Sunday, 24th September 2017  

Vijayavani

1. 3ನೇ ಮ್ಯಾಚ್‌ನಲ್ಲೂ ಆಸೀಸ್‌ ಉಡೀಸ್‌- ರೋಹಿತ್,ರಹಾನೆ,ಪಾಂಡ್ಯ ಬೊಂಬಾಟ್‌ ಆಟ- ಭಾರತಕ್ಕೆ ಸರಣಿ ವಶ 2. ದೆಹಲಿಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ- ಜಾವ್ಡೇಕರ್ ನೇತೃತ್ವದಲ್ಲಿ ಮೀಟಿಂಗ್‌- ತಡವಾಗಿ ದೆಹಲಿ ವಿಮಾನ ಏರಿದ ಈಶ್ವರಪ್ಪ 3. ಸಿದ್ದಾರ್ಥ್​ ಮನೆ ಮೇಲೆ ಐಟಿ ದಾಳಿ ಪ್ರಕರಣ- 650 ಕೋಟಿ ಮೌಲ್ಯದ ಅಕ್ರಮ ಆದಾಯ ಪತ್ತೆ- ದಿಗ್ವಿಜಯ ನ್ಯೂಸ್​ಗೆ ಐಟಿ‌ ಮೂಲಗಳ ಮಾಹಿತಿ 4. ವಿಶ್ವಸಂಸ್ಥೆಯಲ್ಲಿ ಮತ್ತೆ ಬಾಲ ಬಿಚ್ಚಿದ ಪಾಕಿಸ್ತಾನ- ಮಡಿಲಲ್ಲಿ ಕೆಂಡ ಇಟ್ಕೊಂಡು ಭಾರತದತ್ತ ವಾಗ್ಬಾಣ- ಇಂಡಿಯಾ ಉಗ್ರವಾದದ ತಾಯಿ ಅಂತಾ ಪಾಕ್ ಉದ್ಧಟತನ 5. ಕೋಕ್ ಸ್ಟುಡಿಯೋದಿಂದ ಸಂಗೀತ ಸಂಜೆ- ಪೆಪೋನ್ ಗಾಯನಕ್ಕೆ ಮನಸೋತ ಯುವಜನ- ಹುಚ್ಚಿದ್ದು ಕುಣಿಸಿದ ಯುವದಸರಾ
Breaking News :

ಬಾಂಧವ್ಯವರ್ಧನೆ ಕಸರತ್ತು

Thursday, 07.09.2017, 3:01 AM       No Comments

ನೆರೆರಾಷ್ಟ್ರವೊಂದು ಭೌಗೋಳಿಕವಾಗಿ ಅದೆಷ್ಟೇ ಚಿಕ್ಕದಿರಲಿ, ರಾಜಕೀಯವಾಗಿ ಅದಕ್ಕಿರುವ ಪ್ರಾಮುಖ್ಯ ಅದೆಷ್ಟೇ ನಗಣ್ಯವಾಗಿರಲಿ, ಅದರೊಂದಿಗೆ ಸೌಹಾರ್ದಯುತ ಸಂಬಂಧ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಭಾರತದ ಪಾಲಿಗೆ ಸೃಷ್ಟಿಯಾಗಿದೆ ಎನ್ನಲಡ್ಡಿಯಿಲ್ಲ. ಭಾರತದ ಪಾಲಿನ ಮಗ್ಗುಲಮುಳ್ಳುಗಳಾಗಿರುವ ಪಾಕಿಸ್ತಾನ ಮತ್ತು ಚೀನಾ, ಏನಾದರೂ ಕಾರಣವಿಟ್ಟುಕೊಂಡು ನಮ್ಮ ಮೇಲೆರಗಲು ಹವಣಿಸುತ್ತಿರುವ ಪ್ರಸಕ್ತ ಸನ್ನಿವೇಶವೇ ಈ ಅಭಿಪ್ರಾಯಕ್ಕೆ ಪುಷ್ಟಿನೀಡುತ್ತದೆ. ಈ ಗ್ರಹಿಕೆಯಿಟ್ಟುಕೊಂಡೇ ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಇಂಥ ಹಲವು ರಾಷ್ಟ್ರಗಳಿಗೆ ಭೇಟಿಯಿತ್ತಿದ್ದು ಇಲ್ಲಿ ಉಲ್ಲೇಖನೀಯ. ಇದರ ಮುಂದುವರಿದ ಭಾಗವಾಗಿ ಅವರು ಮ್ಯಾನ್ಮಾರ್​ಗೆ ತೆರಳಿದ್ದು, ದ್ವಿಪಕ್ಷೀಯ ವಾಣಿಜ್ಯ-ವ್ಯವಹಾರಗಳು ಮಾತ್ರವಲ್ಲದೆ, ಗಡಿಭಾಗದಲ್ಲಿ ಶಾಂತಿ ಮತ್ತು ಸೌಹಾರ್ದದ ವಾತಾವರಣವನ್ನು ಹುಟ್ಟುಹಾಕುವ, ಪ್ರಾದೇಶಿಕ ಭದ್ರತೆಗೆ ಇಂಬುಕೊಡುವ ಕುರಿತಾದ ಮಾತುಕತೆಗಳೂ ಈ ಸಂದರ್ಭದಲ್ಲಿ ನಡೆಯಲಿವೆ ಎಂಬುದು ವಿಶೇಷ.

ಪ್ರಸಕ್ತ ಭೇಟಿ ಹಾಗೂ ಮಾತುಕತೆಗಳಿಗೆ ಒಂದು ಗುಲಗಂಜಿ ತೂಕ ಹೆಚ್ಚೇ ಮಹತ್ವ ಇದೆ ಎನ್ನಲಡ್ಡಿಯಿಲ್ಲ. ಅದಕ್ಕೆ ಕಾರಣವಾಗಿರುವುದು ಮ್ಯಾನ್ಮಾರ್ ಮೇಲೆ ಹೆಚ್ಚುತ್ತಿರುವ ಚೀನಾ ಪ್ರಾಬಲ್ಯ. ಮ್ಯಾನ್ಮಾರ್​ನ ರಾಖೈನ್ ಪ್ರದೇಶದಲ್ಲಿ ರೊಹಿಂಗ್ಯಾ ಜನಾಂಗೀಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ವಿಶ್ವಸಂಸ್ಥೆಯ ಮಟ್ಟದಲ್ಲಿಯೂ ಪ್ರತಿಧ್ವನಿಸಿದ್ದು, ಈ ವಿಷಯಕ್ಕೆ ಸಂಬಂಧಿಸಿ ತನಗೆ ಚೀನಾ ಒತ್ತಾಸೆಯಾಗಿ ನಿಂತಿರುವುದರಿಂದ ಸಹಜವಾಗಿಯೇ ಮ್ಯಾನ್ಮಾರ್ ಅದರೆಡೆಗೆ ವಾಲಬಹುದು ಎಂಬ ‘ರಾಜತಾಂತ್ರಿಕ ಗ್ರಹಿಕೆ‘ಯೇ ಭಾರತದ ಪ್ರಸಕ್ತ ಕಳವಳಕ್ಕೆ ಕಾರಣ. ಭಾರತದ ಮೇಲೆ ಸಾಮರಿಕವಾಗಿ, ವ್ಯಾವಹಾರಿಕವಾಗಿ ಮತ್ತು ರಾಜಕೀಯವಾಗಿ ಮುರಕೊಂಡು ಬೀಳಲು ಹೊಂಚುಹಾಕುತ್ತಿರುವ ಚೀನಾ, ಇದಕ್ಕೆ ಪೂರಕವಾಗಿ ಪರಿಣಮಿಸಬಲ್ಲ ಎಲ್ಲ ಸಂದರ್ಭಗಳನ್ನೂ ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದಕ್ಕೆ ಹಿಂಜರಿಯುವುದಿಲ್ಲ. ಆದ್ದರಿಂದ, ಭದ್ರತೆ, ಆರೋಗ್ಯ ಕಾರ್ಯಕ್ರಮ, ಭೂಕಂಪದಲ್ಲಿ ಹಾಳಾದ ಪಗೋಡಾಗಳ ಮರುನಿರ್ವಣ ಸೇರಿದಂತೆ ಮ್ಯಾನ್ಮಾರ್​ನೊಂದಿಗೆ ವಿವಿಧ ನೆಲೆಗಟ್ಟಿನ ಬಾಂಧವ್ಯವನ್ನು ಕುದುರಿಸಿಕೊಂಡು ತನ್ಮೂಲಕ ಆ ವಲಯದಲ್ಲಿ ಚೀನಾ ಪ್ರಾಬಲ್ಯವನ್ನು ತಗ್ಗಿಸುವ ಇರಾದೆ ಭಾರತದ್ದು.

ಮ್ಯಾನ್ಮಾರ್​ನಲ್ಲಿ ಸುಮಾರು 10 ಲಕ್ಷದಷ್ಟು ರೊಹಿಂಗ್ಯಾ ಮುಸ್ಲಿಂ ಜನಾಂಗೀಯರಿದ್ದು, ಅಲ್ಲಿ ತಲೆದೋರಿರುವ ದಬ್ಬಾಳಿಕೆ ಮತ್ತು ಹಿಂಸಾಚಾರದಿಂದಾಗಿ ಬೇಸತ್ತು ಸುಮಾರು 1.25 ಲಕ್ಷ ರೊಹಿಂಗ್ಯಾಗಳು ಬಾಂಗ್ಲಾದೇಶಕ್ಕೆ ವಲಸೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಆದರೆ ರೊಹಿಂಗ್ಯಾ ನಿರಾಶ್ರಿತರಿಗೆ ಇಂಥ ಯಾವುದೇ ಆಶ್ರಯ ನೀಡುವ ಕುರಿತು ಆಸಕ್ತಿ ತೋರದಿರುವ ಭಾರತ, ಅದರ ಬದಲು ಜಮ್ಮು, ಹೈದರಾಬಾದ್, ದೆಹಲಿ-ರಾಷ್ಟ್ರೀಯ ರಾಜಧಾನಿ ಪ್ರದೇಶ, ಹರಿಯಾಣ, ಉತ್ತರಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಬೀಡುಬಿಟ್ಟಿದ್ದಾರೆ ಎನ್ನಲಾಗಿರುವ ಸುಮಾರು 40,000 ರೊಹಿಂಗ್ಯಾ ನಿರಾಶ್ರಿತರನ್ನು ಗಡೀಪಾರು ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ. ಪಾಕಿಸ್ತಾನ-ಪ್ರಾಯೋಜಿತ ಭಯೋತ್ಪಾದಕ ಗುಂಪುಗಳು ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗುವುದಕ್ಕೆ ರೊಹಿಂಗ್ಯಾಗಳನ್ನು ಬಳಸಿಕೊಳ್ಳಬಹುದು ಮತ್ತು ನಿರಾಶ್ರಿತರ ಕಾರಣದಿಂದಾಗಿ ಸಾಂಸ್ಕೃತಿಕ ಪಲ್ಲಟಗಳಾಗಬಹುದು ಎಂಬ ಸಮರ್ಥನೆಯನ್ನು ಭಾರತ ನೀಡಿರುವುದು ಸಮಂಜಸವಾಗಿಯೇ ಇದೆ. ಟಿಬೆಟಿಯನ್ನರು, ಶ್ರೀಲಂಕಾದ ತಮಿಳರು, ಆಫ್ಘನ್ನರು ಸೇರಿದಂತೆ ಅನೇಕ ಜನಾಂಗೀಯ ನಿರಾಶ್ರಿತರಿಗೆ ಭಾರತ ಹಿಂದೆಲ್ಲ ಆಶ್ರಯ ನೀಡಿದ್ದಿದೆ. ಆದರೆ, ಆಗಿನ ಪರಿಸ್ಥಿತಿಯೇ ಬೇರೆ, ಇಂದಿನ ಅನಿವಾರ್ಯತೆಯೇ ಬೇರೆ. ಒಟ್ಟಿನಲ್ಲಿ ಪ್ರಧಾನಿ ಭೇಟಿಯಿಂದಾಗಿ ಸಕಾರಾತ್ಮಕ ಫಲಶ್ರುತಿ ರೂಪುಗೊಳ್ಳಲಿ ಎಂದಷ್ಟೇ ಆಶಿಸಬಹುದು.

Leave a Reply

Your email address will not be published. Required fields are marked *

Back To Top