Friday, 18th August 2017  

Vijayavani

1. ಕಾಂಗ್ರೆಸ್‌ನಲ್ಲಿ ಎಡಪಂಥಿಯರಿಗೆ ಮಾತ್ರ ಮಣೆ- ಚುನಾವಣಾ ತಂತ್ರಗಾರ ಕೈ ಗುಡ್‌ಬೈ- ಅಲ್ಪ ಸಂಖ್ಯಾತರರನ್ನ ಅತಿಯಾಗಿ ಓಲೈಸ್ತಿದ್ಯಾ ಕಾಂಗ್ರೆಸ್‌.? 2. ಜೆಡಿಎಸ್​ ಭಿನ್ನರಿಗೆಲ್ಲಾ ಇಲ್ಲಾ ಟಿಕೆಟ್​ – 3 ಕ್ಷೇತ್ರಗಳ ಟಿಕೆಟ್​​​​​​​​ಗೆ ಖಾತ್ರಿ ನೀಡದ ಖರ್ಗೆ- ತ್ರಿಶಂಕು ಸ್ಥಿತಿಯಲ್ಲಿ ಜೆಡಿಎಸ್​​​​​​ ಭಿನ್ನರ ಸ್ಥಿತಿ 3. ಸಿಲಿಕಾನ್ ಸಿಟಿಗೆ ಖತರ್ನಾಕ್​ ಗ್ಯಾಂಗ್​ ಎಂಟ್ರಿ- ಸೆಕ್ಯೂರಿಟಿ ಡ್ರೆಸ್​​​ನಲ್ಲಿ ಮಾಡ್ತಿದ್ದಾರೆ ಕಳ್ಳತನ- ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಕೃತ್ಯ 4. ರಾಜೀನಾಮೆ ಬಳಿಕ ವಿಶಾಲ್‌ ಸಿಕ್ಕಾ ಮೊದಲ ಮಾತು- ನನ್ನ ಜೀವನದ ದುಃಖದ ವಿಚಾರ ಅಂತಾ ಬೇಸರ- ಅತ್ತ ನಾನು ಕಾರಣನಲ್ಲ ಎಂದ ನಾರಾಯಣ ಮೂರ್ತಿ 5. ಯುಪಿ ಆಸ್ಪತ್ರೆಯಲ್ಲಿ ಮಕ್ಕಳ ಸಾವು ಪ್ರಕರಣ- ಹೈಕೋರ್ಟ್‌ನಿಂದ ಯೋಗಿ ಸರ್ಕಾರಕ್ಕೆ ತರಾಟೆಗೆ- ಕೂಡಲೇ ವರದಿ ನೀಡಲು ಸೂಚನೆ
Breaking News :

ಭಾರತಕ್ಕೆ ಸಂದ ಜಯ

Friday, 04.08.2017, 3:00 AM       No Comments

ಸಿಂಧೂ ನದಿ ಕಣಿವೆಯಲ್ಲಿ ಎರಡು ಜಲವಿದ್ಯುತ್ ಯೋಜನೆಗಳನ್ನು ಮುಂದುವರಿಸಲು ವಿಶ್ವಬ್ಯಾಂಕ್ ಭಾರತಕ್ಕೆ ಅನುಮತಿ ನೀಡಿದೆ. ಈ ಯೋಜನೆಗಳಿಂದಾಗಿ ನದಿನೀರಿನ ಅನಿರ್ಬಂಧಿತ ಬಳಕೆಗೆ ತೊಂದರೆಯಾಗುತ್ತದೆ ಎಂದು ಆಕ್ಷೇಪವೆತ್ತಿದ್ದ ಪಾಕಿಸ್ತಾನ, ಯೋಜನೆಯ ತಾಂತ್ರಿಕ ವಿನ್ಯಾಸದ ಕುರಿತು ತಾನೆತ್ತಿರುವ ತಕರಾರು ಕುರಿತು ಪರಿಶೀಲನೆ ನಡೆಸುವಂತೆ ವಿಶ್ವಬ್ಯಾಂಕನ್ನು ಕೋರಿತ್ತು. ಆದರೆ ಉಭಯ ದೇಶಗಳ ಕಾರ್ಯದರ್ಶಿ ಮಟ್ಟದ ಮಾತುಕತೆಯಲ್ಲಿ ಈ ತಕರಾರನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿರುವ ವಿಶ್ವಬ್ಯಾಂಕ್, 1960ರ ಇಂಡಸ್ ವಾಟರ್ ಟ್ರೀಟಿ ನಿಬಂಧನೆಗೆ ಅನುಸಾರವಾಗಿ ಈ ಯೋಜನೆಗಳನ್ನು ಅನುಷ್ಠಾನಗೊಳಿಸಬಹುದು ಎಂದು ಹೇಳಿದೆ. ಹೀಗಾಗಿ, ಈ ಒಡಂಬಡಿಕೆಯಡಿ ಭಾರತ ತನ್ನ ಪಾಲಿನ ನೀರನ್ನು ಸಂಪೂರ್ಣ ಬಳಸಿಕೊಳ್ಳಲು ಇದ್ದ ಅಡೆತಡೆ ನಿವಾರಣೆಯಾದಂತಾಗಿದೆ. ಇದು ಭಾರತಕ್ಕೆ ಸಂದಿರುವ ಜಯವೂ ಹೌದು, ಯೋಜನೆಗೆ ತೊಡರುಗಾಲು ಹಾಕುತ್ತಿದ್ದ ಪಾಕಿಸ್ತಾನಕ್ಕಾದ ಮುಖಭಂಗವೂ ಹೌದು.

ಹಾಗೆ ನೋಡಿದರೆ, ನೈಸರ್ಗಿಕ ಹರಿವಿನ ಸಹಜನ್ಯಾಯದ ಅನುಸಾರ ತನ್ನ ಪಾಲಿನ ನೀರಿನ ಬಳಕೆಯ ಕುರಿತಷ್ಟೇ ಭಾರತ ಉತ್ಸುಕವಾಗಿತ್ತೇ ವಿನಾ, ಪಾಕಿಸ್ತಾನದ ಪಾಲಿನ ನೀರನ್ನು ಕಸಿದುಕೊಳ್ಳಬೇಕೆಂಬುದಾಗಲೀ ಅಥವಾ ಅಲ್ಲಿಗೆ ಹರಿಯುವ ನೀರಿನ ಪ್ರಮಾಣಕ್ಕೆ ತಡೆಯೊಡ್ಡಬೇಕೆಂಬುದಾಗಲೀ ಇದರ ಹಿಂದಿನ ಉದ್ದೇಶವಾಗಿರಲಿಲ್ಲ. ಈ ಎಲ್ಲ ಅಂಶಗಳನ್ನು ಮನಗಂಡಿರುವ ವಿಶ್ವಬ್ಯಾಂಕ್ ಯಥೋಚಿತವಾಗಿಯೇ ನಡೆದುಕೊಂಡಿದೆ ಎನ್ನಲಡ್ಡಿಯಿಲ್ಲ. ಕಳೆದ ವರ್ಷದ ಸೆಪ್ಟೆಂಬರ್​ನಲ್ಲಿ ನಡೆದ ಇಂಡಸ್ ನದಿ ಕುರಿತ ಪರಿಶೀಲನಾ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ‘ನೀರು ಮತ್ತು ರಕ್ತ ಜತೆಯಾಗಿ ಹರಿಯಲು ಸಾಧ್ಯವಿಲ್ಲ‘ ಎಂದು ಹೇಳುವ ಮೂಲಕ ಪಾಕ್ ಜತೆಗಿನ 1960ರ ಸಿಂಧೂ ನದಿನೀರು ಹಂಚಿಕೆ ಒಪ್ಪಂದದ ಮರುಪರಿಶೀಲನೆಗೆ ಮುಂದಾದ ಕಾರಣ, ಪಾಕಿಸ್ತಾನ ಈ ತಕರಾರು ಪರಿಹರಿಸುವಂತೆ ವಿಶ್ವಬ್ಯಾಂಕ್​ನ ಮೊರೆಹೋಗಿತ್ತು.

ಒಂದಕ್ಕಿಂತ ಹೆಚ್ಚು ದೇಶಗಳಲ್ಲಿ ಹರಿಯುವ ನದಿನೀರಿನ ಹಂಚಿಕೆ ಮತ್ತು ಬಳಕೆ ಕುರಿತಂತೆ ತಾಂತ್ರಿಕ ನೆಲೆಗಟ್ಟನ್ನು ಆಧರಿಸಿ ವಿಶ್ವಬ್ಯಾಂಕ್ ನೀಡಿರುವ ಈ ಅನುಮತಿಯು ಎರಡು ದೇಶಗಳ ನಡುವಿನ ಜಲಜಗಳಕ್ಕೆ ಪರಿಹಾರದ ಮಾಗೋಪಾಯವೊಂದನ್ನು ಕಲ್ಪಿಸಿದ್ದು, ಇದು ಇಂಥದೇ ತಕರಾರುಗಳ ಇತ್ಯರ್ಥಕ್ಕೆ ಮೇಲ್ಪಂಕ್ತಿಯಾಗಬೇಕಿದೆ. ಅದರಲ್ಲೂ ಭಾರತದಂಥ ಒಕ್ಕೂಟ ವ್ಯವಸ್ಥೆಯಲ್ಲಿ, ರಾಜ್ಯ ರಾಜ್ಯಗಳ ನಡುವೆ ಇಂಥ ವ್ಯಾಜ್ಯಗಳು ಬಹಳ ಕಾಲದಿಂದ ನಡೆಯುತ್ತಲೇ ಇವೆ. ಬೇಸಿಗೆಯ ಕಾಲಾವಧಿಯಲ್ಲಿ ಮತ್ತು ಒಣಗುತ್ತಿರುವ ಬೆಳೆಯನ್ನು ಉಳಿಸಿಕೊಳ್ಳಲು ನೀರು ಬಿಡಬೇಕೆಂಬ ಹಕ್ಕೊತ್ತಾಯದ ಸಂದರ್ಭದಲ್ಲಿ ಇಂಥ ವ್ಯಾಜ್ಯಗಳು ತೀವ್ರವಾಗುತ್ತವೆ.

ಆದರೆ ದಶಕಗಳಷ್ಟು ಹಿಂದೆಯೇ ರಾಜ್ಯ ರಾಜ್ಯಗಳ ನಡುವೆ ರೂಪುಗೊಂಡಿರುವ ಜಲಹಂಚಿಕೆ ಸಂಬಂಧಿತ ಒಡಂಬಡಿಕೆಗಳು ಬದಲಾಗಿರುವ ಭೌಗೋಳಿಕ ಪರಿಸ್ಥಿತಿ ಹಾಗೂ ಜನಸಂಖ್ಯಾ ವೈಪರೀತ್ಯದ ಕಾರಣದಿಂದಾಗಿ ಈಗ ಅಪ್ರಸ್ತುತವಾಗಿ ತೋರುವ ನಿದರ್ಶನಗಳೂ ನಮ್ಮಲ್ಲಿ ಇಲ್ಲದಿಲ್ಲ. ಕರ್ನಾಟಕದಲ್ಲೇ ಕುಡಿಯಲು ನೀರಿಲ್ಲದಿರುವಾಗ ಮತ್ತು ನಮ್ಮ ಬೆಳೆಗಳೇ ಒಣಗುತ್ತಿರುವಾಗ, ಇಂಥ ಅಪ್ರಸ್ತುತ ಒಡಂಬಡಿಕೆಗಳಲ್ಲಿನ ಷರತ್ತುಗಳ ಕಾರಣದಿಂದಾಗಿ ಪಕ್ಕದ ರಾಜ್ಯಕ್ಕೆ ನೀರನ್ನು ಹರಿಸಬೇಕಾದ ಅನಿವಾರ್ಯತೆಯಲ್ಲಿ ರಾಜ್ಯ ಸಿಲುಕಿಕೊಂಡೇ ಬಂದಿದೆ. ಹೀಗಾಗಿ ನೈಸರ್ಗಿಕ ಹರಿವಿನ ಸಹಜ ನ್ಯಾಯವನ್ನು ಆಧರಿಸಿದ ಇಂಥ ಫೈಸಲಾತಿ ಕ್ರಮ ದೇಶದ ಎಲ್ಲ ಭಾಗಗಳಿಗೂ ಅನ್ವಯವಾಗುವಂತಾಗಬೇಕು. ಜಲಕ್ಷಾಮ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಇದು ಅನಿವಾರ್ಯ ಕೂಡ.

Leave a Reply

Your email address will not be published. Required fields are marked *

Back To Top