Friday, 19th October 2018  

Vijayavani

ಮೈಸೂರು ರಾಜವಂಶದಲ್ಲಿ ಒಂದೇ ದಿನ ಎರಡು ಸಾವು-ಪ್ರಮೋದಾದೇವಿ ನಾದಿನಿ ವಿಧಿವಶ        ವಿಲನ್ ಚಿತ್ರದಲ್ಲಿ ಶಿವಣ್ಣರನ್ನ ಕಡೆಗಣನೆ ಎಂದು ಆಕ್ರೋಶ - ಥಿಯೆಟರ್‌ ಮುಂದೆ ಅಭಿಮಾನಿಗಳ ಪ್ರತಿಭಟನೆ        ಒಕ್ಕಲಿಗರ ಸಂಘದಲ್ಲಿ ಮೂಗು ತೂರಿಸಲ್ಲ - ಜಾತಿ, ಧರ್ಮದಲ್ಲಿ ಹಸ್ತಕ್ಷೇಪ ಮಾಡಲ್ಲ - ಎಕ್ಸ್‌ಕ್ಲೂಸಿವ್‌ ಸಂದರ್ಶನದಲ್ಲಿ ಡಿಕೆಶಿ ಮಾತು        ಅದ್ದೂರಿ ಜಂಬೂ ಸವಾರಿ - ಅಂಬಾರಿ ಹೊತ್ತು ಅರ್ಜುನ ಗಾಂಭೀರ್ಯ ನಡಿಗೆ - ಬನ್ನಿಮಂಟಪದತ್ತ ವಿಜಯದಶಮಿ ಮೆರವಣೆಗೆ        ದಸರಾ ಮೆರವಣಿಗೆಯಲ್ಲಿ ನಾಡಿನ ಶ್ರೀಮಂತ ಕಲೆ ಅನಾವರಣ - ಗಮನ ಸೆಳೆದ ವಿವಿಧ ಜಿಲ್ಲೆಗಳ ಸ್ತಬ್ಧಚಿತ್ರಗಳ ಚಿತ್ರಣ        ದೆಹಲಿಯಲ್ಲಿ ವಿಜಯದಶಮಿ ಸಂಭ್ರಮ-ರಾಮಲೀಲ ಮೈದಾನದಲ್ಲಿ ರಾವಣನ ಸಂಹಾರ - ಕಾರ್ಯಕ್ರಮದಲ್ಲಿ ರಾಷ್ಟ್ರಪತಿ, ಪ್ರಧಾನಿ ಭಾಗಿ       
Breaking News

ಪ್ರಯತ್ನದಿಂದ ಮಾತ್ರವೇ ಪರಮೋನ್ನತಿ…

Friday, 20.10.2017, 3:04 AM       No Comments

|ಸ್ವಾಮಿ ವೀರೇಶಾನಂದ ಸರಸ್ವತೀ

ಜಗತ್ತಿನ ರಹಸ್ಯಗಳನ್ನು ತಿಳಿಯುವಲ್ಲಿ ಮಾನವನು ಪರಮ ಯಶಸ್ಸನ್ನು ಸಾಧಿಸುತ್ತಾ ಮುನ್ನಡೆಯುತ್ತಿದ್ದಾನೆಂಬ ಮಾತು ಉತ್ಪ್ರೇಕ್ಷೆಯಲ್ಲ. ಮಾನವನ ಚಟುವಟಿಕೆಗಳ ಹಿನ್ನೆಲೆಯಲ್ಲಿ ಕಂಡುಬರುವ ಸೂಕ್ಷ್ಮ ಸತ್ಯವೆಂದರೆ ಅವನ ಜೀವನದ ಗುರಿ ಕೇವಲ ಉದರಪೋಷಣೆ ಅಲ್ಲ, ಇಂದ್ರಿಯ ಸುಖವನ್ನು ಅನುಭವಿಸುವುದಷ್ಟೇ ಅಲ್ಲವೇ ಅಲ್ಲ. ವಿಕಾಸತತ್ತ್ವದ ಪ್ರಕಾರ ಮಾನವವಿಕಾಸ ಕೇವಲ ಜೈವಿಕ ಪರಿವರ್ತನೆ ಅಲ್ಲ!

ಸವಾಲನ್ನು ಅವಕಾಶವಾಗಿಸಿಕೊಳ್ಳಬೇಕು: ಮಾನವನ ಬದುಕು ಒಂದು ನಿರಂತರ ಹೋರಾಟ! ಚಲನಶೀಲತೆ ಎಂಬುದು ಅವನಿಗೆ ಮೆರುಗನ್ನು ನೀಡುತ್ತದೆ. ಜೀವನ ಹೋರಾಟದಲ್ಲಿ ಪ್ರತಿಕ್ಷಣದಲ್ಲೂ ಸವಾಲುಗಳನ್ನೇ ಎದುರಿಸಬೇಕಾಗುತ್ತದೆ. ಸಾಮಾನ್ಯ ವ್ಯಕ್ತಿ ಜೀವನದಲ್ಲಿನ ಸವಾಲುಗಳನ್ನು ‘ಸಮಸ್ಯೆ’ ಎಂದೇ ಹೆಸರಿಸಿ ಕಂಗಾಲಾಗುತ್ತಾನೆ. ಆತ್ಮವಿಶ್ವಾಸಹೀನ ವ್ಯಕ್ತಿಯಾದ ಅವನು ತನ್ನ ದುಃಖ, ನೋವು, ಸೋಲುಗಳಿಗೆ ಹಾಗೂ ದೌರ್ಬಲ್ಯಗಳಿಗೆ ನೀಡುವ ಕಾರಣ ‘ಹಣೆಬರಹ’, ‘ಅದೃಷ್ಟ’ ಇತ್ಯಾದಿ! ಆದರೆ ಆತ್ಮವಿಶ್ವಾಸಸಂಪನ್ನ ವ್ಯಕ್ತಿ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿಕೊಳ್ಳುತ್ತಾನೆ. ಜೀವನದ ಹೋರಾಟದಲ್ಲಿ ನಂಬಿಕೆ ಕಳೆದುಕೊಳ್ಳುವುದಿಲ್ಲ. ತನ್ನಲ್ಲಿ ತನಗಿರುವ ವಿಶ್ವಾಸದ ಸಹಾಯದಿಂದ ಮನಸ್ಸಿನಲ್ಲಿ ಮೂಡಬಹುದಾದ ನಕಾರಾತ್ಮಕ ವಿಷಯಗಳಿಗೆ ಅಸ್ತಿತ್ವವಿಲ್ಲದಂತಾಗಿಸುತ್ತಾನೆ. ವಾಮಮಾರ್ಗದಲ್ಲಿ ಗೆಲ್ಲಬೇಕೆಂಬ ಕಲ್ಪನೆಯೂ ಅವನಲ್ಲಿ ಸುಳಿಯುವುದಿಲ್ಲ. ಅವನ ಜೀವನದಲ್ಲಿ ಯಾವುದೇ ಹಂತದ ಸೋಲು ಅವನನ್ನು ಆಲೋಚನೆಗೆ ಒಳಪಡಿಸುತ್ತದೆ. ಸೋಲಿನ ಅನುಭವವು ಧೃತಿಗೆಡದಂತೆ ಪ್ರಯತ್ನವನ್ನು ಮುಂದುವರಿಸಲು ಪ್ರೇರೇಪಿಸುತ್ತದೆ.

‘ನಿರಂತರ ಪ್ರಯತ್ನ’ ಎಂಬುದು ಸತ್ಯದ ಹಾದಿಯನ್ನು ಸುಗಮವಾಗಿಸುತ್ತದೆ. ನಮ್ಮ ಕೆಲಸವು ನಮಗೆ ಸ್ಪೂರ್ತಿದಾಯಕವಾಗಿರಬೇಕು. ಇದರಿಂದ ದೊರೆತ ಉತ್ಸಾಹವು ನಮ್ಮ ಕರ್ತೃತ್ವ ಸಾಮರ್ಥ್ಯವನ್ನು ವೃದ್ಧಿಸಬೇಕು. ಸತತ ಉತ್ಸಾಹವು ಮಾನವನನ್ನು ಕರ್ತವ್ಯದ ಬಗ್ಗೆ ಕಾಳಜಿವಹಿಸುವಂತೆ ಮಾಡುತ್ತದೆ. ಛಲಬಿಡದ ಪ್ರಯತ್ನದೆಡೆಗೆ ಪ್ರೇರೇಪಿಸುತ್ತದೆ.

ಕೆಲಸವನ್ನು ಪ್ರೀತಿಸಬೇಕು: ಕರ್ತವ್ಯದ ಬಗ್ಗೆ ಪ್ರಾಮಾಣಿಕವಾಗಿ ಚಿಂತಿಸುವ ಮಾನವನು ತನ್ನ ಬದುಕಿನ ಮೆಟ್ಟಿಲುಗಳನ್ನೇ ನಿರ್ವಿುಸಿಕೊಂಡಂತೆ. ಕೆಲಸವನ್ನು ಕಲಿತರಷ್ಟೇ ಸಾಲದು, ಅದನ್ನು ಪ್ರೀತಿಯಿಂದ ನಿರ್ವಹಿಸಬೇಕು. ಏಕೆಂದರೆ ಬದುಕಿ ನಲ್ಲಿ ನಾವು ಪಡೆದ ತರಬೇತಿ ನಮ್ಮ ಕಾರ್ಯದಲ್ಲಿ ಪ್ರತಿಫಲಗೊಳ್ಳುವುದು ದಿಟ.

ಕರ್ತವ್ಯದ ಪ್ರಾಮಾಣಿಕ ನಿರ್ವಹಣೆಯಿಂದ ದೊರೆಯುವ ಲಾಭಗಳು ಹಲವು. ಅವುಗಳೆಂದರೆ-

್ಞ ಅವು ನಮ್ಮ ನಿರಾಶೆಯನ್ನು ಹೊಡೆದೋಡಿಸುತ್ತವೆ. ್ಞ ಬಡತನವನ್ನು ನಿಮೂಲನಗೈಯುತ್ತವೆ. ್ಞ ಚಿಂತೆಗಳನ್ನು ಚಿಂತನೆಯಾಗಿ ರೂಪಾಂತರಿಸುತ್ತವೆ. ್ಞ ವ್ಯಕ್ತಿಯ ಘನತೆಯನ್ನು ವೃದ್ಧಿಸುತ್ತವೆ. ್ಞ ಅದೃಷ್ಟವು ಶ್ರಮಸಂಸ್ಕೃತಿಯ ಪಕ್ಷಪಾತಿ ಎಂಬುದನ್ನು ಮನವರಿಕೆ ಮಾಡಿಕೊಡುತ್ತವೆ.

ರಾಮಾಯಣದ ಕಿಷ್ಕಿಂಧಾ ಅಧ್ಯಾಯದಲ್ಲಿ ಹೀಗೆ ಹೇಳಲಾಗಿದೆ-

ಅನಿರ್ವೇದಂ ಚ ದಾಕ್ಷಂ ಚ ಮನಸಶ್ಚಾಪರಾಜಯಂ|

ಕಾರ್ಯಸಿದ್ಧಿಕರಾಣ್ಯಾಹುಃ ತಸ್ಮಾದೇತದ್ ಬ್ರವೀಮ್ಯಹಂ||

ಕಾರ್ಯಸಿದ್ಧಿಯಾಗಬೇಕಾದರೆ ಬೇಸರವಿಲ್ಲದ ಉತ್ಸಾಹ, ದಕ್ಷತೆ, ಸೋಲನ್ನೊಪ್ಪಿಕೊಳ್ಳದ ಮನೋಭಾವ- ಇವು ಬೇಕೆಂದು ಬಲ್ಲವರು ಹೇಳುತ್ತಾರೆ. ಆದ್ದರಿಂದ ಈ ಮಾತನ್ನು ನಾನು ಹೇಳುತ್ತಿದ್ದೇನೆ (ಅಂಗದನು ಸೀತಾನ್ವೇಷಣೆಗಾಗಿ ವಾನರರಿಗೆ ಹೇಳುತ್ತಾನೆ).

ಇಂದು ಮಾನವನು ಸಾಧಿಸಿದ್ದೆಲ್ಲಾ ಅವನ ಪ್ರಯತ್ನದ ಫಲದಿಂದಲೇ ಆಗಿದೆ. ಪ್ರತಿಯೊಂದು ಕ್ಷೇತ್ರದ ಅಭ್ಯುದಯವೂ ಮಾನವನ ಸಾವಿರಾರು ವರ್ಷಗಳ ನಿರಂತರ ಪರಿಶ್ರಮದ ಫಲಿತಾಂಶವೇ ಆಗಿದೆ. ಪ್ರಯತ್ನವು ಸಕಾರಾತ್ಮಕ ರೀತಿಯಲ್ಲಿ ಮುಂದುವರಿಯಬೇಕಾದರೆ ಹಲವು ಅಂಶಗಳ ಪ್ರಭಾವ ಇರುತ್ತದೆ.

ಸ್ಯಾಮ್ಯುಯೆಲ್ ಸ್ಮೈಲ್ಸ್ ಎಂಬ ಚಿಂತಕ ಹೀಗೆನ್ನುತ್ತಾನೆ- ‘‘ನೀವು ಒಂದು ಆಲೋಚನೆಯನ್ನು ಬಿತ್ತಿ. ಅದೊಂದು ಕ್ರಿಯೆಗೆ ಪ್ರಚೋದನೆ ನೀಡುತ್ತದೆ. ಕ್ರಿಯೆಯನ್ನು ಬಿತ್ತಿದಾಗ ಅದು ‘ಹವ್ಯಾಸ’ ಎಂಬ ಫಲವನ್ನು ನೀಡುತ್ತದೆ. ಹವ್ಯಾಸವನ್ನು ಬಿತ್ತಿದಾಗ ‘ಚಾರಿತ್ರ್ಯ’ ಎಂಬ ಫಲ ದೊರೆಯುತ್ತದೆ. ಸಚ್ಚಾರಿತ್ರ್ಯದ ಪೂರ್ಣ ಪರಿಣಾಮವಾಗಿ ‘ಭವಿತವ್ಯ’ ಫಲಿಸುತ್ತದೆ’. ಆದ್ದರಿಂದ ನಮ್ಮ ಜೀವನದ ಯಶಸ್ಸಿನ ಫಲಕ್ಕೆ ಮೂಲಕಾರಣ ನಮ್ಮ ಮನಸ್ಸಿನಲ್ಲಿ ನಾವು ಆಹ್ವಾನಿಸಿದ ಆಲೋಚನೆಗಳು! ಆದ್ದರಿಂದ ನಮ್ಮ ಆಲೋಚನೆಗಳ ಬಗ್ಗೆ ನಾವು ಅತ್ಯಂತ ಎಚ್ಚರದಿಂದಿರಬೇಕು.

ಏಕಾಗ್ರತೆಯಿಂದ ಯಶಸ್ಸು: ಭಗವಂತನಿಂದ ‘ಬುದ್ಧಿ’ ಹಾಗೂ ‘ಸಂವೇದನಾಶೀಲತೆ’ ಎಂಬ ವಿಶೇಷ ಗುಣಗಳಿಂದ ಅನುಗ್ರಹೀತನಾದ ಮಾನವನು ಜಗತ್ತಿನಲ್ಲಿ ಸಾಧಿಸಲು ಅಸಾಧ್ಯವಾದುದು ಯಾವುದೂ ಇಲ್ಲ ಎಂದು ತಿಳಿಯಬೇಕು. ಶರೀರ, ಬುದ್ಧಿ ಹಾಗೂ ಮನಸ್ಸುಗಳನ್ನು ಏಕಾಗ್ರಗೊಳಿಸಿ ಕಾರ್ಯಪ್ರವೃತ್ತನಾದಾಗ ಯಶಸ್ಸು ಸ್ವಾಭಾವಿಕವಾಗಿ ಲಭಿಸುತ್ತದೆ. ಬುದ್ಧಿವಂತಿಕೆ ಹಾಗೂ ಹೃದಯವಂತಿಕೆಗಳು ಮನುಷ್ಯನ ಪರಿಶ್ರಮದಿಂದ ಅನುಗ್ರಹೀತವಾದವುಗಳು.

ಮಹಾಭಾರತದ ಯುದ್ಧದ ಸನ್ನಿವೇಶವನ್ನೇ ನೆನಪು ಮಾಡಿಕೊಳ್ಳೋಣ. ಹೆಂಗಸರ ಮುಂದೆ ಜಂಭ ಕೊಚ್ಚಿಕೊಂಡು ಅನಂತರ ಯುದ್ಧ ಮಾಡದೆ ಹಿಮ್ಮೆಟ್ಟಿ ಬಂದ ಉತ್ತರಕುಮಾರನೆಲ್ಲಿ? ಪುಟ್ಟ ಬಾಲಕನಾದರೂ ದ್ರೋಣರು ರೂಪಿಸಿದ ಚಕ್ರವ್ಯೂಹವನ್ನು ಯಶಸ್ವಿಯಾಗಿ ಭೇದಿಸುತ್ತ, ಕೌರವರ ಮೋಸ, ಕುಕೃತ್ಯಗಳಿಗೆ ಬಲಿಯಾಗಿ ಶವವಾಗಿ ಹಿಂತಿರುಗಿ ಬಂದ ‘ವೀರ ಅಭಿಮನ್ಯು’ವೆಲ್ಲಿ? ಇಲ್ಲಿ ಮನುಷ್ಯರ ಪ್ರಯತ್ನದಲ್ಲಿ ಒಂದು ದೊಡ್ಡ ಅಂತರವನ್ನೇ ಕಾಣಬಹುದು.

‘ಬಡತನವೆಂಬುದು ಶಾಪವಲ್ಲ, ಶ್ರೀಮಂತಿಕೆಯು ವರವಲ್ಲ; ಸೋಮಾರಿ ತನವೇ ಮಹಾಶತ್ರು’ ಎಂಬ ಮಾತು ಸುಳ್ಳಲ್ಲ. ಪಂಚತಂತ್ರ ಹೀಗೆ ಹೇಳುತ್ತದೆ-

ಉದ್ಯಮೇನ ಹಿ ಸಿದ್ಧ್ಯಂತಿ ಕಾರ್ಯಾಣಿ ನ ಮನೋರಥೈಃ |

ನ ಹಿ ಸಿಂಹಸ್ಯ ಸುಪ್ತಸ್ಯ ಪ್ರವಿಶಂತಿ ಮುಖೇ ಮೃಗಾಃ ||

ಅಂದರೆ, ಪ್ರಯತ್ನದಿಂದ ಕಾರ್ಯಗಳು ಸಿದ್ಧಿಸುತ್ತವೆಯೇ ವಿನಾ ಬರಿಯ ಬಯಕೆಗಳಿಂದಲ್ಲ. ನಿದ್ರಿಸುತ್ತಿರುವ ಸಿಂಹದ ಬಾಯಲ್ಲಿ ಮೃಗಗಳು ಬಂದು ತಾವಾಗಿ ಪ್ರವೇಶಿಸುವುದಿಲ್ಲ ಎಂದರ್ಥ.

ಹಿಮ್ಮೆಟ್ಟುವವನು ಸಾಧಕನಲ್ಲ: ಜೀವನವೆಂಬುದೊಂದು ನಿರಂತರ ಹೋರಾಟ. ಸ್ವಾಮಿ ವಿವೇಕಾನಂದರೆನ್ನುವಂತೆ ಪ್ರತಿಯೊಂದು ಕಾರ್ಯವೂ ಯಶಸ್ಸಿನ ಮೈಲಿಗಲ್ಲು ಮುಟ್ಟಬೇಕಾದರೆ ಮೂರು ಹಂತಗಳ ಮೂಲಕ ಹಾದು ಹೋಗಬೇಕು. ಅವುಗಳೆಂದರೆ ನಿರ್ಲಕ್ಷ್ಯ, ಪ್ರತಿರೋಧ ಹಾಗೂ ಸಹಮತ. ನಾವು ಕೈಗೊಳ್ಳುವ ಕಾರ್ಯವನ್ನು ಪ್ರಾರಂಭದಲ್ಲಿ ಇತರರು ನಿರ್ಲಕ್ಷಿಸಬಹುದು, ಮೂದಲಿಸಬಹುದು, ನಮ್ಮ ಬಗ್ಗೆ ಲಘುವಾಗಿ ಮಾತನಾಡಿದರೂ ಆಶ್ಚರ್ಯವಿಲ್ಲ! ಆದರೂ ನಮ್ಮ ಪ್ರಯತ್ನವನ್ನು ಬಿಡದೆ ಕಾರ್ಯತತ್ಪರರಾಗಬೇಕು. ಯಶಸ್ಸಿನತ್ತ ನಮ್ಮ ಪ್ರಯತ್ನ ಪರಿಶ್ರಮಗಳು ವೃದ್ಧಿಯಾದಂತೆ ಪ್ರಾರಂಭದಲ್ಲಿ ನಮ್ಮನ್ನು ಮೂದಲಿಸುತ್ತಿದ್ದ ಸಮಾಜವು ಈಗ ವಿರೋಧಿಸಬಹುದು. ನಮ್ಮ ಕಾರ್ಯದ ಪಥದಲ್ಲಿ ಅಡ್ಡಗಾಲು ಹಾಕಲೂಬಹುದು. ಧೃತಿಗೆಡದೆ ಪ್ರಯತ್ನವನ್ನು ಮುಂದುವರಿಸಿದಾಗ, ಗುರಿಯತ್ತ ಸಾಗುವ ದಾರಿಯಲ್ಲಿ ನಿಷ್ಠರಾಗಿ, ಶ್ರದ್ಧೆಯಿಂದ ಮುಂದುವರಿದಾಗ ನಮ್ಮ ಸಾರ್ಥಕ ಪರಿಶ್ರಮಕ್ಕೆ ಯಶಸ್ಸು ದೊರೆಯುವುದು ಖಂಡಿತ. ಉತ್ತಮ ಪ್ರಯತ್ನಗಳಿಗೆ, ಪರಿಶ್ರಮಗಳಿಗೆ ಅತ್ಯುತ್ತಮ ಫಲಿತಾಂಶ ದೊರಕಿಸಿಕೊಡುವಲ್ಲಿ ಪ್ರಕೃತಿ ನಿರ್ವಂಚನೆಯಿಂದ ಸಹಕರಿಸುತ್ತದೆ. ನಾವು ಬಿತ್ತಿದ್ದು ಬೀಜವಾದರೆ ಭಗವಂತ ನಮಗೆ ತೆನೆಯನ್ನೇ ಕೊಡುತ್ತಾನೆಂಬುದು ಉತ್ಪ್ರೇಕ್ಷೆಯಲ್ಲ, ಅವೈಜ್ಞಾನಿಕವೂ ಅಲ್ಲ! ಅನಂತರ ಸಮಾಜವು ಯಶಸ್ವಿ ವ್ಯಕ್ತಿಯನ್ನು ಗೌರವಿಸಿ, ಹಾಡಿ ಹೊಗಳುವುದು ಸರ್ವೆಸಾಮಾನ್ಯ! ಹೀಗೆ ವ್ಯಕ್ತಿ ಮತ್ತು ಸಮಾಜಗಳು ಪ್ರಯತ್ನಪೂರ್ವಕವಾಗಿ ಶ್ರಮಿಸುತ್ತಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ದುಡಿಮೆ ದೇಶದ ಅತ್ಯಂತ ದೊಡ್ಡ ಸಂಪತ್ತು. ದುಡಿಮೆಗೆ ಷಾರ್ಟ್​ಕಟ್ ಇಲ್ಲ!

ಪ್ರಯತ್ನಶೀಲತೆ ಎಂಬುದು ಮನುಷ್ಯ ಸಂಕುಲಕ್ಕೆ ಲಭ್ಯವಿರುವ ಮಹತ್ತರ ಅವಕಾಶ. ‘ಅಭ್ಯಾಸವು ಮಾನವನನ್ನು ಪರಿಪಕ್ವಗೊಳಿಸುತ್ತದೆ; ಅನುಭವವು ಅತ್ಯಂತ ಉತ್ತಮ ಶಿಕ್ಷಕ; ಆದರೆ ಅದರ ಶುಲ್ಕ ದುಬಾರಿ’ ಎನ್ನುವ ಈ ಲೋಕೋಕ್ತಿಗಳು ಮಾನವನ ಬದುಕಿಗೆ ದಾರಿದೀಪವಾಗಿವೆ.

ಪುಟ್ಟಮಗು ರೋದಿಸದಿದ್ದರೆ ಹೆತ್ತತಾಯಿಯೂ ಎದೆಹಾಲನ್ನುಣಿಸಳು! ಇದನ್ನು ತಾಯಿಯ ನಿಷ್ಕಾರುಣ್ಯ ಹೃದಯವೆನ್ನೋಣವೇ? ಖಂಡಿತ ಅಲ್ಲ. ತನ್ನ ಅವಶ್ಯಕತೆಯನ್ನು ಪೂರೈಸುವಲ್ಲಿ ನವಜಾತ ಶಿಶುವೂ ತನ್ನ ಅಳುವನ್ನು ಪ್ರಯತ್ನಪೂರ್ವಕವಾಗಿ ಹೊರಗೆಡವಬೇಕೆಂಬುದು ಇಲ್ಲಿ ಗಮನಿಸಬೇಕಾದ ಅಂಶ.

ಹಿಂಜರಿಕೆ-ಹೇಡಿತನ ಬೇಡ: ಇಂದಿನ ಯುವಕರ ಮನಸ್ಥಿತಿಯನ್ನು ಪರಾಂಬರಿಸಿ ನೋಡಿದಾಗ ಹಲವಾರು ಮುಖ್ಯ ಅಂಶಗಳನ್ನು ಗುರುತಿಸಬಹುದು. ಪ್ರಯತ್ನ ಹೀನತೆಯು ಮನುಷ್ಯನಿಗೆ ಪಾತಾಳದ ದರ್ಶನ ಮಾಡಿಸುತ್ತದೆ. ‘ತಾರುಣ್ಯದ ಕತ್ತಲು (ಅಜ್ಞಾನ) ಅತ್ಯಂತ ಗಾಢವಾದದ್ದು’ ಎನ್ನುತ್ತದೆ ಪಂಚತಂತ್ರ. ಜೀವನದಲ್ಲಿ ತಪ್ಪುಗಳು ಘಟಿಸುವುದು ಸಹಜ. ತಪ್ಪುಗಳು ಆಗಬಹುದೆಂದು ಕೆಲಸದಲ್ಲಿ ತೊಡಗದಿರುವುದು ಹೇಡಿಗಳ ಲಕ್ಷಣ. ‘ಅಜೀರ್ಣದ ಭೀತಿಯಿಂದ ಯಾರು ತಾನೇ ಊಟ ಬಿಟ್ಟಿದ್ದಾರೆ?’ ಎಂಬುದು ಅನುಭಾವಿಗಳ ಮಾತು. ಶಾಂತವಾದ ಸಮುದ್ರವು ಅತ್ಯುತ್ತಮ ನಾವಿಕನನ್ನು ನಿರ್ವಿುಸಲು ಸಾಧ್ಯವಿಲ್ಲ! ಮಾನವನ ಬದುಕು ನಿಜಕ್ಕೂ ಚಮತ್ಕಾರಿಯಾದದ್ದು! ಜೀವನದ ಸ್ವರೂಪವನ್ನು ಹೆಚ್ಚು ಹೆಚ್ಚು ವಿಸõತವಾಗಿ ಪರಿಭಾವಿಸಿದಂತೆಲ್ಲ ಬದುಕು ಚಮತ್ಕಾರದ ಆಗರವೇ ಆಗುತ್ತದೆ!

ಹಣದ ಮೇಲೆ ನಂಬಿಕೆ ಇಡುವವರು ಹಲವರು. ನಂಬಿಕೆಯ ಮೇಲೆ ಹಣ ಹೂಡುವವರು ಕೆಲವರೇ. ಆದರೆ ಅವರೇ ಯಶಸ್ಸಿನ ಶಿಖರವೇರಿದವರು ಎಂಬ ಮಾತು ಅತಿಶಯೋಕ್ತಿಯಲ್ಲ. ಏಕೆಂದರೆ ಅಂತಹ ವ್ಯಕ್ತಿಗಳು ‘ಕಾಲದ ಮಹಿಮೆ’ಯನ್ನು ಅರಿತವರಾಗಿರುತ್ತಾರೆ. ‘ಕಾಲ’ವನ್ನು ವ್ಯರ್ಥಮಾಡಿದವರನ್ನು ಕಾಲವು ವ್ಯರ್ಥಮಾಡಿಯೇ ತೀರುತ್ತದೆ ಎಂಬುದು ಕಟುಸತ್ಯ.

‘ಯಾರು ಇತರರಿಗಾಗಿ ಬದುಕುತ್ತಾರೆಯೋ ಅವರದ್ದೇ ಜೀವನ; ಉಳಿದವರು ಬದುಕಿದ್ದರೂ ಸತ್ತಂತೆ!’ ಎಂದಿದ್ದಾರೆ ಸ್ವಾಮಿ ವಿವೇಕಾನಂದರು. ಕೇವಲ ತನ್ನ ಸೌಖ್ಯಕ್ಕಾಗಿ ಚಿಂತಿಸುವವನು ‘ಸಾಮಾನ್ಯ’, ಇತರರ ಸೌಖ್ಯಕ್ಕಾಗಿ ಚಿಂತಿಸುವವನೇ ‘ಮಹಾತ್ಮ’!. ತನಗಾಗಿ ಬದುಕುವುದೇ ಕಷ್ಟಸಾಧ್ಯ ಎನಿಸಿರುವಾಗ ಇನ್ನು ಇತರರಿಗಾಗಿ ಜೀವಿಸುವುದು ಸುಲಭದ ಮಾತೇನಲ್ಲ. ಆದರೆ ಇಲ್ಲಿ ಅಪಾರವಾದ ಪ್ರಯತ್ನದ ಅವಶ್ಯಕತೆಯನ್ನು ಮನಗಾಣಲೇಬೇಕಿದೆ. ಜೀವನ ಎಂಬುದು ಪಯಣ. ಅದು ಹತ್ತಾರು ಹಂತಗಳ ಮೂಲಕ ಹಾದುಹೋಗುತ್ತದೆ. ಅಂದರೆ ಜೀವನವೆಂಬುದು ಅಸಂಖ್ಯಾತ ಘಳಿಗೆಗಳ ಒಟ್ಟು ಮೊತ್ತ. ಆದರೆ ಒಳ್ಳೆಯದನ್ನು ಮಾಡುವ ಘಳಿಗೆಯೇ ಬದುಕಿನ ಸಾರ್ಥಕ ಘಳಿಗೆ.

ಪರಿಶ್ರಮದಿಂದಲೇ ಬದುಕು ಸುಂದರ: ಸತತ ಪ್ರಯತ್ನ ಪರಿಶ್ರಮಗಳಿಂದ ಮಾತ್ರವೇ ಜೀವನವು ಸರ್ವಾಂಗ ಸುಂದರವಾಗಿ ರೂಪುಗೊಳ್ಳಲು ಸಾಧ್ಯ. ಆದರೆ ಪ್ರಯತ್ನದ ಹಾದಿಯಲ್ಲಿ ಸ್ವಾಮಿ ವಿವೇಕಾನಂದರು ನಮಗಿತ್ತ ಎಚ್ಚರಿಕೆಯ ಮಾತನ್ನು ಗಮನಿಸಬೇಕು. ‘ಅನ್ಯಾಯದ ಮಾರ್ಗದಲ್ಲಿ ಜಯಶಾಲಿಯಾಗುವುದಕ್ಕಿಂತ ನ್ಯಾಯಮಾರ್ಗದಲ್ಲಿ ಪರಾಭವಗೊಳ್ಳುವುದು ಹೆಚ್ಚು ಘನತೆವೆತ್ತ ವಿಚಾರ!’. ಈ ಮಾತಿನ ಅಂತರಾರ್ಥವೇನು? ನ್ಯಾಯವಾದ ಪಥದಲ್ಲಿ ಪ್ರಯತ್ನಿಸಿ ಸೋಲುಂಡರೂ ಮನಸ್ಸು ನಮ್ಮನ್ನು ಮರಳಿ ಯತ್ನವ ಮಾಡುವಂತೆ ಪ್ರೇರೇಪಿಸುವುದಲ್ಲದೆ ನ್ಯಾಯಮಾರ್ಗದಿಂದಲೇ ಸಾಗಿ ಯಶಸ್ವಿಯಾಗಲು ತವಕಿಸುತ್ತದೆ!

ಸರಳವಾದ ಜೀವನದಿಂದ ಲೆಕ್ಕವಿಲ್ಲದಷ್ಟು ಒಳಿತುಗಳು ನಮ್ಮದಾಗುತ್ತವೆ ಎಂಬುದು ವಿಜ್ಞಾನಿ ಐನ್​ಸ್ಟೀನ್​ರ ಅಭಿಮತ. ವೈಯಕ್ತಿಕತೆಗಿಂತ ಹಿರಿದಾದ ಆಯಾಮದಲ್ಲಿ ತನ್ನ ಸಾಮರ್ಥ್ಯದ ಅಭಿವೃದ್ಧಿಯನ್ನು ಸಾಧಿಸುವುದರಿಂದ ಮಾತ್ರವೇ ಜೀವನದ ಕೃತಕೃತ್ಯತೆಯನ್ನು ಗಳಿಸಲು ಸಾಧ್ಯ ಎಂಬ ಐನ್​ಸ್ಟೀನ್​ರ ಮಾತು ಮನನಯೋಗ್ಯವಾದುದು. ‘ವರ್ತಮಾನದಲ್ಲಿ ಬದುಕು’ ಎನ್ನುತ್ತದೆ ಭಾರತೀಯ ಋಷಿವಾಣಿ. ಇದರ ಅರ್ಥ, ಭೂತ ಹಾಗೂ ಭವಿಷ್ಯತ್ತುಗಳನ್ನು ನಿರ್ಲಕ್ಷಿಸು ಎಂದಲ್ಲ. ಹಿಂದಿನ ತಪ್ಪುಗಳನ್ನು ಸರಿಪಡಿಸಿಕೊಂಡು ಇಂದಿನ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಿದಾಗ ನಾಳೆ ಎಂಬುದು ಸಾರ್ಥಕತೆಯನ್ನು ಕಂಡೇಕಾಣುತ್ತದೆ ಎಂಬುದು ಈ ಮಾತಿನ ಅರ್ಥ.

ನಿಜ, ‘ಯಶಸ್ಸು ಎಂಬುದು ನಿನ್ನೆಯ ಕನಸು, ಇಂದಿನ ಗೆಲುವು, ನಾಳೆಯ ಸವಿನೆನಪು’. ಆದರೆ ಈ ಎಲ್ಲ ಸಂದರ್ಭಗಳಲ್ಲಿಯೂ ಪ್ರಯತ್ನದ ಪಾತ್ರ ಹಿರಿದು!.

(ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

Leave a Reply

Your email address will not be published. Required fields are marked *

Back To Top