Tuesday, 17th July 2018  

Vijayavani

ಕಾಂಗ್ರೆಸ್‌ ಕಿರುಕುಳದಿಂದಲೇ ಸಿಎಂ ಕಣ್ಣೀರು - ಕಾಂಗ್ರೆಸ್‌ ನೆಚ್ಚಿಕೊಂಡು ಹೋದ್ರೆ ಇದೇ ಸ್ಥಿತಿ - ಎಚ್​ಡಿಕೆ  ಕಣ್ಣೀರಿಗೆ ಜೇಟ್ಲಿ ಟಾಂಗ್‌        ವಾಣಿಜ್ಯ ಬ್ಯಾಂಕ್‌ನಲ್ಲಿನ ಚಾಲ್ತಿ ಸಾಲವೂ ಮನ್ನಾ - ಸಿಎಂ ನಿರ್ಧಾರ - ರೈತರಿಗೆ ಮತ್ತೊಂದು ಕೊಡುಗೆ ನೀಡಿದ ಮುಖ್ಯಮಂತ್ರಿ        ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಶಾಸಕರ ಪುತ್ರ - ಪ್ರಶ್ನಿಸಿದ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದನೆ        ಬಂಗಾಳದಲ್ಲಿ ಮೋದಿ ರ್ಯಾಲಿ ವೇಳೆ ಅವಗಢ - ಪೆಂಡಾಲ್ ಕುಸಿದು 22 ಜನರಿಗೆ ಗಾಯ - ಆರೋಗ್ಯ ವಿಚಾರಿಸಿದ ಪ್ರಧಾನಿ ನಮೋ        ಕರಾವಳಿಯಲ್ಲಿ ಭಾರಿ ಮಳೆಯ ಅವಾಂತರ - ಕುಸಿದುಬಿತ್ತು ಭಟ್ಕಳದ ಬಸ್ ನಿಲ್ದಾಣ - ಹೊರ ಓಡಿದ ಪ್ರಯಾಣಿಕರು        ಕೆಆರ್​​ಎಸ್​​​ನಿಂದ ಭಾರಿ ಪ್ರಮಾಣದ ನೀರು - ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆ - ಧುಮ್ಮಿಕ್ಕುತ್ತಿದೆ ಹೊಗೇನಕಲ್ ಫಾಲ್ಸ್       
Breaking News

ಬೀಳುವುದು ತಪ್ಪಲ್ಲ! ಬಿದ್ದಮೇಲೆ ಏಳದಿದ್ದರೆ ತಪ್ಪು!

Sunday, 06.08.2017, 3:05 AM       No Comments

ಧಿಳ್ಳನೆ ಕಣ್ಣೀರಾಗಿಬಿಟ್ಟ ಹುಡುಗ!

ಬಿಕ್ಕಬಿಕ್ಕಳಿಸಿಕೊಂಡು ಅತ್ತ!

ಪ್ರದೀಪ್​ನ ಎದೆಯ ಮೇಲೆ ತಲೆಯಾಗಿಸಿಕೊಂಡು- ‘ಸಾರ್, ನಾನು ಮತ್ತೆ ತಪ್ಪು ಮಾಡೋದಿಲ್ಲ ಸಾರ್, ಈ ಸರ್ತಿ ಫೇಲಾಗೋದಿಲ್ಲ ಸಾರ್, ಕಷ್ಟಪಟ್ಟು ಓದ್ತೀನಿ ಸಾರ್, ನನ್ನನ್ನ ಯಾರೂ ನಂಬೋದಿಲ್ಲ ಸಾರ್, ನೀವು ನಂಬಿ ಸಾರ್!’ ಬಿಕ್ಕ-ಬಿಕ್ಕಳಿಸುತ್ತಲೇ ಇಂಥ ನಾಲ್ಕು ವಾಕ್ಯ ಮಾತಾಡಿದ.

ಆ ಪಾಪಲೇಪಿತ ಹಸುಳೆ ಹುಡುಗನ ಹೊಟ್ಟೆಸಂಕಟವೆಲ್ಲ ಕರಗಿ ಕಣ್ಣೀರಾಗಿ ಹರಿಯುತ್ತಿದ್ದರೆ ಪ್ರದೀಪ್​ನ ಕಣ್ಣುಗಳೂ ನೀರಾಡುತ್ತಿದ್ದವು.

ಆಗಿದ್ದಿಷ್ಟೆ.

ಹುಡುಗ ಫೇಲಾಗಿ ಬಂದಿದ್ದ. ಅವನೇನು ಕೊಲೆ ಮಾಡಿರಲಿಲ್ಲ! ಕಳ್ಳತನ ಮಾಡಿರಲಿಲ್ಲ! ಪಿಯುಸಿ ಪರೀಕ್ಷೆಯಲ್ಲಿ ಫೇಲಾಗಿದ್ದ ಅಷ್ಟೆ.

ಮಗ(ಳು) ಪಾಸಾದರೆ, ರ್ಯಾಂಕು ಹೊಡೆದರೆ ಬೀದಿಗೆಲ್ಲ ಸ್ವೀಟು ಹಂಚಿ ಸಂಭ್ರಮಿಸುವ ತಂದೆ ತಾಯ್ಗಳು ಊರ ತುಂಬಾ ಇದ್ದಾರೆ. ಅದೇ ಮಗ(ಳು) ವಯೋಸಹಜ ಬೇಜವಾಬ್ದಾರಿಯಿಂದಲೋ, ತಪ್ಪಿನಿಂದಲೋ ಫೇಲಾಗಿಬಿಟ್ಟರೆ ‘ನಾನಿನ್ನೂ ನಿನ್ನ ಮೇಲೆ ನಂಬಿಕೆ ಕಳೆದುಕೊಂಡಿಲ್ಲ ಮಗನೇ(ಳೆ) ನಿನ್ನ ತಪ್ಪು ನಿನಗರ್ಥವಾಗಿದೆಯಲ್ಲ, ಅಷ್ಟು ಸಾಕು. ನೀನು ಮತ್ತೆ ತಪು್ಪ ಮಾಡುವುದಿಲ್ಲ ಅಂತ ನನಗೆ ವಿಶ್ವಾಸವಿದೆ. ಈಗ ನಿನಗೊಂದಿಷ್ಟು ಅವಮಾನವಾಗಿದೆ, ನಮಗೂ ಆಗಿದೆ. ಧೈರ್ಯವಾಗಿ ಅದನ್ನು ದಾಟಿ ಹೋಗೋಣ. ನಿನ್ನೊಂದಿಗೆ ನಾನಿದ್ದೇನೆ. ಓದು ಹೊಣೆಗೇಡಿಗೆ ಒಲಿಯುವುದಿಲ್ಲ. ಅದೊಂದು ತಪಸ್ಸು. ಅಧೈರ್ಯ ಪಡಬೇಡ. ಮನಸ್ಸಿಟ್ಟು ಓದು, ನಿನ್ನ ಆಟ, ಹುಡುಗಾಟಗಳನ್ನು ಕೆಲಕಾಲ ಮರೆತುಬಿಡು. ಹೀಗೆ ಫೇಲಾದವರೂ ದೊಡ್ಡದನ್ನು ಸಾಧಿಸಿ ದೊಡ್ಡವರಾದ ಉದಾಹರಣೆಗಳು ಬೇಕಾದಷ್ಟಿವೆ. ಈವತ್ತಿನ ಅವಮಾನಗಳೇ ನಿನ್ನಲ್ಲಿ ಒಂದು ಹೊಸ ಶಕ್ತಿಯನ್ನು ಹುಟ್ಟುಹಾಕಲಿ. ಕಲಿಯುವುದರಲ್ಲಿ ಕಷ್ಟ ಇರುವಂತೆಯೇ ಸಂತೋಷವೂ ಇದೆ. ನಿನಗದು ಅರ್ಥವಾಗಲಿ, ಓದು ಕಂದಾ, ನಿನ್ನೊಂದಿಗೆ ನಾನಿದ್ದೇನೆ’-ಈ ಬಗೆಯಾದ ನಾಲ್ಕು ಮಾತಾಡಿ ಅವಮಾನಿತ ಮಗುವಿಗೆ ಚೈತನ್ಯ ತುಂಬಬಲ್ಲ ತಂದೆ-ತಾಯಿಗಳು ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ.

ಈ ಪರಿಸ್ಥಿತಿ ನಿಮಗೂ ಗೊತ್ತು.

ಮಗ(ಳು) ಫೇಲಾದರೆ ಆಕಾಶ ಕಳಚಿ ತಲೆಮೇಲೆ ಬೀಳುತ್ತದೆ. ನೆಂಟರಿಷ್ಟರಿಗೆ ಮುಖ ತೋರಿಸುವುದೂ ಕಷ್ಟವಾಗುತ್ತದೆ. ಅಪ್ಪ-ಅವ್ವ ಮಗನಿ(ಳಿ)ಗೆ ಮಾತುಮಾತಿಗೂ ಉಗಿದು ಉಪ್ಪು ಹಾಕುತ್ತಾರೆ- ‘ನಮ್ಮ ವಂಶಕ್ಕೆ ಮಸಿ ಬಳಿದು ಬಿಟ್ಯಲ್ಲೋ! ನಮ್ಮ ಆಸೆಗೆ ಬೆಂಕಿ ಹಾಕಿಬಿಟ್ಯಲ್ಲೋ, ಇನ್ನು ನಿನ್ನನ್ನ ಯಾರು ಮುಟ್ತಾರೆ? ಯಾರು ಮೂಸ್ತಾರೆ? ನಿನ್ನ ಭವಿಷ್ಯಕ್ಕೆ ನೀನೇ ಕೈಯಾರೆ ಬೆಂಕಿ ಹಾಕಿ ಬಿಟ್ಟರು? ಎಂತೆಂಥವರ ಮಕ್ಕಳೋ ಏನೇನೋ ಆದರು! ನಾನು ನಿನ್ನನ್ನ ಡಾಕ್ಟರು ಮಾಡಬೇಕು ಅಂತಿದ್ದೆ. ಇಂಜಿನಿಯರ್ ಮಾಡಬೇಕು ಅಂತಿದ್ದೆ, ನಿನಗೊಂದು ಬೈಕು ಕೊಡಿಸಬೇಕು ಅಂತಿದ್ದೆ, ಎಲ್ಲ ಹಾಳಾಗಿ ಹೋಯ್ತು! ಕಂಡಕಂಡವರೆಲ್ಲ ಕೇಳ್ತಾರೆ, ನಿಮ್ಮ ಮಗನ ರಿಸಲ್ಟ್ ಏನಾಯ್ತು ಅಂತ. ಏನಂತ ಹೇಳಲೋ ಪಾಪಿ, ಪರದೇಸಿ…’

ಈ ಹುಡುಗನಿಗೂ ಅವರಪ್ಪ ಅಮ್ಮ ಹೀಗೆ ಬೈದಿರಬಹುದು. ಮೈಸೂರಿನಲ್ಲಿ ಪ್ರೇರಣಾ ಫೌಂಡೇಶನ್ ಅಂತ ಒಂದಿದೆ. ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಪರೀಕ್ಷೆಯಲ್ಲಿ ಫೇಲಾದ ಹುಡುಗ ಹುಡುಗಿಯರ ತರಬೇತಿಗೆ ಅಂತಲೇ ಹುಟ್ಟುಹಾಕಿದ ಸಂಸ್ಥೆ ಇದು. ಎಸ್.ಎಸ್.ಭಟ್, ಎನ್.ಬಿ.ಪ್ರದೀಪ್​ಕುಮಾರ್ ಮತ್ತು ನಿರಂಜನ್ ಕೊರಾಲಿ ಎಂಬ ಮೂವರು ‘ನಿರುದ್ಯೋಗಿ’ ತರುಣರು ಹತ್ತಾರು ವರ್ಷಗಳಿಂದ ಇದನ್ನು ನಡೆಸಿಕೊಂಡು ಬರುತ್ತಿದ್ದಾರೆ. ಆ ತರಬೇತಿ ಸಂಸ್ಥೆಗೆ ಸೇರೊದಕ್ಕೆ ಅಂತ ಆ ಹುಡುಗನನ್ನ ಕರೆದುಕೊಂಡು ಬಂದಿದ್ದರು ಅವನ ಅಪ್ಪ-ಅಮ್ಮ.

‘ನಾವು ಪಟ್ಟ ಕಷ್ಟ ನಮ್ಮ ಮಗನೂ ಪಡೋದು ಬೇಡ ಅಂತ ಕಷ್ಟಪಟ್ಟು ಓದಿಸಿದ್ವಿ ಸಾರ್, ಕೆಟ್ಟ ಹುಡುಗರ ಸಹವಾಸ ಮಾಡಿ ಹಾಳಾಗಿ ಹೋದ (ಎಲ್ಲ ತಂದೆ-ತಾಯಿಯರೂ ಹೇಳೋ ಮಾಮೂಲು ಮಾತು ಇದು! ಆ ‘ಕೆಟ್ಟ’ ಹುಡುಗರ ಅಪ್ಪ-ಅಮ್ಮಂದಿರೂ ಹೀಗೆ ಹೇಳುತ್ತಾರೆ!). ನಾವು ಮಾಡೋವಷ್ಟು ಮಾಡಿದ್ದೀವಿ. ಇನ್ನು ಮೇಲೆ ಇವನಿಷ್ಟ, ನಾವು ಇವನ ಆಸೇನೇ ಬಿಟ್ಟು ಬಿಟ್ಟಿದ್ದೀವಿ. ಏನಾಗ್ತಾನೋ ಆಗಲಿ’.

ಹಾಗಂತ ಹೇಳಿ ಹುಡುಗನನ್ನು ತರಬೇತಿಗೆ ಸೇರಿಸಿದರು. ಹುಡುಗ ತಲೆ ತಗ್ಗಿಸಿಕೊಂಡು ನಿಂತಿದ್ದ. ಪ್ರದೀಪ್ ಮಾಡಿದ್ದಿಷ್ಟೇ. ಆ ಹುಡುಗನನ್ನು ತನ್ನ ಮೈ ತಾಕುವಷ್ಟು ಹತ್ತಿರಕ್ಕೆ ಎಳೆದುಕೊಂಡು ಪ್ರೀತಿಯಿಂದ ತಲೆ ನೇವರಿಸಿದರು. ತಲೆಯ ಮೇಲೆ ಪ್ರದೀಪ್​ನ ಬೆರಳು ಚಲಿಸುತ್ತಿದ್ದ ಹಾಗೆ ಹುಡುಗ ಹಾಗೆ ಬಿಕ್ಕಬಿಕ್ಕಳಿಸಿಕೊಂಡು ಅತ್ತು ಬಿಟ್ಟ. ಅವಮಾನಿತ ಹುಡುಗನಿಗೆ ಅಂಥದೊಂದು ಸಾಂತ್ವನ ಬೇಕಾಗಿತ್ತು.

ಈ ಪ್ರಸಂಗವನ್ನು ಒಂದು ‘ಕತೆ’ ಹೇಳುವಂತೆ ಪ್ರದೀಪ್ ಹೇಳುತ್ತಿದ್ದರೆ ನನಗೂ ಎದೆ ಕಲಕುತ್ತಿತ್ತು. ಯಾಕೆಂದರೆ ನಾನೂ ಮೇಷ್ಟ್ರರು. ಇಂಥ ಹಲವಾರು ಹುಡುಗ-ಹುಡುಗಿಯರ ಕಣ್ಣೀರು ಕಂಡಿದ್ದವನು.

ಈ ಪ್ರದೀಪ್ ನಮ್ಮ ಹುಡುಗ. ಅವರ ತಂದೆ ಎನ್.ಬಸವರಾಜು, ಜೀವನವೀಡೀ ಶಾಲಾಮಾಸ್ತರಾಗಿ ನಿವೃತ್ತರಾಗಿರುವವರು. ತಾಯಿ, ಮೋದಾಮಣಿ, ಮೈಸೂರಿನ ಮೇಯರ್ ಆಗಿದ್ದವರು. ಪ್ರದೀಪ್​ನ ದೊಡ್ಡಪ್ಪ ನನ್ನ ಪ್ರೀತಿಯ ಮೇಷ್ಟ್ರು, ನನ್ನ ಬದುಕನ್ನು ಅಗಾಧವಾಗಿ ಪ್ರಭಾವಿಸಿದ ಪ್ರೊ. ಎನ್.ಬೋರಲಿಂಗಯ್ಯ. ತಾಯಿ ರಾಜಕಾರಣಿಯಾಗಿದ್ದರಿಂದ ಪ್ರದೀಪ್​ನ ಮೇಲೂ ರಾಜಕೀಯದ ಒತ್ತಡ ಸಹಜವೇ. ಆದರೆ ಪ್ರದೀಪ್​ಗೆ ದೊಡ್ಡಪ್ಪನ ಆದರ್ಶದ ಬದುಕಿನ ಪ್ರಭಾವ ದೊಡ್ಡದಾಯಿತು. ಆದಾಗಲೇ ಎಸ್.ಎಸ್. ಭಟ್ ಮತ್ತು ನಿರಂಜನ್ ಕೊರಾಲಿಯವರು ನಡೆಸಿಕೊಂಡು ಬರುತ್ತಿದ್ದ ಪ್ರೇರಣಾ ಫೌಂಡೇಶನ್​ನಲ್ಲಿ ‘ಗಣಿತ’ ಪಾಠ ಹೇಳಿಕೊಡುವ ತರಬೇತುದಾರನಾದ.

ಈ ಮೂವರು ತರಬೇತುದಾರರ ಮೇಷ್ಟ್ರರುಗಳ ಕತೆಯೇ ಮೂರು ಅಂಕಣಕ್ಕಾಗುವಷ್ಟಿದೆ. ಎಸ್.ಎಸ್.ಭಟ್ ಮಂಗಳೂರು ಕಡೆಯವರು. ಬಿ.ಎಸ್​ಸಿ ಓದಿ ಮತ್ತೆ ವಿದ್ಯಾಭ್ಯಾಸ ಮುಂದುವರಿಸುವುದಕ್ಕಾಗದೆ ಬದುಕಿನಲ್ಲಿ ಏನಾದರೊಂದಿಷ್ಟು ಒಳ್ಳೆಯದನ್ನು ಮಾಡಬೇಕು ಅನ್ನುವ ಹುಚ್ಚು ಹತ್ತಿಸಿಕೊಂಡು ಮೈಸೂರಿಗೆ ಬಂದು 2000ನೇ ಇಸವಿಯಲ್ಲಿ, ಫೇಲಾದ ಹುಡುಗರಿಗಾಗಿ ಈ ಪ್ರೇರಣಾ ಫೌಂಡೇಶನ್ ಅಂತ ಮಾಡಿಕೊಂಡು ಪಾಠ ಹೇಳಲು ತೊಡಗಿದರು.

ಆ ಸಂಸ್ಥೆಗೆ ಸೇರಿದ ಇನ್ನೊಬ್ಬ ತರಬೇತುದಾರ ಈ ನಿರಂಜನ್. ಬಾಟನಿ, ಬಯೋಕೆಮಿಸ್ಟ್ರಿ, ಮೈಕ್ರೋಬಯಾಲಜಿ ವಿಷಯಗಳಲ್ಲಿ ಬಿ.ಎಸ್​ಸಿ ಓದಿದ ನಿರಂಜನ್ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದ ಸೆಳವಿನಿಂದ ಇಂಗ್ಲಿಷ್ ಎಂ.ಎ. ಓದಿ ಚಿನ್ನದ ಪದಕ ಸಮೇತ ಉತ್ತೀರ್ಣರಾದವರು. ಅಲ್ಲಿ ಇಲ್ಲಿ ಕೆಲಸ ಹುಡುಕುವ ಕಸರತ್ತಿಗೆ ಹೋಗದೆ ಪ್ರೇರಣಾ ಫೌಂಡೇಶನ್ನಿಗೆ ಸೇರಿಕೊಂಡು ಫೇಲಾದ ಹುಡುಗರಿಗೆ ಇಂಗ್ಲಿಷ್ ಮತ್ತು ಕೆಮಿಸ್ಟ್ರಿ ಪಾಠ ಮಾಡುತ್ತಿದ್ದಾರೆ. ಜತೆಗೆ ಇಂಥ ಕಂಗೆಟ್ಟ ಹುಡುಗರಿಗೆ ನಿರಂಜನ್ ಒಳ್ಳೆಯ ಕೌನ್ಸಿಲರ್. ಈಗಲೂ ರಾಜ್ಯಾದ್ಯಂತ ಬೇರೆ ಬೇರೆ ಊರುಗಳಿಗೆ ಹೋಗಿ ಕೌನ್ಸಿಲಿಂಗ್ ನಡೆಸುತ್ತಾರೆ.

ಇನ್ನು ನಮ್ಮ ಪ್ರದೀಪ್​ನ ಕತೆ ಮತ್ತೊಂದು ವಿಚಿತ್ರ. ಬಿ.ಎಸ್​ಸಿ ಪದವಿಯಲ್ಲಿ ಈತ ನಿರಂಜನ್​ನ ಸಹಪಾಠಿ. ಅವೇ ವಿಷಯ. ಗಣಿತ ಆವರೆಗೆ ಈತನಿಗೆ ಪ್ರಿಯವಾದ ವಿಷಯವೇನಲ್ಲ. ಒಳ್ಳೆಯ ಹಿನ್ನೆಲೆಯಿರುವ ಕುಟುಂಬದಲ್ಲಿ ಹುಟ್ಟಿದವನಾದರೂ ಬದುಕಿನಲ್ಲಿ ಅತ್ಯಂತ ಆತಂಕ, ಸಂಕಟಗಳನ್ನು ಅನುಭವಿಸುವ ಅನಿವಾರ್ಯ ಎದುರಾಯಿತು ಅವನಿಗೆ. ವಾಸ್ತವವಾಗಿ ಈ ಆತಂಕ ಸಂಕಟಗಳ ಗರ್ಭದಲ್ಲೇ ಒಂದು ಶಕ್ತಿ. ಆದರ್ಶ ಸಂಕಲ್ಪ ಗರಿಯೊಡೆದು ಬೆಳೆಯಿತು. ತನ್ನಂತೆಯೇ ಸಂಕಟ, ಅವಮಾನ ಅನುಭವಿಸುವ ಬದುಕುಗಳಲ್ಲಿ ಒಂದಿಷ್ಟು ಚೈತನ್ಯ ತುಂಬಬೇಕೆಂಬ ಆಸೆಯಾಯಿತು. ಗೆಳೆಯ ನಿರಂಜನ್ ಕೆಲಸ ಮಾಡುತ್ತಿದ್ದ ಪ್ರೇರಣಾ ಫೌಂಡೇಶನ್​ನ ಜತೆ ಕೆಲಸ ಮಾಡಬೇಕೆಂದು ನಿರ್ಧರಿಸಿದ.

ಪ್ರೇರಣಾ ಫೌಂಡೇಶನ್ನಿಗೆ ಒಬ್ಬ ಒಳ್ಳೆಯ ಗಣಿತ ಬೋಧಿಸುವ ಮೇಷ್ಟ್ರು ಬೇಕಾಗಿತ್ತು. ಆದರೆ ಪ್ರದೀಪ್ ಕಾಲೇಜಿನಲ್ಲಿ ಗಣಿತ ಓದಿದವನಲ್ಲ. ಹೊಸದಾಗಿ ಗಣಿತ ಕಲಿತು ತಾನೇ ಪಾಠ ಮಾಡಬಾರದೇಕೆ? ಅನ್ನಿಸಿತು. ಆದರೆ ಆ ಸಂದರ್ಭದಲ್ಲೇ ತನ್ನೊಬ್ಬನಿಗೇ ಗಣಿತ ಹೇಳಿಕೊಡುವವರಾರು?- ಹಾಗೇ ಹುಡುಕುತ್ತಿದ್ದಾಗ ಪ್ರದೀಪ್​ಗೆ ಸಿಕ್ಕಿದವರು ಪ್ರೊ. ವಿ.ಎಸ್. ಸುಬ್ಬರಾಯರು.

ಜಗತ್ತಿನಲ್ಲಿ ಒಳ್ಳೆಯವರು ಬೇಕಾದಷ್ಟು ಜನ ಇದ್ದಾರೆ. ಬೇಕಾದಷ್ಟು ಒಳ್ಳೆಯದೂ ಘಟಿಸುತ್ತಲೇ ಇದೆ. ಪತ್ರಿಕೆ, ಟಿ.ವಿ.ಗಳಲ್ಲಿ ಅವರು ಕಾಣಿಸಿಕೊಳ್ಳುವುದಿಲ್ಲ. ತಮ್ಮ ಪಾಡಿಗೆ ತಾವು ತಮ್ಮ ಶಕ್ತಿ ಮೀರಿ ಅಂಥವರು ದುಡಿಯುತ್ತಿರುವುದರಿಂದ, ಅಂಥದು ಘಟಿಸುತ್ತಿರುವುದರಿಂದ ನಮ್ಮ ದೇಶ, ಸಮಾಜ ನಡೆಯುತ್ತಿದೆ. ನಮ್ಮ ತಲೆ, ಮನಸ್ಸು, ಕಣ್ಣುಗಳಲ್ಲಿ ಬಗ್ಗಡ ತುಂಬಿಕೊಂಡಿರುವುದರಿಂದ ಅಂಥವರು, ಅಂಥದು ನಮಗೆ ಕಾಣಿಸುತ್ತಿಲ್ಲ ಅಷ್ಟೆ.

ಯಾಕೆ ಹೀಗೆ ತಾತ್ತಿ್ವಕನ ಹಾಗೆ ಮಾತಾಡುತ್ತಿದ್ದೇನೆಂದರೆ ಪ್ರದೀಪ್ ಗಣಿತ ಪಾಠ ಹೇಳಿಸಿಕೊಳ್ಳಲೆಂದು ಪ್ರೊ. ಸುಬ್ಬರಾಯರ ಮನೆಯ ಬಾಗಿಲು ಬಡಿದಾಗ ವೀಲ್​ಚೇರಿನಲ್ಲಿ ಬಂದು ಬಾಗಿಲು ತೆಗೆದವರು ಸುಬ್ಬರಾಯರೇ. ಆ ಪುಣ್ಯಾತ್ಮನಿಗೆ ಆಗ 92 ವರ್ಷ. ಪ್ರದೀಪ್ ಎದುರು ಕೂತು ಗಣಿತ ಕಲಿಯುವ ತನ್ನ ಆಸೆ ಹೇಳಿಕೊಂಡಾಗ ಸುಬ್ಬರಾಯರಿಗೊಂದು ಭರವಸೆ ಕಂಡಿತು. ಹುಡುಗನ ಆಸೆ ಅದಮ್ಯವಾಗಿದೆ ಅನ್ನುವುದು ಅವರಿಗೆ ಅರಿವಾಯಿತು. 92 ವಯಸ್ಸಿನ ಮುದಿ ಜೀವ ‘ನಾಳೆಯಿಂದಲೇ ಬಾ, ನಿನಗೆ ಗಣಿತ ಹೇಳಿಕೊಡುತ್ತೇನೆ’ ಅಂದಿತು.

ಅಂದಿನಿಂದ ಸುಬ್ಬರಾಯರಿಗೆ ಗಣಿತ ಹೇಳಿಕೊಡುವುದಷ್ಟೇ ಕೆಲಸ. ಪ್ರದೀಪನಿಗೆ ಗಣಿತ ಕಲಿಯುವುದಷ್ಟೇ ಕೆಲಸ. ಸುಬ್ಬರಾಯರಿಗೆ ಪ್ರದೀಪ್ ಪರಿಚಯದವನಲ್ಲ. ಬಂಧುವಲ್ಲ. ಆದರೂ ದಿನಕ್ಕೆ ಐದಾರು ಗಂಟೆಗಳ ಕಾಲ ಪಾಠ ಹೇಳಿಕೊಟ್ಟರು ಸುಬ್ಬರಾಯರು. ‘ಕೆಲವು ಬಾರಿ ನಮ್ಮ ಗುರುಗಳಿಗೆ ದೇಹಾಯಾಸವಾಗಿರುತ್ತಿತ್ತು. ಆಗಲೂ ನನಗೆ ಪಾಠ ಹೇಳುವುದನ್ನು ಬಿಡಲಿಲ್ಲ. ತಮ್ಮ ಹಾಸಿಗೆಯ ಮೇಲೆ ಮಗ್ಗುಲಾಗಿ ಮಲಗಿಕೊಂಡೇ ನನಗೆ ಪಾಠ ಹೇಳುತ್ತಿದ್ದರು- ಶ್ರೀರಂಗಪಟ್ಟಣದ ರಂಗಸ್ವಾಮಿಯ ಹಾಗೆ. ನಾನು ಅವರ ತಲೆದೆಸೆಯಲ್ಲಿ ಕುಳಿತು ಲೆಕ್ಕ ಮಾಡುತ್ತಿದ್ದೆ’ ಅಂತ ಜ್ಞಾಪಿಸಿಕೊಳ್ಳುತ್ತಾನೆ ಪ್ರದೀಪ್.

ಇಷ್ಟೆಲ್ಲ ಕಷ್ಟಪಟ್ಟು ಪಾಠ ಹೇಳಿಕೊಟ್ಟ ಗುರುಗಳಿಗೆ ಫೀಸು ಕೊಡಬೇಕಲ್ಲ. ಪ್ರದೀಪ್, ಒಂದೆರಡು ಬಾರಿ ಕೇಳಿದ. ಸುಬ್ಬರಾಯರು ‘ಹೇಳುತ್ತೇನೆ ಇರು’ ಅನ್ನುತ್ತಿದ್ದರು. ಅದೊಂದು ದಿನ ಪ್ರದೀಪ್ ಸ್ವಲ್ಪ ಒತ್ತಾಯಿಸಿ ಕೇಳಿದ. ಸುಬ್ಬರಾಯರಂದರು-‘ಇನ್ನ್ಯಾವ ಫೀಸ್ ಕೊಡ್ತೀಯಪ್ಪ ನನಗೆ? ನನ್ನ ಫೀಸು ಬಂದಾಯಿತು. ನಿನಗೆ ಪಾಠ ಹೇಳುವುದಕ್ಕೆ ಶುರು ಮಾಡಿದಾಗಿನಿಂದ ನನ್ನ ದೇಹಕ್ಕೊಂದು ಚೈತನ್ಯ ಬಂದಿದೆ. ವೀಲ್​ಚೇರ್ ಇಲ್ಲದೆ ಮನೆಯೊಳಗೆ ನಡೆದಾಡುವಷ್ಟು ಶಕ್ತಿ ಬಂದಿದೆ. ಇದಕ್ಕಿಂತ ಫೀಸು ಬೇಕೇನಪ್ಪಾ ನನಗೆ? ಹುಚ್ಚ! ಫೀಸು ಕೊಡ್ತಾನಂತೆ ನನಗೆ!’

ಪ್ರದೀಪ್ ಹೇಳುವ ಕತೆ ಕೇಳಿ ನಾನೊಂದಿಷ್ಟು ಹೊತ್ತು ಭಾವುಕನಾದೆ. ಅನ್ಯಾಯ, ಅನಾಚಾರ, ಭ್ರಷ್ಟಾಚಾರ, ಜಾತಿ, ಕೋಮುವಾದ, ಅಸ್ಪಶ್ಯತೆ- ಇಂಥ ಮಾತುಗಳಿಗೇ ಕಿವಿ ತೆರೆದು ಕೂತಿರುವ ನಮಗೆ ಇಂಥ ಕತೆಗಳು ಕೇಳಿಸುವುದೂ ಇಲ್ಲ. ಕಾಣಿಸುವುದೂ ಇಲ್ಲ. ಕುವೆಂಪು ‘ಅಜ್ಞಾನ ಮಹಾತ್ಮರು’ ಅಂತ ಕರೆದರಲ್ಲ, ಅಂಥವರು ನಮ್ಮೊಂದಿಗೇ ಬದುಕುತ್ತಿದ್ದಾರೆ ನಮ್ಮ ಊರುಗಳಲ್ಲಿ, ನಮ್ಮವೇ ಬಡಾವಣೆಗಳಲ್ಲಿ!

ಪ್ರದೀಪ್​ನಿಗೆ ಸುಬ್ಬರಾಯರು ಪಾಠ ಹೇಳಿದ್ದು ಒಂದಲ್ಲ, ಎರಡಲ್ಲ, ನಾಲ್ಕು ವರ್ಷ. ಸುಬ್ಬರಾಯರಿಂದ ಗಣಿತ ಕಲಿತ ಪ್ರದೀಪ್ ಈಗ ಪ್ರೇರಣಾ ಫೌಂಡೇಶನ್ನಿನ ಗಣಿತದ ಮೇಷ್ಟ್ರು. ಭಟ್, ನಿರಂಜನ್, ಪ್ರದೀಪ್ ಈಗ ಪ್ರೇರಣಾ ಫೌಂಡೇಶನ್ನಿನಲ್ಲಿ ಭವಿಷ್ಯವೇ ಮುಚ್ಚಿಹೋದ ಎಷ್ಟೋ ಎಳೆಯ ಹುಡುಗ-ಹುಡುಗಿಯರ ಭವಿಷ್ಯದ ಬಾಗಿಲು ತೆರೆಯುತ್ತಿದ್ದಾರೆ. ಹತ್ತೋ ಹನ್ನೆರಡೋ ಅಂಕ ತೆಗೆದುಕೊಂಡು ಫೇಲಾದ ಎಷ್ಟೋ ಹುಡುಗರು ಇಲ್ಲಿ ಎಂಬತ್ತು ತೊಂಬತ್ತು ಅಂಕ ತೆಗೆದುಕೊಂಡು ವಿಜೃಂಭಿಸುತ್ತಿದ್ದಾರೆ. ತಮಾಷೆಯೇನು ಗೊತ್ತಾ? ಭಟ್, ನಿರಂಜನ್, ಪ್ರದೀಪ್ ಈ ಮೂವರ ಕ್ವಾಲಿಫಿಕೇಶನ್ನಿಗೆ ಈಗಲೂ ಸರ್ಕಾರಿ ಕಾಲೇಜಿನಲ್ಲಿ ಪಾಠ ಮಾಡುವ ಅರ್ಹತೆ ಇಲ್ಲ. ಯಾವ ಸರ್ಕಾರವೂ ಈ ಮೂವರಿಗೂ ಮೇಷ್ಟರ ಕೆಲಸ ಕೊಡುವುದಿಲ್ಲ!

ಈ ವರ್ಷ ಪ್ರೇರಣಾ ಫೌಂಡೇಶನ್ನಿನ ಅಲ್ಪಾವಧಿ ಕೋರ್ಸಿಗೆ ಸೇರಿಕೊಂಡಿದ್ದ, ಫೇಲಾಗಿದ್ದ ಹುಡುಗಿಯೊಬ್ಬರು 96 ಅಂಕ ತೆಗೆದುಕೊಂಡಿದ್ದಾಳೆ. ಮುನ್ನೂರು ವಿದ್ಯಾರ್ಥಿಗಳಲ್ಲಿ ಫಸ್ಟ್ ಕ್ಲಾಸ್, ಡಿಸ್ಟಿಂಕ್ಷನ್ ತೆಗೆದುಕೊಂಡ ವಿದ್ಯಾರ್ಥಿಗಳೇ ನೂರಾರು ಮಂದಿ ಇದ್ದಾರೆ. ಫೇಲಾದ ಹುಡುಗರಿಗೆ ಪ್ರೇರಣಾ ತೆಗೆದುಕೊಂಡ ಫೀಸನ್ನು ವಾಪಸ್ ಕೊಡುತ್ತದೆ.

‘ವಿದ್ಯಾರ್ಥಿಗಳನ್ನು ಕೊಲ್ಲುವುದು ಭಯವೇ ವಿನಾ ವೈಫಲ್ಯವಲ್ಲ’

‘ವೈಫಲ್ಯ ತಾತ್ಕಾಲಿಕ, ಆದರೆ ಕೈಚೆಲ್ಲಿಬಿಟ್ಟರೆ ಅದೇ ಶಾಶ್ವತವಾಗುತ್ತದೆ’.

‘ಪ್ರತೀ ವಿದ್ಯಾರ್ಥಿಯಲ್ಲೂ ಒಬ್ಬ ಪ್ರತಿಭಾವಂತ ಇದ್ದೇ ಇದ್ದಾನೆ. ಬನ್ನಿ, ಆ ಪ್ರತಿಭಾವಂತನನ್ನು ಹೊರಗೆಳೆದು ನಿಲ್ಲಿಸುವಾ’

‘ಬೀಳುವುದು ತಪ್ಪಲ್ಲ; ಆದರೆ ಬಿದ್ದ ಮೇಲೆ ಏಳದಿರುವುದು ತಪು್ಪ’

ಇಂಥ ಸೂಕ್ತಿಗಳು ಪ್ರೇರಣಾ ಫೌಂಡೇಶನ್ ತರಗತಿ ನಡೆಸುವ ‘ದಾರಿದೀಪ’ ಸಂಸ್ಥೆಯ ಆವರಣದಲ್ಲೆಲ್ಲ ಕಾಣಸಿಗುತ್ತವೆ. ಇಂಥ ಸೂಕ್ತಿಗಳಿಗೇನು ಬರವಿಲ್ಲ. ಎಲ್ಲ ಶಾಲಾ-ಕಾಲೇಜುಗಳ ಆವರಣಗಳಲ್ಲೂ ಇಂಥವೇ ತುಂಬಿ ತುಳುಕುತ್ತವೆ. ಅದನ್ನು ಅನುಸರಿಸುವ ಕಡೆ ಮಾತ್ರ ಈ ಸೂಕ್ತಿಗಳಿಗೆ ಜೀವ ಬರುತ್ತದೆ.

ಇದೇ ಪ್ರೇರಣಾ ಫೌಂಡೇಶನ್ನಿನಲ್ಲಿ ಓದಿದ ವರುಣ್ ಎಂಬ ಹುಡುಗ ಈಗ ಎಂ.ಎಸ್. ಓದಿ ವಿಪ್ರೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಮಮತಾ ಎಸ್. ಮೂರ್ತಿ ಎಂಬ ಹುಡುಗಿ ಎಂ.ಎಸ್​ಸಿ-ಜೆನೆಟಿಕ್ಸ್ ಓದಿ ರ್ಪಾನ್​ಸನ್ ಮತ್ತು ಆಲ್ಜೀಮರ್ ಕಾಯಿಲೆಗಳ ಕುರಿತು ಸಂಶೋಧನೆ ಮಾಡುತ್ತಿದ್ದಾಳೆ. ಮನೋಹರ್, ಎಂ.ಟೆಕ್ ಮಾಡಿ ಈಗ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಹಪ್ರಾಧ್ಯಾಪಕನಾಗಿದ್ದಾನೆ. ಏಳೇ ಏಳು ನಂಬರ್ ತೆಗೆದುಕೊಂಡು ಫೇಲಾಗಿದ್ದ ಹುಡುಗಿ ಅನುಶ್ರೀ 92 ಅಂಕ ತೆಗೆದುಕೊಂಡು ಪಾಸಾಗಿದ್ದಾಳೆ. ಪಿಸಿಎಂಬಿ ನಾಲ್ಕೂ ವಿಷಯಗಳಲ್ಲಿ ಫೇಲಾಗಿದ್ದ ಕೌಶಿಕ್ ಎಂಬ ಹುಡುಗ ಈಗ ಎಂ.ಬಿ.ಎ ಓದಿ ಇನ್​ಫೋಸಿಸ್​ನಲ್ಲಿ ಉದ್ಯೋಗಿಯಾಗಿದ್ದಾನೆ. ಕೊಳ್ಳೇಗಾಲದಿಂದ ಬಂದು ಫೇಲಾಗಿ ಬಸವಳಿದಿದ್ದ ಹುಡುಗಿ ಪ್ರೇರಣಾದಲ್ಲಿ ಓದಿ ಗಣಿತದಲ್ಲಿ 90 ಅಂಕ ಗಳಿಸಿದ್ದಾಳೆ. ಕೇವಲ ಮೂವತ್ತು ದಿನಗಳ ತರಬೇತಿ ಪಡೆದ ಚಂದನ್ ಭಟ್ 92 ಅಂಕ ಗಳಿಸಿದರೆ ಅವರ ಮನೆಯವರಿಗೇ ನಂಬುವುದು ಕಷ್ಟವಾಯಿತಂತೆ!

ಕ್ಷಮಿಸಿ, ಇದೆಲ್ಲ, ಯಾರಿಗಾದರೂ ಯಾವುದೋ ಒಂದು ಸಂಸ್ಥೆಯ ಜಾಹೀರಾತಿನಂತೆ ಕಂಡರೆ ಅದು ಅವರ ತಪ್ಪಲ್ಲ. ಈ ಜಾಣರ ಜಗತ್ತು ಅವರಿಗೆ ಕೊಟ್ಟಿರುವ ‘ತಿಳಿವಳಿಕೆ’ ಅದು. ನಾನು ಎಷ್ಟೋಬಾರಿ ಅಂದುಕೊಂಡಿದ್ದೇನೆ. ನಮ್ಮ ಹೈಸ್ಕೂಲ್​ಗಳಿಗೆ ಇಂಗ್ಲಿಷು, ಗಣಿತ ಇವೆರಡು ವಿಷಯಗಳನ್ನು ಚೆನ್ನಾಗಿ ಹೇಳಿಕೊಟ್ಟಿದ್ದರೆ ಹೈಸ್ಕೂಲಿಗೇ ಸ್ಕೂಲು ಬಿಟ್ಟು ಕೂಲಿ ಕುಟಾರಿಗಳಾಗಿಯೋ ಪೋಲಿ ಪುಡಾರಿಗಳಾಗಿಯೋ ಅಲೆಯುವ ಎಷ್ಟೋ ಹುಡುಗರು ಉದ್ಧಾರವಾಗುತ್ತಿದ್ದರು. ನಮ್ಮ ದೇಶದ ‘ಜ್ಞಾನ ಸಂಪನ್ಮೂಲ’ (ಓಟಡ್ಝಿಛಿಛಜಛಿ ್ಕಠಟ್ಠrಛಿ) ಬೆಳೆಯುತ್ತಿತ್ತು.

ನನಗೊಂದು ಹೆಮ್ಮೆ, ಅಭಿಮಾನ. ನಮ್ಮ ಹುಡುಗರು ಅದೊಂದು ಆದರ್ಶ ಕಣ್ಣೆದುರಿಟ್ಟುಕೊಂಡು ಸೋತ ಹುಡುಗರನ್ನು ಸರಿದಾರಿಗೆ ತಂದು ನಿಲ್ಲಿಸುತ್ತಿದ್ದಾರೆ. ‘ಇಂದು ಒಂದು ಒಳ್ಳೆಯ ಶಾಲೆಯನ್ನು ತೆರೆ, ನಾಳೆ ನಾಲ್ಕು ಜೈಲುಗಳು ಮುಚ್ಚಿಹೋಗುತ್ತವೆ’ ಅಂತ ಯಾರೋ ಪುಣ್ಯಾತ್ಮರು ಹೇಳಿದ ಮಾತು ನೆನಪಾಗುತ್ತಿದೆ. ನನ್ನ ಹಾಗೆ ನಿಮಗೂ ಅಭಿಮಾನವೆನ್ನಿಸಿದರೆ 98450-81342ಗೆ ಫೋನ್ ಮಾಡಿ ಪ್ರದೀಪ್​ಗೆ, 92435- 01437ಗೆ ಕರೆಮಾಡಿ ನಿರಂಜನ್​ಗೆ ಒಮ್ಮೆ ಭೇಷ್! ಅಂದುಬಿಡಿ. ಅವರಿಗೆ ಅದರಿಂದ ಇನ್ನಷ್ಟು ಸ್ಪೂರ್ತಿ ಸಿಗುತ್ತದೆ.

Leave a Reply

Your email address will not be published. Required fields are marked *

Back To Top