Tuesday, 17th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಫಿಯರ್ ಬಿಟ್ಟು ಜಿಂದಗಿಯನ್ನು ಡಿಯರ್ ಎನ್ನಿ…

Wednesday, 03.05.2017, 3:00 AM       No Comments

ಚೆನ್ನಾಗಿ ಬದುಕಬೇಕೆಂಬ ಆಸೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಆದರೆ, ಪರಿಸ್ಥಿತಿಗಳು, ಅನಿರೀಕ್ಷಿತ ತಿರುವುಗಳು ಆ ನಿರೀಕ್ಷೆಗಳನ್ನು ಹುಸಿಮಾಡುತ್ತವೆ. ಜೀವನವೇ ಸಾಕು ಎನಿಸುವಷ್ಟು ಬೇಸರ ಕಾಡುತ್ತದೆ. ವಾಸ್ತವವನ್ನು ಒಪ್ಪಿಕೊಂಡು ಮುನ್ನಡೆಯಲು ನಿರ್ಧರಿಸಿದರೆ ಬದುಕನ್ನೇ ಬದಲಿಸಬಹುದು. ಇದಕ್ಕಾಗಿ ಮೊದಲು ಭಯವನ್ನು ಕಿತ್ತೊಗೆಯಬೇಕು.

ಳೆದ ಅಂಕಣದಲ್ಲಿ ಮುಷ್ಕರ ಹೂಡುವ ಮನಸ್ಸಿನ ಬಗ್ಗೆ ಬರೆದಿದ್ದೆ. ಅನೇಕರು ಪ್ರತಿಕ್ರಿಯಿಸಿ ‘ಹೌದು, ನಮ್ಮ ಮನಸ್ಸೂ ಮುಷ್ಕರ ಹೂಡುತ್ತದೆ. ನೀವು ಬರೆದಿದ್ದು ನಮಗೋಸ್ಕರವೇ ಅಂತನಿಸುತ್ತೆ’ ಎಂದು ಹೇಳಿದರು. ಈ ಪೈಕಿ ಬಹುತೇಕರು ಜೀವನದಲ್ಲಿ ಸಕಾರಾತ್ಮಕ ಪರಿವರ್ತನೆ ತಂದುಕೊಂಡು ಖುಷಿಯಿಂದ ಬಾಳುವ ಸಂಕಲ್ಪವನ್ನು ಮಾಡಿದ್ದು ಸಂತೋಷ ತರುವ ವಿಚಾರ. ಆದರೆ ಯುವಕ-ಯುವತಿಯರ ಪೈಕಿ ಹೆಚ್ಚಿನವರು ‘ಡಿಪ್ರೆಷನ್​ನಿಂದ ಬಳಲುತ್ತಿದ್ದೇವೆ’ ಎಂದು ಹೇಳಿ ಪರಿಹಾರದ ಬಗ್ಗೆ ಪ್ರಶ್ನಿಸಿದ್ದು ಮಾತ್ರ ಸ್ವಲ್ಪಮಟ್ಟಿಗೆ ಗಾಬರಿ ಉಂಟುಮಾಡುವ ಸಂಗತಿ. ಅರೇ, ಜೀವನವನ್ನು ಉತ್ಸಾಹದಿಂದ ಸಾಗಿಸುತ್ತ, ಹೊಸದನ್ನು ಸಾಧಿಸುತ್ತ, ಉತ್ಕರ್ಷದೆಡೆಗೆ ಸಾಗಬೇಕಾದ ಅದ್ಭುತ ಘಟ್ಟ ಯೌವನ. ಈ ಹಂತದಲ್ಲಿ ಈ ಪರಿಯ ಬೇಸರ, ಆತಂಕ, ನಿರಾಸೆ, ನಿರಾಸಕ್ತಿ ಏತಕ್ಕೆ? ‘ಖಿನ್ನತೆಗೆ ಜಾರುವಂಥ ನೋವು ಏನಾದರೂ ಉಂಡಿದ್ದೀರಾ? ಯಾಕೆ ಜೀವನವನ್ನು ಪೇಲವ ಮಾಡಿಕೊಂಡಿದ್ದಿರಾ?’ ಎಂದರೆ ಬಹುತೇಕರ ಉತ್ತರ ಒಂದೇ- ‘ಜೀವನದ ಬಗ್ಗೆ, ನಾಳೆಗಳ ಬಗ್ಗೆ ತುಂಬಾ ಭಯವಾಗುತ್ತೆ’. ಹೌದು, ಇದು ಕೆಲವೇ ಜನರ ಸಮಸ್ಯೆಯಾಗಿ ಉಳಿದಿಲ್ಲ. ಬದುಕಿನ ಬಗೆಗಿನ ಭಯ ಅದ್ಯಾವ ಪರಿ ಆವರಿಸಿಕೊಂಡಿದೆ ಎಂದರೆ ಈ ದಿನ, ಈ ಕ್ಷಣ ಯಾವುದೂ ಅನುಭವಿಸಲು ಆಗುತ್ತಿಲ್ಲ. ವಿದ್ಯಾರ್ಥಿಗಳಿಗೆ ಸ್ಪರ್ಧಾಲೋಕದ ಚಿಂತೆ, ಡಿಗ್ರಿ ಕೈಗೆ ಬಂದ ಮೇಲೆ ಉದ್ಯೋಗಬೇಟೆಯ ಚಿಂತೆ, ಕೆಲಸ ಸಿಕ್ಕಮೇಲೆ ‘ನಾನು ತುಂಬಾ ಹಿಂದುಳಿದುಬಿಟ್ಟೆನೇನೋ’ ಎಂಬ ಪಾಪಪ್ರಜ್ಞೆ, ಅದರ ನಡುವೆ ಮದುವೆಯಾಗಿ ಸೆಟ್ಲಾಗಬೇಕು ಅನ್ನೋ ಧಾವಂತದಲ್ಲೇ ಅದೆಷ್ಟೋ ಎಡರುತೊಡರುಗಳು, ಕುಟುಂಬ ಕಟ್ಟಿಕೊಂಡ ಮೇಲಂತೂ ಲೈಫೆಲ್ಲ ಬ್ಯಾಲೆನ್ಸ್ ಮಾಡುವ ಸರ್ಕಸ್… ಉಫ್, ಈ ಹಂತಗಳ ನಡುವೆಯೇ ಬ್ರೇಕಪ್​ಗಳು, ಕೌಟುಂಬಿಕ, ಆರ್ಥಿಕ ಸಮಸ್ಯೆಗಳು… ಹೀಗೆ ಮನುಷ್ಯನನ್ನು ಹೈರಾಣುಮಾಡಲು ಒಂದಿಲ್ಲೊಂದು ಸವಾಲುಗಳು, ಪಂಥಾಹ್ವಾನಗಳು ಸಿದ್ಧವಾಗುತ್ತಲೇ ಇರುತ್ತವೆ. ಇದು ಎಲ್ಲರ ‘ಲೈಫ್ ಕಹಾನಿ’ ಆದರೂ ಈ ಎಲ್ಲ ಸಮಸ್ಯೆಗಳಿಗೆ ಸೂಕ್ತ ಜವಾಬು ಕೊಡುತ್ತ ಬದುಕನ್ನು ಅದ್ಭುತ ಎನ್ನುವಂತೆ ಕಟ್ಟಿಕೊಂಡ ಅದೆಷ್ಟೋ ಜನ ನಮ್ಮ ಮಧ್ಯೆಯೇ ಇದ್ದಾರಲ್ವ… ಹೀಗೆ ಹೇಳಿದರೆ ‘ನಮ್ಮ ಲೈಫ್ ಹೀಗೆ ಅವರಂತೆ ಯಶಸ್ಸಿನ ಹಳಿ ಏರುತ್ತಾ…? ನಾನು ಜೀವನದಲ್ಲಿ ಕಂಡದ್ದು ಬರೀ ಕಷ್ಟ ಮತ್ತು ದುಃಖಗಳೇ’ ಎಂದು ಗೊಣಗುತ್ತಾರೆ.

ಯಶಸ್ಸಿನ ಶಿಖರವೇರಿದ ಬಹುತೇಕರ ಜೀವನ ಆರಂಭವಾಗಿದ್ದು ವೈಫಲ್ಯ, ನೋವು, ಸೋಲಿನಿಂದಲೇ. ಅವರೆಲ್ಲ, ಮುಂದೆ ನಾವು ಜೀವನದಲ್ಲಿ ಗೆಲ್ಲಲು ಸಾಧ್ಯವೇ ಇಲ್ಲ ಎಂದುಕೊಂಡಿದ್ದಿದ್ದರೆ, ಸಮಸ್ಯೆಗಳೊಂದಿಗೆ ಗುದ್ದಾಡುವ ಛಲ ತೋರದಿದ್ದಿದ್ದರೆ ಯಶಸ್ಸಿನ ಏಣಿ ಅವರ ಹತ್ತಿರವೂ ಸುಳಿಯುತ್ತಿರಲಿಲ್ಲ. ಅಷ್ಟಕ್ಕೂ, ಯಶಸ್ಸು ಪಕ್ಷಪಾತಿಯಲ್ಲ. ಜೀವನವನ್ನು ಉತ್ಕಟವಾಗಿ ಪ್ರೀತಿಸುವವರನ್ನು, ಅಗಾಧವಾಗಿ ಶ್ರಮ ಹಾಕುವವರನ್ನು ಅದು ಅಪ್ಪಿಕೊಳ್ಳುತ್ತದೆ, ಕೈಹಿಡಿದು ಮುಂದೆ ಕರೆದುಕೊಂಡು ಸಾಗುತ್ತದೆ. ಅದಕ್ಕೆಂದೇ, ಇವತ್ತು ಕೂಲಿಕಾರರ, ಕಾರ್ವಿುಕರ, ರಿಕ್ಷಾವಾಲಾಗಳ, ಚಾಯ್ವಾಲಾಗಳ ಮಕ್ಕಳು ದೇಶವೇ ಬೆರಗುಗೊಳ್ಳುವಂಥ ಸಾಧನೆ ಮಾಡುತ್ತಿದ್ದಾರೆ. ಬಡತನ, ಹಸಿವು, ಕಣ್ಣೀರು ಮನುಷ್ಯನ ಆತ್ಮಬಲವನ್ನು ಕಿತ್ತುಕೊಳ್ಳಬಾರದು ಎಂಬ ಸಂದೇಶವನ್ನು ಗಟ್ಟಿದನಿಯಲ್ಲಿ ಹೇಳುತ್ತಿದ್ದಾರೆ. ಶ್ರಮದ ಬೆವರಿನ ಒಂದೊಂದು ಹನಿಯೂ, ಶ್ರದ್ಧೆಯ ಭಾವದಿಂದ ಮಾಡಿದ ಒಂದೊಂದು ಕೆಲಸವೂ ನಮ್ಮನ್ನು ನಿಧಾನವಾಗಿ ‘ಸೂಪರ್ ಸೇ ಉಪರ್’ಗೆ ಕೊಂಡೊಯ್ಯುತ್ತದೆ. ಆದರೆ, ಬದುಕಿನ ಮೇಲೆಯೇ ಮುನಿಸಿಕೊಂಡು ಬಿಟ್ಟರೆ, ‘ನನ್ನ ಲೈಫು ಇಷ್ಟೇನೆ’ ಎಂದು ನಾವೇ ಹಣೆಪಟ್ಟಿ ಕಟ್ಟಕೊಂಡುಬಿಟ್ಟರೆ ಆ ಭಗವಂತನೂ ಏನು ಮಾಡಲು ಸಾಧ್ಯವಿಲ್ಲ. ಅಷ್ಟಕ್ಕೂ, ಇಂದು ಹೀಗಿರುವ ಬದುಕು ನಾಳೆ ಏನಾಗುತ್ತದೆ ಎಂದು ಊಹಿಸಲು ಸಾಧ್ಯವೇ ಇಲ್ಲ. ಏಕೆಂದರೆ, ಅದು ಸದಾ ತನ್ನೊಳಗೆ ಅಚ್ಚರಿ, ಬೆರಗಿನ ಮೂಟೆಯೊಂದನ್ನು ಇಟ್ಟುಕೊಂಡಿರುತ್ತದೆ. 10ನೇ ಕ್ಲಾಸಿನಲ್ಲಿ ಫೇಲಾದ ಸಚಿನ್ ಬ್ಯಾಟಿಂಗ್ ಅಬ್ಬರದಿಂದಲೇ ‘ಭಾರತರತ್ನ’ ಆಗಲಿಲ್ಲವೇ? ಕಡಲಿನಲ್ಲಿ ಮೀನು ಹಿಡಿಯುತ್ತಿದ್ದು, ಮನೆ-ಮನೆಗೆ ಪತ್ರಿಕೆ ಹಾಕುತ್ತಿದ್ದ ಸಾಮಾನ್ಯ ಹುಡುಗ ‘ಮಿಸೈಲ್ ಮ್ಯಾನ್’ ಆಗಿ ಜನರ ರಾಷ್ಟ್ರಪತಿಯಾಗಿ ಭಾರತರತ್ನದ ಗೌರವ ಹೆಚ್ಚಿಸಲಿಲ್ಲವೇ? ಇವರಿಗೆಲ್ಲ ಯಶಸ್ಸು ಎಂಬುದು ಗಗನದಿಂದ ಇಳಿದು ಬಂದಿದ್ದೇನಲ್ಲ… ಎಲ್ಲ ಬಗೆಯ ಸವಾಲುಗಳಿಗೆ ತಪರಾಕಿ ನೀಡಿ, ಆಶಾವಾದ ಮೈಗೂಡಿಸಿಕೊಳ್ಳುತ್ತ ನಡೆದರಲ್ಲ, ಅದೇ ಅವರ ಯಶಸ್ಸಿನ ಗುಟ್ಟು!!

ಇದು ಎಲ್ಲರಿಗೂ ಏಕೆ ಸಾಧ್ಯವಾಗುವುದಿಲ್ಲ ಎಂಬ ಪ್ರಶ್ನೆಗೆ ಉತ್ತರ ತುಂಬ ಸಿಂಪಲ್. ಬದುಕನ್ನು ನಾವು ಪ್ರೀತಿಸುವ ಬದಲು ಅದನ್ನು ಅತಿಯಾದ ಭೀತಿಯಿಂದ ಕಾಣುತ್ತಿದ್ದೇವೆ. ‘ಹಾಗಾಗಿಬಿಟ್ಟರೆ, ಹೀಗಾಗಿಬಿಟ್ಟರೆ’ ಎಂಬ ಭ್ರಮೆ, ಊಹೆಗಳಲ್ಲಿ ಇಂದಿನದೆಲ್ಲವನ್ನೂ ಕಳೆದುಕೊಳ್ಳುತ್ತಿದ್ದೇವೆ. ಈ ಭಯದ ಪರಿಣಾಮ ನೆಮ್ಮದಿಯನ್ನು, ದಿನನಿತ್ಯ ಎದುರಾಗುವ ಸಂತಸದ ಸಣ್ಣಪುಟ್ಟ ಘಳಿಗೆಗಳನ್ನು ದೂರ ಮಾಡಿಕೊಳ್ಳುತ್ತಿದ್ದೇವೆ. ಆಗ ನಮ್ಮನ್ನು ಆಳುವುದು ಖಿನ್ನತೆ, ಬೇಸರಗಳೇ. ಬಂದದ್ದು ಬರಲಿ ಎದುರಿಸುತ್ತೇನೆ ಎಂಬ ವಿಶ್ವಾಸದ ಸಣ್ಣ ಹಣತೆಯನ್ನು ಎದೆಯಲ್ಲಿ ಬೆಳಗಿಸಿ ಸಾಗುತ್ತ ಹೋದರೆ ಎಂಥ ಬಿರುಗಾಳಿಗೂ ಆ ಬೆಳಕು ಆರುವುದಿಲ್ಲ. ಅಷ್ಟಕ್ಕೂ, ನಿರಾಳವಾಗಿ, ನೆಮ್ಮದಿಯಿಂದ ಬದುಕಲು ನಮ್ಮ ‘ಬೇಕು’ಗಳನ್ನು ನಿಯಂತ್ರಿಸಿಕೊಳ್ಳಬೇಕು. ಹೀಗೆ ಒಮ್ಮೆ ಬೆಂಗಳೂರಿನ ಡಾಲರ್ಸ್ ಕಾಲನಿಯಲ್ಲಿರುವ ಕೊಳೆಗೇರಿಗೆ ಹೋದಾಗ, ಅಲ್ಲಿನ ನಾಗರಿಕರು ಯಾವುದೇ ಕನಿಷ್ಠ ಸೌಕರ್ಯಗಳಿಲ್ಲದ, ಆಗಲೋ ಈಗಲೋ ಬೀಳುವ ಹಂತದಲ್ಲಿದ್ದ ಶೆಡ್​ಗಳಲ್ಲಿ ವಾಸಿಸುತ್ತಿದ್ದುದು ಗೋಚರಿಸಿತು. ಆದರೂ ಸಂಜೆಯಾಗುತ್ತಿದ್ದಂತೆ ಆ ಶ್ರಮಜೀವಿಗಳ ನಡುವೆ ಭಾವಲೋಕ ತೆರೆದುಕೊಳ್ಳುತ್ತಿತ್ತು, ಕಷ್ಟ-ಸುಖದ ಮಾತುಗಳ ವಿನಿಮಯ, ಹಾಸ್ಯದ ಸಿಂಚನ ಎಲ್ಲವೂ ಇತ್ತು. ಚಿಕ್ಕ ಮಕ್ಕಳು ಯಾವುದೇ ಆಟಿಕೆ ಇಲ್ಲದಿದ್ದರೂ ಸಣ್ಣ ಗಾತ್ರದ ಕಲ್ಲುಗಳಲ್ಲೇ ತಮಗೆ ಬೇಕಾದ ಆಕೃತಿಗಳನ್ನು ನಿರ್ವಿುಸುತ್ತ ಸಂತೋಷ ಪಡುತ್ತಿದ್ದರು. ಉತ್ತರ ಕರ್ನಾಟಕದ ಹಳ್ಳಿಗಳು ಬಿರುಬಿಸಿಲಿನಿಂದ ಬಳಲಿ ಬೆಂಡಾಗಿದ್ದರೂ ಹಳ್ಳಿಗರು ತಮ್ಮ ಮನೆಗಳ ಹೊರಗೆ ಬಯಲಲ್ಲೇ ಸವಿನಿದ್ದೆಗೆ ಶರಣಾಗುವುದು, ಪಟ್ಟಾಂಗ ಹೊಡೆಯುತ್ತ ನಗು ಚೆಲ್ಲುವುದು ಸಾಮಾನ್ಯ ದೃಶ್ಯ. ಇದೆಲ್ಲವನ್ನೂ ನೋಡಿದಾಗ, ಜೀವನ ಅಂದರೆ ಇದೇ ಅಲ್ವಾ? ಅದು ಎಷ್ಟು ಚೆಂದ ಮತ್ತು ಹಿತ ಅಲ್ವಾ ಎಂಬ ಮಧುರಭಾವ ಮನಸ್ಸನ್ನು ಆವರಿಸುತ್ತದೆ. ಜೀವನವನ್ನು ಅದು ಇರುವಂತೆಯೇ ಸ್ವೀಕರಿಸಿ ವಾಸ್ತವವಾದಿಗಳಾದಾಗ ಮಾತ್ರ ಮುಂದಿನ ದಾರಿ ಗೋಚರಿಸಲು ಸಾಧ್ಯ.

ಇನ್ನು, ‘ಮನಸ್ಸು ಮುಷ್ಕರ ಹೂಡುತ್ತದೆ, ಆದರೆ ಆ ಮನಸ್ಸನ್ನು ನಿಯಂತ್ರಿಸುವುದು ಹೇಗೆ? ತಿಳಿಸಿ’ ಎಂಬುದು ಹಲವರ ಸಮಸ್ಯೆ. ಮನಸ್ಸನ್ನು ನಿಯಂತ್ರಿಸಬೇಕಿಲ್ಲ, ಅದನ್ನು ಸಕಾರಾತ್ಮಕ ವಿಚಾರಗಳಿಂದ ಸದೃಢಗೊಳಿಸಬೇಕು. ಆಶಾವಾದವನ್ನು ತುಂಬಿ ಮನಸ್ಸನ್ನು ತರಬೇತುಗೊಳಿಸಬೇಕು. ಇಂದಿನ ಕಷ್ಟ, ದುಃಖ ನಾಳೆ ಕರಗುತ್ತದೆ. ಹೀಗೆ ಬದುಕಿನಲ್ಲಿ ಗೆಲುವು ಸಾಧಿಸಿದವರಿಂದ ಆತ್ಮಬಲ ಹೆಚ್ಚಿಸಿಕೊಳ್ಳಬೇಕು. ಜೀವನದಲ್ಲಿ ಸೋತವರಿಗೆ ಭರವಸೆಯ ಭಾವನಾತ್ಮಕ ಬೆಂಬಲ ನೀಡಬೇಕು. ನಮ್ಮ ಲೈಫು ಯಾರಂತೆಯೋ ಆಗುವುದು ಬೇಡ. ಅದು ವಿಶಿಷ್ಟವಾಗಿ, ಮಾದರಿಯಾಗಿ ಜೀವನದ ವಿಶ್ವವಿದ್ಯಾಲಯಕ್ಕೆ ಪಠ್ಯವಾಗುವಂತಾಗಲಿ. ಅದಕ್ಕಾಗಿ, ಬದುಕನ್ನು ಕಾಣುವ ಬಗೆಯನ್ನು ಬದಲಿಸಬೇಕು. ‘ಫಿಯರ್’ ಬಿಟ್ಟು ಜಿಂದಗಿಯನ್ನು ‘ಡಿಯರ್’ ಎಂದರೆ ಸಾಕು! ಹೊಸ ಬಾಳಗೀತೆ ಆರಂಭಗೊಳ್ಳುತ್ತದೆ, ಹೃದಯದ ರಾಗದಲ್ಲಿ ಚೈತನ್ಯದ ಸ್ವರ ಪುಟಿದೇಳುತ್ತದೆ. ಖಿನ್ನತೆಗೆ, ಬೇಸರಕ್ಕೆ ಜೀವನದಲ್ಲಿ ಜಾಗ ಕೊಡಬೇಕೇಕೆ?

Leave a Reply

Your email address will not be published. Required fields are marked *

Back To Top