Wednesday, 18th July 2018  

Vijayavani

ಸಾಲದ ಸುಳಿಯಲ್ಲಿದ್ರೂ ಐ ಫೋನ್​ ಗಿಫ್ಟ್​ - ಹತ್ತಾರು ಸಮಸ್ಯೆ ಮಧ್ಯೆ ಬೇಕಿತ್ತಾ ದುಬಾರಿ ಉಡುಗೊರೆ​ - ಇಟ್ಕೊಂಡೋರಾರು..? ವಾಪಸ್ ಕೊಟ್ಟವರಾರು.?        ದೆಹಲಿಯಲ್ಲಿದ್ರೂ ರೇವಣ್ಣಗೆ ತವರಿನ ಜಪ - ಹಾಸನದ ಅಭಿವೃದ್ಧಿ ಬಗ್ಗೆ ಕೇಂದ್ರ ಸಚಿವರ ಜತೆ ಚರ್ಚೆ - ಸಿಎಂ ಎಚ್​ಡಿಕೆಯನ್ನೇ ಓವರ್​​ಟೇಕ್​ ಮಾಡಿದ PWD ಮಿನಿಸ್ಟರ್​​​        ಜಾರಕಿಹೊಳಿ ಬ್ರದರ್ಸ್​​​​ ನಡುವೆ ಸಮರ - ದೆಹಲಿಗೆ ಶಾಸಕರನ್ನ ಕರೆದೊಯ್ದ ರಮೇಶ್​​​​​​​ ಜಾರಕಿಹೊಳಿ - ಸತೀಶ್​​ಗೆ ಮಂತ್ರಿಗಿರಿ ತಪ್ಪಿಸಲು ಶಕ್ತಿ ಪ್ರದರ್ಶನ        ಇಂದಿನಿಂದ ಸಂಸತ್ ಅಧಿವೇಶನ - ಮಹಿಳಾ ಮೀಸಲಾತಿ, ತ್ರಿಪಲ್ ತಲಾಖ್​​​​​ ಮಸೂದೆ ಅಂಗೀಕಾರ ಸಾಧ್ಯತೆ - ಸಂಜೆ ರಾಜ್ಯ ಸಂಸದರ ಜತೆ ಸಿಎಂ ಮೀಟಿಂಗ್​​        ವಸತಿ ಯೋಜನೆಯ ಹಣವನ್ನೇ ನುಂಗಿದ್ರು - 140 ಅನರ್ಹರಿಂದ 8 ಕೋಟಿ ಗುಳುಂ ಸ್ವಾಹ - ಗದಗ ನಗರಸಭೆಯಲ್ಲಿ ಬಯಲಾಯ್ತು ಗೋಲ್​ಮಾಲ್​​​​        ದೀಪಾಲಂಕಾರದಿಂದ ಕಂಗೊಳಿಸಿದ ಕೆಆರ್​ಎಸ್​ - ಗಗನ ಚುಕ್ಕಿ ಜಲಪಾತ ನಯನ ಮನೋಹರ - ಡ್ರೋಣ್​​ ಕಣ್ಣಲ್ಲಿ ಸೆರೆಯಾಯ್ತು ಜಲಧಾರೆಯ ದೃಶ್ಯ ವೈಭವ       
Breaking News

ಬದುಕಿನ ಸೂತ್ರಬದ್ಧ ತರ್ಕದ ಶ್ರುತಿ ತಪ್ಪದಿರಲಿ

Saturday, 18.03.2017, 5:00 AM       No Comments

ನಮ್ಮೆಲ್ಲರ ಬದುಕಿನಲ್ಲಿ ಹಲವು ಸೂತ್ರಬದ್ಧ ತರ್ಕಗಳಿವೆ. ಅದರಂತೆ ನಾವು ನಡೆನುಡಿಯನ್ನು ಬೆಳೆಸಿಕೊಳ್ಳುತ್ತಾ ಬದುಕುತ್ತೇವೆ. ಇವು ಜೀವನದ ಎಲ್ಲ ರಂಗಗಳಲ್ಲೂ ಆರೋಗ್ಯಕರವಾಗಿ ಕೆಲಸ ಮಾಡಿಸುವ ತರ್ಕಗಳು. ಆದರೆ ಕೆಲ ವೃದ್ಧರಿಗೆ ಇಂಥ ತರ್ಕದ ಶ್ರುತಿಯೇ ತಪ್ಪಿಹೋಗಿದೆ. ತಮ್ಮದೇ ಆದ ನೇತ್ಯಾತ್ಮಕ ಪರಿಯನ್ನು ಸೃಷ್ಟಿಸಿಕೊಂಡು ಕೋಶದೊಳಗೆ ಅಡಗುವುದು ಇಂಥವರ ಜಾಯಮಾನ.

ಕಳೆದ ಬಾರಿಯ ಲೇಖನಕ್ಕೆ ಬಹಳಷ್ಟು ಪ್ರತಿಕ್ರಿಯೆಗಳು ಬಂದವು. ನನ್ನ ಲೇಖನಕ್ಕೆ ಮಾರೋಲೆ ಬರೆಯುವ ಎಲ್ಲ ಓದುಗಬಂಧುಗಳಿಗೂ ಆಭಾರಿಯಾಗಿದ್ದೇನೆ. ಬರಹಗಾರರ ಬರವಣಿಗೆ ಸಾರ್ಥಕ್ಯವನ್ನು ಪಡೆಯುವುದೇ ಆಸಕ್ತರ ಓದುವಿಕೆಯಲ್ಲಿ. ಈ ಪ್ರತಿಕ್ರಿಯೆಗಳಲ್ಲಿ ಮೆಚ್ಚುಗೆಯಲ್ಲದೆ ಸೂಚನೆ-ಸಲಹೆಗಳೂ ಇರುತ್ತವೆಯಲ್ಲ, ಅವು ನಮಗೆ ನಿಜಕ್ಕೂ ದಾರಿದೀಪಗಳೇ. ಹಿಂದಿನ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಲ್ಲಿ ಕೆಲವರ ಆಕ್ಷೇಪವೆಂದರೆ ಅದು ‘ಒಮ್ಮುಖ’ವಾಗಿತ್ತು ಎನ್ನುವುದು. ‘ವೃದ್ಧರನ್ನು ಕರುಣೆಯಿಂದ ನೋಡಿಕೊಳ್ಳಬೇಕು ಎಂದು ಮಾತ್ರ ನೀವು ಬರೆದಿದ್ದೀರಿ. ಆ ವೃದ್ಧರೂ ಅನುಸರಿಸಬೇಕಾದ ವಿಷಯಗಳು ಇರುತ್ತವೆ ಅಲ್ಲವೇ? ಅವರಿಗೂ ನೀವು ಸಲಹೆಗಳನ್ನು ಕೊಡಬೇಕು ಅಲ್ಲವೇ?’ ಎನ್ನುವುದು ಕೆಲವರ ಅಭಿಪ್ರಾಯ. ಇಂಥ ಪ್ರಶ್ನೆಗಳನ್ನು ಓದಿದ ಮೇಲೆ ಈ ಬಗ್ಗೆ ಸ್ವಲ್ಪ ವೈಜ್ಞಾನಿಕವಾಗಿ ಚಿಂತಿಸುವ ಅಗತ್ಯವಿದೆ ಎನಿಸಿ ಮತ್ತೆ ಈ ಅಂಕಣದಲ್ಲೂ ವೃದ್ಧಾಪ್ಯದ ಸಮಸ್ಯೆಯನ್ನೇ ಮುಂದುವರಿಸುತ್ತಿದ್ದೇನೆ.

ವಯಸ್ಸು 70 ದಾಟಿದವರನ್ನು ಎರಡು ವರ್ಗಗಳನ್ನಾಗಿ ವಿಂಗಡಿಸಬಹುದು. ಎಪ್ಪತ್ತರ ಹೊತ್ತಿಗೆ ಸಾಮಾನ್ಯವಾಗಿ ರಕ್ತದೊತ್ತಡ, ಮಧುಮೇಹ ಅಥವಾ ಇನ್ನಿತರ ತೊಂದರೆಗಳು ಕೆಲವರ ದೇಹವನ್ನು ಆಕ್ರಮಿಸಿಬಿಟ್ಟಿರುತ್ತವೆ. ಈ ಬಾಧೆಗಳಿಂದ ಜರ್ಜರಿತರಾದ ವೃದ್ಧರು ಒಂದು ರೀತಿಯಲ್ಲಿ ಭವಿಷ್ಯದ ಬಗ್ಗೆ ತಮಗೇ ಗೊತ್ತಿಲ್ಲದಂತೆ ಭಯವನ್ನು ಬೆಳೆಸಿಕೊಂಡಿರುತ್ತಾರೆ. ‘ನಾನು ವಿಪರೀತ ಕಾಯಿಲೆಯಿಂದಾಗಿ ಬಹಳಷ್ಟು ಕಾಲ ಹಾಸಿಗೆಯನ್ನು ಹಿಡಿದುಬಿಟ್ಟರೆ ಏನು ಗತಿ?, ಹಾಗೆ ನಾನು ಹಾಸಿಗೆ ಹಿಡಿದುಬಿಟ್ಟರೆ ಮಗ-ಸೊಸೆ, ಮಗಳು-ಅಳಿಯ, ಮೊಮ್ಮಕ್ಕಳು ನೋಡಿಕೊಳ್ಳುತ್ತಾರೋ ಇಲ್ಲವೋ?’ ಹೀಗೆ ಏನೇನೋ ಹೇಳಲಾಗದ, ಪರಿಹರಿಸಲಾಗದ ಭಯಗಳು ಅವರಲ್ಲಿ ಮನೆಮಾಡುತ್ತವೆ. ಇವುಗಳನ್ನು ನಿವಾರಿಸಿಕೊಳ್ಳಲು, ತನಗೆ ಹೆಚ್ಚು ಘಾಸಿಯಾಗದಂತೆ ತಡೆಯಲು ಮಿದುಳು ಒಂದು ‘ಡಿಫೆನ್ಸ್ ಮೆಕ್ಯಾನಿಸಂ’ ತಂತ್ರ ಹೂಡುತ್ತದೆ. ಇಂಥವರು ಆಗ ತಮ್ಮ ಗತವೈಭವವನ್ನು ಸದಾ ನೆನಪಿಸಿಕೊಳ್ಳಲು ಪ್ರಾರಂಭಿಸುತ್ತಾರೆ. ಎರಡು ಹೆಜ್ಜೆ ನಡೆಯಲಾರದವರು ‘ನಾನು ಸೈಕಲ್ಲಿನ ಮೇಲೆ ಊರೂರು ತಿರುಗುತ್ತಿದ್ದೆ ಗೊತ್ತಾ?’ ಎಂದೋ, ಒಂದು ಲೋಟ ಕಾಫಿ ಮಾಡಿಕೊಳ್ಳಲೂ ಶಕ್ತಿಯಿಲ್ಲದವರು ‘ನಾನು ಒಂದು ಗಂಟೆಯಲ್ಲಿ ಐವತ್ತು ಜನರಿಗೆ ಅಡುಗೆ ಮಾಡಿಹಾಕುತ್ತಿದ್ದೆ ಗೊತ್ತಾ?’ ಎಂದೋ ಮನೆಯ ಜನರ ಮುಂದೆ, ಮನೆಗೆ ಬರುವವರ ಮುಂದೆ ಬಡಾಯಿ ಕೊಚ್ಚಿಕೊಳ್ಳಲು ಶುರುಮಾಡುತ್ತಾರೆ. ಮಿದುಳು ಹೂಡುವ ಈ ತಂತ್ರದಿಂದಾಗಿ ಇಂಥ ಮಂದಿ ವಾಸ್ತವವನ್ನೂ ಭವಿಷ್ಯವನ್ನೂ ತಿರಸ್ಕರಿಸುವ ಹವ್ಯಾಸವನ್ನು ಬೆಳೆಸಿಕೊಳ್ಳುತ್ತಾರೆ! 94 ವರ್ಷದ ತಾತನೊಬ್ಬನಿಗೆ ಕಣ್ಣು ಕಾಣಿಸದಾಯಿತು. ವೈದ್ಯರು ಸದಾ ಕನ್ನಡಕ ಹಾಕಿಕೊಂಡಿರಲು ಹೇಳಿದರು. ಅದಕ್ಕೆ ಆ ತಾತನ ಪ್ರತಿಕ್ರಿಯೆ ಏನು ಗೊತ್ತೇ? ‘ಅಯ್ಯೋ ಅಯ್ಯೋ ಈಗಿಂದಾನೇ ಕನ್ನಡಕ ಹಾಕ್ಕೋ ಅಂತಾನಲ್ಲ, ಆ ಡಾಕ್ಟರನಿಗೆ ಬುದ್ಧಿಯಿದೆಯೇ?’. ಹತ್ತು ವರ್ಷದ ಹುಡುಗ ಈ ಮಾತನ್ನು ಹೇಳಿದರೆ ಅದಕ್ಕೊಂದು ಅರ್ಥವಿದೆ. 94 ವರ್ಷದವರೂ ‘ಈಗಿನಿಂದಲೇ ಕನ್ನಡಕವೇ’ ಎಂದರೆ ಅವರು ತಮ್ಮ ವಯಸ್ಸನ್ನು ಮರೆತೇಬಿಟ್ಟಿದ್ದಾರೋ ಎನಿಸುವುದಿಲ್ಲವೇ? ಹೀಗೆ ವಾಸ್ತವವನ್ನೂ ಭವಿಷ್ಯವನ್ನೂ ನಿರಾಕರಿಸುವ, ಗಮನಿಸುವುದಕ್ಕೇ ಇಷ್ಟಪಡದ ವ್ಯಕ್ತಿ ತನ್ನ ಭೂತಕಾಲದಲ್ಲಿ ಸುಖವನ್ನು ಕಂಡುಕೊಳ್ಳುತ್ತಾನೆ. ಇಂಥವರದ್ದು ಮೊದಲ ವರ್ಗ.

ಈ ಗುಂಪಿಗೆ ಸೇರಿದವರನ್ನು ಸಂಭಾಳಿಸುವುದು ಮನೆಯ ಜನರಿಗೆ ನಿಜಕ್ಕೂ ಸಮಸ್ಯೆಯೇ. ‘ಷುಗರ್ ಇದೆ, ಸಿಹಿ ತಿನ್ನಬೇಡಿ’ ಎಂದರೆ ‘ನಮ್ಮಪ್ಪ ಸಾಯುವವರೆಗೂ ಸಿಹಿ ತಿನ್ನುತ್ತಿದ್ದರು. ಅವರಿಗೇನೂ ಆಗಲಿಲ್ಲವಲ್ಲ?’ ಎಂದೇ ವಾದಿಸುತ್ತಾರೆ. ‘ಒಬ್ಬೊಬ್ಬರೇ ದೂರ ವಾಕಿಂಗ್ ಹೋಗಬೇಡಿ, ನಿಮಗೆ ಕಣ್ಣು ಮಂಜಾಗಿದೆ’ ಎಂದರೂ ಈ ವರ್ಗದವರು ಕೇಳುವುದಿಲ್ಲ. ದೂರ ಹೋಗುತ್ತಾರೆ, ಬೀಳುತ್ತಾರೆ, ಕೈಕಾಲಿಗೆ ಪೆಟ್ಟು ಮಾಡಿಕೊಂಡು ಆಸ್ಪತ್ರೆ ಸೇರುವ ಸಂದರ್ಭವನ್ನು ಸೃಷ್ಟಿಸಿಕೊಳ್ಳುತ್ತಾರೆ. ಹತ್ತಿರದ ನೆಂಟರಿಷ್ಟರಿಂದ ‘ಮುದುಕರನ್ನು ಸರಿಯಾಗಿ ನೋಡಿಕೊಳ್ಳಬೇಕಪ್ಪ, ದೂರ ವಾಕಿಂಗ್​ಗೆ ಯಾಕೆ ಕಳಿಸಿದಿರಿ?’ ಎನ್ನುವ ಆಕ್ಷೇಪಣೆಯನ್ನೂ, ಬಿಟ್ಟಿ ಸಲಹೆಯನ್ನೂ ಕೇಳುವ ಹಾಗೆ ಮಾಡುತ್ತಾರೆ. ಈ ಗುಂಪಿನ ಜನ ಯುಗದ ಜತೆಗೆ ಹೆಜ್ಜೆಹಾಕುವುದಿಲ್ಲ, ಬದಲಾದ ಜೀವನಶೈಲಿಯನ್ನು ಒಪ್ಪುವುದಿಲ್ಲ. ಮೊಮ್ಮಗ ತಡರಾತ್ರಿಯಲ್ಲಿ ಬೈಕಿನಲ್ಲಿ ಓಡಾಡಿದರೆ, ಮೊಮ್ಮಗಳು ಸದಾ ಮೊಬೈಲ್ ಫೋನಿನಲ್ಲಿ ಮಾತಾಡುತ್ತಿದ್ದರೆ, ಇವರು ಸಿಡಿಮಿಡಿಗೊಳ್ಳುತ್ತಾರೆ. ಮಕ್ಕಳು ತಮ್ಮನ್ನು ಸರಿಯಾಗಿ ಸಾಕುತ್ತಿಲ್ಲವೆನ್ನುವ ವಾದ ಇವರದ್ದು!! ಈ ಎಲ್ಲ ನಡವಳಿಕೆಗಳಿಂದ ವೃದ್ಧರಿರುವ ಮನೆಯಲ್ಲಿ ಒಂದು ರೀತಿಯ ಅಸಹನೆಯ ವಾತಾವರಣ ತುಂಬಿ ತುಳುಕಾಡುತ್ತಿರುತ್ತದೆ. ಇಂಥ ವೃದ್ಧರಿರುವ ಮನೆಯ ಸದಸ್ಯರು ಒಂದು ವಿಷಯವನ್ನು ಚೆನ್ನಾಗಿ ಮನದಟ್ಟು ಮಾಡಿಕೊಳ್ಳಬೇಕು. ಅವರಿಗೆ ವಾಸ್ತವದ ಅರಿವು ಮಾಸಿದೆ. ‘ನಾನು ಹೀಗೆ ಮಾಡಿದರೆ, ಅದು ಹೀಗಾಗಬಹುದು’ ಎನ್ನುವ ತರ್ಕ ತಪ್ಪಿಹೋಗಿದೆ. ನಮ್ಮೆಲ್ಲರ ಬದುಕಿನಲ್ಲಿ ಒಂದು ಸೂತ್ರಬದ್ಧವಾದ ತರ್ಕವಿದೆ. ಅದರಂತೆ ನಾವು ನಡೆನುಡಿಯನ್ನು ಬೆಳೆಸಿಕೊಳ್ಳುತ್ತಾ ಬದುಕುತ್ತೇವೆ. ಉದಾಹರಣೆಗೆ, ಗಂಡ-ಹೆಂಡತಿಯರ ಸಂಬಂಧದಲ್ಲೂ ಕೆಲವು ಸಂಕೋಚಗಳಿದ್ದರೆ ಮಾತ್ರ ಜೀವನ ಸುಂದರವಾಗುತ್ತದೆ. ‘ಅಡುಗೆ ಚೆನ್ನಾಗಿಲ್ಲವೆಂದುಬಿಟ್ಟರೆ ಪಾಪ ಕಷ್ಟಪಟ್ಟ ಹೆಂಡತಿಯ ಮನಸ್ಸಿಗೆ ನೋವಾಗುತ್ತದೆ’ ಎಂದು ಗಂಡನೂ, ‘ನಿಮ್ಮಿಂದ ನಾನು ಏನೇನೋ ನಿರೀಕ್ಷಿಸಿದ್ದೆ, ನೀವು ನನ್ನ ನಿರೀಕ್ಷೆಗೆ ಸ್ಪಂದಿಸಲಿಲ್ಲ’ ಎಂದು ಹೆಂಡತಿಯೂ ಯಾವಾಗಲೂ ಹೇಳುವುದಿಲ್ಲ. ಹೇಳಿ ತಮ್ಮ ಸಂಗಾತಿಗೆ ನೋವುಂಟುಮಾಡಲು ಹಿಂಜರಿಯುತ್ತಾರೆ. ಇಂಥ ನಡವಳಿಕೆಗಳೇ ಬಾಂಧವ್ಯವನ್ನು ಬೆಸೆಯುವ ಬೆಸುಗೆಗಳಾಗುತ್ತವೆ. ಇವು ಜೀವನದ ಎಲ್ಲ ರಂಗಗಳಲ್ಲೂ ಆರೋಗ್ಯಕರವಾಗಿ ಕೆಲಸ ಮಾಡಿಸುವ ತರ್ಕಗಳು. ಆದರೆ ಕೆಲ ವೃದ್ಧರಿಗೆ ಇಂಥ ತರ್ಕದ ಶ್ರುತಿಯೇ ತಪ್ಪಿಹೋಗಿದೆ. ಇವರ ಮೇಲೆ ಕೋಪ ಮಾಡಿಕೊಂಡರೆ ಏನೂ ಪ್ರಯೋಜನವಿಲ್ಲ. ಮನೋವೈದ್ಯರು ಹೇಳುತ್ತಾರೆ, ವಯಸ್ಸಾದ ಮೇಲೆ ಎಲುಬುಗಳು ಶಿಥಿಲವಾದಂತೆ ಮಿದುಳಿನಲ್ಲೂ ಕೆಲವು ಸವಕಳಿಗಳು ಉಂಟಾಗುತ್ತವೆ. ಭಾವನೆಗಳು ಹರಿದಾಡುವ ಬದಲು ಹರಳುಗಟ್ಟಿಬಿಡುತ್ತವೆ. ಮತ್ತೊಬ್ಬರ ಕಷ್ಟಗಳನ್ನು ಅರ್ಥಮಾಡಿಕೊಳ್ಳುವ ಸೂಕ್ಷ್ಮಮನಸ್ಸು ನಾಪತ್ತೆಯಾಗಿಬಿಡುತ್ತದೆ. ತಮ್ಮದೇ ಸವಕಲು ಚಿಂತನೆಯ ವರ್ತಲದಲ್ಲಿ ಅವರು ಸುತ್ತುತ್ತಿರುತ್ತಾರೆ.

ವಯಸ್ಸನ್ನು ಒಪ್ಪಿಕೊಳ್ಳುವುದೊಂದು ಆರೋಗ್ಯಕರ ನಡವಳಿಕೆ. ವಾಸ್ತವವನ್ನು ಅಲ್ಲಗಳೆಯುವವರಲ್ಲಿ ವಯಸ್ಸನ್ನು ಒಪ್ಪಿಕೊಳ್ಳುವ ಮನಸ್ಸು ಕಾಣೆಯಾಗುತ್ತದೆ. ಕಣ್ಣುಗಳಿಗೆ ದಪ್ಪ ಕನ್ನಡಕ ಬಂದಿದ್ದರೂ, ಸಹಜ ಹಲ್ಲುಗಳ ಜಾಗದಲ್ಲಿ ಕೃತಕ ದಂತಪಂಕ್ತಿ ಸ್ಥಾಪಿತವಾಗಿದ್ದರೂ, ಮುಖದಲ್ಲಿ ಸುಕ್ಕುಗಳು ಇಣುಕುತ್ತಿದ್ದರೂ ತಲೆಗೂದಲಿಗೆ ದಟ್ಟ ಕಪ್ಪುಬಣ್ಣವನ್ನು ಲೇಪಿಸಿಕೊಳ್ಳುತ್ತಾರೆ. ಮತ್ತು ಅದಕ್ಕಾಗಿ ಹದಿನೈದು ದಿನಕ್ಕೊಮ್ಮೆ ‘ಹೇರ್ ಡೈ’ ಮಾಡಿಕೊಳ್ಳುವುದೇ ಒಂದು ಒತ್ತಡದ ಕೆಲಸವಾಗಿಬಿಡುತ್ತದೆ. ಕೃತಕ ಬಣ್ಣಗಳನ್ನು ಲೇಪಿಸಿಕೊಳ್ಳುವುದು ಆರೋಗ್ಯಕರವಲ್ಲ ಎನ್ನುವ ಸತ್ಯ ತಿಳಿದಿದ್ದೂ ‘ಕೂದಲು ಕಪ್ಪಗಿದ್ದರೆ ಮಾತ್ರ ಚಿಕ್ಕವರಾಗಿ ಕಾಣುತ್ತೇವೆ’ ಎನ್ನುವ ಭ್ರಮೆಗೆ ಬಲಿಯಾಗುತ್ತಾರೆ. ವಯಸ್ಸು ಎಪ್ಪತ್ತಾದ ಮೇಲೆ ಪ್ರಕೃತಿ ನಮ್ಮನ್ನು ಹೇಗೆ ಉಳಿಸಿಟ್ಟಿರುತ್ತದೋ ಹಾಗೆಯೇ ಇದ್ದರೆ ನೆಮ್ಮದಿಯಿರುತ್ತದೆ ಎನ್ನುವ ಸತ್ಯವನ್ನು ಈ ಜನ ಒಪ್ಪಿಕೊಳ್ಳದೇ ಪ್ರಕೃತಿಯ ವಿರುದ್ಧ ಸೆಣಸಾಡುತ್ತಿರುತ್ತಾರೆ! ಈ ವರ್ಗದವರ ಮತ್ತೊಂದು ಸ್ವಭಾವವೆಂದರೆ ‘ಸ್ವಕೇಂದ್ರಿ’ತರಾಗುವುದು. ನನ್ನ ಊಟ-ತಿಂಡಿಗಳು ಸಮಯಕ್ಕೆ ಸರಿಯಾಗಿ ಆಗಿಬಿಡಬೇಕು, ನನ್ನನ್ನು ಮನೆಯ ಜನ ಅತ್ಯಂತ ಗೌರವಾದರಗಳಿಂದ ಕಾಣಬೇಕು. ನನ್ನ ಕೆಲಸವನ್ನು ಮೊದಲು ಮಾಡಿಕೊಡಬೇಕು, ಮನೆಗೆ ಯಾರೇ ಬರಲಿ ಹೋಗಲಿ ನನ್ನ ದಿನಚರಿ ಬದಲಾಗಬಾರದು- ಇಂಥ ‘ಸ್ಲೋಗನ್’ಗಳನ್ನು ಇಟ್ಟುಕೊಂಡು, ಅದರಲ್ಲಿ ಅಲ್ಪಸ್ವಲ್ಪ ಬದಲಾದರೂ ಮನೆಯ ಇತರ ಸದಸ್ಯರ ಜತೆ ಜಗಳಕ್ಕೆ ತಯಾರಾಗುತ್ತಾರೆ. ಸದಾ ಯಾವುದರಲ್ಲೂ ಸಂತೋಷ ಮತ್ತು ತೃಪ್ತಿಗಳಿಲ್ಲದೆ ಅಸಹನೆಯಲ್ಲಿ ತೊಳಲಾಡುವ ಜಾಯಮಾನ ಇವರದ್ದು. ಮಾಡಿದ ಅಡುಗೆಗಳ ಬಗ್ಗೆ, ತಂದುಕೊಟ್ಟ ಹೊಸ ಬಟ್ಟೆಗಳ ಬಗ್ಗೆ ಟೀಕೆಮಾಡುವುದೇ ಇವರ ಮೊದಲ ಪ್ರತಿಕ್ರಿಯೆ! ಇದೇ ಕಾರಣಗಳಿಗಾಗಿಯೇ ಮನೆಯ ಇತರ ಸದಸ್ಯರಿಗೂ ಇವರಿಗೂ ನಡುವೆ ಅಂತರಗಳು, ಬಿರುಕುಗಳು ಹೆಚ್ಚಾಗುತ್ತಾ ಹೋಗುತ್ತವೆ.

ಒಂದು ಕಾಲದಲ್ಲಿ ಸಜ್ಜನರೂ, ಸದಾ ಹಸನ್ಮುಖಿಗಳೂ, ಸ್ನೇಹಪರರೂ, ಸಹಾಯಪರರೂ ಆಗಿದ್ದಂಥ ವ್ಯಕ್ತಿಗಳು 70ರ ನಂತರ ತಮ್ಮದೇ ಆದ ನೇತ್ಯಾತ್ಮಕ ಪರಿಯನ್ನು ಸೃಷ್ಟಿಸಿಕೊಂಡು ಕೋಶದೊಳಗೆ ಅಡಗುತ್ತಾರೆಂದರೆ, ಇಂಥ ಮಂದಿಗೆ ‘ಕೇವಲ ಕರುಣೆ’ಯನ್ನಲ್ಲದೇ ಬೇರೇನು ತೋರಲು ಸಾಧ್ಯ?

ಮತ್ತೊಂದು ವರ್ಗದವರ ನಡವಳಿಕೆಗಳ ಬಗ್ಗೆ ಮುಂದಿನ ಲೇಖನದಲ್ಲಿ.

Leave a Reply

Your email address will not be published. Required fields are marked *

Back To Top