Sunday, 24th June 2018  

Vijayavani

ಕಾವೇರಿ ನೀರು ಪ್ರಾಧಿಕಾರ ಸಮಿತಿ ರಚನೆ - ಕೇಂದ್ರದಿಂದ ರಾಜ್ಯಕ್ಕಾದ ಅನ್ಯಾಯದ ಬಗ್ಗೆ ಸರ್ಕಾರದಿಂದ ಪುಸ್ತಕ        ಮಾಜಿ ಸಿಎಂ ಸಿದ್ದುಗೆ ಎಚ್​ಡಿಕೆ ಬಂಪರ್ ಆಫರ್​ - ಸಮನ್ವಯ ಸಮಿತಿ ಅಧ್ಯಕ್ಷರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ?        ನಕಲಿ ದಾಖಲೆ ಸೃಷ್ಟಿಸಿ ಭೂಮಿ ಕಬಳಿಕೆ ಆರೋಪ - ಆತ್ಮಹತ್ಯೆ ಯತ್ನ - ಇದೆಲ್ಲಾ ಷಡ್ಯಂತ್ರ ಅಂದ್ರು ಮುನಿಯಪ್ಪ        ಕಲ್ಲಿನ ಹಾರ ಬೇಕಾದ್ರೆ ಕೊರಳಿಗೆ ಹಾಕಿ - ಸುಗಂಧರಾಜದ ಹೂವಿನ ಹಾರ ಬೇಡ್ವೇಬೇಡ - ಸಚಿವ ಡಿಕೆಶಿ ಆಕ್ಷೇಪ        ವಿದ್ಯುತ್ ಉಳಿಸಲು ಕೇಂದ್ರದ ಮೆಗಾ ಪ್ಲಾನ್ - ಇನ್ಮುಂದೆ 24 ಡಿಗ್ರಿಗೆ ಎಸಿ ಡಿಫಾಲ್ಟ್​ ಸೆಟ್ಟಿಂಗ್       
Breaking News

ಬೇಟೆಗೆ ನಲುಗಿದ ಕೃಷ್ಣಮೃಗ

Tuesday, 21.03.2017, 9:24 AM       No Comments

ಮನುಷ್ಯನ ಅತಿಯಾದ ಹಸ್ತಕ್ಷೇಪದಿಂದ ಜೀವವೈವಿಧ್ಯ ಅಪಾಯ ಎದುರಿಸುವಂತಾಗಿದೆ. ಕಾಡಲ್ಲಿರುವ ಪ್ರಾಣಿಗಳನ್ನೂ ಅವುಗಳ ಪಾಡಿಗೆ ಬಿಡದ ಜನರು ಬೇಟೆಯ ಹೆಸರಲ್ಲಿ ಅವುಗಳನ್ನು ಕೊಲ್ಲುತ್ತಿದ್ದಾರೆ. ಹೀಗೆ ಬೇಟೆ ಹಾವಳಿಗೆ ಸಿಲುಕಿ ಅವಸಾನದ ಅಂಚಿಗೆ ತಲುಪಿವೆ ಕೃಷ್ಣಮೃಗಗಳು. ಅರಣ್ಯ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ಸೂಕ್ತ ಕ್ರಮಕ್ಕೆ ಮುಂದಾಗದಿದ್ದಲ್ಲಿ ಅಪಾಯ ತಪ್ಪಿದ್ದಲ್ಲ.

 | ಮಂಜುನಾಥ್ ಎಂ.ಎನ್.

ದೇಶದ ಬಹುತೇಕ ಮೈದಾನ ಪ್ರದೇಶಗಳಲ್ಲಿ ಕಾಣಸಿಗುವ ಕೃಷ್ಣಮೃಗ ಸಂತತಿ ಮನುಷ್ಯನ ಅತಿಯಾದ ಹಸ್ತಕ್ಷೇಪದಿಂದ ವಿನಾಶದಂಚಿನಲ್ಲಿದೆ. ‘ಆಂಟಿಲೋಪೆ ಸೆರ್ವಿಕಾಪ್ರ’ ಎಂಬ ವೈಜ್ಞಾನಿಕ ಹೆಸರುಳ್ಳ ಕೃಷ್ಣಮೃಗಗಳ ಓಟ, ಜಿಗಿತ ಕಣ್ತುಂಬಿಕೊಳ್ಳುವುದೇ ಸೌಭಾಗ್ಯ.

ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ 20-30ರ ಹಿಂಡಿನಲ್ಲಿ ವಾಸಿಸುವ ಇವು ವರ್ಷಪೂರ್ತಿ ವಂಶಾಭಿವೃದ್ಧಿ ನಡೆಸುತ್ತವೆಯಾದರೂ ಫೆಬ್ರವರಿ ಮತ್ತು ಮಾರ್ಚ್ ಪ್ರಮುಖ ಸಮಯ. ಹಿಂಡಿನ ನಾಯಕತ್ವ ವಹಿಸುವ ಹೆಣ್ಣು ಕೃಷ್ಣಮೃಗ, ಒಮ್ಮೆ ಎರಡು ಮರಿಗಳಿಗೆ ಜನ್ಮ ನೀಡುತ್ತದೆ. ಹೆಣ್ಣಿಗಾಗಿ ಗಂಡು ಕೃಷ್ಣಮೃಗಗಳ ನಡುವೆ ಕಾದಾಟ ಸಾಮಾನ್ಯ. ಈ ಕಾದಾಟ ಕೆಲವೊಮ್ಮೆ ಸಾವಿನಲ್ಲೂ ಅಂತ್ಯವಾಗುತ್ತದೆ.

ಆದರೆ, ಕೃಷ್ಣಮೃಗಗಳಿಗೆ ಹೆಚ್ಚು ಅಪಾಯವಿರುವುದೇ ಬೇಟೆಗಾರರಿಂದ. ಬಾಲಿವುಡ್ ನಟ ಸಲ್ಮಾನ್​ಖಾನ್ ಕೃಷ್ಣಮೃಗ ಬೇಟೆ ಆರೋಪಕ್ಕೆ ಸಿಲುಕಿ ಪಡಬಾರದ ಕಷ್ಟ ಅನುಭವಿಸುತ್ತಿದ್ದರೂ ಕೃಷ್ಣಮೃಗ ಬೇಟೆಗಾರರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಇದರ ಕೊಂಬು, ಚರ್ಮ ಎಲ್ಲವೂ ಬೆಲೆಬಾಳುವಂಥದ್ದು. ಆದ್ದರಿಂದಲೇ ಇವುಗಳ ಬೇಟೆ ಎಗ್ಗಿಲ್ಲದೆ ಸಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ನೈಸರ್ಗಿಕ ಆಹಾರ ಸರಪಳಿಯ ಪ್ರಮುಖ ಕೊಂಡಿಯೊಂದು ಕಳಚುವುದು ನಿಶ್ಚಿತ.

ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಮೇಡ್ಲೇರಿ, ತುಮಕೂರಿನ ಮಧುಗಿರಿಯ ಮೈದನಹಳ್ಳಿ, ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಬಾಸೂರಿನ ಅಮೃತ್​ವುಹಲ್ ಕಾವಲ್ ಕೃಷ್ಣಮೃಗ ಸಂರಕ್ಷಿತ ಅರಣ್ಯ ಪ್ರದೇಶವಲ್ಲದೆ, ಗದಗಿನ ಕಪ್ಪತಗುಡ್ಡ, ಬಳ್ಳಾರಿ ಜಿಲ್ಲೆಯ ಹೊಸಪೇಟೆ, ತೋರಣಗಲ್ಲು ಕೃಷ್ಣಮೃಗಗಳ ಆವಾಸಸ್ಥಾನ. ರಾಜ್ಯದ ‘ಕೃಷ್ಣಮೃಗ ಸಂರಕ್ಷಿತ ಅರಣ್ಯ ಪ್ರದೇಶ’ಗಳ ಮೇಲೆ ಹಂತಕರು ನಿರಂತರ ದಾಳಿ ನಡೆಸುತ್ತಿರುವುದು ಆತಂಕಕಾರಿ ಸಂಗತಿ.

ವಾಹನಗಳ ಸದ್ದಿಗೆ ದಿಕ್ಕಾಪಾಲು

ಬಾಸೂರು, ಕುರುಚಲು ಕಾಡು ಪ್ರದೇಶವಾಗಿದ್ದರೂ ಒಂದು ಕಾಲದಲ್ಲಿ ಹಸಿರು ಮತ್ತು ನೀರಿನಿಂದ ಸಮೃದ್ಧವಾಗಿತ್ತು. ಕೃಷ್ಣಮೃಗಗಳ ಜತೆಗೆ ನರಿ, ತೋಳ, ನೀಲಕಂಠ(ಇಂಡಿಯನ್ ರೋಲರ್), ಸ್ಯಾಂಡ್​ಗ್ರಾಸ್, ಟಿಟ್ಟಿಭ, ನವಿಲು ಮತ್ತಿತರ 15ಕ್ಕೂ ಹೆಚ್ಚು ಜಾತಿಯ ಪ್ರಾಣಿ-ಪಕ್ಷಿಗಳಿಗೆ ಆಸರೆಯಾಗಿತ್ತು. ಉತ್ತಮ ಪ್ರಮಾಣದಲ್ಲಿ ಮಳೆಯಾಗುತ್ತಿದ್ದುದರಿಂದ ಇಲ್ಲಿ ನಿರ್ವಿುಸಲಾಗಿದ್ದ ಸಣ್ಣ ಕೆರೆ ಕಟ್ಟೆಗಳಲ್ಲಿ ನೀರು ತುಂಬಿರುತ್ತಿತ್ತು. ಪ್ರಾಣಿಗಳು ಸ್ವಚ್ಛಂದವಾಗಿ ವಿಹರಿಸುತ್ತಿದ್ದವು. ಆದರೀಗ ಪರಿಸ್ಥಿತಿ ತೀರಾ ಭಿನ್ನವಾಗಿದೆ. ಕೃಷ್ಣಮೃಗಗಳ ವಿಹಾರಧಾಮವಾಗಿದ್ದ ಈ ಅರಣ್ಯ ಪ್ರದೇಶದಲ್ಲೀಗ ಆತಂಕ ಮಡುಗಟ್ಟಿದೆ. ಗ್ರಾಮಸ್ಥರನ್ನು ಅಥವಾ ಯಾವುದೇ ದಾರಿಹೋಕರನ್ನು ಕಂಡರೆ ಅಂಜದ ಈ ಪ್ರಾಣಿಗಳು ವಾಹನಗಳ ಸದ್ದು ಕೇಳಿದರೆ ದಿಕ್ಕಾಪಾಲಾಗಿ ಓಡುತ್ತಿವೆ.

ಬೆಂಗಳೂರಿನ ಪಂಟರ್ ಹಂಟರ್ಸ್

ತರೀಕೆರೆ ತಾಲೂಕಿನ ನೆತ್ತಿಚೌಕ ಅರಣ್ಯದಲ್ಲಿ ಜೋಡಿ ಕಡವೆ ಪ್ರಕರಣ ಜನಮಾನಸದಿಂದ ಮಾಸುವ ಮುನ್ನವೇ ಅದೇ ತಾಲೂಕಿನ ಅಜ್ಜಂಪುರ ಬಳಿಯ ಬಾಸೂರು ಅಮೃತ್​ವುಹಲ್ ಕಾವಲ್​ಗೆ ಬೆಂಗಳೂರು ಮೂಲದ ಹಂಟರ್​ಗಳು ಲಗ್ಗೆಯಿಟ್ಟಿರುವುದರಿಂದ ಕೃಷ್ಣಮೃಗಗಳು ಭಯದಲ್ಲೇ ಬದುಕುವಂತಾಗಿದೆ. ಈ ಭಾಗದ ಸುತ್ತಮುತ್ತಲ ಗ್ರಾಮಸ್ಥರೇ ಹೇಳುವಂತೆ ಕತ್ತಲಲ್ಲಿ ಜೀಪು, ಜಿಪ್ಸಿ, ಸ್ಕಾರ್ಪಿಯೋ ವಾಹನಗಳಲ್ಲಿ ಆಗಾಗ ಬರುವ ಆಗುಂತಕರು ಯಾರ ಅಂಕೆಯೂ ಇಲ್ಲದೆ ಬೇಟೆಯಾಡುತ್ತಿದ್ದಾರೆ.

ಹಗಲು ವೇಳೆಯಲ್ಲೂ ಕೃಷ್ಣಮೃಗಗಳಿಗೆ ಕಂಟಕ ತಪ್ಪಿಲ್ಲ. ಬೆಂಗಳೂರಿನಲ್ಲಿ ಪ್ರಾಣಿ ಹಂತಕರ ವ್ಯವಸ್ಥಿತ ಜಾಲವೇ ಇದ್ದು, ರಾಜಧಾನಿಯ ವಿಲಾಸಪ್ರಿಯ ಜನರ ಮೋಜು-ಮಸ್ತಿಗೆ ಈ ಮುಗ್ಧ ವನ್ಯಜೀವಿಗಳು ಬಲಿಯಾಗುತ್ತಿವೆ. ರಜಾ ದಿನಗಳಲ್ಲಿ ಮಜಾ ಮಾಡಲು ಮಲೆನಾಡಿಗೆ ಬರುವ ಅವರು ಕೃಷ್ಣಮೃಗಗಳ ಜೀವಕ್ಕೆ ಸಂಚಕಾರ ತರುತ್ತಿದ್ದಾರೆ.

1,841 ಎಕರೆ ವಿಸ್ತಾರದ ಈ ಅರಣ್ಯ ಪ್ರದೇಶವನ್ನು 2006-07ರಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಲಿಂಗರಾಜ್ ಅವರು ಕೃಷ್ಣಮೃಗ ಸಂರಕ್ಷಿತ ಪ್ರದೇಶವೆಂದು ಗುರುತಿಸಿದ್ದರು. ಈ ಪ್ರದೇಶವನ್ನು ಸಂರಕ್ಷಿತ ಅರಣ್ಯವೆಂದು ಸರ್ಕಾರಕ್ಕೆ ಅವರು ಶಿಫಾರಸು ಮಾಡಿದ್ದರಿಂದ 1999-2000ರಲ್ಲಿ ಸಂರಕ್ಷಿತ ಅರಣ್ಯ ಪ್ರದೇಶವೆಂದು ಸರ್ಕಾರ ಘೊಷಿಸಿತು.

ಶಾರ್ಪ್ ಶೂಟರ್​ಗಳು

ಬೇಟೆಗಾರರು ಶಾರ್ಪ್ ಶೂಟರ್​ಗಳೇ ಆಗಿದ್ದು, ಅತ್ಯಾಧುನಿಕ ಬಂದೂಕು ಬಳಸಿ ರಾತ್ರಿ ಶಿಕಾರಿಗೆ ಪೂರಕವಾದ ದಿರಿಸುಗಳನ್ನು ಧರಿಸಿ ಬರುತ್ತಾರೆ. ಅರಣ್ಯ ಇಲಾಖೆಯ ಕೆಲವರು ಶಾಮೀಲಾಗಿರುವ ಶಂಕೆ ದಿನೇದಿನೆ ಬಲವಾಗುತ್ತಿದೆ. ಈ ಅರಣ್ಯ ಪ್ರದೇಶಕ್ಕೆ ಇಲಾಖೆ ಸೂಕ್ತ ರಕ್ಷಣೆ ಒದಗಿಸುವುದರ ಜತೆಗೆ ತಪ್ಪಿತಸ್ಥರ ಪತ್ತೆಗೆ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಪ್ರಾಣಿ ಹಂತಕರಿಗೆ ಮಣೆ ಹಾಕುವ ಪ್ರಭಾವಿಗಳ ಆಟಾಟೋಪಕ್ಕೆ ಸರ್ಕಾರ ಕಡಿವಾಣ ಹಾಕದಿದ್ದಲ್ಲಿ ಅಪೂರ್ವ ವನ್ಯಜೀವಿಗಳಿಗೆ ಕಂಟಕ ತಪ್ಪಿದ್ದಲ್ಲ.

ಶುಭಾರಂಭಕ್ಕೆ ಗುಳ್ಳೆನರಿ!

ಎಲ್ಲಿಗಾದರೂ ಹೊರಟಾಗ ಗುಳ್ಳೆನರಿ ಮುಖ ನೋಡಿದರೆ ಒಳಿತಾಗುತ್ತದೆಂಬ ನಂಬಿಕೆ ಗ್ರಾಮೀಣ ಪ್ರದೇಶದಲ್ಲಿದೆ. ಪ್ರಯೋಗಾರ್ಥವಾಗಿ ತಾವು ಮೊದಲು ಹಾರಿಸುವ ಗುಂಡಿನ ಗುರಿ ತಪ್ಪಬಾರದು, ಯಾವುದಾದರೊಂದು ಪ್ರಾಣಿ ಬಲಿಯಾದಲ್ಲಿ ತಮ್ಮ ಗುರಿ ಕೈಗೂಡುತ್ತದೆ ಎನ್ನುವ ನಂಬಿಕೆ ಬೇಟೆಗಾರರದ್ದು. ಹಾಗಾಗಿ ಪ್ರಾಣಿ ಹಂತಕರು ಮೊದಲು ಗುಳ್ಳೆನರಿಯನ್ನೇ ಬೇಟೆಯಾಡುತ್ತಾರೆ. ಇವರಿಂದ ಕೃಷ್ಣಮೃಗದೊಂದಿಗೆ ಗುಳ್ಳೆನರಿಯ ಸಂತತಿಯೂ ಕ್ಷೀಣಿಸುತ್ತಿದೆ.

ಬಾಸೂರಲ್ಲಿ ಬರ

ಒಂದೆಡೆ ಬೇಟೆಗಾರರು ಅಟ್ಟಹಾಸ ಮೆರೆದರೆ, ಇನ್ನೊಂದೆಡೆ ಪ್ರಕೃತಿಯೂ ಮುನಿಸಿಕೊಂಡಿದೆ. ಬಾಸೂರು ಅಮೃತ್ ಮಹಲ್ ಕಾವಲ್​ನ ಸಂರಕ್ಷಿತ ಅರಣ್ಯ ಪ್ರದೇಶದಲ್ಲೀಗ ಕುಡಿಯಲೂ ನೀರಿಲ್ಲ. ನೀರು ಸಂಗ್ರಹಕ್ಕೂ ವ್ಯವಸ್ಥೆಯಿಲ್ಲದೆ ಕೃಷ್ಣಮೃಗಗಳು ನೀರಿಗಾಗಿ ಹಪಹಪಿಸುತ್ತಿವೆ. ಕಾವಲ್​ನ ಮರಗಿಡಗಳು ಒಣಗಿ ನಿಂತಿದ್ದು ಇಡೀ ಪ್ರದೇಶ ಬೆಂಗಾಡಿನಂತೆ ಕಾಣುತ್ತಿದೆ. ಮೇವಿನ ಕೊರತೆಯೂ ಕಾಡುತ್ತಿದೆ. ಕುರುಚಲು ಗಿಡಗಳಲ್ಲಿನ ಅಳಿದುಳಿದ ಹಸಿರೆಲೆಗಳನ್ನು ಆರಿಸಿ ತಿನ್ನುವ ಸ್ಥಿತಿ ನಿರ್ವಣವಾಗಿದೆ. ಕಾಡಲ್ಲಿ ಆಹಾರವಿಲ್ಲದೆ ಮೃಗಗಳು ಆಹಾರಕ್ಕಾಗಿ ಅಕ್ಕಪಕ್ಕದ ಜಮೀನುಗಳಿಗೆ ದಾಳಿ ನಡೆಸುತ್ತಿರುವುದರಿಂದ ಬೆಳೆ ಹಾನಿಯಾಗುತ್ತಿದೆ. ಶಾಶ್ವತವಾದ ಕಟ್ಟೆಗಳನ್ನು ನಿರ್ವಿುಸಿ ನೀರು ತುಂಬಿಸುವ ಕಾರ್ಯ ಕೈಗೊಳ್ಳಬೇಕಿದೆ. ನೀರಿನ ದೋಣಿಗಳನ್ನು ನಿರ್ವಿುಸಿ ತುರ್ತಾಗಿ ನೀರೊದಗಿಸಬೇಕಿದೆ.

ಹಂತಕರಿಗೆ ಹೆದ್ದಾರಿ

ಬಾಸೂರಿನಿಂದ ಹಿರೇನಲ್ಲೂರಿಗೆ ಈ ಸಂರಕ್ಷಿತ ಅರಣ್ಯದ ಮೂಲಕವೇ ಮಣ್ಣಿನ ರಸ್ತೆ ಹೋಗಿರುವುದರಿಂದ ಬೇಟೆಗಾರರಿಗೆ ಮುಕ್ತ ದಾರಿ ಮಾಡಿಕೊಟ್ಟಂತಾಗಿದೆ. ಜನರ ಓಡಾಟದಿಂದ ಮೃಗಗಳಿಗೆ ಹಿಂಸೆಯಾಗುತ್ತಿದೆ. ಅರಣ್ಯ ಇಲಾಖೆ ಮೊದಲು ಈ ಮಾರ್ಗವನ್ನು ಬಂದ್ ಮಾಡಬೇಕು. ಕಾವಲುಗಾರರನ್ನು ನಿಯೋಜಿಸುವ ಮೂಲಕ ನಿರ್ಬಂಧ ವಿಧಿಸಬೇಕು.

ಅರಣ್ಯೀಕರಣ

ಅರಣ್ಯ ಹಾಗೂ ಸಾಮಾಜಿಕ ಅರಣ್ಯ ಅಭಿವೃದ್ಧಿ ಹೆಸರಿನಲ್ಲಿ ಕೋಟ್ಯಂತರ ರೂ. ಬಿಡುಗಡೆ ಮಾಡುವ ಸರ್ಕಾರ ದುರುಪಯೋಗಕ್ಕೆ ಅವಕಾಶ ಮಾಡಿಕೊಡುತ್ತಿದೆ. ಸಾಮಾಜಿಕ ಅರಣ್ಯೀಕರಣದ ಹೆಸರಲ್ಲಿ ನೆಲವನ್ನು ಬಂಜರುಗೊಳಿಸುವ ಕೇಷಿಯಾ, ನೀಲಗಿರಿ ಬೆಳೆಸಲು ಪ್ರೋತ್ಸಾಹ ನೀಡುವ ಬದಲು ನೈಸರ್ಗಿಕ ಜಾತಿಯ ಗಿಡ ನೆಟ್ಟು ಈ ಪ್ರದೇಶದ ಏಳ್ಗೆ ಬಗ್ಗೆ ಚಿಂತಿಸುತ್ತಿಲ್ಲವೇಕೆ ಎಂಬುದು ಜನರ ಪ್ರಶ್ನೆ.

ಬೇಟೆಗಾರರ ಆಟಾಟೋಪ

ಹೊರಗಿನಿಂದ ಬಂದವರು ಬಾಸೂರು ವನ್ಯಧಾಮದ ಜೀವಿಗಳಿಗೆ ಕಂಟಕಪ್ರಾಯರಾಗುತ್ತಿದ್ದಾರೆಯೇ ಹೊರತು ಸ್ಥಳೀಯರಿಂದ ಯಾವುದೇ ಆತಂಕವಿಲ್ಲ. ತಮ್ಮ ಸ್ವಾರ್ಥ ಸಾಧನೆಗೆ ಚಿಕ್ಕಮಗಳೂರು ಜಿಲ್ಲೆಯ ಅರಣ್ಯ ಸಂಪತ್ತಿನ ಜತೆಗೆ ಅಮೂಲ್ಯ ಪ್ರಾಣಿ ಸಂಕುಲದ ಮೇಲೆ ಕನಿಕರವಿಲ್ಲದೆ ಗುಂಡು ಹಾರಿಸುತ್ತಿದ್ದಾರೆ. ಬೇಟೆಗಾರರ ತಂಡ ವಿಹಾರಾರ್ಥ ಬಂದಂತೆ ವ್ಯವಹರಿಸಿ ಈ ಪ್ರದೇಶದಲ್ಲಿರುವ ಪ್ರಾಣಿಗಳ ಚಲನವಲನದ ಬಗ್ಗೆ ಗಮನಿಸಿ ಯಾವ ರೀತಿ ಬೇಟೆಯಾಡಬೇಕೆನ್ನುವ ತಂತ್ರ ರೂಪಿಸುತ್ತದೆ. ಬೇಟೆಗಾಗಿಯೇ ಬಳಸುವ ವಿಶೇಷ ಬ್ಯಾಟರಿ ಲೈಟ್​ಗಳನ್ನು ತಲೆಗೆ ಕಟ್ಟಿಕೊಂಡು ಸಂರಕ್ಷಿತ ಅರಣ್ಯ ಪ್ರವೇಶಿಸುತ್ತಾರೆ. ಅಲ್ಲಲ್ಲಿ ಇರುವ ಮೃಗಗಳತ್ತ ಪ್ರಖರ ಬೆಳಕು ಬೀಳುತ್ತಿದ್ದಂತೆ ಅವು ಅಚ್ಚರಿಯಿಂದ ಬೆಳಕಿನತ್ತ ದಿಟ್ಟಿಸುತ್ತವೆ. ಈ ವೇಳೆ ಅವುಗಳತ್ತ ಗುರಿ ಇಟ್ಟು ಗುಂಡು ಹಾರಿಸಲಾಗುತ್ತದೆ. ಯುದ್ಧ ಗೆದ್ದಂತೆ ಉತ್ಸಾಹ ತೋರುವ ಬೇಟೆಗಾರರ ಅಟ್ಟಹಾಸ ಮತ್ತೂ ಮುಂದುವರಿಯುತ್ತದೆ. ಹೀಗೆ ಮುಗ್ಧ ಪ್ರಾಣಿಗಳ ಮಾರಣಹೋಮ ನಡೆಯುತ್ತಲೇ ಇದೆ.

ವಿಹಾರದ ಸೊಬಗು

ತಿರುವುಮುರುವಾಗಿರುವ ಉದ್ದನೆಯ ಕೋಡುಗಳು, ವರ್ಣರಂಜಿತ ಮುಖವಾಡ ಧರಿಸಿದಂತಿರುವ ಗಂಡು ಹಾಗೂ ಚಿಗರೆಯನ್ನು ಹೋಲುವ ಹೆಣ್ಣು ಕೃಷ್ಣಮೃಗಗಳು ಹಿಂಡುಹಿಂಡಾಗಿ ವಿಹರಿಸುತ್ತಿರುತ್ತವೆ. ಮರಿಗಳು ಚಂಗನೆ ನೆಗೆಯುವ ಪರಿಯಂತೂ ನೋಡಲು ಮನಮೋಹಕ. ಮರಿಯಾಗಿದ್ದಾಗ ಹಳದಿ ಬಣ್ಣದಲ್ಲಿರುವ ಕೃಷ್ಣಮೃಗಗಳು ಕ್ರಮೇಣ ಕಂದು-ಕಪ್ಪು ಬಣ್ಣಕ್ಕೆ ತಿರುಗುತ್ತವೆ. ವಯಸ್ಸಿನೊಂದಿಗೆ ಈ ಬಣ್ಣ ಗಾಢವಾಗುತ್ತದೆ. ಹೆಣ್ಣಿನ ಬಣ್ಣ ಬದಲಾಗದೆ ಹಳದಿಯಾಗೇ ಉಳಿಯುತ್ತದೆ. ಎರಡಕ್ಕೂ ಕಣ್ಣಿನ ಸುತ್ತ ಬಿಳಿ ಉಂಗುರವಿದ್ದು, ಗಂಡಿಗೆ ಸುರುಳಿಯಾದ ಎರಡು ಕೊಂಬುಗಳು ವಿಜಯದ ಧ್ವಜದಂತೆ ಕಂಗೊಳಿಸುತ್ತವೆ.

 ಹತ್ತು ವರ್ಷಗಳ ಹಿಂದೆ ರಕ್ಷಿತಾರಣ್ಯದಲ್ಲಿ 150ಕ್ಕೂ ಹೆಚ್ಚು ಕೃಷ್ಣಮೃಗಗಳಿದ್ದವು. ಹಿಂಡುಹಿಂಡಾಗಿ ವಿಹರಿಸುತ್ತಿದ್ದ ಅವುಗಳನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿತ್ತು. ಬೇಟೆಗಾರರ ಹಾವಳಿಯಿಂದ ದಿನೇದಿನೆ ಅವುಗಳ ಸಂಖ್ಯೆ ಕ್ಷೀಣಿಸುತ್ತಿದೆ.

| ಪುಟ್ಟರಾಜು ಗ್ರಾಮಸ್ಥ

 

ನೀರಿಲ್ಲದೆ ಕಂಗಾಲಾಗಿ ಅಳಿವು-ಉಳಿವಿನ ಸಮಸ್ಯೆ ಎದುರಿಸುತ್ತಿರುವ ಕೃಷ್ಣಮೃಗಗಳನ್ನು ಉಳಿಸಲು ಚಿಂತನೆ ನಡೆಸದ ಅರಣ್ಯ ಇಲಾಖೆ ಇದ್ದರೆಷ್ಟು ಬಿಟ್ಟರೆಷ್ಟು… ರಾಜಧಾನಿಯ ಎಸಿ ಕೊಠಡಿಗಳಲ್ಲಿ ಕುಳಿತು ಕಾರ್ಯಭಾರ ಮಾಡುವ ಅಧಿಕಾರಿಗಳಿಗೆ ಇಲ್ಲಿನ ಸ್ಥಿತಿಯ ಬಗ್ಗೆ ಚಿಂತಿಸಲು ಪುರುಸೊತ್ತೇ ಇಲ್ಲ.

| ಕೆ.ಎನ್.ಕೃಷ್ಣಮೂರ್ತಿ ಗ್ರಾಮಸ್ಥ

Leave a Reply

Your email address will not be published. Required fields are marked *

Back To Top