Friday, 22nd June 2018  

Vijayavani

ಮೈತ್ರಿ ಸರ್ಕಾರದಲ್ಲಿ ಮತ್ತೆ ತಾರತಮ್ಯತೆ - ರೇವಣ್ಣ ಕಾರ್​​​ಗೆ ಗೇಟ್​​ ಓಪನ್​​, ದೇಶಪಾಂಡೆಗೆ ನಟರಾಜ ಸರ್ವಿಸ್​​        ಅಂದು ಹೇಳಿದ್ದೊಂದು.. ಇಂದು ಮಾಡಿದ್ದೊಂದು - ಸಂಡೂರಿನಲ್ಲಿ ಕೊಟ್ಟು ಮಾತು ಮರೆತ ಸಿಎಂ - ಮತ್ತೆ ಗಣಿಗಾರಿಕೆಗೆ ಅವಕಾಶ        ಡಿಕೆಶಿ ಡೈರಿಯಲ್ಲಿ ಕೆಜಿ ಕೋಡ್​ ವಿಚಾರ - ದೆಹಲಿಯಿಂದ ಆಗಮಿಸಿದ ಇಡಿ ತಂಡ - ಡಿಕೆಶಿ ಸೇರಿ ಐವರು ವಿರುದ್ಧ ಇಡಿ FIR ಸಾಧ್ಯತೆ        ಶಕ್ತಿ ಭವನದಲ್ಲಿ ಬಜೆಟ್​​​ ಪೂರ್ವಭಾಗಿ ಸಭೆ - ಸಣ್ಣ ನೀರಾವರಿ ಇಲಾಖೆ ಜತೆ ಸಿಎಂ ಚರ್ಚೆ - ಅನುದಾನ ಭರವಸೆ ನೀಡಿದ ಎಚ್​ಡಿಕೆ        ಬಿಜಿಎಸ್​ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಚಿಕಿತ್ಸೆ - ನಡೆದಾಡುವ ದೇವರ ಕಾಣಲು ಗಣ್ಯರ ದಂಡು - ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​​ವೈ        ಜಿಲ್ಲಾಸ್ಪತ್ರೆಯಲ್ಲಿ ಅನಾಥವಾಯ್ತು ಕಂದಮ್ಮ - ಶಸ್ತ್ರಚಿಕಿತ್ಸೆಗೆ ಬಂದು ಮಗು ಬಿಟ್ಟೋದ ಹೆತ್ತಮ್ಮ - ರೋಧಿಸುತ್ತಿದೆ 3 ತಿಂಗಳ ಕೂಸು       
Breaking News

ಭಾರತದ ಗತವೈಭವ ಮರುಕಳಿಸುವಂತಾಗಲಿ…

Thursday, 24.08.2017, 3:00 AM       No Comments

ವಿಶಾಖದತ್ತ ವಿರಚಿತ ಸುಪ್ರಸಿದ್ಧ ಸಂಸ್ಕೃತ ನಾಟಕ ‘ಮುದ್ರಾರಾಕ್ಷಸಮ್. ಅದರ ಮೊದಲಂಕದ ಒಂದು ದೃಶ್ಯ. ಚಾಣಕ್ಯ ಮತ್ತು ಚಂದನದಾಸರ ನಡುವೆ ಸಂಭಾಷಣೆ ಸಾಗಿದೆ. ನಂದ ನಿಮೂಲನದ ನಂತರ ರಾಜ್ಯವನ್ನು ಸ್ಥಿರಗೊಳಿಸುವ ಜವಾಬ್ದಾರಿ ಚಾಣಕ್ಯನದು. ರಾಜ್ಯವನ್ನು ನಿಷ್ಕಂಟಕವನ್ನಾಗಿಸಬೇಕಾಗಿದೆ. ಅಂದರೆ ಚುಚ್ಚುತ್ತಿರುವ ಮುಳ್ಳುಗಳನ್ನು ತೆಗೆಯಬೇಕು. ಒಳಗಿನದು ಹೊರಗಿನದು ಅಂತ ಥರಾವರಿ ಮುಳ್ಳುಗಳು ಯಾವಾಗಲೂ operation modeನಲ್ಲೇ ಇರುತ್ತವೆ! ರಾಜ್ಯವನ್ನು ಪಡೆಯುವುದು ಯೋಗವಾದರೆ, ಅದನ್ನು ವ್ಯವಸ್ಥಿತಗೊಳಿಸಿ ಪ್ರಜೆಗಳಿಗೆ ನಿಜವಾದ ‘ಪಾಲನೆ’ ಒದಗಿಸುವುದು ‘ಕ್ಷೇಮ’. ಇದನ್ನೇ ಯೋಗಕ್ಷೇಮ ಎನ್ನುವುದು. ಚಾಣಕ್ಯ ಕ್ಷೇಮದೆಡೆ ದೃಷ್ಟಿ ಹೊರಳಿಸಿದ್ದಾನೆ. ನಂದರ ಆಪ್ತ, ನಿಷ್ಠ, ಪ್ರಧಾನಸಚಿವ ಅಮಾತ್ಯರಾಕ್ಷಸ ತಲೆಮರೆಸಿಕೊಂಡಿದ್ದಾನೆ. ಚಂದ್ರಗುಪ್ತನನ್ನು ಸಿಂಹಾಸನದಿಂದ ಇಳಿಸಿ ಮತ್ತೆ ನಂದವಂಶದ ಕುಡಿಯನ್ನು ಮೇಲೇರಿಸಲು ಸಕಲ ಪ್ರಯತ್ನ ಮಾಡುತ್ತಿದ್ದಾನೆ. ಚಾಣಕ್ಯನಿಗೆ ಅಮಾತ್ಯನ ತಂತ್ರ ತಿಳಿಯದ್ದೇನಲ್ಲ. ಅವನ ಶಕ್ತಿಯುಕ್ತಿಗಳನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂಬುದನ್ನು ಚೆನ್ನಾಗಿಯೆ ಅರಿತವ ಚಾಣಕ್ಯ. ತನ್ನ ಶಕ್ತಿಯಷ್ಟೇ ಅಲ್ಲ ಶತ್ರುವಿನ ಶಕ್ತಿ, ಅಶಕ್ತಿಗಳನ್ನು ಅರಿತವ ಮಾತ್ರ ಸರಿಯಾದ ಮದ್ದು ಅರೆಯಬಲ್ಲ. ಅಮಾತ್ಯನನ್ನು ಈಗ ಹಿಡಿಯಲೇಬೇಕು. ಆತ ಸೆರಗಿನಲ್ಲಿ ಕಟ್ಟಿದ ಬೆಂಕಿಯಂತೆ. ಅಂದಹಾಗೆ ‘ರಾಕ್ಷಸ’ ಎಂಬುದು ಅಡ್ಡಹೆಸರು. ಅವನ ಮಂತ್ರಶಕ್ತಿಯ (ಮಂತ್ರವಾದಿ ಅಲ್ಲ) ಬಲದ ದ್ಯೋತಕ, ಜಜಿಚ್ಞಠಿ ಟ್ಛ ಚ ಞಜ್ಞಿಜಿಠಠಿಛ್ಟಿ ಅನ್ನುತ್ತಾರಲ್ಲ ಹಾಗೆ. ರಾವಣನಂತೆ ರಾಕ್ಷಸ ಕುಲಕ್ಕೆ ಸೇರಿದವನಲ್ಲ!

ಇಂಥ ಅಮಾತ್ಯನನ್ನು ಹಿಡಿದು ಸಿಂಹಾಸನಕ್ಕೆ ಕಟ್ಟಿಹಾಕದಿದ್ದರೆ ಹೊಸ ರಾಜ್ಯಕ್ಕೆ ರಕ್ಷೆ ಎಲ್ಲಿ? ಅದಕ್ಕಾಗಿ ಅವನ ಅತ್ಯಂತ ಆಪ್ತ ಗೆಳೆಯ ನಂದನಿಷ್ಠ ಮಣಿಕಾರ ಶ್ರೇಷ್ಠಿ್ಠ ಶ್ರೀಮಂತ ಚಂದನದಾಸನನ್ನು ಹಿಡಿದು ತರಿಸುತ್ತಾನೆ ಚಾಣಕ್ಯ. ಇದಕ್ಕೂ ಕೇವಲ ರಾಜಕೀಯ ವೈಮನಸ್ಯ ಅಷ್ಟೇ ಅಲ್ಲ, ಬಲವಾದ ಕಾರಣವಿದೆ. ಚಂದನದಾಸ ಈಗ ರಾಜದ್ವೇಷಿಯಾದ ಅಮಾತ್ಯನ ಸಂಸಾರಕ್ಕೆ ತನ್ನ ಮನೆಯಲ್ಲಿ ರಕ್ಷೆ ಒದಗಿಸಿದ್ದಾನೆ. ರಾಜದ್ವೇಷ ಅಪರಾಧವಾದರೆ ಅದಕ್ಕೆ ಕುಮ್ಮಕ್ಕು ಕೊಡುವವರೂ ಅಪರಾಧಿಗಳೆ! ಈ ಹಿನ್ನೆಲೆಯಲ್ಲಿ ಚಾಣಕ್ಯ-ಚಂದನದಾಸರ ಸಂವಾದವನ್ನು ಗಮನಿಸಬೇಕು.

ಚಾಣಕ್ಯ: ಶ್ರೇಷ್ಠಿ, ನಿಮ್ಮ ವ್ಯಾಪಾರ, ವಹಿವಾಟು ನಿರಾತಂಕವಾಗಿದೆಯೆ? ಒಳ್ಳೆ ಲಾಭಕರವಾಗಿದೆಯೆ?

ಚಂದನದಾಸ: ತಮ್ಮ ಪ್ರಸಾದ. ಯಾವ ನಷ್ಟವೂ ಇಲ್ಲದೆ ನನ್ನ ವಾಣಿಜ್ಯ ಏರುಗತಿಯಲ್ಲಿದೆ.

ಚಾಣಕ್ಯ: ಚಂದ್ರಗುಪ್ತನ ದೋಷಗಳೇನಾದರೂ ಹಳೆಯ ರಾಜ್ಯಪಾಲನೆಯನ್ನು ನೆನಪಿಸುವಂತೆ ಮಾಡುತ್ತಿದೆಯೆ?

ಚಂದನದಾಸ: ಛೆ, ಎಲ್ಲಾದರೂ ಉಂಟೆ ಸ್ವಾಮಿ. ಶರತ್ಕಾಲದ ಪೂರ್ಣಚಂದ್ರನನ್ನು ಕಂಡಂತೆ ಹೊಸರಾಜನನ್ನು ಕಂಡ ಪ್ರಜೆಗಳ ಆನಂದ ಹೇಳತೀರದು.

ಚಾಣಕ್ಯ: ಒಳ್ಳೆಯದು. ಹಾಗಾದರೆ ಪ್ರಜಾಪ್ರೀತಿ ಉಂಟುಮಾಡುವ ರಾಜ ಪ್ರಜೆಗಳಿಂದಲೂ ಪ್ರಿಯವಾದದ್ದನ್ನೇ ಬಯಸುತ್ತಾನೆ ಅಲ್ಲವೆ ಶ್ರೇಷ್ಠಿ?

ಚಂದನದಾಸ: ಹೇಳಿ ಸ್ವಾಮಿ. ಎಷ್ಟು ಕೊಡಬೇಕು. ಅಪ್ಪಣೆ ಆಗಲಿ. ಈಗಲೇ…

ಚಾಣಕ್ಯ: ಶ್ರೇಷ್ಠಿಗಳೆ ಸ್ವಲ್ಪ ಸಾವಧಾನ. ಇದು ಚಂದ್ರಗುಪ್ತ ರಾಜ್ಯ, ನಂದರಾಜ್ಯವಲ್ಲ. ಆಮಿಷವೊಡ್ಡಿ, ಲಂಚ ನೀಡಿ ಹೊಸರಾಜನನ್ನು ತಣಿಸಲು ಸಾಧ್ಯವಿಲ್ಲ.

ಇದೇ ಧಾಟಿಯಲ್ಲಿ ಮುಂದುವರಿದ ಇವರೀರ್ವರ ಮಾತು ಎಲ್ಲಿಗೆ ಮುಟ್ಟುತ್ತದೆಂದರೆ ಅಮಾತ್ಯನ ಸಂಸಾರವನ್ನು ತನ್ನ ಮನೆಯಲ್ಲಿ ಬಚ್ಚಿಟ್ಟಿರುವ ಗುಟ್ಟನ್ನು ಚಂದನದಾಸ ತನಗರಿವಿಲ್ಲದೆಯೆ ಬಿಟ್ಟುಕೊಡುತ್ತಾನೆ. ಅವನಿಂದ ಬಾಯಿಬಿಡಿಸಿದ ಸತ್ಯವನ್ನೇ ಬಂಡವಾಳವಾಗಿಟ್ಟುಕೊಂಡು ಮುಂದೆ ತಂತ್ರಕ್ಕೆ ಪ್ರತಿತಂತ್ರ ಹೂಡಿ ಅಮಾತ್ಯನನ್ನು ಹಿಡಿಯುತ್ತಾನೆ. ಅವನನ್ನೇ ಚಂದ್ರಗುಪ್ತನ ಪ್ರಧಾನಾಮಾತ್ಯನನ್ನಾಗಿಸುತ್ತಾನೆ. ತಾನು ತನ್ನ ಗುಡಿಸಲಿಗೆ ನಡೆಯುತ್ತಾನೆ. ಅಮಾತ್ಯ ದುಷ್ಟನಲ್ಲ, ನಂದನಿಷ್ಠನಾಗಿದ್ದವ ಅಷ್ಟೆ. ಚಾಣಕ್ಯನ ಬುದ್ಧಿಶಕ್ತಿ, ಧರ್ಮದೃಷ್ಟಿಗಳಿಗೆ ಮನಸೋತ ಅಮಾತ್ಯ ದಾರಿಗೆ ಬರುತ್ತಾನೆ.

ಇಂದಿನ ಈ ಲೇಖನ ಮುದ್ರಾರಾಕ್ಷಸ ನಾಟಕದ ಅಥವಾ ಅಲ್ಲಿ ಬರುವ ಪಾತ್ರಗಳ ವಿಮರ್ಶೆಗೆ ಮೀಸಲಾಗಿಲ್ಲ. ಈ ನಾಟಕದಲ್ಲಿನ ಪಾತ್ರಗಳ ನಡವಳಿಕೆಯಲ್ಲಿ ರಾಜಕೀಯ ವ್ಯವಹಾರದಲ್ಲಿ ಇಂದಿಗೂ ಪ್ರಸ್ತುತವಾದ ಕೆಲ ಮುಖ್ಯ ಅಂಶಗಳನ್ನು ಗಮನಿಸೋಣ ಎಂಬ ಕಾರಣಕ್ಕಾಗಿ ಚಾಣಕ್ಯ, ಚಂದನದಾಸ ಮತ್ತು ಅಮಾತ್ಯರಾಕ್ಷಸನನ್ನು ನೆನಪಿಸಿಕೊಳ್ಳುತ್ತಿದ್ದೇವೆ. ವಿಶಾಖದತ್ತ ಈ ನಾಟಕ ಬರೆದು 1400 ವರ್ಷಗಳು ಸಂದಿವೆ. ಚಾಣಕ್ಯ 2300 ವರ್ಷಗಳ ಹಿಂದೆ ಇದ್ದವ. ಸಾವಿರಾರು ವರ್ಷಗಳ ನಂತರದ ನಮಗೆ ಇದರಿಂದೇನು ಎನಿಸಬಹುದು. ಆದರೆ ಮಾನವ ಸ್ವಭಾವ ಎಂಬುದೊಂದಿದೆಯಲ್ಲ, ಅದೇನೂ ಅಂಥ ವ್ಯತ್ಯಾಸವಾಗಿಲ್ಲ. ಕಂಪ್ಯೂಟರ್​ಯುುಗ, ಮೊಬೈಲ್ ಎಂಬ ಅಂಗೈಯಲ್ಲೆ ಅರಮನೆ ಕಾಣುತ್ತಿರುವ ಇಂದಿನವರಲ್ಲಿ ಈ ಪಾತ್ರಗಳಲ್ಲಿ ಕಾಣುವ ಗುಣದೋಷಗಳಿಲ್ಲವೆ? ಔದ್ಯೋಗಿಕ ಕ್ರಾಂತಿ ಸಾಮಾಜಿಕ ಕ್ರಾಂತಿಗಳಲ್ಲದೆ ಇನ್ನೂ ಏನೇನೋ ಭ್ರಾಂತಿಗಳನ್ನು ಹತ್ತಿಸಿಕೊಂಡಿರುವ ನಮಗೆ ಯಾವುದೂ ನಿರರ್ಥಕವಲ್ಲ, ಹಳೆಯದಲ್ಲ. ಬುದ್ಧಿ ಕಲಿಯುವವರೆಗೂ ಕಲಿಯಬೇಕು ಎಂಬ ಉಪದೇಶ ಇದ್ದೇ ಇರುತ್ತದೆ!

ಲಂಚ ಹೊಡೆಯುವುದು ಅಧಿಕಾರ ಸ್ಥಾನದಲ್ಲಿರುವವರ ಜನ್ಮಸಿದ್ಧ ಹಕ್ಕು ಎಂಬಂತೆ ನಮ್ಮದೇಶದಲ್ಲಿ ಆಗಿಲ್ಲವೆ? ಜಗತ್ತಿನ ಅತ್ಯಂತ ಭ್ರಷ್ಟ ದೇಶಗಳಲ್ಲಿ ಭಾರತಕ್ಕೆ ಮೇಲಿನ ಸ್ಥಾನ. ಸ್ವಜನ ಪಕ್ಷಪಾತ, ಬಡತನಗಳಲ್ಲಿ ಭಾರತ ಮೊದಲು. ಬುದ್ಧಿವಂತರಿದ್ದರೂ ಅನರ್ಹರಿಗೆ ದೊಡ್ಡದೊಡ್ಡ ಪಟ್ಟಗಳು. ಇದರಿಂದ ಮತಿವಂತರು ದೇಶಕ್ಕೆ ಟಾಟಾ ಹೇಳಿದರು. ಬಲವಾದ ಶತ್ರುವನ್ನು ಎದುರಿಸಲು ಮೆದುವಾದ ವಿದೇಶಾಂಗ ನೀತಿಗಳು! ದಶಕಗಳಿಂದ ನಮ್ಮ ನಾಯಕರೆನಿಸಿಕೊಂಡವರ ಪ್ರಜಾಪಾಲನಾ ಪರಿಗಳಿಂದ ದೇಶದ ಮಾನ ಹೋಗಿದ್ದು ಎಲ್ಲರಿಗೂ ತಿಳಿದೆ ಇದೆ. ನಮ್ಮ ಸುತ್ತಮುತ್ತಲ ಪುಟ್ಟದೇಶಗಳು ತಮ್ಮ ದೌರ್ಬಲ್ಯಗಳನ್ನು ನೀಗಿಕೊಂಡು ಅಗಾಧಶಕ್ತಿಗಳಾಗಿ ಮೆರೆಯುತ್ತಿರುವಾಗ, ಸ್ವಾಭಿಮಾನ, ದೇಶಾಭಿಮಾನಗಳಿಲ್ಲದೆ, ಕಾಯಕನಿರತವಾಗದೆ ನಮ್ಮ ದೇಶ ಬರೀ ಮೈಯನ್ನು ಬೆಳೆಸಿಕೊಂಡಿತು. ಅಗಾಧ ಜನಸಂಖ್ಯೆಯ ಬಡದೇಶವಾಯಿತು. ಈ ದುಸ್ಥಿತಿ ದೇಶಕ್ಕೆ ಬರಬೇಕಾಗಿದ್ದಿರಲಿಲ್ಲ. ಭಾರತ ಭಾಗ್ಯವಿಧಾತ ಈಗೀಗ ಕಣ್ಣು ತೆರೆಯುತ್ತಿದ್ದಾನೆ ಎನಿಸುತ್ತೆ. ಎಲ್ಲೋ ಒಂದಿಷ್ಟು ಬದಲಾವಣೆಗಳಾಗುವ ಸೂಚನೆಗಳು ಕಾಣುತ್ತಿವೆ.

ಜಗತ್ತಿನ ಪ್ರಪ್ರಥಮ ರಾಜ್ಯಾಡಳಿತ ಶಾಸ್ತ್ರಗ್ರಂಥ ಈ ದೇಶದಲ್ಲೆ ಮೈತಳೆದಿದ್ದು. ಅದೇ ‘ಅರ್ಥಶಾಸ್ತ್ರ’. ಅರ್ಥಶಾಸ್ತ್ರವೆಂದರೆ ಈಗ ನಾವಂದುಕೊಂಡಂತೆ ಬರೀ ಎಕನಾಮಿಕ್ಸ್ ಅಲ್ಲ. ಅದೂ ಸೇರಿದಂತೆ ರಾಜ್ಯಾಂಗ, ಕಾರ್ಯಾಂಗ, ನ್ಯಾಯಾಂಗಗಳೆಂಬ ಇಂದಿನ ರಾಜ್ಯವ್ಯವಸ್ಥೆಯ ಮೂರು ಪ್ರಧಾನ ಕಂಬಗಳ ಮೇಲೆ ನಿಂತಿರುವ ವಿಶಾಲ ವ್ಯಾಪ್ತಿಯಿರುವ ಗ್ರಂಥ. ಅರ್ಥವನ್ನು ಚಾಣಕ್ಯ ನಿರೂಪಿಸುವುದು- ಮನುಷ್ಯನ ವೃತ್ತಿ, ಬದುಕು ಎಂದು.

ಅರ್ಥಶಾಸ್ತ್ರದಲ್ಲಿ ಸಮಾಜಶಾಸ್ತ್ರ, ಸಾಮಾಜಿಕ ಸಂಸ್ಥೆಗಳು, ವೃತ್ತಿ, ವ್ಯವಸ್ಥೆ, ಆಡಳಿತ ಕ್ರಮ ಒಟ್ಟು ರಾಜ ಸಾಧಿಸಬೇಕಾದ ಪ್ರಜಾಕ್ಷೇಮಗಳ ಬಗ್ಗೆ ಭಾರತೀಯ ಪಾಂಡಿತ್ಯ, ಪರಿಶ್ರಮ, ಪಕ್ವದೃಷ್ಟಿಗಳಿವೆ. ದುರದೃಷ್ಟವೆಂದರೆ ಸ್ವಾತಂತ್ರೊ್ಯೕತ್ತರ ಭಾರತ ಈ ದೇಶೀ ವಿಶೇಷಗಳ ಬಗ್ಗೆ ಗಮನಹರಿಸಲೇ ಇಲ್ಲ. ವಿಲಾಯಿತಿಗಳನ್ನು ಅನುಕರಿಸಿದ್ದೇ ಅನುಕರಿಸಿದ್ದು. ಅದಕ್ಕಾಗಿಯೇ ಭಾರತ ‘ಇತೋ ಭ್ರಷ್ಟ ತತೋ ಭ್ರಷ್ಟ’ವಾಗಿ ಕುಕ್ಕರಿಸಿದ್ದು. ಭಾರತೀಯರಿಗೆ ಅಧ್ಯಾತ್ಮದಲ್ಲಿರುವಂತೆಯೆ ಲೌಕಿಕ ಜೀವನದಲ್ಲೂ ಅನಿತರ ಸಾಧಾರಣವಾದ ಸ್ವಂತಿಕೆಯ ಛಾಪು ಇರುವುದನ್ನು ಅರ್ಥಶಾಸ್ತ್ರ ಎತ್ತಿ ತೋರುತ್ತದೆ.

ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ‘ಅಧಿಕರಣ’ಗಳೆಂಬ 15 ಮುಖ್ಯ ವಿಭಾಗಗಳೂ ‘ಪ್ರಕರಣ’ಗಳೆಂಬ 180 ಉಪವಿಭಾಗಗಳೂ ಇವೆ. ಕೌಟಿಲ್ಯನ ಗ್ರಹಿಕೆಯ ಹಾಸು-ಬೀಸುಗಳು ಬೆರಗುಗೊಳಿಸುತ್ತವೆ. ಅಧಿಕಾರಿಗಳ ಅರ್ಹತೆ ಯೋಗ್ಯತೆಗಳ ಪರೀಕ್ಷೆ, ನಿಯುಕ್ತಿ, ಅವರ ಕಾರ್ಯವ್ಯಾಪ್ತಿ, ಸಂಬಳ, ಸಾರಿಗೆ, ತೆರಿಗೆ, ವೈದ್ಯ, ಅಕ್ಕಸಾಲಿಗ, ಸಮಗಾರ ಮುಂತಾದ ಕರಕುಶಲ ಶಿಲ್ಪಿಗಳು ಇತರ ವೃತ್ತಿಗಳವರ ವಿಭಾಗಗಳು; ಹೆಂಗಸರು, ಮಕ್ಕಳು, ಬಸುರಿ-ಬಾಣಂತಿಯರ ಆರೈಕೆ, ಮುದುಕರು, ದಾಸರು, ದಾಸಿಯರು, ಗಣಿಕೆಯರು ಮುಂತಾದವರ ಕೆಲಸ-ಕಾರ್ಯ, ಸಂಬಳ; ಮದುವೆ-ವಿಚ್ಛೇದ, ಆಸ್ತಿವಿಭಾಗ, ದಂಡನೆ, ಶೋಧನೆ, ರಕ್ಷಿಗಳು, ನ್ಯಾಯಾಲಯಗಳು, ಆಯುರ್ವೆದ ಚಿಕಿತ್ಸೆಗಳು, ವಿಶಿಷ್ಟ ಮದ್ದುಗಳು, ಪಶು-ಪಕ್ಷಿ, ಮೃಗಗಳ ಸಾಕಾಣಿಕೆ, ಗಣಿಗಾರಿಕೆ, ರತ್ನ ವ್ಯಾಪಾರ ಎಲ್ಲವನ್ನು ಒಳಗೊಂಡಿದೆ ಅರ್ಥಶಾಸ್ತ್ರ!

ಮೂರನೆಯ ಅಧಿಕರಣವಾದ ಧರ್ಮಸ್ಥೀಯದಲ್ಲಿ (ಸಾಮಾಜಿಕ ನ್ಯಾಯ ವಿತರಣೆ) ಪ್ರಜೆಗಳ ಹಕ್ಕುಬಾಧ್ಯತೆ, ಆರೋಗ್ಯ, ನೈರ್ಮಲ್ಯ, ಸಾಮಾಜಿಕ ರಕ್ಷಣೆಯೊದಗಿಸುವಿಕೆ, ನೀತಿನಿಯಮಗಳು- ನಿಯಮೋಲ್ಲಂಘನೆಗೆ ಶಿಕ್ಷೆ, ಅನಾಥರ ಪೋಷಣೆ, ಕಾರ್ವಿುಕ ಹೆಣ್ಣುಮಕ್ಕಳ ಬಸುರಿ-ಬಾಣಂತನಗಳಂಥ ದುರ್ಬಲಾವಸ್ಥೆಯಲ್ಲಿ ತೋರಬೇಕಾದ ಕಳಕಳಿ, ಒದಗಿಸಬೇಕಾದ ಸೌಕರ್ಯಗಳು, ಸಮಾಜವೆಂಬ ಈ ಬೃಹದಂಗಳದಲ್ಲಿ ಬದುಕು ನಡೆಸುತ್ತಿರುವ ಎಲ್ಲ ವ್ಯಕ್ತಿಗಳ ಸ್ಥಾನಮಾನ, ವಿದ್ಯೆ, ಉದ್ಯೋಗ, ಆರೋಗ್ಯ ಹೀಗೆ ಅನೇಕ ವಿಷಯಗಳ ಬಗ್ಗೆ ಮಾಹಿತಿಯ ಮಹಾಪೂರವೇ ಹರಿದಿದೆ. ಇದರಲ್ಲಿ ಕನ್ಯಾಪ್ರಕರ್ಮ, ವಿವಾಹ ಸಂಯುಕ್ತ, ದಾಯವಿಭಾಗ, ಅತಿಚಾರದಂಡ, ವಾಕ್​ಪಾರುಷ್ಯ ಮುಂತಾದ 19 ಉಪವಿಭಾಗಗಳು ಅಡಕವಾಗಿವೆ.

ಅಪ್ರಾಪ್ತ ವಯಸ್ಸಿನ ಮಕ್ಕಳನ್ನು, ಗರ್ಭಿಣಿಯರನ್ನು ವಿಶೇಷ ಕಾಳಜಿಯಿಂದ ಕಾಣಬೇಕು. ತಪ್ಪಿದರೆ ಅಪರಾಧಿಗಳಿಗೆ ಅಧಿಕ ದಂಡನೆ ಎನ್ನುತ್ತದೆ ಅರ್ಥಶಾಸ್ತ್ರ. ಇಂದಿಗೂ ಶ್ರೀಮಂತ ಮಧ್ಯಪ್ರಾಚ್ಯ ದೇಶಗಳಿಗೆ ಭಾರತ ಮತ್ತು ಏಷ್ಯಾದ ಇತರ ಬಡದೇಶಗಳಿಂದ ರವಾನೆಯಾಗುವ ಮಕ್ಕಳು ಶ್ರೀಮಂತರ ಹುಚ್ಚಾಟಗಳಿಗೆ ಬಲಿಯಾಗುತ್ತಿದ್ದಾರೆ. ತಂದೆ-ತಾಯಂದಿರೆ ಮಕ್ಕಳನ್ನು ಮಾರಾಟ ಮಾಡಿ ಬಲಿಕೊಡುತ್ತಿದ್ದಾರೆ. ಈ ಪ್ರಸಂಗಗಳಲ್ಲಿ ಬಡತನಕ್ಕಿಂತ ಅಜ್ಞಾನ, ಅಜಾಗರೂಕತೆ ಹೆಚ್ಚೆಂದು ಹೇಳಿದರೆ ತಪ್ಪಾಗಲಾರದು. ಕೆಲವು ಅರಬ ಶ್ರೀಮಂತರು ಓಡುವ ಒಂಟೆಗಳಿಗೆ ಮಕ್ಕಳನ್ನು ಕಟ್ಟಿ ಅವು ಭಯದಿಂದ ಹೃದಯವಿದ್ರಾವಕವಾಗಿ ಆಕ್ರಂದನ ಮಾಡುವುದನ್ನು ನೋಡಿ ಆನಂದಪಡುತ್ತಾರೆ!

‘ಕರ್ಮಕರಕಲ್ಪ’ ಪ್ರಕರಣದಲ್ಲಿ ಕೆಲಸಗಾರರ ಆರೋಗ್ಯದ ಬಗ್ಗೆ ಇರುವ ಕಾಳಜಿ ವ್ಯಕ್ತವಾಗುತ್ತದೆ. ಆಕಸ್ಮಿಕಗಳಿಂದ, ವ್ಯಾಧಿ ಮುಂತಾದ ಹಾನಿಗಳಿಂದ ಉಂಟಾಗುವ ಅನರ್ಥಗಳನ್ನು ತಪ್ಪಿಸಿ ಅವರಿಗೆ ಸೂಕ್ತರಕ್ಷಣೆ ಒದಗಿಸುವ ಆಪದ್ಧನ ನೀಡಬೇಕೆಂದು ಹೇಳುವುದು ಇಂದಿನ ವಿಮೆಯೋಜನೆಗೆ ಸರಿಸಾಟಿಯಾಗಿವೆ.

ವಾಕ್ ಸ್ವಾತಂತ್ರ್ಯ: ತನ್ನ ಗ್ರಾಮವನ್ನು ದೇಶವನ್ನು, ಜಾತಿಯನ್ನು, ಸಂಘವನ್ನು, ದೇವಾಲಯವನ್ನು, ನಟನಟಿಯರ ವೃತ್ತಿಯನ್ನು ಹಳಿದವನಿಗೆ ಮುಟ್ಟಿ ನೋಡಿಕೊಳ್ಳುವಂಥ ದಂಡವಿಧಿಸಬೇಕೆನ್ನುತ್ತದೆ ಅರ್ಥಶಾಸ್ತ್ರ. ವಾಕ್​ಪಾರುಷ್ಯ ಪ್ರಕರಣದಲ್ಲಿ ಈ ವಿವರಗಳನ್ನು ನೀಡಲಾಗಿದೆ. ಇದರೊಡನೆ ಇಂದಿನ ಜೆಎನ್​ಯುು ಮುಂತಾದ ವಿಶ್ವವಿದ್ಯಾಲಯಗಳಲ್ಲಿ ನಡೆದ ‘ಭಾರತ್ ಕಿ ಬರ್​ಬಾದಿ’ ಘೊಷಣೆಯನ್ನು ವಾಕ್ ಸ್ವಾತಂತ್ರ್ಯ ಎಂದು ಬುದ್ಧಿಜೀವಿಗಳು ಬಣ್ಣಿಸುವುದನ್ನು ಹೋಲಿಸಿ ನೋಡಿ. ನಾವೆಷ್ಟು ಮುಂದುವರಿದವರೆಂಬುದು ತಿಳಿಯುತ್ತದೆ. ಹಿಂದೆ ಈ ದೇಶ ಹೇಗಿತ್ತೆಂದು ತಿಳಿಯಲಾದರೂ ಅರ್ಥಶಾಸ್ತ್ರವನ್ನು ಓದಬೇಕು.

(ಲೇಖಕರು ಸಂಸ್ಕೃತ ವಿದುಷಿ ಮತ್ತು

ನಿಕಟಪೂರ್ವ ವಿಧಾನಪರಿಷತ್ ಸದಸ್ಯರು)

 

Leave a Reply

Your email address will not be published. Required fields are marked *

Back To Top