Wednesday, 18th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡ ಸ್ಪೇನ್

Wednesday, 22.11.2017, 3:05 AM       No Comments

ಸದ್ಯಕ್ಕೆ ಸ್ಪೇನ್​ನ ಒಳಗೆ ಸಾಂವಿಧಾನಿಕವಾಗಿ, ಆಡಳಿತಾತ್ಮಕವಾಗಿ ಪ್ರಧಾನಿ ರಾಜೋಯ್ ಮೇಲುಗೈ ಸಾಧಿಸಿದ್ದಾರೆ. ಜತೆಗೆ ದೇಶದ ಹೊರಗೆ ರಾಜತಾಂತ್ರಿಕವಾಗಿಯೂ ಅವರಿಗೆ ಬೆಂಬಲ ದೊರೆತಿದೆ. ಕೆಟಲೋನಿಯಾದ ಸ್ವಾತಂತ್ರ್ಯವನ್ನು ಮಾನ್ಯ ಮಾಡುವಂತೆ ಐರೋಪ್ಯ ಒಕ್ಕೂಟ ಹಾಗೂ ಪಶ್ಚಿಮದ ಇತರ ಪ್ರಮುಖ ದೇಶಗಳಿಗೆ ಪುಝ್ದುಮಾನ್ ಮಾಡಿಕೊಳ್ಳುತ್ತಿರುವ ಮನವಿಯನ್ನೂ ಯಾರೂ ಪರಿಗಣಿಸುತ್ತಿಲ್ಲ.

 ಇತ್ತೀಚಿನ ವರ್ಷಗಳಲ್ಲಿ ಭೂಪಟದಿಂದ ಮಾಯವಾಗಲಿರುವ ದೇಶಗಳ ಪಟ್ಟಿಯಲ್ಲಿ ಕಾಣಬರುವ ಮೊದಲ ಹೆಸರು ಸ್ಪೇನ್​ನದು. ಈಶಾನ್ಯದ ಕೆಟಲೋನಿಯಾ ಪ್ರಾಂತ್ಯ ಅಕ್ಟೋಬರ್ 27ರಂದು ಸ್ವಾತಂತ್ರ್ಯ ಘೊಷಿಸಿಕೊಂಡಾಗ ಒಂದು ಕಾಲದ ಬಲಾಢ್ಯ ದೇಶ ಸ್ಪೇನ್ ಹೋಳಾಗುವ ಹೊಸ್ತಿಲು ತಲುಪಿಯೇಬಿಟ್ಟಿತ್ತು. ಪ್ರಧಾನಮಂತ್ರಿ ಮಾರಿಯಾನೋ ರಾಜೋಯ್ರ ಕೇಂದ್ರ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಕೆಟಲೋನಿಯಾದ ಪ್ರಾಂತೀಯ ಸರ್ಕಾರವನ್ನು ಬರಖಾಸ್ತುಗೊಳಿಸಿ ತಂಟೆಕೋರ ಪ್ರಾಂತ್ಯವನ್ನು ತನ್ನ ಆಡಳಿತಕ್ಕೆ ಒಳಪಡಿಸಿದೆ. ಪಶ್ಚಿಮ ಯುರೋಪಿನ ಇತರ ಸಹನಾಡುಗಳು ಹಾಗೂ ದೊಡ್ಡಣ್ಣ ಅಮೆರಿಕ, ಸ್ಪಾ್ಯನಿಷ್ ಸರ್ಕಾರದ ಪರವಾಗಿ ನಿಂತಿವೆ. ಆ ಮೂಲಕ ಸ್ಪೇನ್ ಸದ್ಯಕ್ಕೆ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದೆ. ಆದರೆ ಮುಂದೆ ಏನಾಗಬಹುದೆಂದು ಈಗಲೇ ನಿಖರವಾಗಿ ಊಹಿಸುವುದು ಕಷ್ಟ. ಮುಂದಿನ ತಿಂಗಳಿಗೆ ಆಯೋಜಿತವಾಗಿರುವ ಕೆಟಲೋನ್ ಪ್ರಾಂತೀಯ ಸಂಸತ್ತಿನ ಚುನಾವಣೆಗಳು (ನಡೆದರೆ) ಒಂದು ದಾರಿ ತೋರಬಹುದು.

ಪ್ರತ್ಯೇಕತಾವಾದದ ಸಂಕೇತ: ಹಾಗೆ ನೋಡಿದರೆ, ಸ್ಪೇನ್​ನ ಸಂಯುಕ್ತ ಅಸ್ತಿತ್ವದ ಅಂತ್ಯದ ಕಾರ್ವೇಡಗಳು ಐದು ವರ್ಷಗಳ ಹಿಂದೆಯೇ ಕವಿಯತೊಡಗಿದ್ದವು. 2012ರ ನವೆಂಬರ್ 25ರಂದು ಕೆಟಲೋನಿಯಾದಲ್ಲಿ ನಡೆದ ಪ್ರಾಂತೀಯ ಚುನಾವಣೆಗಳು ಮತ್ತದರ ಫಲಿತಾಂಶ ಪಶ್ಚಿಮ ಯುರೋಪಿನಲ್ಲಿ ಪ್ರಬಲವಾಗುತ್ತಿರುವ ಪ್ರತ್ಯೇಕತಾವಾದದ ಸ್ಪಷ್ಟ ಸಂಕೇತವಾಗಿದ್ದವು. ಆವಧಿಗೂ ಮೊದಲೇ ನಡೆದ ಆ ಕ್ಷಿಪ್ರ ಚುನಾವಣೆಗಳಿಗೆ ಕಾರಣವಾದದ್ದು ಸ್ಪೇನ್​ನ ಆರ್ಥಿಕ ಸಂಕಷ್ಟಗಳ ಹೊರೆಯನ್ನು ಪ್ರಾಂತ್ಯಗಳೂ ಹಂಚಿಕೊಳ್ಳಲು ಪ್ರಧಾನಮಂತ್ರಿ ರಾಜೋಯ್ರ ಕೇಂದ್ರ ಸರ್ಕಾರ ರೂಪಿಸಿದ ನೀತಿಗಳ ಪರಿಣಾಮ ಕೆಟಲೋನಿಯಾ ಪ್ರಾಂತ್ಯದ ಮೇಲೆ ಏನಾಗಬಹುದು ಎನ್ನುವ ಪ್ರಶ್ನೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ಪ್ರಾಂತ್ಯದ ಸ್ವಾತಂತ್ರ್ಯಕ್ಕೆ ಇರಬಹುದಾದ ಬೆಂಬಲದ ಮಟ್ಟವನ್ನು ಗುರುತಿಸಲು ಪ್ರಾಂತೀಯ ಅಧ್ಯಕ್ಷ ಅರ್ಥರ್ ಮಾಸ್ ಯೋಜಿಸಿದ್ದು. ಅವರ ಎಣಿಕೆಗೆ ವಿರುದ್ಧವಾಗಿ ಅವರ ಪ್ರತ್ಯೇಕತಾವಾದಿ ಮಿತ್ರಕೂಟ ‘ಕನ್ವರ್ಜೆನ್ಸ್ ಆಂಡ್ ಯೂನಿಯನ್’ (ಸಿಐಯು) ತನ್ನ ಹಿಂದಿನ 62 ಸ್ಥಾನಗಳಲ್ಲಿ 12ನ್ನು ಕಳೆದುಕೊಂಡು 50ಕ್ಕಿಳಿದದ್ದು ನಿಜವಾದರೂ ಪ್ರತ್ಯೇಕತೆಯ ಉಗ್ರ ಸಮರ್ಥಕ ಎಡಪಂಥೀಯ ‘ಕೆಟಲಾನ್ ರಿಪಬ್ಲಿಕನ್ ಲೆಫ್ಟ್’ (ಇಆರ್​ಎಲ್) ತನ್ನ ಸ್ಥಾನಗಳನ್ನು ದ್ವಿಗುಣಗೊಳಿಸಿಕೊಂಡಿತು. ಇದರಿಂದಾಗಿ, 135 ಸದಸ್ಯರ ಪ್ರಾಂತೀಯ ಸಂಸತ್ತಿನಲ್ಲಿ ಕೇವಲ 50 ಸ್ಥಾನಗಳನ್ನು ಗಳಿಸಿ ಅಲ್ಪಸಂಖ್ಯಾತವಾಗಿರುವ ತನ್ನ ಸರ್ಕಾರದ ಉಳಿವಿಗಾಗಿ ಅಧ್ಯಕ್ಷ ಅರ್ಥರ್ ಮಾಸ್ 21 ಸ್ಥಾನಗಳನ್ನು ಗಳಿಸಿದ ಎಡಪಂಥೀಯ ಇಆರ್​ಎಲ್ ಪಕ್ಷದ ಬೆಂಬಲ ಪಡೆಯುವ ಸ್ಥಿತಿ ನಿರ್ವಣವಾಯಿತು. ಬೆಂಬಲಕ್ಕೆ ಪ್ರತಿಯಾಗಿ ಪ್ರತ್ಯೇಕತೆಯ ಬಗ್ಗೆ ತನ್ನ ನಿಲುವುಗಳನ್ನು ಒಪ್ಪಿಕೊಳ್ಳುವಂತೆ ಇಆರ್​ಎಲ್ ಒತ್ತಡ ಹಾಕಿತು. ಚುನಾವಣೆಗಳಲ್ಲಿ ಶೇ. 57ರಷ್ಟು ಮತದಾರರು ಪ್ರತ್ಯೇಕತಾವಾದಿ ಪಕ್ಷಗಳಿಗೆ ಮತ ನೀಡಿದ ಹಾಗೂ ಪ್ರತ್ಯೇಕತಾವಾದಿ ಪಕ್ಷಗಳು 74 ಸ್ಥಾನಗಳನ್ನು ಗಳಿಸಿ 135 ಸದಸ್ಯರ ಪ್ರಾಂತೀಯ ಸಂಸತ್ತಿನಲ್ಲಿ ಒಟ್ಟಾರೆ ಸ್ಪಷ್ಟ ಬಹುಮತ ಪಡೆದ ಹಿನ್ನೆಲೆಯಲ್ಲಿ ಇಆರ್​ಎಲ್ ಹಾಕಿದ ಒತ್ತಡದ ಮಹತ್ವ ಗೊತಾಗುತ್ತದೆ. ನಂತರ, 2015ರ ಅಂತ್ಯದಲ್ಲಿ ನಡೆದ ಚುನಾವಣೆಗಳಲ್ಲಿ ಪ್ರತ್ಯೇಕತಾವಾದಿ ಪಕ್ಷಗಳು ಮತ್ತಷ್ಟು ಬಲಗೊಂಡು ಕನ್ವರ್ಜೆನ್ಸ್ ಆಂಡ್ ಯೂನಿಯನ್​ನ ನಾಯಕ ಕಾರ್ಲೆಸ್ ಪುಝ್ಡುಮಾನ್ ಪ್ರಾಂತಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗ ಕೆಟಲೋನಿಯಾದ ಸ್ವಾತಂತ್ರ್ಯಕ್ಕೆ ಕ್ಷಣಗಣನೆ ಆರಂಭವಾಯಿತೆಂದೇ ಹೇಳಬೇಕು. ಕೆಟಲೋನಿಯಾ ಸ್ಪೇನ್​ನ ಈಶಾನ್ಯದಲ್ಲಿರುವ ಶ್ರೀಮಂತ ಪ್ರಾಂತ್ಯ. ಎಷ್ಟು ಶ್ರೀಮಂತ ಅಂದರೆ ಕೆಟಲೋನಿಯಾ ಒಂದರಿಂದಲೇ ಸ್ಪೇನ್​ನ ನಿವ್ವಳ ರಾಷ್ಟ್ರೀಯ ಉತ್ಪಾದನೆಯ ಶೇ. 20ರಷ್ಟು ಬರುತ್ತದೆ! ಉತ್ತರದಲ್ಲಿ ಫ್ರಾನ್ಸ್ ಮತ್ತು ಪೂರ್ವದಲ್ಲಿ ಮೆಡಿಟರೇನಿಯನ್ ಸಮುದ್ರತೀರವನ್ನು ಹೊಂದಿರುವ ಕೆಟಲೋನಿಯಾದ ರಾಜಧಾನಿ ಸುಂದರ ಬಾರ್ಸಿಲೋನಾ ನಗರ. ಇದು ರಾಜಧಾನಿ ಮ್ಯಾಡ್ರಿಡ್​ನ ನಂತರ ಸ್ಪೇನ್​ನ ಎರಡನೆಯ ಅತಿದೊಡ್ಡ ನಗರವಷ್ಟೇ ಅಲ್ಲ ಒಟ್ಟಾರೆ ಸ್ಪೇನ್ ದೇಶದ ವಾಣಿಜ್ಯಕೇಂದ್ರ.

ಬಲಾಢ್ಯ ವಸಾಹತುಶಾಹಿ: ಮಧ್ಯಯುಗದಲ್ಲಿ ಸ್ಪೇನ್ ಉತ್ತರ ಆಫ್ರಿಕಾದ ಮೊರಾಕ್ಕೊದ ಮುಸ್ಲಿಂ ಆಕ್ರಮಣಕಾರರ ಆಡಳಿತಕ್ಕೊಳಪಟ್ಟಿತ್ತು. ಐಬೀರಿಯನ್ ಪರ್ಯಾಯದ್ವೀಪದ ವಿವಿಧ ಕ್ರಿಶ್ಚಿಯನ್ ಅರಸರುಗಳು ಒಬ್ಬೊಬ್ಬರಾಗಿ ಮುಸ್ಲಿಂ ಆಳ್ವಿಕೆಯಿಂದ ಒಂದೊಂದೇ ಪ್ರದೇಶವನ್ನು ವಿಮೋಚನೆಗೊಳಿಸಿ ಅಂತಿಮವಾಗಿ 15ನೇ ಶತಮಾನದಲ್ಲಿ ಅರಸ ಫರ್ಡಿನೆಂಡ್ ಮತ್ತು ರಾಣಿ ಇಸಬೆಲ್ಲಾ ಮುಸ್ಲಿಂ ಆಳ್ವಿಕೆಯಲ್ಲಿದ್ದ ಕೊನೆಯ ಪ್ರಾಂತ್ಯ ದಕ್ಷಿಣದ ಗ್ರನಾದಾವನ್ನು ವಿಮೋಚನೆಗೊಳಿಸಿ ಇಡೀ ಸ್ಪೇನ್ ಅನ್ನು ಒಂದೇ ಆಡಳಿತದಲ್ಲಿ ತಂದು ಅದನ್ನೊಂದು ಸದೃಢ ಒಕ್ಕೂಟವಾಗಿಸಿದರು. ಅನಂತರ ಘಟಿಸಿದ್ದು ಇತಿಹಾಸ. ಕೆಥೋಲಿಕ್ ಕ್ರಿಶ್ಚಿಯನ್ ರಾಷ್ಟ್ರವಾಗಿ ಉಗಮಿಸಿ ತನ್ನ ಗಡಿಯೊಳಗೆ ಐಕಮತ್ಯ ಸಾಧಿಸಿದ ಸ್ಪೇನ್ ನೌಕಾಯಾನಕ್ಕೆ ಮಹತ್ವ ನೀಡಿ ಅಟ್ಲಾಂಟಿಕ್ ಸಾಗರದಾಚೆಯ ಅಮೆರಿಕ ಖಂಡಗಳನ್ನು ಶೋಧಿಸಿ ಅವುಗಳ ಬಹುಭಾಗಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಅತಿಶ್ರೀಮಂತ ಹಾಗೂ ಬಲಾಢ್ಯ ವಸಾಹತುಶಾಹಿ ಸಾಮ್ರಾಜ್ಯವಾಗಿ ಬೆಳೆದುನಿಂತಿತು.

ಸ್ಪೇನ್ ಒಕ್ಕೂಟದಲ್ಲಿ ಭಾಗಿಯಾದರೂ ತನ್ನ ಸಾಂಸ್ಕೃತಿಕ ಹಾಗೂ ಭಾಷಿಕ ಅನನ್ಯತೆಯನ್ನು ಮುಂದೆಮಾಡಿ, ಅದರ ಜತೆಗೆ ಇತಿಹಾಸದ ನೆರವನ್ನೂ ತೆಗೆದುಕೊಂಡು, ಕೆಟಲೋನಿಯಾ ತನ್ನ ಪ್ರತ್ಯೇಕತೆಯನ್ನು ಒಂದು ಮಿತಿಯಲ್ಲಿ ಉಳಿಸಿಕೊಂಡೇ ಇತ್ತು. ಅದಕ್ಕೆ ಕೇಂದ್ರ ಸರ್ಕಾರದ ಮಾನ್ಯತೆಯೂ ದೊರಕಿ ಆ ಪ್ರಾಂತ್ಯ ಸ್ವಾಯತ್ತ, ಅರೆ-ಸ್ವಾಯತ್ತ ಸ್ಥಾನವನ್ನು ಕಳೆದ 5 ಶತಮಾನಗಳಿಂದಲೂ ಅನುಭವಿಸುತ್ತಲೇ ಬಂದಿದೆ. ಅಲ್ಲದೆ, ಕೆಲವು ಕ್ಲಿಷ್ಟ ಸನ್ನಿವೇಶಗಳಲ್ಲಿ ಅದು ಸ್ಪೇನನ್ನು ಧಿಕ್ಕರಿಸಿ ಇತರರ ಪರವಾಗಿ ನಿಂತದ್ದೂ ಉಂಟು. 17ನೇ ಶತಮಾನದ ಮಧ್ಯಭಾಗದಲ್ಲಿ ಘಟಿಸಿದ ಫ್ರಾಂಕೋ-ಸ್ಪಾ್ಯನಿಷ್ ಯುದ್ಧಗಳಲ್ಲಿ ಕೆಟಲೋನಿಯಾವನ್ನು ಫ್ರಾನ್ಸ್ ಆಕ್ರಮಿಸಿಕೊಂಡಾಗ ಅಲ್ಲಿನ ಜನ ಆಕ್ರಮಣಕಾರಿಯ ಪರವಾಗಿ ನಿಂತಿದ್ದರು. ಆದರೆ, ಅದರ ಪರಿಣಾಮ ಕೆಟಲೋನಿಯನ್ನರಿಗೆ ಸಂತೋಷಕರವೇನೂ ಆಗಿರಲಿಲ್ಲ. ನಂತರ ಸ್ಪಾ್ಯನಿಷ್ ಸೇನೆ ಮತ್ತೆ ಕೆಟಲೋನಿಯಾದಿಂದ ಫ್ರೆಂಚ್ ಆಕ್ರಮಣಕಾರರನ್ನು ತೆರವುಗೊಳಿಸಿದರೂ ಪ್ರಾಂತ್ಯದ ಉತ್ತರ ಭಾಗಗಳನ್ನು ಫ್ರಾನ್ಸ್​ಗೆ ಒಪ್ಪಿಸಬೇಕಾಯಿತು. ಅರ್ಧ ಶತಮಾನದ ನಂತರ ನೆಪೋಲಿಯಾನಿಕ್ ಯುದ್ಧಗಳ ದಿನಗಳಲ್ಲಿ ಕೆಟಲೋನಿಯಾ ಮತ್ತೆ ಫ್ರಾನ್ಸ್​ನ ತೆಕ್ಕೆಗೆ ಬಿದ್ದಿತ್ತು. ಕೆಟಲೋನಿಯಾದ ಸ್ವಾಯತ್ತತೆಗೆ ತೀವ್ರ ಹೊಡೆತ ಬಿದ್ದದ್ದು ಕಳೆದ ಶತಮಾನದ 30ರ ದಶಕದಲ್ಲಿ ಜನರಲ್ ಫ್ರಾನ್ಸಿಸ್ಕೋ ಫ್ರಾಂಕೋ ಫ್ಯಾಸಿಸ್ಟ್ ಸರ್ವಾಧಿಕಾರಿ ಆಡಳಿತವನ್ನು ಸ್ಥಾಪಿಸಿದಾಗ. ಆಗ ಕಳೆದುಕೊಂಡ ಸ್ವಾಯತ್ತ ಸ್ಥಾನಮಾನಗಳನ್ನು ಕೆಟಲೋನಿಯಾ ಮತ್ತೆ ಪಡೆದುಕೊಂಡದ್ದು 1979ರಲ್ಲಿ ಫ್ರಾಂಕೋ ಗತಿಸಿದ 4 ವರ್ಷಗಳ ನಂತರ. ಅಲ್ಲಿಂದೀಚೆಗೆ ಕೆಟಲೋನಿಯಾದ ಪ್ರತ್ಯೇಕತಾ ಮನೋಭಾವ ಬೆಳೆಯುತ್ತಲೇ ಬಂದಿದೆ. ಇದಕ್ಕೆ ಪ್ರಮುಖ ಕಾರಣ ತಮ್ಮ ಶ್ರೀಮಂತಿಕೆಯನ್ನು ಸ್ಪೇನ್​ನ ಇತರ ಬಡ ಪ್ರಾಂತ್ಯಗಳ ಜತೆ ಹಂಚಿಕೊಳ್ಳಲು ಕೆಟಲೋನಿಯನ್ನರು ಬಯಸದೇ ಇರುವುದೇ ಆಗಿದೆ.

ಸ್ವತಂತ್ರ ಗಣರಾಜ್ಯದ ಘೋಷಣೆ: 2015ರ ಚುನಾವಣೆಗಳಲ್ಲಿನ ವಾಗ್ದಾನಗಳು ಹಾಗೂ ನಂತರದ ಪ್ರತ್ಯೇಕತಾವಾದಿಗಳ ಪ್ರಾಬಲ್ಯದ ಪ್ರಾಂತೀಯ ಸಂಸತ್ತಿನ ನಿರ್ಣಯಗಳ ಪರಿಣಾಮವಾಗಿ ಕೆಟಲೋನಿಯಾದ ಸ್ವಾತಂತ್ರ್ಯದ ಕುರಿತ ಜನಮತಗಣನೆ 2017ರ ಸೆಪ್ಟೆಂಬರ್ 17ರ ಒಳಗೆ ನಡೆಯಬೇಕಾಗಿತ್ತು. ಅದು ಕೊನೆಗೂ ನಡೆದದ್ದು ಅಕ್ಟೋಬರ್ 1ರಂದು. ಸ್ಪೇನ್​ನ ಕೇಂದ್ರ ಸರ್ಕಾರದ ಪ್ರಬಲ ವಿರೋಧದ ಮಧ್ಯೆ ನಡೆದ ಈ ಜನಮತಗಣನೆಯಲ್ಲಿ ಕೆಟಲೋನಿಯಾ ಒಂದು ಗಣರಾಜ್ಯವಾಗಿ ಸ್ವತಂತ್ರ ಅಸ್ತಿತ್ವ ಹೊಂದಲು ನಿಮ್ಮ ಸಹಮತ ಇದೆಯೇ ಎಂಬ ಪ್ರಶ್ನೆಗೆ ಮತದಾರರು ಹೌದು ಅಥವಾ ಇಲ್ಲ ಎಂಬ ಆಯ್ಕೆಗಳಲ್ಲೊಂದನ್ನು ಆಯ್ದುಕೊಳ್ಳಬೇಕಾಗಿತ್ತು. ಚಲಾಯಿಸಲ್ಪಟ್ಟ ಮತಗಳಲ್ಲಿ ಶೇ. 92ರಷ್ಟು ಕೆಟಲೋನಿಯಾದ ಸ್ವಾತಂತ್ರ್ಯದ ಪರವಾಗಿದ್ದವು. ಆದರೆ, ವಾಸ್ತವವೆಂದರೆ, ಪ್ರಾಂತ್ಯದ ಒಟ್ಟು ಮತದಾರರಲ್ಲಿ ಶೇ. 43ರಷ್ಟು ಮತವನ್ನಷ್ಟೇ ಚಲಾಯಿಸಿದ್ದರು! ಅದೇನೇ ಇರಲಿ, ಒಟ್ಟಿನಲ್ಲಿ ಚಲಾಯಿಸಲ್ಪಟ್ಟ ಮತಗಳಲ್ಲಿ ದೊರೆತ ಬಹುಮತ ಬಹುಮತವೇ. ಅದರ ಪ್ರಕಾರ ಕೆಟಲೋನಿಯಾದ ಸಂಸತ್ತು ಅಕ್ಟೋಬರ್ 27ರಂದು ಪ್ರಾಂತ್ಯ ಸ್ವತಂತ್ರ ಗಣರಾಜ್ಯವಾದ ಘೊಷಣೆ ಮಾಡಿತು.

ಸಹಜವಾಗಿಯೇ ಇದು ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಯಿತು. ಪ್ರಧಾನಮಂತ್ರಿ ರಾಜೋಯ್ ಸಂವಿಧಾನದ 155ನೇ ವಿಧಿ ನೀಡುವ ತುರ್ತು ಅಧಿಕಾರಗಳನ್ನು ಬಳಸಿ ಕೆಟಲೋನಿಯಾದ ಪ್ರಾಂತೀಯ ಅಧ್ಯಕ್ಷ ಕಾರ್ಲೆಸ್ ಪುಝ್ದುಮಾನ್ ಮತ್ತವರ ಇಡೀ ಮಂತ್ರಿಮಂಡಲವನ್ನು ಬರಖಾಸ್ತುಗೊಳಿಸಿದ್ದಷ್ಟೇ ಅಲ್ಲ, ಪ್ರಾಂತೀಯ ಸಂಸತ್ತನ್ನು ವಿಸರ್ಜಿಸಿದರು. ಜತೆಗೆ, ತಮ್ಮ ನಂಬಿಕಸ್ತರಾಗಿರುವ ಉಪಪ್ರಧಾನಿ ಸೊರಾಯಾ ಸಾಯೆಂಝå್ ದಿ ಸಂತಾಮಾರಿಯಾ ಕೈಗೆ ಕೆಟಲೋನಿಯಾದ ಆಡಳಿತವನ್ನಿರಿಸಿದ್ದಾರೆ. ಪುಝ್ದುಮಾನ್ ಮತ್ತವರ ಸಹಯೋಗಿಗಳ ವಿರುದ್ಧ ಸ್ಪೇನ್​ನ ಸಾಂವಿಧಾನಿಕ ನ್ಯಾಯಾಲಯದಲ್ಲಿ ವಿದ್ರೋಹ, ಅಧಿಕಾರ ದುರುಪಯೋಗದ ಮೊಕದ್ದಮೆಗಳು ದಾಖಲಾಗಿ ವಿಚಾರಣೆ ಆರಂಭವಾಗಿದೆ. ಪುಝ್ದುಮಾನ್ ಬೆಲ್ವಿಯಂಗೆ ಓಡಿಹೋಗಿದ್ದಾರೆ.

ರಾಜೋಯ್ ಮೇಲುಗೈ: ಹೀಗೆ, ಸದ್ಯಕ್ಕೆ ಸ್ಪೇನ್​ನ ಒಳಗೆ ಸಾಂವಿಧಾನಿಕ ಹಾಗೂ ಆಡಳಿತಾತ್ಮಕವಾಗಿ ಪ್ರಧಾನಿ ರಾಜೋಯ್ ಮೇಲುಗೈ ಸಾಧಿಸಿದ್ದಾರೆ. ಜತೆಗೆ ದೇಶದ ಹೊರಗೆ ರಾಜತಾಂತ್ರಿಕವಾಗಿಯೂ ಅವರಿಗೆ ಬೆಂಬಲ ದೊರೆತಿದೆ. ಕೆಟಲೋನಿಯಾದ ಸ್ವಾತಂತ್ರ್ಯವನ್ನು ಮಾನ್ಯ ಮಾಡುವಂತೆ ಐರೋಪ್ಯ ಒಕ್ಕೂಟ ಹಾಗೂ ಪಶ್ಚಿಮದ ಇತರ ಪ್ರಮುಖ ದೇಶಗಳಿಗೆ ಪುಝ್ದುಮಾನ್ ಮಾಡಿಕೊಳ್ಳುತ್ತಿರುವ ಮನವಿಯನ್ನೂ ಯಾರೂ ಪರಿಗಣಿಸುತ್ತಿಲ್ಲ. ಅಮೆರಿಕವಂತೂ ತಾನು ಸ್ಪೇನ್​ನ ಅಖಂಡತೆಯ ಪರವಾಗಿರುವುದಾಗಿ ಸ್ಪಷ್ಟವಾಗಿ ಘೊಷಿಸಿಬಿಟ್ಟಿದೆ. ಐರೋಪ್ಯ ಒಕ್ಕೂಟದ ರಾಷ್ಟ್ರಗಳಿಂದಲೂ ಪುಝ್ದುಮಾನ್ ಬೇಡಿಕೆಗೆ ತಣ್ಣೀರೇ ಗತಿಯಾಗಿದೆ. ಹೊಸದೊಂದು ರಾಷ್ಟ್ರ ಅಸ್ತಿತ್ವಕ್ಕೆ ಬರುವುದರಲ್ಲಿ ವಿಶ್ವಸಂಸ್ಥೆಯ ಇತರ ದೇಶಗಳು ಅದಕ್ಕೆ ರಾಜತಾಂತ್ರಿಕ ಮಾನ್ಯತೆ ನೀಡುವುದು ಪ್ರಮುಖ ಪಾತ್ರ ವಹಿಸುತ್ತದೆ. ಸೈಪ್ರಸ್​ನ ಉತ್ತರ ಭಾಗದ ತುರ್ಕಿ ಸಮುದಾಯ 1974ರಲ್ಲಿ ಸ್ವಾತಂತ್ರ್ಯ ಘೊಷಿಸಿಕೊಂಡರೂ ತುರ್ಕಿ ಹೊರತಾಗಿ ಬೇರಾವ ದೇಶವೂ ಮಾನ್ಯತೆ ನೀಡದ್ದರಿಂದ ನಾಲ್ಕು ದಶಕಗಳಾಗಿದ್ದರೂ ಉತ್ತರ ಸೈಪ್ರಸ್ ಹೊಸ ರಾಷ್ಟ್ರವಾಗಿ ಅಂತಾರಾಷ್ಟ್ರೀಯ ಸಮುದಾಯ ಪ್ರವೇಶಿಸಿಲ್ಲ. ಅಷ್ಟು ದೂರ ಏಕೆ, ಪಾಕಿಸ್ತಾನ ಹುಟ್ಟುಹಾಕಿರುವ ಪಾಕ್ ಆಕ್ರಮಿತ ಪ್ರದೇಶ(ಆಜಾದ್ ಕಾಶ್ಮೀರ)ದ ಉದಾಹರಣೆಯೇ ಸಾಕು.

ಕೆಟಲೋನಿಯಾದ ಸ್ವಾತಂತ್ರ್ಯಕ್ಕೆ ಯುರೋಪಿನಲ್ಲೇ ಬೆಂಬಲ ಸಿಗದಿರುವುದಕ್ಕೆ ಸ್ಪಷ್ಟ ಕಾರಣಗಳಿವೆ. 1990-91ರಲ್ಲಿ ಲಿಥುವಾನಿಯಾ ಸೋವಿಯೆತ್ ಯೂನಿಯನ್​ನಿಂದಲೂ ಸ್ಲೊವೇನಿಯಾ ಮತ್ತು ಕ್ರೊಯೇಶಿಯಾಗಳು ಯುಗೋಸ್ಲಾವಿಯಾದಿಂದಲೂ ಸ್ವಾತಂತ್ಯ ಘೊಷಿಸಿಕೊಂಡಾಗ ಜರ್ಮನಿಯಿಂದ ಆರಂಭವಾಗಿ ಪಶ್ಚಿಮ ಯುರೋಪಿಯನ್ ದೇಶಗಳು ಹೊಸ ದೇಶಗಳಿಗೆ ರಾಜತಾಂತ್ರಿಕ ಮನ್ನಣೆ ನೀಡಿದ್ದವು. ಅದಕ್ಕೆ ಕಾರಣ, ಪೂರ್ವ ಯುರೋಪಿನ ಕಮ್ಯೂನಿಸ್ಟ್ ವೈರಿಗಳನ್ನು ಬಡಿದು ಮಲಗಿಸಲು ಇದೊಂದು ಹೊಸ ಆಸ್ತ್ರ ಎಂದು ಅವು ಭಾವಿಸಿದ್ದು. ಆದರೆ ಅದೇ ನೀತಿಯನ್ನು ಅವೀಗ ಸ್ಪೇನ್ ವಿಷಯದಲ್ಲಿ ತೆಗೆದುಕೊಳ್ಳಹೋಗುವುದಿಲ್ಲ. ಯಾಕೆಂದರೆ ಸ್ಪೇನ್ ತಮ್ಮದೇ ಗುಂಪಿನ ಒಂದು ಪ್ರಮುಖ ಸದಸ್ಯ. ಅಷ್ಟೇ ಅಲ್ಲ, ಐರೋಪ್ಯ ಒಕ್ಕೂಟದ ಇತರ ಹಲವು ದೇಶಗಳಲ್ಲೂ ಪ್ರತ್ಯೇಕತೆ ಹೊಗೆಯಾಡುತ್ತಿದೆ. ಪುಝ್ದುಮಾನ್ ಓಡಿಹೋಗಿರುವ ಬೆಲ್ಜಿಯಂನಲ್ಲ್ಲೇ ಫ್ರೆಂಚ್ ವಲೋನ್ ಜನಾಂಗ ಮತ್ತು ಡಚ್ ಫ್ಲೆಮಿಶ್ ಜನಾಂಗದ ನಡುವೆ ಪೂರ್ಣ ಭಾವೈಕ್ಯತೆ ಇಲ್ಲ. ಸಾರ್ಡೀನಿಯಾ ಮತ್ತು ಸಿಸಿಲಿಗಳಲ್ಲಿ ಇಟಲಿಯ ಕೇಂದ್ರ ಸರ್ಕಾರದ ವಿರುದ್ಧ ಅಸಮ್ಮತಿ ಹೊಗೆಯಾಡುತ್ತಲೇ ಇದೆ. ಕಾರ್ಸಿಕಾ ಸಹ ಪ್ಯಾರಿಸ್​ನ ಆಡಳಿತವನ್ನು ಅನುಮಾನದಿಂದಲೇ ನೋಡುತ್ತಿದೆ. ಒಂದುಕಾಲದ ವಿಶ್ವದ ಅಗ್ರಮಾನ್ಯ ರಾಷ್ಟ್ರ ಬ್ರಿಟನ್ ಅಂತೂ ಇಂಗ್ಲೆಂಡ್, ಸ್ಕಾಟ್ಲೆಂಡ್, ವೇಲ್ಸ್ ಹಾಗೂ ಉತ್ತರ ಐರ್ಲೆಂಡ್​ಗಳೆಂದು ನಾಲ್ಕು ತುಂಡುಗಳಾಗುವ ಅಪಾಯ ಎದುರಿಸುತ್ತಿದೆ. ಹೀಗಾಗಿ, ಸ್ಪೇನ್​ನಲ್ಲಿ ಹೊತ್ತಿರುವ ಬೆಂಕಿಗೆ ತೈಲ ಸುರಿಯಲು ಹೋದರೆ ನಾಳೆ ಬೆಂಕಿ ತಮ್ಮ ಮನೆಗೂ ಹಬ್ಬುತ್ತದೆ ಎಂದು ನಾಯಕರು ಅರಿತಿದ್ದಾರೆ.

ಕೆಟಲೋನಿಯಾದ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಪ್ರತ್ಯೇಕತೆಯ ಮನೋಭಾವವನ್ನು ಉಂಟುಮಾಡುವುದರಲ್ಲಿ ಶ್ರೀಮಂತಿಕೆಯ ಪಾತ್ರವನ್ನೊಮ್ಮೆ ಗಮನಿಸುವುದು ಅವಶ್ಯಕ ಎನಿಸುತ್ತದೆ. ಉಳ್ಳವರು ಇಲ್ಲದವರೊಂದಿಗೆ ಹಂಚಿಕೊಂಡು ಬದುಕುವುದು ಮಾನವಸ್ವಭಾವಕ್ಕೆ ವಿರುದ್ಧವೇ? ಅತಿಶ್ರೀಮಂತ ಅಮೆರಿಕದಲ್ಲೇ ಕೈಗಾರಿಕಾ-ಪ್ರಧಾನ ಉತ್ತರದ ರಾಜ್ಯಗಳು ವ್ಯವಸಾಯ-ಪ್ರಧಾನ ದಕ್ಷಿಣದ ರಾಜ್ಯಗಳನ್ನು ಸಮಾನವೆಂದು ಪರಿಗಣಿಸುವುದಿಲ್ಲ. ಉತ್ತರದವರ ಈ ಹಮ್ಮಿಗೆ ಪ್ರತಿಯಾಗಿ ನಮ್ಮ ಪೆಟ್ರೋಲಿಯಂ ನಿಮಗೆ ಕೊಡುವುದಿಲ್ಲ ಎಂಬ ಮಾತುಗಳು ದಕ್ಷಿಣದಲ್ಲಿ ಕೇಳಿಬರುತ್ತಿವೆ. ನಮ್ಮಲ್ಲಿನ ಉದಾಹರಣೆಗಳನ್ನೇ ತೆಗೆದುಕೊಳ್ಳುವುದಾದರೆ, ಬಾಂಬೇ ಹೈನಲ್ಲಿ ಉತ್ಪಾದನೆಯಾಗುತ್ತಿರುವ ತೈಲ ಮಹಾರಾಷ್ಟ್ರಕ್ಕೆ ಮಾತ್ರ ಎಂದು ಅಲ್ಲಿನ ಕೆಲನಾಯಕರು ಎಪ್ಪತ್ತರ ದಶಕದಲ್ಲಿ ಕೂಗಿದ್ದರು. ಅದೇ ಸಮಯದಲ್ಲಿ ತಮ್ಮ ಅಕ್ಕಿ ತಮಗೆ ಮಾತ್ರ ಎಂಬ ಕ್ಯಾತೆ ಆಂಧ್ರದಿಂದ ಹೊರಟಿತ್ತು. ಅಷ್ಟೇಕೆ, ಉತ್ತರದ ಬಡ ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಉತ್ತರ ಪ್ರದೇಶಗಳನ್ನು ಒಟ್ಟಿಗೆ ‘ಬೀಮಾರು ರಾಜ್ಯಗಳು’ ಎಂದು ಹೀಯಾಳಿಸಿ, ನಮ್ಮ ‘ಶ್ರೀಮಂತಿಕೆ’(?)ಯನ್ನು ನಿಮ್ಮ ಜತೆ ಹಂಚಿಕೊಳ್ಳುವುದಿಲ್ಲ ಎಂಬ ದನಿ ದಕ್ಷಿಣದ ರಾಜ್ಯಗಳು ಮತ್ತು ಮಹಾರಾಷ್ಟ್ರಗಳಿಂದ ಹೊರಟಿದ್ದದ್ದು ನನಗಿನ್ನೂ ನೆನಪಿದೆ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

Leave a Reply

Your email address will not be published. Required fields are marked *

Back To Top