Friday, 22nd June 2018  

Vijayavani

ಮೈತ್ರಿ ಸರ್ಕಾರದಲ್ಲಿ ಮತ್ತೆ ತಾರತಮ್ಯತೆ - ರೇವಣ್ಣ ಕಾರ್​​​ಗೆ ಗೇಟ್​​ ಓಪನ್​​, ದೇಶಪಾಂಡೆಗೆ ನಟರಾಜ ಸರ್ವಿಸ್​​        ಅಂದು ಹೇಳಿದ್ದೊಂದು.. ಇಂದು ಮಾಡಿದ್ದೊಂದು - ಸಂಡೂರಿನಲ್ಲಿ ಕೊಟ್ಟು ಮಾತು ಮರೆತ ಸಿಎಂ - ಮತ್ತೆ ಗಣಿಗಾರಿಕೆಗೆ ಅವಕಾಶ        ಡಿಕೆಶಿ ಡೈರಿಯಲ್ಲಿ ಕೆಜಿ ಕೋಡ್​ ವಿಚಾರ - ದೆಹಲಿಯಿಂದ ಆಗಮಿಸಿದ ಇಡಿ ತಂಡ - ಡಿಕೆಶಿ ಸೇರಿ ಐವರು ವಿರುದ್ಧ ಇಡಿ FIR ಸಾಧ್ಯತೆ        ಶಕ್ತಿ ಭವನದಲ್ಲಿ ಬಜೆಟ್​​​ ಪೂರ್ವಭಾಗಿ ಸಭೆ - ಸಣ್ಣ ನೀರಾವರಿ ಇಲಾಖೆ ಜತೆ ಸಿಎಂ ಚರ್ಚೆ - ಅನುದಾನ ಭರವಸೆ ನೀಡಿದ ಎಚ್​ಡಿಕೆ        ಬಿಜಿಎಸ್​ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಚಿಕಿತ್ಸೆ - ನಡೆದಾಡುವ ದೇವರ ಕಾಣಲು ಗಣ್ಯರ ದಂಡು - ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​​ವೈ        ಜಿಲ್ಲಾಸ್ಪತ್ರೆಯಲ್ಲಿ ಅನಾಥವಾಯ್ತು ಕಂದಮ್ಮ - ಶಸ್ತ್ರಚಿಕಿತ್ಸೆಗೆ ಬಂದು ಮಗು ಬಿಟ್ಟೋದ ಹೆತ್ತಮ್ಮ - ರೋಧಿಸುತ್ತಿದೆ 3 ತಿಂಗಳ ಕೂಸು       
Breaking News

ಪ್ರಾದೇಶಿಕ ಭಾಷಾ ಸಾಮಾಜಿಕ ಸಂಪರ್ಕ ಜಾಲ ಷೇರ್​ಚಾಟ್

Wednesday, 19.07.2017, 3:00 AM       No Comments

| ಐ.ಎನ್. ಬಾಲಸುಬ್ರಹ್ಮಣ್ಯ

ಭಾರತದಲ್ಲಿ ಇಂದು ಅನೇಕ ಸ್ಮಾರ್ಟ್​ಫೋನ್​ಗಳು ಅಗ್ಗದ ದರದಲ್ಲಿ ದೊರೆಯುತ್ತಿವೆ. ಹಾಗಾಗಿ ಇವುಗಳನ್ನು ಬಳಸುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರೊಂದಿಗೆ ಮೊಬೈಲ್ ಫೋನ್​ಗಳಿಗೆ ಡೇಟಾ/ಇಂಟರ್ನೆಟ್ ಸಂಪರ್ಕವೂ ವಿವಿಧ ಟೆಲಿಕಾಂ ಸಂಸ್ಥೆಗಳ ಪೈಪೋಟಿಯಿಂದಾಗಿ ಸುಲಭದ ದರದಲ್ಲಿ ಲಭ್ಯವಾಗುತ್ತಿದೆ. ಅಂತರ್ಜಾಲ ಬಳಸುವ ಎಲ್ಲರಿಗೂ ಆಂಗ್ಲ ಭಾಷೆ ತಿಳಿದಿರುವುದಿಲ್ಲ. ಅಂತಹವರು ತಮ್ಮ ಮಾತೃಭಾಷೆಯಲ್ಲಿಯೇ ದೊರೆಯುವ ಕಂಟೆಂಟ್/ವಿಷಯಗಳಿಗೆ ಜಾಲತಾಣದಲ್ಲಿ ಜಾಲಾಡುತ್ತಾರೆ. ಆದರೆ ಸಾಕಷ್ಟು ವಿಷಯಗಳು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿರುವುದಿಲ್ಲ. ತಮ್ಮದೇ ಮಾತೃಭಾಷೆಯಲ್ಲಿ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಒಂದು ವೇದಿಕೆ ಇರಲಿಲ್ಲ. ಇದನ್ನು ಗಮನಿಸಿದ ಮೂವರು ಗೆಳೆಯರು ಭಾರತದಲ್ಲೇ ಮೊಟ್ಟಮೊದಲದಾದ ‘ಷೇರ್​ಚಾಟ್’ ಎಂಬ ಸಾಮಾಜಿಕ ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಿದರು. ಇಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಕಂಟೆಂಟ್​ಗಳು ಲಭ್ಯವಿದ್ದು ಬಳಕೆದಾರರು ಸ್ಥಳೀಯ ಭಾಷೆಗಳಲ್ಲಿ ವಿಚಾರ ವಿನಿಮಯ ಮಾಡಿಕೊಳ್ಳಬಹುದು ಹಾಗೂ ಸಂವಹನ ನಡೆಸಬಹುದು.

ಷೇರ್​ಚಾಟ್, 2015ರಲ್ಲಿ ಐಐಟಿ ಕಾನ್ಪುರದ ಪದವೀಧರರಾದ ಫರೀದ್ ಎಹಸಾನ್, ಭಾನು ಸಿಂಗ್ ಹಾಗೂ ಅಂಕುಷ್ ಸಚ್​ದೇವಾ ಅವರು ಆರಂಭಿಸಿದ ಸಾಮಾಜಿಕ ಸಂಪರ್ಕ ಜಾಲ. 2014ರಲ್ಲಿ ಪದವಿ ಮುಗಿಸಿದ ನಂತರ ಮುಂಬೈಗೆ ತೆರಳಿದ ಮೂವರು ಗೆಳೆಯರು ತಮ್ಮ ಕೆಲ ಇಂಟರ್ನ್​ಷಿಪ್​ಗಳಿಂದ ಗಳಿಸಿದ 2-3 ಲಕ್ಷ ರೂಪಾಯಿ ಉಳಿತಾಯದ ಹಣದಿಂದ ಒಪಿನಿಯೋ ಎಂಬ ಚರ್ಚಾ ವೇದಿಕೆ ಒದಗಿಸುವ ಆಪ್ ಆರಂಭಿಸಿದರು. ಅದೇ ವರ್ಷ ಡಿಸೆಂಬರ್​ನಲ್ಲಿ ಇದನ್ನು ಮುಚ್ಚಿ ಷೇರ್​ಚಾಟ್ ಆಪ್ ಅನ್ನು ಪ್ರಯೋಗಾತ್ಮಕವಾಗಿ ಆರಂಭಿಸಿದರು. ಒಂದು ಹಂತದಲ್ಲಿ ಇವರ ಬಳಿ ಕೇವಲ 3000 ರೂಪಾಯಿ ಉಳಿದಿತ್ತು. ಈ ಸಂದರ್ಭದಲ್ಲಿ ಅಂತಿಮ ವರ್ಷದ ಪದವಿಯಲ್ಲಿದ್ದ ಸಚ್​ದೇವಾ ಹಾಗೂ ಕಾಲೇಜಿನಲ್ಲಿ ಅನೇಕ ಪ್ರಾಜೆಕ್ಟ್​ಗಳಲ್ಲಿ ಭಾಗಿಯಾಗಿದ್ದ ಸಿಂಗ್​ರನ್ನು ಮರಳಿ ಕಾಲೇಜಿಗೆ ಕಳುಹಿಸಿ ಫರೀದ್ ದೈನಂದಿನ ಅಗತ್ಯಗಳನ್ನು ಕಡಿತಗೊಳಿಸಿ ಗೆಳೆಯರೊಬ್ಬರ ಕಚೇರಿಯಲ್ಲಿ ರಾತ್ರಿ ಕಳೆದು ಮತ್ತೋರ್ವ ಗೆಳೆಯನ ಕಚೇರಿಯಿಂದ ಕೆಲಸ ಮಾಡುತ್ತಾ ಷೇರ್​ಚಾಟ್ ಆಪ್​ಅನ್ನು 2015ರ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆ ಮಾಡಿದರು.

ಷೇರ್​ಚಾಟ್ ಸದ್ಯ ಆಂಡ್ರಾಯ್್ಡ ಫೋನ್​ಗಳಿಗೆ ಲಭ್ಯವಿದ್ದು, ಗ್ರಾಹಕರು ಪ್ಲೇಸ್ಟೋರ್ ಮೂಲಕ ಡೌನ್​ಲೋಡ್ ಮಾಡಿಕೊಳ್ಳಬಹುದು. ಆರಂಭದಲ್ಲಿ ನಾಲ್ಕು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿದ್ದ ಸೇವೆ ಇಂದು ಹಿಂದಿ, ತೆಲುಗು, ಮರಾಠಿ, ಮಲಯಾಳಂ, ಬೆಂಗಾಲಿ, ಗುಜರಾತಿ, ಪಂಜಾಬಿ ಹಾಗೂ ತಮಿಳು ಭಾಷೆಗಳಲ್ಲಿ ದೊರೆಯುತ್ತಿದೆ. ಸದ್ಯದಲ್ಲೇ ಕನ್ನಡ ಸೇರಿದಂತೆ ಇತರೆ ಭಾಷೆಗಳಲ್ಲೂ ಸೇವೆ ಆರಂಭಿಸುವ ಉದ್ದೇಶ ಕಂಪನಿಗಿದೆ. ಇಲ್ಲಿ ಬಳಕೆದಾರರು ತಮಗೆ ಬೇಕಾದ ಭಾಷೆಯನ್ನು ಆಯ್ದುಕೊಂಡು ಆಪ್​ನಲ್ಲಿ ಕಂಟೆಂಟ್​ಗಳನ್ನು ರಚಿಸಬಹುದು ಹಾಗೂ ಲಭ್ಯವಿರುವ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳಬಹುದು. ಈವರೆಗೆ ಸುಮಾರು 80 ಲಕ್ಷಕ್ಕೂ ಅಧಿಕ ಡೌನ್​ಲೋಡ್ ಕಂಡಿರುವ ಆಪ್ ಈ ಸಂಖ್ಯೆಯಲ್ಲಿ ಗಣನೀಯ ಅಭಿವೃದ್ಧಿ ಕಾಣುತ್ತಿದೆ.

ಈವರೆಗೆ ಲೈಟ್​ಸ್ಪೀಡ್ ಇಂಡಿಯಾ ಪಾರ್ಟ್​ನರ್ಸ್, ಸೈಫ್ ಪಾರ್ಟ್​ನರ್ಸ್ ಹಾಗೂ ಇಂಡಿಯಾ ಕೋಷೆಂಟ್​ಗಳಿಂದ ಸುಮಾರು 5.35 ಮಿಲಿಯನ್ ಅಮೆರಿಕನ್ ಡಾಲರ್ ಬಂಡವಾಳ ಗಳಿಸಿರುವ ಷೇರ್​ಚಾಟ್ ಇದನ್ನು ತಂತ್ರಜ್ಞಾನ ಅಭಿವೃದ್ಧಿ ಹಾಗೂ ಬೇರೆ ಬೇರೆ ಭಾಷೆಗಳಿಗೆ ಸೇವೆ ವಿಸ್ತರಿಸಲು ಬಳಸಿಕೊಂಡಿದೆ. ಸ್ಥಳೀಯ ಜಾಹೀರಾತು, ಪ್ರಾಯೋಜಿತ ಕಂಟೆಂಟ್ ಸೇರಿದಂತೆ ಅನೇಕ ಮಾರ್ಗಗಳಿಂದ ಆದಾಯ ಗಳಿಸುವ ಯೋಜನೆ ಹೊಂದಿರುವ ಕಂಪನಿ, ಸದ್ಯ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸುವತ್ತ ಗಮನ ಕೇಂದ್ರೀಕರಿಸಿದೆ.

ಅಧ್ಯಯನವೊಂದರ ಪ್ರಕಾರ ದೇಶದಲ್ಲಿ ಸುಮಾರು 400 ಮಿಲಿಯನ್​ಗೂ ಅಧಿಕ ಸ್ಮಾರ್ಟ್​ಫೋನ್ ಬಳಕೆದಾರರಿದ್ದಾರೆ. 2018ರ ವೇಳೆಗೆ ಇದು ಸುಮಾರು 850 ಮಿಲಿಯನ್ ತಲುಪುವ ಅಂದಾಜಿದೆ. ಸದ್ಯ ಇರುವ ಸ್ಮಾರ್ಟ್​ಫೋನ್ ಬಳಕೆದಾರರಲ್ಲಿ ಮೂರನೇ ಒಂದರಷ್ಟು ಜನ ಮಾತ್ರ ಆಂಗ್ಲಭಾಷೆಯನ್ನು ಚೆನ್ನಾಗಿ ಬಲ್ಲವರಾಗಿದ್ದು ಉಳಿದ ಮೂರನೇ ಎರಡರಷ್ಟು ಜನ ಪ್ರಾದೇಶಿಕ ಭಾಷೆಯಲ್ಲಿಯೇ ಸಂವಹನ ನಡೆಸಲು ಬಯಸುತ್ತಾರೆ. ಇದರಿಂದಾಗಿ ಷೇರ್​ಚಾಟ್​ಗೆ ಈ ಕ್ಷೇತ್ರದಲ್ಲಿ ಸಾಧಿಸಲು ಅಪಾರವಾದ ಅವಕಾಶವಿದ್ದು, ಯಶಸ್ವೀ ಉದ್ಯಮವಾಗಿ ಹೊರಹೊಮ್ಮುವ ಸಾಧ್ಯತೆ ಇದೆ.

ಲೇಖಕರು: ಸ್ಟಾರ್ಟಪ್​ಗಳ ವಿಷಯದಲ್ಲಿ ಸಂವಹನ ಸಲಹೆಗಾರರು

Leave a Reply

Your email address will not be published. Required fields are marked *

Back To Top