟ್ಟಿನಲಿ ತೊಡೆವನು’ ಎಂದು ಭಗವಂತನಲ್ಲಿಯ ತನ್ನ ಅಚಲ ವಿಶ್ವಾಸದಿಂದ ಮನಸ್ಸನ್ನು ಗಟ್ಟಿಮಾಡುವ ಪರಿಯನ್ನು ವಿಶ್ವಕ್ಕೆ ವಿವರಿಸಿದ್ದಾರೆ ಅಕ್ಕನಾಗಮ್ಮ. ಜಗತ್ತಿನಾದ್ಯಂತ ಇಂದು ಮನಸ್ಸಿನ ದುಗುಡದಿಂದ ನರಳುತ್ತಿರುವ ಕೋಟ್ಯಂತರ ಜನ ಧ್ಯಾನಯೋಗದಿಂದ ಅಕ್ಕನಾಗಮ್ಮನಂತೆ ಮನಸ್ಸನ್ನು ಗಟ್ಟಿಮಾಡಿಕೊಂಡು ಬದುಕುವುದನ್ನು ಕಲಿಯಬೇಕು.

ಝಾನ್ಸಿರಾಣಿ ಲಕ್ಷ್ಮೀಬಾಯಿಗಿಂತಲೂ 24 ವರ್ಷ ಮೊದಲೇ ಬ್ರಿಟಿಷರ ವಿರುದ್ಧ ಹೋರಾಡಿದ ಕಿತ್ತೂರ ಚೆನ್ನಮ್ಮ ಮತ್ತು ಔರಂಗಜೇಬನ ಬಲಾಢ್ಯ ಸೈನ್ಯವನ್ನು ಸೋಲಿಸಿ, ಶಿವಾಜಿಯ ಮಗ ರಾಜಾರಾಮನಿಗೆ ಆಶ್ರಯ ನೀಡಿದ ಕೆಳದಿ ಚೆನ್ನಮ್ಮ ಇಬ್ಬರೂ ಧೈರ್ಯ-ಶೌರ್ಯದ ಪ್ರತಿರೂಪಗಳು! ವಿಶ್ವದಲ್ಲಿಯೇ ಪ್ರಪ್ರಥಮ ಮಹಿಳಾ ಸೈನ್ಯ ಕಟ್ಟಿದ ಹೆಗ್ಗಳಿಕೆ ನಮ್ಮ ಬೆಳವಡಿ ಮಲ್ಲಮ್ಮನದು! ಪತಿದೇವ ಈಶಪ್ರಭು ವಿಶ್ರಮಿಸುತ್ತಿದ್ದಾಗ ಬಂದ ಎರಡು ಹುಲಿಗಳ ಜತೆಗೆ ಕಾದಾಡಿದ ಧೀರೆ ಮಲ್ಲಮ್ಮಾಜಿ. ಈಶಪ್ರಭುಗಳು ಶಿವಾಜಿಯ ಸೈನ್ಯದೊಂದಿಗೆ ಕಾದಾಡಿ ಗಾಯಗೊಂಡು ಮರಣಶಯ್ಯೆಯಲ್ಲಿದ್ದಾಗ ಹೆಂಡತಿಗೆ ಹೇಳುತ್ತಾರೆ- ‘ದೇವೀ, ನಿಮ್ಮ ಧೈರ್ಯ-ಸ್ಥೈರ್ಯದಲ್ಲಿ ನಮಗೆ ಅಪಾರ ನಂಬಿಕೆ ಇದೆ. ಆ ಶಿವಾಜಿಯನ್ನು ಸೋಲಿಸುತ್ತೀರೆಂದು ನಮಗೆ ಭಾಷೆ ಕೊಡಿ’ ಎಂದು ಕೇಳಿದಾಗ, ಚಿಕ್ಕಮಗನನ್ನು ಎದೆಗೊತ್ತಿಕೊಂಡು ದುಃಖಿಸುತ್ತಿದ್ದ ಮಲ್ಲಮ್ಮ, ‘ನಿಮ್ಮ ಆಜ್ಞೆ ಶಿರಸಾ ಪಾಲಿಸುತ್ತೇನೆ ಪ್ರಭು’ ಎಂದಾಗ ಈಶಪ್ರಭುಗಳ ಪ್ರಾಣಪಕ್ಷಿ ನಿರಾಯಾಸವಾಗಿ ಹಾರಿಹೋಗುತ್ತದೆ.

ಮಲ್ಲಮ್ಮಾಜಿ ಪತಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಮುಂದಾಗುತ್ತಾಳೆ. ‘ನನ್ನ ಹತ್ತಿರ ಇರುವುದು ಕೇವಲ 2,000 ಮಹಿಳೆಯರ ಸೈನ್ಯ. ಶಿವಾಜಿ ಹತ್ತಿರ ಇರುವುದು 10,000 ಮಂದಿಯ ಬಲಾಢ್ಯಸೈನ್ಯ. ಗಂಡನ ಮಾತು ಉಳಿಸಿಕೊಳ್ಳಲು ಅನ್ಯಾಯವಾಗಿ ಮಹಿಳಾ ಸೈನಿಕರ ಬಲಿತೆಗೆದುಕೊಳ್ಳುವುದು ಸರಿಯಲ್ಲ’ ಅಂದುಕೊಂಡು ತನ್ನ ಸೇನಾಪತಿಯನ್ನು ಸಾಧುವಿನ ರೂಪದಲ್ಲಿ ಶಿವಾಜಿ ಹತ್ತಿರ ಕಳಿಸುತ್ತಾಳೆ. ಸಾಧುವಿನ ಮಾತು ನಂಬಿ ಶಿವಾಜಿ ಜಾಗೃತ ಜಗದಾಂಬೆಯ ದರ್ಶನಕ್ಕೆ ದೇವಸ್ಥಾನಕ್ಕೆ 10 ಜನ ಬೆಂಗಾವಲಿಗರೊಂದಿಗೆ ಬರುತ್ತಾನೆ. ಆಗ ಕೇವಲ 10 ಜನ ಮಹಿಳಾ ಸೈನಿಕರೊಂದಿಗೆ ಶಿವಾಜಿಯ ಮೇಲೆ ಮಿಂಚಿನಂತೆ ಎರಗುತ್ತಾಳೆ. ಮಲ್ಲಮ್ಮನ ಖಡ್ಗ ತನ್ನ ಕತ್ತಿನ ಮೇಲಿದ್ದುದನ್ನು ಕಂಡ ಶಿವಾಜಿ ಮೊಳಕಾಲೂರಿ ಜೀವದಾನಕ್ಕೆ ಬೇಡಿಕೊಳ್ಳುತ್ತಾನೆ. ಮಲ್ಲಮ್ಮ, ಶಿವಾಜಿಗೆ ಜೀವದಾನ ಮಾಡುತ್ತಾಳೆ! ಇಂದು ಸೈನ್ಯದಲ್ಲಿ ಮಹಿಳೆಯರಿಗೂ ಪ್ರವೇಶ ಸಿಗುತ್ತಿರುವಾಗ, ಮಹಿಳಾ ಸೈನ್ಯದ ತುಕಡಿಗೆ ಪ್ರಪ್ರಥಮ ಮಹಿಳಾಸೈನ್ಯ ಕಟ್ಟಿದ ಮಲ್ಲಮ್ಮನ ಹೆಸರಿಡಬೇಕು.

ಪೋರ್ಚುಗೀಸರ ಬಲಾಢ್ಯ ನೌಕಾಪಡೆಯನ್ನು ಸೋಲಿಸಿ ವಿಶ್ವವಿಖ್ಯಾತಳಾದ ಉಲ್ಲಾಳದ ಅಬ್ಬಕ್ಕದೇವಿಯ ಧೈರ್ಯ-ಪರಾಕ್ರಮ ಅಪ್ರತಿಮ. ಬಗದಾದಿನ ಬಾದಶಹ ‘ಭಾರತಕ್ಕೆ ಹೋದರೆ ಅಬ್ಬಕ್ಕದೇವಿಯನ್ನು ಭೆಟ್ಟಿಯಾಗದೇ ಬರಬೇಡಿ’ ಎಂದು ಹೇಳಿದ್ದನ್ನು ಇಟಲಿಯ ಜಿನೇವಾದ ಪ್ರವಾಸಿ ಪಿತ್ರೊ ಉಲ್ಲೇಖಿಸಿದ್ದಾನೆ. ಕಾರಣ, ಪೋರ್ಚುಗೀಸರು ಕೇಳಿದ ಬೆಲೆಗೆ ತನ್ನ ರೈತರ ಏಲಕ್ಕಿ, ಮೆಣಸು, ಅಕ್ಕಿ ಕೊಡಲು ಒಪ್ಪದ ಅಬ್ಬಕ್ಕದೇವಿ ಪರಕೀಯರ ಆರ್ಥಿಕ ಶೋಷಣೆಗೆ ತಲೆಬಾಗದ ಸ್ವಾಭಿಮಾನಿ! ಅಮಾವಾಸ್ಯೆಯ ಕರಾಳರಾತ್ರಿ ತನ್ನ ಮೋಗೇರ್ ಎಂಬ ಸಾಹಸಿ ಮೀನುಗಾರರ ಸಹಾಯದಿಂದ ನೂರಾರು ಚಿಕ್ಕ ನಾವೆಯಲ್ಲಿ ಹೋಗಿ ಪೋರ್ಚುಗೀಸರ ಬಲಾಢ್ಯ ನೌಕೆಯನ್ನು ಮುತ್ತಿಗೆ ಹಾಕಿ, ಕ್ಷಣಾರ್ಧದಲ್ಲಿ ಸುತ್ತಲಿನಿಂದ ಧಗಧಗಿಸಿ ಉರಿಯುವ ತೆಂಗಿನ ಗರಿಗಳನ್ನು ನೌಕೆಯ ಮೇಲೆ ಎಸೆಯುತ್ತಾರೆ. ಕಂಗೆಟ್ಟ ಪೋರ್ಚುಗೀಸರು ಜೀವ ಉಳಿದರೆ ಸಾಕೆಂದು ಸಮುದ್ರಕ್ಕೆ ಧುಮ್ಮಿಕ್ಕುತ್ತಾರೆ; ಅಬ್ಬಕ್ಕದೇವಿಯ ಸೈನಿಕರ ಖಡ್ಗ, ಈಟಿಗೆ ತುತ್ತಾಗುತ್ತಾರೆ. ರಾಣಿ ಅಬ್ಬಕ್ಕದೇವಿಯ ಸಾಹಸ ಸಪ್ತಸಾಗರದಾಚೆ ಪಸರಿಸುತ್ತದೆ!

ಸಂಕಷ್ಟದ ಸಮಯದಲ್ಲಿ ಫೀನಿಕ್ಸ್ ತರಹ ಎದ್ದು ಸಾಹಸದಿಂದ ಸಮಸ್ಯೆ ಎದುರಿಸಿ ಸಮಾಜಮುಖಿಗಳಾಗಿ ದೇಶಪ್ರೇಮಿಗಳಾಗಿ ಮಿಂಚಿದ ನಮ್ಮ ಮಹಾನ್ ಮಹಿಳೆಯರು ವಿಶ್ವದ ಮಹಿಳಾಕುಲಕ್ಕೆ ಮಾದರಿ. ಇಂಥ ಮಾದರಿ ಮಹಿಳಾಮಣಿಗಳಿಗೆ ನಮೋನಮಃ.

(ಲೇಖಕರು ಖ್ಯಾತ ಹೃದ್ರೋಗ ತಜ್ಞರು)

Leave a Reply

Your email address will not be published. Required fields are marked *

Back To Top