Friday, 20th April 2018  

Vijayavani

ಹಾಸನದಲ್ಲಿ ರೇವಣ್ಣ, ಮೈಸೂರಲ್ಲಿ ಜಿಟಿಡಿ- ದಿಗ್ಗಜರಿಂದ ನಾಮಪತ್ರ ಸಲ್ಲಿಕೆ- ಅಫಜಲ್​ಪುರದಲ್ಲಿ ಗುತ್ತೇದಾರ್​ಗೆ ಬಿಎಸ್​ವೈ ಸಾಥ್​        ಭಾಲ್ಕಿಯಲ್ಲಿ ಖಂಡ್ರೆ ಬಲ ಪ್ರದರ್ಶನ- ಲಿಂಗಸೂರಲ್ಲಿ ಎತ್ತಿನ ಬಂಡಿ ಮೆರವಣಿಗೆ- ಉಮೇದುವಾರಿಕೆಗೂ ಮುನ್ನ ಭರ್ಜರಿ ರೋಡ್​ ಶೋ        ಚಾಮುಂಡಿ ದರ್ಶನ.. ಸ್ವಗ್ರಾಮದ ದೇಗುಲದಲ್ಲೂ ನಮನ- ಕೋಟೆ ಆಂಜನೇಯನಿಗೂ ಸಿಎಂ ಪೂಜೆ- ಒಂದೇ ದಿನ ಸಿದ್ದು ಟೆಂಪಲ್​ರನ್​        ರೆಡಿಯಾಯ್ತು ಬಿಜೆಪಿ ಮೂರನೇ ಪಟ್ಟಿ- ಕೆಲವೇ ಹೊತ್ತಲ್ಲಿ ಕದನ ಕಲಿಗಳ ಹೆಸರು ಪ್ರಕಟ- ಜೆಡಿಎಸ್​​​ನಿಂದಲೂ ಇಂದು ಎರಡನೇ ಪಟ್ಟಿ ರಿಲೀಸ್        ಶಟರ್ ಮುರಿದು ಮೊಬೈಲ್ ದೋಚಿದ ಕಳ್ಳರು- ಮತ್ತಿಕೆರೆಯಲ್ಲಿ ಅಂಗಡಿ ರಾಬರಿ- ಕಳ್ಳರ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆ        ಸುಪ್ರೀಂ ಮುಖ್ಯನ್ಯಾಯಮೂರ್ತಿ ವಿರುದ್ಧ ವಿಪಕ್ಷಗಳು ಗರಂ- ಸಿಜೆಐ ವಿರುದ್ಧ 7 ಪಕ್ಷಗಳ ಮಹಾಭೀಯೋಗ ನಿರ್ಣಯ- ಉಪರಾಷ್ಟ್ರಪತಿ ಭೇಟಿ, ಮನವಿ ಸಲ್ಲಿಕೆ       
Breaking News

ಬಿಸಿಸಿಐ ಹೊಸ ಸಂವಿಧಾನ ಸಿದ್ಧ, ಮುಂಬೈಗಿಲ್ಲ ಪೂರ್ಣ ಸದಸ್ಯತ್ವ!

Monday, 20.03.2017, 7:58 AM       No Comments

ನವದೆಹಲಿ: ಲೋಧಾ ಸಮಿತಿಯ ಎಲ್ಲ ಶಿಫಾರಸುಗಳಿಗೆ ಒಳಪಟ್ಟ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಹೊಸ ಸಂವಿಧಾನವನ್ನು ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಸಿದ್ಧಪಡಿಸಿದೆ. ಭಾರತೀಯ ಕ್ರಿಕೆಟ್​ನ ಶಕ್ತಿಕೇಂದ್ರವೆನಿಸಿದ ಮುಂಬೈಗೆ ಪೂರ್ಣ ಸದಸ್ಯತ್ವ ನೀಡದಿರುವ ಮತ್ತು ಈಶಾನ್ಯ ಭಾರತದ ಎಲ್ಲ ರಾಜ್ಯಗಳಿಗೆ ಮತದಾನದ ಹಕ್ಕು ಒಳಗೊಂಡ ಪೂರ್ಣ ಸದಸ್ಯತ್ವ ನೀಡಲಾಗಿರುವ ಈ ಸಂವಿಧಾನದ ವಿವರ ಮಂಡಳಿಯ ವೆಬ್​ಸೈಟ್​ನಲ್ಲಿ ಪ್ರಕಟಗೊಂಡಿದೆ.

ಲೋಧಾ ವರದಿಗೆ ಒಳಪಟ್ಟಿದೆ: ಆಡಳಿತಾಧಿಕಾರಿಗಳ ವಯಸ್ಸು 70 ವರ್ಷ ಮೇಲ್ಪಟ್ಟಿರಬಾರದು ಮತ್ತು 3 ವರ್ಷಗಳ ಕೂಲಿಂಗ್ ಆಫ್ (2 ಅಧಿಕಾರಾವಧಿ ನಡುವಿನ ಬಿಡುವು) ಅವಧಿ ಸೇರಿದಂತೆ ಲೋಧಾ ಸಮಿತಿಯ ಎಲ್ಲ ಶಿಫಾರಸುಗಳ ಅನ್ವಯ ಬಿಸಿಸಿಐನ ಹೊಸ ಸಂವಿಧಾನವನ್ನು ಸಿದ್ಧಪಡಿಸಲಾಗಿದೆ. ಅಲ್ಲದೆ ಬಿಸಿಸಿಐ ಅಥವಾ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಒಟ್ಟಾರೆ 9 ವರ್ಷಕ್ಕಿಂತ ಹೆಚ್ಚು ಕಾಲ ಆಡಳಿತಾಧಿಕಾರಿಗಳಾಗುವಂತಿಲ್ಲ ಎಂದೂ ನಿಬಂಧನೆ ವಿಧಿಸಲಾಗಿದೆ. ಇದರನ್ವಯ ಬಿಸಿಸಿಐ ಅಥವಾ ರಾಜ್ಯ ಸಂಸ್ಥೆಯಲ್ಲಿ 9 ವರ್ಷ ಅಧಿಕಾರ ಪೂರೈಸಿದ್ದರೆ ಕ್ರಿಕೆಟ್ ಆಡಳಿತದಿಂದ ಹೊರನಡೆಯಬೇಕಾಗುತ್ತದೆ. ತಲಾ 3 ವರ್ಷಗಳ 3 ಅವಧಿ ಮಾತ್ರ ಅಧಿಕಾರದಲ್ಲಿರಬಹುದು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಲೋಧಾ ಶಿಫಾರಸಿನನ್ವಯ ಕಾರ್ಯಕಾರಿ ಸಮಿತಿಗೆ ಬದಲಾಗಿ ಅಪೆಕ್ಸ್ ಕೌನ್ಸಿಲ್ ವ್ಯವಸ್ಥೆ ತರಲಾಗಿದ್ದು, ಚುನಾವಣಾಧಿಕಾರಿ, ನೀತಿ ಸಂಹಿತೆ ಅಧಿಕಾರಿ, ಏಜೆಂಟ್ಸ್ ರಿಜಿಸ್ಟರ್ ನೇಮಕದೊಂದಿಗೆ ಕ್ರಿಕೆಟ್ ಆಟಗಾರರ ಸಂಸ್ಥೆ ಸ್ಥಾಪನೆಗೂ ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದೆ.

ಮುಂಬೈಗಿಲ್ಲ ಪೂರ್ಣ ಸದಸ್ಯತ್ವ: ರಾಜ್ಯಕ್ಕೆ ಒಂದೇ ಕ್ರಿಕೆಟ್ ಸಂಸ್ಥೆ ಮತ್ತು ಮತ ಇರಬೇಕೆಂಬ ಸುಪ್ರಿಂ ಕೋರ್ಟ್ ಸೂಚನೆಯನ್ವಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಪೂರ್ಣ ಸದಸ್ಯತ್ವ ಉಳಿಸಿಕೊಳ್ಳಲಾಗಿದ್ದು, 41 ಬಾರಿಯ ರಣಜಿ ಚಾಂಪಿಯನ್ ಮುಂಬೈ ಮತ್ತು ವಿದರ್ಭ ಸಹ-ಸದಸ್ಯತ್ವಕ್ಕೆ ಹಿಂಬಡ್ತಿ ಪಡೆದಿವೆ. ಒಟ್ಟು 30 ಪೂರ್ಣ ಸದಸ್ಯ ಸಂಸ್ಥೆಗಳನ್ನು ಹೆಸರಿಸಲಾಗಿದೆ.

‘ಪ್ರತಿ ರಾಜ್ಯವೂ ಬಿಸಿಸಿಐನಿಂದ ಮಾನ್ಯತೆ ಪಡೆದ ಒಂದು ಕ್ರಿಕೆಟ್ ಸಂಸ್ಥೆಯನ್ನು ಮಾತ್ರ ಹೊಂದಿರಬೇಕು. ಯಾವ ರಾಜ್ಯಕ್ಕೂ ಒಂದಕ್ಕಿಂತ ಹೆಚ್ಚು ಪೂರ್ಣ ಸದಸ್ಯ ರನ್ನು ಹೊಂದಲು ಅವಕಾಶವಿಲ್ಲ’ ಎಂದು ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ. ಇದರೊಂದಿಗೆ, ಈಗಾಗಲೆ ಒಂದಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿದ್ದ ರಾಜ್ಯದಲ್ಲಿ ಪೂರ್ಣ ಸದಸ್ಯತ್ವ ವಾರ್ಷಿಕವಾಗಿ ಆವರ್ತನಗೊಳ್ಳಲಿದೆ. ಬಿಸಿಸಿಐ ನಿಬಂಧನೆಯಂತೆಯೇ ಈ ಆವರ್ತನ ನಡೆಯಲಿದೆ’ ಎಂದು ವಿವರಿಸಲಾಗಿದೆ. -ಏಜೆನ್ಸೀಸ್

ಪೂರ್ಣ ಸದಸ್ಯತ್ವ

ಇನ್: ಬಿಹಾರ, ಉತ್ತರಾಖಂಡ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ.

ಔಟ್: ಮುಂಬೈ, ವಿದರ್ಭ, ಸೌರಾಷ್ಟ್ರ, ಬರೋಡ ಕ್ರಿಕೆಟ್ ಸಂಸ್ಥೆಗಳು; ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ (ಸಿಸಿಐ), ರಾಷ್ಟ್ರೀಯ ಕ್ರಿಕೆಟ್ ಕ್ಲಬ್ (ಎನ್​ಸಿಸಿ), ರೈಲ್ವೇಸ್, ಸರ್ವೀಸಸ್, ವಿಶ್ವವಿದ್ಯಾಲಯಗಳು.

ಹೈದರಾಬಾದ್ ಕ್ರಿಕೆಟ್ ಸಂಸ್ಥೆಯನ್ನು ತೆಲಂಗಾಣವೆಂದು ಬದಲಾಯಿಸಲಾಗಿದೆ.

ಇಂದು ಸುಪ್ರೀಂ ವಿಚಾರಣೆ

ಬಿಸಿಸಿಐ ವಿಶೇಷ ಮಹಾಸಭೆಗೆ ಅವಕಾಶ ಕಲ್ಪಿಸಬೇಕೆಂದು ಕೆಲ ರಾಜ್ಯ ಸಂಸ್ಥೆಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಸೋಮವಾರ ಇದರ ವಿಚಾರಣೆ ನಡೆಯಲಿದೆ. ಈ ವೇಳೆ ಬಿಸಿಸಿಐ ಸಿಒಎ, ತಾನು ಮಾಡಿರುವ ಬದಲಾವಣೆಗಳ ಬಗ್ಗೆ ಕೋರ್ಟ್​ಗೆ ಮಾಹಿತಿ ಸಲ್ಲಿಸುವ ಮತ್ತು ಎಸ್​ಜಿಎಂಗೆ ವಿರೋಧ ವ್ಯಕ್ತಪಡಿಸುವ ನಿರೀಕ್ಷೆ ಇದೆ. ಲೋಧಾ ಶಿಫಾರಸಿನ ಅನ್ವಯ ಬಿಸಿಸಿಐನ ಎಲ್ಲ ಹಾಲಿ ಸದಸ್ಯರು ಅನರ್ಹರಾಗಿರುತ್ತಾರೆ. ಹೀಗಾಗಿ ರಾಜ್ಯ ಸಂಸ್ಥೆಗಳ ಸಂವಿಧಾನಗಳೂ ಬದಲಾಗದೆ ಎಸ್​ಜಿಎಂಗೆ ಅವಕಾಶ ಕಲ್ಪಿಸಬಾರದು ಎಂಬುದು ಸಿಒಎ ವಾದವಾಗಿರಲಿದೆ. ಈ ನಡುವೆ ಕೆಲ ರಾಜ್ಯ ಸಂಸ್ಥೆಗಳು, ಸಿಒಎ ಅಧಿಕಾರ ವ್ಯಾಪ್ತಿಯ ಬಗ್ಗೆ ಕೋರ್ಟ್​ನಿಂದ ಸ್ಪಷ್ಟತೆ ಯಾಚಿಸಲಿವೆ ಎಂದೂ ಹೇಳಲಾಗಿದೆ.

ಎಸ್​ಜಿಎಂ ಇಲ್ಲದೆ ಸಂವಿಧಾನ ಬದಲು

ತಮಿಳುನಾಡು ಸೊಸೈಟೀಸ್ ಕಾಯ್ದೆಯಡಿ ಬಿಸಿಸಿಐ ನೋಂದಣಿಗೊಂಡಿದ್ದು, ಇದರನ್ವಯ ಸಂವಿಧಾನ ಬದಲಾವಣೆಗೆ ವಿಶೇಷ ಮಹಾಸಭೆಯಲ್ಲಿ (ಎಸ್​ಜಿಎಂ) 4ನೇ 3ರಷ್ಟು ಬಹುಮತ ಅಗತ್ಯ. ಆದರೆ, ಲೋಧಾ ವರದಿ ಜಾರಿಗಾಗಿ ಸುಪ್ರೀಂ ಕೋರ್ಟ್ ಕಳೆದ ಜನವರಿ 30ರಂದು ನೇಮಿಸಿರುವ ವಿನೋದ್ ರಾಯ್, ರಾಮಚಂದ್ರ ಗುಹಾ, ವಿಕ್ರಮ್ ಲಿಮಾಯೆ ಮತ್ತು ಡಯಾನಾ ಎಡುಲ್ಜಿ ಒಳಗೊಂಡ ಆಡಳಿತಾಧಿಕಾರಿಗಳ ಸಮಿತಿ ಎಸ್​ಜಿಎಂಯಲ್ಲಿ ಅಂಗೀಕಾರ ಪಡೆಯದೆಯೇ ಸಂವಿಧಾನವನ್ನು ಸಿದ್ಧಪಡಿಸಿ ವೆಬ್​ಸೈಟ್​ನಲ್ಲಿ ಪ್ರಕಟಿಸಿದೆ. ಸಂವಿಧಾನವನ್ನು ಜಾರಿಗೆ ತರುವುದು ನಮ್ಮ ಮುಂದಿನ ಕೆಲಸವಾಗಿದೆ ಎಂದು ಸಿಒಎ ಸದಸ್ಯರೊಬ್ಬರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back To Top