Thursday, 19th July 2018  

Vijayavani

ತೆರೆದ ವಾಹನದಲ್ಲಿ ಶೀರೂರು ಶ್ರೀ ಮೆರವಣಿಗೆ - ಉಡುಪಿ ತಲುಪಿದ ಶ್ರೀಗಳ ಪಾರ್ಥಿವ ಶರೀರ - ಭಕ್ತರಲ್ಲಿ ಮಡುಗಟ್ಟಿದ ಶೋಕ        ಶೀರೂರು ಶ್ರೀ ಅಸಹಜ ಸಾವು - ರಥಬೀದಿಯಲ್ಲಿ 45 ನಿಮಿಷ ಸಾರ್ವಜನಿಕ ದರ್ಶನ - ಶೀರೂರಿಗೆ ಡಿಸಿ, ಜಿಪಂ ಸಿಇಓ ಆಗಮನ        ಶೀರೂರು ಶ್ರೀ ಅಹಸಜ ಸಾವು ಹಿನ್ನೆಲೆ - ಶೀರೂರು ಮಠಕ್ಕೆ ಫೋರೆನ್ಸಿಕ್ ತಜ್ಞರ ಭೇಟಿ - ಶ್ರೀಗಳ ಲ್ಯಾಪ್​ಟಾಪ್ ಪರಿಶೀಲನೆ        ರಾಜ್ಯದಲ್ಲಿ ಮಹಾ ಮಳೆಯ ಅಬ್ಬರ - ಮಡಿಕೇರಿಯ ಹಾರಂಗಿ ಜಲಾಶಯ ಭರ್ತಿ - ವಿಶೇಷ ಪೂಜೆ ಸಮರ್ಪಿಸಿದ ಸಿಎಂ        ನಾಳೆ ಕೇಂದ್ರ ಸರ್ಕಾರಕ್ಕೆ ಅವಿಶ್ವಾಸ ಪರೀಕ್ಷೆ - ಮೋದಿ ಸರ್ಕಾರದ ಬೆಂಬಲಕ್ಕೆ ನಿಂತ ಶಿವಸೇನೆ -ನಡೆಯೋದಿಲ್ವಾ ಸೋನಿಯಾ ಆಟ?        ಐನೂರಾಯ್ತು, 2 ಸಾವಿರ ಆಯ್ತು - ಆರ್​ಬಿಐನಿಂದ ಈಗ 100ರ ಹೊಸ ನೋಟು ಬಿಡುಗಡೆ - ನೇರಳೆ ಬಣ್ಣದಲ್ಲಿ ಬರಲಿದೆ ನೂರು ರೂ.       
Breaking News

ಫೀಡ್​ಬ್ಯಾಕ್ ನೆವದ ಪೀಡಕ ಸರಾಹ

Sunday, 27.08.2017, 3:05 AM       No Comments

ಎಲ್ಲರೂ ನಮ್ಮ ಬಗ್ಗೆ ಒಳ್ಳೆಯದನ್ನೇ ಹೇಳುತ್ತಿರುವವರೆಗೆ ಎಲ್ಲವೂ ಸರಿಯಾಗಿಯೇ ಇರುತ್ತದೆ. ಕೆಟ್ಟ ಸಂದೇಶಗಳು ಕುಹಕ-ಕಟಕಿ-ಕೊಂಕುಗಳು ಬರಲಾರಂಭವಾದ ಕ್ಷಣದಲ್ಲಿ ಅದು ನಮ್ಮ ಜೀವನವನ್ನೇ ಆಳಲು, ಹಾಳುಗೆಡವಲು ಆರಂಭಿಸುತ್ತದೆ. ಹಿಮ್ಮಾಹಿತಿಯ ನೆಪದಲ್ಲಿ ಇಂಥದೊಂದು ಅನವಶ್ಯಕ ಬಳ್ಳಿಯು ನಮ್ಮ ಕಾಲನ್ನು ತೊಡರಿಕೊಳ್ಳುವುದು ತರವೇ?

ಕಳೆದ ಹತ್ತು ವರ್ಷಗಳಿಂದಲೂ, ದೇಶದ ವಿವಿಧೆಡೆಯ ಕಚೇರಿಗಳಲ್ಲಿರುವ ನಮ್ಮ ಕಂಪನಿಯ ಸಹೋದ್ಯೋಗಿಗಳೆಲ್ಲ ವಾರ್ಷಿಕ ಸಮ್ಮಿಲನಕ್ಕೆಂದು (ಆನ್ಯುಯಲ್ ಆಫ್-ಸೈಟ್) ಊರ ಹೊರಗಿನ ರೆಸಾರ್ಟ್ ಒಂದರಲ್ಲಿ ಎರಡು ದಿನ ಒಟ್ಟಿಗೆ ಕಳೆಯುತ್ತೇವೆ. ಪ್ರತಿ ವರ್ಷವೂ, ಈ ಕೂಟದ ಅಂತ್ಯದಲ್ಲಿ ಒಂದು ಫೀಡ್​ಬ್ಯಾಕ್ ಸೆಷನ್/ಹಿಮ್ಮಾಹಿತಿ ಸಮಯ ಇರುತ್ತದೆ. ಎರಡು ದಿನದ ಔದ್ಯಮಿಕ ಹಾಗೂ ಮನರಂಜನಾ ಕಾರ್ಯಕ್ರಮಗಳ ದಣಿವು ಈ ಫೀಡ್​ಬ್ಯಾಕ್ ಸಮಯಕ್ಕೆ ತಟ್ಟದಿರಲೆಂದು, ಪ್ರತಿಬಾರಿಯೂ ಇದನ್ನು ಸಾಕಷ್ಟು ಕುತೂಹಲಕಾರಿಯಾಗಿಸಲು ಯತ್ನಿಸುತ್ತೇವೆ.

ಸರಳ, ನೇರ ಫೀಡ್​ಬ್ಯಾಕ್: ಮೊದಮೊದಲಿನ ವರ್ಷಗಳಲ್ಲಿ ಉದ್ಯೋಗಿಗಳ ಸಂಖ್ಯೆ ಕಡಿಮೆಯಿದ್ದಾಗ ನಾವು ಪಾಲಿಸುತ್ತಿದ್ದ ಕ್ರಮ ಈ ರೀತಿಯಾಗಿತ್ತು. ಕಂಪನಿಯಲ್ಲಿನ ಎಲ್ಲರೂ ಒಬ್ಬರಿಗೊಬ್ಬರು ಕಣ್ಣು ಮಿಲಾಯಿಸುವುದು ಸಾಧ್ಯವಾಗುವಂತೆ ವಿಶಾಲವಾದ ವೃತ್ತಾಕಾರದಲ್ಲಿ ಕೂರುವುದು. ಪ್ರತಿಯೊಬ್ಬರೂ ಕಂಪನಿಯ ಇತರೆಲ್ಲರ ಬಗೆಗೂ ಮೂರು ಒಳ್ಳೆಯ ವಿಷಯವನ್ನು ವಿಸ್ತರಿಸಿ ಹೇಳಬೇಕು. ಒಳ್ಳೆಯದನ್ನೇ ಹೇಳಬೇಕು, ಮತ್ತು ಕೆಟ್ಟದ್ದೇನನ್ನೂ ಹೇಳುವಂತಿಲ್ಲ. ವಿಮರ್ಶೆಗಾಗಲೀ ವ್ಯಂಗ್ಯಕ್ಕಾಗಲೀ ಕಟಕಿಗಾಗಲೀ ಇಲ್ಲಿ ಅವಕಾಶವಿಲ್ಲ. ಓರ್ವ ವ್ಯಕ್ತಿಯ ಒಳ್ಳೆಯ ಗುಣಗಳ ಗುಣಗಾನ ಮಾಡಿ, ಅವರ ವ್ಯಕ್ತಿತ್ವದ ಸಕಾರಾತ್ಮಕ ಅಂಶಗಳನ್ನು ಸಂಭ್ರಮಿಸುವುದಷ್ಟೇ ಈ ಸೆಷನ್​ನ ಉದ್ದೇಶವಾಗಿರುತ್ತಿತ್ತು. ಅಂದಹಾಗೆ, ಯಾರಿಗೂ ನೋಟ್ಸ್ ಮಾಡಿಕೊಳ್ಳುವ ಅವಕಾಶ ಇರುತ್ತಿರಲಿಲ್ಲ. ಒಳ್ಳೆಯದನ್ನು ಹೇಳುವವರು ತಮ್ಮ ನೆನಪಿನ ಬುತ್ತಿಯಿಂದಲೇ ವಿಷಯವನ್ನು ಹೊರತೆಗೆದು ಹೇಳಿದರೆ, ಕೇಳಿಸಿಕೊಳ್ಳುವವರು ಮತ್ತದೇ ಜ್ಞಾಪಕಶಾಲೆಯಲ್ಲಿಯೇ ಅದನ್ನು ದಾಖಲಿಸಿಕೊಳ್ಳಬೇಕು. ಹಾಗಾಗಿ, ಇದು ಸ್ವಲ್ಪಮಟ್ಟಿಗೆ ಮಾನಸಿಕ ಕಸರತ್ತಿನ ಕೆಲಸ ಎಂದು ಅನ್ನಿಸಿದರೂ, ಗಂಟೆಗಟ್ಟಲೆ ನಡೆಯುತ್ತಿದ್ದ ಈ ಸೆಷನ್​ನಲ್ಲಿ ಯಾರೊಬ್ಬರೂ ದಣಿಯುತ್ತಿರಲಿಲ್ಲ. ಇನ್ನೊಬ್ಬರ ಬಗ್ಗೆ ಒಳ್ಳೆಯದನ್ನು ನೆನೆದು, ಅದನ್ನು ವಿಸ್ತಾರವಾಗಿ ಹಾಡಿ ಹೊಗಳುವಾಗ ಅದೆಂತಹ ಸಕಾರಾತ್ಮಕ ಶಕ್ತಿಯ ಉತ್ಪಾದನೆಯಾಗುತ್ತದೆ ಎನ್ನುವುದಕ್ಕೆ ಈ ಫೀಡ್​ಬ್ಯಾಕ್ ಸೆಷನ್​ಗಳು ಜ್ವಲಂತ ನಿದರ್ಶನಗಳಾಗಿದ್ದವು.

ಎಷ್ಟೋ ಸಂದರ್ಭಗಳಲ್ಲಿ ಮೂರು ಒಳ್ಳೆಯ ವಿಷಯಗಳನ್ನು ಹೇಳಿದರೆ ಸಾಕು ಎಂದಿದ್ದರೂ, ಜನರಿಗೆ ಕೆಲವರ ಬಗ್ಗೆ ಐದಾರು ಒಳ್ಳೆಯ ವಿಷಯಗಳನ್ನು ಹೇಳದೆ ನಿಲ್ಲಿಸಲಾಗುತ್ತಿರಲಿಲ್ಲ. ಎದುರುಬದುರು ಕುಳಿತು ಕಣ್ಣುಮಿಲಾಯಿಸುತ್ತಾ ಒಬ್ಬರು ಮತ್ತೊಬ್ಬರ ಬಗ್ಗೆ ಒಳ್ಳೆಯದನ್ನು ಹೇಳಿದರೆ, ಮಿಕ್ಕವರೆಲ್ಲರೂ ತಮ್ಮ ಸರದಿ ಬಂದಾಗ ಅದಕ್ಕೆ ಪೂರಕವಾಗಿ, ಆದರೂ ಸ್ವಲ್ಪ ಭಿನ್ನವಾಗಿ ಏನು ಸೇರಿಸಬಹುದು ಎಂದು ಯೋಚಿಸುತ್ತಿದ್ದರು. ಇದೆಲ್ಲವೂ ಸೇರಿ, ಒಬ್ಬೊಬ್ಬರ ಬಗ್ಗೆಯೂ ನೂರಾರು ಒಳ್ಳೆಯ ವಿಷಯಗಳು ಪಟ್ಟಿಯಾಗುತ್ತಿದ್ದವು. ಈ ಒಳ್ಳೆಯ ವಿಷಯಗಳು ಎಷ್ಟೋ ಬಾರಿ ವೃತ್ತಿವಲಯದ ಒಳ್ಳೆಯತನಗಳನ್ನೂ ಮೀರಿ, ಒಟ್ಟಾರೆ ವ್ಯಕ್ತಿತ್ವವನ್ನು ಸಂಭ್ರಮಿಸುತ್ತಿದ್ದವು.

ಫೀಡ್​ಬ್ಯಾಕ್ ಚುಟುಕಾಯಿತು: ವರ್ಷಗಳುರುಳಿದ ಹಾಗೆ ನಮ್ಮ ಕಚೇರಿಯಲ್ಲಿನ ಜನರ ಸಂಖ್ಯೆ ಹೆಚ್ಚತೊಡಗಿತು. ಆ ಕಾರಣದಿಂದಾಗಿ ಕಾಲಾನುಕ್ರಮದಲ್ಲಿ ನಮ್ಮ ಫೀಡ್​ಬ್ಯಾಕ್ ಸೆಷನ್​ಗಳ ಮಾದರಿಯೂ ಬದಲಾಗಬೇಕಾಯಿತು. ‘ಒಬ್ಬೊಬ್ಬರೂ ಮತ್ತೆಲ್ಲರ ಬಗ್ಗೆಯೂ ಮೂರು ಒಳ್ಳೆಯ ವಿಷಯವನ್ನು ಹೇಳಬೇಕು‘ ಎನ್ನುವುದನ್ನು ಬದಲಾಯಿಸಿ, ‘ಎಲ್ಲರೂ ಮತ್ತೆಲ್ಲರನ್ನು ಒಂದು ವಾಕ್ಯದಲ್ಲಿ ವರ್ಣನೆ ಮಾಡಬೇಕು‘ ಎಂಬಲ್ಲಿಗೆ ತಂದುನಿಲ್ಲಿಸಿದೆವು. ಹೀಗೆ ಮಾಡುವಾಗ, ಮತ್ತಷ್ಟು ಸಮಯ ಉಳಿಸಲು ಒಂದು ಉಪಾಯ ಮಾಡಿದೆವು. ಎಲ್ಲರೂ ತಮ್ಮ ಬೆನ್ನಿಗೆ ಒಂದು ರಟ್ಟಿನ ಬೋರ್ಡ್ ನೇತುಹಾಕಿಕೊಳ್ಳುವುದು. ಎಲ್ಲರೂ ಚಿಕ್ಕ ಅಂಟಿನ ಚೀಟಿಗಳಲ್ಲಿ (ಪೋಸ್ಟ್-ಇಟ್-ನೋಟ್ಸ್) ಮತ್ತೆಲ್ಲರ ಕುರಿತಾದ ಒಳ್ಳೆಯ ಅನಿಸಿಕೆಗಳನ್ನು ಬರೆದು, ಮೈಮೇಲೆ ನೇತುಹಾಕಿಕೊಂಡಿರುವ ದೊಡ್ಡ ರಟ್ಟಿಗೆ ಅದನ್ನು ಅಂಟಿಸುವುದು. ಒಂದು ದೊಡ್ಡ ಹಾಲ್​ನಲ್ಲಿ ಜನರು ಸಂಭ್ರಮದಿಂದ ಚೀಟಿ ಬರೆಯುತ್ತಾ ಅದನ್ನು ಮತ್ತೊಬ್ಬರ ಮೈಗೆ ಅಂಟಿಸಲು ಅತ್ತಿಂದಿತ್ತ ಓಡಾಡುವುದನ್ನು ನೋಡುವುದೇ ಚೇತೋಹಾರಿಯಾಗಿತ್ತು. ಇನ್ನೊಬ್ಬರನ್ನು ಸಂತೋಷಪಡಿಸಿದಾಗ ನಮಗಾಗುವ ಆನಂದಕ್ಕೆ ಸಮನಾದುದು ಯಾವುದೂ ಇಲ್ಲ ಎನ್ನುವುದು ಮತ್ತೊಮ್ಮೆ ಸ್ಥಾಪಿತವಾಯಿತು.

ಫೀಡ್​ಬ್ಯಾಕ್ ಅಜ್ಞಾತವಾಯಿತು: ಇನ್ನಷ್ಟು ವರ್ಷಗಳಲ್ಲಿ ನಮ್ಮ ತಂಡ ಇನ್ನೂ ದೊಡ್ಡದಾಯಿತು. ಫೀಡ್​ಬ್ಯಾಕ್ ಸೆಷನ್ ಅನ್ನು ಇನ್ನಷ್ಟು ಮೊಟಕುಗೊಳಿಸುವುದು ಅನಿವಾರ್ಯವಾಯಿತು. ಆ ಅಂಟಿನ ಚೀಟಿಯನ್ನು ಇನ್ನಷ್ಟು ಚಿಕ್ಕದಾಗಿಸಿದೆವು. ವಾಕ್ಯದ ಬದಲು ಮೂರ್ನಾಲ್ಕು ಪದಗಳಲ್ಲಿ ವರ್ಣಿಸಬೇಕಾಯಿತು. ಬೆನ್ನಿನ ಮೇಲೆ ರಟ್ಟನ್ನು ನೇತುಹಾಕುವ ಬದಲು ಅವರವರು ಕೂರುವ ಕುರ್ಚಿಯ ಮೇಲೆ ಅದನ್ನು ಇಡಲು ಹೇಳಲಾಯಿತು. ಮುಂಚಿನಂತೆಯೇ ಜನರು ಇತರ ಎಲ್ಲರ ಜಾಗಕ್ಕೂ ಬಂದು ಅವರ ಹೆಸರು ಬರೆದಿರುವ ರಟ್ಟಿಗೆ ಚೀಟಿ ಅಂಟಿಸಬೇಕು. ಸ್ಥಳದ ಅಭಾವದಿಂದಾಗಿ ಇನ್ನೂ ಒಂದು ‘ಮಹತ್ತರವಾದ‘ ಬದಲಾವಣೆ ತಂದೆವು. ಫೀಡ್​ಬ್ಯಾಕ್ ಚೀಟಿಯಲ್ಲಿ ನಿಮ್ಮ (ಸಂದೇಶ ಕೊಡುತ್ತಿರುವವರ) ಹೆಸರನ್ನು ಬರೆಯುವ ಅಗತ್ಯವಿಲ್ಲ, ಸಂದೇಶವನ್ನಷ್ಟೇ ಬರೆದರೆ ಸಾಕು ಎಂದೆವು!

ಅಲ್ಲಿಗೆ, ಎಲ್ಲವೂ ಬದಲಾಗಿಹೋಯಿತು!: ತಾವು ಕೊಟ್ಟ ಫೀಡ್​ಬ್ಯಾಕ್​ಗೆ ತಮ್ಮ ಹೆಸರಿನ ನಂಟಿಲ್ಲ ಎನ್ನುವುದು ಗೊತ್ತಾಗುತ್ತಲೇ, ಕೆಲವರು ದುರ್ಬುದ್ಧಿ ತೋರಲಾರಂಭಿಸಿದರು. ಇನ್ನೊಬ್ಬರ ಬಗ್ಗೆ ಒಳ್ಳೆಯದನ್ನೇ ಹೇಳಬೇಕು ಎನ್ನುವ ನಿಯಮವಿದ್ದರೂ ಕೆಲವರು ಬೇಕಂತಲೇ ಮತ್ತೊಬ್ಬರನ್ನು ಟೀಕಿಸುವ, ಖಂಡಿಸುವ, ರೇಗಿಸುವ ಅಥವಾ ಅವಮಾನಿಸುವ ಸಂದೇಶಗಳನ್ನು ಬರೆದಿದ್ದರು! ಮತ್ತೆ ಕೆಲವರು, ಯಾವುದೇ ಸಂದೇಶವನ್ನು ಬರೆಯುವ ಗೋಜಿಗೇ ಹೋಗಿರಲಿಲ್ಲ (ತಪ್ಪಿಹೋಗಿರುವ ಚೀಟಿ ಯಾರದ್ದೆಂದು ನಿರ್ಧರಿಸುವುದು ಕಠಿಣವಾದುದರಿಂದ!). ಕೆಟ್ಟ ಸಂದೇಶ ಬರೆದವರು, ಹಾಗೆ ಮಾಡಿದವರು ಯಾರು ಎಂದು ಗೊತ್ತಾಗದ ಹಾಗೆ ‘ಜಾಣ್ಮೆ‘ಯನ್ನು ಪ್ರದರ್ಶಿಸಿದ್ದರಾದರೂ, ಸಂದೇಶ ಪಡೆದುಕೊಂಡವರಿಗೆ ಒಂದಿಲ್ಲೊಂದು ರೀತಿಯಲ್ಲಿ ನೋವುಂಟುಮಾಡುವುದು ಇಲ್ಲಿನ ಉದ್ದೇಶವಾಗಿತ್ತು. ಆ ಉದ್ದೇಶ ಈಡೇರಿತು ಕೂಡ! ಏಕೆಂದರೆ, ಹಿಂದಿನ ವರ್ಷಗಳ ಫೀಡ್​ಬ್ಯಾಕ್ ಸೆಷನ್​ಗಳ ನಂತರದಲ್ಲಿ ಇರುತ್ತಿದ್ದ ‘ಒಳ್ಳೆಯದು ಮಾಡಿದ ಸಾರ್ಥಕ ಭಾವನೆ‘ ಮತ್ತು ‘ಬೆನ್ನುತಟ್ಟಿಸಿಕೊಂಡಾಗ ಸಿಗುವ ಗೆಲುವಿನ ಹರ್ಷ‘ ಈ ಬದಲಾವಣೆಯ ನಂತರದ ವರ್ಷಗಳಲ್ಲಿ ಕಡಿಮೆಯಾಯಿತು! ಸಂದೇಶಗಳಲ್ಲಿ ಒಳ್ಳೆಯದರ ಪ್ರಮಾಣ ತೊಂಭತ್ತಿದ್ದು, ಕೆಟ್ಟದ್ದರ ಪ್ರಮಾಣ ಕೇವಲ ಹತ್ತಿದ್ದರೂ, ಎಲ್ಲರೂ ‘ತಮ್ಮ ಬಗ್ಗೆ ಕೆಟ್ಟದ್ದನ್ನು ಬರೆದವರು ಯಾರಿರಬಹುದು?‘, ‘ಈ ಕೆಟ್ಟದ್ದನ್ನು ಬರೆಯಲು ಕಾರಣ ಏನಿರಬಹುದು?‘, ‘ತಾವು ನಿಜಕ್ಕೂ ಅಂಥವರೋ…!‘ ಎಂಬಿತ್ಯಾದಿಯಾಗಿ ತಮ್ಮ ಬಗ್ಗೆ ಹೇಳಲಾದ ಕೆಟ್ಟದ್ದರ ಬಗ್ಗೆಯೇ ತಲೆ ಕೆಡಿಸಿಕೊಳ್ಳಲು ಆರಂಭಿಸಿದರು. ಕೆಲವರಂತೂ ತಾವು ಅಂಥವರಲ್ಲ ಎಂದು ಇತರರಿಗೆ ಸಮಜಾಯಷಿ ಹೇಳುವ, ತಮ್ಮ ಗುಣಾವಗುಣಗಳನ್ನು ಸಮರ್ಥಿಸಿಕೊಳ್ಳುವ ಮಟ್ಟಕ್ಕೂ ಹೋದರು! ಒಟ್ಟಿನಲ್ಲಿ, ಒಳ್ಳೆಯದರ ನಡುವೆ ಕೆಟ್ಟದ್ದು ನುಸುಳುವುದು ಸಾಧ್ಯವಾದುದರಿಂದ ಇಡೀ ಫೀಡ್​ಬ್ಯಾಕ್ ಸೆಷನ್​ನ ಉದ್ದೇಶಕ್ಕೇ ಧಕ್ಕೆಯಾಯಿತು. ಸಾಮಾನ್ಯವಾಗಿ ತಿಳಿಯಾಗಿಯೂ ಚೇತೋಹಾರಿಯಾಗಿಯೂ ಇರುತ್ತಿದ್ದ ವಾತಾವರಣ ಫೀಡ್​ಬ್ಯಾಕ್ ಕೊಡುವವರು ಅಜ್ಞಾತವಾಗುತ್ತಲೇ ಬಗ್ಗಡವಾಯಿತು!

ಒಂದು ನಿರ್ದಿಷ್ಟವಾದ, ಪೂರ್ವನಿಯಂತ್ರಿತವಾದ, ‘ಪ್ರೊಫೆಷನಲ್‘ ಎನ್ನಬಹುದಾದ ವಾತಾವರಣದಲ್ಲಿಯೇ ಹೀಗೆ ಎಂದರೆ, ಇನ್ನು ಕಣ್ಣಿಗೆ ಕಾಣದವರೆಲ್ಲ ನಮಗೆ ಫೀಡ್​ಬ್ಯಾಕ್ ಕೊಡಬಹುದು ಎಂದರೆ ಏನಾಗಬಹುದು? ಯಾರು ಫೀಡ್​ಬ್ಯಾಕ್ ಕೊಡುತ್ತಿದ್ದಾರೆ ಎನ್ನುವುದು ಸ್ಪಷ್ಟವಿರದ ಕ್ಷಣದಲ್ಲಿ ನಮ್ಮ ಸುತ್ತಲೇ ಇರುವವರ ವರ್ತನೆ ಇಷ್ಟೊಂದು ಬದಲಾಯಿತೆಂದರೆ, ಇನ್ನು, ನಮ್ಮ ಸ್ನೇಹವಲಯದಲ್ಲಿ/ಕಾಂಟ್ಯಾಕ್ಟ್ ಪಟ್ಟಿಯಲ್ಲಿ ಇರುವ ಯಾರು ಬೇಕಾದರೂ ನಮಗೆ ಅಜ್ಞಾತವಾಗಿ (ತಮ್ಮ ಹೆಸರು, ಕುಲ, ಗೋತ್ರಗಳನ್ನು ಹೇಳದೆಯೇ) ಫೀಡ್​ಬ್ಯಾಕ್ ಕೊಡಬಹುದು ಎಂದಾದರೆ ಏನೇನಾಗಬಹುದು?

ಜಗತ್ತಿಗೆ ವಿಸ್ತರಿಸಿದ ಅಜ್ಞಾತ ಫೀಡ್​ಬ್ಯಾಕ್ ವ್ಯಸನ: ನಿಮ್ಮ ಬಳಿ ಕನೆಕ್ಟೆಡ್ ಡಿವೈಸ್ ಅಂದರೆ ಅಂತರ್ಜಾಲ ಸಂಪರ್ಕ ಇರುವ ಮೊಬೈಲ್ ಅಥವಾ ಕಂಪ್ಯೂಟರ್ ಇದ್ದರೆ, ಕಳೆದೆರಡು ವಾರಗಳಲ್ಲಿ ಈ ವಿಚಿತ್ರ ಸ್ಪೆಲಿಂಗ್ ಉಳ್ಳ ಆಪ್ ಬಗ್ಗೆ ಕೇಳಿಯೇ ಕೇಳಿರುತ್ತೀರಿ! ಸರಾಹ (Sarahah) ಈ ಆಪ್​ನ ಹೆಸರು. ಅರೇಬಿಕ್​ನಲ್ಲಿ ಸರಾಹ ಎಂದರೆ ಪ್ರಾಮಾಣಿಕ ಎಂಬರ್ಥವಂತೆ. ಈ ಆಪ್​ನ ಮೂಲಕ ನಾವು ನಮ್ಮ ಸ್ನೇಹವಲಯದಲ್ಲಿ ಅಥವಾ ಕಾಂಟ್ಯಾಕ್ಟ್ ಲಿಸ್ಟ್​ನಲ್ಲಿ ಇರುವ ಯಾರಿಂದಲಾದರೂ ಅಜ್ಞಾತ ಸಂದೇಶಗಳನ್ನು ಪಡೆಯಬಹುದು. ಅರ್ಥಾತ್, ತಾವು ಯಾರು ಎನ್ನುವುದನ್ನು ನಮಗೆ ತಿಳಿಸದೆಯೇ ಬೇರೆಯವರು ನಮಗೆ ಫೀಡ್​ಬ್ಯಾಕ್ ಕೊಡಬಹುದು. ಅದನ್ನು ನಾವು ನಮ್ಮ ಇಚ್ಛೆಯಂತೆ ಸಾಮಾಜಿಕ ಮಾಧ್ಯಮಗಳಲ್ಲಿ ನಮ್ಮನಮ್ಮ ಗೋಡೆಗಳ ಮೇಲೆ ಬಿತ್ತರಿಸಿಕೊಳ್ಳಬಹುದು.

ನಿಮ್ಮ ಬಗ್ಗೆ ರಚನಾತ್ಮಕ ಹಿಮ್ಮಾಹಿತಿ ಪಡೆಯಲು ಇದೇ ಸೂಕ್ತ ಉಪಾಯ ಎಂದು ಸರಾಹದ ಪ್ರತಿಪಾದಕರು ವಾದಿಸುತ್ತಾರೆ. ನೇರಾನೇರ ಫೀಡ್​ಬ್ಯಾಕ್ ಕೊಡುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಹಾಗಾಗಿ ಈ ರಹಸ್ಯಮಯ ಸರಾಹ ಎನ್ನುತ್ತಾರೆ. ಆದರೆ, ಇಂಥದ್ದರಿಂದ ಆಗಬಹುದಾದ ಗೊಂದಲದ ಬಗ್ಗೆ ಒಮ್ಮೆ ಯೋಚಿಸಿ! ಎಲ್ಲರೂ ನಮ್ಮ ಬಗ್ಗೆ ಒಳ್ಳೆಯದನ್ನೇ ಹೇಳುತ್ತಿರುವವರೆಗೆ ಎಲ್ಲವೂ ಸರಿಯಾಗಿಯೇ ಇರುತ್ತದೆ. ಕೆಟ್ಟ ಸಂದೇಶಗಳು ಕಹುಕ-ಕಟಕಿ-ಕೊಂಕುಗಳು ಬರಲಾರಂಭವಾದ ಕ್ಷಣದಲ್ಲಿ ಅದು ನಮ್ಮ ಜೀವನವನ್ನೇ ಆಳಲು, ಹಾಳುಗೆಡವಲು ಆರಂಭಿಸುತ್ತದೆ.

ಆತ್ಮಾವಲೋಕನದ, ಆತ್ಮವಿಮರ್ಶೆಯ, ಆತ್ಮಸ್ಥೈರ್ಯದ ಪರೀಕ್ಷೆಯ ಹೆಸರಿನಲ್ಲಿ ಸರಾಹ ಅಳವಡಿಸಿಕೊಂಡು ಪರಿತಪಿಸುತ್ತಿರುವ ಅದೆಷ್ಟೋ ಪ್ರಕರಣಗಳು ಜಗತ್ತಿನ ಎಲ್ಲೆಡೆಯಿಂದ ವರದಿಯಾಗುತ್ತಿವೆ. ಕಾಳಿಗಿಂತಲೂ ಜೊಳ್ಳೇ ಹೆಚ್ಚಿರುವುದು ಸಾಬೀತಾಗಿದೆ. ಸಕಾರಾತ್ಮಕ ಫೀಡ್​ಬ್ಯಾಕ್ ಕೊಡಬೇಕಾದ ಸ್ನೇಹಿತರೇ ಶತ್ರುಗಳಂತೆ ವರ್ತಿಸಿ ಸೇಡಿನ ವಾತಾವರಣ ನಿರ್ವಣಗೊಂಡಿದೆ. ‘ಇಂಥವನು ನನ್ನ ಬಗ್ಗೆ ಹೀಗೆ ಬರೆದಿರಬಹುದು… ನಾನವನಿಗೆ ಬುದ್ಧಿ ಕಲಿಸುತ್ತೇನೆ‘ ಎನ್ನುವ ಊಹಾಪೋಹದ ಹೊಡೆತಗಳ ಸಹಸ್ರಾರು ವಿಷವರ್ತಲಗಳನ್ನೇ ಸೃಷ್ಟಿಸಿವೆ. ಜನರು ತಮ್ಮ ಸ್ನೇಹಿತರು, ಆತ್ಮೀಯರ ಬಗ್ಗೆಯೇ ಭ್ರಮನಿರಸನಗೊಳ್ಳುವಂತಾಗಿದೆ.

ಮನುಷ್ಯನ ಬುದ್ಧಿಯೇ ಹಾಗೆ! ಫೀಡ್​ಬ್ಯಾಕ್ ಬಯಸುತ್ತದೆ. ಆದರೆ ಕಟುವಿಮರ್ಶೆಯನ್ನು ಸಹಿಸುವುದಿಲ್ಲ. ಫೀಡ್​ಬ್ಯಾಕ್ ಸಿಕ್ಕ ಕ್ಷಣದಲ್ಲಿ ಒಳ್ಳೆಯದರ ಬಗ್ಗೆ ಸಂಭ್ರಮಪಡುತ್ತದೆ. ಆದರೆ, ಕೆಟ್ಟ ಫೀಡ್​ಬ್ಯಾಕ್, ಅದರಲ್ಲೂ ಅಜ್ಞಾತವಾದ ಫೀಡ್​ಬ್ಯಾಕ್ ಜನರನ್ನು ನಿಧಾನವಾಗಿ ಸುಡುತ್ತದೆ.

ತಮಾಷೆಗಾಗಿ!: ಸರಾಹ ಇರುವುದು ತಮಾಷೆಗಾಗಿ; ನಕ್ಕು ಬಿಟ್ಟುಬಿಡಿ ಎನ್ನುವುದು ಸರಾಹ ಪ್ರತಿಪಾದಕರ ಮೊದಲ ಸಾಲಿನ ರಕ್ಷಣಾತ್ಮಕ ತಂತ್ರ! ಘನಘೊರವಾದ ತಮಾಷೆಯನ್ನಲ್ಲದಿದ್ದರೂ, ಸಣ್ಣ-ಪುಟ್ಟ ಪ್ರಾ್ಯಕ್ಟಿಕಲ್-ಜೋಕ್​ಗಳನ್ನು ಯಾರಾದರೂ ಸಹಿಸಿಕೊಂಡಾರು ಎನ್ನುವುದು ಕೆಲವರ ನಿಲುವು. ಆದರೆ ಸಾಮಾಜಿಕ ಒಪ್ಪಿಗೆಯೇ ಎಲ್ಲವೂ ಆಗಿರುವ ಇಂದಿನ ಮಾಹಿತಿಯುಗದಲ್ಲಿ ನಾವು ತಮಾಷೆಯಾಗಿಯೇ ಜೀವಹಿಂಡಬಲ್ಲ ಸರಾಹದಂತಹ ಪಿಡುಗುಗಳ ಬಗ್ಗೆ ಜಾಗ್ರತೆಯಿಂದಿರಬೇಕಾಗಿದೆ. ಎದುರಿಗಿರುವವರ, ಸಹೋದ್ಯೋಗಿಗಳ, ಗೆಳೆಯರ ಫೀಡ್​ಬ್ಯಾಕನ್ನೇ ಸರಿಯಾದ ರೀತಿಯಲ್ಲಿ ತೆಗೆದುಕೊಳ್ಳಲು ಒದ್ದಾಡುವ ನಾವು, ಸ್ಕ್ರೀನ್​ನ ಹಿಂದೆ ಅಡಗಿಕೊಂಡು ನಮ್ಮೆಡೆಗೆ ಕಲ್ಲನ್ನೋ ಕಸವನ್ನೋ ಎಸೆಯುತ್ತಿರುವವರ ಸಂದೇಶಗಳನ್ನು ಪ್ರಬುದ್ಧವಾಗಿ ಸ್ವೀಕರಿಸುತ್ತೇವೆ ಎಂದುಕೊಳ್ಳುವುದು ಮೂರ್ಖತನ. ನಮ್ಮ ಸ್ನೇಹಿತರು, ಬಂಧುಗಳು, ಸಹೋದ್ಯೋಗಿಗಳು, ನಾವು ಮೆಚ್ಚಿಸಬೇಕಾದವರು- ಎಲ್ಲರೂ ಕೂಡಿಕೊಂಡಿರುವ ಸಮಗ್ರ ಪ್ರಪಂಚದಲ್ಲಿ ನಮ್ಮ ಬಗ್ಗೆ ಯಾರಾದರೂ ಕಟಕಿಯಾಡಿದರೆ, ಅದರಿಂದ ನಮ್ಮ ವ್ಯಕ್ತಿತ್ವಕ್ಕೇ ಕುಂದು ಬಂದರೆ, ಅಥವಾ ವ್ಯಕ್ತಿತ್ವವೇ ಬದಲಾದರೆ, ಅದು ತುಂಬಲಾರದ ನಷ್ಟ. ಕೇವಲ ವ್ಯಕ್ತಿಗಳ ಮಟ್ಟಿಗಷ್ಟೇ ಅಲ್ಲ! ಸಮಾಜ, ರಾಜ್ಯ, ರಾಷ್ಟ್ರಗಳ ಮಟ್ಟಿಗೂ ನಷ್ಟ. ಏಕೆಂದರೆ, ವ್ಯಕ್ತಿಯಿಂದ ಸಮಷ್ಟಿ. ಇತರರ ಅಭಿಪ್ರಾಯ ನಮ್ಮನ್ನು ಡಿಫೈನ್ ಮಾಡಿದರೆ, ಅದರಲ್ಲೂ ಆ ಅಭಿಪ್ರಾಯ ದುರುದ್ದೇಶಪೂರಿತವಾಗಿದ್ದರೆ, ಅದರಿಂದ ವ್ಯಕ್ತಿ ಕುಗ್ಗುತ್ತಾನೆ. ಕೀಳರಿಮೆಯುಳ್ಳ ವ್ಯಕ್ತಿ ಸಾಮಾಜಿಕ ಸ್ವಾಸ್ಥ್ಯ ಮತ್ತು ಉತ್ಪಾದಕತೆಯ ದೃಷ್ಟಿಯಿಂದ ನೋಡಿದಾಗ ಹೊರೆಯಾಗುತ್ತಾನೆ. ಸರಾಹದಂತಹ ಒಂದು ಕೆಟ್ಟ ಆಪ್​ಗೆ ಇಂತಹ ಕೋಟ್ಯಂತರ ಕುಗ್ಗಿದ ವ್ಯಕ್ತಿಗಳನ್ನು ಸೃಷ್ಟಿಸುವ ಸಾಮರ್ಥ್ಯವಿದೆ. ಒಂದೇ ಹೊಡೆತಕ್ಕೆ ಸಾಮಾಜಿಕ ಸ್ವಾಸ್ಥ್ಯವನ್ನು ಹದಗೆಡಿಸುವ ಶಕ್ತಿಯಿದೆ. ದುರದೃಷ್ಟವೆಂದರೆ, ಅಂತರ್ಜಾಲಕ್ಕೆ ಸಂಪಾದಕರಾಗಲೀ, ಆರಕ್ಷಕರಾಗಲೀ ಅಥವಾ ನಿರ್ದಿಷ್ಟವಾದ ಕಾನೂನಿನ ಚೌಕಟ್ಟಾಗಲೀ ಇಲ್ಲ. ಇದ್ದರೂ, ಅವೆಲ್ಲವೂ ಇನ್ನೂ ವಿಕಸಿತಗೊಳ್ಳುತ್ತಿರುವ ಕೂಸುಗಳು. ಹಾಗಾಗಿ ನಾವು ನಮ್ಮ ಬಳಿ ಇರುವ ಒಂದೇ ರಕ್ಷಾಕವಚವಾದ ವಿವೇಚನೆಯನ್ನೇ ಇಲ್ಲಿಯೂ ಬಳಸಬೇಕಿದೆ. ಸರಾಹದಂತಹ ಆಪ್​ಗಳನ್ನು ಬಳಸದಿರುವುದು ಮಾತ್ರವಲ್ಲ, ಅದನ್ನು ಬಳಸುವವರ ಫೀಡ್​ಬ್ಯಾಕ್ ಕರೆಗೂ ಓಗೊಡದೆ, ಒಗಟ್ಟಾಗಿ ಇಂತಹ ಪಿಡುಗನ್ನು ಬುಡಸಮೇತ ಕಿತ್ತೊಗೆಯಬೇಕಿದೆ.

(ಲೇಖಕರು ಸಂವಹನ ಸಲಹೆಗಾರರು)

Leave a Reply

Your email address will not be published. Required fields are marked *

Back To Top