| ಕೆ.ಎನ್. ರಾಘವೇಂದ್ರ
ಮಂಡ್ಯ: ಗ್ರಾಮದಲ್ಲಿ ಏನಾದರೂ ಸಮಸ್ಯೆ ಇದ್ದರೆ ಬಗೆಹರಿಸಬೇಕೆಂದು ಜನರು ಪ್ರತಿಭಟನೆ ಮಾಡುವುದು ಸಾಮಾನ್ಯ. ಆದರೆ, ಸಾಮೂಹಿಕ ಶೌಚಗೃಹ ನಿರ್ವಿು ಸಬೇಕು. ಮತ್ತು ದೇವಾಲಯಕ್ಕೆ ಬರುವ ಭಕ್ತರಿಗೆ ಕುಡಿವ ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಬಸವವೊಂದು ಗ್ರಾಪಂಗೆ ಮುತ್ತಿಗೆ ಹಾಕಿದೆ. ಹೌದು! ಇಂಥದೊಂದು ಪವಾಡ ಮದ್ದೂರು ತಾಲೂಕಿನ ಕೆ.ಶೆಟ್ಟಹಳ್ಳಿಯಲ್ಲಿ ನಡೆದಿದೆ.
ಪವಾಡ ಸದೃಶ: ಗ್ರಾಮದಲ್ಲಿರುವ ಬೊಮ್ಮಲಿಂಗೇಶ್ವರ ದೇವಸ್ಥಾನಕ್ಕೆ ಸೇರಿದ ಬಸವ, ಎಂದಿನಂತೆ ಸೋಮವಾರ ಪೂಜೆಯಲ್ಲಿ ಭಾಗವಹಿಸಿದೆ. ಬಳಿಕ ಬಸವ, ತನ್ನಷ್ಟಕ್ಕೆ ತಾನೇ ದೇವಾಲಯದಿಂದ ಹೊರಟು ಏಕಾಏಕಿ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ನುಗ್ಗಿದೆ. ಕಚೇರಿಯೊಳಗಿದ್ದ ಜನಪ್ರತಿನಿಧಿ ಗಳು, ಅಧಿಕಾರಿಗಳು ಗಾಬರಿಯಾಗಿದ್ದಾರೆ. ಅಲ್ಲದೆ, ಆಚೆ ಹೋಗುವಂತೆ ಕೇಳಿಕೊಂಡಿದ್ದಾರೆ. ಆದರೆ, ಬಸವ ಮಾತ್ರ ಯಾರ ಮಾತನ್ನೂ ಕೇಳಿಲ್ಲ. ಜತೆಗೆ ಆಚೆಗೂ ಹೋಗದೆ ಪಟ್ಟು ಹಿಡಿದು ಸ್ಥಳದಲ್ಲೇ ಮೊಕ್ಕಾಂ ಹೂಡಿತು.
ಕಾರಣ ಏನು?: ದೇವಸ್ಥಾನದ ಬಸವ ಏಕಾಏಕಿ ಕಚೇರಿಗೆ ನುಗ್ಗಿ ವಾಪಸ್ ಹೋಗದೇ ಇರುವುದರ ಬಗ್ಗೆ ಮಾಹಿತಿ ತಿಳಿದ ಗ್ರಾಮಸ್ಥರು ಗ್ರಾಪಂ ಎದುರು ಜಮಾವಣೆಗೊಂಡರು. ಹಿಂದೊಮ್ಮೆ ಗ್ರಾಮದಲ್ಲಿ ಸಾಮೂಹಿಕ ಶೌಚಗೃಹ ನಿರ್ವಿುಸುವುದು ಮತ್ತು ದೇವಸ್ಥಾನಕ್ಕೆ ಬರುವ ಭಕ್ತರು, ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ಕುಡಿವ ನೀರಿನ ವ್ಯವಸ್ಥೆ ಮಾಡುವುದಾಗಿ ಗ್ರಾಪಂ ಅಧಿಕಾರಿಗಳು, ಜನಪ್ರತಿನಿಧಿಗಳು ಒಪ್ಪಿಕೊಂಡಿದ್ದರು. ಆದರೆ, ಆಡಿದ ಮಾತಿನಂತೆ ನಡೆದುಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಪಂಗೆ ನುಗ್ಗಿದೆ ಎನ್ನುವ ಮಾಹಿತಿಯನ್ನು ಗ್ರಾಮಸ್ಥರೇ ನೀಡಿದರು. ಬಳಿಕ ಗ್ರಾಪಂ ಸದಸ್ಯರು, ಅಧಿಕಾರಿಗಳು ಹೇಳಿದಂತೆ ಸೌಲಭ್ಯ ದೊರಕಿಸಿಕೊಡುವುದಾಗಿ ಭರವಸೆ ನೀಡುವುದರ ಜತೆಗೆ ಪೂಜೆ ಸಲ್ಲಿಸಿದರು. ಇದಾದ ಕೆಲ ಸಮಯದ ನಂತರ ಬಸವ ಗ್ರಾಪಂ ಕಾರ್ಯಾಲಯದಿಂದ ಹೊರಬಂದಿತು.