Sunday, 24th June 2018  

Vijayavani

ಕಾವೇರಿ ನೀರು ಪ್ರಾಧಿಕಾರ ಸಮಿತಿ ರಚನೆ - ಕೇಂದ್ರದಿಂದ ರಾಜ್ಯಕ್ಕಾದ ಅನ್ಯಾಯದ ಬಗ್ಗೆ ಸರ್ಕಾರದಿಂದ ಪುಸ್ತಕ        ಮಾಜಿ ಸಿಎಂ ಸಿದ್ದುಗೆ ಎಚ್​ಡಿಕೆ ಬಂಪರ್ ಆಫರ್​ - ಸಮನ್ವಯ ಸಮಿತಿ ಅಧ್ಯಕ್ಷರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ?        ನಕಲಿ ದಾಖಲೆ ಸೃಷ್ಟಿಸಿ ಭೂಮಿ ಕಬಳಿಕೆ ಆರೋಪ - ಆತ್ಮಹತ್ಯೆ ಯತ್ನ - ಇದೆಲ್ಲಾ ಷಡ್ಯಂತ್ರ ಅಂದ್ರು ಮುನಿಯಪ್ಪ        ಕಲ್ಲಿನ ಹಾರ ಬೇಕಾದ್ರೆ ಕೊರಳಿಗೆ ಹಾಕಿ - ಸುಗಂಧರಾಜದ ಹೂವಿನ ಹಾರ ಬೇಡ್ವೇಬೇಡ - ಸಚಿವ ಡಿಕೆಶಿ ಆಕ್ಷೇಪ        ವಿದ್ಯುತ್ ಉಳಿಸಲು ಕೇಂದ್ರದ ಮೆಗಾ ಪ್ಲಾನ್ - ಇನ್ಮುಂದೆ 24 ಡಿಗ್ರಿಗೆ ಎಸಿ ಡಿಫಾಲ್ಟ್​ ಸೆಟ್ಟಿಂಗ್       
Breaking News

ಬಂಗಾರದಲ್ಲಿ ವಿಜ್ಞಾನಿ ವಿದ್ಯಾ

Friday, 19.05.2017, 3:06 AM       No Comments

| ಮಂಜು ಕೊಟಗುಣಸಿ

ಬೆಂಗಳೂರು: ನಟಿ ವಿದ್ಯಾ ಪ್ರದೀಪ್ ಮೂಲತಃ ಕೇರಳದವರು. ಕಾಲೇಜು ದಿನಗಳಲ್ಲೇ ಜಾಹೀರಾತುಗಳಲ್ಲಿ ಕಾಣಿಸಿಕೊಂಡು, ಒಂದು ಮಲಯಾಳಂ, ಎಂಟು ತಮಿಳು ಚಿತ್ರಗಳಲ್ಲಿ ನಟಿಸಿರುವ ಈ ದೇವರನಾಡಿನ ಬೆಡಗಿ ಚಂದನವನಕ್ಕೂ ಆಗಮಿಸಿದ್ದಾರೆ. ಮೊದಲ ಬಾರಿ ಶಿವರಾಜ್​ಕುಮಾರ್ ಜತೆ ‘ಬಂಗಾರ ಠ/ಟ ಬಂಗಾರದ ಮನುಷ್ಯ’ ಚಿತ್ರದಲ್ಲಿ ನಟಿಸಿದ್ದಾರೆ. ಇಂದು (ಮೇ 19) ಚಿತ್ರ ತೆರೆಗೆ ಬರುತ್ತಿದೆ.

 ಈ ಚಿತ್ರಕ್ಕೆ ನೀವು ಆಯ್ಕೆಯಾಗಿದ್ದು ಹೇಗೆ?

ಅನ್ಯ ಭಾಷೆಯಿಂದ ಅವಕಾಶಗಳು ಬಂದಾಗ ಎಕ್ಸೈಟ್​ವೆುಂಟ್ ಚೂರು ಹೆಚ್ಚಿರುತ್ತದೆ. ಪರಭಾಷೆಯಲ್ಲೂ ಗುರುತಿಸಿಕೊಳ್ಳಬೇಕೆನ್ನುವ ತವಕ ಎಲ್ಲ ಕಲಾವಿದರಲ್ಲಿಯೂ ಸಾಮಾನ್ಯ. ಅದೇ ರೀತಿ ನಾನೂ ಪರಭಾಷೆಯಲ್ಲಿ ನಟಿಸಬೇಕೆಂದುಕೊಂಡಿದ್ದೆ. ತಮಿಳಿನ ‘ಕಲಾರಿ’ ಚಿತ್ರದಲ್ಲಿ ಬಿಜಿಯಾಗಿದ್ದಾಗ ‘ಬಂಗಾರ..’ ಚಿತ್ರಕ್ಕಾಗಿ ಆಡಿಷನ್​ಗೆ ಬರುವಂತೆ ನಿರ್ದೇಶಕ ಯೋಗಿ ಜಿ. ರಾಜ್ ಕರೆ ಮಾಡಿದ್ದರು. ತುಂಬ ಖುಷಿಯಿಂದಲೇ ಆಡಿಷನ್ ನೀಡಿದ್ದೆ. ಕೆಲ ದಿನಗಳ ಬಳಿಕ ‘ನೀವು ಆಯ್ಕೆಯಾಗಿದ್ದೀರಿ’ ಎಂಬ ಸುದ್ದಿ ಬಂತು.

 ಮೊದಲ ಬಾರಿ ‘ಸೆಂಚುರಿ ಸ್ಟಾರ್’ ಶಿವರಾಜ್​ಕುಮಾರ್ ಜತೆ ಕೆಲಸ ಮಾಡಿದ ಅನುಭವ?

ನಿಜಕ್ಕೂ ಅಮೇಜಿಂಗ್. ನಾನು ಈಗ ತಾನೇ ಇಂಡಸ್ಟ್ರಿಗೆ ಬಂದು ಬೆರಳೆಣಿಕೆಯಷ್ಟು ಸಿನಿಮಾ ಮಾಡಿದ್ದೇನೆ ಅಷ್ಟೇ. ಆದರೆ ಮೂರು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿರುವ ಶಿವರಾಜ್​ಕುಮಾರ್ ಅವರೊಂದಿಗೆ ನಟಿಸುವುದೇ ಒಂದು ಭಾಗ್ಯ. ನಟನೆಯ ವಿಷಯ ಬಂದಾಗ ಅವರಿಂದ ಕಲಿಯುವುದು ತುಂಬ ಇದೆ. ಜತೆಯಲ್ಲಿ ನಟಿಸುವವರಿಗೆ ಅವರು ಅಭಿನಯದ ಕುರಿತ ಅದ್ಭುತವಾದ ಸ್ಪೂರ್ತಿ ನೀಡುವ ಮಾತುಗಳನ್ನಾಡುತ್ತಾರೆ.

ಡಾನ್ಸ್​ನಲ್ಲಿ ಅವರನ್ನು ಮೀರಿಸುವುದೇ ಕಷ್ಟ. ಈ ವಯಸ್ಸಿನಲ್ಲೂ ಅವರಲ್ಲಿನ ಸ್ಟ್ರೆಂಥ್ ನಿಜಕ್ಕೂ ಆಶ್ಚರ್ಯ ಮೂಡಿಸುತ್ತದೆ. ಅವರಿಂದ ನೀವು ಕಲಿತಿದ್ದೇನು?

ಸಿನಿಮಾಕ್ಕೆ ಅವರು ತೋರಿಸುವ ಪ್ರೀತಿ. ಪ್ರತಿ ಶಾಟ್​ನಲ್ಲೂ ತೊಡಗಿಸಿಕೊಳ್ಳುವ ಗುಣ ಇಷ್ಟವಾಗುತ್ತದೆ. ಅವರು ಸದಾ ಹಸನ್ಮುಖಿ. ಹೊಸಬರಿಗೆ ಅದರಲ್ಲೂ ನನ್ನಂಥ ಪರಭಾಷಾ ಕಲಾವಿದರನ್ನು ಪ್ರೋತ್ಸಾಹಿಸುವ ಅವರ ದೊಡ್ಡತನ ನಿಜಕ್ಕೂ ಗ್ರೇಟ್. ‘ಇದು ಹಾಗಲ್ಲ ಹೀಗೆ. ಈ ಪಾತ್ರವನ್ನು ನಿಭಾಯಿಸುವ ರೀತಿ ಹೀಗೆ..’ ಎಂದು ನಟನೆಯ ಕೆಲ ಪಾಠಗಳನ್ನು ಹೇಳಿಕೊಟ್ಟಿದ್ದಾರೆ. ಅವರು ತೀರಾ ಸಿಂಪಲ್ ನಟ. ಯಾವುದೇ ಆಡಂಬರ ಅವರಲ್ಲಿ ಕಾಣುವುದಿಲ್ಲ, ಒಳ್ಳೆಯ ವ್ಯಕ್ತಿ. ಹೀಗಾಗಿ ಅವರಲ್ಲಿನ ಸರಳತೆ ನನಗೆ ತುಂಬ ಅಚ್ಚುಮೆಚ್ಚು. ನಾನು ಅದನ್ನು ಅಳವಡಿಸಿಕೊಳ್ಳಲಿದ್ದೇನೆ.

ಈ ಚಿತ್ರದಲ್ಲಿ ನಿಮ್ಮ ಪಾತ್ರ ಹೇಗಿರುತ್ತದೆ?

ಕ್ಷಮಿಸಿ.. ಇದನ್ನು ನಾನು ಹೇಳಲಾರೆ. ಚಿತ್ರ ನೋಡಿಯೇ ನೀವು ಪಾತ್ರದ ಬಗ್ಗೆ ತಿಳಿದುಕೊಳ್ಳಬೇಕು. ನನ್ನದು ಒಂದು ರೀತಿಯ ಬಬ್ಲಿ ಬಬ್ಲಿ ಕ್ಯಾರೆಕ್ಟರ್. ಜತೆಗೆ ಅಷ್ಟೇ ಗಟ್ಟಿ ಪಾತ್ರ ಕೂಡ. ಕಥೆಯ ವಿಷಯಕ್ಕೆ ಬಂದರೆ ವಿದೇಶದಲ್ಲಿರುವ ನಾನು ಕೆಲ ಕಾರಣಗಳಿಗೆ ಭಾರತಕ್ಕೆ ಬರುತ್ತೇನೆ. ಅಲ್ಲಿಂದ ಚಿತ್ರ ಮತ್ತೊಂದು ತಿರುವು ಪಡೆದುಕೊಳ್ಳುತ್ತದೆ.

ಚಿತ್ರೀಕರಣದ ವೇಳೆ ಯಾವುದಾದರೂ ಮರೆಯಲಾಗದ ಘಟನೆ..?

ಚಿತ್ರೀಕರಣಕ್ಕಾಗಿ ಉತ್ತರ ಕರ್ನಾಟಕದ ಕಡೆ ಹೋದಾಗ, ಅಲ್ಲಿನ ಜನತೆ ಅತಿಯಾದ ಪ್ರೀತಿ ತೋರಿಸುತ್ತಿದ್ದರು. ಇತ್ತ ಮಂಡ್ಯದಲ್ಲಿ ಶೂಟಿಂಗ್ ಮಾಡುವಾಗ ಗ್ರಾಮೀಣ ಭಾಗದ ಜನರೊಂದಿಗೆ ಒಳ್ಳೆಯ ಒಡನಾಟ ಮೂಡಿತ್ತು. ನಿತ್ಯ ರೈತರ ಮನೆಯಲ್ಲಿಯೇ ರಾಗಿಮುದ್ದೆ, ಕೋಳಿಸಾರು ಮಾಡಿ ನಾನೇ ಬಡಿಸಿದ್ದುಂಟು. ನಿತ್ಯ ಒಂದಲ್ಲ ಒಂದು ಮನೆಯಿಂದ ಊಟಕ್ಕೆ ಆಹ್ವಾನ ಬರುತ್ತಿತ್ತು. ವಿವಿಧ ಬಗೆಯ ಊಟದ ರುಚಿ ಸವಿದಿದ್ದೇನೆ. ಅದನ್ನೆಲ್ಲ ಎಂದೂ ಮರೆಯಲು ಸಾಧ್ಯವಿಲ್ಲ.

ರೈತರ ಬದುಕಿಗೂ ಈ ಸಿನಿಮಾಕ್ಕೂ ಏನೋ ನಂಟಿದೆಯಂತೆ, ಹೌದಾ?

ಚಿತ್ರದ ಹೆಸರೇ ಸೂಚಿಸುವಂತೆ ರೈತನನ್ನು ಗಮನದಲ್ಲಿಟ್ಟುಕೊಂಡೇ ಸಿನಿಮಾ ಸಿದ್ಧಗೊಂಡಿದೆ. ದೇಶದ ಅಭಿವೃದ್ಧಿಯಲ್ಲಿ ಕೃಷಿಕರ ಪಾತ್ರವೂ ಪ್ರಾಮುಖ್ಯತೆ ಪಡೆದುಕೊಂಡಿದೆ. ಅದರೊಂದಿಗೆ ಹಲವಾರು ಸಮಸ್ಯೆಗಳನ್ನು ರೈತರು ಎದುರಿಸುತ್ತಿದ್ದಾರೆ. ಬರಗಾಲ, ಬೆಳೆಹಾನಿಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತನ ಈ ಸಂಕಷ್ಟಗಳಿಗೆ ಭಾರತೀಯರು ದನಿಗೂಡಿಸುವ ಜರೂರತ್ತಿದೆ. ದೇಶದ ಬೆನ್ನೆಲುಬಾಗಿರುವ ರೈತರ ಬಗ್ಗೆ ನನಗೆ ಹೆಮ್ಮೆ ಇದೆ. ಇಂತಹ ಮಾತುಗಳನ್ನು ಹೇಳಲು ನಾನು ಚಿಕ್ಕವಳು ಎನಿಸಿದರೂ ಸಿನಿಮಾದ ಮೂಲಕ ಸಂದೇಶವೊಂದನ್ನು ತಿಳಿಸಿದ್ದೇವೆ.

‘ಬಂಗಾರ..’ದಲ್ಲಿ ನಟಿಸಿದ ಬಳಿಕ ಕನ್ನಡ ಮಾತನಾಡಲು ಕಲಿತಿರಾ?

ಮೂಲತಃ ನಾನು ಕೇರಳದವಳಾದರೂ ಮಲಯಾಳಂ ಸಿನಿಮಾಗಳಿಗಿಂತ ತಮಿಳಿನಲ್ಲಿಯೇ ಹೆಚ್ಚಿನ ಚಿತ್ರಗಳನ್ನು ಮಾಡಿದ್ದೇನೆ. ಹೀಗಾಗಿ ತಮಿಳು, ತೆಲುಗು ನನಗೆ ಅಷ್ಟೊಂದು ಕಷ್ಟಕರವಾಗಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾ ಮಾಡುತ್ತಿರುವುದರಿಂದ ಭಾಷೆಯ ಬಗ್ಗೆ ಕೊಂಚ ಅಳುಕಿತ್ತು. ಆದರೆ ಆ ಅಳುಕನ್ನು ಶಿವರಾಜ್​ಕುಮಾರ್ ನಿವಾರಣೆ ಮಾಡಿದ್ದಾರೆ. ಇದೀಗ ಸ್ವಲ್ಪ ಸ್ವಲ್ಪ ಕನ್ನಡ ಮಾತನಾಡಲು ಬರುತ್ತದೆ. ನನಗೆ ಕನ್ನಡ ಕಲಿಸಿದ ಕ್ರೆಡಿಟ್ ‘ಬಂಗಾರ..’ ಸಿನಿಮಾಕ್ಕೆ ಸಲ್ಲಬೇಕು.

ಕನ್ನಡದಿಂದ ಹೊಸ ಹೊಸ ಅವಕಾಶಗಳು ಬರುತ್ತಿವೆಯೇ?

ಹೌದು.. ಈಗಾಗಲೇ ಸುಮಾರು ಸಿನಿಮಾಗಳಲ್ಲಿ ಅವಕಾಶಗಳು ಬರುತ್ತಿವೆ. ಆದರೆ ನನ್ನ ಫೋಕಸ್ ಇದೀಗ ‘ಬಂಗಾರ..’ ಸಿನಿಮಾ ಮೇಲಿದೆ. ಈ ಚಿತ್ರದ ಬಿಡುಗಡೆ ಬಳಿಕವಷ್ಟೇ ನನ್ನ ಮುಂದಿನ ಕನ್ನಡ ಸಿನಿಮಾ ಯಾವುದೆಂದು ನಾನೇ ನಿರ್ಧರಿಸಲಿದ್ದೇನೆ. ಈ ಸಿನಿಮಾ ತೆರೆಕಂಡ ಬಳಿಕ ಸ್ಯಾಂಡಲ್​ವುಡ್​ನಲ್ಲಿಯೂ ಗುರುತಿಸಿಕೊಳ್ಳಬೇಕೆನ್ನುವ ತವಕ ನನ್ನಲ್ಲಿದೆ.

ಕನ್ನಡ ಚಿತ್ರರಂಗಕ್ಕೂ ಬೇರೆ ಚಿತ್ರರಂಗಕ್ಕೂ ನೀವು ಕಂಡುಕೊಂಡ ವ್ಯತ್ಯಾಸ?

ಈಗಾಗಲೇ ನಾನು ಎಂಟು ತಮಿಳು ಹಾಗೂ ಒಂದು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದೇನೆ. ಇದು ನನ್ನ 10ನೇ ಸಿನಿಮಾ. ಇನ್ನುಳಿದಂತೆ 3 ಚಿತ್ರಗಳು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿವೆ. ಹೀಗಾಗಿ ಬೇರೆ ಇಂಡಸ್ಟ್ರಿಯಲ್ಲಿನ ವಾತಾವರಣದ ಬಗ್ಗೆ ತಿಳಿದಿದ್ದೇನೆ. ಅದೇ ರೀತಿ ಕನ್ನಡದಲ್ಲಿಯೂ ನುರಿತ ಟೀಮ್ ಜತೆಯಲ್ಲಿ ಕೆಲಸ ಮಾಡಿದ ಅನುಭವವಾಗಿದೆ. ಭಾಷೆಯೊಂದನ್ನು ಬಿಟ್ಟರೆ ಎಲ್ಲದರಲ್ಲಿಯೂ ನಾನು ಹೊಂದಿಕೊಂಡಿದ್ದೇನೆ.

ವೃತ್ತಿಯಲ್ಲಿ ನೀವು ವಿಜ್ಞಾನಿ. ಈ ಸಿನಿಕರಿಯರ್​ಗೆ ಬಂದಿದ್ದು ಹೇಗೆ?

ಬಯೋಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಪಿಎಚ್​ಡಿ ಕೂಡ ಮಾಡುತ್ತಿದ್ದೇನೆ. ಮೊದಲಿಂದಲೂ ನಾನು ಹಲವು ತೆಲುಗು, ತಮಿಳು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದೆ. ಬಳಿಕ ಜಾಹೀರಾತು ಕ್ಷೇತ್ರದಲ್ಲಿರುವಾಗಲೇ ಹಲವು ಸಿನಿಮಾ ಅವಕಾಶಗಳು ಅರಸಿಕೊಂಡು ಬಂದಿದ್ದವು. ಯಾಕೆ ಈ ಚಾನ್ಸ್ ಬಳಸಿಕೊಳ್ಳಬಾರದು ಎಂದೆನಿಸಿದ್ದರಿಂದ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟೆ. ನಟನೆಯ ಬಗ್ಗೆ ಎಲ್ಲಿಯೂ ತರಬೇತಿ ಪಡೆಯದೆ ನನಗೆ ತಿಳಿದಷ್ಟು ನಟಿಸುತ್ತ ಬಂದಿದ್ದೇನೆ. ಜಾಹೀರಾತು ಕ್ಷೇತ್ರವೇ ನನ್ನನ್ನು ಸಿನಿಮಾರಂಗಕ್ಕೆ ಕರೆತರಲು ಪ್ರೇರಣೆ ನೀಡಿದೆ ಎಂದರೂ ತಪ್ಪಿಲ್ಲ.

 

 

Leave a Reply

Your email address will not be published. Required fields are marked *

Back To Top