Sunday, 24th September 2017  

Vijayavani

1. 3ನೇ ಮ್ಯಾಚ್‌ನಲ್ಲೂ ಆಸೀಸ್‌ ಉಡೀಸ್‌- ರೋಹಿತ್,ರಹಾನೆ,ಪಾಂಡ್ಯ ಬೊಂಬಾಟ್‌ ಆಟ- ಭಾರತಕ್ಕೆ ಸರಣಿ ವಶ 2. ದೆಹಲಿಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ- ಜಾವ್ಡೇಕರ್ ನೇತೃತ್ವದಲ್ಲಿ ಮೀಟಿಂಗ್‌- ತಡವಾಗಿ ದೆಹಲಿ ವಿಮಾನ ಏರಿದ ಈಶ್ವರಪ್ಪ 3. ಸಿದ್ದಾರ್ಥ್​ ಮನೆ ಮೇಲೆ ಐಟಿ ದಾಳಿ ಪ್ರಕರಣ- 650 ಕೋಟಿ ಮೌಲ್ಯದ ಅಕ್ರಮ ಆದಾಯ ಪತ್ತೆ- ದಿಗ್ವಿಜಯ ನ್ಯೂಸ್​ಗೆ ಐಟಿ‌ ಮೂಲಗಳ ಮಾಹಿತಿ 4. ವಿಶ್ವಸಂಸ್ಥೆಯಲ್ಲಿ ಮತ್ತೆ ಬಾಲ ಬಿಚ್ಚಿದ ಪಾಕಿಸ್ತಾನ- ಮಡಿಲಲ್ಲಿ ಕೆಂಡ ಇಟ್ಕೊಂಡು ಭಾರತದತ್ತ ವಾಗ್ಬಾಣ- ಇಂಡಿಯಾ ಉಗ್ರವಾದದ ತಾಯಿ ಅಂತಾ ಪಾಕ್ ಉದ್ಧಟತನ 5. ಕೋಕ್ ಸ್ಟುಡಿಯೋದಿಂದ ಸಂಗೀತ ಸಂಜೆ- ಪೆಪೋನ್ ಗಾಯನಕ್ಕೆ ಮನಸೋತ ಯುವಜನ- ಹುಚ್ಚಿದ್ದು ಕುಣಿಸಿದ ಯುವದಸರಾ
Breaking News :

ಬಿತ್ತಿದಂತೆ ಬೆಳೆ

Thursday, 14.09.2017, 3:00 AM       No Comments

 

| ರಾಗಿಣಿ

ಒಮ್ಮೆ ನಾರದಮುನಿಗಳು ವೈಕುಂಠಕ್ಕೆ ಬಂದು ಶ್ರೀಹರಿಗೆ ನಮಸ್ಕರಿಸಿ ‘ಪ್ರಭೂ, ಇತ್ತೀಚೆಗೆ ಭೂಲೋಕದಲ್ಲಿ ನಿಮ್ಮ ಪ್ರಭಾವ ಕಡಿಮೆಯಾಗಿದೆ. ಪಾಪಕರ್ಮ, ಅಧರ್ಮ, ಸುಳ್ಳಿನ ದಾರಿಯಲ್ಲಿ ನಡೆಯುವವರಿಗೆ ಒಳಿತಾಗುತ್ತಿದೆ ಮತ್ತು ಸತ್ಯಧರ್ಮದ ದಾರಿಯಲ್ಲಿ ನಡೆಯುವವರಿಗೆ ಕೆಡುಕಾಗುತ್ತಿದೆ’ ಎಂದು ಹೇಳುತ್ತಾರೆ. ಅದಕ್ಕೆ ಶ್ರೀಹರಿಯು ಮುಗುಳ್ನಕ್ಕು ‘ಏಕೆ ಹಾಗೆ ಹೇಳುವಿರಿ ನಾರದರೇ? ಅಂಥಾದ್ದೇನು ಕಂಡಿರಿ ಭೂಲೋಕದಲ್ಲಿ?’ ಎಂದು ಪ್ರಶ್ನಿಸುತ್ತಾನೆ. ಆಗ ನಾರದರು ‘ನಾನು ಭೂಲೋಕದಲ್ಲಿ ಸಂಚರಿಸುತ್ತಿರುವಾಗ ಒಂದು ವಿಸ್ಮಯವನ್ನು ಕಂಡೆ. ಹಸುವೊಂದು ಹೊಂಡದಲ್ಲಿ ಬಿದ್ದು ಮೇಲೆ ಬರಲಾರದೆ ಒದ್ದಾಡುತ್ತಿತ್ತು. ಆಗ ಅದೇ ದಾರಿಯಲ್ಲಿ ಓಡಿಬಂದ ಕಳ್ಳನೊಬ್ಬ ಆ ಹಸುವನ್ನು ರಕ್ಷಿಸುವ ಬದಲು ಅದರ ಮೇಲೆ ಕಾಲಿಟ್ಟು ಆ ಹೊಂಡವನ್ನು ದಾಟಿ ಹೋಗುತ್ತಾನೆ. ಆಶ್ಚರ್ಯವೆಂದರೆ ಅವನಿಗೆ ದಾರಿಯಲ್ಲಿ ಚಿನ್ನದ ನಾಣ್ಯ ಸಿಗುತ್ತದೆ. ಸ್ವಲ್ಪ ಸಮಯದ ಬಳಿಕ ಅದೇ ದಾರಿಯಲ್ಲಿ ಬಂದ ಸಾಧುವೊಬ್ಬ ಹಸುವನ್ನು ನೋಡಿ ದಯೆಯಿಂದ ತನ್ನ ಶಕ್ತಿಯನ್ನೆಲ್ಲ ಉಪಯೋಗಿಸಿ ಕಷ್ಟಪಟ್ಟು ಆ ಹಸುವನ್ನು ಮೇಲಕ್ಕೆತ್ತುತ್ತಾನೆ. ಆದರೆ ಮುಂದೆ ಹೋಗುತ್ತಿರುವಾಗ ತಾನೇ ಒಂದು ಹೊಂಡಕ್ಕೆ ಬೀಳುತ್ತಾನೆ. ಈಗ ಹೇಳಿ ಪ್ರಭುವೇ ಇದಾವ ನ್ಯಾಯ?’

‘ನಾರದರೇ ನೀವು ನೋಡಿದ್ದು ವಿಸ್ಮಯವೇ, ಆದರೆ ಅದನ್ನು ಅರ್ಥೈಸಿದ ರೀತಿ ತಪ್ಪು. ಹಸುವನ್ನು ರಕ್ಷಿಸುವ ಬದಲು ಅದರ ಮೇಲೆ ಕಾಲಿಟ್ಟು ಹೋದ ಕಳ್ಳನ ಭವಿಷ್ಯದಲ್ಲಿ ಅಂದು ದೊಡ್ಡ ಚಿನ್ನದ ಖಜಾನೆ ದೊರಕುವುದರಲ್ಲಿತ್ತು. ಆದರೆ ಅವನು ಹಸುವನ್ನು ತುಳಿಯುವುದರ ಮೂಲಕ ಪಾಪ ಮಾಡಿದ. ಆ ಕರ್ಮದ ಫಲವಾಗಿ ಚಿನ್ನದ ಖಜಾನೆ ಬದಲು ಅವನಿಗೆ ಒಂದು ಚಿನ್ನದ ನಾಣ್ಯವಷ್ಟೇ ದಕ್ಕಿತು. ಆದರೆ ಹಸುವನ್ನು ಮೇಲೆತ್ತಿ ಜೀವ ಉಳಿಸಿದ ಸಾಧುವಿನ ಭವಿಷ್ಯದಲ್ಲಿ ಅಂದು ಮೃತ್ಯು ಎಂದು ಬರೆದಿತ್ತು. ಕೊನೇಘಳಿಗೆಯಲ್ಲಿ ಅವನು ಮಾಡಿದ ಪುಣ್ಯಕಾರ್ಯದ ಫಲವಾಗಿ ಅದು ತಪ್ಪಿತು, ಸಣ್ಣ ಗಾಯದೊಂದಿಗೆ ಆತ ಬಚಾವಾದ’ ಎಂದು ಶ್ರೀಹರಿಯು ನಾರದರ ಸಂದೇಹ ನಿವಾರಣೆ ಮಾಡುತ್ತಾನೆ.

ಕರ್ಮ ಎಂಬುದು ಪಾಪ-ಪುಣ್ಯಗಳ ಕಾರ್ಯಕಾರಣ ಸಂಬಂಧ ತಿಳಿಸುವ ಪದ. ಭಾರತೀಯ ಪರಂಪರೆಯಲ್ಲಿ ಕರ್ಮಕ್ಕೆ ವಿಶೇಷ ಪ್ರಾಧಾನ್ಯ ನೀಡಲಾಗಿದೆ. ದುಷ್ಕರ್ಮಗಳಿಗೆ ಅದಕ್ಕೆ ತಕ್ಕ ಶಿಕ್ಷೆ ದೊರಕುತ್ತದೆ; ಸತ್ಕರ್ಮಗಳಿಗೆ ಯೋಗ್ಯ ಬಹುಮಾನ ದೊರಕುತ್ತದೆ ಎಂಬುದು ನಮ್ಮ ಗಟ್ಟಿ ವಿಶ್ವಾಸ. ಈ ಪರಿಕಲ್ಪನೆಯು ಸನ್ಮಾರ್ಗದಲ್ಲಿ ನಡೆಯಲು ನಮ್ಮನ್ನು ಪ್ರೇರಿಸುತ್ತದೆ. ಒಟ್ಟಿನಲ್ಲಿ ಕರ್ಮಫಲವೆಂಬುದು ಬಿತ್ತಿದಂತೆ ಬೆಳೆ ಎಂದರೂ ತಪ್ಪಾಗಲಾರದು. ನಮ್ಮ ಹೊಲದಲ್ಲಿ ಒಳ್ಳೆಯ ಬೀಜ ಬಿತ್ತಿದರೆ ಒಳ್ಳೆಯ ಫಸಲು ದೊರಕುತ್ತದೆ; ಕೆಟ್ಟ ಬೀಜ ಬಿತ್ತಿದರೆ ಸಿಗುವ ಫಲವೂ ಕೆಟ್ಟದೇ ಆಗಿರುತ್ತದೆ. ನಮ್ಮ ನಮ್ಮ ಕರ್ಮಫಲಗಳನ್ನು ಆಧರಿಸಿ ನಮ್ಮ ಭಾಗ್ಯ ನಿರ್ಧಾರವಾಗುತ್ತದೆ. ಅನುದಿನವೂ ಒಳ್ಳೆಯ ಕರ್ಮವನ್ನು ಮಾಡುವ ಮೂಲಕ ಸತ್ಪಲವನ್ನು ಪಡೆಯೋಣ.

(ಲೇಖಕಿ ಹವ್ಯಾಸಿ ಬರಹಗಾರ್ತಿ)

Leave a Reply

Your email address will not be published. Required fields are marked *

Back To Top