Wednesday, 18th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಪ್ರತಿಷ್ಠೆಗೆ ಇದು ಸಂದರ್ಭವಲ್ಲ

Wednesday, 15.11.2017, 3:00 AM       No Comments

ವೈದ್ಯ ಮುಷ್ಕರ ಹಾಗೂ ಖಾಸಗಿ ವೈದ್ಯಕೀಯ ಸೇವೆಯಲ್ಲಿನ ವ್ಯತ್ಯಯದಿಂದಾಗಿ ಸೂಕ್ತ ಹಾಗೂ ಸಕಾಲಿಕ ಚಿಕಿತ್ಸೆ ದೊರೆಯದೆ ರಾಜ್ಯದಲ್ಲಿ ಇದುವರೆಗೆ 10ಕ್ಕೂ ಹೆಚ್ಚು ಜೀವಗಳ ಬಲಿಯಾಗಿದೆ. ಸರ್ಕಾರ ಮತ್ತು ಖಾಸಗಿ ವೈದ್ಯ ಸಮೂಹದ ನಡುವಿನ ಹಗ್ಗಜಗ್ಗಾಟದಲ್ಲಿ ಶ್ರೀಸಾಮಾನ್ಯರು ಹೀಗೆ ಹೈರಾಣಾಗುವಂತಾಗಿರುವುದು ವಿಷಾದನೀಯ. ಕೆಪಿಎಂಇ ಕಾಯ್ದೆ ತಿದ್ದುಪಡಿಗೆ ಪಟ್ಟುಹಿಡಿದಿರುವ ಖಾಸಗಿ ವೈದ್ಯರು ಹಾಗೂ ಇವರ ಯಾವುದೇ ಬೇಡಿಕೆಯನ್ನು ಅಂಗೀಕರಿಸುವುದಕ್ಕೆ ಒಪ್ಪದ ಸರ್ಕಾರ- ಹೀಗೆ ಎರಡೂ ತುದಿಗಳು ಜನಹಿತ ಮರೆತು ಪ್ರತಿಷ್ಠೆಗೇ ಪಟ್ಟಾಗಿ ಅಂಟಿಕೊಂಡಿರುವುದರ ಫಲವಿದು. ತಿದ್ದುಪಡಿ ವಿಧೇಯಕ ಮಂಡನೆಯಾಗದಿದ್ದರೆ ರಾಜೀನಾಮೆ ನೀಡುವ ಬೆದರಿಕೆಯೂ ಆರೋಗ್ಯ ಸಚಿವರಿಂದ ಹೊಮ್ಮಿದೆ.

ಇಲ್ಲಿ ಯಾರದು ಸರಿ, ಯಾರದು ತಪು್ಪ ಎಂಬ ಭರತವಾಕ್ಯವನ್ನು ನುಡಿಯುವುದಕ್ಕಿಂತ ಎರಡೂ ಪಕ್ಷಸ್ಥರ ವಾದಗಳನ್ನು ಕೂಲಂಕಷ ಅವಲೋಕಿಸಿ ಮಧ್ಯಮಮಾರ್ಗವನ್ನು ಅನುಸರಿಸಬೇಕಾದ ಅಗತ್ಯ ಹೆಚ್ಚಿದೆ ಎನ್ನಲಡ್ಡಿಯಿಲ್ಲ. ಖಾಸಗಿ ಆಸ್ಪತ್ರೆ/ಚಿಕಿತ್ಸಾಲಯಗಳಲ್ಲಿ ನೀಡಲಾಗುವ ವೈದ್ಯಕೀಯ ಚಿಕಿತ್ಸೆ ಮತ್ತು ಉಪಚಾರಗಳಿಗೆ ಇಂತಿಷ್ಟೇ ಶುಲ್ಕ ವಿಧಿಸಬೇಕೆಂಬ ಹಾಗೂ ಚಿಕಿತ್ಸಾವಧಿಯಲ್ಲಿ ಒಂದೊಮ್ಮೆ ರೋಗಿ ಮೃತನಾದರೆ, ಸಂಬಂಧಿತ ವೈದ್ಯ-ಸಿಬ್ಬಂದಿಯನ್ನು ಶಿಕ್ಷೆಗೆ ಒಳಪಡಿಸಬೇಕೆಂಬ ಷರತ್ತುಗಳು ಖಾಸಗಿ ವೈದ್ಯವಲಯದ ಅಸಮಾಧಾನ-ಆಕ್ಷೇಪಗಳಿಗೆ ಕಾರಣವಾಗಿವೆ.

ಆಯಾ ಖಾಸಗಿ ಆಸ್ಪತ್ರೆಯಲ್ಲಿ ಲಭ್ಯವಿರುವ ಚಿಕಿತ್ಸೆಗಳು, ತಜ್ಞ ವೈದ್ಯರು, ಉನ್ನತ ತಂತ್ರಜ್ಞಾನ ಮತ್ತು ಪೂರಕ ಸೌಲಭ್ಯಗಳನ್ನು ಅನುಸರಿಸಿ ಶುಲ್ಕವನ್ನು ವಿಧಿಸಲಾಗುವುದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾರ್ವತ್ರಿಕವಾಗಿ ನಿಗದಿಪಡಿಸಲಾಗುವಂತೆ ವೆಚ್ಚನಿಗದಿ ಕಷ್ಟಸಾಧ್ಯ ಎಂಬುದು ಖಾಸಗಿಯವರ ವಾದ. ಜತೆಗೆ, ರೋಗಿಯ ಪ್ರಾಣ ಕಾಪಾಡುವುದೇ ವೈದ್ಯರ ವೃತ್ತಿಧರ್ಮವಾಗಿದ್ದರೂ ಮತ್ತು ಅದಕ್ಕೆ ವೈದ್ಯರು ಬದ್ಧವಾಗಿದ್ದರೂ, ಕೈಮೀರಿದ ಪರಿಸ್ಥಿತಿಯಲ್ಲಿ ರೋಗಿಯ ಪ್ರಾಣಕ್ಕೆ ಸಂಚಕಾರ ಒದಗಿದಾಗ ಅದಕ್ಕೆ ತಮ್ಮನ್ನು ತಪ್ಪಿತಸ್ಥರನ್ನಾಗಿಸಲಾಗದು ಎಂಬುದು ಅವರ ಸಮರ್ಥನೆ. ಈ ವಾದಗಳಲ್ಲಿ ಒಂದಷ್ಟು ತಥ್ಯವಿದೆ. ಖಾಸಗಿ ಆಸ್ಪತ್ರೆಗೆ ದಾಖಲಾದ ರೋಗಿಯು, ಒಂದೊಮ್ಮೆ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದಲ್ಲಿ, ಚಿಕಿತ್ಸೆ/ನಿಗಾವಣೆಯಲ್ಲಿನ ಬೇಜವಾಬ್ದಾರಿಯ ಕಾರಣ ಮುಂದುಮಾಡಿ ವೈದ್ಯವಲಯವನ್ನು ಶಿಕ್ಷಿಸುವುದಕ್ಕೆ ಮುಂದಾಗುವುದರಿಂದ, ಮುಂದೊಮ್ಮೆ ಅಂಥ ತುರ್ತಚಿಕಿತ್ಸೆಯ ಪ್ರಕರಣಗಳು ಬಂದಾಗ ‘ಸಂಭಾವ್ಯ ಶಿಕ್ಷೆ’ ಅಥವಾ ‘ಅಪಾಯ’ದ ಭಯದಲ್ಲಿ ಖಾಸಗಿ ವೈದ್ಯರು ಅವನ್ನು ದಾಖಲಿಸಿಕೊಳ್ಳಲಾಗದ ಅಸಹಾಯಕತೆ ವ್ಯಕ್ತಪಡಿಸುವ ಸಾಧ್ಯತೆಗಳೂ ಇವೆ.

ಒಟ್ಟಿನಲ್ಲಿ ಇಂಥ ಯಾವುದೇ ಪರಿಸ್ಥಿತಿಯಲ್ಲಿ ಅಂತಿಮವಾಗಿ ಬಲಿಪಶುವಾಗುವುದು ಜನಸಾಮಾನ್ಯರೇ ಎಂಬುದನ್ನು ಮರೆಯಲಾಗದು. ಇನ್ನು ಚಿಕಿತ್ಸಾವೆಚ್ಚದ ವಿಷಯಕ್ಕೆ ಬರುವುದಾದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಕಾಣಬರುವ ‘ನಾಮಮಾತ್ರದ ಶುಲ್ಕ’ವನ್ನು ಖಾಸಗಿಯವರೂ ಸ್ವೀಕರಿಸಲಿ ಎಂದು ನಿರೀಕ್ಷಿಸುವುದು ವಸ್ತುತಃ ಸಾಧ್ಯವಿಲ್ಲವಾದರೂ, ಒಂದು ಮಟ್ಟಿಗಿನ ಉದಾರತೆಯನ್ನು ಅವರಿಂದ ನಿರೀಕ್ಷಿಸುವುದರಲ್ಲಿ ತಪ್ಪೇನಿಲ್ಲ. ಯಾವುದೇ ವೈದ್ಯ ವ್ಯವಸ್ಥೆಯ ಅಂತಿಮಗುರಿ ರೋಗಿಯ ಹಿತಕಾಯುವುದೇ ಆಗಿರುವುದರಿಂದ, ಸ್ವಂತಕ್ಕೆ ನಷ್ಟ ಮಾಡಿಕೊಳ್ಳದ ಹಾಗೂ ರೋಗಿಯ ಆರೋಗ್ಯಕ್ಕೂ ಜೇಬಿಗೂ ಸಂಚಕಾರ ಒದಗುವಂತಾಗದ ಮಧ್ಯಮಮಾರ್ಗವೊಂದನ್ನು ಖಾಸಗಿ ವೈದ್ಯವಲಯ ಕಂಡುಕೊಳ್ಳಬೇಕಿದೆ. ‘ಆರೋಗ್ಯವೇ ಭಾಗ್ಯ’ ಎಂಬುದೊಂದು ಜಾಣನುಡಿ. ಇದು ಸಾಕಾರಗೊಳ್ಳಬೇಕೆಂದರೆ ಮಾನವೀಯತೆಯೇ ನೆಲೆಗಟ್ಟಾಗಬೇಕು. ಆದ್ದರಿಂದ ವೈದ್ಯವಲಯ ಮತ್ತು ಸರ್ಕಾರಗಳೆರಡೂ ಪ್ರತಿಷ್ಠೆಯನ್ನು ಪಕ್ಕಕ್ಕಿಟ್ಟು ತಕ್ಷಣ ರಾಜಿಸೂತ್ರವೊಂದನ್ನು ರೂಪಿಸಬೇಕಾದ ಅನಿವಾರ್ಯತೆ ಎದುರಾಗಿದೆ.

Leave a Reply

Your email address will not be published. Required fields are marked *

Back To Top