Tuesday, 20th March 2018  

Vijayavani

ಮುಂಬಡ್ತಿ ಕೇಸ್​​ನಲ್ಲಿ ರಾಜ್ಯ ಸರ್ಕಾರಕ್ಕೆ ಹಿನ್ನಡೆ- ಕಾಲಾವಕಾಶ ನೀಡೋಕೆ ಸುಪ್ರೀಂ ನಕಾರ- ತೀರ್ಪು ಪಾಲಿಸೋಕೆ ಒಂದು ತಿಂಗಳು ಡೆಡ್​​ಲೈನ್​        ಐಸಿಸ್​ನಿಂದ 39 ಭಾರತೀಯರ ಹತ್ಯೆ- ಮಾಹಿತಿ ಬಿಚ್ಚಿಟ್ಟ ಸುಷ್ಮಾ ಸ್ವರಾಜ್​- ಸಾವಿನಲ್ಲೂ ರಾಜಕೀಯ ಅಂತಾ ವಿಪಕ್ಷಗಳಿಗೆ ಚಾಟಿ        ಜೆಡಿಎಸ್​ ರೆಬೆಲ್ಸ್​ ಅಡ್ಡಮತದಾನ ಪ್ರಕರಣ- ನಾಳೆಯೇ ತೀರ್ಪಿಗೆ ಹೈಕೋರ್ಟ್ ಸೂಚನೆ- ಎಜಿ ಕರೆಸಿ ವಿಚಾರಿಸಿದ ಸ್ಪೀಕರ್​        ಮೆಟ್ರೋ ನೌಕರರ ಮುಷ್ಕರ ಇಲ್ಲ- ಬೇಡಿಕೆ ಈಡೇರಿಕೆಗೆ ತಿಂಗಳ ಗಡುವು- ಸಂಧಾನ ಸೂತ್ರಕ್ಕೆ BMRCLಗೆ ಹೈಕೋರ್ಟ್ ಸಲಹೆ        ವೀರಶೈವ ಲಿಂಗಾಯತ ಎರಡೂ ಒಂದೇ- ಸರ್ಕಾರದ ಕ್ರಮ ಅನ್ಯಾಯದ ಪರಮಾವಧಿ- ಸಿಎಂ ವಿರುದ್ಧ ಶಾಮನೂರು ಶಿವಶಂಕರಪ್ಪ ಗರಂ       
Breaking News

ಬದುಕಲು ಕಲಿಯಬೇಡಿ…. ಬದುಕಿ

Thursday, 17.11.2016, 4:51 AM       No Comments

 ಪ್ರತಿಯೊಂದು ಸಂಗತಿಯನ್ನೂ ಸ್ವತಃ ಅನುಭವಿಸದೆ ಪರರ ಅನುಭವದಿಂದಲೇ ತಮ್ಮದಾಗಿಸಿಕೊಳ್ಳುವ ವಿಲಕ್ಷಣತೆ ಅನೇಕರದ್ದು. ಆದರೆ ಬದುಕು ಒಂದೇ ಅಚ್ಚಿನಲ್ಲಿ ರೂಪುಗೊಳ್ಳದು, ವಿಭಿನ್ನತೆಯೇ ಅದರ ಜೀವಾಳ. ಅಂಧಾನುಕರಣೆಗೆ ಒಡ್ಡಿಕೊಂಡವರಿಗೆ ‘ಪುಸ್ತಕದ ಬದನೇಕಾಯಿ ಅಡುಗೆಗೆ ಬಾರದು’ ಎಂಬುದನ್ನು ಮನವರಿಕೆ ಮಾಡಿಸುವುದು ಕಷ್ಟ.

ರಿಚಿತರೊಬ್ಬರ ಮನೆಗೆ ಹೋಗಿದ್ದೆ. ಒಳನುಗ್ಗುವಾಗಲೇ ಪುಟ್ಟ ಮಗುವೊಂದು ಜೋರಾಗಿ ಅಳುವುದು ಕೇಳಿಸಿತು. ಇತ್ತೀಚೆಗಷ್ಟೇ ಅವರ ಮಗಳು ತಾಯಿಮನೆಗೆ ಬಂದಿದ್ದ ವಿಷಯ ಗೊತ್ತಿತ್ತು. ಮಗುವನ್ನೆತ್ತಿ ಸಮಾಧಾನಿಸಲು ಕಷ್ಟಪಡುತ್ತಿರುವ ಎಳೆತಾಯಿಯನ್ನು ಮನದಲ್ಲೇ ಚಿತ್ರಿಸಿಕೊಂಡು ಒಳನುಗ್ಗಿದ್ದೆ. ಮುದ್ದಾದ ಟೆಡ್ಡಿಬೇರ್ಗಳ ಚಿತ್ರ ಇದ್ದ ಪುಟಾಣಿ ಹಾಸಿಗೆಯ ಮೇಲೆ ಮಲಗಿಸಿದ್ದ ಮಗು ಕೈಕಾಲು ಬಡಿಯುತ್ತಾ ಅಳುತ್ತಾ ಕೆಂಪಗಾಗತೊಡಗಿತ್ತು. ಮಗುವಿನ ಅಜ್ಜ ಅಸಹನೆಯಿಂದ ಕಿಟಕಿಯ ಹೊರಗೆ ಕಣ್ಣುತೂರಿ ಕುಳಿತುಬಿಟ್ಟಿದ್ದರು. ಮಗುವಿನ ಅಜ್ಜಿ ಅಡುಗೆ ಕೋಣೆಯಲ್ಲಿ ಉರಿಯುತ್ತಿರುವ ಸ್ಟವ್ವಿನ ಎದುರು ಅಲುಗದ ಚಿತ್ರಪಟದಂತೆ ನಿಂತುಬಿಟ್ಟಿದ್ದರು. ಅವರ ಮಗಳು ಕೈಯಲ್ಲಿದ್ದ ಮೊಬೈಲಿನಲ್ಲಿ ಬೆರಳನ್ನು ಅಲುಗಾಡಿಸುತ್ತಾ ಯಾವುದನ್ನೋ ಹುಡುಕುತ್ತಾ ಆಗೀಗ ಅಸಹಾಯಕತೆಯ ನೋಟಬೀರುತ್ತಾ ಕುಳಿತಿದ್ದಳು. ಒಳಗೆ-ಹೊರಗೆ ಹೋಗುತ್ತಾ ಸಿಗದ ನೆರ್ಟÌನ ಮೇಲೆ ಅಸಹನೆ ವ್ಯಕ್ತಪಡಿಸುತ್ತಾ ಗೊಣಗುತ್ತಿದ್ದುದೂ ಕೇಳಿಸುತ್ತಿತ್ತು. ಮಗು ಅಳುತ್ತಿರುವಾಗ ಮೊಬೈಲಿನಲ್ಲಿ ನೋಡುವಂಥ ರಾಜಕಾರ್ಯವೇನಿದೆಯಪ್ಪಾ ಎಂದು ಮನ ಗಲಿಬಿಲಿಗೊಂಡ ನಾನು ‘ಯಾಕೆ ಏನಾಯ್ತು, ಯಾಕಳ್ತಿದೆ ಮಗು, ಎತ್ಕೋಬೇಕಾ?’ ಎಂದು ಹಾಸಿಗೆಯ ಕಡೆಗೆ ನೋಡುತ್ತಿದ್ದರೆ, ನನ್ನ ಪ್ರಶ್ನೆಗೆ ಉತ್ತರ ಹೇಳುವ ಮನಸ್ಥಿತಿ ಅಲ್ಲಿರುವವರಿಗೆ ಇರಲಿಲ್ಲ. ಫಕ್ಕನೆ ಮೊಬೈಲಿನ ಯಾವುದೋ ಒಂದು ಕಡೆ ಬೆರಳನ್ನು ನೆಟ್ಟವಳ ಮುಖ ಅರಳುತ್ತಾ ಹೋಗಿ, ಮಗುವನ್ನೆತ್ತಿಕೊಂಡು ಒಳಕೋಣೆಗೆ ನಡೆದಳು. ಕೆಲವೇ ನಿಮಿಷಗಳಲ್ಲಿ ಮಗುವಿನ ಅಳು ನಿಂತಿತ್ತು.

ನನಗೆ ಈ ವಿಚಿತ್ರ ಏನು ಎಂದೇ ತಲೆಗಿಳಿಯಲಿಲ್ಲ. ನಾನು ಅಲ್ಲಿಗೆ ಹೋಗಿದ್ದ ವಿಷಯದ ಬಗ್ಗೆ ಮಾತಾಡುತ್ತಾ ಮಗುವಿನ ಅಳುವನ್ನು ಮರೆತಿದ್ದೆ. ಹೊರಬರುವಾಗ ನನ್ನ ಹಿಂದೆಯೇ ಗೇಟಿನ ಹತ್ತಿರ ಬಂದ ಮಗುವಿನ ಅಜ್ಜಿ, ‘‘ಎಂತಾ ಹುಡುಗಿ ಇವಳು ಅಂತಾನೇ ಅರ್ಥ ಆಗ್ತಿಲ್ಲ, ನಾವೆಲ್ಲಾ ಮಕ್ಕಳನ್ನು ಹೊತ್ತು ಹೆತ್ತಿಲ್ವಾ.. ಇಷ್ಟುದ್ದ ಇದ್ದ ಎಳೆ ಬೊಮ್ಮಟೆಗಳನ್ನು ದೊಡ್ಡದು ಮಾಡಿಲ್ವಾ, ಅದೂ ಒಂದೊಂದಲ್ಲ.. ಮೂರು ಮಕ್ಕಳನ್ನು ಹೆತ್ತಿದ್ದೇನೆ. ಆದರೂ ಇವಳು ಮಕ್ಕಳ ಬಗ್ಗೆ ನಮಗೇನು ಗೊತ್ತಿಲ್ಲ ಅಂತಾಳೆ…’’ ಎಂದರು. ಕೈ ಹಿಂದೆ ಸರಿದು ಸೆರಗನ್ನೆಳೆದುಕೊಂಡು ಹಸಿಯಾದ ಕಣ್ಣ ಹನಿಗಳನ್ನೊತ್ತಿಕೊಂಡಿತು. ನಾನು ನೆಲದಲ್ಲೂರಿದ ಕಾಲುಗಳನ್ನೆತ್ತದೆ ಹೆಜ್ಜೆಗಳನ್ನು ಸ್ತಬ್ಧಗೊಳಿಸಿ ಮುಂದಿನ ಮಾತುಗಳಿಗಾಗಿ ಕಾದೆ.

ಒಮ್ಮೆ ಮನೆಯ ಕಡೆ ನೋಡಿ, ಯಾರೂ ಗಮನಿಸುತ್ತಿಲ್ಲವೆಂದು ನಿಶ್ಚಯ ಮಾಡಿಕೊಂಡು, ಮಾತಿನ ಮಾಲೆಯನ್ನು ಪೋಣಿಸತೊಡಗಿದರು. ‘‘ನಿಮ್ಗೇ ಗೊತ್ತಲ್ಲ, ಇವ್ಳನ್ನು ಮದುವೆ ಮಾಡಿಕೊಟ್ಟದ್ದು ದೂರದ ಡೆಲ್ಲಿಯಲ್ಲಿರುವ ಹುಡುಗನಿಗೆ ಅಂತ. ಮದುವೆಯಾಗಿ ಐದು ವರ್ಷ ಕಳೆದಮೇಲೆ ಮಗು ಬೇಕು ಅಂತ ಡಿಸೈಡ್ ಮಾಡ್ಕೊಂಡ್ರು. ಅದಾಗಿ ಎರಡು ವರ್ಷದ ನಂತರ ಕೆಲವು ವೈದ್ಯಕೀಯ ನೆರವಿನಿಂದ ಬಸಿರು ನಿಂತಿತ್ತು. ಬಸಿರು ಹೊತ್ತಿರುವಾಗಲೇ ‘ಮಗುವನ್ನು ನೋಡಿಕೊಳ್ಳೋದು ಹೇಗೆ’ ಅಂತ ಕಲಿಸಿಕೊಡುವ ಕೋರ್ಸಿಗೆ ಸೇರಿದ್ದಳು. ಅದರ ಬಗ್ಗೆ ಹೇಳ್ತಾನೂ ಇದ್ದಳು. ಅದು ಇಷ್ಟು ಸೀರಿಯಸ್ ಆಗಿರುತ್ತೆ ಅಂತ ಗೊತ್ತಿರಲಿಲ್ಲ. ನಿಜ ಹೇಳ್ಬೇಕಾ, ಅಂತದ್ದೊಂದು ಕೋರ್ಸ್ ಇರಬಹುದು ಎನ್ನುವುದು ನನ್ನ ಕಲ್ಪನೆಗೆ ನಿಲುಕದ್ದು. ಅಲ್ಲಿ ಪುಟ್ಟ ಮಗುವನ್ನು ಹೇಗೆ ಎತ್ತಿಕೊಳ್ಳೋದು, ಬಟ್ಟೆ ಬದಲಿಸೋದು, ಯಾವ ರೀತಿಯ ಬಟ್ಟೆಗಳನ್ನು ಹಾಕೋದು, ಅದರ ಅಳುವಿನಿಂದಲೇ ಯಾವುದಕ್ಕಾಗಿ ಅಳುತ್ತದೆ ಎಂದು ತಿಳಿದುಕೊಳ್ಳೋದು .. ಹೀಗೆ ಹತ್ತು ಹಲವು ವಿಷಯಗಳನ್ನು ಕಲಿಸುತ್ತಾರಂತೆ. ಇಲ್ಲಿ ಬಂದರೆ ಹೆರಿಗೆಗೆ ತೊಂದರೆ ಅಂತ ಅಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಳು. ನಾನು ಮನೆಬಿಟ್ಟು ಹೋದರೆ ಇಲ್ಲಿ ಕಷ್ಟ ಆಗುತ್ತೆ ಅಂತ ಹೋಗಲಾಗಿರಲಿಲ್ಲ. ನನ್ನ ಬದಲು ನಮ್ಮ ಬೀಗಿತ್ತಿಯೇ ಹೋಗಿದ್ದರು. ಒಂದು ತಿಂಗಳು ಕಳೆದ ನಂತರ ಎಲ್ಲರೂ ಇಲ್ಲಿಗೆ ಬಂದದ್ದು. ಬೀಗಿತ್ತಿಯ ಮುಖ ಬೀಗಿಕೊಂಡೇ ಇತ್ತು. ನಾನು ಬಾಣಂತನ ಮಾಡಲು ಹೋಗಿಲ್ಲವೆಂಬ ಸಿಟ್ಟಿರಬಹುದು; ಬಂದ ದಿನವೇ ಅದನ್ನೆಲ್ಲಾ ಮಾತನಾಡಿ ಮನಸ್ಸು ಮುರಿದುಕೊಳ್ಳುವುದೇಕೆ ಎಂದು ಹೆಚ್ಚು ಕೆದಕಲು ಹೋಗಿರಲಿಲ್ಲ….

ನಿಜ ಹೇಳಿದ್ರೆ ನಂಬ್ತೀರೋ ಇಲ್ವೋ ಗೊತ್ತಿಲ್ಲ. ಬಂದ ದಿನ ಸ್ವಲ್ಪ ಹೊತ್ತು ಅದು ಇದು ಅಂತ ಮಾತನಾಡಿ, ನಿದ್ದೆ ತೂಗುತ್ತಿದ್ದ ಮಗುವನ್ನು ಮಲಗಿಸಿ ನನ್ನ ಮಗಳು ಸ್ನಾನಕ್ಕೆ ಹೋಗಿದ್ದಳು. ಅವಳಿನ್ನೂ ಹೊರಬರುವ ಮೊದಲೇ ಮಗು ಅಳಲು ಶುರುಮಾಡಿತ್ತು. ಅಳಿಯ ಹೊರಹೋಗಿದ್ದ. ಅವಳ ಅತ್ತೆಗೆ ಮಗುವಿನ ಅಭ್ಯಾಸ ಆಗಿರುತ್ತೆ, ನಮ್ಮ ಹೊಸ ಸ್ಪರ್ಶದ ಬಳಕೆ ಪುಟ್ಟಕೂಸಿಗೆ ಇರಿಸು-ಮುರಿಸು ಆಗಬಹುದು ಅಂತ ‘ಮಗು ಅಳ್ತಿದೆ, ಸ್ವಲ್ಪ ಎತ್ತಿಕೊಳ್ಳಿ, ಇನ್ನೇನು ಅವ್ಳು ಬರ್ತಾಳೆ’ ಎಂದೆ. ನನ್ನ ಮಾತು ಕಿವಿಗೇ ಬೀಳದಂತೆ ಎದ್ದು ಹೊರಹೋಗಿದ್ದರು. ನನಗೆ ಸಿಟ್ಟು ಬಂದಿತ್ತು. ಅಲ್ಲಾ, ನನ್ನ ಮೇಲೋ, ಸೊಸೆಯ ಬಗ್ಗೆಯೋ ಏನಾದ್ರೂ ಸಿಟ್ಟು ಸೆಡವುಗಳಿದ್ದರೆ ಅದನ್ನು ನಮ್ಮ ನಮ್ಮಲ್ಲೇ ತೀರಿಸಿಕೊಳ್ಳಬೇಕು ಬಿಟ್ಟು ಇಷ್ಟು ಸಣ್ಣ ಮಗುವಿನ ಮೇಲೆ ತೀರಿಸಿಕೊಳ್ಳುವುದೇ….

ನಾನು ಒಳಹೋಗುವ ಮೊದಲೇ ಬಂದಿದ್ದ ನನ್ನ ಮಗಳು ಮಗುವನ್ನೆತ್ತಿಕೊಂಡಿದ್ದಳು. ಮರುದಿನವೇ ಅಳಿಯನೊಂದಿಗೆ ತಮ್ಮೂರಿಗೆ ಹೊರಟುನಿಂತಿದ್ದ ಅವಳತ್ತೆ ಬಿಗುವಾಗಿಯೇ ಇದ್ದರು. ನನಗೋ ಅದನ್ನೆಲ್ಲಾ ಯೋಚಿಸುತ್ತಾ ಕುಳಿತುಕೊಳ್ಳಲು ಸಮಯವಿರಲಿಲ್ಲ. ಮಗಳು ಬರುವ ಮೊದಲೇ ನನ್ನ ಹಳೆಯ ಕಾಟನ್ ಸೀರೆಗಳನ್ನೆಲ್ಲಾ ಚೆನ್ನಾಗಿ ಸೋಪು ಹಾಕಿ ತೊಳೆದು ಡೆಟಾಲಿನಲ್ಲಿ ಮುಳುಗಿಸಿ ತೆಗೆದು ಒಣಗಿಸಿಟ್ಟುಕೊಂಡಿದ್ದೆ. ಅದನ್ನೆಲ್ಲಾ ಮಗಳ ಕೋಣೆಯಲ್ಲೇ ಇಟ್ಟುಬರಲು ಹೊರಟಿದ್ದೇ ತಡ, ಬಾಗಿಲ ಹೊರಗೇ ನನ್ನನ್ನು ನಿಲ್ಲಿಸಿದ ಮಗಳು ಅದನ್ನು ಎಡಗೈಯಿಂದಲೂ ಮುಟ್ಟದೇ ‘ಛೀ, ಆ ಕೊಳಕುಬಟ್ಟೆ ಇಲ್ಲಿ ತರ್ಬೇಡ, ನೆಲ ಒರೆಸಲು ಯೂಸ್ ಮಾಡಮ್ಮ.. ಸಣ್ಣ ಮಗುವಿಗೆ ಏನಾದರೂ ಇನ್ಫೆಕ್ಷನ್ ಆದೀತು’ ಎಂದಳು.

ಇದೇ ಮಗಳು, ಇಡೀ ದಿನ ಉಟ್ಟು ಕೊಳೆಯಾದ ಸೀರೆಯಲ್ಲೇ ಮುಖ ಒರೆಸಿಕೊಂಡು ಬೆಳೆದವಳು, ಅದೇ ಹರಕಲು ಸೀರೆಯನ್ನು ಜೋಡಿಸಿ ಹೊಲಿದ ಕೌದಿಯಡಿಯ ಬೆಚ್ಚಗಿನಲ್ಲೇ ದೊಡ್ಡವಳಾದವಳು ಎಂಬುದೆಲ್ಲಾ ಆ ಕ್ಷಣಕ್ಕೆ ಅವಳಿಗೆ ಮರೆತೇ ಹೋಗಿರಬಹುದೇ?

ಮಗುವಿನ ದಿನಚರಿ ಅಂತ ಅವಳ ಕೋಣೆಯ ಗೋಡೆಯಲ್ಲಿ ಒಂದು ಚಾರ್ಟ್ ನೇತುಹಾಕಿದ್ದಾಳೆ. ಅದರಲ್ಲಿ ಮಗುವಿಗೆ ನೀರು ಕೊಡುವುದೆಷ್ಟು, ಹಾಲುಕೊಡುವ ಹೊತ್ತು, ಎಲ್ಲವೂ ಇದೆ. ಆ ಹೊತ್ತಲ್ಲದೇ ಒಂದು ನಿಮಿಷ ಮೊದಲಿನವರೆಗೂ ಮಗು ಎಷ್ಟೇ ಅತ್ತು ಕಿರುಚಿದರೂ ಸುಮ್ಮನೇ ಇರ್ತಾಳೆ. ನಾವೇನಾದ್ರೂ ಹೇಳೋದಕ್ಕೆ ಹೋದ್ರೆ ನಮ್ಗೆ ಪಾಠ ಶುರು. ಆಹಾರ ಕರಗಲು ಸಮಯ ಕೊಡ್ಬೇಕು; ಅತ್ತರೆ, ಆಕ್ಸಿಜನ್ ಸರಾಗವಾಗಿ ಹೋಗುತ್ತೆ, ಅನ್ನುವೆಲ್ಲಾ ಅವಳ ಸಮಜಾಯಿಷಿಗಳು. ಮೊಬೈಲಿನಲ್ಲೂ ಆನ್ಲೈನ್ ಪಾಠ ತೋರಿಸ್ತಾಳೆ.

ಎತ್ತಿಕೊಳ್ಳಲು ಹೋದರೆ ಅದಕ್ಕೂ ನಕಾರ. ಇಲ್ಲಿಯ ಸೆಖೆ ನಿಂಗೆ ಗೊತ್ತಲ್ಲಾ, ಮಗು ಬೆವರ್ತಾ ಇದ್ರೂ ಅದಕ್ಕೆ ಮಫ್ಲರ್, ಸ್ವೆಟರ್ ಟೋಪಿ ಹಾಕಿ ಮಲಗಿಸ್ತಾಳೆ. ಸೆಖೆಗೇ ಇರಬಹುದು, ಸರಿಯಾಗಿ ನಿದ್ರೆಯೂ ಮಾಡದೇ ಮಗು ಆಗಾಗ ಎದ್ದು ಅಳುತ್ತಾ ಇರುತ್ತದೆ. ಯಾರೂ ಮಗುವನ್ನು ಮುಟ್ಟಬಾರದು, ಹೊರಗಡೆ ಹೋದರೆ ಪ್ರದೂಷಿತ ಗಾಳಿಯ ಚಿಂತೆ, ಹೆಚ್ಚು ಶಬ್ದ ಆಗಬಾರದು, ದೊಡ್ಡದಾಗಿ ಮಾತನಾಡಬಾರದು ಎಂಬೆಲ್ಲಾ ರೂಲ್ಸುಗಳು… ಈಗ ಮಗು ನೆಲದಲ್ಲಿ ಮಗುಚಿ ಹರಿದಾಡುವ ಸಮಯ. ಹೀಗೆ ಬಟ್ಟೆಯ ಗಂಟಿನೊಳಗೆ ತುಂಬಿಟ್ಟರೆ ಅದು ಕೆಲಸ ಮಾಡುವುದನ್ನು ಕಲಿಯೋದು ಹೇಗೆ?

ಮೊದಲಿನ ನಮ್ಮ ಎಣ್ಣೆಸ್ನಾನ ಎಲ್ಲ ಇಲ್ಲ. ಚಳಿಯಾದರೆ ಒಂದು ಕ್ರೀಮ್ ಬಿಸಿಯಾದರೆ ಇನ್ನೊಂದು ಕ್ರೀಮ್ ಅಲ್ಲಾ ಮಾರಾಯ್ತಿ, ಅಷ್ಟು ಸಣ್ಣ ಮಗುವಿಗೆ ಇಡೀ ದಿನ ಡಯಾಪರ್ ಹಾಕಿ ಮಲಗಿಸಬೇಡ, ಕೆಂಪಾಗಿದ್ದು ನೋಡು ಅಂದರೆ ‘ನೀವೆಲ್ಲಾ ಓಬೀರಾಯನ ಕಾಲದಲ್ಲಿ ಇದ್ದೀರಾ? ಮಕ್ಕಳು ಶಾಲೆಗೆ ಹೋಗುವಾಗಲೇ ಚಡ್ಡಿ ಹಾಕಿದ್ರೆ ಸಾಕು ಅನ್ನೋ ಮೆಂಟಾಲಿಟಿ ನಿಮ್ಮದು’ ಅಂತ ವ್ಯಂಗ್ಯ ಬೇರೆ. ಹೀಗಾದರೆ ಮಗು ಪರಿಸರಕ್ಕೆ ಹೊಂದಿಕೊಂಡು ಬೆಳೆಯುವುದು ಹೇಗೆ?

ಪ್ರತಿ ಮಗುವೂ ಹೊಸ ಅದ್ಭುತ. ಅದರ ಪ್ರತಿಯೊಂದು ನಡವಳಿಕೆಯೂ ಇನ್ನೊಂದು ಮಗುವಿಗಿಂತ ಭಿನ್ನ, ಅದರ ಅಳುವಿಗೂ ಅರ್ಥಗಳು ಅನೇಕ, ಎಲ್ಲಾ ಮಕ್ಕಳನ್ನೂ ಒಂದೇ ರೀತಿ ಸಾಕೋದಕ್ಕೆ ಸಾಧ್ಯವಿಲ್ಲ ಅಂತ ಅಂದರೆ ಅವಳಿಗೆ ಅರ್ಥ ಆಗೋದೇ ಇಲ್ಲ.

ಕತ್ತಲೆ ತುಂಬಿದ ಬಾಣಂತಿಕೋಣೆ, ಗಾಳಿಯಾಡದ ಕೋಣೆಯೊಳಗಿನ ಸಾಂಬ್ರಾಣಿಹೊಗೆ ಇಂತಹ ಆಲೋಚನೆಗಳಿಂದ ಮುಂದೆ ಬಂದ ನಾವುಗಳೂ ಈ ಹೊಸ ರೀತಿಯನ್ನು ಅರ್ಥಮಾಡೋದಕ್ಕೆ ಆಗ್ತಾ ಇಲ್ಲ. ನಮ್ಮ ಅನುಭವಗಳು ಬರೀ ನಮಗೆ ಮಾತ್ರ ಸೀಮಿತವೇ? ಹಿಂದಿನದ್ದೆಲ್ಲವೂ ಸರಿಯಾಗಿಲ್ಲ ಎಂದು ಹೊಸಪೀಳಿಗೆಯು ಸಾರಾಸಗಾಟಾಗಿ ತಿರಸ್ಕರಿಸುವುದು ಮುಂದುವರಿಕೆಯ ಲಕ್ಷಣವೇ? ನನಗಂತೂ ಅಜ್ಜಿ ಆಗಿದ್ದೇನೆ ಅನ್ನುವ ಸಂತಸ ಕೂಡಾ ಇಲ್ಲವಾಗಿದೆ. ಕೇಳಿದ್ರೆ ‘ನಾನು ಕ್ಲಾಸಿಗೆ ಹೋಗಿ ಕಲಿತಿದ್ದೀನಿ, ನಿಮ್ಗೆ ಹೊಸದಾಗಿ ಆಲೋಚಿಸಲು ಬರೋದಿಲ್ಲ. ಎಷ್ಟು ಜನ ಸೆಲೆಬ್ರಿಟೀಸ್ ಇದ್ರು ಗೊತ್ತಾ ನಮ್ಮ ಕ್ಲಾಸಿನಲ್ಲಿ, ಅವ್ರೆಲ್ಲಾ ಹೀಗೇ ಬೆಳೆಸೋದು ಮಕ್ಕಳನ್ನು. ನಿಮ್ಗೆ ಗೊತ್ತಿಲ್ಲ ಅಷ್ಟೇ‘ ಅನ್ನುವ ಉತ್ತರ ಅವಳದ್ದು. ಅಪ್ಪ, ಅಮ್ಮ ಮಾತ್ರ ಮಕ್ಕಳನ್ನು ಬೆಳೆಸೋದು ಅನ್ನೋ ಅವರ ಹೊಸಕ್ರಮ ಇದೆಯಲ್ಲಾ ಅದೇ ನನ್ನ ತಲೆಕೆಡಿಸೋದು. ‘ಅಜ್ಜಿಯ ಕೈಗೆ ಹೋಗು ಮಗು, ಮಾಮಾ ಹತ್ರ ಎತ್ತಿಕೊಳ್ಳಲು ಹೇಳು’ ಎಂದಾಗೆಲ್ಲಾ ಕೈಚಾಚಿ ನಗುವ ಮಕ್ಕಳು ನಮ್ಮ ಕಾಲಕ್ಕೆ ಮುಗಿದುಬಿಡುತ್ತವೆಯಾ? ಪುಸ್ತಕದ ಬದನೆಕಾಯಿಯಲ್ಲಿ ಅಡುಗೆ ಮಾಡಲು ಆಗೋದಿಲ್ಲ ಅಂತ ಅವಳಿಗೆ ಅರ್ಥ ಮಾಡಿಸೋದು ಹೇಗೆ?’’. ಸೆರಗು ಇನ್ನಷ್ಟು, ಮತ್ತಷ್ಟು ನೀರನ್ನು ಹೀರಿಕೊಂಡಿತು.

ನಾವು ಎಲ್ಲವನ್ನೂ ಕಲಿಯುವ ಧಾವಂತಕ್ಕೆ ಬಿದ್ದುಬಿಟ್ಟಿದ್ದೇವೆ. ಪ್ರತಿಯೊಂದು ವಿಷಯವನ್ನೂ ಇನ್ನೊಬ್ಬರ ಅನುಭವದಿಂದಲೇ ನಮ್ಮದಾಗಿಸಿಕೊಳ್ಳುವ ಹುಚ್ಚನ್ನು ತಲೆಗೇರಿಸಿಕೊಂಡಿದ್ದೇವೆ. ಬದುಕು ಫ್ಯಾಕ್ಟರಿಯಿಂದ ಒಂದೇ ಅಚ್ಚಿನಲ್ಲಿ ಬರುವ ವಸ್ತುಗಳಲ್ಲವಲ್ಲಾ. ಎಲ್ಲರಿಗೂ ಒಂದೇ ರೀತಿಯ ಬದುಕು ಸಿಗುವುದಿಲ್ಲವಲ್ಲಾ. ಮತ್ಯಾಕೆ ಅಂಧಾನುಕರಣೆ. ನಮ್ಮ ಬದುಕನ್ನು ಬಂದಂತೆ ಅನುಭವಿಸಿ ಬದುಕಿ, ಬದುಕಲು ಕಲಿಯುವುದನ್ನು ಬಿಡಿ.

Leave a Reply

Your email address will not be published. Required fields are marked *

Back To Top