Friday, 22nd June 2018  

Vijayavani

ಬಜೆಟ್ ಪೂರ್ವಭಾವಿ ಸಭೆ ಆರಂಭ - ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಸಭೆ -ಸಿಎಂ ನೇತೃತ್ವದಲ್ಲಿ ಮೀಟಿಂಗ್​​        ಟ್ರಾನ್ಸ್​​​ಫರ್​ಗೆ ನೋ ಬ್ರೋಕರ್ ಸಿಸ್ಟಂ - ಸಿಎಂ, ಡಿಸಿಎಂ ಹೆಸ್ರು ಬಳಸಿದ್ರೆ ದೂರವಿಡಿ - ಪೊಲೀಸ್​​​​ ಅಧಿಕಾರಿಗಳಿಗೆ ಸಿಎಂ ಆರ್ಡರ್​​​​        ಲಾರಿಗೆ ಸಿಲುಕಿ ಆತ್ಮಹತ್ಯೆಗೆ ಯುವಕನ ಯತ್ನ - ಚಕ್ರ ಹರಿದು ಎರಡೂ ಕಾಲು ಕಟ್​ - ಕೊಪ್ಪಳದ ಕುಕನೂರು ಪಟ್ಟಣದಲ್ಲಿ ಘಟನೆ        ಗಂಗಾಧರ ಚಡಚಣ ನಿಗೂಢ ಹತ್ಯ ಪ್ರಕರಣ - 6 ಮಂದಿ ಆರೋಪಿಗಳ ಸಿಐಡಿ ತನಿಖೆ ಪೂರ್ಣ        ಇಂದಿನಿಂದ ಮೆಟ್ರೋದ 6 ಬೋಗಿ ರೈಲು ಓಡಾಟ - ಬೈಯಪ್ಪನ ಹಳ್ಳಿಯಿಂದ ಮೈಸೂರು ರಸ್ತೆ ವರೆಗೆ ಸಂಚಾರ        ಹಜ್​ ಭವನಕ್ಕೆ ಟಿಪ್ಪು ಹೆಸರಿಡಲು ಪ್ರಸ್ತಾಪ- ವಕ್ಫ್​ ಸಚಿವ ಜಮೀರ್​ ವಿರುದ್ಧ ಆಕ್ರೋಶ- ಟಿಪ್ಪು ಹೆಸರಿಟ್ರೆ ಉಗ್ರ ಹೋರಾಟ ಎಂದ ಬಿಜೆಪಿ       
Breaking News

ಪ್ರತಿಷ್ಠೆಯ ಕಣ, ಗೆಲುವಿಗಾಗಿ ಕೈ-ಕಮಲ ಪಣ

Tuesday, 21.03.2017, 7:22 AM       No Comments

ತೀವ್ರ ಕುತೂಹಲ ಮೂಡಿಸಿರುವ ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭೆ ಉಪಚುನಾವಣೆ ಅಖಾಡ ಮತ್ತಷ್ಟು ರಂಗೇರಿದ್ದು, ಸೋಮವಾರ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಕಾರ್ಯಕರ್ತರ ಭಾರೀ ಮೆರವಣಿಗೆಯೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ. ಎರಡೂ ಪಕ್ಷಗಳಿಗೆ ಚುನಾವಣೆ ಪ್ರತಿಷ್ಠೆ ವಿಚಾರವಾಗಿದ್ದು, ರಾಜ್ಯದ ಪ್ರಮುಖ ನಾಯಕರು ನಂಜನಗೂಡು, ಗುಂಡ್ಲುಪೇಟೆಯಲ್ಲಿ ಬೀಡುಬಿಟ್ಟಿದ್ದಾರೆ. ಈ ನಡುವೆ ಮೆರವಣಿಗೆ ಮೇಳೆ ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.

 ನಂಜನಗೂಡು: ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರ ಉಪಚುನಾವಣೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಅಭ್ಯರ್ಥಿಗಳು ಸೋಮವಾರ ನಾಮಪತ್ರ ಸಲ್ಲಿಸಿದರು. ಎರಡೂ ಪಕ್ಷಗಳು ಸಾವಿರಾರು ಕಾರ್ಯಕರ್ತರು, ಮುಖಂಡರ ಜತೆ ತೆರೆದ ವಾಹನದಲ್ಲಿ ರೋಡ್ ಶೋ ನಡೆಸುವ ಮೂಲಕ ಬಲಪ್ರದರ್ಶನ ಮಾಡಿದವು.

ಕಾಂಗ್ರೆಸ್ ಬೃಹತ್ ಮೆರವಣಿಗೆ: ಬೆಳಗ್ಗೆ 10 ಗಂಟೆಗೆ ಕ್ಷೇತ್ರದ ವಿವಿಧ ಭಾಗಗಳಿಂದ ಆಗಮಿಸಿದ್ದ 4 ಸಾವಿರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಪ್ರಸನ್ನ ಚಿಂತಾಮಣಿ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಎನ್.ಕೇಶವಮೂರ್ತಿ ಬೆಳಗ್ಗೆ 11.30ಕ್ಕೆ ಚುನಾವಣಾಧಿಕಾರಿ ಜಿ.ಜಗದೀಶ್ ಅವರಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಯು.ಟಿ.ಖಾದರ್, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಸಂಸದ ಆರ್. ಧ್ರುವನಾರಾಯಣ, ಸೇರಿ ಪ್ರಮುಖ ನಾಯಕರು ಈ ವೇಳೆ ಸಾಥ್ ನೀಡಿದರು.

ಬಿಜೆಪಿ ರೋಡ್​ಶೋ: ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ಗಣ್ಯರ ಪಡೆಯೇ ಆಗಮಿಸಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವರಾದ ವಿ.ಸೋಮಣ್ಣ, ಸಿ.ಎಚ್.ವಿಜಯಶಂಕರ್, ಬಿ.ಸೋಮಶೇಖರ್, ಕುಮಾರ್ ಬಂಗಾರಪ್ಪ, ಕೋಟೆ ಎಂ.ಶಿವಣ್ಣ ಸೇರಿ ಪ್ರಮುಖ ನಾಯಕರು ಸಾಥ್ ನೀಡಿದರು. ಪ್ರಸನ್ನ ಚಿಂತಾಮಣಿ ದೇವಾಲಯ ಮುಂಭಾಗದಿಂದ ತೆರೆದ ವಾಹನದಲ್ಲಿ ತೆರಳಿದ ಬಿಜೆಪಿ ಅಭ್ಯರ್ಥಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್ ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ಗುಂಡ್ಲುಪೇಟೆಯಲ್ಲೂ ರಂಗೇರಿದ ಅಖಾಡ

ಗುಂಡ್ಲುಪೇಟೆ: ಗುಂಡ್ಲುಪೇಟೆ ವಿಧಾನಸಭೆಯ ಉಪಚುನಾವಣೆಗೂ ಅಖಾಡ ರಂಗೇರಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಸೋಮ ವಾರ ನಾಮಪತ್ರ ಸಲ್ಲಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಸಿ.ಎಸ್. ನಿರಂಜನ ಕುಮಾರ್ ಸ್ಕಂದಗಿರಿ ಪಾರ್ವತಾಂಭಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪಟ್ಟಣಕ್ಕೆ ಆಗಮಿಸಿ ದರು. 11 ಗಂಟೆಗೆ ಡಿ.ದೇವರಾಜ ಅರಸು ಕ್ರೀಡಾಂಗಣದ ಬಳಿ ಕಾರ್ಯ ಕರ್ತರ ಜತೆಗೂಡಿ ತಾಲೂಕು ಕಚೇರಿ ಯತ್ತ ಮೆರವಣಿಗೆಯಲ್ಲಿ ಸಾಗಿದರು. ಸುಮಾರು 1 ಗಂಟೆ ಕಾಲ ನಡೆದ ರೋಡ್ ಶೋನಲ್ಲಿ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು. ತೆರೆದ ವಾಹನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಸಂಸದರಾದ ಬಿ. ಶ್ರೀರಾಮುಲು, ಮಾಜಿ ಸಚಿವ ಅರವಿಂದ ಲಿಂಬಾವಳಿ ಮತ್ತಿತರ ನಾಯಕರ ಜತೆ ರೋಡ್ ಶೋ ನಡೆಸಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.

ಕಾಂಗ್ರೆಸ್ ನಾಮಪತ್ರ ಸಲ್ಲಿಕೆ: ತಾಲೂಕಿನ ಹಾಲಹಳ್ಳಿ ಗ್ರಾಮದಲ್ಲಿನ ಪತಿ ದಿ.ಎಚ್.ಎಸ್. ಮಹದೇವ ಪ್ರಸಾದ್ ಸಮಾಧಿಗೆ ಬೆಳಗ್ಗೆ 10 ಗಂಟೆಗೆ ಕಾಂಗ್ರೆಸ್ ಅಭ್ಯರ್ಥಿ ಡಾ.ಗೀತಾ ಮಹದೇವಪ್ರಸಾದ್ ಪೂಜೆ ಸಲ್ಲಿಸಿದರು. ಸಚಿವ ಯು.ಟಿ.ಖಾದರ್, ಮಾಜಿ ಸಚಿವ ಸತೀಶ್ ಜಾರಕಿಹೋಳಿ, ಶಾಸಕ ಪುಟ್ಟರಂಗಶೆಟ್ಟಿ ಮತ್ತಿತರ ನಾಯಕರ ಜತೆಗೂಡಿ ಮೆರವಣಿಗೆ ಮೂಲಕ ಚುನಾವಣಾಧಿಕಾರಿ ಕಚೇರಿಗೆ ತೆರಳಿ ಉಮೇದುವಾರಿಕೆ ಸಲ್ಲಿಸಿದರು. ಓರ್ವ ಪಕ್ಷೇತರ ಅಭ್ಯರ್ಥಿಯೂ ನಾಮಪತ್ರ ಸಲ್ಲಿಸಿದ್ದಾರೆ.

ಬಿಜೆಪಿ ದೂರು: ಗುಂಡ್ಲುಪೇಟೆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ 6 ಅಧಿಕಾರಿಗಳು ಕಾಂಗ್ರೆಸ್ ಪರ ಕೆಲಸ ಮಾಡುತ್ತಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗಕ್ಕೆ ಬಿಜೆಪಿ ಸೋಮವಾರ ಬೆಂಗಳೂರಿನಲ್ಲಿ ದೂರು ಸಲ್ಲಿಸಿದೆ.

ಕಾರ್ಯಕರ್ತರಿಗೆ ಲಾಠಿರುಚಿ

ಗುಂಡ್ಲುಪೇಟೆ: ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಂದರ್ಭ ಪಟ್ಟಣದ ತಾಲೂಕು ಕಚೇರಿ ಎದುರು ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ಮಾರಾಮಾರಿ, ಕಲ್ಲು ಹಾಗೂ ಚಪ್ಪಲಿ ತೂರಾಟ ನಡೆಯಿತು. ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಘರ್ಷಣೆಯಲ್ಲಿ ಬಿಜೆಪಿಯ ನಾಲ್ವರು ಕಾರ್ಯಕರ್ತರು ಮತ್ತು ಮೂವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.

 ತುಘಲಕ್ ದರ್ಬಾರ್ ಮೂಲಕ ರಾಜ್ಯದ ಸಂಪತ್ತನ್ನು ಲೂಟಿ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ಸಿಎಂ ಸಿದ್ದರಾಮಯ್ಯ ಹಾಗೂ ಸಂಪುಟ ಸಚಿವರ ಆಡಳಿತವನ್ನು ನಿರ್ನಾಮ ಮಾಡಲು ಉಪಚುನಾವಣೆ ನಾಂದಿಯಾಗಲಿದೆ.

| ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

 

ನಂಜನಗೂಡು ಕಾಂಗ್ರೆಸ್ ಭದ್ರಕೋಟೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕ್ಷೇತ್ರ ಉಳಿಸಿಕೊಳ್ಳಲು ಸಂಪುಟ ಸಚಿವರನ್ನು ಕರೆತರುತ್ತಿದ್ದಾರೆ. ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ನಾವು ಕೂಡ ಪ್ರತಿತಂತ್ರ ಹೆಣೆಯುತ್ತಿದ್ದು ಗೆಲ್ಲುವುದು ನಿಶ್ಚಿತ.

| ವಿ.ಶ್ರೀನಿವಾಸಪ್ರಸಾದ್, ಬಿಜೆಪಿ ಅಭ್ಯರ್ಥಿ

 

ಪ್ರಸಾದ್ ಅವರು 2 ಬಾರಿ ಶಾಸಕರಾಗಿ ಆಯ್ಕೆಗೊಂಡು ಸಚಿವರಾಗಿ ಅಧಿಕಾರ ಅನುಭವಿಸಿದ್ದಾರೆ. 2 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವಿನ ಅಂಚಿನಲ್ಲಿ ಸೋತಿರುವ ನನ್ನ ಮೇಲೂ ಕ್ಷೇತ್ರದ ಮತದಾರರಿಗೆ ಅನುಕಂಪವಿದೆ. ಈ ಬಾರಿ ನನ್ನನ್ನು ಗೆಲ್ಲಿಸಿ ಶಾಸಕರನ್ನಾಗಿ ಮಾಡಬೇಕೆಂಬ ಹಂಬಲ ಕ್ಷೇತ್ರದ ಜನತೆಗಿದೆ.

| ಕಳಲೆ ಎನ್.ಕೇಶವಮೂರ್ತಿ, ಕಾಂಗ್ರೆಸ್ ಅಭ್ಯರ್ಥಿ

ಕೈ ವಿರುದ್ಧ ಪ್ರಚಾರ

ಬೆಂಗಳೂರು: ಬಡ್ತಿ ಮೀಸಲಾತಿ ವಿಚಾರವಾಗಿ ಸುಪ್ರೀಂ ಕೋರ್ಟ್ ತೀರ್ಪಿಗೆ ರಾಜ್ಯ ಸರ್ಕಾರ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸದೆ ದಲಿತ ವಿರೋಧಿ ಧೋರಣೆ ತಾಳಿದೆ. ಇದರಿಂದಾಗಿ ಏಪ್ರಿಲ್ 9ರಂದು ನಡೆಯುವ ಗುಂಡ್ಲುಪೇಟೆ, ನಂಜನಗೂಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕ್ರಾಂಗ್ರೆಸ್ ಪಕ್ಷದ ವಿರುದ್ಧ ಪ್ರಚಾರ ಮಾಡಲಾಗುವುದೆಂದು ಬಡ್ತಿ ಮೀಸಲಾತಿ ಹೋರಾಟ ಸಮಿತಿ ಎಚ್ಚರಿಸಿದೆ.

Leave a Reply

Your email address will not be published. Required fields are marked *

Back To Top