Wednesday, 17th January 2018  

Vijayavani

ಸೈಟ್‌ಗಾಗಿ ಸಾಹಿತ್ಯ ಬರೀತಾರೆ - ತಲೆಬುಡ ಇಲ್ಲದ ಸಂದೇಶಗಳನ್ನ ಕೊಡ್ತಾರೆ - ಬುದ್ಧಿಜೀವಿಗಳ ಮೇಲೆ ಮುಗಿಬಿದ್ದ ಕಾಂಟ್ರವರ್ಸಿ ಸಚಿವ        ಪೂಜೆ ಮಾಡಲು ಬಂದವನು ಮಗಳನ್ನೇ ಕೇಳ್ದ - ಜನರ ಕೈಗೆ ಸಿಕ್ಕಿ ಹಣ್ಣುಗಾಯಾದ ಪಿಳ್ಳಂಗೋವಿ ಬಾಬಾ - ಚಿತ್ರದುರ್ಗದ ಕಂಚಿಪುರ ಗ್ರಾಮದಲ್ಲಿ ಡೋಂಗಿಗೆ ಥಳಿತ        14 ತಿಂಗಳಿಂದ ಸಂಬಳ ನೀಡದ ಸಕ್ಕರೆ ಕಾರ್ಖಾನೆ - ಚಿಕಿತ್ಸೆಗೆ ಹಣವಿಲ್ಲದೇ ಮಗು ಕಳೆದುಕೊಂಡ ಕಾರ್ಮಿಕ - ರಾಜಕಾರಣಿಗಳ ಕಿತ್ತಾಟಕ್ಕೆ ಹಸುಗೂಸು ಬಲಿ        ಐಪಿಎಸ್‌ ಅಧಿಕಾರಿಗಳಿಗೆ ಸಿಎಂ, ಗೃಹ ಸಚಿವರ ತರಾಟೆ - ಮತೀಯವಾದಿಗಳ ಮೇಲೆ ಕ್ರಮಕ್ಕೆ ಸೂಚನೆ - ವಾರ್ಷಿಕ ಸಭೆಯಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಕ್ಲಾಸ್        ಗುಜರಾತ್​​​​​ನಲ್ಲಿ ಇಸ್ರೇಲ್​ ಪ್ರಧಾನಿ - ಮೋದಿ ಜತೆಗೆ ಕಾರ್‌ನಲ್ಲಿ ಜಂಟಿ ರೋಡ್‌ ಶೋ - ಸಾಬರಮತಿ ಆಶ್ರಮದಲ್ಲಿ ಚರಕ ಸುತ್ತಿದ ನೆತನ್ಯಾಹು       
Breaking News :

ಭದ್ರತೆ ಖಾತ್ರಿಪಡಿಸಿ

Saturday, 06.01.2018, 3:03 AM       No Comments

ಧಾರ್ ವಿವಾದದ ಕಗ್ಗಂಟು ಸುಪ್ರೀಂ ಕೋರ್ಟ್ ಅಂಗಳದಲ್ಲಿ ಇರುವಾಗಲೇ ಜನರ ಆಧಾರ್ ಮಾಹಿತಿ ಸೋರಿಕೆಗೆ ಸಂಬಂಧಿಸಿದ ಆಘಾತಕಾರಿ ಸುದ್ದಿ ಭಾರೀ ಚರ್ಚೆ ಹುಟ್ಟುಹಾಕುವ ಜತೆಗೆ ಹಲವು ಪ್ರಶ್ನೆಗಳನ್ನೂ ಸೃಷ್ಟಿಸಿದೆ. ಕೇವಲ 500 ರೂಪಾಯಿ ಪಾವತಿಸಿದರೆ ಕೋಟ್ಯಂತರ ಜನರ ಆಧಾರ್ ಮಾಹಿತಿಯನ್ನು ಪಡೆಯಬಹುದು ಎಂದು ಆಂಗ್ಲ ಪತ್ರಿಕೆಯೊಂದು ತನ್ನ ತನಿಖಾ ವರದಿಯಲ್ಲಿ ತಿಳಿಸುವ ಜತೆಗೆ, ಈ ವ್ಯವಸ್ಥೆಯಲ್ಲಿನ ಅಪಸವ್ಯಗಳತ್ತ ಬೊಟ್ಟು ಮಾಡಿದೆ. ಆನ್​ಲೈನ್ ಮನಿವ್ಯಾಲೆಟ್ ಮೂಲಕ 500 ರೂ. ಪಾವತಿಸಿದರೆ ಆಧಾರ್ ಮಾಹಿತಿ ಇರುವ ಪೋರ್ಟಲ್​ನ ಯೂಸರ್ ನೇಮ್ ಮತ್ತು ಪಾಸ್​ವರ್ಡ್ ನೀಡುವ ಜಾಲ ಸಕ್ರಿಯವಾಗಿದೆ ಎಂದು ಹೇಳಲಾಗಿದೆ. ಈ ಬಗೆಯ ಆತಂಕ ಸೃಷ್ಟಿಯಾಗಿರುವುದು ಇದೇ ಮೊದಲೇನಲ್ಲ. ಇಂಥ ಜಾಲಗಳು ಸಕ್ರಿಯವಾಗಿರುವ ಕುರಿತಂತೆ ಆಗಾಗ ಮಾಧ್ಯಮಗಳು ಎಚ್ಚರಿಸುತ್ತಲೇ ಬಂದಿವೆ. ಆದರೆ, ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಪ್ರತಿ ಬಾರಿ ಸ್ಪಷ್ಟನೆ ನೀಡುವುದಕ್ಕೆ ಸೀಮಿತವಾಗಿ ಉಳಿದಿದೆಯೇ ಹೊರತು ಭದ್ರತೆಗೆ ಸಂಬಂಧಪಟ್ಟ ಅನುಮಾನ, ಆತಂಕಗಳನ್ನು ದೂರ ಮಾಡುವ ನಿಟ್ಟಿನಲ್ಲಿ ಪರಿಣಾಮಕಾರಿ ಹಾಗೂ ಕ್ಷಿಪ್ರ ಕ್ರಮಗಳನ್ನು ಕೈಗೊಂಡಿಲ್ಲ ಎಂಬುದು ವಾಸ್ತವ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿ ಯೋಜನೆಯನ್ನು ಆಧಾರ್​ನೊಂದಿಗೆ ಜೋಡಿಸುತ್ತಿದ್ದು, ನಿಜವಾದ ಫಲಾನುಭವಿಗಳನ್ನು ತಲುಪಲು ಯತ್ನಿಸುತ್ತಿವೆ. ಸರ್ಕಾರದ ಉದ್ದೇಶ, ಆಶಯವೇನೋ ಒಳ್ಳೆಯದೇ. ಆದರೆ, ಆಧಾರ್ ಹೆಸರಲ್ಲಿ ಈ ಹಿಂದೆ ಯಾವೆಲ್ಲ ಅಧ್ವಾನಗಳು ನಡೆದಿವೆ ಎಂಬುದನ್ನು ಜನಸಾಮಾನ್ಯರು ಮರೆತಿಲ್ಲ. ಯಾರದೋ ಹೆಸರಿನ ಆಧಾರ್ ಯಾರಿಗೋ ಹೋಗಿದ್ದು, ಬಾಂಗ್ಲಾದ ಅಕ್ರಮ ವಲಸಿಗರು ಕೂಡ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿಕೊಂಡಿದ್ದು, ಒಬ್ಬರ ಹೆಸರಲ್ಲೇ ಹಲವು ಕಾರ್ಡಗಳು ಸೃಷ್ಟಿಯಾಗಿರುವುದು ಇವೆಲ್ಲ ನಡೆದಿವೆ.

ಬೃಹತ್ ಯೋಜನೆಯೊಂದನ್ನು ಅನುಷ್ಠಾನಕ್ಕೆ ತರುವಾಗ ಆರಂಭಿಕ ಹಂತದಲ್ಲಿ ಕೆಲವೊಂದು ನ್ಯೂನತೆ, ಕೊರತೆಗಳು ಇರುತ್ತವೆ ಎಂಬುದು ಒಪ್ಪಿಕೊಳ್ಳಬಹುದಾದರೂ ಆಧಾರ್ ವಿಷಯದಲ್ಲಿ ಪದೇಪದೆ ನಂಬಿಕೆ ಕುಸಿಯುವಂಥ ಘಟನೆಗಳು ಜರುಗುತ್ತಿವೆ. ಆದ್ದರಿಂದಲೇ ಜನಸಾಮಾನ್ಯರಲ್ಲಿ ಆಧಾರ್ ಕುರಿತಂತೆ ಅನುಮಾನಗಳು, ಪ್ರಶ್ನೆಗಳು ಮನೆಮಾಡಿವೆ. ಸರ್ಕಾರಿ ಯೋಜನೆಗಳಿಗೆ, ಫಲಾನುಭವಿಗಳಿಗೆ ಆಧಾರ್ ಜೋಡಣೆ ಮುನ್ನ ಇಂಥ ಕೊರತೆಗಳನ್ನು ನೀಗಿಸಿಕೊಳ್ಳಬೇಕಿತ್ತು.

ಆಧಾರ್​ನಡಿ ವ್ಯಕ್ತಿಯ ವೈಯಕ್ತಿಕ ಮಾಹಿತಿಗಳನ್ನು ಪಡೆದು, ದಾಖಲಿಸಲಾಗುತ್ತದೆ. ಭಾರತ ಮೊದಲೇ ಭಯೋತ್ಪಾದಕರು ಹಾಗೂ ಪ್ರತ್ಯೇಕತಾವಾದಿಗಳ ಉಪಟಳ ಎದುರಿಸುತ್ತಿದೆ. ಒಂದು ವೇಳೆ, ಇಂಥ ಸೂಕ್ಷ್ಮ ಮತ್ತು ಅತಿ ಮಹತ್ವದ ಮಾಹಿತಿಗಳು ಸುಲಭವಾಗಿ ದೇಶವಿರೋಧಿ ಅಥವಾ ವಿಧ್ವಂಸಕ ಶಕ್ತಿಗಳ ಕೈಗೆ ಹೋದರೆ ಗತಿಯೇನು? ದೇಶದ ಬಹುತೇಕರು ಈಗ ಆಧಾರ್ ಕಾರ್ಡ್ ಮಾಡಿಸಿಕೊಂಡಿದ್ದಾರೆ. ಹೀಗಿರುವಾಗ ಅದರ ಮಾಹಿತಿ ಸೋರಿಕೆಯಾಗದಂತೆ ವ್ಯವಸ್ಥೆಯನ್ನು ಅತ್ಯಾಧುನಿಕ ಹಾಗೂ ಮತ್ತಷ್ಟು ಬಲಪಡಿಸುವ ಅವಶ್ಯಕತೆ, ಅನಿವಾರ್ಯತೆ ಎದುರಾಗಿದೆ. ಆಧಾರ್ ಪ್ರಾಧಿಕಾರ ಆರೋಪವನ್ನು ನಿರಾಕರಿಸಿದೆಯಾದರೂ ಪರಿಸ್ಥಿತಿಯ ಗಂಭೀರತೆ ಅರಿಯಬೇಕು. ಸರ್ಕಾರ ಆಧಾರ್ ವ್ಯವಸ್ಥೆಗೆ, ಅದರಲ್ಲಿ ದಾಖಲಾಗಿರುವ ಮಾಹಿತಿ ರಕ್ಷಣೆಗೆ ಸೂಕ್ತ ಭದ್ರತೆ ಒದಗಿಸಬೇಕು. ಇಲ್ಲದಿದ್ದಲ್ಲಿ ಜನರು ಇಂಥ ಕಾರ್ಯಕ್ರಮ, ಯೋಜನೆಗಳ ಮೇಲೆ ವಿಶ್ವಾಸ ಕಳೆದುಕೊಳ್ಳುವ ಅಪಾಯವಿದೆ.

Leave a Reply

Your email address will not be published. Required fields are marked *

Back To Top