Monday, 16th July 2018  

Vijayavani

ಕಾಂಗ್ರೆಸ್‌ ಕಿರುಕುಳದಿಂದಲೇ ಸಿಎಂ ಕಣ್ಣೀರು - ಕಾಂಗ್ರೆಸ್‌ ನೆಚ್ಚಿಕೊಂಡು ಹೋದ್ರೆ ಇದೇ ಸ್ಥಿತಿ - ಎಚ್​ಡಿಕೆ  ಕಣ್ಣೀರಿಗೆ ಜೇಟ್ಲಿ ಟಾಂಗ್‌        ವಾಣಿಜ್ಯ ಬ್ಯಾಂಕ್‌ನಲ್ಲಿನ ಚಾಲ್ತಿ ಸಾಲವೂ ಮನ್ನಾ - ಸಿಎಂ ನಿರ್ಧಾರ - ರೈತರಿಗೆ ಮತ್ತೊಂದು ಕೊಡುಗೆ ನೀಡಿದ ಮುಖ್ಯಮಂತ್ರಿ        ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಶಾಸಕರ ಪುತ್ರ - ಪ್ರಶ್ನಿಸಿದ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದನೆ        ಬಂಗಾಳದಲ್ಲಿ ಮೋದಿ ರ್ಯಾಲಿ ವೇಳೆ ಅವಗಢ - ಪೆಂಡಾಲ್ ಕುಸಿದು 22 ಜನರಿಗೆ ಗಾಯ - ಆರೋಗ್ಯ ವಿಚಾರಿಸಿದ ಪ್ರಧಾನಿ ನಮೋ        ಕರಾವಳಿಯಲ್ಲಿ ಭಾರಿ ಮಳೆಯ ಅವಾಂತರ - ಕುಸಿದುಬಿತ್ತು ಭಟ್ಕಳದ ಬಸ್ ನಿಲ್ದಾಣ - ಹೊರ ಓಡಿದ ಪ್ರಯಾಣಿಕರು        ಕೆಆರ್​​ಎಸ್​​​ನಿಂದ ಭಾರಿ ಪ್ರಮಾಣದ ನೀರು - ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆ - ಧುಮ್ಮಿಕ್ಕುತ್ತಿದೆ ಹೊಗೇನಕಲ್ ಫಾಲ್ಸ್       
Breaking News

ಪ್ರಪಂಚ ಪಾರದರ್ಶಕವಾದಷ್ಟೂ ನಗ್ನರಾಗುತ್ತಿದ್ದೇವೆ!

Sunday, 17.09.2017, 3:04 AM       No Comments

| ರವಿಶಂಕರ್​ ಎನ್​

ಕನಕದಾಸರಿಗೆ ಅವರ ಗುರುಗಳು ಹೇಳಿದಂತೆ, ‘ಯಾರಿಗೂ ಕಾಣದಂತೆ ಬಾಳೆಹಣ್ಣು ತಿನ್ನಿ’ ಎಂದು ಇಂದು ಯಾರಾದರೂ ಹೇಳಿದರೆ, ಕನಕರಂತೆ ನಾವೂ ಹಸಿದೇ ಹಿಂದಿರುಗಬೇಕು. ಕಾರಣ ನಾವು, ಸರ್ವಾಂತರ್ಯಾಮಿಯಾಗಿರುವ ಖಾಸಗಿ ಬೇಹುಗಾರರ ಕೆಟ್ಟ ಕುತೂಹಲದ ವ್ಯಾಪ್ತಿ ಮತ್ತು ವಿಸ್ತಾರವನ್ನು ಮನಗಾಣಬೇಕಿದೆ!

ಖಾಸಗಿತನದ ಹಕ್ಕು ಅಥವಾ ‘ರೈಟ್ ಟು ಪ್ರೈವೆಸಿ’ ಬಗೆಗಿನ ಸವೋಚ್ಚ ನ್ಯಾಯಾಲಯದ ನಿರ್ಧಾರವನ್ನು ನೆಪವಾಗಿಟ್ಟುಕೊಂಡು ಆರಂಭವಾದ ಈ ಲೇಖನಮಾಲೆಯಲ್ಲಿ, ‘ಅಲ್ಲೆಲ್ಲೋ ಕುಳಿತು ನಮ್ಮ ಸಂವಾದಗಳನ್ನು ಆಲಿಸುತ್ತಿರುವ ಕಾಣದ ದೇಶಗಳ ಅಧಿಕೃತ ಗೂಢಚಾರರಿಗಿಂತಲೂ, ನಮ್ಮ ಸುತ್ತಲೂ ಇರುವ ಈ ಅನಧಿಕೃತ ನಿಗೂಢಚಾರರೇ ಹೆಚ್ಚು ಅಪಾಯಕಾರಿ… ಸಾರ್ವತ್ರಿಕವಾಗಿ ಪ್ರಪಂಚದ ಎಲ್ಲ ಮಾಹಿತಿಯೂ ಪಾರದರ್ಶಕವಾಗುತ್ತಿರುವುದಕ್ಕೆ ನಾವು ಹೆದರಬೇಕಿಲ್ಲವಾದರೂ, ನಮ್ಮ ಖಾಸಗಿ ಸಂವಾದಗಳನ್ನು ನಮ್ಮ ಸುತ್ತಲೂ ಇರುವ ಹಿತಶತ್ರುಗಳು ತಿಳಿದೋ-ತಿಳಿಯದೆಯೋ ದಾಖಲಿಸಿಕೊಳ್ಳುತ್ತಿರುವುದಕ್ಕೆ ನಾವು ಆತಂಕ ಪಡಬೇಕಿದೆ’ ಎಂದು ಕಳೆದ ವಾರ ಪ್ರತಿಪಾದಿಸಿದ್ದೆ.

ಅಂತಹ ಕದ್ದಾಲಿಕೆ ಹಾಗೂ ಕಳ್ಳನೋಟದ ವಿಸõತ ರೂಪದ ಪರಿಚಯ ಮಾಡಿಕೊಳ್ಳದೆ ಅದನ್ನು ತಡೆಗಟ್ಟುವುದಾಗಲೀ ಅಥವಾ ಅದರ ಬಗ್ಗೆ ನಾವು ಜಾಗರೂಕರಾಗಿ ಇರುವುದಾಗಲೀ ಸಾಧ್ಯವಿಲ್ಲ. ಯಾರು, ಯಾವ ರೂಪದಲ್ಲಿ ನಮ್ಮ ಚಲನವಲನಗಳನ್ನು ಗಮನಿಸುತ್ತಿದ್ದಾರೆ ಎನ್ನುವುದರ ಬಗ್ಗೆ ಸ್ವಲ್ಪವಾದರೂ ಅರಿವು ಮೂಡಿದರೆ, ನಮ್ಮ ಪ್ರೈವೆಸಿ/ಖಾಸಗಿತನವನ್ನು ಕಾಯ್ದುಕೊಳ್ಳುವ ಪ್ರಯತ್ನವನ್ನು ಆರಂಭಿಸಬಹುದು.

ನಮ್ಮೆಲ್ಲರಂತೆ ಸಾಮಾನ್ಯ ಜೀವನ ನಡೆಸುವ ನಗರದ ವ್ಯಕ್ತಿಯೊಬ್ಬರ ದಿನಚರಿಯನ್ನಿಟ್ಟುಕೊಂಡು ನೋಡಿದರೆ, ಈ ಬೇಹುಗಾರಿಕೆ ಎಲ್ಲಿ, ಹೇಗೆ ಮತ್ತು ಏಕೆ ನಡೆಯುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು. ನಮ್ಮ ಜೀವನದ ಪ್ರತಿ ಆಯಾಮದಲ್ಲೂ ನಾವು ಹೇಗೆ ಅಯಾಚಿತವಾಗಿ ಸಂಪೂರ್ಣ ಪಾರದರ್ಶಕವಾಗಿದ್ದೇವೆ ಎನ್ನುವುದು ಗಾಬರಿಗೊಳಿಸುತ್ತದೆ. ಉದಾಹರಣೆಗೆ, ನಿಮ್ಮ ಮನೆಯ ಒಳಗೇ ನೋಡಿಕೊಳ್ಳಿ. ಬೆಳಗಾಗೆದ್ದು ಹಲ್ಲುಜ್ಜಲು ನೀವು ಯಾವ ಪೇಸ್ಟ್ ಉಪಯೋಗಿಸುತ್ತೀರಿ, ನೀವು ತಿಂಡಿಗೆ ಕಾರ್ನ್​ಫ್ಲೇಕ್ಸ್ ತಿನ್ನುವ ಪೈಕಿಯೋ ಅಥವಾ ಇಡ್ಲಿ-ದೋಸೆ ತಿನ್ನುತ್ತೀರೋ, ನಿಮ್ಮ ಅಚ್ಚುಮೆಚ್ಚಿನ ಪುಳಿಯೋಗರೆ/ಮಸಾಲೆಪುಡಿ ಯಾವುದು? ಇತ್ಯಾದಿಯನ್ನು ನೀವು ಹೇಳದಿದ್ದರೂ, ‘ಅವರಿಗೆ’ ಗೊತ್ತು! ನೀವು ಡಸ್ಟ್-ಬಿನ್ ಮೂಲಕ ಹೊರಹಾಕುವ ತ್ಯಾಜ್ಯವನ್ನು ವಿಶ್ಲೇಷಿಸಿ, ನಿಮ್ಮ ಬ್ರಾ್ಯಂಡ್ ಆಯ್ಕೆಗಳು ಎಂತಹವು ಎನ್ನುವುದರ ಮಾಹಿತಿ ಕಲೆಹಾಕುವುದು ಜಾಗತಿಕವಾಗಿ 3-4 ದಶಕಗಳಿಂದಲೂ ನಡೆಯುತ್ತಿರುವ ಗ್ರಾಹಕ ಸಂಶೋಧನಾ ವಿಧಾನ! ಈಗ, ಭಾರತದ ನಗರಗಳಲ್ಲೂ ಇದು ವ್ಯಾಪಕವಾಗುತ್ತಿದೆ ಎನ್ನುವ ವರದಿಗಳು ಬರುತ್ತಿವೆ. ಜನರ ಜೀವನಶೈಲಿಯನ್ನು ಸೂಕ್ಷ್ಮವಾಗಿ ಗಮನಿಸಿ, ಅವರು ಮಾಡಿಕೊಳ್ಳುತ್ತಿರುವ ಹೊಸ ಅಭ್ಯಾಸಗಳ ಬಗ್ಗೆ ಒಳನೋಟಗಳನ್ನು ಬೆಳೆಸಿಕೊಂಡರೆ ತಮ್ಮ ಮುಂದಿನ ಉತ್ಪನ್ನವನ್ನು ಅವರಿಗೆ ಮಾರುವುದು ಸುಲಭ ಎನ್ನುವುದು ನಿತ್ಯೋಪಯೋಗಿ ಉತ್ಪನ್ನಗಳನ್ನು ಮಾರುವ ದೊಡ್ಡ ಕಂಪನಿಗಳ ತರ್ಕ. ಹಾಗಾಗಿಯೇ ಈ ಡಸ್ಟ್-ಬಿನ್ ಅನಾಲಿಸಿಸ್!

ಖಾಸಗಿ ಕಂಪನಿಗಳು ಸಂಶೋಧನೆ/ಸಮೀಕ್ಷೆಗಳ ಹೆಸರಿನಲ್ಲಿ ನಡೆಸುವ ತ್ಯಾಜ್ಯ ವಿಶ್ಲೇಷಣೆ, ನಮ್ಮ ಅನುಮತಿ ಇಲ್ಲದೆ ನಮ್ಮ ಬಗೆಗಿನ ಖಾಸಗಿ ಮಾಹಿತಿಯನ್ನು ಸೇವೆ/ಉತ್ಪನ್ನಗಳ ಮಾರುಕಟ್ಟೆದಾರರು ಸಂಗ್ರಹಿಸುವುದಕ್ಕೆ ಕೊಡಬಹುದಾದ ಒಂದು ಸಣ್ಣ ಉದಾಹರಣೆ ಮಾತ್ರ. ನಮ್ಮ ಮನೆಯೊಳಗೆ ಇಂತಹ ಇನ್ನೂ ಅನೇಕ ಸಮೀಕ್ಷೆಗಳು ನಡೆಯುತ್ತವೆ. ಉದಾಹರಣೆಗೆ- ನೀವು ಯಾವ ಟಿವಿ ಚಾನಲ್​ಗಳಲ್ಲಿನ ಯಾವ್ಯಾವ ಕಾರ್ಯಕ್ರಮಗಳನ್ನು ಎಷ್ಟೆಷ್ಟು ಹೊತ್ತು ನೋಡುತ್ತೀರಿ ಎನ್ನುವುದು, ಇಂದಿನ ಡಿಜಿಟಲ್ ಯುಗದಲ್ಲಿ ಸುಲಭವಾಗಿ ಲಭ್ಯವಾಗುವ ಮಾಹಿತಿ. ನೀವು ಓದುವ ದಿನಪತ್ರಿಕೆ, ಬಳಸುವ ವಾಹನ, ಎಲ್ಲದರ ವಿವರವೂ ಆಯಾ ಮಾರಾಟಗಾರರಿಂದ ಇತರ ಮಾರಾಟಗಾರರಿಗೆ ‘ಮ್ಯೂಚುಯಲ್ ಡೇಟಾ ಷೇರಿಂಗ್’/ಪರಸ್ಪರ ಮಾಹಿತಿ ಹಂಚಿಕೆಯ ಮೂಲಕ ರವಾನೆಯಾಗುತ್ತಿದೆ. ಮಾಹಿತಿ ಯುಗದಲ್ಲಿ ನಾವು ಮಾಡುವ ಯಾವ ವಾಣಿಜ್ಯ ಚಟುವಟಿಕೆಯೂ ಗುಪ್ತವಲ್ಲ.

ನಿತ್ಯವೂ ಹೊಸತಾಗುತ್ತಿರುವ ತಂತ್ರಜ್ಞಾನದ ದೆಸೆಯಿಂದಾಗಿ ನಾವು ಮನೆಯಲ್ಲಿದ್ದರೂ ಅಥವಾ ಮನೆ ಬಿಟ್ಟು ಹೊರಗೆ ಬಂದರೂ, ‘ಬಿಗ್ ಬಾಸ್’ ಮನೆಯಲ್ಲಿರುವ ಲೆಕ್ಕ. ಎಲ್ಲೆಲ್ಲೂ ನಮ್ಮನ್ನು ಹಿಂಬಾಲಿಸುವ ಕ್ಯಾಮರಾಗಳು. ಕದ್ದುಕೇಳುವ ಮೈಕ್​ಗಳು. ಹೀಗೆ ನಮ್ಮನ್ನು ಹಿಂಬಾಲಿಸಲು ಇವರಿಗೆ ಅನುಮತಿ ಕೊಟ್ಟವರು ಯಾರು? ಕೆಲವರಿಗೆ, ಯಾರೂ ಇಲ್ಲ. ಮತ್ತೆ ಕೆಲವರಿಗೆ, ನಾವೇ ಕೊಟ್ಟವರು! ನಮಗೆ ಗೊತ್ತಿಲ್ಲದೆಯೇ!

ನಮ್ಮ ನೆರಳಾಗಿರುವ ಸಿಸಿಟಿವಿ ಕ್ಯಾಮರಾಗಳು ಮತ್ತು ನಮ್ಮ ಮೊಬೈಲ್​ಗಳಲ್ಲಿ ಕುಳಿತಿರುವ ಅಪ್​ಗಳು ನಮ್ಮ ಜೀವನವನ್ನು ತೆರೆದ ಪುಸ್ತಕವಾಗಿಸಿವೆ. ಇವೆಲ್ಲಕ್ಕೂ ಮಿಗಿಲಾಗಿ, ಅಂತರ್ಜಾಲದಲ್ಲಿನ ನಮ್ಮ ಚಲನವಲನಗಳ ಮೇಲೆ ನಿಗಾ ಇಡಲು ನಮಗರಿವಿಲ್ಲದೆಯೇ ನಾವೇ ಕೊಟ್ಟಿರುವ ಸಾರಾಸಗಟು ಅನುಮತಿ, ಮುಂದೆ ನಮಗೆ ಮುಳುವಾಗಲಿದೆ! ಅಂತಹ ಅಪಾಯದ ಚಿಹ್ನೆಗಳು ಈಗಾಗಲೇ ಕಾಣುತ್ತಿವೆ ಎನ್ನುವುದಕ್ಕೆ ಈ ಚಿಕ್ಕ ಉದಾಹರಣೆ ನೋಡಿ-

ಮೊನ್ನೆ, ತಾನು ಆನ್​ಲೈನ್ ಮೂಲಕ ಖರೀದಿಸಿದ್ದ ಏರ್ ಟಿಕೆಟ್ ಅನ್ನು, ನನ್ನ ಸಹೋದ್ಯೋಗಿಯೊಬ್ಬ, ಯಾತಕ್ಕೂ ಇರಲಿ ಎಂದುಕೊಂಡು ತನ್ನ ಕಚೇರಿಯ ಇ-ಮೇಲ್​ನಿಂದ ಖಾಸಗಿ ಇ-ಮೇಲ್ ವಿಳಾಸಕ್ಕೆ ಕಳುಹಿಸಿಕೊಂಡ. ಅಕಸ್ಮಾತ್ ತಾನು ತೆಗೆದುಕೊಂಡಿದ್ದ ಪ್ರಿಂಟ್-ಔಟ್ ಕಳೆದುಹೋದರೆ, ಇದನ್ನು ಬಳಸಿ ಮತ್ತೊಂದು ಪ್ರತಿ ಮುದ್ರಿಸಿಕೊಳ್ಳಬಹುದು ಎನ್ನುವುದು ಆತನ ಆಲೋಚನೆಯಾಗುತ್ತು. ಆದರೆ, ನಡೆದದ್ದೇ ಬೇರೆ!

ತನ್ನ ಖಾಸಗಿ ಮೇಲ್​ಗೆ ಟಿಕೇಟನ್ನು ಕಳುಹಿಸಿಕೊಂಡ ಸ್ವಲ್ಪ ಹೊತ್ತಿಗೇ ಆತನ ಜಿ-ಮೇಲ್ ವಿಳಾಸಕ್ಕೆ ‘ಇನ್ನು ಮೂರು ದಿನದಲ್ಲಿ ನಿಮ್ಮ ಫ್ಲೈಟ್ ಇದೆ. ಅದಕ್ಕಾಗಿ ತಯಾರಿ ನಡೆಸುತ್ತಿದ್ದೀರಿ ತಾನೆ?’ ಎನ್ನುವ ಸ್ನೇಹಮಯಿ ಸಂದೇಶ ಬಂತು! ಅವನಿಗೋ, ಯಾರೋ ತನ್ನ ಹಿಂಬಾಲಿಸಿದ ಹಾಗೆ ಗಾಬರಿ! ಮರುದಿನ, ಈತನ ಮೊಬೈಲ್​ಗೆ ಒಂದು ಸಂದೇಶ ಬಂತು ‘ನೀವು ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದೀರಿ ಎಂದು ತಿಳಿದು ಸಂತೋಷವಾಗಿದೆ. ನಿಮ್ಮ ಪ್ರಯಾಣ ಸುಖಕರವಾಗಿರಲಿ. ಅಂದಹಾಗೆ ನಿಮಗೆ ಬೆಂಗಳೂರಿನಲ್ಲಿ ತಂಗಲು ಹೋಟೆಲ್ ಬೇಕಾದರೆ, ಈ ಸಂಖ್ಯೆಗೆ ಕರೆ ಮಾಡಿ’. ಅರೆ! ಇವರಿಗೆ ತನ್ನ ಮೊಬೈಲ್ ಸಂಖ್ಯೆ ಹೇಗೆ ಗೊತ್ತಾಯಿತು? ತಾನು ಖಾಸಗಿಯಾದ ಆಫೀಸ್ ಇ-ಮೇಲ್​ನಿಂದ ಇನ್ನೂ ಖಾಸಗಿಯಾದ ತನ್ನ ಜಿ-ಮೇಲ್ ವಿಳಾಸಕ್ಕೆ ಕಳುಹಿಸಿಕೊಂಡಿರುವ ಮಾಹಿತಿ ಈಗ ಜಗಜ್ಜಾಹೀರಾಗಿರುವಂತೆ ತೋರುತ್ತಿದೆಯಲ್ಲ! ಎಂದು ಆತ ಗಾಬರಿಕೊಂಡ. ಕಡೆಯ ದಿನವಂತೂ, ಪ್ರತಿ ಗಂಟೆಗೊಮ್ಮೆ ಆತನ ಕ್ಷೇಮಸಮಾಚಾರ ವಿಚಾರಿಸುವ, ಆ ನೆಪದಲ್ಲಿ ಆತನಿಗೆ ಯಾವುದೋ ಸೇವೆ/ಉತ್ಪನ್ನವನ್ನು ಮಾರುವ ಇ-ಮೇಲ್​ಗಳು ಹಾಗೂ ಎಸ್ಸೆಮ್ಮೆಸ್​ಗಳ ಮಹಾಪೂರವೇ ಬಂತು! ಆಫೀಸ್ ಕೆಲಸಕ್ಕೆ ತಾನು ಪ್ರಯಾಣ ಮಾಡುತ್ತಿರುವ ವಿಷಯವೇ ಈಗ, ಅನೇಕ ಕಂಪನಿಗಳು ತನ್ನನ್ನು ಟಾರ್ಗೆಟ್ ಮಾಡಲು ಕಾರಣವಾಗಿರುವುದು ಅವನನ್ನು ನಿಜಕ್ಕೂ ಕಂಗೆಡಿಸಿತ್ತು. ತಾನೇನೋ ತಪ್ಪು ಮಾಡಿದ್ದೇನೆ, ಮತ್ತು ಅದಕ್ಕಾಗಿ ಯಾವುದೋ ಶಿಕ್ಷೆಗೆ ಗುರಿಯಾಗಲಿದ್ದೇನೆ ಎಂದು ಅವನಿಗೆ ಅನ್ನಿಸತೊಡಗಿತಂತೆ. ಎಷ್ಟರ ಮಟ್ಟಿಗೆ ಎಂದರೆ, ಇವರ ಇ-ಮೇಲ್ ಮತ್ತು ಎಸ್ಸೆಮ್ಮೆಸ್ ಕಾಟದಿಂದ ತಪ್ಪಿಸಿಕೊಳ್ಳಲು ಆತ ತನ್ನ ಫ್ಲೈಟ್ ಅನ್ನೇ ಬದಲಾಯಿಸುವ ಆಲೋಚನೆಯನ್ನೂ ಮಾಡಿದ್ದನಂತೆ! ಕೊನೆಗೆ, ಅದು ಕೂಡ ‘ಅವರಿಗೆ’ ತಿಳಿಯಬಹುದು ಎಂದುಕೊಂಡು ಸುಮ್ಮನಾದನಂತೆ!

ಎಲ್ಲರೂ ಉಪಯೋಗಿಸುವ ಜಿ-ಮೇಲ್ (ಹಾಗೂ ಅಂತರ್ಜಾಲದ ಮುಖೇನ ಬಗೆಬಗೆಯ ಸೇವೆ ಒದಗಿಸುವ ದೊಡ್ಡ ಕಂಪನಿಗಳು/ಆಪ್​ಗಳು), ನಿಮ್ಮ ಖಾಸಗಿ ಇ-ಮೇಲ್​ಗಳನ್ನು ಓದುವುದಿಲ್ಲವೆಂದು ಪ್ರತಿಪಾದಿಸುತ್ತದೆ. ಆದರೆ, ನಿಮ್ಮ ಸಂವಾದಗಳಲ್ಲಿ ವಾಣಿಜ್ಯ ಸಂದೇಶಗಳಿಗೆ ಬಳಸಿಕೊಳ್ಳಬಹುದಾದ ಪದಗಳೇನಾದರೂ ಇದ್ದಲ್ಲಿ, ಅದಕ್ಕೆ ಪ್ರಸ್ತುತವಾದ ಜಾಹೀರಾತನ್ನು ನೀವು ನೋಡುತ್ತಿರುವ ಪುಟದ ಮೂಲೆಯೊಂದರಲ್ಲಿ ತೋರಿಸಬಹುದು ಮತ್ತು ನಿಮಗೆ ಆ ಬಗ್ಗೆ ಸಂದೇಶಗಳನ್ನು ಕಳುಹಿಸಬಹುದು ಎನ್ನುವುದು ನಿಮ್ಮ ಮತ್ತು ಜಿ-ಮೇಲ್ ನಡುವಿನ ಒಪ್ಪಂದದಲ್ಲಿ ಬರೆದಿರುತ್ತದೆ. ಆಪ್ ಡೌನ್​ಲೋಡ್ ಮಾಡಿಕೊಳ್ಳುವ/ಜಿ-ಮೇಲ್ ಖಾತೆ ತೆರೆಯುವ ಆರಂಭೋತ್ಸಾಹದಲ್ಲಿ, ಅದನ್ನು ಸರಿಯಾಗಿ ಓದದೆಯೇ ನೀವು ಒಪ್ಪಿ್ಪೊಂಡಿರುತ್ತೀರಿ. ಹಾಗಾಗಿ, ಗೂಗಲ್​ಗೆ ನಿಮ್ಮ ಖಾಸಗಿ ಸಂದೇಶಗಳ ಒಳಗೆ ಸ್ವಲ್ಪಮಟ್ಟಿಗಿನ ಪ್ರವೇಶವನ್ನು ನೀವೇ ಕಲ್ಪಿಸಿರುತ್ತೀರಿ.

ಮುಂದಾಗುವುದು ಅರಬ ಮತ್ತು ಒಂಟೆಯ ಕತೆ! ನಿಮ್ಮ ಒಪ್ಪಂದದ ಪ್ರಕಾರ ಸಂದೇಶದಲ್ಲಿನ ವಾಣಿಜ್ಯ ಪದಗಳನ್ನು ಮಾತ್ರವೇ ಓದುವ ಜಿ-ಮೇಲ್/ಜಾಲತಾಣಗಳು/ಆಪ್​ಗಳು, ಅದಕ್ಕೆ ಪ್ರಸ್ತುತವಾದ ವಾಣಿಜ್ಯೀಕೃತ ಪದಗಳನ್ನು ಇತರ ಕಂಪನಿಗಳಿಗೆ ಮಾರಿಕೊಂಡಿರುತ್ತವೆ. ಅವರ ಒಳಒಪ್ಪಂದದ ಪ್ರಕಾರ ನಿಮ್ಮ ಇ-ಮೇಲ್​ನಲ್ಲಿ ಇಂತಿಂತಹ ಪದಗಳು ಅಥವಾ ಪದಪುಂಜಗಳು ಇದ್ದಲ್ಲಿ ಅವರ ಸೇವೆ/ಉತ್ಪನ್ನದ ಜಾಹೀರಾತನ್ನು ನಿಮಗೆ ತೋರಿಸಬೇಕು ಎಂದಿರುತ್ತದೆ. ಇಷ್ಟೇ ಆದರೆ, ಅದರಲ್ಲಿ ತೊಂದರೆಯಿಲ್ಲ. ಆದರೆ, ಆ ಸಂದೇಶದ ಜಾಡನ್ನು ಹಿಡಿದು ಹೊರಟ ಗೂಗಲ್​ಗೆ ಕೆಟ್ಟ ಕುತೂಹಲ ಕಾಡುತ್ತದೆ. ಸಂದೇಶದ ಸಾರ ಅರ್ಥವಾದರೆ, ಇನ್ನೂ ಹೆಚ್ಚು ಪ್ರಸ್ತುತವಾದ ವಾಣಿಜ್ಯ ಸಂದೇಶಗಳನ್ನು ಕಳುಹಿಸಬಹುದು. ಅಂತಹ ಸಂದೇಶಗಳನ್ನು ಕಳುಹಿಸುವ ಕಂಪನಿಗಳು ಅದಕ್ಕಾಗಿ ಇನ್ನೂ ಹೆಚ್ಚಿನ ದುಡ್ಡು ಕೊಡಲು ತಯಾರಾಗಿರುತ್ತವೆ. ಹಾಗಾಗಿ, ಅದು ಸಂದೇಶದೊಳಗೆ ಇನ್ನಷ್ಟು ಇಣುಕುತ್ತದೆ. ನಿಮ್ಮೊಡನೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ನಿಮ್ಮ ಸಂದೇಶಗಳನ್ನು ‘ಓದುವುದಿಲ್ಲ’. ಆದರೆ, ಪದಪುಂಜಗಳನ್ನು ಎಷ್ಟರ ಮಟ್ಟಿಗೆ ಜರಡಿ ಹಿಡಿಯುತ್ತದೆ ಎಂದರೆ, ಓದಿದ್ದರೇ ವಾಸಿಯಾಗಿತ್ತು ಎಂದುಕೊಳ್ಳಬಹುದು!

ನಿಮ್ಮ ಇ-ಮೇಲ್​ಗಳು, ಸಾಮಾಜಿಕ ಮಾಧ್ಯಮಗಳು, ಆಪ್​ಗಳು ಮತ್ತು ನಿಮ್ಮ ಮೊಬೈಲ್ ನಂಬರ್ ಒಂದಕ್ಕೊಂದು ಸೇರಿಕೊಂಡಿವೆ (ಬಲವಂತವಾಗಿ ಸೇರಿಸಲಾಗಿದೆ ಎನ್ನಬಹುದು). ಮೊದಲೇ ಹೇಳಿದಂತೆ, ನಿಮ್ಮ ಇ-ಮೇಲ್/ಆಪ್​ನ ಒಪ್ಪಂದದ ಸಣ್ಣದೊಂದು ಅಂಶದ ಪ್ರಕಾರ, ನಿಮ್ಮ ಮೊಬೈಲ್ ಕೂಡ ಅದಕ್ಕೆ ಒಳಪಡುತ್ತದೆ! ಹಾಗಾಗಿ, ನಿಮ್ಮ ಕಂಪ್ಯೂಟರ್ ಮತ್ತು ಫೋನ್​ನ ಮೂಲಕ ನಿಮ್ಮನ್ನು ಎಡೆಬಿಡದೆ ಕಾಡುವ ಪರವಾನಗಿ, ನಿಮ್ಮ ಆಪ್/ಸಾಮಾಜಿಕ ಮಾಧ್ಯಮ/ಜಿ-ಮೇಲ್​ನ ಸಹಚರರಿಗೆ ಸಿಕ್ಕಂತಾಯಿತು. ಅಂದಹಾಗೆ, ನಿಮ್ಮ ಮನೆ ಅಥವಾ ಆಫೀಸ್ ವಿಳಾಸವನ್ನು ನೀವೇನಾದರೂ ಜಿ-ಮೇಲ್​ನೊಂದಿಗೆ ಹಂಚಿಕೊಂಡಿದ್ದರೆ- ವರ್ಚುಯಲ್ ಪ್ರಪಂಚ ನಿಮ್ಮ ನಿಜವಾದ ಪ್ರಪಂಚದೊಂದಿಗೂ ಬೆಸೆತು, ಇನ್ನೂ ಕಷ್ಟಕ್ಕೆ ಬಂತು- ನಿಮ್ಮನ್ನು ಬೇಟೆಯಾಡಲಿರುವ ಖಾಸಗಿ ಕಂಪನಿಗಳಿಂದ ಆ ಭಗವಂತನೂ ರಕ್ಷಿಸಲಾರ!

ಇನ್ನು ನನ್ನ ಸಹೋದ್ಯೋಗಿಯ ಕತೆ. ಆತ, ಅಂತರ್ಜಾಲದಲ್ಲಿ ವ್ಯವಹರಿಸುತ್ತಿರುವಷ್ಟು ಹೊತ್ತೂ, ‘ಅಯ್ಯೋ, ಗೂಗಲ್​ಗೆ ನಾನು ಮಾಡುವುದೆಲ್ಲವೂ ಗೊತ್ತಾಗುತ್ತದೆ‘ ಎನ್ನುವ ಭಯದಲ್ಲೇ ಜೀವಿಸಬೇಕು. ಈ ‘ಪರ್ಸಿಕ್ಯೂಷನ್ ಕಾಂಪ್ಲೆಕ್ಸ್’/ಯಾರೋ ತನಗೆ ಹಾನಿಮಾಡಲು ಹೊರಟಿದ್ದಾರೆ ಎನ್ನುವ ಭಯದಿಂದ ಅವನನ್ನು ಪಾರುಮಾಡುವುದಾದರೂ ಹೇಗೆ? ಅವನು ಮಾಡಿದ ತಪ್ಪಾದರೂ ಏನು?.

ಕನಕದಾಸರಿಗೆ ಅವರ ಗುರುಗಳು ಹೇಳಿದಂತೆ, ‘ಯಾರಿಗೂ ಕಾಣದಂತೆ ಬಾಳೆಹಣ್ಣು ತಿನ್ನಿ’ ಎಂದು ಇಂದು ನಮಗೆ ಯಾರಾದರೂ ಹೇಳಿದರೆ, ಅವರಂತೆ ನಾವೂ ಹಸಿದೇ ಹಿಂದಿರುಗಬೇಕು. ಅವರು ಭಗವಂತನ ಸರ್ವಾಂತರ್ಯಾಮಿ ರೂಪವನ್ನು ಮನಗಂಡಿದ್ದರು. ನಾವು, ಸರ್ವಾಂತರ್ಯಾಮಿಯಾಗಿರುವ ಖಾಸಗಿ ಬೇಹುಗಾರರ ಕೆಟ್ಟ ಕುತೂಹಲದ ವ್ಯಾಪ್ತಿ ಮತ್ತು ವಿಸ್ತಾರವನ್ನು ಮನಗಾಣಬೇಕಿದೆ.

ನಮ್ಮ ಜೀವನವನ್ನು ಸಂಪೂರ್ಣವಾಗಿ ವ್ಯಾಪಿಸುತ್ತಿರುವ ಖಾಸಗಿ ಕಂಪನಿಗಳ ಅನಧಿಕೃತ ಬೇಹುಗಾರಿಕೆಯ ಬಗ್ಗೆ ಇನ್ನಷ್ಟು ವಿಷಯ ಮತ್ತು ಅದನ್ನು ಸ್ವಲ್ಪವಾದರೂ ನಿವಾರಿಸುವ ಬಗೆಗಿನ ಮಾಹಿತಿಯನ್ನು ಮುಂದಿನ ಕಂತಿನಲ್ಲಿ ತಿಳಿದುಕೊಳ್ಳೋಣ.

(ಲೇಖಕರು ಸಂವಹನ ಸಲಹೆಗಾರರು)

Leave a Reply

Your email address will not be published. Required fields are marked *

Back To Top