Wednesday, 18th July 2018  

Vijayavani

ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅನುಮತಿ - ಕೇರಳ ಸರ್ಕಾರದಿಂದ ಗ್ರೀನ್​ಸಿಗ್ನಲ್        ಕೇಂದ್ರದಿಂದ ನೆರವಿನ ಮಹಾಪೂರ - ಕೃಷಿ ಯೋಜನೆ, ಮೆಗಾ ಡೈರಿ ಆರಂಭಕ್ಕೆ 900 ಕೋಟಿ ನೆರವು        ಸ್ಮಶಾನ ಜಾಗದ ವಿಚಾರವಾಗಿ ಜಟಾಪಟಿ - ಎರಡು ಗುಂಪುಗಳ ಮಧ್ಯೆ ಮಾರಾಮಾರಿ - ಘರ್ಷಣೆಯಲ್ಲಿ 50 ಮಂದಿಗೆ ಗಾಯ        ಕೃಷ್ಣಾ ನದಿಯಲ್ಲಿ ಪ್ರವಾಹದ ನರ್ತನ - ಯಾದಗಿರಿಯ ನೀಲಕಂಠನದೊಡ್ಡಿ ಗ್ರಾಮಕ್ಕೆ ಜಲದಿಗ್ಬಂಧನ - ಗ್ರಾಮಸ್ಥರು ತಲ್ಲಣ        ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಜಿಟಿಡಿ - ಬಳ್ಳಾರಿಗೆ ಕಳಿಸೋದಾಗಿ ಅಧಿಕಾರಿಗಳಿಗೆ ವಾರ್ನಿಂಗ್- ಚಪ್ಪಾಳೆ ಹೊಡೆದ ಸ್ಟೂಡೆಂಟ್ಸ್        ಎಲ್ಲೆಡೆ ಕೇಳಿಬರ್ತಿದೆ ಧೋನಿ ನಿವೃತ್ತಿ ವಿಷಯ - ಲೀಡ್ಸ್​​ನಲ್ಲಿ ಅಂಪೈರ್ ಬಳಿ ಬಾಲ್ ಪಡೆದಿದ್ದೇಕೆ - ಕ್ರಿಕೆಟಿಗೆ ಗುಡ್​​ಬೈ ಹೇಳ್ತಾರಾ ಮಾಹಿ       
Breaking News

ಬತ್ತಿದ ನದಿ, ಕೆರೆ-ಕಟ್ಟೆಗಳಿಗೆ ಬಂತು ಜೀವ ಕಳೆ

Friday, 13.10.2017, 3:03 AM       No Comments

ಬೆಂಗಳೂರು: ರಾಜ್ಯ ವಿವಿಧ ಜಿಲ್ಲೆಗಳಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ನಿರಂತರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಮತ್ತೊಂದೆಡೆ ದಶಕಗಳಿಂದ ಮಳೆಯಾಗದ ಕಾರಣ ಬತ್ತಿ ಬರಿದಾಗಿದ್ದ ಕೆರೆ-ಕಟ್ಟೆಗಳು, ಹಳ್ಳ-ಕೊಳ್ಳಗಳು ಮೈದುಂಬಿ ಹರಿಯುತ್ತಿದ್ದು, ಕೆಲವೆಡೆ ಕೆರೆ ಕೋಡಿ ಹೊಡೆದು ಅಪಾರ ಪ್ರಮಾಣದ ಬೆಳೆ, ಆಸ್ತಿಪಾಸ್ತಿ ನಷ್ಟವಾಗಿದೆ.

ದಾವಣಗೆರೆ, ಚಿತ್ರದುರ್ಗ, ಬೆಳಗಾವಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಕಲಬುರಗಿ, ಹುಬ್ಬಳ್ಳಿ, ಗದಗ, ಬೆಳಗಾವಿ ಜಿಲ್ಲೆಗಳಲ್ಲಿ ಮಳೆ ಮುಂದುವರಿದಿದ್ದು, ಬಳ್ಳಾರಿ ಶ್ರೀಕೃಷ್ಣದೇವ ರಾಯ ವಿವಿ ಜಲದಿಗ್ಬಂಧನಕ್ಕೆ ಒಳಗಾಗಿದೆ.

ಕೋಡಿ ಬಿದ್ದ ಕೆರೆಗಳು: ಚಿತ್ರದುರ್ಗದ ಐತಿಹಾಸಿಕ ಸಂತೆಹೊಂಡ, ಮಲ್ಲಾಪುರ ಕೆರೆ ದಶಕಗಳ ಬಳಿಕ ಕೋಡಿಬಿದ್ದಿವೆ. ಸಿಹಿನೀರು ಹೊಂಡ, ಚನ್ನಕೇಶ್ವರ ಹೊಂಡ, ಕೆಂಚಮಲ್ಲಪ್ಪನ ಹೊಂಡಗಳು ವಾರದಲ್ಲಿ 2ನೇ ಬಾರಿ ತುಂಬಿ ಹರಿದಿವೆ. ಹೊಸದುರ್ಗ ತಾಲೂಕು ಗುಡ್ಡದ ನೇರಲಕೆರೆಯ ದಶರಥ ವಜ್ರದಲ್ಲಿ ಬೆಟ್ಟದಿಂದ ನೀರು ಧುಮ್ಮುಕ್ಕಿತ್ತಿದ್ದು ಜಲಪಾತ ಸೃಷ್ಟಿಯಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಗುರುವಾರ ಬೆಳಗಿನವರೆಗೆ 30.3 ಮಿ.ಮೀ. ಮಳೆಯಾಗಿದ್ದು, 98 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಬುಧವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಕುಷ್ಟಗಿ ತಾಲೂಕಿನ ಹನುಮನಾಳ, ಪಟ್ಟಲಚಿಂತಿ ಸೇರಿ ಇತರ ಗ್ರಾಮಗಳಲ್ಲಿ ಸಜ್ಜೆ, ಜೋಳ, ಎಳ್ಳು, ತೊಗರಿ ಸೇರಿ ನೂರಾರು ಎಕರೆ ಬೆಳೆ ನೆಲಕ್ಕುರುಳಿದೆ. ಹಳ್ಳ, ನಾಲೆಗಳು ತುಂಬಿ ಹರಿದಿವೆ. ಹಿರೆಹಳ್ಳ ಜಲಾಶಯ ತುಂಬಿಹರಿದಿದೆ.

ಪ್ರವಾಹ ಸ್ಥಿತಿ

ಯಾದಗಿರಿ ಜಿಲ್ಲೆ ಡೋಣಿ ನದಿಗೆ ಪ್ರವಾಹ ಉಂಟಾಗಿದ್ದು ಸಮೀಪದ ಹೊರಹಟ್ಟಿ, ಬಪ್ಪರಗಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಸಂರ್ಪಣವಾಗಿ ಮುಳುಗಿದೆ. ಚಿಕ್ಕಬಳ್ಳಾಪುರ ಹಾಗೂ ದೊಡ್ಡಬಳ್ಳಾಪುರ ನಗರಕ್ಕೆ ನೀರು ಒದಗಿಸುವ ಜಕ್ಕಲಮಡಗು ಜಲಾಶಯ ಭರ್ತಿಯಾಗಿದೆ. ಬಾಗೇಪಲ್ಲಿ ತಾಲೂಕಿನ ಚಿತ್ರಾವತಿ ಜಲಾಶಯ ತುಂಬಿದ್ದು, ಜಿಲ್ಲೆಯಲ್ಲಿನ ಸಣ್ಣ ನೀರಾವರಿ ಇಲಾಖೆ ನಿರ್ವಿುಸಿದ 92 ಕೆರೆಗಳು ಕೋಡಿಯಾಗಿವೆ. ಕೋಲಾರ ಜಿಲ್ಲೆಯ 425ಕ್ಕೂ ಹೆಚ್ಚು ಕೆರೆಗಳು ಕೋಡಿ ಹರಿದಿವೆ. ತುಮಕೂರು ಜಿಲ್ಲೆಯ ಸುವರ್ಣಮುಖಿ, ಪಿನಾಕಿನಿ, ಜಯಮಂಗಲಿ ನದಿಗಳು ಮೈದುಂಬಿವೆ. ಪುರವರ ಹೋಬಳಿಯಲ್ಲಿ ಹರಿಯುವ ಜಯಮಂಗಲಿ 12 ವರ್ಷಗಳ ನಂತರ ತುಂಬಿದೆ.

ಸುವರ್ಣಾವತಿ, ಚಿಕ್ಕಹೊಳೆ ಭರ್ತಿ

ಬೆಳಗಾವಿ ನಗರ ಸೇರಿ ಬೈಲಹೊಂಗಲ, ಸವದತ್ತಿ, ರಾಮದುರ್ಗ ಭಾಗದಲ್ಲಿ ಮಳೆಯಾಗಿದ್ದು, ಬುಧವಾರ ಸಂಜೆ ಸುರಿದ ಮಳೆಗೆ ಮುಳುಗಡೆಯಾಗಿದ್ದ ಸವದತ್ತಿ ತಾಲೂಕಿನ ಉಗರಗೋಳ ಅಕ್ಕಪಕ್ಕದ ಮೂರು ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ. ಹಾಸನ ನಗರ ಸೇರಿ ಜಿಲ್ಲೆಯ ವಿವಿಧೆಡೆ ಮಳೆಯಾಗಿದೆ. ಚಾಮರಾಜನಗರ ತಾಲೂಕಿನ ಸುವರ್ಣಾವತಿ ಮತ್ತು ಚಿಕ್ಕಹೊಳೆ ಅವಳಿ ಜಲಾಶಯ ಭರ್ತಿಯಾಗಿವೆ. ಸವದತ್ತಿ ತಾಲೂಕಿನ ಚಿಕ್ಕುಂಬಿ ಗ್ರಾಮದಲ್ಲಿ 25ಕ್ಕೂ ಅಧಿಕ ಮನೆಗಳು ಕುಸಿದಿವೆ. ಅಥಣಿ ತಾಲೂಕಿನ ಕಕಮರಿ ಗ್ರಾಮದ ಹೊರವಲ ಯದ ಕನ್ನಾಳ ರಸ್ತೆ ಪಕ್ಕದಲ್ಲಿರುವ ಕಾಲವೆ ಒಡೆದು ರೈತರು ಬೆಳೆದ ಜಮೀನಿನಲ್ಲಿ ನೀರು ನುಗ್ಗಿದ್ದು, ಲಕ್ಷಾಂತರ ರೂ. ಮೌಲ್ಯದ ಬೆಳೆ ನಾಶವಾಗುವ ಅಪಾಯ ಎದುರಾಗಿದೆ.

15ರ ನಂತರ ಮಳೆ ಇಳಿಮುಖ?

ಬಂಗಾಳಕೊಲ್ಲಿಯಲ್ಲಿ ಅ.15ರಂದು ವಾಯು ಭಾರ ಕುಸಿತವಾಗುವ ಮುನ್ಸೂಚನೆಯಿದ್ದು, ಇದರಿಂದ ಮಳೆಯಬ್ಬರ ಕೊಂಚ ಇಳಿಮುಖವಾಗುವ ಸಾಧ್ಯತೆಯಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ. ಅಕ್ಟೋಬರ್ ಪ್ರಾರಂಭದಿಂದಲೇ ರಾಜ್ಯದೆಲ್ಲೆಡೆ ಭಾರಿ ಮಳೆ ದಾಖಲಾಗುತ್ತಿದ್ದು, ಅ.20 ವೇಳೆಗೆ ರಾಜ್ಯಕ್ಕೆ ಹಿಂಗಾರು ಪ್ರವೇಶಿಸುವ ನಿರೀಕ್ಷೆಯಿದೆ. ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ನಿರ್ವಣವಾಗಿರುವ ಮೇಲ್ಮೈ ಸುಳಿಗಾಳಿ ಪ್ರಭಾವದಿಂದಾಗಿ ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಇನ್ನೂ ಎರಡು ದಿನ ಮಳೆ ಮುಂದುವರಿಯಲಿದೆ. ಅಂಡಮಾನ್ ನಿಕೋಬಾರ್ ದ್ವೀಪ ಹಾಗೂ ಕೇರಳದಲ್ಲಿ ಭಾರಿ ಮಳೆಯ ಎಚ್ಚರಿಕೆ ನೀಡಲಾಗಿದೆ.

ಅಪಾಯದಿಂದ ಪಾರಾದ ಮಹಿಳೆ

ವಿಜಯಪುರ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಏಕಾಏಕಿ ಮನೆ ಗೋಡೆ ಕುಸಿದು ಬಿದ್ದಿದ್ದು ಕುಸುಮಾ ಪಾಟೀಲ ಎಂಬ ಮಹಿಳೆ ಗಾಯಗೊಂಡಿದ್ದಾರೆ. ಗೋಡೆ ಬಿದ್ದ ರಭಸಕ್ಕೆ ಪ್ರಜ್ಞೆ ತಪ್ಪಿರುವ ಕುಸುಮಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮರವೇರಿದ ಯುವಕ

ಬಳ್ಳಾರಿ ತಾಲೂಕಿನ ಸಿಂದವಾಳದಲ್ಲಿ ಹಳ್ಳದ ನೀರಿಗೆ ಸಿಲುಕಿದ ಯುವಕನೊಬ್ಬ ಮರವೇರಿ ಕುಳಿತಿದ್ದಾನೆ. ಮೋಟಾರ್ ಎತ್ತಲು ಹೋಗಿದ್ದಾಗ ಹಳ್ಳ ತುಂಬಿ ಹರಿದಿದ್ದು, ಅಂಕವಿಕಲ ಯುವಕ ಅಪಾಯಕ್ಕೆ ಸಿಲುಕಿದ್ದಾನೆ. ಪೊಲೀಸರು ಸ್ಥಳದಲ್ಲೇ ಬೀಡು ಬಿಟ್ಟಿದ್ದು, ರಕ್ಷಣಾ ಕಾರ್ಯ ಮುಂದು ವರಿದಿತ್ತು.

ರಾಯರ ಭಕ್ತರ ಪರದಾಟ

ಧಾರಾಕಾರ ಮಳೆಗೆ ಆಂಧ್ರಪ್ರದೇಶದ ಪತ್ತಿಕೊಂಡ ಬಳಿ ಸೇತುವೆ ಮೇಲೆ ನೀರು ಹರಿದು ಬೆಂಗಳೂರು- ಮಂತ್ರಾಲಯ ನಡುವಿನ ರಸ್ತೆ ಸಂಚಾರ ಸ್ಥಗಿತಗೊಂಡಿದ್ದರಿಂದ ರಾಯರ ದರ್ಶನಕ್ಕೆ ತೆರಳುತ್ತಿದ್ದ ಭಕ್ತರು ಪರದಾಡಿದ್ದಾರೆ. ಮುಳಬಾಗಿಲು-ಮಂತ್ರಾಲಯ ಬಸ್ ಚಾಲಕ, ಸೇತುವೆ ಮೇಲೆ ನೀರು ಹರಿಯುತ್ತಿದ್ದರೂ ವಾಹನ ತೆಗೆದುಕೊಂಡು ಹೋಗಲು ಪ್ರಯತ್ನಿಸಿದ್ದರಿಂದ ಪ್ರಯಾಣಿಕರು ಆತಂಕಕ್ಕೊಳಗಾಗಿದ್ದರು.

ರೈಲು ಸೇವೆ ಸ್ಥಗಿತ: ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ಮಾರ್ಗದ ಮೂಲಕ ಆಂಧ್ರ ಪ್ರದೇಶಕ್ಕೆ ಸಂಚರಿಸುತ್ತಿದ್ದ 6 ರೈಲುಗಳು ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಕಲ್ಲೂರು ಮತ್ತು ಗುತ್ತಿ ರೈಲ್ವೆ ನಿಲ್ದಾಣ ಹಾಗೂ ಮಾರ್ಗ ಮಧ್ಯೆ ಬಾರಿ ನೀರು ನಿಲುಗಡೆಯಾಗಿದೆ. ಗೌರಿಬಿದನೂರು ನಿಲ್ದಾಣದಿಂದ ಸಂಚರಿಸುತ್ತಿದ್ದ ಪ್ರಶಾಂತಿ, ಕಾಚಿಗೂಡ, ಕುರ್ಲಲಾ, ಬಸವ, ಕಾಚಿಗೂಡ ಎಕ್ಸ್​ಪ್ರೆಸ್, ಕುರ್ಲಲಾ, ಪ್ಯಾಸೆಂಜರ್ ರೈಲುಗಳು ಇನ್ನೂ ಹತ್ತುದಿನ ತುಮಕೂರು ಮತ್ತು ಬಂಗಾರಪೇಟೆ ಮಾರ್ಗದಲ್ಲಿ ಚಲಿಸಲಿವೆ.

ಶ್ರೀಕೃಷ್ಣದೇವರಾಯ ವಿವಿಗೆ ನುಗ್ಗಿದ ನೀರು

ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ಕ್ಯಾಂಪಸ್ ಮಳೆ ನೀರಿಗೆ ಮುಳುಗಡೆ ಯಾಗಿದ್ದು, ತರಗತಿ ಕೋಣೆಗಳಲ್ಲಿ ನೀರು ನಿಂತು ಪಠ್ಯ ಚಟುವಟಿಕೆಗಳಿಗೆ ಅಡಚಣೆಯಾ ಯಿತು. ಪರೀಕ್ಷಾಂಗ ವಿಭಾಗದಲ್ಲಿ ಗೋಡೆ ಕುಸಿದಿದ್ದು, ಉತ್ತರ ಪತ್ರಿಕೆಗಳು ಜಲಾವೃತ ವಾಗಿವೆ. ವಿವಿ ಸಿಬ್ಬಂದಿ ನೀರು ಹೊರಹಾಕಲು ಹರಸಾಹಸಪಟ್ಟರು. ಪಂಪ್​ಸೆಟ್ ಮೂಲಕ ನೀರು ಹೊರಹಾಕುವ ಪ್ರಯತ್ನ ಕೂಡ ನಡೆಯಿತು. ಹೊಸಪೇಟೆ ತಾಲೂಕು ಬೈಲುವದ್ದಿಗೇರಿ ಗ್ರಾಮದಲ್ಲಿ ಬುಧರಾತ್ರಿ ರಾತ್ರಿ ಸಿಡಿಲಿಗೆ ಗುಡಿಸಲೊಂದು ಸುಟ್ಟುಹೋಗಿದೆ.

Leave a Reply

Your email address will not be published. Required fields are marked *

Back To Top