Friday, 22nd June 2018  

Vijayavani

ಕೊಲೆ ಆರೋಪಿ ಬಂಧಿಸುವ ವೇಳೆ ಹೈಡ್ರಾಮ - ಖಾಕಿ ಮೇಲೆಯೇ ಹಲ್ಲೆಗೆ ಯತ್ನ - ಹಂತಕನ ಮೇಲೆ ಖಾಕಿ ಫೈರಿಂಗ್‌        ಹಣಕಾಸು ವಿಷಯಕ್ಕೆ ಗಂಡಹೆಂಡತಿ ನಡುವೆ ಫೈಟ್‌ - ಪತ್ನಿ ಮೇಲೆ ಪತಿ ಶೂಟೌಟ್‌ - ನಾಪತ್ತೆಯಾಗಿರೋ ಹಂತಕನಿಗಾಗಿ ಖಾಕಿ ತಲಾಶ್‌        ಅಗರ್ ಬತ್ತಿ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ - ಶಾರ್ಟ್‌ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ಕಾರ್ಖಾನೆ - ಬೆಂಗಳೂರಿನ ಕೆಪಿ ಅಗ್ರಹಾರದಲ್ಲಿ ಘಟನೆ        ಸರ್ಕಾರದ ಅಸ್ತಿತ್ವಕ್ಕೆ ಗಂಡಾಂತರ - ಸಿಎಂ ಕೈಗೆ ಸಿಕ್ಕಿದೆ ಗುಪ್ತಚರ ವರದಿ - ಸರ್ಕಾರ ಉಳಿಸಿಕೊಳ್ಳಲು ಎಚ್‌ಡಿಕೆ ಮಾಸ್ಟರ್‌ ಪ್ಲಾನ್‌        ಹಸಿರ ಸಿರಿ ನಡುವೆ ದುರ್ನಾಥ - ವಾಕ್‌ ಹೋದವರಿಗೆ ವಾಕರಿಕೆ - ಗಬ್ಬು ನಾರುತ್ತಿದೆ ಕಬ್ಬನ್‌ಪಾರ್ಕ್‌        ಜನದಟ್ಟಣೆ ನಿಯಂತ್ರಣಕ್ಕೆ BMRCL ಪರಿಹಾರ - ಮೆಟ್ರೋ ರೈಲಿಗೆ 3 ಬೋಗಿಗಳ ಸೇರ್ಪಡೆ - ಇಂದಿನಿಂದ ನೇರಳೆ ಮಾರ್ಗದಲ್ಲಿ ಓಡಾಟ       
Breaking News

ಬದಲಾಯ್ತು ನಕ್ಷೆ, ಹಾನಿಗೀಡಾಯ್ತು ಸುರಕ್ಷೆ

Wednesday, 30.08.2017, 3:05 AM       No Comments

ಶತಮಾನದ ಹಿಂದೆ ಹಿಂದೂಮಹಾಸಾಗರದತ್ತ ರಷಿಯನ್ನರ ಆಗಮನ ನಿಗ್ರಹಿಸಲು ಬ್ರಿಟಿಷರು ಭಾರತವನ್ನು ತುಂಡರಿಸಿ ಪಾಕಿಸ್ತಾನವನ್ನು ಸೃಷ್ಟಿಸುವ ಯೋಜನೆ ರೂಪಿಸಿದರು. ಈಗ ಅದೇ ಪಾಕಿಸ್ತಾನದ ಮೂಲಕ ಅದೇ ಹಿಂದೂಮಹಾಸಾಗರಕ್ಕೆ ಬರಲು ಚೀನೀಯರು ಹವಣಿಸುತ್ತಿದ್ದಾರೆ. ಇದು ಭಾರತಕ್ಕೆ ಭಾರಿ ಅಪಾಯದ ಸನ್ನಿವೇಶ ತಂದೊಡ್ಡಿದೆ.

ಎಪ್ಪತ್ತು ವರ್ಷಗಳ ಹಿಂದೆ ಘಟಿಸಿದ ಭಾರತೀಯ ಉಪಖಂಡದ ವಿಭಜನೆಯ ದುಷ್ಪರಿಣಾಮಗಳ ಹಲವಾರು ಮುಖಗಳು ಇಂದಿನ ತಲೆಮಾರಿರಲಿ, ಆಗಿನ ತಲೆಮಾರಿಗೂ ಸ್ಪಷ್ಟವಾಗಿ ಅರಿವಿದ್ದವೋ ಇಲ್ಲವೋ. ಹತ್ತಿ ಬೆಳೆಯುವ ಪ್ರದೇಶಗಳು ಪಶ್ಚಿಮ ಪಾಕಿಸ್ತಾನಕ್ಕೂ, ಸೆಣಬು ಬೆಳೆಯುವ ಪ್ರದೇಶಗಳು ಪೂರ್ವ ಪಾಕಿಸ್ತಾನಕ್ಕೂ ಸೇರಿಹೋಗಿ, ಅವೆರಡನ್ನೂ ಸಂಸ್ಕರಿಸುವ ಕಾರ್ಖಾನೆಗಳು ಭಾರತದಲ್ಲುಳಿದುದರಿಂದಾಗಿ ಎರಡೂ ದೇಶಗಳು ಪ್ರಾರಂಭಿಕ ವರ್ಷಗಳಲ್ಲಿ ಅನುಭವಿಸಿದ ಕಷ್ಟಗಳೂ ಸೇರಿದಂತೆ ಆರ್ಥಿಕ ದುಷ್ಪರಿಣಾಮಗಳ ಅರೆಬರೆ ಪರಿಚಯ ಪಠ್ಯಪುಸ್ತಕಗಳ ಮೂಲಕ ಶಾಲಾದಿನಗಳಲ್ಲಿ ಲಭ್ಯವಾಗುವುದೇನೋ ನಿಜ. ಆದರೆ ವಿಭಜನೆಯೆಂಬ ಘೊರ ದುರಂತ ಏಷಿಯಾ ಖಂಡದ ದಕ್ಷಿಣಾರ್ಧ ಭಾಗದ ಭೂ-ರಾಜಕೀಯ (Geo-politics) ವಸ್ತುಸ್ಥಿತಿಗಳನ್ನು ಅಲ್ಲೋಲಕಲ್ಲೋಲಗೊಳಿಸಿದ್ದರ, ಮತ್ತದರ ಪರಿಣಾಮವಾಗಿ ಭಾರತದ ಸುರಕ್ಷತೆಯ ಮೇಲೆ ಬಂದೆರಗಿದ ಅಪಾಯಗಳ ಕಿಂಚಿತ್ ಪರಿಚಯವೂ ಸಾಮಾನ್ಯ ಭಾರತೀಯನಿಗಿಲ್ಲ. ಆ ಕೊರತೆಯನ್ನು ತುಂಬಿಕೊಡುವ ಒಂದು ಪುಟ್ಟ ಪ್ರಯತ್ನ ಇಂದಿನ ಅಂಕಣದಲ್ಲಿ.

ಮಧ್ಯಯುಗದಲ್ಲಿ ಭಾರತ ಮತ್ತು ಚೀನಾಗಳು ಒಟ್ಟಿಗೆ ಜಗತ್ತಿನ ರಫ್ತುವಹಿವಾಟಿನಲ್ಲಿ ಶೇಕಡಾ ಅರವತ್ತರಷ್ಟು ಪಾಲು ಹೊಂದಿದ್ದವು. ನಂತರದ ದಿನಗಳಲ್ಲಿ ಯೂರೋಪಿಯನ್ ವಸಾಹತುಶಾಹಿ ಹಾಗೂ ಆರ್ಥಿಕ ಸಾಮ್ರಾಜ್ಯಶಾಹಿಯ ಕಾರಣದಿಂದಾಗಿ ಭಾರತದ ಅರ್ಥವ್ಯವಸ್ಥೆ ಕುಸಿದುಹೋಯಿತು. ಇದಕ್ಕೆ ವಿರುದ್ಧವಾಗಿ, ಭಾರತದ ಸೇನಾ ಹಾಗೂ ಸಾಮರಿಕ ಸ್ಥಾನಮಾನಗಳು ಗಣನಿಯವಾಗಿ ಏರಿದವು ಹಾಗೂ ಏಷಿಯಾ ಖಂಡದ ದಕ್ಷಿಣಾರ್ಧ ಭಾಗ ಭಾರತದ ಸೇನಾ ಹಾಗೂ ಸಾಮರಿಕ ನಿಯಂತ್ರಣಕ್ಕೊಳಪಟ್ಟಿತು. ಇಪ್ಪತ್ತನೆಯ ಶತಮಾನದಲ್ಲಿ ಜಪಾನ್ ಪ್ರಾಬಲ್ಯಕ್ಕೆ ಬರುವವರೆಗೂ ಭಾರತ ಇಡೀ ಪೂರ್ವಾರ್ಧಗೋಲದ ಏಕಮೇವಾದ್ವಿತೀಯ ಸೇನಾಶಕ್ತಿಯಾಗಿತ್ತು. ಅಲ್ಲದೇ, ಭಾರತಕ್ಕೆ ಯಾವ ದಿಕ್ಕಿನಿಂದಲೂ ಅಪಾಯವೊದಗದಂತೆಯೂ ಬ್ರಿಟನ್ ಯೋಜನೆ ರೂಪಿಸಿತ್ತು. ಭಾರತಕ್ಕೆ ಐತಿಹಾಸಿಕವಾಗಿ ದಾಳಿಯ ದಿಕ್ಕಾದ ಉತ್ತರದಿಂದ ಇತ್ತ ಬರುವ ಯಾವುದೇ ವೈರಿಸೇನೆಯನ್ನು ಅಫ್ಘಾನಿಸ್ತಾನದಲ್ಲೇ ತಡೆಯುವ ವ್ಯವಸ್ಥೆಯಾಗಿತ್ತು. ಹಾಗೆಯೇ, ಪಶ್ಚಿಮದಿಂದ ಎದುರಾಗುವ ಅಪಾಯವನ್ನು ನಿಯಂತ್ರಿಸಲು ಈಗಿನ ಯೆಮೆನ್​ನಲ್ಲಿರುವ ಏಡನ್​ನಲ್ಲಿಯೂ, ಪೂರ್ವದಿಂದ ಎರಗಿಬರುವ ವೈರಿಸೇನೆಯನ್ನು ಸಿಂಗಪುರ್​ನಲ್ಲಿಯೂ ತಡೆದು ಹಿಮ್ಮೆಟ್ಟಿಸುವ ಸೇನಾವ್ಯವಸ್ಥೆ ನಿರ್ವಣವಾಗಿತ್ತು (ಒಮ್ಮೆ ಮಾತ್ರ ಸಿಂಗಪುರ್ ತಡೆಗೋಡೆಯನ್ನು ದಾಟಿ, ಬರ್ವವನ್ನು ಪದಾಕ್ರಾಂತಗೊಳಿಸಿಕೊಂಡು ನಾಗಾಲ್ಯಾಂಡ್​ವರೆಗೆ ನುಗ್ಗಿಬರುವ ಸಾಮರ್ಥ್ಯ ತೋರಿದ್ದು ಜಪಾನೀಯರು, ಎರಡನೆಯ ಮಹಾಯುದ್ಧದ ದಿನಗಳಲ್ಲಿ).

ಆದರೆ, ದೇಶವಿಭಜನೆ ರಾತ್ರಿ ಬೆಳಗಾಗುವಷ್ಟರಲ್ಲಿ ಇದೆಲ್ಲವನ್ನೂ ಬದಲಿಸಿಬಿಟ್ಟಿತು. ದೂರದ ಅಫ್ಘಾನಿಸ್ತಾನ ಹಾಗೂ ಏಡನ್​ನಾಚೆಗೇ ನಿಲ್ಲುವಂತಿದ್ದ ವೈರಿ ಸೇನೆ ರಾಜಧಾನಿ ದೆಹಲಿಯಿಂದ ಕೆಲವೇ ನೂರು ಕಿಲೋಮೀಟರ್​ಗಳಷ್ಟು ಹತ್ತಿರದ ಸಟ್ಲೆಜ್ ನದಿತೀರಕ್ಕೆ ಬಂದುಬಿಟ್ಟಿತು. ‘ಇನ್ನು ಹದಿನೈದು ದಿನಗಳಲ್ಲಿ ನಾವು ದೆಹಲಿಯಲ್ಲಿರುತ್ತೇವೆ, ಕೆಂಪುಕೋಟೆಯ ಮೇಲೆ ಪಾಕಿಸ್ತಾನೀ ಧ್ವಜವನ್ನು ಹಾರಿಸುತ್ತೇವೆ‘ ಎಂದು ಪಾಕ್ ಅಧ್ಯಕ್ಷ ಜ. ಅಯೂಬ್ ಖಾನ್ 1965ರ ಯುದ್ಧವನ್ನು ಆರಂಭಿಸುವ ಮೊದಲು ಘೊಷಿಸುವ ಉದ್ದಟತನ ತೋರಿದ್ದು ವಿಭಜನೆಯ ಪರಿಣಾಮವಾಗಿ ಭಾರತದ ರಕ್ಷಣಾಸ್ಥಿತಿ ಅದೆಷ್ಟು ಸೂಕ್ಷ್ಮವಾಗಿಬಿಟ್ಟಿತೆನ್ನುವ ಬಗ್ಗೆ ನಿಮಗೊಂದು ಸಣ್ಣ ಆದರೆ ಮಹತ್ವದ ಸುಳಿವು ನೀಡಬಲ್ಲುದು. ಪೂರ್ವದತ್ತ ಹೊರಳುವುದಾದರೆ, ಬಂಗಾಲ ಮತ್ತು ಅಸ್ಸಾಮ್ಳನ್ನು ತುಂಡರಿಸಿದ್ದರಿಂದಾಗಿ ಇಡೀ ಪೂರ್ವೇತ್ತರ ರಾಜ್ಯಗಳು ‘ಸಿಲಿಗುರಿ ಕಾರಿಡಾರ್‘ ಎಂಬ ಕೇವಲ ಹದಿನಾರು ಕಿಲೋಮೀಟರ್​ಗಳಷ್ಟು ಕಿರಿದಾದ ತೆಳು ದಾರದಿಂದ ಭಾರತದ ಮುಖ್ಯಭೂಮಿಗೆ ಅಂಟಿಕೊಂಡು ನೇತಾಡುವಂತಾಯಿತು. ಉತ್ತರ ಬಂಗಾಲದಿಂದ ಹಿಡಿದು ಇಡೀ ಪೂರ್ವೇತ್ತರ ರಾಜ್ಯಗಳನ್ನು ದೇಶದ ಮುಖ್ಯ ಭೂಭಾಗಕ್ಕೆ ಸಂರ್ಪಸುವ ರಸ್ತೆ, ರೈಲು ಮಾರ್ಗಗಳೆಲ್ಲವೂ ಈ ಇಕ್ಕಟ್ಟಿನ ಕಾರಿಡಾರ್ ಮೂಲಕವೇ ಸಾಗಬೇಕು. ಬೇರೆ ದಾರಿಯೇ ಇಲ್ಲ. ಪಾಕಿಸ್ತಾನವಾಗಲೀ, ಚೀನಾವಾಗಲೀ ಅಥವಾ ಅವೆರಡೂ ಒಟ್ಟುಗೂಡಿ ಒಂದು ಗಟ್ಟಿನಿರ್ಧಾರದ ಹೊಡೆತದಿಂದ ಪೂರ್ವೇತ್ತರ ರಾಜ್ಯಗಳನ್ನು ಕತ್ತರಿಸಿ ತಮ್ಮೊಳಗೆ ಹರಿದು ಹಂಚಿಕೊಳ್ಳುವಂತಹ ಸ್ಥಿತಿ ನಿರ್ವಣವಾಯಿತು. ಇದಕ್ಕೆ ಸಂಬಂಧಿಸಿದಂತೆ ನಮ್ಮ ನಾಯಕರ ಬೇಜವಾಬ್ದಾರಿ ಹಾಗೂ ದೂರದೃಷ್ಟಿಹೀನ ನಡವಳಿಕೆಯೊಂದನ್ನು ಇಲ್ಲಿ ಹೇಳಲೇಬೇಕು. ದೇಶವಿಭಜನೆಯ ಪ್ರಾರಂಭಿಕ ಯೋಜನೆಯ ಪ್ರಕಾರ ಇಡೀ ಅವಿಭಜಿತ ಅಸ್ಸಾಮ್ ಪ್ರಾಂತ್ಯ (ಅಂದರೆ ಈಗಿನ ಅಸ್ಸಾಮ್ ಮೇಘಾಲಯ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಹಾಗೂ ಮಿಜೋರಾಮ್ ಸೇರಿದ್ದ ವಿಶಾಲ ಪ್ರಾಂತ್ಯ) ಭಾರತಕ್ಕೆ ಸೇರಬೇಕಾಗಿತ್ತು. ಆದರೆ ಪೂರ್ವ ಬಂಗಾಲಕ್ಕೆ ಹೊಂದಿಕೊಂಡ ಸಿಲ್ಹೆಟ್ ಜಿಲ್ಲೆಯಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಿದ್ದಾರೆ ಎನ್ನುವ ಕಾರಣವೊಡ್ಡಿ ಆ ಜಿಲ್ಲೆಯನ್ನು ಪೂರ್ವ ಪಾಕಿಸ್ತಾನಕ್ಕೆ ಕೊಡಬೇಕೆಂದು ಮುಸ್ಲಿಂ ಲೀಗ್ ಒತ್ತಾಯ ತಂದಿತು. ಅದಕ್ಕೆ ಸಮ್ಮತಿಸಿದ ಬ್ರಿಟಿಷ್ ಸರ್ಕಾರ ಸಿಲ್ಹೆಟ್​ನಲ್ಲಿ ಜನಮತಗಣನೆ ನಡೆಸಿ ಅದರ ಫಲಿತಾಂಶದ ಪ್ರಕಾರ ಆ ಜಿಲ್ಲೆಯನ್ನು ಪೂರ್ವ ಪಾಕಿಸ್ತಾನದ ಭಾಗವಾಗಿಸಿತು. ಆಗಿನ ವಾಸ್ತವವೆಂದರೆ, ಅಸ್ಸಾಮ್ ಸಿಲ್ಹೆಟ್​ನಲ್ಲಿ ಮುಸ್ಲಿಮರು ಅಧಿಕವಾಗಿದ್ದರೆ ಪೂರ್ವ ಬಂಗಾಲದ ಚಿತ್ತಗಾಂಗ್ ಜಿಲ್ಲೆಯಲ್ಲಿ ಹಿಂದೂಗಳು, ಬೌದ್ಧರು ಹಾಗೂ ಗಿರಿಜನರು ಸೇರಿದಂತೆ ಮುಸ್ಲಿಮೇತರರು ಅಧಿಕವಾಗಿದ್ದರು. ಈ ಕಾರಣವೊಡ್ಡಿ ಆ ಜಿಲ್ಲೆಯನ್ನು ಭಾರತಕ್ಕೆ ನೀಡುವಂತೆ ಕಾಂಗ್ರೆಸ್ ಕೇಳಬೇಕಾಗಿತ್ತು. ನಿಜ ಹೇಳಬೇಕೆಂದರೆ, ಭೌಗೋಳಿಕ ಕಾರಣಗಳಿಂದಾಗಿ ತಮ್ಮ ಜಿಲ್ಲೆ ಪೂರ್ವ ಪಾಕಿಸ್ತಾನಕ್ಕೆ ಸೇರಿಹೋಗಬಹುದೆಂದು ಹೆದರಿದ ಅಲ್ಲಿನ ಜನರ ನಿಯೋಗವೊಂದು ಜವಾಹರ್​ಲಾಲ್ ನೆಹರೂರನ್ನು ಖುದ್ದಾಗಿ ಭೇಟಿಯಾಗಿ ಧರ್ಮದ ಆಧಾರದ ಮೇಲೆ ಚಿತ್ತಗಾಂಗ್ ಅನ್ನು ಭಾರತಕ್ಕೆ ಸೇರಿಸಬೇಕೆಂದು ಬ್ರಿಟಿಷ್ ಸರ್ಕಾರಕ್ಕೆ ಬೇಡಿಕೆ ಇಡುವಂತೆ ವಿನಂತಿಸಿಕೊಂಡಿತು ಕೂಡಾ. ಅವರ ಹಿತಾಸಕ್ತಿಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದಾಗಿ ವಾಗ್ದಾನವಿತ್ತ ನೆಹರೂ ಮರುಗಳಿಗೆ ಅದನ್ನು ಮರೆತಂತೆ ಕಾಣುತ್ತದೆ. ಪರಿಣಾಮವಾಗಿ ಚಿತ್ತಗಾಂಗ್ ಪೂರ್ವ ಪಾಕಿಸ್ತಾನಕ್ಕೆ ಸೇರಿಹೋಯಿತು. ಒಂದುವೇಳೆ ಆ ಜಿಲ್ಲೆ ನಮಗೆ ದಕ್ಕಿದ್ದರೆ ಪೂರ್ವೇತ್ತರ ಭಾರತಕ್ಕೆ ಅದೊಂದು ಹೆಬ್ಬಾಗಿಲಾಗುತ್ತಿತ್ತು. ಕೊಲ್ಕತಾದಿಂದ ಚಿತ್ತಗಾಂಗ್ ಬಂದರಿಗೆ ವಾಯು ಹಾಗೂ ಜಲಸಂಪರ್ಕ, ಅಲ್ಲಿಂದಾಚೆಗೆ ಪೂರ್ವೇತ್ತರ ರಾಜ್ಯಗಳ ಮೂಲೆಮೂಲೆಗೆ ರಸ್ತೆ ಹಾಗೂ ರೈಲು ಸಂಪರ್ಕಜಾಲವನ್ನು ನಿರ್ವಿುಸಬಹುದಾಗಿತ್ತು. ಚಿತ್ತಗಾಂಗ್ ನಮಗೆ ದಕ್ಕಿದ್ದರೆ ಪೂರ್ವ ಪಾಕಿಸ್ತಾನ (ಇಂದಿನ ಬಾಂಗ್ಲಾದೇಶಕ್ಕೆ) ಮತ್ತೊಂದು ಹೇಳಿಕೊಳ್ಳುವ ಬಂದರೇ ಇರುತ್ತಿರಲಿಲ್ಲ. ಚಿತ್ತಗಾಂಗ್ ಹೊರತಾದ ಉಳಿದ ಪೂರ್ವ ಪಾಕಿಸ್ತಾನದ ತೀರದಲ್ಲಿ ಭೌಗೋಳಿಕ ಕಾರಣಗಳಿಂದಾಗಿ ಸಾಗರದ ನೀರಿನ ಮಟ್ಟದಲ್ಲಿ ನಿರಂತರವಾಗಿ ಗಣನೀಯ ಏರುಪೇರಾಗುವುದರಿಂದ ಅಲ್ಲಿ ಬೇರಾವ ಬಂದರೂ ವರ್ಷವಿಡೀ ಕಾರ್ಯನಿರ್ವಹಿಸಲಾಗುವುದಿಲ್ಲ. ಹೀಗಾಗಿ ಕೊಲ್ಕತಾ ಮತ್ತು ಚಿತ್ತಗಾಂಗ್​ಗಳ ನಡುವಿನ ಜಲಸಂಪರ್ಕದ ಕೂದಲನ್ನೂ ಕೊಂಕಿಸುವುದು (ಪೂರ್ವ) ಪಾಕಿಸ್ತಾನಕ್ಕೆ ಸಾಧ್ಯವಾಗುತ್ತಲೇ ಇರಲಿಲ್ಲ. ಬದಲಾಗಿ, ಪೂರ್ವೇತ್ತರ ರಾಜ್ಯಗಳಿಗೆ ನೇರ ಸಂಪರ್ಕ ಪಡೆದುಕೊಳ್ಳುವುದಲ್ಲದೇ, ಪೂರ್ವ ಪಾಕಿಸ್ತಾನವನ್ನು ಬೇಕೆಂದಾಗ ದಿಗ್ಬಂಧನಕ್ಕೊಳಪಡಿಸುವ, ಆ ಮೂಲಕ ಪಶ್ಚಿಮದಲ್ಲಿ ಕಾಶ್ಮೀರ ಹಾಗೂ ರಣ್ ಆಫ್ ಕಛ್ಛ್​ನಲ್ಲಿ ಪಾಕಿಸ್ತಾನ ಯಾವುದೇ ಹರಕತ್ ನಡೆಸದಂತೆ ಆ ದೇಶವನ್ನು ಬ್ಲಾ್ಯಕ್​ವೆುೕಲ್ ಮಾಡುವ ಅವಕಾಶ ನಮಗೊದಗಿರುತ್ತಿತ್ತು. ಆದರೆ ನಮ್ಮ ನಾಯಕರು ಇದಾವುದನ್ನೂ ಮುಂಗಾಣಲಿಲ್ಲ. ಮುಸ್ಲಿಮ್ಾಹುಳ್ಯ ಪ್ರದೇಶಗಳೆಲ್ಲವನ್ನೂ ಪಡೆದುಕೊಳ್ಳಲು ಮುಸ್ಲಿಂ ಲೀಗ್ ನಾಯಕರು ಲೆಕ್ಕ ಹಾಕಿಕೊಂಡು ಮುಂದುವರಿದರೆ ನಮ್ಮ ನಾಯಕರು ಎಷ್ಟೊತ್ತಿಗೆ ಪಾಕಿಸ್ತಾನವನ್ನು ನಿರ್ವಿುಸಿ ಜಿನ್ನಾರನ್ನು ಅಲ್ಲಿಗೆ ಅಟ್ಟಿ ಅಧಿಕಾರ ಲಪಟಾಯಿಸುತ್ತೇವೋ ಎನ್ನುವತ್ತ ಗಮನ ಕೊಟ್ಟರು. ತಾವು ಮುಂದೆ ಆಳಲಿರುವ ಅಂದರೆ ರಕ್ಷಿಸಬೇಕಾದ ದೇಶದ ಸುರಕ್ಷತೆಗೆ ಯಾವ ಪೂರ್ವಯೋಜನೆಗಳು ಅಗತ್ಯ ಎನ್ನುವ ಸಾಮಾನ್ಯಜ್ಞಾನವೂ ನಮ್ಮ ನಾಯಕರಿಗಿರಲಿಲ್ಲ. ಅಂತಹ ಅಧಿಕಾರಲಾಲಸಿ ಸ್ವಾರ್ಥಿಗಳನ್ನು ‘ಪಂಡಿತ‘ ಎಂಬ ಉಪಾಧಿಯಿಂದ ಸಂಬೋಧಿಸಬೇಕಾದ ದುರ್ಗತಿ ನಮ್ಮದು!

ರಕ್ಷಣಾಸ್ಥಿತಿಯಲ್ಲಿ ನಮ್ಮ ಪರಿಸ್ಥಿತಿ ಹೀಗೆ ಹದಗೆಟ್ಟದ್ದು ವಾಸ್ತವವಾಗಿ ಅನುಕೂಲ ಮಾಡಿಕೊಟ್ಟದ್ದು ಚೀನಾಗೆ. ನಿಜ ಹೇಳಬೇಕೆಂದರೆ, ಭಾರತೀಯ ಉಪಖಂಡದ ವಿಭಜನೆಯಿಂದಾಗಿ ಅತಿಹೆಚ್ಚು ಲಾಭವಾದದ್ದು ಚೀನಾಗೆ. ನಮ್ಮ ದೇಶದ ವಿಭಜನೆಯಾದ ಎರಡು ವರ್ಷಕ್ಕೆ ಅದರೆ 1949ರಲ್ಲಿ ಚೀನಾ ತನ್ನ ಐಕ್ಯತೆ ಸಾಧಿಸಿತು. ಇದು ಹಲವು ಅರ್ಥಗಳಲ್ಲಿ ವಿಧಿ ನಮಗೆ ಇಟ್ಟ ಎರಡನೆಯ ದೊಡ್ಡ ಬರೆ.

ಕಳೆದ ಐದು ದಶಕಗಳಲ್ಲಿ ವಿಸ್ತರಣವಾದಿಯಾಗಿ ಬೆಳೆದ ಚೀನಾ ತನ್ನ ಹಾದಿಯಲ್ಲಿ ಭಾರತ ತನಗೆ ಪ್ರತಿಸ್ಪರ್ಧಿಯಾಗದಂತೆ ತಡೆಯಲೆಂದೇ ಭಾರತವನ್ನು ದಕ್ಷಿಣ ಏಷಿಯಾದ ಎಲ್ಲೆಯೊಳಗೇ ಕಟ್ಟಿಹಾಕುವ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತಂದಿದೆ. ತನ್ನೆಲ್ಲಾ ಭಾರತ-ವಿರೋಧಿ ಯೋಜನೆಗಳಿಗೆ ಚೀನಾ ಬಳಸಿಕೊಳ್ಳುತ್ತಿರುವುದು ಪಾಕಿಸ್ತಾನವನ್ನು. ಒಂದುವೇಳೆ ಪಾಕಿಸ್ತಾನ ಇಲ್ಲದಿದ್ದಲ್ಲಿ ಚೀನಾದ ತಂತ್ರಗಳು ದಕ್ಷಿಣ ಏಷಿಯಾದಲ್ಲಿ ನಡೆಯುತ್ತಲೇ ಇರಲಿಲ್ಲ. ಹಾಗೆ ನೋಡಿದರೆ, ಹ್ಯಾನ್ ಚೀನೀಯರ ನೆಲೆಗಳಿಗೂ ಪಾಕಿಸ್ತಾನವೂ ಸೇರಿದಂತೆ ಭಾರತೀಯ ಉಪಖಂಡಕ್ಕೂ ನೇರ ಭೌಗೋಳಿಕ ಸಂಪರ್ಕವಿಲ್ಲ. ಅದು ಏರ್ಪಡುವುದು ಉಯ್ಘರ್ ಝಿನ್​ಜಿಯಾಂಗ್ (ಹಿಂದಿನ ಸಿಂಕಿಯಾಂಗ್) ಹಾಗೂ ಟಿಬೆಟ್​ಗಳ ಮೂಲಕ. ಕಳೆದ ಎರಡು ಸಹಸ್ರಮಾನಗಳಲ್ಲಿ ಕಂಡುಬರುವ ಚೀನೀ ಸಾಮ್ರಾಜ್ಯದ ವೈಶಿಷ್ಟ್ಯವೆಂದರೆ ಯಾವಾಗ ಪೀಕಿಂಗ್​ನಲ್ಲಿ ಪ್ರಬಲ ಕೇಂದ್ರ ಸರಕಾರವಿರುತ್ತಿತ್ತೋ ಆಗೆಲ್ಲಾ ಅದರ ಅಧಿಕಾರ ಹ್ಯಾನ್ ಚೀನೀ ಪ್ರದೇಶಗಳನ್ನು ದಾಟಿ ಸುತ್ತಲಿನ ಕೊರಿಯಾ, ಮಂಚೂರಿಯಾ, ಮಂಗೋಲಿಯಾ, ಝಿನ್​ಜಿಯಾಂಗ್, ಟಿಬೆಟ್ ಮತ್ತು ವಿಯೆಟ್ನಾಂಗಳ ಮೇಲೆ ವಿಸ್ತರಿಸುತ್ತಿತ್ತು. ಕೇಂದ್ರ ಸರಕಾರ ಯಾವಾಗ ದುರ್ಬಲವಾಗುತ್ತಿತ್ತೋ ಆಗೆಲ್ಲಾ ಈ ಪ್ರದೇಶಗಳು ಸ್ವತಂತ್ರವಾಗುತ್ತಿದ್ದವು ಮತ್ತು ಕೇಂದ್ರ ಸರಕಾರ ಮತ್ತೆ ಶಕ್ತಿಯುತವಾಗುವವರೆಗೂ ಅವುಗಳ ಸ್ವತಂತ್ರ ಅಸ್ತಿತ್ವ ಮುಂದುವರಿಯುತ್ತಿತ್ತು. ಹತ್ತೊಂಬತ್ತನೇ ಶತಮಾನದಲ್ಲಿ ಯೂರೋಪಿಯನ್ ವಸಾಹತುಶಾಹೀ ಒತ್ತಡ ಮತ್ತು ಆಂತರಿಕ ಕ್ಷೋಭೆಗಳಿಂದಾಗಿ ಚೀನೀ ರಾಜಪ್ರಭುತ್ವದ ಶಕ್ತಿ ಕುಂದಿದಾಗ ಇದೇ ಪ್ರಕ್ರಿಯೆ ಪುನರಾವರ್ತನೆಯಾಯಿತು. ಆಗ ಸ್ವತಂತ್ರವಾದ ಝಿನ್​ಜಿಯಾಂಗ್ ಮೇಲೆ ರಷಿಯನ್ನರ ಪ್ರಭಾವ ಉಂಟಾಯಿತು. 1917ರ ಬೋಲ್ಷೆವಿಕ್ ಕ್ರಾಂತಿ ಹಾಗೂ ಎರಡನೆಯ ಮಹಾಯುದ್ಧದ ನಡುವಿನ ಅವಧಿಯಲ್ಲಿ ಇಲ್ಲಿ ಚೀನೀಯರ ರಾಜಕೀಯ ಪ್ರಭಾವ ಸಂಪೂರ್ಣವಾಗಿ ಇಲ್ಲವಾಗಿ ಒಂದು ಹಂತದಲ್ಲಿ ಇದು ‘ಸಿಂಕಿಯಾಂಗ್ ಸೋವಿಯೆತ್ ಸೋಷಿಯಲಿಸ್ಟ್ ರಿಪಬ್ಲಿಕ್‘ ಎಂಬ ಹೆಸರಿನಲ್ಲಿ ಸೋವಿಯೆತ್ ಯೂನಿಯನ್​ನ ಭಾಗವಾಗುವಂತೆಯೂ ಕಂಡಿತ್ತು. ಆದರೆ 1949ರ ಅಕ್ಟೋಬರ್ 1ರಂದು ಚೀನಾದಲ್ಲಿ ಮಾವೋ ನೇತೃತ್ವದ ಕಮ್ಯೂನಿಸ್ಟ್ ಸರಕಾರ ಸ್ಥಾಪನೆಯಾಗುತ್ತಿದ್ದಂತೇ ಕಮ್ಯೂನಿಸ್ಟ್ ಭ್ರಾತೃತ್ವದ ಹೆಸರಿನಲ್ಲಿ ರಷಿಯನ್ನರು ಝಿನ್​ಜಿಯಾಂಗ್​ನಿಂದ ಹೊರನಡೆದು ಚೀನೀಯರಿಗೆ ತಳವೂರಲು ಅವಕಾಶ ಮಾಡಿಕೊಟ್ಟರು. ಆದರೆ ಅಷ್ಟರಲ್ಲಾಗಲೇ ಅಲ್ಲಿನ ಬಹುಸಂಖ್ಯಾತ ಉಯ್ಘರ್ ಮುಸ್ಲಿಂ ನಿವಾಸಿಗಳಲ್ಲಿ ಸ್ವತಂತ್ರ ಅಸ್ತಿತ್ವದ ವಾಂಛೆ ಉಗ್ರವಾಗಿ ಅವರು ‘ಪೂರ್ವ ತುರ್ಕಿಸ್ತಾನ್‘ ಎಂಬ ಹೆಸರಿನಲ್ಲಿ ಸ್ವತಂತ್ರ ದೇಶವನ್ನು ನಿರ್ವಿುಸಲು ಮುಂದಾದರು. ಆದರೆ, ‘ಕಳೆದುಹೋದ‘ ಪ್ರದೇಶಗಳನ್ನು ಮತ್ತೆ ತಾಯಿನಾಡಿನೊಂದಿಗೆ ವಿಲೀನಗೊಳಿಸುವ ಕಾರ್ಯಕ್ರಮವನ್ನು ರೂಪಿಸಿದ ಚೀನೀ ಕಮ್ಯೂನಿಸ್ಟ್ ಸರಕಾರ ಸೇನೆಯನ್ನು ಝಿನ್​ಜಿಯಾಂಗ್​ಗೆ ಅಟ್ಟಿತು. ‘ವಿವಾದ‘ವನ್ನು ಶಾಂತಿಯುತವಾಗಿ ಬಗೆಹರಿಸಲೋಸುಗ ಪೀಕಿಂಗ್​ಗೆ ತೆರಳಿದ ಸ್ಥಳೀಯ ನಾಯಕರ ವಿಮಾನ ಅಪಘಾತಕ್ಕೀಡಾಗಿ (?) ಅಲ್ಲಿದ್ದ ಉಯ್ಘರ್ ನಾಯಕರೆಲ್ಲಾ ಮೃತಪಟ್ಟು ‘ಸಂಧಾನ‘ಕ್ಕೆ ಅವಕಾಶವಿಲ್ಲವಾಯಿತು. ನಂತರ ಝಿನ್​ಜಿಯಾಂಗ್ ಅನ್ನು ಆಕ್ರಮಿಸಿಕೊಂಡು ಚೀನಾದ ಜತೆ ಒಂದುಗೂಡಿಸಲು ಚೀನೀ ಸೇನೆಗೆ ಹೆಚ್ಚುಕಾಲ ಬೇಕಾಗಲಿಲ್ಲ. ಮುಂದಿನ ಕೆಲವೇ ತಿಂಗಳಲ್ಲಿ ಚೀನೀ ಸೇನೆ ದಕ್ಷಿಣದ ಟಿಬೆಟ್ ಅನ್ನೂ ಆಕ್ರಮಿಸಿಕೊಂಡಿತು. ಅಲ್ಲಿಗೆ ಚೀನಾ ಭಾರತೀಯ ಉಪಖಂಡದ ಬಾಗಿಲಿಗೆ ಬಂತು. ಅದರಿಂದಾಗಿ ನಮಗಾಗಿರುವ ರಕ್ಷಣಾ ಹಾಗೂ ಆರ್ಥಿಕ ಕೋಟಲೆಗಳು ನಿಮಗೆ ತಿಳಿದೇ ಇವೆ.

ಇಂದು ಪಾಕಿಸ್ತಾನದ ಮೂಲಕ ಚೀನಾ ಹಿಂದೂ ಮಹಾಸಾಗರವನ್ನು ತಲುಪುವ ಮಹತ್ವಾಕಾಂಕ್ಷಿ ಯೋಜನೆಗಳನ್ನು ರೂಪಿಸಿದ್ದು, ಈ ಯೋಜನೆಗಳು ಯಶಸ್ವಿಯಾದರೆ ಭಾರತದ ಸುರಕ್ಷೆಗೆ ಇತಿಹಾಸದ ಯಾವ ಕಾಲದಲ್ಲೂ ಆಗಿಲ್ಲದಿದ್ದಷ್ಟು ಭೀಕರ ಪ್ರಮಾಣದ ಧಕ್ಕೆಯಾಗಲಿದೆ. ಹಾಗೆಯೇ, ಚೀನೀ ಯೋಜನೆಗಳು ಜಾಗತಿಕ ಭೂ-ರಾಜಕೀಯದ ಮೇಲೂ ಭಾರಿ ಪರಿಣಾಮ ಬೀರಲಿವೆ. ಒಂದು ಶತಮಾನದ ಹಿಂದೆ ಹಿಂದೂಮಹಾಸಾಗರದತ್ತ ರಷಿಯನ್ನರ ದಾಪುಗಾಲನ್ನು ತಡೆಯಲೋಸುಗ ಬ್ರಿಟಿಷರು ಭಾರತವನ್ನು ತುಂಡರಿಸಿ ಪಾಕಿಸ್ತಾನವನ್ನು ಸೃಷ್ಟಿಸುವ ಯೋಜನೆ ರೂಪಿಸಿದರು. ಈಗ ಇತಿಹಾಸದ ಒಂದು ಕ್ರೂರ ವಿರೋಧಾಭಾಸದಂತೆ ಅದೇ ಪಾಕಿಸ್ತಾನದ ಮೂಲಕ ಅದೇ ಹಿಂದೂಹಾಸಾಗರಕ್ಕೆ ಬರಲು ಚೀನೀಯರು ಹವಣಿಸುತ್ತಿದ್ದಾರೆ. ಇದರ ದುಷ್ಪರಿಣಾಮಗಳು ಬದಲಾದ ಕಾಲಮಾನದಲ್ಲಿ ಬ್ರಿಟಿಷರನ್ನೇನೂ ಕಾಡುವುದಿಲ್ಲ. ಅವು ಕಾಡುವುದೇನಿದ್ದರೂ ದ್ವಿತೀಯ ಜಾಗತಿಕ ಸಮರಾನಂತರ ಈ ವಲಯದ ಸಾಮರಿಕ ಅಧಿಪತ್ಯವನ್ನು ಬ್ರಿಟನ್​ನಿಂದ ತನ್ನ ಕೈಗೆ ತೆಗೆದುಕೊಂಡಿರುವ ಅಮೆರಿಕಾವನ್ನು.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

Leave a Reply

Your email address will not be published. Required fields are marked *

Back To Top