Friday, 20th July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

ಬಿಜೆಪಿಯನ್ನು ಬೆಳೆಸುತ್ತಿರುವ ವಿಚಾರವಾದಿಗಳು

Tuesday, 12.09.2017, 3:02 AM       No Comments

ಅಂತರ್ಜಾಲದ ಕಾರಣದಿಂದಾಗಿ ಜ್ಞಾನರಾಶಿಯೇ ನಮ್ಮೆದುರು ಇದೆ. ಹೀಗಾಗಿ ಯಾರು ಬೇಕಾದರೂ ಜ್ಞಾನ ಸಂಪಾದಿಸಬಹುದು. ಆದ್ದರಿಂದ ವಿಚಾರವಾದಿಗಳೆಂಬ ಒಂದು ಸ್ವಘೊಷಿತ ಜಾತಿ ಬೇಕಾಗಿಲ್ಲ. ಈಗ ಎಲ್ಲರೂ ವಿಚಾರವಾದಿಗಳೇ.

| ಎನ್​.ಭವಾನಿಶಂಕರ್

 

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಅನಂತರ ವಿಚಾರವಾದ, ಪ್ರಗತಿಪರತೆ, ಬಲಪಂಥೀಯತೆ ಬಗ್ಗೆ ಬಹಳಷ್ಟು ಚರ್ಚೆಗಳು ನಡೆಯುತ್ತಿವೆ. ನಮ್ಮ ಸಮಾಜದ ಪರಿಸ್ಥಿತಿ ಹೇಗಿದೆ ಎಂದರೆ ಸುತ್ತಲೂ ಮಬ್ಬು ಕವಿದ ಹೊಗೆ. ಯಾರಿಗೆ ಯಾರೂ ಸರಿಯಾಗಿ ಕಾಣಿಸುತ್ತಿಲ್ಲ. ಕಂಡರೂ ಚಿತ್ರ, ವಿಚಿತ್ರ, ವಿಕೃತ ಚಿತ್ರಗಳು. ಪರಸ್ಪರ ಅನುಮಾನ ಮತ್ತು ಸಂಶಯ.

1985ರ ಹೊತ್ತಿಗೆ ನಾನು ಎಡಪಂಥೀಯ. ವಿಚಾರವಾದಿ ಎಂದರೆ ಎಲ್ಲದರ ಅಷ್ಟಿಷ್ಟು ಓದಿಕೊಂಡವನು. ಎಲ್ಲದರ ಬಗ್ಗೆ ತಿಳಿವಳಿಕೆ ಹೇಳುವವನು, ಮಾತನಾಡುವವನು. ನಾನಾ ಪುಸ್ತಕ ಅಂಗಡಿಗಳಿಗೆ ಹೋಗಿ ಪುಸ್ತಕಗಳನ್ನು ಹುಡುಕಿ ಖರೀದಿಸಿ ಓದುವುದು; ಕನ್ನಡದಲ್ಲಿ ವಿಷಯ ಸಿಗದಿದ್ದರೆ ಇಂಗ್ಲಿಷ್ ಪುಸ್ತಕ ಓದುವುದು. ಇದಕ್ಕೆ ಬೇಕಿದ್ದ ತಾಕತ್ತು ಇಂಗ್ಲಿಷ್ ತಿಳುವಳಿಕೆ; ಆ ಬಡತನದಲ್ಲೂ ಪುಸ್ತಕ ಖರೀದಿಗೆ ಹಣ- ಇವು ಮೂರು ಆ ಕಾಲಕ್ಕೆ ವಿಚಾರವಾದಿಯಾಗಬೇಕೆಂದಿದ್ದ ಸಾಮಾನ್ಯನಿಗೆ ಇದ್ದ ಕಷ್ಟದ ವಿಚಾರಗಳು. ಪುಸ್ತಕಗಳ ಮೂಲಕ ಸಂಗ್ರಹಿಸಿದ ವಿಷಯಗಳಿಗೆ ಕಮ್ಯೂನಿಸ್ಟ್ ವಿಚಾರವನ್ನು ಸೇರಿಸುವುದು. ಬಡತನ ಮತ್ತು ಅವಿದ್ಯಾವಂತಿಕೆಯ ಆ ಕಾಲದಲ್ಲಿ ಈ ಅವಕಾಶ ಇದ್ದಿದ್ದು ಬೆರಳೆಣಿಕೆಯ ಜನರಿಗೆ.

ಇವತ್ತು ಬೆರಳಿನಿಂದ ಬಟನ್ ಒತ್ತಿದ ತಕ್ಷಣ ಯಾವುದೇ ವಿಷಯ, ವೀಡಿಯೋ, ಆಡಿಯೋ, ಇ- ಪುಸ್ತಕ ಕಂಪ್ಯೂಟರ್ ಪರದೆಗೆ ಬರುತ್ತದೆ. ನೂರಾರು ಟಿವಿ ವಾಹಿನಿಗಳು, ಪತ್ರಿಕೆಗಳಿವೆ. ಆದ್ದರಿಂದ ಮನಸ್ಸಿದ್ದರೆ ಓದಿ, ನೋಡಿ, ಕೇಳಿ ಜ್ಞಾನಿಗಳಾಗುವುದು ಸುಲಭ. ಪರಿಸ್ಥಿತಿ ಹೀಗಿರುವಾಗ ವಿಚಾರವಾದಿಗಳು, ಪ್ರಗತಿಪರರು ಎಂಬ ಹಣೆಪಟ್ಟಿ ಹಾಕಿಕೊಂಡ ಕೆಲವರು ಮಾತ್ರ ಇಡೀ ಸಮಾಜಕ್ಕೆ ಪಾಠ ಹೇಳುವ ಶಿಕ್ಷಕ ಸರ್ವಾಧಿಕಾರಿಗಳಾಗಿ ಇರಬೇಕಾದ ಅಗತ್ಯ ಇದೆಯೆ? ಜ್ಞಾನವೆಂಬ ಅಸ್ತ್ರ ಎಲ್ಲರ ಕೈಗೂ ಬಂದಿದೆ. ಹೀಗಾಗಿ ವಿಚಾರವಾದಿಗಳೆಂಬ ಒಂದು ಸ್ವಘೊಷಿತ ಜಾತಿ ಬೇಕಾಗಿಲ್ಲ. ಎಲ್ಲರೂ ವಿಚಾರವಾದಿಗಳೆ.

ಆ ಕಾಲದಲ್ಲಿ ವಿಚಾರವಾದಿಗಳ ಅಗತ್ಯ ಸಮಾಜಕ್ಕೆ ಇತ್ತು. ಜನರಿಗೆ ವೈವಿಧ್ಯಮಯ ಜ್ಞಾನ ಸಿಗುತ್ತಿರಲಿಲ್ಲ. ಅವು ಇದ್ದಿದ್ದು ಕೇವಲ ಪುಸ್ತಕಗಳಲ್ಲಿ. ಇಂಗ್ಲಿಷ್ ತಿಳುವಳಿಕೆ ಬೇಕಿತ್ತು. ಜೊತೆಗೆ ಬಡತನ ಬೇರೆ. ಈ ವಿಚಾರವಾದಿಗಳು ಬಹಳ ಓದಿಕೊಂಡು, ಎಲ್ಲರೂ ಹೋಗಲು ಸಾಧ್ಯವಿಲ್ಲದ ಫಾರಿನ್ನಿಗೆ ಹೋಗಿ, ಪುಸ್ತಕ, ಪತ್ರಿಕೆಯಲ್ಲಿ ಬರೆದು ಜ್ಞಾನ ಕೊಡುತ್ತಿದ್ದರು. ಆ ಕಾಲದಲ್ಲಿ ಇಂಥವರು ಇದ್ದಿದ್ದು ಲಕ್ಷಕ್ಕೆ ಎರಡೋ ಮೂರೋ ಜನ. ಇವತ್ತು ಲಕ್ಷಕ್ಕೆ ಲಕ್ಷ ಜನ ಜ್ಞಾನಿಗಳೂ, ವಿಚಾರವಂತರೂ ಆಗಬಲ್ಲರು. ನಾನು 1985 ರ ಹೊತ್ತಿಗೆ ಪತ್ರಿಕೆಗಳಿಗೆ 60 ಕ್ಕೂ ಹೆಚ್ಚು ಲೇಖನಗಳನ್ನು ಮತ್ತು ಬಂಡಾಯ ಮತ್ತು ಕ್ರಾಂತಿಯ ವಿಷಯವಿರುವ ನಾಟಕ, ಕವನಸಂಕಲನಗಳ 7 ಪುಸ್ತಕ ಬರೆದೆ. ಇದು ಪುಸ್ತಕಗಳನ್ನು ಮತ್ತು ಕಮ್ಯೂನಿಸಮನ್ನು ಓದಿದ್ದರ ಫಲ. ಈ ಪುಸ್ತಕಗಳ ಮೂಲಕ ಕೆಳಜಾತಿಯವರನ್ನು ಶೋಷಿಸುವ ಮೇಲ್ಜಾತಿಯವರನ್ನು ಬೈದೆ, ದ್ವೇಷಿಸಿದೆ. ಆದರೆ ಈ ದ್ವೇಷ ಮತ್ತು ಸಿಟ್ಟು ಸಮಾಜ ಸುಧಾರಣೆಯ ಮಾರ್ಗವಲ್ಲವೆಂದು ಬರೆಯುವುದನ್ನೇ ನಿಲ್ಲಿಸಿದೆ.

ಅನಂತರ 2009 ರಿಂದ ಇದುವರೆಗೆ ದ್ವೇಷದ ದಾರಿ ಇಲ್ಲದ, ಸಮಾಜಕ್ಕೆ ಶಿಕ್ಷಣ ನೀಡುವ 25 ಪುಸ್ತಕಗಳನ್ನು ಬರೆದಿದ್ದೇನೆ. ಕನ್ನಡ ಪ್ರಾಧ್ಯಾಪಕನಾದ ನಾನು ಕಂಪ್ಯೂಟರ್ ನೆಟ್ ರ್ವಂಗ್, ಇಂಗ್ಲಿಷ್ ಕಲಿಕೆ, ಕಾನೂನು, ಕಾರ್ ತಂತ್ರಜ್ಞಾನ, ಮಕ್ಕಳ ವಿಜ್ಞಾನ ಕವನಗಳು, ಕಥಾ ರಚನೆ, ನಟನೆ ಮತ್ತು ಸಿನಿಮಾ ನಿರ್ಮಾಣ ಇತ್ಯಾದಿಗಳ ಬಗ್ಗೆ ಕಂಪ್ಯೂಟರಿನಲ್ಲೇ ಟೈಪಿಸಿ ಸರಾಸರಿ 200 ಪುಟಗಳ 25 ಪುಸ್ತಕ ಬರೆದೆ. ಇವತ್ತು ಇಂಟರ್​ನೆಟ್​ನಲ್ಲಿ ಯಾವ ವಿಷಯ ಬೇಕಾದರೂ ಸಿಗುತ್ತದೆ. ಜ್ಞಾನವು ವಿಚಾರವಾದಿಗಳ ಕಪಿಮುಷ್ಟಿಯಿಂದ ಯಾವಾಗಲೋ ಹಾರಿ ಹೋಗಿದೆ.

ನನ್ನ ಬಾಲ್ಯದಲ್ಲಿ ನಮ್ಮೂರಲ್ಲಿ ಕಾಂಗ್ರೆಸ್ಸೂ ಇತ್ತು, ಬಿಜೆಪಿಯೂ (ಜನಸಂಘ) ಇತ್ತು. ಕಾಂಗ್ರೆಸ್​ನವರು ಸಾರಾಯಿ ಕೊಟ್ಟು, ಸೀರೆ ಕೊಟ್ಟು, ಗೂಂಡಾಗಿರಿ ಮಾಡಿ, ಕಾರಿನಲ್ಲಿ ಜನರನ್ನು ತುಂಬಿಕೊಂಡು ಹೋಗಿ ಓಟು ಹಾಕಿಸುವುದನ್ನು ನೋಡಿದ್ದೇನೆ. ನಮ್ಮೂರಿನಲ್ಲಿ ಬಿಜೆಪಿಯವರು (ಆಗ ಜನಸಂಘ) ಎಂದರೆ ಶ್ರೀಮಂತರಾಗಿದ್ದ ಕೇವಲ 10-20 ಜನ ಮೇಲ್ಜಾತಿಯವರು. ಇವರು ಕೆಳಜಾತಿಯವರನ್ನು ತುಚ್ಛಭಾವದಿಂದ ಕಾಣುತ್ತಿದ್ದರು. ಎಷ್ಟೆಂದರೆ ಓಟು ಕೇಳಲೂ ಕೆಳಜಾತಿಯವರ ಬಳಿಗೆ ಬರುತ್ತಿರಲಿಲ್ಲ. ಅವರೇ ಬಂದು ಓಟು ಹಾಕಲಿ ಎಂಬ ಭಾವನೆ. ಈ ಪರಿಸ್ಥಿತಿ ಇಡೀ ದೇಶದ್ದೂ ಹೌದು. ಆಗೆಲ್ಲ ಬಿಜೆಪಿಗೆ ಇಡೀ ದೇಶದಲ್ಲಿ ಬರ್ತಾ ಇದ್ದ (1951 ರಲ್ಲಿ 3, 1971 ರಲ್ಲಿ 22 ಎಂಪಿ ಸೀಟು) ಸೀಟು ಬೆರಳೆಣಿಕೆಯಷ್ಟು.

ವಿಚಾರವಾದಿಗಳು ಹಿಂದೂ ಧರ್ಮವನ್ನು ವಾಚಾಮಗೋಚರ ಬೈಯ್ಯುತ್ತಾರೆ. ಹಿಂದೂ ಧರ್ಮವೆಂದರೆ ಒಂದು ಜೀವನ ವಿಧಾನ. ಬೇರೆ ಧರ್ಮಗಳಲ್ಲಿರುವಂತೆ ಅದರಲ್ಲಿ ಕೆಟ್ಟದ್ದೂ ಇದೆ, ಒಳ್ಳೆಯದ್ದೂ ಇದೆ. ವಿಚಾರವಾದಿಗಳೆ ನೀವು ಬೈಯ್ಯಬೇಕಾದ್ದು ಹಿಂದೂ ಧರ್ಮವನ್ನಲ್ಲ. ಅದರಲ್ಲಿನ ಮೇಲ್ಜಾತಿಯವರ ದಬ್ಬಾಳಿಕೆಯನ್ನು. ಜಾತಿ ಜಾತಿಗಳ ನಡುವಿನ ಅಸ್ಪಶ್ಯತೆಯನ್ನು. ಇದನ್ನು ನೀವು ಆ ಕಾಲದಲ್ಲಿ ಬಹಳ ಚೆನ್ನಾಗಿ ಮಾಡಿದ್ದೀರಿ. ಅದರ ಫಲವೋ ಏನೋ ಬಿಜೆಪಿಯ ಮೇಲ್ಜಾತಿಯವರು ಕೆಳಜಾತಿಯ ಜನರನ್ನು ಅಪ್ಪಿಕೊಳ್ಳಲು ಆರಂಭಿಸಿದರು. ಇದು ವೋಟ್ ಪೊಲಿಟಿಕ್ಸ್ ಅಲ್ಲ ಎಂದು ನಾನು ಹೇಳುವುದಿಲ್ಲ. ಕಾರಣ ಏನೇ ಇರಲಿ, ಹಣ, ವೋಟು ಹಾಗೂ ರಾಜಕೀಯ ಶಕ್ತಿಗೋಸ್ಕರ ಇನ್ನೊಬ್ಬ ಮನುಷ್ಯನನ್ನು ಮುಟ್ಟಲು ಆರಂಭಿಸಿದರಲ್ಲ, ಇಲ್ಲಿಂದ ಆರಂಭವಾಯಿತು ಬಿಜೆಪಿಯ ಬೆಳವಣಿಗೆ. ಈಗ ಬಿಜೆಪಿಯಲ್ಲಿ ಕೆಳಜಾತಿಯ ಮುಖಂಡರು ಬೇಕಾದಷ್ಟಿದ್ದಾರೆ. ಸ್ವತಃ ನರೇಂದ್ರ ಮೋದಿ ಹಿಂದುಳಿದ ಗಾಣಿಗ ಜಾತಿಯವರು. ಮುಸ್ಲಿಂ ಸಮುದಾಯದ ಅಬ್ದುಲ್ ಕಲಾಂ, ಈಗ ದಲಿತವರ್ಗದ ರಾಮನಾಥ ಕೋವಿಂದ್ ಬಿಜೆಪಿ ಆಡಳಿತದಲ್ಲಿ ರಾಷ್ಟ್ರಪತಿಗಳಾದವರು. ವಿಚಾರವಾದಿಗಳೆ ಈಗ ನೀವು ಏನನ್ನು-ಯಾರನ್ನು ಬಯ್ಯುತ್ತೀರಿ? ಅಂದಿನ ವಿಚಾರವಾದಿಗಳಲ್ಲಿ ವಿಪರೀತ ಆಕ್ರೋಶ, ಉಗ್ರಗಾಮಿತ್ವ ಇರಲಿಲ್ಲ. ಪಿ. ಲಂಕೇಶ್ ಅವರ ರಾಜಕೀಯ ಬರವಣಿಗೆಯಲ್ಲೂ ಕಾವ್ಯಮಯತೆ ಇರುತ್ತಿತ್ತು. ಎಡವಾದಿಯಾಗಿದ್ದ ಅವರು ತಮ್ಮ ಬರವಣಿಗೆಯಲ್ಲಿ ಬಲವಾದದ ಒಳ್ಳೆಯ ವಿಚಾರದ ಮಿಂಚುಗಳನ್ನು ಥಟ್ಟನೆ ಹೊಳೆಸಿಬಿಡುತ್ತಿದ್ದರು. ಅವರು ಯಾರನ್ನು ಎಷ್ಟೇ ಬಯ್ಯಲಿ ಅವರಲ್ಲಿ ಎಲ್ಲಾ ಜಾತಿ ವರ್ಗಗಳ ಬಗ್ಗೆ ಮಾನವೀಯತೆ ಇತ್ತು. ಗುಂಡೂರಾಯರನ್ನು ಬೈಯ್ಯುತ್ತಿದ್ದ ಅವರು ಒಂದು ಸಂದರ್ಭದಲ್ಲಿ ಓದುಗನ ಕಣ್ಣು ಒದ್ದೆಯಾಗುವಂತೆ ಬರೆದರು. ಹಾಗೇ ಸಂಜಯ್ ಗಾಂಧಿ ಬಗ್ಗೆ ಕೂಡ. ಇದೇ ರೀತಿಯಲ್ಲಿ ಅನಂತಮೂರ್ತಿ. ಆಗಿನ ಕಾಲದ ಇವರೆಲ್ಲ ದ್ವೇಷ, ಸೇಡು ತುಂಬಿಕೊಂಡ ವಿಪರೀತ ವಿಚಾರವಾದಿಗಳಾಗಿರಲಿಲ್ಲ, ಮಾತಿನ ವಿಪರೀತ ಉಗ್ರಗಾಮಿಗಳೂ ಆಗಿರಲಿಲ್ಲ. ಇವತ್ತು ವಿಚಾರವಾದ ಎಂದರೆ ಮುಸ್ಲಿಂ, ಕ್ರಿಶ್ಚಿಯನ್ ಧರ್ಮಗಳ ದೋಷಗಳ ಬಗ್ಗೆ ತಪ್ಪಿಯೂ ಒಂದೇ ಒಂದು ಮಾತು ಹೇಳದಿರುವುದು. ವಿಚಾರವಾದಿಗಳೆ, ಆ ಧರ್ಮಗಳ-ಸಮಾಜಗಳ ತಪ್ಪುಗಳನ್ನು ಹೇಳಿದರೆ ಅವರೂ ಉದ್ಧಾರವಾಗುವುದಿಲ್ಲವೆ? ಅವರ ಉದ್ಧಾರ ನಿಮಗೆ ಬೇಡವೆ? ನೀವು ಮತಾಂತರವನ್ನು ಬೆಂಬಲಿಸುವುದು, ಹಿಂದೂ ಧರ್ಮವೇ ನಾಶವಾಗಲಿ ಎಂದೆಲ್ಲ ವಿಪರೀತ ಕೆಟ್ಟದ್ದಾಗಿ ಮಾತನಾಡುವುದು…. ಇವು ಸರಿಯೆ? ಹಿಂದೂ ಧರ್ಮದಲ್ಲೂ ಅನಿಷ್ಠಗಳಿವೆ. ಅದನ್ನು ತಿದ್ದೋಣ. ಅದು ಬಿಟ್ಟು ಹೀಗೆ ಮಾತಾಡುವ ಮನೋಧರ್ಮ ಎಂಥದ್ದು?

ಗೌರಿಯವರನ್ನೇ ಇರಲಿ, ಯಾರನ್ನೇ ಇರಲಿ ಕೊಲ್ಲುವುದು ಖಂಡನೀಯ. ಅದು ಹೇಯ ಕೃತ್ಯ. ಗೌರಿಯವರು 4.8.12 ರ ಮಂಗಳೂರು ಭಾಷಣದಲ್ಲಿ ‘ಯಾವುದ್ರೀ ನಿಮ್ಮ ಹಿಂದೂ ಧರ್ಮ…. ಅಪ್ಪಅಮ್ಮ ಇಲ್ಲದ ಧರ್ಮ ಇದು. ಇದಕ್ಕೊಂದು ಪವಿತ್ರ ಗ್ರಂಥ ಇಲ್ಲ. ಹಿಂದೂ ಧರ್ಮ ಅನ್ನೋದೇ ಇಲ್ಲ. ಬೇಕಾಗಿಲ್ಲ ಈ ಧರ್ಮ. ಹಿಂದೂಗೆ ಇರೋದು ಒಂದು ಚಡ್ಡಿ ಸಂಸ್ಕೃತಿ ಆರ್​ಎಸ್​ಎಸ್….’ ಎಂದಿದ್ದರು. ಈ ರೀತಿಯ ಉಗ್ರ ಮಾತುಗಳು ಬೇಕೆ? ಇದರಿಂದ ಹಿಂದೂಗಳ ಒಗ್ಗಟ್ಟು ಹೆಚ್ಚುವುದಿಲ್ಲವೆ? ಇದರ ಬದಲು ಹಿಂದೂ ಧರ್ಮದಲ್ಲಿ ಸುಧಾರಣೆ ಆಗಬೇಕು ಎನ್ನುವ ರೀತಿಯಲ್ಲಿ ಮಾತನಾಡಿದ್ದರೆ ಎಷ್ಟು ಚೆಂದ ಇತ್ತು. ಅವರ ಪತ್ರಿಕೆಯ ಒಂದು ಸಂಚಿಕೆಯ ಮುಖಪುಟದಲ್ಲಿ ‘ಮೋದಿ ಹುಚ್ಚಾ ವೆಂಕಟ್’ ಎಂದು ಇತ್ತು. ಈ ರೀತಿಯ ಮಾತುಗಳು ಸಮಾಜಕ್ಕೆ ಪೂರಕವೆ?

ವಿಚಾರವಾದಿಗಳೇ ನೀವು ಮುಸ್ಲಿಮರನ್ನು ಹಿಂದೂಗಳ ಮೇಲೆ ಎತ್ತಿ ಕಟ್ಟುವ ಕೆಲಸ ಮಾಡುತ್ತೀರಿ. ಅದೇ ಅವರು ಹಿಂದೂಗಳಿಗೆ ಏನನ್ನಾದರೂ ಮಾಡಿದರೆ ನೀವೇಕೆ ಪ್ರತಿಭಟಿಸುವುದಿಲ್ಲ, ಮಾತನಾಡುವುದಿಲ್ಲ? ಇದರಿಂದ ನಿಮ್ಮ ಬೆಂಬಲ ತಮಗಿದೆ ಎಂದು ಅವರು ತಿಳಿಯುವಂತಾಗುವುದಿಲ್ಲವೆ? ಅವರ ಮೇಲೆ ಹಿಂದೂಗಳ ಸಂಶಯ ಮತ್ತು ದ್ವೇಷ ಹೆಚ್ಚುತ್ತದೆ. ಇದು ಅವರಿಗೆ ಒಳ್ಳೆಯದೆ? ಹಿಂದೂಗಳಿಗೆ ಒಳ್ಳೆಯದೆ?

‘ಹಿಂದೂ ಧರ್ಮಕ್ಕೆ ಪವಿತ್ರ ಗ್ರಂಥ ಇಲ್ಲ, ಅದು ಧರ್ಮವೇ ಅಲ್ಲ’ ಅಂತ ಗೌರಿ ಹೇಳುತ್ತಿದ್ದರು. ನನ್ನ ಪ್ರಕಾರ ಹಿಂದೂ ಧರ್ಮ ಬಹಳ ಫ್ಲೆಕ್ಸಿಬಲ್. ಕ್ರಿಶ್ಚಿಯನ್, ಮುಸ್ಲಿಂ ಜನರು ಚರ್ಚ್, ಮಸೀದಿಗೆ ಹೋಗಲೇಬೇಕು. ದೇವರು, ಧರ್ಮಪ್ರಮುಖರ ವಿರುದ್ಧ ಮಾತಾಡುವಂತಿಲ್ಲ. ಹಿಂದೂ ಧರ್ಮದಲ್ಲಿ ನೀವು ನಿಮ್ಮ ಇಷ್ಟದ ದೇವಸ್ಥಾನಕ್ಕೆ ಹೋಗಬಹುದು, ಹೋಗದಿರಲೂಬಹುದು, ನಿಮ್ಮ ಇಷ್ಟದ ರೀತಿಯಲ್ಲಿ ಪ್ರಾರ್ಥನೆ ಮಾಡಬಹುದು. ಮಾಡದಿರಲೂಬಹುದು. ನಾಸ್ತಿಕನಾಗಿಯೂ ಇರಬಹುದು. ದೇವರನ್ನು ಯಾವುದೇ ರೀತಿಯಲ್ಲಿ ಪೂಜಿಸಬಹುದು. ಇಲ್ಲಿ ಒಂದು ಧರ್ಮಗ್ರಂಥವಿಲ್ಲ. ಬೇಕಾದಷ್ಟು ಇವೆ. ಭಿನ್ನ ಭಿನ್ನ ವಿಚಾರಧಾರೆಗಳಿವೆ. ಇಲ್ಲಿ ದೇವರನ್ನು ವಿಮಶಿಸಬಹುದು, ತಮಾಷೆ ಕೂಡ ಮಾಡಬಹುದು. ಹಿಂದೂ ಧರ್ಮ ಒಂದು ಕೇಂದ್ರಬಿಂದುವಿನ ಧರ್ಮ ಅಲ್ಲ. ಇಲ್ಲಿ ಸಾವಿರಾರು ಕೇಂದ್ರಗಳಿವೆ. ಸತ್ಯವೇ ದೇವರು, ಕರ್ಮವೇ ದೇವರು, ಮರವೇ ದೇವರು, ಆಕಾರವಿಲ್ಲದ ಒಂದು ಕಲ್ಲಿನ ತುಂಡು ಕೂಡ ಇಲ್ಲಿ ದೇವರು… ದೇವರನ್ನು ತಲುಪಲು ಇಲ್ಲಿ ಸಾವಿರ ಸಾವಿರ ದಾರಿಗಳಿವೆ. ಭಗವದ್ಗೀತೆಯಲ್ಲಿ ಉನ್ನತ, ಶ್ರೇಷ್ಠ ವಿಚಾರಗಳಿವೆ. ಅದು ಅಲ್ಲದ್ದೂ ಇದೆ. ಇಲ್ಲಿ ಡೆಮಾಕ್ರಸಿ ಇದೆ. ಆರಿಸಿಕೊಳ್ಳಲು ನೀವು ಸ್ವತಂತ್ರರು. ಇಷ್ಟೆಲ್ಲದರ ನಡುವೆ ಡೋಂಗಿ ಜ್ಯೋತಿಷಿಗಳು, ಬಾಬಾಗಳಿದ್ದಾರೆ. ಮನುಸ್ಮೃತಿಯೂ ಇದೆ. ಗೋಮಾಂಸಕ್ಕೆ ಸಂಬಂಧಿಸಿದಂತೆ ನಿಮ್ಮ ಅನಾಹುತ ನೋಡಿ. ವಿಚಾರವಾದಿಗಳೆ ದನದ ಮಾಂಸವನ್ನು ನಿಮ್ಮ ಮನೆಯಲ್ಲಿ ತಿನ್ನಿ. ಅದನ್ನು ಸಾರ್ವಜನಿಕವಾಗಿ ಕೊಂದು, ತಿನ್ನುವುದು ಅದನ್ನು ಇಷ್ಟಪಡದಿರುವವರ ಮನಸ್ಸಿನ ಮೇಲೆ ಎಂತಹ ಗಾಯವನ್ನು ಮಾಡುತ್ತದೆ ತಿಳಿದಿದ್ದೀರಾ? ಇದರ ಪರಿಣಾಮ ನಿಮ್ಮ ಮೇಲೆ ಅಭಿಮಾನ ಇರುವ ಹಿಂದೂಗಳು ನಿಮ್ಮನ್ನು ಧಿಕ್ಕರಿಸಿ ಗೋರಕ್ಷಣೆಯ ಮಾತನಾಡುವ ಬಿಜೆಪಿ, ಆರ್​ಎಸ್​ಎಸ್ ಪರವಾಗುವುದಿಲ್ಲವೆ? ನಿಮ್ಮನ್ನು ಬೆಂಬಲಿಸುವ, ನೀವು ಬೆಂಬಲಿಸುವ ಕಾಂಗ್ರೆಸ್​ನಿಂದ ಜನರು ದೂರವಾಗುವುದಿಲ್ಲವೆ? ಹಿಂದೂ ಧರ್ಮವನ್ನು ಬಾಯಿಗೆ ಬಂದಂತೆ ಬೈದರೆ ಅದರ ಲಾಭ ಬಿಜೆಪಿಗೋ ಕಾಂಗ್ರೆಸ್​ಗೋ?

ಹಿಂದೂ ಧರ್ಮದಲ್ಲಿ ಜಾತಿ ಶೋಷಣೆ ಇದ್ದಿದ್ದು ಹೌದು. ಜಾಗತೀಕರಣ, ನಗರೀಕರಣ ಮತ್ತು ಕೆಳಜಾತಿಯವರ ಬಳಿ ವಿದ್ಯೆ, ಶ್ರೀಮಂತಿಕೆ ಬಂದಿರುವುದರಿಂದ ಜಾತಿ ಪದ್ಧತಿ ಅಳಿಯುತ್ತಿದೆ. ಅವರು ಮೇಲ್ಜಾತಿಯವರನ್ನು ಡೋಂಟ್ ಕೇರ್ ಮಾಡಬಲ್ಲರು. ವಿಚಾರವಾದಿಗಳು ಹಿಂದೂ ಧರ್ಮವನ್ನು ದ್ವೇಷಿಸಿದರೆ ಹಿಂದು ಮತ್ತಷ್ಟು ಹಿಂದುವಾಗುತ್ತಾನೆ. ಇನ್ನೂ ದ್ವೇಷಿಸಿದರೆ ಅವನು ಉಗ್ರ ಹಿಂದೂವಾದಿಯೂ ಆಗಬಹುದು. ವಿಚಾರವಾದಿಗಳೆ, ಉಗ್ರವಾದಿಗಳೆ ಹಿಂದೂ ಓಟ್ ಬ್ಯಾಂಕನ್ನು ನೀವು ಬೆಳೆಸುತ್ತಿದ್ದೀರಿ ಅಷ್ಟೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್… ಎಲ್ಲರೂ ಪರಸ್ಪರರನ್ನು ಗೌರವಿಸಿ ಬದುಕುವುದೇ ಆದರ್ಶ.

60 ವರ್ಷಗಳಿಂದ ಈ ದೇಶವನ್ನು ಲೂಟಿ ಹೊಡೆದದ್ದು ಕಾಂಗ್ರೆಸ್. ಲಕ್ಷ ಲಕ್ಷ ಕೋಟಿಗಳ ಹಗರಣಗಳು. ಬಿಜೆಪಿಯಲ್ಲಿ ಭ್ರಷ್ಟರಿಲ್ಲವೆ? ಇದ್ದಾರೆ. ಪಕ್ಷ ಯಾವುದೇ ಇರಲಿ ಭ್ರಷ್ಟರನ್ನು ಮನೆಗೆ ಕಳಿಸಬೇಕು.

(ಲೇಖಕರು ನಿವೃತ್ತ ಕನ್ನಡ ಪ್ರಾಧ್ಯಾಪಕರು)

Leave a Reply

Your email address will not be published. Required fields are marked *

Back To Top