ನಾಳೆಯ ಬಗ್ಗೆ ಭರವಸೆಯೇ ಇಲ್ಲ ಎಂಬಂತಿರುವ ರೈತರ ಪರಿಸ್ಥಿತಿಯೇ ಇಲ್ಲಿ ಕಥಾನಾಯಕ. ಅಂಥದ್ದೇ ಮನಸ್ಥಿತಿಯಲ್ಲಿರುವ ನಾಯಕ ವಿದೇಶದಲ್ಲಿ ದೊಡ್ಡ ಕಂಪನಿಯ ಮಾಲೀಕ. ಸೂಕ್ಷ್ಮ ಸಂವೇದನೆಯೇ ಇರದ ಆತ, ಭಾವುಕರನ್ನು ಮೂರ್ಖರೆಂಬಂತೆ ನೋಡುತ್ತಿರುತ್ತಾನೆ. ಮತ್ತೊಂದೆಡೆ ರಾಂಪುರದ ರೈತರು ಬರಡು ಭೂಮಿಯೊಂದಿಗೂ ಭಾವುಕ ಸಂಬಂಧ ಇರಿಸಿಕೊಂಡು ಅದನ್ನು ಸರ್ಕಾರ ಹಾಗೂ ಉದ್ಯಮಿಗಳಿಂದ ಉಳಿಸಿಕೊಳ್ಳಲು ಪರದಾಡುತ್ತಿರುತ್ತಾರೆ. ಇಂತಿಪ್ಪ ರೈತರು ಹಾಗೂ ನಾಯಕನ ಮಧ್ಯೆ ಸಂಬಂಧ ಬೆಸೆಯುವುದೇ ‘ಬಂಗಾರದ ಮನುಷ್ಯ’. ಹೀಗೆ ಬೆಸೆಯುವ ಕೆಲಸವನ್ನು ನಿರ್ದೇಶಕ ಯೋಗಿ ಅಚ್ಚುಕಟ್ಟಾಗಿಯೇ ಮಾಡಿದ್ದರೂ, ನಗಿಸುವುದರಲ್ಲಿ ಚಿಕ್ಕಣ್ಣ ಸ್ವಲ್ಪ ಸಪ್ಪೆ, ಸಾಧು ಕೋಕಿಲ ಅತಿ ಎನಿಸುವುದರಿಂದ ಹಾಸ್ಯ ಹದ ತಪ್ಪಿದಂತಿದೆ. ನೆನಪಿನಲ್ಲಿ ಉಳಿಯುವಂಥ ಟ್ಯೂನು, ಗುನುಗುವಂಥ ಹಾಡುಗಳಿಲ್ಲದಿರುವುದು ಚಿತ್ರದ ಮೈನಸ್ ಪಾಯಿಂಟ್. ಆದರೆ ಸನ್ ಆಫ್ ಬಂಗಾರದ ಮನುಷ್ಯನಾಗಿ ಶಿವರಾಜ್ಕುಮಾರ್ ನಟನೆ ಅವರಷ್ಟೇ ಮಾಗಿದೆ. ನಾಯಕಿ ವಿದ್ಯಾ ಪ್ರದೀಪ್ ಅಭಿನಯ ಇನ್ನೂ ಅಪಕ್ವ. ಎಂ.ಎಸ್. ರಮೇಶ್ ಬರೆದಿರುವ ಸಂಭಾಷಣೆ ಸತ್ತ್ವಭರಿತ. ಚಿತ್ರದುದ್ದಕ್ಕೂ ಡಾ. ರಾಜ್ಕುಮಾರ್ ಅವರನ್ನು ನೆನಪಿಸುವಂಥ ಸಮಯೋಚಿತ ದೃಶ್ಯ-ಮಾತುಗಳಿಂದಾಗಿ ಅಭಿಮಾನಿಗಳಿಗೆ ಡಬಲ್ ಖುಷಿ ಖಚಿತ. ಒಟ್ಟಿನಲ್ಲಿ ನಾಳೆ ಎಂಬುದನ್ನೇ ನಂಬದ ನಾಯಕ ಹೇಗೆ ರೈತರ ನಾಳೆಗಳನ್ನು ಚಂದಗಾಣಿಸುತ್ತಾನೆ ಎಂಬುದೇ ಸಿನಿಮಾ. ಅದಕ್ಕಾಗಿ ಆತನಾಡುವ ಬಂಗಾರದಂಥ ಮಾತುಗಳಲ್ಲಿ ಇಂದಿನ ರೈತರಿಗೂ ಸರ್ಕಾರಕ್ಕೂ ಉಪಯುಕ್ತ ಸಂದೇಶವಿದೆ. ಈ ಚಿತ್ರಕ್ಕೆ ವಿಜಯವಾಣಿ ಓದುಗರು ನೀಡಿರುವ ಸರಾಸರಿ ಅಂಕ 10ಕ್ಕೆ 7.
ಚಿತ್ರ: ಬಂಗಾರ S/o ಬಂಗಾರದ ಮನುಷ್ಯ
ನಿರ್ಮಾಪಕರು: ಜಯಣ್ಣ-ಭೋಗೇಂದ್ರ
ನಿರ್ದೇಶನ: ಯೋಗಿ ಜಿ. ರಾಜ್
ಪಾತ್ರವರ್ಗ: ಶಿವರಾಜ್ಕುಮಾರ್, ವಿದ್ಯಾ ಪ್ರದೀಪ್, ಚಿಕ್ಕಣ್ಣ, ಸಾಧುಕೋಕಿಲ, ಶರತ್ ಲೋಹಿತಾಶ್ವ ಮತ್ತಿತರರು.
ರೈತಪರ ಕಳಕಳಿ
ಚಿತ್ರದಲ್ಲಿ ರೈತರ ಬಗ್ಗೆ ಕಳಕಳಿ ವ್ಯಕ್ತವಾಗಿದೆ. ನಾಯಕ ಸರ್ಕಾರದ ವಿರುದ್ಧ ಹೋರಾಡುವ ದೃಶ್ಯಗಳು ರೋಚಕ. ಸಂದರ್ಭಕ್ಕೆ ತಕ್ಕ ಡೈಲಾಗ್ಗಳು ಪ್ರೇಕ್ಷಕರನ್ನು ಹಿಡಿದಿಡುತ್ತವೆ.
| ನವೀನ್ ಕಳ್ಳಿಮನಿ, ಹುಬ್ಬಳ್ಳಿ
10 ಕ್ಕೆ 7
ಕೌಟುಂಬಿಕ ಸಿನಿಮಾ
ಚಿತ್ರ ನೋಡುತ್ತಿದ್ದರೆ ಡಾ. ರಾಜ್ ನೆನಪಾಗುತ್ತಿರುತ್ತಾರೆ. ಶಿವಣ್ಣನ ನಟನೆ ಮತ್ತೆ ರಾಜ್ ಅಭಿನಯದ ಚಿತ್ರವನ್ನು ಮೆಲುಕು ಹಾಕುವಂತೆ ಮಾಡುತ್ತದೆ. ಮನೆಮಂದಿಯೆಲ್ಲ ಕುಳಿತು ನೋಡುವ ಕಥೆ ಇದೆ.
| ಗೋಪಾಲ ದಾಸರ ಬಾಗಲಕೋಟೆ
10 ಕ್ಕೆ 7
ಅನ್ನದಾತನಿಗೆ ಗೌರವ
ಅನ್ನದಾತನಿಗೆ ಗೌರವ ಸಿಗುವ ನಿಟ್ಟಿನಲ್ಲಿ ನಾಯಕನ ಹೋರಾಟದ ಕಥೆಯನ್ನು ನಿರ್ದೇಶಕರು ಚೆನ್ನಾಗಿ ಚಿತ್ರಿಸಿದ್ದಾರೆ. ಶಿವಣ್ಣ ಪಾತ್ರಕ್ಕೆ ಜೀವ ತುಂಬಿ ದ್ದಾರೆ. ಕಾಮಿ ಡಿಯೂ ಇದೆ.
| ಮಂಜುನಾಥ್ ಹುಲಿಹೈದರ್, ಹೊಸಪೇಟೆ
10 ಕ್ಕೆ 7
ಬಂಗಾರದಂಥ ಪಾತ್ರ
ಅಪ್ಪನ ಕನಸು ಈಡೇರಿಸಲು ವಿದೇಶದಿಂದ ಊರಿಗೆ ಬಂದು ಅಲ್ಲಿನ ಪರಿಸ್ಥಿತಿ ಬದಲಾಯಿಸುವ ಉತ್ತಮ ಕಥೆಯನ್ನು ಚಿತ್ರ ಹೊಂದಿದೆ. ಹೆಸರಿಗೆ ತಕ್ಕಂತೆ ಬಂಗಾರದಂಥ ಪಾತ್ರವನ್ನೇ ಶಿವರಾಜ್ ಮಾಡಿದ್ದಾರೆ.
| ಜಯಪ್ರಸಾದ್, ಮಂಗಳೂರು
10 ಕ್ಕೆ 7
ರೈತರಿಗಿರಲಿ ರಿಯಾಯಿತಿ
ರೈತರ ಸಮಾಧಿ ಯಾಕಿಲ್ಲ ಎಂಬ ನಾಯಕನ ಪ್ರಶ್ನೆ ಇಡೀ ರೈತ ಸಮುದಾಯದ ಪ್ರಶ್ನೆಯಾಗುತ್ತದೆ. ರಾಜ್ಯದ ರೈತರಿಗೆ ರಿಯಾಯಿತಿ ದರದಲ್ಲಿ ಈ ಸಿನಿಮಾ ತೋರಿಸಬೇಕು.
| ಆನಂದ ಕಪನೂರ, ಕಲಬುರಗಿ
10 ಕ್ಕೆ 8
ರಾಜ್ ನೆನಪು
ಡಾ. ರಾಜ್ ಅಭಿನಯದ ‘ಬಂಗಾರದ ಮನುಷ್ಯ’ನನ್ನು ಅವರ ಪುತ್ರ ಶಿವರಾಜ್ ಕುಮಾರ್ ಮತ್ತೊಮ್ಮೆ ತೆರೆ ಮೇಲೆ ನೆನಪಿಸಿದ್ದಾರೆ.
| ಸಚಿನ ಬಾಗಡೆ, ವಿಜಯಪುರ
10 ಕ್ಕೆ 8
ಕೊಟ್ಟ ದುಡ್ಡಿಗೆ ಮೋಸವಿಲ್ಲ
ರೈತಾಪಿ ಬದುಕಿನ ಬಗ್ಗೆ ಗಮನ ಸೆಳೆಯುವ ಕೆಲ ದೃಶ್ಯಗಳು ಮನಮುಟ್ಟುವಲ್ಲಿ ಯಶಸ್ವಿಯಾಗಿವೆ. ಶಿವಣ್ಣ ನಟನೆ ಚೆನ್ನಾಗಿದೆ. ಲಾಂಗ್ ಹಿಡಿದ ಶಿವಣ್ಣ ಇಲ್ಲಿ ಕೊಂಚ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಕೊಟ್ಟ ದುಡ್ಡಿಗೆ ಮೋಸವಿಲ್ಲ. ಕುಟುಂಬ ಸಮೇತವಾಗಿ ವೀಕ್ಷಿಸಬಹುದಾದ ಚಿತ್ರ ಎಂಬುದರಲ್ಲಿ ಎರಡು ಮಾತಿಲ್ಲ.
| ವಿಕಾಸ್, ಶಿವಮೊಗ್ಗ
10 ಕ್ಕೆ 7