Wednesday, 18th July 2018  

Vijayavani

ಸಾಲದ ಸುಳಿಯಲ್ಲಿದ್ರೂ ಐ ಫೋನ್​ ಗಿಫ್ಟ್​ - ಹತ್ತಾರು ಸಮಸ್ಯೆ ಮಧ್ಯೆ ಬೇಕಿತ್ತಾ ದುಬಾರಿ ಉಡುಗೊರೆ​ - ಇಟ್ಕೊಂಡೋರಾರು..? ವಾಪಸ್ ಕೊಟ್ಟವರಾರು.?        ದೆಹಲಿಯಲ್ಲಿದ್ರೂ ರೇವಣ್ಣಗೆ ತವರಿನ ಜಪ - ಹಾಸನದ ಅಭಿವೃದ್ಧಿ ಬಗ್ಗೆ ಕೇಂದ್ರ ಸಚಿವರ ಜತೆ ಚರ್ಚೆ - ಸಿಎಂ ಎಚ್​ಡಿಕೆಯನ್ನೇ ಓವರ್​​ಟೇಕ್​ ಮಾಡಿದ PWD ಮಿನಿಸ್ಟರ್​​​        ಜಾರಕಿಹೊಳಿ ಬ್ರದರ್ಸ್​​​​ ನಡುವೆ ಸಮರ - ದೆಹಲಿಗೆ ಶಾಸಕರನ್ನ ಕರೆದೊಯ್ದ ರಮೇಶ್​​​​​​​ ಜಾರಕಿಹೊಳಿ - ಸತೀಶ್​​ಗೆ ಮಂತ್ರಿಗಿರಿ ತಪ್ಪಿಸಲು ಶಕ್ತಿ ಪ್ರದರ್ಶನ        ಇಂದಿನಿಂದ ಸಂಸತ್ ಅಧಿವೇಶನ - ಮಹಿಳಾ ಮೀಸಲಾತಿ, ತ್ರಿಪಲ್ ತಲಾಖ್​​​​​ ಮಸೂದೆ ಅಂಗೀಕಾರ ಸಾಧ್ಯತೆ - ಸಂಜೆ ರಾಜ್ಯ ಸಂಸದರ ಜತೆ ಸಿಎಂ ಮೀಟಿಂಗ್​​        ವಸತಿ ಯೋಜನೆಯ ಹಣವನ್ನೇ ನುಂಗಿದ್ರು - 140 ಅನರ್ಹರಿಂದ 8 ಕೋಟಿ ಗುಳುಂ ಸ್ವಾಹ - ಗದಗ ನಗರಸಭೆಯಲ್ಲಿ ಬಯಲಾಯ್ತು ಗೋಲ್​ಮಾಲ್​​​​        ದೀಪಾಲಂಕಾರದಿಂದ ಕಂಗೊಳಿಸಿದ ಕೆಆರ್​ಎಸ್​ - ಗಗನ ಚುಕ್ಕಿ ಜಲಪಾತ ನಯನ ಮನೋಹರ - ಡ್ರೋಣ್​​ ಕಣ್ಣಲ್ಲಿ ಸೆರೆಯಾಯ್ತು ಜಲಧಾರೆಯ ದೃಶ್ಯ ವೈಭವ       
Breaking News

ಬಿಜೆಪಿಯ ಕನಸು ಮತ್ತು ಷಾ ಮುಂದಿರುವ ವಾಸ್ತವ

Sunday, 13.08.2017, 3:01 AM       No Comments

| ಎಂ.ಕೆ.ಭಾಸ್ಕರ ರಾವ್

ಬಾರಿ ಬಿಜೆಪಿ ಸರ್ಕಾರ, ಮುಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಪುನಃ ಘೊಷಿಸಿದ್ದಾರೆ. 2018ರ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನಕ್ಕೆ ಕಡಿಮೆ ಇಲ್ಲದಂತೆ ಗೆದ್ದು ಸರ್ಕಾರ ರಚಿಸುವ ಮತ್ತು ಅದರ ನೇತೃತ್ವವನ್ನು ಯಡಿಯೂರಪ್ಪ ಹೊರಲಿರುವ ಮಾತನ್ನು ವರ್ಷಗಳ ಹಿಂದೆಯೇ ಷಾ ತಮ್ಮ ಮಂಗಳೂರು ಭೇಟಿ ಕಾಲದಲ್ಲಿ ಹೇಳಿದ್ದರು. ರಾಜ್ಯ ಬಿಜೆಪಿ ಮುಖಂಡರು, ಕಾರ್ಯಕರ್ತರು ಈ ಘೊಷಣೆಯ ಆನಂದೋತ್ಸಾಹದಲ್ಲಿ ಒಂದಾಗಿದ್ದರು. ಇವತ್ತು ಅಂಥ ಉನ್ಮಾದಕಾರಿ ಆನಂದ ಉಳಿದಿಲ್ಲ. ಸಾಗಿ ಬಂದ ದಾರಿಯನ್ನು ಸಿಂಹ ಆಗೀಗ ತಿರುಗಿ ನೋಡುತ್ತದಂತೆ. ಅಮಿತ್ ಷಾ, ಬೆಂಗಳೂರು ಭೇಟಿ ಕಾಲದಲ್ಲಿ ಮಾಡಲಿರುವ, ಮಾಡಲೇಬೇಕಾಗಿರುವ ಬಹಳ ಮುಖ್ಯ ಕೆಲಸವೆಂದರೆ ಎರಡು ಎರಡೂವರೆ ವರ್ಷಾವಧಿಯಲ್ಲಿ ರಾಜ್ಯ ಬಿಜೆಪಿ ಕಥೆ ಏನಾಗಿದೆ ಎನ್ನುವುದರ ಸಿಂಹಾವಲೋಕನ.

ಚುನಾವಣೆ ಬಹಳ ದೂರದಲ್ಲಿಲ್ಲ. ಅಧಿಕಾರವನ್ನು ಹಿಡಿಯಲೇಬೇಕೆಂಬ ಮಹತ್ವಾಕಾಂಕ್ಷೆಯುಳ್ಳ ರಾಜಕೀಯ ಪಕ್ಷಕ್ಕೆ ಆರೆಂಟು ತಿಂಗಳು ಏನೂ ಅಲ್ಲ. ನಾವು ಅಧಿಕಾರದಲ್ಲಿದ್ದಾಗ ಎಷ್ಟೆಲ್ಲ ಒಳ್ಳೆ ಕೆಲಸ ಮಾಡಿದ್ದೆವು ಎಂದು ಹೇಳಿಕೊಳ್ಳಲು ಸ್ಥಳೀಯ ಬಿಜೆಪಿ ಬಳಿಯಲ್ಲಿ ಗಟ್ಟಿ ಸರಕು ಏನೂ ಇಲ್ಲ. ಐದು ವರ್ಷದ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಗಳಾದರು ಎಂಬಲ್ಲಿಂದಾಚೆಗೆ ಹೇಳಿಕೊಳ್ಳಲು ಏನಾದರೂ ಇದೆಯೇ ಎಂದು ರಾಜ್ಯದ ಜನ ಕೇಳಿದರೆ ಉತ್ತರವಿದೆಯೇ? ದಕ್ಷಿಣ ಭಾರತದಲ್ಲಿ ಬಿಜೆಪಿ ಆಡಳಿತದ ದಿಡ್ಡಿಬಾಗಿಲನ್ನು ತೆರೆದವರು ಯಡಿಯೂರಪ್ಪ ಎಂಬುದು ನಿಜ, ಬಿಜೆಪಿಯೊಳಗಿನ ಈ ಹೊತ್ತಿನ ಗೊಂದಲ ಗೋಜಲುಗಳಿಗೂ ಅವರ ಕೊಡುಗೆ ದೊಡ್ಡದು ಎನ್ನುವುದೂ ಅಷ್ಟೇ ನಿಜ. ವಿಸ್ತಾರಕರು ತಿಂಗಳುಗಟ್ಟಳೆ ರಾಜ್ಯದ ಮೂಲೆಮೂಲೆಗಳನ್ನೂ ಮುಟ್ಟಿ ಒಪ್ಪಿಸಿರುವ ವರದಿಯ ಮೂಲಕ ಅಮಿತ್ ಷಾಗೆ ಇದೆಲ್ಲ ಮನವರಿಕೆಯಾಗಿರುವ ಸಾಧ್ಯತೆ ಇದೆ. ಯಡಿಯೂರಪ್ಪ ಮತ್ತು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ನಡುವಿನ ಕೆಲವೊಮ್ಮೆ ಶೀತಲ, ಹಲವೊಮ್ಮೆ ಬಹಿರಂಗ ಸಮರ, 150 ಸ್ಥಾನ ಗೆಲ್ಲುವ ಬಿಜೆಪಿ ಕನಸಿಗೆ ಎದುರಾಗಿರುವ ಬಹಳ ದೊಡ್ಡ ಅಡ್ಡಿ ಎನ್ನುವುದಕ್ಕೆ ಯಾವ ಸಂಶೋಧನೆಯ ಅಗತ್ಯವೂ ಇಲ್ಲ.

ಇವರಿಬ್ಬರ ಹಿಂದೆ ಸದಾ ಕಾಲಕ್ಕೂ ಹುಳಿ ಹಿಂಡುವ ದಂಡೇ ಇದೆ ಎನ್ನುತ್ತದೆ ಪಕ್ಷದ ಒಳಹೊರಗನ್ನು ಬಲ್ಲ ಮಾಹಿತಿ. ಬೆಂಗಳೂರಿನಿಂದ ದೆಹಲಿವರೆಗೂ ಈ ದಂಡಿನ ಕಬಂಧಬಾಹು ಚಾಚಿದೆ ಎಂದೂ ಈ ಮಾಹಿತಿ ಹೇಳುತ್ತದೆ. ಸಣ್ಣಪುಟ್ಟ ಅಸಮಾಧಾನ ಬೇರೆ, ತೀವ್ರ ಸ್ವರೂಪದ ವೈಮನಸ್ಯ ಬೇರೆ. ಈ ಇಬ್ಬರೂ ಒಂದು ಕಾಲದಲ್ಲಿ ಒಂದೇ ತಟ್ಟೆಯ ಅನ್ನವನ್ನು ಹಂಚಿಕೊಂಡು ತಿನ್ನುತ್ತಿದ್ದ ಗೆಳೆಯರು. ಆಕಸ್ಮಿಕವಾಗಿ ಶತ್ರುಗಳಾದವರು ಮುಂದೊಂದು ಸಂದರ್ಭದಲ್ಲಿ ಸ್ನೇಹಿತರಾಗುವ ಸುಲಭ ಸಾಧ್ಯತೆ ಇರುತ್ತದೆ. ಆದರೆ ಜೀವದ ಗೆಳೆಯರಲ್ಲಿ ಶತ್ರುತ್ವ ಬೆಳೆದರೆ ಅದು ಕೊನೆವರೆಗೂ ಹಾಗೇ ಇರುತ್ತದೆ ಎನ್ನುತ್ತಾರೆ ಅನುಭಾವಿಗಳು. ಯಡಿಯೂರಪ್ಪ, ಈಶ್ವರಪ್ಪ ನಡುವಿನ ಮುನಿಸನ್ನು ನೋಡಿದರೆ ಅನುಭಾವಿಗಳ ಮಾತು ನಿಜವಿರಬಹುದು ಎನಿಸುತ್ತದೆ. ಪಕ್ಷ ತೊರೆದು ಯಡಿಯೂರಪ್ಪ ಕೆಜೆಪಿ ಕಟ್ಟಿದ್ದನ್ನು ಒಂದು ಹಿನ್ನಡೆಯಾಗಿ ಮತ್ತು ಈಶ್ವರಪ್ಪ ಸಂಗೊಳ್ಳಿ ರಾಯಣ್ಣ

ಬ್ರಿಗೇಡ್​ಗೆ ತಿದಿ ಒತ್ತಿದನ್ನು ಇನ್ನೊಂದು ಹಿನ್ನಡೆಯಾಗಿ ನೋಡಲಾಗುತ್ತಿದೆ. ಕೆಜೆಪಿಯನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿದ ಯಡಿಯೂರಪ್ಪ ಈಗ ರಾಜ್ಯ ಬಿಜೆಪಿ ಅಧ್ಯಕ್ಷರಷ್ಟೇ ಅಲ್ಲ, ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಕೂಡಾ.

2008ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೆ ಯಡಿಯೂರಪ್ಪ ಪರವಾದ ಅನುಕಂಪ ಕೆಲಸ ಮಾಡಿತು. 2013ರಲ್ಲಿ ಬಿಜೆಪಿಯ ಆಂತರಿಕ ಗುದಮುರುಗಿ ಕಾಂಗ್ರೆಸ್ ಅಧಿಕಾರ ಹಿಡಿಯುವುದಕ್ಕೆ ಕಾರಣವಾಯಿತು. ಈ ಬಾರಿ ಯಾವುದೇ ಅನುಕಂಪವೂ ಬಿಜೆಪಿ ಪರವಾಗಿ ಇಲ್ಲ. ಬಿಜೆಪಿಯನ್ನು ಅಧಿಕಾರಕ್ಕೆ ತರುವ ಉತ್ಸಾಹ ಕಾರ್ಯಕರ್ತ ಸಮುದಾಯದಲ್ಲಿದೆ. ಆದರೆ ರಾಜ್ಯ ಮಟ್ಟದಲ್ಲಿ ಪಕ್ಷದ ನಾಯಕತ್ವವೇ ಗೊಂದಲದ ಗೂಡಾಗಿರುವುದರಿಂದ ಓಟು ಕೇಳಬೇಕಾಗಿರುವ ಕಾರ್ಯಕರ್ತರು ಇರಿಸುಮುರಿಸಿಗೆ ಈಡಾಗಿದ್ದಾರೆ. ಉತ್ತರ ಭಾರತದ ರೀತಿ ನೀತಿ ಕರ್ನಾಟಕದ ರಾಜಕೀಯಕ್ಕೆ ಹೊಂದಾಣಿಕೆಯಾಗದ ಪಥ್ಯ. ಅಮಿತ್ ಷಾಗೆ ಈ ವೇಳೆಗೆ ಇದು ಮನವರಿಕೆ ಆಗಿರುತ್ತದೆ. ಇಲ್ಲಿ ಕಾಂಗ್ರೆಸ್ ಮಾತ್ರವೇ ಅಲ್ಲ, ಎಚ್.ಡಿ. ದೇವೇಗೌಡರ ನೇತೃತ್ವದ ಜೆಡಿಎಸ್ ಕೂಡಾ ಸಾಕಷ್ಟು ಬಲವಾಗಿಯೇ ಇದೆ. ಕರ್ನಾಟಕಕ್ಕೆ ತಲೆನೋವಾಗಿರುವ ಕಾವೇರಿ ಜಲ ವಿವಾದ ಹಾಗೂ ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆ ವಿಚಾರದಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್​ಗಿಂತ ಹೆಚ್ಚು ಕ್ರಿಯಾಶೀಲವಾಗಿರುವ ಜೆಡಿಎಸ್, ಆ ಕಾರಣಕ್ಕಾಗಿಯೆ ಒಂದಿಷ್ಟು ಹೆಚ್ಚಿನ ಅಂಕಗಳನ್ನು ಗಳಿಸುತ್ತಿದೆ. ಅದರ ಈ ನೀತಿ, ಚುನಾವಣೆಯಲ್ಲಿ ಹೆಚ್ಚಿನ ಡಿವಿಡೆಂಡನ್ನು ತರುವುದು ನಿಶ್ಚಿತ.

ಜೆಡಿಎಸ್ ಕೂಡಾ ಅಧಿಕಾರಕ್ಕೆ ಬರುವ ಕನಸನ್ನು ಕಟ್ಟಿಕೊಂಡಿದೆ. ಕೈಯಲ್ಲಿರುವ ಅಧಿಕಾರವನ್ನು ಉಳಿಸಿಕೊಳ್ಳುವ ಕಸರತ್ತನ್ನು ಕಾಂಗ್ರೆಸ್ ನಡೆಸಿದೆ. ಒಳಗೊಂದಲಗಳನ್ನೆಲ್ಲ ನಿವಾರಣೆ ಮಾಡಿಕೊಳ್ಳದೆ, ಪಕ್ಷದ ಎರಡು ಬಣಗಳಲ್ಲಿ ವೈಮನಸ್ಯ ಉಳಿದಿಲ್ಲ ಎನ್ನುವುದು ಸಾರ್ವಜನಿಕರು ನಂಬುವ ರೀತಿಯಲ್ಲಿ ಸಾರ್ವಜನಿಕವಾಗದೆ 150ರ ಗಡಿ ಮುಟ್ಟುವುದು ಆಗದ ಕೆಲಸ ಎನ್ನುವುದನ್ನು ಬಿಜೆಪಿ ನಾಯಕತ್ವ ಮನನ ಮಾಡಿಕೊಳ್ಳಬೇಕಿದೆ. ಯಡಿಯೂರಪ್ಪ-ಈಶ್ವರಪ್ಪ ನಡುವಿನ ಅಸಮಾಧಾನಕ್ಕೆ ಮದ್ದರೆಯುವ ಕೆಲಸವನ್ನು ಆಗೀಗ ದೆಹಲಿ ನಾಯಕತ್ವ ಮಾಡಿದ್ದಿದೆ. ಆದರೆ ರೋಗ ಮೂಲವನ್ನು ಅರಿಯದೆ ಮದ್ದನ್ನು ಲೇಪಿಸುವುದರಿಂದ ಗಾಯ ಮೇಲ್ಮೈ ಮಟ್ಟದಲ್ಲಿ ಮಾಯುತ್ತದಾದರೂ ಒಳಗೆ ಹಾಗೇ ಇರುತ್ತದೆ. ದೇಹದಲ್ಲಿ ನಂಜಿನ ಪ್ರಮಾಣ ಹೆಚ್ಚಾದಾಗ ಗಾಯ ಪುನಃ ಗಿಬರಿಕೊಳ್ಳುವಂತೆ ಕಾಣಿಸಿಕೊಳ್ಳುತ್ತದೆ. ಪಕ್ಷದ ರಾಜ್ಯ ಉಸ್ತುವಾರಿಗಳು ಆಗಾಗ ಬಿರುಕು ಮುಚ್ಚುವ ಕೆಲಸ ಮಾಡುತ್ತಾರೆ. ಆದರೆ ಅವರು ದೆಹಲಿ ವಿಮಾನ ಏರುತ್ತಿದ್ದಂತೆಯೇ ಬಿರುಕು ಬಾಯಿ ಬಿಟ್ಟುಕೊಳ್ಳುತ್ತದೆ. ಈ ಸಮಸ್ಯೆಗೆ ಅಮಿತ್ ಷಾ ಯಾವ ರೀತಿಯಲ್ಲಿ ಪರಿಹಾರ ಸೂಚಿಸುತ್ತಾರೋ ನೋಡಬೇಕು. ಈ ಬಾರಿ ಬಿಜೆಪಿ ಸರ್ಕಾರ ಎಂದು ಅವರು ಪದೇಪದೆ ಹೇಳುತ್ತಿದ್ದಾರೆ. ಒಡಕಲು ಬಿಂಬವಾಗಿರುವ ಯಡಿಯೂರಪ್ಪ-ಈಶ್ವರಪ್ಪ ಮನಸ್ಸಿಗೆ ಒಂದು ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ಈ ಬಾರಿಯದು ಒತ್ತಟ್ಟಿಗಿರಲಿ, ಮುಂದಿನ ಬಾರಿಯೂ ಈ ಆಸೆ ಹಾಗೇ ಉಳಿದುಬಿಡಬಹುದು. ಒಡೆದ ಕನ್ನಡಿಯ ಪ್ರತಿ ಚೂರಿನಲ್ಲೂ ಬಿಂಬ ಕಾಣಿಸುತ್ತದೆ. ಒಡೆದ ಕನ್ನಡಿಯನ್ನು ಒಪ್ಪವಾಗಿ ಜೋಡಿಸಿದರೂ ಅಲ್ಲಿ ಒಂದು ಬಿಂಬ ಕಾಣಿಸುವುದು ಅಸಾಧ್ಯ. ಅಂಥ ಅಸಾಧ್ಯವನ್ನು ಅಮಿತ್ ಷಾ ನಿಜಮಾಡಿಯಾರೇ? ಬಿಜೆಪಿ ಬೇಕು ಎಂದು ಮತ ಹಾಕುವ ತರಾತುರಿ ಈ ಹಂತದಲ್ಲಿ ಜನರಲ್ಲಿ ಕಾಣಿಸುತ್ತಿಲ್ಲ. ಕಾಂಗ್ರೆಸ್ ಬೇಡ ಎನ್ನುವುದು ಕಾರಣವಾಗಬಹುದು. ಆದರೆ ಕಾಂಗ್ರೆಸ್ ಆಡಳಿತದಲ್ಲಿರುವ ಭ್ರಷ್ಟಾಚಾರವೂ ಸೇರಿದಂತೆ ಲೋಪಗಳನ್ನು ಎತ್ತಿ ತೋರಿಸಿ ಹೌದಪ್ಪ ಎಂದು ಜನರಿಂದ ಶಹಬ್ಬಾಸ್​ಗಿರಿಯನ್ನು ಪಡೆಯುವ ಉತ್ಸುಕತೆ ಮುಖ್ಯ ವಿರೋಧ ಪಕ್ಷವೂ ಆಗಿರುವ ರಾಜ್ಯ ಬಿಜೆಪಿ ನಾಯಕರಲ್ಲಿ ಕಾಣಿಸುತ್ತಿಲ್ಲ. ಚುನಾವಣೆ ಬರುತ್ತದೆ, ಜನ ಕಾಂಗ್ರೆಸ್ಸನ್ನು ತಿರಸ್ಕರಿಸುತ್ತಾರೆ, ನಾವಲ್ಲದೆ ಇನ್ಯಾರು ಅಧಿಕಾರಕ್ಕೆ ಬರುವುದು ಸಾಧ್ಯವೆಂಬ ಅಪಾಯಕಾರಿ ಆತ್ಮವಿಶ್ವಾಸದ ಉದಾಸೀನ ಸ್ಥಳೀಯ ನಾಯಕರಲ್ಲಿರುವಂತಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಬುಡವನ್ನು ಇನ್ನಷ್ಟು ಭದ್ರಗೊಳಿಸುವ ಕೆಲಸವನ್ನು ಸಿದ್ದರಾಮಯ್ಯ ಸರ್ಕಾರ ಮತ್ತು ಆ ಪಕ್ಷ ಮಾಡುತ್ತಿರುವುದು ಬಿಜೆಪಿಯನ್ನು ಆತಂಕಕ್ಕೆ ಈಡು ಮಾಡಬೇಕಾಗಿತ್ತು. ಮೊದಲನೆಯದಾಗಿ ವೀರಶೈವ ಲಿಂಗಾಯತ ಸ್ವತಂತ್ರ ಧರ್ಮದ ಬೇಡಿಕೆಗೆ ಸ್ಪಂದಿಸುವ ಮೂಲಕ, ಬಿಜೆಪಿಯ ಮತಬ್ಯಾಂಕಿಗೆ ಕನ್ನ ಹಾಕುವ ಯತ್ನವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ರಾಜ್ಯ ಸಂಪುಟದಲ್ಲಿರುವ ವೀರಶೈವ ಲಿಂಗಾಯತ ಸಚಿವರು, ಕೆಲಸ ಕಾರ್ಯಗಳನ್ನೆಲ್ಲ ಪಕ್ಕಕ್ಕೆ ಸರಿಸಿ, ಸ್ವತಂತ್ರ ಧರ್ಮದ ಬೇಡಿಕೆಗೆ ಪೂಕರಕವಾಗಿ ಜನಮನ ಕಸಿಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಬಿಜೆಪಿ ಪಾಲಿಗೆ ಎಚ್ಚರಿಕೆಯ ಗಂಟೆಯಾಗಬೇಕಿತ್ತು. ಆದರೆ ಬಿಜೆಪಿ ನಿರುಮ್ಮಳವಾಗಿರುವುದನ್ನು ನೋಡಿದರೆ ಅಪಾಯದ ಅರಿವು ಅದನ್ನು ತಟ್ಟಿಲ್ಲ ಎಂದೇ ಭಾವಿಸಬೇಕಿದೆ. ಅಮಿತ್ ಷಾ, ಬೆಂಗಳೂರಿಗೆ ಬಂದು ಮೂರು ದಿವಸ ಇದ್ದು ಹೋದ ಮಾತ್ರಕ್ಕೆ ತಾವು ಅಧಿಕಾರಕ್ಕೆ ಬರುವ ದಾರಿ ಸುಗಮವಾಗುತ್ತದೆಂಬ ಭ್ರಮಾಲೋಕದಲ್ಲಿ ಸ್ಥಳೀಯ ನಾಯಕತ್ವವಿದೆ. ಷಾ, ಈ ಭ್ರಮೆಯ ಗುಳ್ಳೆಯನ್ನು ಒಡೆಯುವುದು ಅನಿವಾರ್ಯವಾಗಿದೆ, ಒಡೆದಾರು.

ಅಧಿಕಾರದ ಕನವರಿಕೆಯಲ್ಲಿ ಕಾಂಗ್ರೆಸ್: ಈ ಕಡೆ ರಾಜ್ಯ ಕಾಂಗ್ರೆಸ್​ನಲ್ಲಿ ಮತ್ತು ಅದರ ಆಳ್ವಿಕೆಯಲ್ಲಿ ಕೂಡಾ ಎಲ್ಲವೂ ಸರಿಯಾಗಿಲ್ಲ. ಆದರೆ ಸರಿಯಾಗಿಲ್ಲ ಎನ್ನುವ ಸ್ಥಿತಿಯಲ್ಲಿ ಯಾರೂ ಇಲ್ಲ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ಕರ್ನಾಟಕದಲ್ಲಿ ನಡೆಯುತ್ತಿರುವುದೆಲ್ಲ ಸರಿ ಎನಿಸುತ್ತಿರುವುದಕ್ಕೆ ಕಾರಣ, ಪಕ್ಷದ ದಯನೀಯ ಸ್ಥಿತಿ. ಇಂದಿರಾ ಗಾಂಧಿ ಕಾಲದಲ್ಲಿದ್ದ ಕಾಂಗ್ರೆಸ್ ಈಗ ಇದ್ದಿದ್ದರೆ ಅದರ ಕಥೆಯೇ ಬೇರೆಯದಾಗಿರುತ್ತಿತ್ತು ಎಂದು ಹೇಳುವ ಕಾಂಗ್ರೆಸ್ಸಿಗರಿದ್ದಾರೆ. ಸದ್ಯಕ್ಕೆ ಸಿದ್ದರಾಮಯ್ಯನವರ ಮುಂದಿರುವ ಏಕೈಕ ಗುರಿ ಪಕ್ಷವನ್ನು ಪುನಃ ಅಧಿಕಾರಕ್ಕೆ ತರುವುದು; ಎರಡನೇ ಬಾರಿಗೆ ಪಕ್ಷಕ್ಕೆ ಅಧಿಕಾರ ತಂದುಕೊಟ್ಟ ಅರ್ಹತೆ ಆಧರಿಸಿ ಮತ್ತೆ ಮುಖ್ಯಮಂತ್ರಿಯಾಗುವುದು. ಅವರ ಗುರಿಯಲ್ಲಿ ತಪ್ಪನ್ನು ಕಾಣಲು ಸಾಧ್ಯವಿಲ್ಲ. ಪಕ್ಷದ ಹೈಕಮಾಂಡಿಗೆ ಹೇಗಾದರೂ ಸೈ ಪಕ್ಷ ಮರಳಿ ಅಧಿಕಾರ ಹಿಡಿಯಲಿ ಎಂಬ ಆಸೆ ಇದೆ. ಒಂದೊಂದಾಗಿ ರಾಜ್ಯಗಳನ್ನು ಕಳೆದುಕೊಳ್ಳುತ್ತಿರುವ ಪಕ್ಷಕ್ಕೆ ಕರ್ನಾಟಕವನ್ನು ಹಿಡಿದಿಟ್ಟುಕೊಳ್ಳುವುದು ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆ ಮೂಲೋದ್ದೇಶವಾಗಿರುವ ರ್ಯಾಲಿಯೊಂದು ರಾಯಚೂರಿನಲ್ಲಿ ಶನಿವಾರ ನಡೆಯಿತು. ಹೈದರಾಬಾದ್ ಕರ್ನಾಟಕದ ದಶಕಗಳ ಬೇಡಿಕೆಯಾಗಿದ್ದ 371(ಜೆ) ಸಂವಿಧಾನ ತಿದ್ದುಪಡಿಗೆ ನೆರವಾದ ರಾಹುಲ್ ಗಾಂಧಿಯವರನ್ನು ಅಭಿನಂದಿಸುವ ಕಾರ್ಯಕ್ರಮ ಇದು ಎಂದು ಜಾಹೀರಾತು ಹೇಳಿದ್ದರೂ ಒಳ ಆಶಯ ಪಕ್ಷದ ಬಲವರ್ಧನೆ.

ಹೈ-ಕ ಅಭಿವೃದ್ಧಿ ಮಂಡಳಿ ಚಾಲ್ತಿಗೆ ಬಂದ ಲಾಗಾಯ್ತಿನಿಂದ ಸಂವಿಧಾನ ತಿದ್ದುಪಡಿಯ ಸೌಲಭ್ಯದವರೆಗೆ ಆ ಪ್ರದೇಶದಲ್ಲಿ ಆಗಿರುವ ಅಭಿವೃದ್ಧಿ ಏನು ಎನ್ನುವುದನ್ನು ನೋಡಿದರೆ ಅಯ್ಯೋ ಎನಿಸುತ್ತದೆ. ಅಲ್ಲಿಗೆ ಅಗತ್ಯವಿರುವ ಹಣವನ್ನು ಸರ್ಕಾರ ಕೊಟ್ಟುಕೊಂಡು ಬಂದಿದೆ. ಸಿದ್ದರಾಮಯ್ಯ ಸರ್ಕಾರವೂ ಸಾಕಷ್ಟು ಹಣವನ್ನು ಬಿಡುಗಡೆ ಮಾಡಿದೆ. ಆದರೆ ಆ ಹಣ, ಅಭಿವೃದ್ಧಿ ಕಾಮಗಾರಿಗಳಲ್ಲಿ ಕಾಣಿಸುತ್ತಿಲ್ಲವೇಕೆ…? ಎಲ್ಲಿಗೆ ಹೋಯಿತು ಅಷ್ಟೆಲ್ಲ ಕೋಟಿ ಕೋಟಿ ಹಣ…? ರಾಹುಲ್ ಗಾಂಧಿಯವರು ಈ ಪ್ರಶ್ನೆಯನ್ನು ರಾಯಚೂರು ರ್ಯಾಲಿಯಲ್ಲಿ ಕೇಳಿದ್ದರೆ, ಸರ್ಕಾರವನ್ನು ಕೆಣಕಿದ್ದರೆ ಅವರ ಭೇಟಿ ಹೆಚ್ಚು ಅರ್ಥಪೂರ್ಣ ಆಗುತ್ತಿತ್ತು. ಜನರೂ ಮೆಚ್ಚುತ್ತಿದ್ದರು. ಆದರೆ ಅವರಿಗೆ ಅದು ಅಗತ್ಯ ಎನಿಸಲಿಲ್ಲ. ಅವರ ಭೇಟಿ ಉದ್ದೇಶವೇ ಮುಂಬರಲಿರುವ ಚುನಾವಣೆಗೆ ಸಿದ್ಧರಾಗಿ ಎಂದು ಕಾರ್ಯಕರ್ತರನ್ನು ಹುರಿದುಂಬಿಸುವುದಾಗಿತ್ತಾದ್ದರಿಂದ ಜನಕ್ಕೆ ಬೇಕಾದುದು ಅವರಿಗೆ ಬೇಕಾಗಲಿಲ್ಲ.

ಕರ್ನಾಟಕದಲ್ಲಿ ಸತತ ಎಂಬಂತೆ ರೈತರು ಆತ್ಮಹತ್ಯೆ ಮಾಡಿಕೊಂಡ ಯಾವ ಸಂದರ್ಭದಲ್ಲಿಯೂ ರಾಹುಲ್ ಭೇಟಿ ನೀಡಲಿಲ್ಲ. ಈಗ ಅವರಿಗೆ ಕರ್ನಾಟಕ ನೆನಪಾಗುತ್ತಿರುವುದಕ್ಕೆ ಕಾರಣ ಚುನಾವಣೆಯಲ್ಲದೆ ಮತ್ಯಾವುದೂ ಅಲ್ಲ. ಕಳಸಾ ಬಂಡೂರಿ ಯೋಜನೆಗೆ ಮಹದಾಯಿ ನದಿಯಿಂದ 7.6 ಟಿಎಂಸಿ ನೀರನ್ನು ಹರಿಸುವುದಕ್ಕೆ ಕಾಂಗ್ರೆಸ್ ಪಕ್ಷ ಮೊದಲ ವಿರೋಧಿ. ಗೋವಾದಲ್ಲಿ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಈ ವಿಚಾರದಲ್ಲಿ ಕೊಡುಕೊಳ್ಳುವ ಮನಃಸ್ಥಿತಿಯಲ್ಲಿಲ್ಲ. ಅವರನ್ನು ಮನವೊಲಿಸುವ ಕೆಲಸವನ್ನು ರಾಹುಲ್ ಮಾಡಲು ಸಾಧ್ಯ. ಇದನ್ನು ಅವರು ಮಾಡಿದ್ದರೆ ಬಿಜೆಪಿಗೆ ಒಡ್ಡಿದ ಸವಾಲೂ ಅದಾಗುತ್ತಿತ್ತು. ಚುನಾವಣೆ ದೃಷ್ಟಿಯಿಂದಲೂ ಅನುಕೂಲವಾಗುವ ಸಂಭಾವ್ಯವಿತ್ತು. ಆದರೆ ಅವರಿಗೆ ಅಂಥ ವಿಚಾರಗಳಲ್ಲಿ ಆಸಕ್ತಿ ಇದ್ದ ಒಂದು ನಿದರ್ಶನವೂ ಕಂಡಿಲ್ಲ. ಈ ಬಾರಿಯ ಅವರ ರಾಯಚೂರು ಯಾತ್ರೆ, ಮತ್ತೊಂದು ಭಾಷಣ ಭೇಟಿ ಎನ್ನುವುದರ ಆಚೆಗೆ ಇನ್ನೇನನ್ನೂ ಜನರಿಗೆ ಕೊಡಲಿಲ್ಲ.

Leave a Reply

Your email address will not be published. Required fields are marked *

Back To Top