Sunday, 22nd July 2018  

Vijayavani

ಶೀರೂರು ಶ್ರೀ ಸಾವಿನ ಹಿಂದೆ ರಮ್ಯಾ ಶೆಟ್ಟಿ ಕೈವಾಡ - ಗೋಡಂಬಿ ಜ್ಯೂಸ್ ಕುಡಿಸಿರೋ ಶಂಕೆ - ತನಿಖೆ ಚುರುಕುಗೊಳಿಸಿದ ಉಡುಪಿ ಪೊಲೀಸರು        ದೋಸ್ತಿ ಸರ್ಕಾರಕ್ಕೆ ಆಯುಷ್ಯ ಕಡಿಮೆ - ಜೆಡಿಎಸ್ ಜತೆ ಲೋಕ ಎಲೆಕ್ಷನ್​​ ಮೈತ್ರಿ ಬೇಡ - ತುಮಕೂರಿನಲ್ಲಿ ಮಾಜಿ ಶಾಸಕ ರಾಜಣ್ಣ ಅಪಸ್ವರ        ಡಿಸಿಎಂ ಪರಮೇಶ್ವರ್​ಗೆ ದೋಸ್ತಿ ಇಷ್ಟ - ದೊಡ್ಡಗೌಡರಿಗೆ ಆಗ್ತಿದೆಯಂತೆ ಕಷ್ಟ - ಲೋಕಸಭಾ ಮೈತ್ರಿಯಲ್ಲೇ ದೋಸ್ತಿ ಬಗ್ಗೆ ಎದ್ದಿದೆ ಗೊಂದಲ        ರಸ್ತೆಯಲ್ಲಿ ಬರ್ತಿದ್ದ ಬಾಲಕಿ ಮೇಲೆ ಹರಿದ ಕಾರು - ಪವಾಡ ಸದೃಶ್ಯ ರೀತಿಯಲ್ಲಿ ಪುಟಾಣಿ ಪಾರು - ಉತ್ತರ ಪ್ರದೇಶದಲ್ಲೊಂದು ಪವಾಡ        ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೂ ಸಂಚಕಾರ- ಹನುಮಂತ ಹುಟ್ಟಿದ ಸ್ಥಳ ಮುಜರಾಯಿ ಇಲಾಖೆ ವಶಕ್ಕೆ - ದೋಸ್ತಿ ಸರ್ಕಾರದ ಮತ್ತೊಂದು ವಿವಾದ        ಜಲಾಶಯದಿಂದ ತುಂಗಭದ್ರಾ ನದಿಗೆ ನೀರು - ಡ್ರೋಣ್ ಕಣ್ಣಲ್ಲಿ ಮನಮೋಹಕ ನೋಟ - ಎಲ್ಲೆಲ್ಲೂ ಹಸಿರ ಸಿರಿಯ ವೈಭವ       
Breaking News

ಬಿಜೆಪಿ ಯಾತ್ರೆಗೆ ಮಹಿಳಾ ಉಸ್ತುವಾರಿ

Friday, 06.10.2017, 3:04 AM       No Comments

| ರಮೇಶ ದೊಡ್ಡಪುರ

ಬೆಂಗಳೂರು: ರಾಜ್ಯದಲ್ಲಿ ರಾಜಕೀಯ ಪಕ್ಷವೊಂದು ನಡೆಸುತ್ತಿರುವ ಅತಿ ದೊಡ್ಡ ಯಾತ್ರೆ ನಡೆಸಲು ಸಿದ್ಧವಾಗಿ ದಾಖಲೆ ಬರೆಯುವ ಮುನ್ನವೇ, ನವ ಕರ್ನಾಟಕ ಪರಿವರ್ತನಾ ಯಾತ್ರೆಯ ಸಂಪೂರ್ಣ ಉಸ್ತುವಾರಿಯನ್ನು ಮಹಿಳೆಗೆ ನೀಡಲು ಬಿಜೆಪಿ ನಿರ್ಧರಿಸಿದೆ.

ನ.2ಕ್ಕೆ ಆರಂಭವಾಗಿ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಹಾದುಹೋಗುವ 73 ದಿನದ ಯಾತ್ರೆಗೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಅವರನ್ನು ಸಂಚಾಲಕಿಯಾಗಿ ನೇಮಿಸಲಾಗಿದೆ. ಈ ಯಾತ್ರೆಯ ಕೇಂದ್ರ ಬಿಂದು ಒಬ್ಬ ನಾಯಕರಿರುತ್ತಾರಾದರೂ, ಯೋಜನೆಯ ಉಸ್ತುವಾರಿಯನ್ನು ಶೋಭಾ ಅವರಿಗೆ ನೀಡಲು ಹೈಕಮಾಂಡ್ ನಿರ್ಧರಿಸಿದೆ. ಇಲ್ಲಿಯವರೆಗೆ ಬಿಜೆಪಿ ಯಾವುದೇ ಯಾತ್ರೆಗೆ ಮಹಿಳೆಯೊಬ್ಬರನ್ನು ಸಂಚಾಲಕಿಯಾಗಿ ನೇಮಕ ಮಾಡಿರಲಿಲ್ಲ.

ದೇಶದಲ್ಲೇ ಮೊದಲ ಯಾತ್ರೆ: ರಾಜ್ಯದಲ್ಲಿ ನಡೆಯುವ ನವಕರ್ನಾಟಕ ಪರಿವರ್ತನಾ ಯಾತ್ರೆ ವಿಸ್ತಾರ, ಸಮಯ ಹಾಗೂ ನಿರಂತರತೆ ಮೂರರಲ್ಲೂ ದೇಶದಲ್ಲೇ ಮೊದಲು. ಈ ಹಿಂದೆ ಬಿಎಸ್​ವೈ ನಡೆಸಿದ 45 ದಿನದ ಯಾತ್ರೆ ಎಲ್ಲ ಜಿಲ್ಲೆ ತಲುಪಿತ್ತು. ಆದರೆ ಈ ಬಾರಿ 224 ವಿಧಾನಸಭಾ ಕ್ಷೇತ್ರಗಳನ್ನೂ ಯಾತ್ರೆ ತಲುಪಲಿದ್ದು 73 ದಿನ ನಡೆಯಲಿದೆ.

ಎರಡು ಮೂರು ಹಂತದ ಬದಲಾಗಿ, ಒಮ್ಮೆ ಆರಂಭವಾದ ಯಾತ್ರೆ ಒಂದೇ ಹಂತದಲ್ಲಿ ಜನವರಿವರೆಗೆ ನಡೆದು ಮುಕ್ತಾಯವಾಗುತ್ತದೆ. ಇಂತಹ ಯಾತ್ರೆ ದೇಶದ ಇತಿಹಾಸದಲ್ಲೆ ಮತ್ತೊಂದು ನಡೆದಿಲ್ಲ ಎಂದು ರಾಜ್ಯ ಬಿಜೆಪಿ ವಕ್ತಾರ ಡಾ. ವಾಮನ್ ಆಚಾರ್ಯ ತಿಳಿಸಿದ್ದಾರೆ.

25 ತಂಡಗಳಲ್ಲಿ ಆಯೋಜನೆ

ಯಾತ್ರೆಯ ಯಶಸ್ಸಿಗಾಗಿ ಬಿಜೆಪಿ ಒಟ್ಟು 25 ತಂಡಗಳನ್ನು ರಚಿಸಿದೆ. ಕಾರ್ಯಾಲಯ ನಿರ್ವಹಣೆ, ವಾಹನಗಳ ನಿರ್ವಹಣೆ, ವಸತಿ ವ್ಯವಸ್ಥೆ, ಊಟ- ಉಪಚಾರ, ಸಾಮಾಜಿಕ ಜಾಲತಾಣ ಪ್ರಚಾರ, ರಕ್ಷಣೆ, ಮಾಧ್ಯಮ ನಿರ್ವಹಣೆ, ರಥ ವಿನ್ಯಾಸ ಮತ್ತು ನಿರ್ವಹಣೆ, ಫೋಟೊ- ವಿಡಿಯೊ, ಮಾಹಿತಿ ಸಂಗ್ರಹ, ಮುದ್ರಣ, ಪ್ರಚಾರ ಸಾಮಗ್ರಿ, ಸಾಹಿತ್ಯ ಮಾರಾಟ, ಸ್ವಚ್ಛತೆ, ಗಣ್ಯರ ಪ್ರವಾಸ ನಿರ್ವಹಣೆ, ರ್ಯಾಲಿಗಳ ಸ್ವಾಗತ, ಸಾರ್ವಜನಿಕ ಸಭೆಗಳು, ಅನುಮತಿ ವಿಭಾಗಗಳಿಗೆ ಇಬ್ಬರಿಂದ ಐವರವರೆಗಿನ ತಂಡ ರಚಿಸಲಾಗಿದೆ. ಇದಲ್ಲದೆ ವಿಭಾಗಗಳಲ್ಲಿ ಯಾತ್ರೆಯ ಸಂಪೂರ್ಣ ಉಸ್ತುವಾರಿಗೆ ಸಹ ಸಂಚಾಲಕರನ್ನು ನೇಮಿಸಲಾಗಿದೆ. ತುಮಕೂರು, ಮೈಸೂರು ವಿಭಾಗಕ್ಕೆ ತಮ್ಮೇಶ್ ಗೌಡ, ಶಿವಮೊಗ್ಗ, ಮಂಗಳೂರಿಗೆ ತಿಂಗಳೆ ವಿಕ್ರಮಾರ್ಜುನ ಹೆಗಡೆ, ಧಾರವಾಡ, ಬೆಳಗಾವಿಗೆ ಜಗದೀಶ ಹಿರೇಮನಿ, ಕಲಬುರ್ಗಿ, ಬಳ್ಳಾರಿಗೆ ರಘುನಾಥರಾವ್ ಮಲ್ಕಾಪುರೆ, ಬೆಂಗಳೂರು ನಗರ ಮತ್ತು ಗ್ರಾಮಾಂತರಕ್ಕೆ ಎಂ.ಜಯದೇವ್ ಅವರನ್ನು ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ.

 ಬಿಐಇಸಿ ಚಾಲನೆ

ಯಾತ್ರೆ ತುಮಕೂರಿನಲ್ಲಿ ಆರಂಭವಾಗುತ್ತದೆ ಎಂದು ಈ ಹಿಂದೆ ಹೇಳಲಾಗಿತ್ತಾದರೂ ವಿವಿಧ ಕಾರಣಗಳಿಗಾಗಿ ಬೆಂಗಳೂರಿನಿಂದಲೇ ಚಾಲನೆ ನೀಡಲು ಬಿಜೆಪಿ ನಿರ್ಧರಿಸಿದೆ. ಅರಮನೆ ಮೈದಾನದಲ್ಲಿ ನಡೆಸುವ ಚಿಂತನೆಯೂ ನಡೆದಿತ್ತು. ಆದರೆ ದಕ್ಷಿಣ ಕರ್ನಾಟಕದ 114 ವಿಧಾನಸಭಾ ಕ್ಷೇತ್ರದ ಬೂತ್​ಗಳಿಂದ ತಲಾ 3ರಂತೆ ಸುಮಾರು 80 ಸಾವಿರ ಬೈಕ್​ಗಳು ಆಗಮಿಸುವ ಕಾರಣ ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದ(ಬಿಐಇಸಿ) ಆವರಣದಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ಉತ್ತರ ಕರ್ನಾಟಕದ 110 ಕ್ಷೇತ್ರಗಳಿಗೆ ಸಂಬಂಧಿಸಿ ಬೆಳಗಾವಿಯಲ್ಲಿ ಪ್ರತ್ಯೇಕ ಸಮಾವೇಶ ನಡೆಯಲಿದೆ. ಒಟ್ಟಾರೆ 73 ದಿನದ ಯಾತ್ರೆಯಲ್ಲಿ ಒಟ್ಟು 189 ಸಾರ್ವಜನಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ ಸೇರಿ ರಾಷ್ಟ್ರೀಯ ನಾಯಕರ ಬೃಹತ್ ಸಮಾವೇಶ ನಡೆಯಲಿದೆ.

ಇಂದು ನೇಕಾರರ ಸಮಾವೇಶ

ರಬಕವಿ/ಬನಹಟ್ಟಿ: ರಾಜ್ಯದಲ್ಲಿ ನಾಲ್ಕೂವರೆ ವರ್ಷಗಳಿಂದ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ನೇಕಾರರು ಬೀದಿಗೆ ಬಿದ್ದಿದ್ದಾರೆ. ಕನಿಷ್ಠ ಸೌಲಭ್ಯಗಳಿಲ್ಲದೆ ತೀವ್ರ ಸಂಕಷ್ಟ ಎದುರಿಸುತ್ತಿರುವ ನೇಕಾರರಿಗೆ ಸ್ಥೈರ್ಯ ತುಂಬಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸೇರಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ನಾಯಕರ ದಂಡು ಅ.6ರಂದು ತೇರದಾಳ ವಿಧಾನಸಭೆ ಕ್ಷೇತ್ರಕ್ಕೆ ಆಗಮಿಸಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ, ತೇರದಾಳ ಕ್ಷೇತ್ರದ ಮಾಜಿ ಶಾಸಕ ಸಿದ್ದು ಸವದಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಹಾಗೂ ರಾಷ್ಟ್ರ ನಾಯಕರು, ವಿವಿಧ ಜಿಲ್ಲೆಯ ಸಂಸದರು, ಶಾಸಕರು, ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದರು.

 ಕೈ ತೆಕ್ಕೆಗೆ ಸಿ.ಎಚ್. ವಿಜಯಶಂಕರ್?

 ಮೈಸೂರು: ಅತೃಪ್ತಿಗೊಂಡಿರುವ ಮಾಜಿ ಸಚಿವ ಸಿ.ಎಚ್. ವಿಜಯಶಂಕರ್ ಬಿಜೆಪಿ ತೊರೆಯಲು ನಿರ್ಧರಿಸಿದ್ದಾರೆ. ಈ ಸುದ್ದಿ ಬಹಿರಂಗವಾಗುತ್ತಿದ್ದಂತೆ ಸಮಾಧಾನ ಪಡಿಸಲು ಬಿಜೆಪಿ ನಾಯಕರು ಪ್ರಯತ್ನಿಸಿದರು.

ವಿಜಯನಗರದಲ್ಲಿರುವ ವಿಜಯಶಂಕರ್ ಮನೆಗೆ ಸಂಜೆ ತೆರಳಿದ ಬಿಜೆಪಿ ವಿಭಾಗೀಯ ಸಹ ಪ್ರಭಾರಿ ಫಣೀಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಶಿವಣ್ಣ, ನಗರಾಧ್ಯಕ್ಷ ಡಾ.ಬಿ.ಎಚ್. ಮಂಜುನಾಥ್ ಇತರರು ವಿಜಯಶಂಕರ್ ಜತೆಗೆ ಮಾತುಕತೆ ನಡೆಸಿ ಪಕ್ಷ ತೊರೆಯದಂತೆ ಮನವಿ ಮಾಡಿದರು. ತಮಗೆ ಪಕ್ಷದಲ್ಲಿ ಆಗುತ್ತಿರುವ ಅನ್ಯಾಯವನ್ನು ವಿಜಯಶಂಕರ್ ತೆರೆದಿಡುವ ಪ್ರಯತ್ನ ಮಾಡಿದ್ದಾರೆ. ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಬೇರೊಬ್ಬರಿಗೆ ಟಿಕೆಟ್ ನೀಡಲು ನಡೆಯುತ್ತಿರುವ ಪ್ರಯತ್ನಕ್ಕೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದರು ಎನ್ನಲಾಗಿದೆ. ಬಿಜೆಪಿ ಮುಖಂಡರ ಮನವೊಲಿಕೆ ನಂತರವೂ ಪಕ್ಷ ತೊರೆಯುವ ನಿರ್ಧಾರದಿಂದ ವಿಜಯಶಂಕರ್ ಹಿಂದೆ ಸರಿದಿಲ್ಲ ಎನ್ನಲಾಗಿದ್ದು, ಕಾಂಗ್ರೆಸ್ ಸೇರ್ಪಡೆ ಬಹುತೇಕ ಖಚಿತ ಎಂದು ಮೂಲಗಳು ತಿಳಿಸಿವೆ.

ಮರುಚುನಾವಣೆಯಲ್ಲಿ ಜಯ

ಕುರುಬ ಸಮುದಾಯಕ್ಕೆ ಸೇರಿದ ವಿಜಯಶಂಕರ್ ಸದ್ಯ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾಗಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ತಮ್ಮ ಪ್ರಭಾವ ಹೊಂದಿದ್ದಾರೆ. ಮೂಲತಃ ಕಾಂಗ್ರೆಸ್ಸಿಗರಾದರೂ 1990ರಲ್ಲಿ ಬಿಜೆಪಿ ಸೇರ್ಪಡೆಯಾಗಿ 1991ರಲ್ಲಿ ಹುಣಸೂರು ಕ್ಷೇತ್ರದಿಂದ ಮರುಚುನಾವಣೆಯಲ್ಲಿ ಜಯಿಸಿದ್ದರು.1998ರಲ್ಲಿ ಮೈಸೂರು ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. 2014ರಲ್ಲೂ ಸ್ಪರ್ಧಿಸಲು ತಯಾರಿ ನಡೆಸಿದ್ದರಾದರೂ ಆ ಕ್ಷೇತ್ರಕ್ಕೆ ಪ್ರತಾಪ್ ಸಿಂಹ ಅವರನ್ನು ಕಣಕ್ಕಿಳಿಸಿದ ಬಿಜೆಪಿ, ವಿಜಯಶಂಕರ್ ಅವರನ್ನು ದೂರದ ಹಾಸನಕ್ಕೆ ಕಳಿಸಿತ್ತು. ದೇವೇಗೌಡರ ಎದುರು ಸೋಲುಂಡಿದ್ದರು. ಪಕ್ಷ ಹೇಳಿದೆಡೆಗೆ ತೆರಳಿದರೂ ರೈತ ಮೋರ್ಚಾ ಅಧ್ಯಕ್ಷ ಸ್ಥಾನ ಬಿಟ್ಟರೆ ಬೇರೆ ಯಾವುದರಲ್ಲೂ ಪರಿಗಣಿಸದ್ದರಿಂದ ಬೇಸರಗೊಂಡು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಮೂಲಗಳೂ ತಿಳಿಸಿವೆ. ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದರೂ, ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಕುರಿತು ಇನ್ನೂ ನಿರ್ಧಾರವಾಗಿಲ್ಲ.

 ಚುನಾವಣೆಗೆ ಸಿದ್ಧವಾಗದ ಕಮಲ ಪಡೆ

ಬೆಂಗಳೂರು: ವಿಧಾನ ಪರಿಷತ್​ನ ಆರು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಕಾರ್ಯತಂತ್ರ ಟಿಕೆಟ್ ಆಕಾಂಕ್ಷಿಗಳಲ್ಲಿ ತಳಮಳ ಹುಟ್ಟುಹಾಕಿದೆ. ಸಾಮಾನ್ಯವಾಗಿ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ವರ್ಷಗಳ ಮುಂಚೆಯೇ ಬಿಜೆಪಿ ತಯಾರಾಗುವುದು ವಾಡಿಕೆ. ಆದರೆ ಈ ಬಾರಿ ಕಾಂಗ್ರೆಸ್ ಆ ಕೆಲಸ ಮಾಡಿದ್ದರೆ ಬಿಜೆಪಿ ಈ ವಿಚಾರದಲ್ಲಿ ಉದಾಸೀನ ಧೋರಣೆ ತಾಳಿದೆ. ಅಭ್ಯರ್ಥಿಗಿಂತ ಪಕ್ಷವನ್ನೇ ಮುಂದು ಮಾಡಿ ಚುನಾವಣೆಗೆ ಹೋಗಬಾರದೇಕೆ ಎಂಬ ಆಲೋಚನೆ ವರಿಷ್ಠರದ್ದಾಗಿದೆ ಎಂದು ಮೂಲಗಳು ತಿಳಿಸಿವೆ. 2018ರ ಜೂನ್​ನಲ್ಲಿ ಪರಿಷತ್​ನ ಆರು ಕ್ಷೇತ್ರಗಳಿಗೆ ಚುನಾವಣೆ ನಡೆಯುವುದು. ನೈಋತ್ಯ, ಈಶಾನ್ಯ, ಮತ್ತು ಬೆಂಗಳೂರು ಪದವೀಧರ ಕ್ಷೇತ್ರ, ಆಗ್ನೇಯ, ದಕ್ಷಿಣ, ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ. ಇದೀಗ ಮತದಾರರ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಬಿಜೆಪಿಯಿಂದ ಅಭ್ಯರ್ಥಿಗಳು ಯಾರಾಗಬೇಕೆಂಬ ಬಗ್ಗೆ ತೀರ್ವನವಾಗಿಲ್ಲ. ಆದರೆ ಕಾಂಗ್ರೆಸ್​ನಲ್ಲಿ ಅಭ್ಯರ್ಥಿಗಳ ಹೆಸರು ಈಗಾಗಲೇ ಅಂತಿಮವಾಗಿದೆ. ಜೆಡಿಎಸ್​ನಲ್ಲಿ 2 ಕ್ಷೇತ್ರಕ್ಕೆ ಮಾತ್ರ ಅಭ್ಯರ್ಥಿಗಳ ಆಯ್ಕೆಯಾಗಬೇಕಿದೆ.

ಬಿಜೆಪಿಯಲ್ಲಿ ಗೊಂದಲ: ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಬೆಂಗಳೂರಿಗೆ ಆಗಮಿಸಿದ್ದ ಸಂದರ್ಭದಲ್ಲಿಯೇ ಈ ಆರು ಕ್ಷೇತ್ರಗಳ ಅಭ್ಯರ್ಥಿ ಕುರಿತು ಒಂದು ಸುತ್ತಿನಲ್ಲಿ ಚರ್ಚೆ ನಡೆಸಲಾಗಿದೆಯಾದರೂ ಅಂತಿಮ ತೀರ್ವನಕ್ಕೆ ಬಂದಿಲ್ಲ. ಆರು ಕ್ಷೇತ್ರಗಳ ಪೈಕಿ ನಾಲ್ಕು ಸ್ಥಾನಗಳು ಬಿಜೆಪಿ ವಶದಲ್ಲಿವೆ. ಆದರೆ, ಅವಧಿ ಪೂರೈಸುತ್ತಿರುವ ಡಿ.ಎಚ್. ಶಂಕರಮೂರ್ತಿ ಮತ್ತು ರಾಮಚಂದ್ರ ಗೌಡ ಅವರು ಮುಂದಿನ ಬಾರಿಗೆ ಮರು ಆಯ್ಕೆಗೆ ಆಸಕ್ತಿ ತೋರಿಲ್ಲ. ಆಕಾಂಕ್ಷಿಗಳು ಮಾತ್ರ ಸುಮ್ಮನೆ ಕುಳಿತಿಲ್ಲ. ಅಳುಕಿನಲ್ಲೆ ಪ್ರಯತ್ನ ಶುರು ಮಾಡಿದ್ದಾರೆ. ಅ.28ರಿಂದ ಮತದಾರರ ನೋಂದಣಿ ಆರಂಭವಾಗಿದ್ದು ನ.7ಕ್ಕೆ ಅಂತ್ಯಗೊಳ್ಳಲಿದೆ.

2018ರಲ್ಲಿ ಅವಧಿ ಪೂರೈಸುತ್ತಿರುವವರು

# ಅಮರನಾಥ ಪಾಟೀಲ್

# ಡಿ.ಎಚ್.ಶಂಕರಮೂರ್ತಿ

# ರಾಮಚಂದ್ರಗೌಡ

# ಗಣೇಶ್ ಕಾರ್ಣಿಕ್

# ಮರಿತಿಬ್ಬೇಗೌಡ

# ರಮೇಶ್ ಬಾಬು

Leave a Reply

Your email address will not be published. Required fields are marked *

Back To Top