Saturday, 26th May 2018  

Vijayavani

ನಾಮಪತ್ರ ವಾಪಸ್ ಪಡೆದ ಸುರೇಶ್​ಕುಮಾರ್​- ಅವಿರೋಧವಾಗಿ ರಮೇಶ್​ಕುಮಾರ್​ ಆಯ್ಕೆ- ಎರಡನೇ ಬಾರಿಗೆ ಸ್ಪೀಕರ್​ ಆಗಿ ನೇಮಕ        ಸದನದಲ್ಲಿ ವಿಶ್ವಾಮತ ಪರೀಕ್ಷೆ- ಮೂರು ಪಕ್ಷಗಳ ಎಲ್ಲಾ ಶಾಸಕರು ಹಾಜರ್​- ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಬಿಎಸ್​ವೈ        ಮೈತ್ರಿ ಸರ್ಕಾರದ ಪರ್ವ ಆರಂಭ- ಸಾಲ ಮನ್ನಾ ಮಾಡ್ತಾರಾ ಎಚ್​ಡಿಕೆ- ಕೊಟ್ಟ ಮಾತು ಉಳಿಸಿಕೊಳ್ತಾರಾ ಕಾಂಗ್ರೆಸ್​ ನಾಯಕರು        ಸಚಿವ ಸ್ಥಾನಕ್ಕಾಗಿ ಲಾಬಿ ಶುರು- ಕೆಪಿಸಿಸಿ ಅಧ್ಯಕ್ಷ ಸ್ಥಾನ, ಗೃಹಖಾತೆಗೆ ಡಿಕೆಶಿ ಪಟ್ಟು- ಹೈಕಮಾಂಡ್ ಭೇಟಿಗೆ ತೆರಳಲಿರುವ ಕೈ ನಾಯಕರು        ಮುಗಿದ ಬಹುಮತ ಸಾಬೀತಿನ ಪರೀಕ್ಷೆ- ಶಾಸಕರ ರೆಸಾರ್ಟ್​ ರಾಜಕೀಯ ಅಂತ್ಯ- ಇನ್ನಾದ್ರೂ ಕ್ಷೇತ್ರಗಳತ್ತ ತೆರಳ್ತಾರಾ ಎಂಎಲ್​ಎಗಳು        ಸಿಎಂಗೆ ಹೊಸ ಕಾರು ನೀಡಿದ ಡಿಪಿಎಆರ್- ಜಿಎ 6363 ಕಾರ್​ ನಂಬರ್​- ಹೊಸ ಕಾರು ಬಳಸಲು ಸಿಎಂ ನಿರ್ಧಾರ       
Breaking News

ಭಾಮಾ ಹಾಡುವ ಭಿನ್ನ ರಾಗ

Friday, 21.04.2017, 3:04 AM       No Comments

ಹತ್ತಾರು ಸಿನಿಮಾಗಳಲ್ಲಿ ಕಲರ್​ಫುಲ್ ಆಗಿ ಕಾಣಿಸಿಕೊಂಡು ಬೇಸರವಾದ ಬಳಿಕ ಹೊಸದೇನಾದರೂ ಮಾಡಬೇಕು ಎಂಬ ಬಯಕೆ ನಾಯಕಿಯರಲ್ಲಿ ಹುಟ್ಟಿಕೊಳ್ಳುತ್ತದೆ. ಮಲಯಾಳಂ ಮತ್ತು ಕನ್ನಡ ಸಿನಿಮಾಗಳಲ್ಲಿ ಮಿಂಚುತ್ತಿರುವ ನಟಿ ಭಾಮಾ ಮನದಲ್ಲೂ ಅಂಥ ಬಯಕೆ ಮೂಡಿತ್ತು. ಅದಕ್ಕೆ ಪೂರಕವಾಗಿ ಅವರ ಪಾಲಿಗೆ ‘ರಾಗ’ ಚಿತ್ರದ ಆಫರ್ ಒಲಿದು ಬಂತು. ಥಳುಕು-ಬಳುಕಿಗೆ ಸಂಪೂರ್ಣ ಗುಡ್​ಬೈ ಹೇಳಿ, ಇಡೀ ಚಿತ್ರದಲ್ಲಿ ಅಂಧ ಹುಡುಗಿಯಾಗಿ ನಟಿಸಿರುವ ಅವರಿಗೆ ಹೊಸತನಕ್ಕೆ ತೆರೆದುಕೊಂಡ ಹೆಮ್ಮೆ ಇದೆ. ಮಿತ್ರ ನಟನೆ-ನಿರ್ವಣದ, ಪಿ. ಸಿ. ಶೇಖರ್ ನಿರ್ದೇಶನವಿರುವ ‘ರಾಗ’ ಇಂದು (ಏ.21) ಎಲ್ಲೆಡೆ ತೆರೆಕಾಣುತ್ತಿದ್ದು, ಇದೇ ಮೊದಲ ಬಾರಿಗೆ ಇಂಥ ಒಂದು ಭಿನ್ನ ಅವತಾರದಲ್ಲಿ ಪ್ರೇಕ್ಷಕರೆದುರು ಬರುತ್ತಿರುವ ಖುಷಿಯಲ್ಲೇ ವಿಜಯವಾಣಿ ಜತೆ ಭಾಮಾ ಮಾತನಾಡಿದ್ದಾರೆ.

| ಮದನ್​ಕುಮಾರ್ ಸಾಗರ ಬೆಂಗಳೂರು

 • ನೀವು ‘ರಾಗ’ ಸಿನಿಮಾ ಒಪ್ಪಿಕೊಳ್ಳಲು ಕಾರಣ?

ನಿರ್ದೇಶಕ ಪಿ.ಸಿ. ಶೇಖರ್ ಬಂದು ಕತೆ ಹೇಳಿದಾಗ ಸಖತ್ ಇಂಪ್ರೆಸ್ ಆದೆ. ಇಡೀ ನನ್ನ ವೃತ್ತಿ ಜೀವನದಲ್ಲಿಯೇ ನಾನು ಈವರೆಗೆ ಇಂಥ ಪಾತ್ರ ಮಾಡಿರಲಿಲ್ಲ. ಮಾಮೂಲಿ ಕಮರ್ಷಿಯಲ್ ಹೀರೋಯಿನ್​ಗಿಂತಲೂ ಭಿನ್ನವಾಗಿದ್ದ ಈ ಪಾತ್ರದ ಬಗ್ಗೆ ಕೇಳುತ್ತಿದ್ದಂತೆಯೇ ತುಂಬ ಎಕ್ಸೈಟ್ ಆದೆ. ಇಂಥ ಪಾತ್ರಕ್ಕಾಗಿ ಬಹಳ ದಿನಗಳಿಂದ ಕಾದಿದ್ದ ನಾನು ಮರುಮಾತಿಲ್ಲದೆ ಒಪ್ಪಿಕೊಂಡೆ.

 • ಮಿತ್ರ ಹೀರೋ ಎಂಬ ಕಾರಣಕ್ಕೆ ಕನ್ನಡದ ಕೆಲವು ನಾಯಕಿಯರು ಈ ಚಿತ್ರದಲ್ಲಿ ನಟಿಸಲು ಹಿಂದೇಟು ಹಾಕಿದರು. ಕಡೆಗೆ ನೀವು ಒಪ್ಪಿಕೊಂಡ್ರಿ. ಕಥೆ, ಪಾತ್ರ ಮತ್ತು ನಾಯಕ- ಇವುಗಳಲ್ಲಿ ನಿಮಗೆ ಯಾವುದು ಮುಖ್ಯ?

ಕನ್ನಡದ ನಾಯಕಿಯರು ಯಾಕೆ ಹಿಂದೇಟು ಹಾಕಿದರು ಅಂತ ನನಗೆ ಗೊತ್ತಿಲ್ಲ. ವೈಯಕ್ತಿಕವಾಗಿ ನನಗಂತೂ ಕಥೆ ತುಂಬ ಇಷ್ಟವಾಯ್ತು. ಸಿನಿಮಾದ ಆಯ್ಕೆಯಲ್ಲಿ ನನ್ನದೇ ಆದ ನಿಲುವುಗಳಿವೆ. ನನ್ನ ಜತೆ ಯಾರು ನಟಿಸುತ್ತಾರೆ ಎಂಬುದು ನನಗೆ ಮುಖ್ಯವೇ ಅಲ್ಲ. ಕಥೆ ಮತ್ತು ನನ್ನ ಪಾತ್ರ ಹೇಗಿರಲಿದೆ ಎಂಬುದನ್ನು ಗಮನಿಸುತ್ತೇನೆ. ಮಿತ್ರ ಒಬ್ಬ ಅತ್ಯುತ್ತಮ ನಟ. ಅವರ ಜತೆ ಕೆಲಸ ಮಾಡಲು ಹಿಂಜರಿಯುವ ಅಗತ್ಯವಿಲ್ಲ.

 • ಕಣ್ಣಿಲ್ಲದ ಹುಡುಗಿಯಾಗಿ ನಟಿಸಲು ಕಷ್ಟ ಎನಿಸಲಿಲ್ಲವೇ?

ಕಷ್ಟ ಖಂಡಿತವಾಗಿಯೂ ಇತ್ತು. ಕಣ್ಣುಗುಡ್ಡೆ ಗಳನ್ನು ವಿಚಿತ್ರವಾಗಿ ಮಾಡಿಕೊಂಡು ನಟಿಸು ವಾಗ ನೋವಾಗುವುದು ಸಹಜ. ಹಾಗಿದ್ದರೂ ಇಷ್ಟಪಟ್ಟು ಮಾಡುತ್ತಿರುವ ಪಾತ್ರವಾದ್ದರಿಂದ ಕಷ್ಟ ಎನಿಸಲಿಲ್ಲ. ಕಣ್ಣಿಲ್ಲದ ಹುಡುಗಿಯಾಗಿ ಕ್ಯಾಮರಾ ಎದುರಿಸುವಾಗ ಮಾನಸಿಕ ಸಿದ್ಧತೆಯೂ ಬೇಕಾಗಿತ್ತು. ನಿರ್ದೇಶಕರು ಒಂದಷ್ಟು ಸಿನಿಮಾಗಳ ರೆಫರೆನ್ಸ್ ನೀಡಿದ್ದರು. ಯುಟ್ಯೂಬ್​ನಲ್ಲಿಯೂ ಅನೇಕ ವಿಡಿಯೋಗಳನ್ನು ನೋಡಿ ಅಂಧರ ಬಾಡಿಲಾಂಗ್ವೇಜ್ ಹೇಗಿರುತ್ತದೆ ಎಂಬುದನ್ನು ತಿಳಿದುಕೊಂಡು ತಯಾರಾದೆ.

 • ಇಡೀ ಚಿತ್ರದಲ್ಲಿ ನಿಮಗೆ ಸವಾಲು ಎನಿಸಿದ್ದು ಏನು?

ಎಲ್ಲಕ್ಕಿಂತ ಹೆಚ್ಚಾಗಿ ಪಾತ್ರವೇ ಸವಾಲಾಗಿತ್ತು. ಇಷ್ಟು ವರ್ಷಗಳ ಕಾಲ ಚಿತ್ರರಂಗದಲ್ಲಿದ್ದರೂ ಇಂಥ ಒಂದು ಪಾತ್ರ ಮಾಡಿರಲಿಲ್ಲ. ಅಂಧರ ದಿನಚರಿ ಬಗ್ಗೆ ನೆನಪಿಸಿಕೊಂಡಾಗಲೆಲ್ಲ ನನಗೆ ನೂರಾರು ಪ್ರಶ್ನೆಗಳು ಮೂಡುತ್ತಿದ್ದವು. ಯಾವ ಸಂದರ್ಭಗಳಿಗೆ ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ತಿಳಿದುಕೊಂಡರಷ್ಟೇ ನಟಿಸಲು ಸಾಧ್ಯವಿತ್ತು. ಹಾಗಂತ ಹೆಚ್ಚು ಚಿಂತೆ ಮಾಡಲಿಲ್ಲ. ಯಾಕೆಂದರೆ ನಿರ್ದೇಶಕರು ನನ್ನಿಂದ ಸೂಕ್ತ ರೀತಿಯಲ್ಲಿ ನಟನೆ ಮಾಡಿಸುತ್ತಾರೆ ಎಂಬುದು ಗೊತ್ತಿತ್ತು. ಪ್ರತಿಯೊಂದು ಫ್ರೇಮ್ ಕೂಡ ಹೇಗಿರಬೇಕು, ಒಂದೊಂದು ಪಾತ್ರವೂ ಹೇಗೆ ಮೂಡಿಬರಬೇಕು ಎಂಬ ಬಗ್ಗೆಯೂ ಅವರಿಗೆ ಸ್ಪಷ್ಟತೆ ಇತ್ತು. ಅವರ ಸಹಕಾರದಿಂದ ಎಲ್ಲ ಕೆಲಸಗಳೂ ಸುಲಭವಾಗಿ ಮುಗಿದವು.

 •  ಎರಡನೇ ಬಾರಿಗೆ ಪಿ.ಸಿ. ಶೇಖರ್ ನಿರ್ದೇಶನದಡಿ ಕೆಲಸ ಮಾಡಿದ ಅನುಭವ ಹೇಗಿತ್ತು?

ಒಬ್ಬ ನಿರ್ದೇಶಕನಾಗಿಯೂ, ಒಬ್ಬ ಸಹೃದಯಿಯಾಗಿಯೂ ಅವರನ್ನು ಬಲ್ಲೆ. ಈವರೆಗೆ ನಾನು ಕಂಡಿರುವ ಪ್ರತಿಭಾನ್ವಿತ ನಿರ್ದೇಶಕರಲ್ಲಿ ಶೇಖರ್ ಕೂಡ ಒಬ್ಬರು. ಈ ಹಿಂದೆ ‘ಅರ್ಜುನ’ ಚಿತ್ರದಲ್ಲಿಯೂ ಅವರ ಜತೆ ಕೆಲಸ ಮಾಡಿದ್ದೆ. ಹಾಗಾಗಿ ‘ರಾಗ’ ವೇಳೆ ಇನ್ನಷ್ಟು ಆತ್ಮೀಯವಾಗಿ ಕೆಲಸ ಮಾಡಲು ಸಾಧ್ಯವಾಯ್ತು.

 •  ಚಿತ್ರದ ಟ್ರೇಲರ್​ಗೆ ಎಲ್ಲರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಅದರಲ್ಲಿನ ನಿಮ್ಮ ನಟನೆ ಬಗ್ಗೆ ಜನರು ಏನು ಹೇಳುತ್ತಿದ್ದಾರೆ?

ಕರ್ನಾಟಕ ಮಾತ್ರವಲ್ಲದೆ, ಕೇರಳದಲ್ಲಿಯೂ ಟ್ರೇಲರ್​ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿಬಂದಿವೆ. ಇಲ್ಲಿನ ಮಾಧ್ಯಮಗಳು ಕೂಡ ‘ರಾಗ’ ಬಗ್ಗೆ ಸುದ್ದಿ ಪ್ರಸಾರ ಮಾಡಿವೆ. ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟಗೊಂಡಿವೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಈ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಎಲ್ಲರಿಂದಲೂ ಒಳ್ಳೆಯ ಬೆಂಬಲ ಸಿಗುತ್ತಿದೆ.

 • ಶೀಘ್ರದಲ್ಲೇ ‘ಬಾಹುಬಲಿ 2’ ಬಿಡುಗಡೆ ಆಗುತ್ತಿದೆ. ಈ ಹೊತ್ತಿನಲ್ಲಿ ‘ರಾಗ’ ಸಿನಿಮಾ ರಿಲೀಸ್ ಆಗುತ್ತಿರುವುದರ ಬಗ್ಗೆ ಅಭಿಪ್ರಾಯವೇನು?

ಈ ಸಮಯದಲ್ಲಿ ‘ಬಾಹುಬಲಿ 2’ ಬಗ್ಗೆ ನಾನು ಚಿಂತಿಸುತ್ತಿಲ್ಲ. ಅದರ ಪಾಡಿಗೆ ಅದು ಬರಲಿ. ಸದ್ಯಕ್ಕಂತೂ ನನ್ನ ಮನಸಿನಲ್ಲಿ ಕೇವಲ ‘ರಾಗ’ದ ವಿಚಾರಗಳೇ ಹರಿದಾಡುತ್ತಿವೆ. ಒಳ್ಳೆಯ ಸಬ್ಜೆಕ್ಟ್ ಇಟ್ಟುಕೊಂಡು ಸಿನಿಮಾ ಮಾಡಿದ್ದೇವೆ. ನನ್ನ ನಟನೆ ಬಗ್ಗೆಯೂ ನನಗೆ ಆತ್ಮವಿಶ್ವಾಸವಿದೆ. ಜತೆಗೆ ಆತಂಕ ಕೂಡ ಇದ್ದೇ ಇರುತ್ತದೆ. ಈಗೇನಿದ್ದರೂ ಜನರು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ತಿಳಿಯುವ ಕಾಲ. ಎಲ್ಲವೂ ಪ್ರೇಕ್ಷಕರಿಗೆ ಬಿಟ್ಟಿದ್ದು.

 •  ಸಹ ನಟ ಮಿತ್ರ ಬಗ್ಗೆ ಏನನಿಸಿತು?

ಇದೇ ಮೊದಲ ಬಾರಿಗೆ ನಾನು ಅವರ ಜತೆ ನಟಿಸಿರುವುದು. ಈ ಪಾತ್ರಕ್ಕಾಗಿ ಮಾತ್ರವಲ್ಲದೆ, ಇಡೀ ಸಿನಿಮಾಗಾಗಿ ನಿರ್ವಪಕನ ಸ್ಥಾನದಲ್ಲಿ ನಿಂತು ಅವರು ಸಾಕಷ್ಟು ರಿಸ್ಕ್ ತೆಗೆದುಕೊಂಡಿದ್ದಾರೆ. ಸಾಮಾನ್ಯವಾಗಿ ಈವರೆಗೂ ಅವರು ಕಾಮಿಡಿ ಪಾತ್ರಗಳನ್ನು ಮಾಡಿಕೊಂಡಿದ್ದರು. ಆದರೆ ಆ ಇಮೇಜ್​ನಿಂದ ಹೊರಬರಲು ಅವರು ಎಷ್ಟು ಶ್ರಮಿಸಿದ್ದಾರೆ ಎಂಬುದು ಈಗಾಗಲೇ ಟ್ರೇಲರ್ ನೋಡಿರುವ ಪ್ರೇಕ್ಷಕರಿಗೆ ಅರ್ಥವಾಗಿರುತ್ತದೆ. ದೇಹದ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಜನರನ್ನು ಗಂಭೀರ ಪಾತ್ರದ ಮೂಲಕವೂ ಅವರು ರಂಜಿಸಬಲ್ಲರು ಎಂಬುದು ಈ ಸಿನಿಮಾದಿಂದ ಗೊತ್ತಾಗುತ್ತದೆ. ಇಷ್ಟೆಲ್ಲ ಬದ್ಧತೆ ಇರುವಂತಹ ನಟನ ಜತೆ ಕೆಲಸ ಮಾಡಿದ್ದು ಖುಷಿ ಎನಿಸಿತು.

 • ಬೇರೆ ಭಾಷೆಗಳಿಗೆ ‘ರಾಗ’ ರಿಮೇಕ್ ಆಗುವುದಾದರೆ ಅಲ್ಲಿಯೂ ನಟಿಸುವ ಆಸೆ ಇದೆಯೇ?

ಖಂಡಿತವಾಗಿಯೂ ಆಸೆ ಇದೆ. ಈ ಚಿತ್ರ ಮಲಯಾಳಂ ಸೇರಿದಂತೆ ಕೆಲವು ಭಾಷೆಗಳಿಗೂ ರಿಮೇಕ್ ಆಗಬಹುದು. ಹಾಗೊಂದು ಮಾತುಕತೆ ನಡೆಯುತ್ತಿದೆ. ಆದರೆ ಅಂತಿಮವಾಗಿ ಏನಾಗುತ್ತೋ ಗೊತ್ತಿಲ್ಲ. ಒಂದುವೇಳೆ ಮಲಯಾಳಂಗೆ ರಿಮೇಕ್ ಆದ್ರೆ ನಮಗಂತೂ ಸಖತ್ ಖುಷಿಯಾಗುತ್ತದೆ.

 •  ಕನ್ನಡದ ಬೇರೆ ಯಾವುದಾದರೂ ಸಿನಿಮಾಗಳಲ್ಲಿ ನಟಿಸುತ್ತಿದ್ದೀರಾ?

ಸದ್ಯಕ್ಕೆ ‘ರಾಗ’ ಹೊರತಾಗಿ ಬೇರೆ ಯಾವುದೇ ಸಿನಿಮಾಗಳಲ್ಲೂ ತೊಡಗಿಕೊಂಡಿಲ್ಲ. ಒಳ್ಳೆಯ ಪ್ರಾಜೆಕ್ಟ್ ಬಂದರೆ ಒಪ್ಪಿಕೊಳ್ಳುತ್ತೇನೆ.

 • ಮಲಯಾಳಂ ಮತ್ತು ಕನ್ನಡ ಚಿತ್ರರಂಗಗಳ ನಡುವೆ ನಿಮಗೆ ಕಂಡಿರುವ ವ್ಯತ್ಯಾಸಗಳೇನು?

ಎಲ್ಲ ಚಿತ್ರರಂಗಗಳಲ್ಲೂ ಒಂದಿಲ್ಲೊಂದು ವ್ಯತ್ಯಾಸಗಳು ಇದ್ದೇ ಇರುತ್ತವೆ. ಮಲಯಾಳಂನಲ್ಲಿ ಹೆಚ್ಚಾಗಿ ಫ್ಯಾಮಿಲಿ ಓರಿಯೆಂಟೆಡ್ ಸಿನಿಮಾಗಳನ್ನು ಇಷ್ಟಪಡುತ್ತಾರೆ. ಕನ್ನಡಿಗರು ಪ್ರೇಮಕತೆಗಳಿಗೆ ಮನಸೋಲುತ್ತಾರೆ.

 • ಕಷ್ಟಪಟ್ಟು ಕನ್ನಡ ಕಲಿತಿದ್ದೀರಿ ಅಲ್ಲವೇ?

ಈ ಭಾಷೆ ಎಂದರೆ ನನಗೆ ಇಷ್ಟ. ‘ಮೊದಲ ಸಲ’ ಚಿತ್ರದಿಂದಲೇ ಕನ್ನಡ ಕಲಿಯಲು ಪ್ರಯತ್ನಿಸಿದೆ. ‘ಶೈಲೂ’ ಚಿತ್ರೀಕರಣದ ವೇಳೆ ಎಸ್.ನಾರಾಯಣ್ ಅವರು ಬೇಗ ಕನ್ನಡ ಕಲಿಯುವಂತೆ ಒತ್ತಾಯಿಸಿದರು. ಆಗ ನಾನು ಈ ಭಾಷೆಯನ್ನು ಸ್ಪಷ್ಟವಾಗಿ ಕಲಿಯಬೇಕು ಎಂಬ ಛಲ ಮೂಡಿತು. ಈಗ ಕನ್ನಡದಲ್ಲಿ ಯಾರು ಏನೇ ಹೇಳಿದರೂ ಅರ್ಥ ಮಾಡಿಕೊಳ್ಳುತ್ತೇನೆ. ಸಾಧ್ಯವಾದಷ್ಟು ಕನ್ನಡದಲ್ಲಿಯೇ ಉತ್ತರಿಸಲು ಪ್ರಯತ್ನಿಸುತ್ತೇನೆ.

Leave a Reply

Your email address will not be published. Required fields are marked *

Back To Top