Sunday, 22nd July 2018  

Vijayavani

ಶೀರೂರು ಶ್ರೀ ಸಾವಿನ ಹಿಂದೆ ರಮ್ಯಾ ಶೆಟ್ಟಿ ಕೈವಾಡ - ಗೋಡಂಬಿ ಜ್ಯೂಸ್ ಕುಡಿಸಿರೋ ಶಂಕೆ - ತನಿಖೆ ಚುರುಕುಗೊಳಿಸಿದ ಉಡುಪಿ ಪೊಲೀಸರು        ದೋಸ್ತಿ ಸರ್ಕಾರಕ್ಕೆ ಆಯುಷ್ಯ ಕಡಿಮೆ - ಜೆಡಿಎಸ್ ಜತೆ ಲೋಕ ಎಲೆಕ್ಷನ್​​ ಮೈತ್ರಿ ಬೇಡ - ತುಮಕೂರಿನಲ್ಲಿ ಮಾಜಿ ಶಾಸಕ ರಾಜಣ್ಣ ಅಪಸ್ವರ        ಡಿಸಿಎಂ ಪರಮೇಶ್ವರ್​ಗೆ ದೋಸ್ತಿ ಇಷ್ಟ - ದೊಡ್ಡಗೌಡರಿಗೆ ಆಗ್ತಿದೆಯಂತೆ ಕಷ್ಟ - ಲೋಕಸಭಾ ಮೈತ್ರಿಯಲ್ಲೇ ದೋಸ್ತಿ ಬಗ್ಗೆ ಎದ್ದಿದೆ ಗೊಂದಲ        ರಸ್ತೆಯಲ್ಲಿ ಬರ್ತಿದ್ದ ಬಾಲಕಿ ಮೇಲೆ ಹರಿದ ಕಾರು - ಪವಾಡ ಸದೃಶ್ಯ ರೀತಿಯಲ್ಲಿ ಪುಟಾಣಿ ಪಾರು - ಉತ್ತರ ಪ್ರದೇಶದಲ್ಲೊಂದು ಪವಾಡ        ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೂ ಸಂಚಕಾರ- ಹನುಮಂತ ಹುಟ್ಟಿದ ಸ್ಥಳ ಮುಜರಾಯಿ ಇಲಾಖೆ ವಶಕ್ಕೆ - ದೋಸ್ತಿ ಸರ್ಕಾರದ ಮತ್ತೊಂದು ವಿವಾದ        ಜಲಾಶಯದಿಂದ ತುಂಗಭದ್ರಾ ನದಿಗೆ ನೀರು - ಡ್ರೋಣ್ ಕಣ್ಣಲ್ಲಿ ಮನಮೋಹಕ ನೋಟ - ಎಲ್ಲೆಲ್ಲೂ ಹಸಿರ ಸಿರಿಯ ವೈಭವ       
Breaking News

ಬಂಗಾಳದಲ್ಲಿ ದೇಶಪ್ರೇಮದ ಕಿಚ್ಚು ಹಚ್ಚಿದ ದಿಟ್ಟ ಪತ್ರಕರ್ತ

Thursday, 28.09.2017, 3:03 AM       No Comments

ವಿವೇಕಾನಂದರಷ್ಟೇ ಸಮರ್ಥ ಎಂದು ಬಂಗಾಳಿಗಳಿಂದ ಕರೆಸಿಕೊಂಡವರು ಬ್ರಹ್ಮಬಾಂಧವ ಉಪಾಧ್ಯಾಯರು. ಆದರೆ ವಿವೇಕಾನಂದರಷ್ಟು ಎತ್ತರಕ್ಕೆ ಏರಲಾಗಲಿಲ್ಲ. ಒಮ್ಮೆ ಕ್ರೈಸ್ತ ಮತ ಸೇರಿ ಪಾದ್ರಿಯೂ ಆಗಿದ್ದ ಬ್ರಹ್ಮಬಾಂಧವರು ನಂತರ ಮಾತೃಧರ್ಮಕ್ಕೆ ಮರಳಿದರು. ಅವರು ಜೀವನವನ್ನೆಲ್ಲ ಸತ್ಯಾನ್ವೇಷಣೆಯಲ್ಲಿಯೇ ಕಳೆದದ್ದು ವಿಧಿವಿಲಾಸವೇನೋ.

 

‘ಸ್ವಾಮಿ ವಿವೇಕಾನಂದರು ಕ್ರಾಂತಿಯ ಯಜ್ಞಕುಂಡದಲ್ಲಿ ಅಗ್ನಿಯನ್ನು ಹೊತ್ತಿಸಿದರೆ ಅದಕ್ಕೆ ಸಮಿತ್ತುಗಳನ್ನು ಹಾಕುತ್ತಾ ಗಾಳಿಯನ್ನು ಬೀಸುತ್ತಾ ಪ್ರಜ್ವಲಿಸುವಂತೆ ಮಾಡಿದವರು….‘ ಎಂಬ ಮಾತನ್ನು ಬ್ರಹ್ಮಬಾಂಧವ ಉಪಾಧ್ಯಾಯರ ಬಗ್ಗೆ ಹೇಳುವುದುಂಟು. ಪ್ರತಿಭೆ, ಪಾಂಡಿತ್ಯ, ವಾಗ್ಮಿತೆಗಳಲ್ಲಿ ಅವರು ವಿವೇಕಾನಂದರಷ್ಟೇ ಸಮರ್ಥರಾಗಿದ್ದರು ಎಂಬುದು ಆ ಕಾಲದಲ್ಲಿ ಪ್ರಚಲಿತವಿದ್ದ ಮಾತು.

ಯುವ ಕ್ರಾಂತಿಕಾರಿಗಳು ಬ್ರಿಟಿಷ್ ಸರ್ಕಾರದ ಬುಡವನ್ನು ಗಡಗಡನೆ ನಡುಗಿಸಿ ಸ್ವತಃ ವೈಸ್ರಾಯ್ ಹಾರ್ಡಿಂಜನೇ ‘…ಪೂರ್ವ ಮತ್ತು ಪಶ್ಚಿಮ ಬಂಗಾಲಗಳಲ್ಲಿ ಸರ್ಕಾರವೆಂಬುದೇ ಅಸ್ತಿತ್ವದಲ್ಲಿ ಇಲ್ಲ‘ ಎಂದು ಲಂಡನ್ನಿಗೆ ವರದಿ ಕಳಿಸುವಂತೆ ಮಾಡಿದ ದಿನಗಳಲ್ಲಿ, ಬಂಗಾಳದಲ್ಲಿ ಕ್ರಾಂತಿಯ ಭಾವನೆಗಳನ್ನು ಪ್ರಜ್ವಲಿಸುವಂತೆ ಮಾಡಿದ ಪತ್ರಿಕೆಗಳು ಮೂರು ದೈನಿಕಗಳು. ಭೂಪೇಂದ್ರನಾಥ ದತ್ತನ ‘ಯುಗಾಂತರ‘, ಅರವಿಂದ ಘೊಷರ ‘ಬಂದೇಮಾತರಂ‘( ಇಂಗ್ಲಿಷ್) ಹಾಗೂ ಬ್ರಹ್ಮಬಾಂಧವ ಉಪಾಧ್ಯಾಯರ ‘ಸಂಧ್ಯಾ‘ (ಬಂಗಾಳಿ).

ಈ ಮೂರು ಪತ್ರಿಕೆಗಳು ಮೂರು ಫಿರಂಗಿಗಳಂತೆ ಪರಕೀಯ ಪ್ರಭುತ್ವದ ಮೆಲೆ ವೈಚಾರಿಕ ದಾಳಿ ನಡೆಸಿ ಜನರಲ್ಲಿ ವಿಶೇಷವಾಗಿ ಯುವಜನರಲ್ಲಿ-ಕ್ಷಾತ್ರತೇಜವನ್ನು ತುಂಬುವ ಅದ್ಭುತ ಕಾರ್ಯವನ್ನು ಮಾಡಿದವು. ಅಷ್ಟೇ ಅಲ್ಲ ಬ್ರಿಟಿಷರ ಕೋಪಾತಿರೇಕಕ್ಕೆ ಗುರಿಯಾಗಿ ಆ ಸಂಪಾದಕರುಗಳು ಮೊಕದ್ದಮೆಗಳನ್ನು, ಶಿಕ್ಷೆಗಳನ್ನು ಅನುಭವಿಸಬೇಕಾಗಿ ಬಂತು. ಬಂಗಾಳದ ವಿಭಜನೆಯ ಅನಂತರದ ಎಲ್ಲ ವಿದ್ಯಮಾನಗಳಿಗೂ ಈ ಮೂರು ಚಿಕ್ಕ ಪತ್ರಿಕೆಗಳು ಸ್ಪೂರ್ತಿಯ ಇಂಧನವನ್ನು ಒದಗಿಸಿದವು. ಸ್ವಾಮಿ ವಿವೇಕಾನಂದರಿಗೆ ಹೋಲಿಸಲಾದ ಬ್ರಹ್ಮಬಾಂಧವರದು ಬಹು ಚಡಪಡಿಕೆಯ ಸ್ವಭಾವ. ಸದಾ ಅಶಾಂತ ಅಂತರಂಗ. ಬೌದ್ಧಿಕ ಪ್ರೌಢಿಮೆಯಂತೂ ಅಪೂರ್ವ. ಆದರೆ ಒಂದೇ ಸಿದ್ಧಾಂತಕ್ಕಾಗಲೀ ವೈಚಾರಿಕತೆಗಾಗಲಿ ಬದ್ಧರಾಗದೆ ಜೀವನದುದ್ದಕ್ಕೂ ಸ್ವಲ್ಪ ಚಂಚಲಚಿತ್ತರಾಗಿಯೇ ನಡೆದುಕೊಂಡರು.

ಬಂಗಾಳ ವಿಭಜನೆಗೆ ತುಸು ಪೂರ್ವ 1905ರ ಆಗಸ್ಟ್ 7ರಂದು ಅವರು ‘ಸಂಧ್ಯಾ‘ ಪತ್ರಿಕೆಗೆ ಓಂಕಾರ ಹಾಕಿದರು. ಅದು ಅವರ ಜೀವನದ ಕಡೆಯ ಮಜಲು. ಅದಕ್ಕೆ ಮುನ್ನ ಅವರು ಧಾರ್ವಿುಕ ರಂಗದಲ್ಲಿ ಮಾಡಿದ ಪ್ರಯೋಗಗಳನ್ನು ಕಂಡರೆ ಆಶ್ಚರ್ಯದ ಜೊತೆ ಇಂಥ ವಿದ್ವಾಂಸರು ಅದೇಕೆ ಆ ದಾರಿ ತುಳಿದರು ಎಂದು ಪ್ರಶ್ನೆಗಳೇಳುವುದೂ ಉಂಟು.

ಕುಲೀನ ಬ್ರಾಹ್ಮಣ ಕುಟುಂಬದ ಕುಡಿ: 1861ರಲ್ಲಿ ಫೆಬ್ರವರಿ 1ರಂದು ಅವಿಭಜಿತ ಬಂಗಾಳದ ಖನ್ಯಾನ್ ಎಂಬಲ್ಲಿ ಜನ್ಮ ತಳೆದ ಬ್ರಹ್ಮಬಾಂಧವ ಉಪಾಧ್ಯಾಯರ ನಾಮಕರಣದ ಹೆಸರು ಭವಾನಿಚರಣ ಬಂದೋಪಾಧ್ಯಾಯ. ವೇದಾಂತಿ, ಸ್ವಾತಂತ್ರ್ಯಯೋಧ ಹಾಗೂ ಧೀರ ಪತ್ರಕರ್ತರಾಗಿದ್ದ ಈತ ಜನಿಸಿದ್ದು ಕುಲೀನ ಬ್ರಾಹ್ಮಣ ಮನೆತನದಲ್ಲಿ. ತಂದೆ ದೇವೀಚರಣ ಬಂದೋಪಾಧ್ಯಾಯ. ಪೊಲೀಸ್ ಅಧಿಕಾರಿ ಹುದ್ದೆಯಲ್ಲಿದ್ದವರು. ಒಂದು ವರ್ಷದ ಮಗುವಾಗಿದ್ದಾಗಲೇ ಬ್ರಹ್ಮಬಾಂಧವರು ತಾಯಿ ರಾಧಾಕುಮಾರಿಯನ್ನು ಕಳೆದುಕೊಂಡು ಅಜ್ಜಿಯ ಆಶ್ರಯದಲ್ಲಿ ಬೆಳೆದರು. 1880ರಲ್ಲಿ ಆತ ‘ಜನರಲ್ ಅಸೆಂಬ್ಲಿ ಶಿಕ್ಷಣ ಸಂಸ್ಥೆ‘ ಎಂಬ ಕಲ್ಕತ್ತೆಯ ಶಾಲೆಯಲ್ಲಿ ಓದುವಾಗ ಸ್ವಾಮಿ ವಿವೇಕಾನಂದ (ಆಗ ನರೇಂದ್ರನಾಥ ದತ್ತ) ಅವರ ಸಹಪಾಠಿ. ರಾಮಕೃಷ್ಣ ಪರಮಹಂಸರ ಅತ್ಯಂತ ಘನಿಷ್ಠ ಸಂಪರ್ಕ ಹೊಂದಿದ್ದ ಭವಾನಿಚರಣನಿಗೆ ರವೀಂದ್ರನಾಥ ಟಾಗೋರರ ಕುಟುಂಬ ಕೂಡ ಬಹಳ ಹತ್ತಿರದಲ್ಲಿತ್ತು. ರವೀಂದ್ರರಂತೂ ಅವರ ಆಪ್ತ ಗೆಳೆಯರಾಗಿದ್ದರು.

ಆಚಾರನಿಷ್ಠ ಹಿಂದೂ ಬ್ರಾಹ್ಮಣ ಕುಲದಲ್ಲಿ ಹುಟ್ಟಿ ಹದಿಮೂರನೆ ವಯಸ್ಸಿನಲ್ಲಿ ಉಪನಯನವನ್ನೂ ಮಾಡಿಸಿಕೊಂಡಿದ್ದ ಈ ಬುದ್ಧಿವಂತ ಒಮ್ಮೆಲೆ ಕ್ರಿಶ್ಚಿಯನ್ ಆಗಿ ಮತಾಂತರಗೊಂಡಿದ್ದು, ಪಾದ್ರಿಯಾಗಿ ಕ್ಯಾಥೋಲಿಕ್ ಕ್ರಿಶ್ಚಿಯನ್ ಮತವನ್ನು ಪ್ರಚಾರಗೊಳಿಸಿದ್ದು ಹಾಗೂ ಜನರನ್ನು ಮತಾಂತರಗೊಳಿಸಿದ್ದನ್ನು ನೋಡಿದರೆ ಅದು ವಿಕ್ಷಿಪ್ತತೆಯೋ ವಿಪರೀತ ಬುದ್ಧಿಯೋ ಅಥವಾ ಚಂಚಲ ಚಿತ್ತವೋ ಎಂದು ಅನುಮಾನ ಬರುವುದು ಸಹಜವಾದರೂ ಆ ಕಾಲದಲ್ಲಿ ಕ್ರೈಸ್ತ ಮತದ ಪ್ರಭಾವ ವಿದ್ಯಾವಂತರನ್ನೂ ಸೆಳೆದುಕೊಳ್ಳುವಷ್ಟು ಪ್ರಬಲವಾಗಿತ್ತು ಎಂಬುದನ್ನು ಇತರ ಉದಾಹರಣೆಗಳಿಂದ ತಿಳಿಯಬಹುದು. ಮೈಕೆಲ್ ಮಧುಸೂದನ ದತ್ತ, ಕಾಳಿ ಚರಣ್ ಘೊಷ್ (ಬ್ರಹ್ಮಬಾಂಧವರ ಸೋದರಮಾವ) ಮುಂತಾದ ನೂರಾರು ಬಂಗಾಳಿ ದಿಗ್ಗಜರು ಕ್ರೈಸ್ತ ಮತ ಸ್ವೀಕರಿಸಿದ್ದನ್ನು ನಾವು ನೆನೆಯಬಹುದು.

ಆಚಾರವಂತ ಬ್ರಾಹ್ಮಣರಾಗಿದ್ದ ಭವಾನಿಚರಣ ರವೀಂದ್ರರ ತಂದೆ ದೇವೇಂದ್ರನಾಥ ಟಾಗೋರ್ ಹಾಗೂ ಕೇಶವಚಂದ್ರ ಸೇನರ ಪ್ರಭಾವ ವಲಯದಲ್ಲಿ ಸಿಲುಕಿ 1881ರಲ್ಲಿ ಬ್ರಹ್ಮ ಸಮಾಜಿಯಾಗುತ್ತಾರೆ. ವಿವೇಕಾನಂದರೂ ಆ ದಿನಗಳಲ್ಲಿ ಬ್ರಹ್ಮ ಸಮಾಜದಿಂದ ಆಕರ್ಷಿತರಾದವರೇ. ಕೇಶವಚಂದ್ರ ಸೇನರ ಪ್ರೇರಣೆಯಂತೆ ಅವರು (ಈಗ ಪಾಕಿಸ್ತಾನದಲ್ಲಿರುವ) ಹೈದರಾಬಾದ್ ಪ್ರಾಂತ್ಯಕ್ಕೆ ಬ್ರಹ್ಮ ಸಮಾಜ ಶಾಲೆಯ ಶಿಕ್ಷಕರಾಗಿ ಹೋಗುತ್ತಾರೆ. ಕೇಶವಚಂದ್ರರು 1884ರಲ್ಲಿ ಅಸುನೀಗಿದಾಗ ಇವರು ಕಲ್ಕತ್ತೆಗೆ ಹಿಂದಿರುಗುತ್ತಾರೆ. ಅವರ ಸತ್ಯಾನ್ವೇಷಕ ಬುದ್ಧಿ ಕ್ರೈಸ್ತ ಮತವನ್ನು ಅರಿಯಲು ಅದರತ್ತ ಸೆಳೆಯುತ್ತದೆ.

ಬ್ರಹ್ಮಬಾಂಧವರ ಘರ್​ವಾಪ್ಸಿ: ರಾಮಕೃಷ್ಣ ಪರಮಹಂಸರಂಥ ಮಹಾಗುರುವಿನ ಸಮೀಪದವರಾಗಿದ್ದ ಭವಾನಿಚರಣ ಬಿಷಪ್ ಕಾಲೇಜಿನ ರೆವರೆಂಡ್ ಹೇಟನ್ ಎಂಬ ಅಮೆರಿಕನ್ ಪಾದ್ರಿಯ ಪ್ರಭಾವದಿಂದ ಕ್ರಿಶ್ಚಿಯನ್ ಆಗಿ ಮತಾಂತರಗೊಳ್ಳುತ್ತಾರೆ, ತಮ್ಮ ಹೆಸರನ್ನು ಬ್ರಹ್ಮಬಾಂಧವ ಉಪಾಧ್ಯಾಯ ಎಂದು ಬದಲಾಯಿಸಿಕೊಳ್ಳುತ್ತಾರೆ. ಅವರು ಕ್ರಿಶ್ಚಿಯನ್ ಪಾದ್ರಿಯಾಗಿ ಮತಪ್ರಚಾರಕ್ಕೆ ಕರಾಚಿಗೆ ಹೋಗಿ ಅಲ್ಲಿ ಮೊದಲಿದ್ದ ಕ್ರೈಸ್ತ ಪಂಥದಲ್ಲಿ ಭ್ರಮನಿರಸನಗೊಂಡು ಕ್ಯಾಥೋಲಿಕ್ ಕ್ರೈಸ್ತ ಪಂಥಕ್ಕೆ ಸ್ಥಳಾಂತರ ಮಾಡುತ್ತಾರೆ. ಅವರು ಕುತ್ತಿಗೆಯಲ್ಲಿ ಕ್ರಾಸ್ ಧರಿಸಿದ್ದರೂ ಕಾವಿಯ ನಿಲುವಂಗಿಯನ್ನು ಧರಿಸುತ್ತಾರೆ. ಅಷ್ಟೇ ಅಲ್ಲದೆ ಕ್ರೈಸ್ತ ಮತಪ್ರಚಾರದ ಸಲುವಾಗಿ 1894ರಲ್ಲಿ ‘ಸೋಫಿಯಾ‘ ಎಂಬ ಪತ್ರಿಕೆಯನ್ನು ಸ್ಥಾಪಿಸಿ ಸಂಪಾದಕರಾಗುತ್ತಾರೆ. 1901ರಲ್ಲಿ ಅನಿಮಾನಂದ ಎಂಬ ಅವರ ಶಿಷ್ಯ ವೇದ ಹಾಗೂ ವೇದಾಂತವನ್ನು ಕಲಿಸಲು ಶಾಲೆಯನ್ನು ಆರಂಭಿಸುತ್ತಾರೆ. ಬ್ರಹ್ಮಬಾಂಧವ ಅವನ ಜೊತೆ ಸೇರುತ್ತಾರೆ. ಈ ಆರ್ಷ ವಿದ್ಯೆಯ ಶಾಲೆ ರವೀಂದ್ರರನ್ನು ಆಕರ್ಷಿಸುತ್ತದೆ. ಅವರು ಅದನ್ನು ತಮ್ಮ ಶಾಂತಿನಿಕೇತನದೊಂದಿಗೆ ಸೇರಿಸಿಕೊಂಡು ಅಲ್ಲಿಯೇ ಮುಂದುವರಿಯುವಂತೆ ಮಾಡಿದರೂ ಆ ಸಂಬಂಧ ದೀರ್ಘಕಾಲ ಉಳಿಯುವುದಿಲ್ಲ.

ಅವರ ಜೀವನಕ್ಕೆ ಇನ್ನೊಂದು ಮುಖ್ಯ ತಿರುವು ಸಿಕ್ಕ ಕಾಲ 1902ನೇ ಇಸವಿಯ ಜುಲೈ 4! ಆಗ ಅವರು ಬೋಲಪುರದ ಬ್ರಹ್ಮಚರ್ಯ ವಿದ್ಯಾಲಯದಲ್ಲಿ ಅಧ್ಯಾಪಕರು. ಒಂದು ದಿನ ಕಲ್ಕತ್ತೆಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅವರಿಗೆ ಸ್ವಾಮಿ ವಿವೇಕಾನಂದರ ಸಾವಿನ ಸುದ್ದಿ ತಿಳಿಯುತ್ತದೆ. ಅದೇನೋ ಬಲವಾದ ವಿದ್ಯುತ್ ಸ್ಪರ್ಶವಾದಂತಾಗಿ ತತ್ತರಿಸಿಹೋದ ಬ್ರಹ್ಮಬಾಂಧವರು ಒಂದೇ ಉಸುರಿನಲ್ಲಿ ಬೇಲೂರು ಮಠಕ್ಕೆ ಧಾವಿಸುತ್ತಾರೆ. ವೀರಸಂನ್ಯಾಸಿ ಯುಗಪುರುಷ ವಿವೇಕಾನಂದರ ಪಾರ್ಥಿವ ಶರೀರದ ಬಳಿ ನಿಂತಾಗ ಅವರಲ್ಲಿ ಹಠಾತ್ತನೆ ಒಂದು ಬದಲಾವಣೆ ಉಂಟಾಗುತ್ತದೆ. ಅಷ್ಟು ದಿವಸಗಳ ತಮ್ಮ ಸತ್ಯಾನ್ವೇಷಣೆ ವ್ಯರ್ಥವೆಂದೂ ತಮ್ಮ ಬಾಲ್ಯದ ಸಹಪಾಠಿ ಒಂದೇ ವೇದಾಂತ ಮಾರ್ಗದಲ್ಲಿ ನಡೆದು ವಿಶ್ವವಿಜೇತನಾದನೆಂದೂ ಅದೇ ಮುಂದೆ ತನ್ನ ಹಾದಿಯಾಗಬೇಕೆಂದೂ ಅನ್ನಿಸಿ ಜ್ಞಾನೋದಯವಾಗಿ ಮರಳಿ ಮನೆಗೆ ಎಂಬಂತೆ ಶಾಸ್ತ್ರೋಕ್ತವಾಗಿ ಶುದ್ಧೀಕರಿಸಿಕೊಂಡು ಹಿಂದೂ ಧರ್ಮದ ತೆಕ್ಕೆಗೆ ಬರುತ್ತಾರೆ. ನಂತರ ಸ್ವಾಮಿ ವಿವೇಕಾನಂದರ ಕಾರ್ಯ ಮುಂದುವರಿಸುವ ಸಲುವಾಗಿ ಇಂಗ್ಲೆಂಡಿಗೆ ಹೋಗಿ ಅಲ್ಲಿ ಆಕ್ಸ್​ಫರ್ಡ್​ನಲ್ಲಿ ಹಿಂದೂ ಧರ್ಮದ ಶ್ರೇಷ್ಠತೆ ಬಗ್ಗೆ ಉಪನ್ಯಾಸಗಳನ್ನು ನೀಡಿ ಅಪಾರ ಸಭಿಕರನ್ನು ಆಕರ್ಷಿಸುತ್ತಾರೆ. ಕೇಂಬ್ರಿಡ್ಜ್ ಯೂನಿವರ್ಸಿಟಿಯಲ್ಲಿ ಹಿಂದೂ ದರ್ಶನ ಶಾಸ್ತ್ರದ ಒಬ್ಬ ಪ್ರಾಧ್ಯಾಪಕರನ್ನು ನಿಯುಕ್ತಿ ಮಾಡಲು ಇವರ ಉಪನ್ಯಾಸಗಳೇ ಪ್ರೇರಣೆ!

ಲೇಖನಿಯೇ ಫಿರಂಗಿಯಾದಾಗ: 1903ರಲ್ಲಿ ಭಾರತಕ್ಕೆ ಹಿಂದಿರುಗಿದಾಗ ಇಲ್ಲಿ ಸ್ವಾತಂತ್ರ್ಯ ಹೋರಾಟ ಭುಗಿಲೆದ್ದಿತ್ತು. ಅದಕ್ಕೆ ತನ್ನ ಕೊಡುಗೆ ಏನು ಎಂದು ಆಲೋಚಿಸಿದ ಬ್ರಹ್ಮಬಾಂಧವರು ತಮ್ಮ ಬರವಣಿಗೆ ಹಾಗೂ ಚಿಂತನೆಗಳನ್ನು ಬ್ರಿಟಿಷರ ವಿರುದ್ಧ ಕೆಂಡಕಾರುವುದಕ್ಕೂ ದೇಶಭಕ್ತಿಯನ್ನು ಪ್ರಚೋದಿಸಲಿಕ್ಕೂ ಮುಡಿಪು ಮಾಡಿದರು. ‘ಬಂದೇಮಾತರಂ‘ನಲ್ಲಿನ ಅರವಿಂದರ ಬರಹಗಳು, ‘ಯುಗಾಂತರ‘ದಲ್ಲಿನ ಭೂಪೇಂದ್ರನಾಥರ ಬರಹಗಳು ಗಂಭೀರ ಭಾಷೆಯಲ್ಲಿದ್ದರೆ ‘ಸಂಧ್ಯಾ‘ದ ಬ್ರಹ್ಮಬಾಂಧವರ ಲೇಖನಗಳು ನೇರ ಗಡಸು ಭಾಷೆಯಲ್ಲಿದ್ದು ಜನಸಾಮಾನ್ಯರಿಗೆ ಸುಲಭವಾಗಿ ತಲಪುವಂತಿದ್ದವು.

‘ಸಂಧ್ಯಾ‘ ಪತ್ರಿಕೆಯ ತುಂಬ ಬೆಂಕಿಯುಗುಳುವ ಬರಹಗಳೇ! ಒಂದು ಸಂಚಿಕೆಯಲ್ಲಂತೂ ಸರ್ಕಾರ ಬೆಚ್ಚಿಬೀಳುವಂತೆ ಬರೆದರು. ಅವು ಕ್ರಾಂತಿಕಾರಿಗಳು ಬಾಂಬ್ ತಯಾರಿಕೆಯಲ್ಲಿ ಮಗ್ನರಾಗಿದ್ದ ದಿನಗಳು. ‘…ಭಯಂಕರವಾಗಿ ಆಸ್ಪೋಟಗೊಳ್ಳುವಂಥ ಬಾಂಬುಗಳು ಸಿದ್ಧವಾಗಿವೆ! ಅವನ್ನು ತೆಗೆದುಕೊಂಡು ಹೋಗಿ ತಂತಮ್ಮ ಮನೆಗಳಲ್ಲಿರಿಸಿಕೊಳ್ಳುವುದು ಪ್ರತಿಯೊಬ್ಬ ದೇಶಭಕ್ತನ ಕರ್ತವ್ಯ‘ ಎಂದು ಆ ಲೇಖನದಲ್ಲಿ ಘೊಷಿಸಿದ್ದರು. 1907ರ ಆಗಸ್ಟ್ ಮಾಹೆಯ ಒಂದು ಸಂಚಿಕೆಯಲ್ಲಿ ಬರೆದ ‘ನಾನೀಗ ಪ್ರೇಮದ ಸುಳಿಯಲ್ಲಿ ಸಿಕ್ಕಿಬಿದ್ದಿದ್ದೀನಿ‘ ಎಂಬ ಲೇಖನ ಸರ್ಕಾರಕ್ಕೆ ನುಂಗಲಾರದ ತುತ್ತಾಯಿತು. ಆ ಲೇಖನದಲ್ಲಿ ಯಾವ ಪ್ರೇಯಸಿಯೂ ಇರಲಿಲ್ಲ. ಸುರಸುಂದರಾಂಗಿಯೂ ಇರಲಿಲ್ಲ. ಆ ಪ್ರೇಮ ‘ದೇಶಪ್ರೇಮ.‘ ಅಂದಿನ ಯುವಜನರ ಹೃದಯದಲ್ಲಿ ದೇಶಪ್ರೇಮ ಹಾಗೂ ಸರ್ಕಾರದ ವಿರುದ್ಧ ಆಕ್ರೋಶಗಳನ್ನು ಪ್ರೇರೇಪಿಸಿದ ಲೇಖನ ಅದಾಗಿತ್ತು. ಸರ್ಕಾರ ತಾಳ್ಮೆ ಕಳೆದುಕೊಂಡಿತ್ತು. ಬ್ರಹ್ಮಬಾಂಧವರನ್ನು ಕೋರ್ಟಿಗೆ ಎಳೆಯಿತು. ಸಮನ್ಸ್ ಕಳಿಸಿತು.

ಕೋರ್ಟಿಗೆ ಹೋಗಲು ಸಿದ್ಧರಾಗಿ ನಿಂತ ಬ್ರಹ್ಮಬಾಂಧವ ಉಪಾಧ್ಯಾಯ ‘ಛೀ! ಈ ಪರಂಗಿಗಳ ‘ಅನ್ಯಾಯಾಲಯ‘ಕ್ಕೆ ಹೋಗುವಾಗ ಪವಿತ್ರ ಕಾವಿ ವಸ್ತ್ರ ಧರಿಸಿ ಹೋಗುವುದೇ? ಬ್ರಹ್ಮಬಾಂಧವ ಉಪಾಧ್ಯಾಯನಾಗಿ ಹೋಗುವುದಿಲ್ಲ. ಭವಾನಿಚರಣ ಬಂದೋಪಾಧ್ಯಾಯನಾಗಿ ಹೋಗುತ್ತೇನೆ‘ ಎಂದು ಅಂದುಕೊಂಡರು. ಶಿಷ್ಯನಿಗೆ, ‘ನನಗೊಂದು ಬಿಳಿ ಪಂಚೆ ಹಾಗೂ ಅಂಗಿಯನ್ನು ತಾ. ಜನಿವಾರವನ್ನು ಕೊಡು. ಅದನ್ನು ಧರಿಸಿ ಹೋಗುತ್ತೇನೆ‘ ಎಂದು ಹೇಳಿ ಶ್ವೇತವಸ್ತ್ರಧಾರಿಯಾಗಿ ಪುಸ್ತಕಪಾಣಿಯಾಗಿ ಕೋರ್ಟಿಗೆ ಹೊರಟರು. ಅವನ ಪರ ವಕೀಲಿ ವಹಿಸಿದವರು ದೇಶಬಂಧು ಚಿತ್ತರಂಜನ ದಾಸ್. ರಾಜದ್ರೋಹದ ಲೇಖನಗಳನ್ನು ಬರೆದ ಆರೋಪ ಹೊರಿಸಿದಾಗ ಬ್ರಹ್ಮಬಾಂಧವರು ನ್ಯಾಯಾಲಯ ಗದಗುಟ್ಟುವಂತೆ ಸಿಂಹಗರ್ಜನೆ ಮಾಡಿದರು: ‘ಸ್ವರಾಜ್ಯ ಹೋರಾಟ ಒಂದು ಪವಿತ್ರಯುದ್ಧ. ಇದು ಈಶ್ವರೀ ಕಾರ್ಯ. ನನ್ನ ಬರಹಗಳಿಂದ ಆ ಪವಿತ್ರ ಕಾರ್ಯಕ್ಕೆ ನನ್ನ ಕೊಡುಗೆ ನೀಡಬೇಕೆಂಬುದು ದೈವೀ ಸಂಕಲ್ಪ. ನನ್ನನ್ನು ಯಾವ ಸರ್ಕಾರವೂ ನಿರ್ಬಂಧಿಸಲು ಸಾಧ್ಯವಿಲ್ಲ.‘ ಬ್ರಹ್ಮಬಾಂಧವರ ಗುಡುಗಿನಂಥ ಮಾತು ಕೇಳಿ ಸರ್ಕಾರಿ ವಕೀಲ ‘ನಿಮ್ಮ ಮೇಲೆ ರಾಜ್ಯದ್ರೋಹದ ಆರೋಪಗಳಿವೆ. ವಿಚಾರಣೆ ನಡೆಸುತ್ತೇವೆ‘ ಎಂದಾಗ ‘ನನ್ನ ವಿಚಾರಣೆ ನಡೆಸಲು ನೀವು ಯಾರು? ಪರದೇಶಿ ಆಕ್ರಮಣಕಾರರಾದ ನಿಮಗೆ ಈ ಮಣ್ಣಿನ ಮಕ್ಕಳ ಮೇಲೆ ಆಡಳಿತ ನಡೆಸಲು ಯಾವ ಹಕ್ಕಿದೆ? ಮೋಸ, ವಂಚನೆಗಳನ್ನು ಆಧರಿಸಿಕೊಂಡು, ಸುಳ್ಳು ಕಪಟಗಳನ್ನು ಬಳಸಿಕೊಂಡು ನಡೆಸುತ್ತಿರುವ ಈ ನ್ಯಾಯಾಲಯಗಳಿಗೆ ನಾನು ಕಿಲುಬು ಕಾಸಿನ ಬೆಲೆಯನ್ನೂ ಕೊಡುವುದಿಲ್ಲ. ನಾನು ಈ ವಿಚಾರಣೆಯನ್ನು ಧಿಕ್ಕರಿಸುತ್ತೇನೆ! ಈ ನ್ಯಾಯಾಲಯವನ್ನು ಧಿಕ್ಕರಿಸುತ್ತೇನೆ!‘ ಎಂದು ಅಬ್ಬರಿಸಿದರು.

ಸವೆದುಹೋದ ಪಾದರಕ್ಷೆ: ವಿಚಾರಣೆ ಮುಂದುವರಿಯಿತು. ವಿಧ್ಯುಕ್ತವಾಗಿ ಆರೋಪಗಳನ್ನು ಹೇರಲಾಯಿತು. ಬ್ರಹ್ಮಬಾಂಧವರು ಅದಕ್ಕೆ ನೀಡಿದ್ದು ಒಂದೇ ಉತ್ತರ: ‘ಈ ಪರಕೀಯ ಸರ್ಕಾರದ ನ್ಯಾಯಾಲಯಕ್ಕೆ ನನಗೆ ಶಿಕ್ಷೆ ನೀಡುವುದು ದುಸ್ಸಾಧ್ಯ! ನನ್ನ ಈ ಶರೀರವನ್ನು ರ್ಸ³ಸಲು ಸಹ ಅದಕ್ಕೆ ಸಾಧ್ಯವಾಗದು. ಸರ್ಕಾರ ಹಾಗೆ ಮಾಡುವುದರ ಮೊದಲೇ ನನ್ನ ಈ ಶರೀರವನ್ನು ಸವೆದುಹೋದ ಪಾದರಕ್ಷೆಯನ್ನು ಎಸೆಯುವಂತೆ ಎಸೆದುಬಿಡುತ್ತೇನೆ.‘ ಅದೇನು ಭವಿಷ್ಯನುಡಿಯೋ ಏನೋ? ಅವರು ಕಟೆಕಟೆಯಲ್ಲಿ ನಿಂತಿರುವಾಗಲೇ ಹೊಟ್ಟೆನೋವು ಕಾಣಿಸಿಕೊಂಡಿತು. 1907ರ ಸೆಪ್ಟೆಂಬರ್ 10ರಂದು ವಿಚಾರಣೆ ನಡೆಯಿತು. ಆನಂತರ ಹರ್ನಿಯಾ ಶಸ್ತ್ರಚಿಕಿತ್ಸೆ ಸಫಲವಾಗಲಿಲ್ಲ. ಅತೀವ ರಕ್ತಸ್ರಾವದಿಂದಾಗಿ ಅಕ್ಟೋಬರ್ 27ರಂದು ಕೊನೆಯುಸಿರೆಳೆದ ಬ್ರಹ್ಮ ಬಾಂಧವ ಉಪಾಧ್ಯಾಯ ಕೊನೆಗೂ ತಮ್ಮ ಮಾತು ಉಳಿಸಿಕೊಂಡಿದ್ದರು; ಸರ್ಕಾರದ ಕೈಗೆ ಸಿಕ್ಕಲಿಲ್ಲ.

ವಿವೇಕಾನಂದರಷ್ಟೇ ಸಮರ್ಥ ಎಂದು ಬಂಗಾಳಿಗಳಿಂದ ಕರೆಸಿಕೊಂಡ ಬ್ರಹ್ಮಬಾಂಧವ ಉಪಾಧ್ಯಾಯರು ಅವರಷ್ಟು ಎತ್ತರಕ್ಕೆ ಏಕೆ ಏರಲಿಲ್ಲ? ವಿವೇಕಾನಂದರ ಹಿಂದೆ ಬಲವಾದ ಗುರು ಇದ್ದರು. ಅವರಿಗೆ ಆರಂಭದಿಂದ ಏಕೈಕ ಗುರಿ ಇತ್ತು. ಬ್ರಹ್ಮಬಾಂಧವರಿಗೆ ಪ್ರತಿಭೆ ಇದ್ದರೂ ಅಂಥ ಗುರುವಾಗಲೀ ಅಂಥ ಏಕೈಕ ಗುರಿಯಾಗಲಿ ಇರಲಿಲ್ಲ. ಹೂವಿಂದ ಹೂವಿಗೆ ಹಾರುವ ಚಿಟ್ಟೆಯಂತಿದ್ದ ಅವರು ಕೊನೆಯ ದಿನಗಳಲ್ಲಿ ಅರ್ಥಪೂರ್ಣ ಜೀವನ ನಡೆಸಿದರೂ ಜೀವನವನ್ನೆಲ್ಲ ಸತ್ಯಾನ್ವೇಷಣೆಯಲ್ಲಿಯೇ ಕಳೆದದ್ದು ವಿಧಿವಿಲಾಸವೇನೋ.

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *

Back To Top