Friday, 22nd June 2018  

Vijayavani

ಕೊಲೆ ಆರೋಪಿ ಬಂಧಿಸುವ ವೇಳೆ ಹೈಡ್ರಾಮ - ಖಾಕಿ ಮೇಲೆಯೇ ಹಲ್ಲೆಗೆ ಯತ್ನ - ಹಂತಕನ ಮೇಲೆ ಖಾಕಿ ಫೈರಿಂಗ್‌        ಹಣಕಾಸು ವಿಷಯಕ್ಕೆ ಗಂಡಹೆಂಡತಿ ನಡುವೆ ಫೈಟ್‌ - ಪತ್ನಿ ಮೇಲೆ ಪತಿ ಶೂಟೌಟ್‌ - ನಾಪತ್ತೆಯಾಗಿರೋ ಹಂತಕನಿಗಾಗಿ ಖಾಕಿ ತಲಾಶ್‌        ಅಗರ್ ಬತ್ತಿ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ - ಶಾರ್ಟ್‌ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ಕಾರ್ಖಾನೆ - ಬೆಂಗಳೂರಿನ ಕೆಪಿ ಅಗ್ರಹಾರದಲ್ಲಿ ಘಟನೆ        ಸರ್ಕಾರದ ಅಸ್ತಿತ್ವಕ್ಕೆ ಗಂಡಾಂತರ - ಸಿಎಂ ಕೈಗೆ ಸಿಕ್ಕಿದೆ ಗುಪ್ತಚರ ವರದಿ - ಸರ್ಕಾರ ಉಳಿಸಿಕೊಳ್ಳಲು ಎಚ್‌ಡಿಕೆ ಮಾಸ್ಟರ್‌ ಪ್ಲಾನ್‌        ಹಸಿರ ಸಿರಿ ನಡುವೆ ದುರ್ನಾಥ - ವಾಕ್‌ ಹೋದವರಿಗೆ ವಾಕರಿಕೆ - ಗಬ್ಬು ನಾರುತ್ತಿದೆ ಕಬ್ಬನ್‌ಪಾರ್ಕ್‌        ಜನದಟ್ಟಣೆ ನಿಯಂತ್ರಣಕ್ಕೆ BMRCL ಪರಿಹಾರ - ಮೆಟ್ರೋ ರೈಲಿಗೆ 3 ಬೋಗಿಗಳ ಸೇರ್ಪಡೆ - ಇಂದಿನಿಂದ ನೇರಳೆ ಮಾರ್ಗದಲ್ಲಿ ಓಡಾಟ       
Breaking News

ಪೊಲೀಸ್ ಎನ್​ಕೌಂಟರ್ ತಥ್ಯ-ಮಿಥ್ಯಗಳ ಚಕಮಕಿ

Wednesday, 06.09.2017, 3:01 AM       No Comments

| ಸಜನ್​​ ಪೂವಯ್ಯ

ಕಾನೂನು-ಸುವ್ಯವಸ್ಥೆಗೆ ಮಾರಕವಾಗಿ ಪರಿಣಮಿಸಿ ಸಮಾಜಘಾತುಕ ಕೃತ್ಯಗಳಲ್ಲಿ ಅತಿರೇಕವನ್ನು ಮೆರೆಯುವವರು, ಸಮಾಜಕಂಟಕರಾಗಿ ಪರಿಣಮಿಸುವವರು ಅನಿವಾರ್ಯ ಸಂದರ್ಭಗಳಲ್ಲಿ ಎನ್​ಕೌಂಟರ್​ಗೆ ಬಲಿಯಾಗುವುದು ವಾಡಿಕೆ. ಆದರೆ ಯಾವುದೋ ಹಿತಾಸಕ್ತಿಯ ನೆರವೇರಿಕೆಗೆಂದು ಕರ್ತವ್ಯ ನಿಭಾವಣೆಯ ಹಣೆಪಟ್ಟಿಯಡಿ ನಡೆಯುವ ನಕಲಿ ಎನ್​ಕೌಂಟರ್​ಗೆ ಅಮಾಯಕರು ಬಲಿಯಾಗುವುದು ಅದೆಷ್ಟು ಸರಿ?

 ನಮ್ಮಲ್ಲಿ ಆಗಾಗ ಪೊಲೀಸ್ ಎನ್​ಕೌಂಟರ್​ಗಳ ಕುರಿತು ವಿವಾದಗಳು ಭುಗಿಲೇಳುವುದು ಗೊತ್ತಿರುವಂಥದೇ. ಸಂವಿಧಾನದ 32ನೇ ವಿಧಿಯಡಿಯಲ್ಲಿ ಸವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯೊಂದು ಸಲ್ಲಿಕೆಯಾಗುವುದರೊಂದಿಗೆ ಪೊಲೀಸ್ ಎನ್​ಕೌಂಟರುಗಳ ವಿಧಿಬದ್ಧತೆಯ ಕುರಿತಾದ ನ್ಯಾಯಶಾಸ್ತ್ರ ಅಥವಾ ಕಾನೂನು ಕೌಶಲ ಆರಂಭವಾಯಿತೆನ್ನಬೇಕು; 1982ರಲ್ಲಿ ಜರುಗಿದ ನಕಲಿ ಎನ್​ಕೌಂಟರ್​ನ ಫಲವಾಗಿ ಅನೇಕ ಮುಗ್ಧ ಜನರು ಕೊಲ್ಲಲ್ಪಟ್ಟರು ಎಂಬುದಾಗಿ ಈ ಅರ್ಜಿಯಲ್ಲಿ ಆರೋಪಿಸಲಾಗಿತ್ತು. ಮೆಹುಲಿ ಜಿಲ್ಲೆಯಲ್ಲಿ ಡಕಾಯಿತರಿಂದಾದ 23 ಹರಿಜನರ ಸಾಮೂಹಿಕ ಹತ್ಯೆಯು ಉತ್ತರಪ್ರದೇಶ ಮುಖ್ಯಮಂತ್ರಿಯು ವಿವೇಚನಾರಹಿತ ಮಾನವಬೇಟೆಯನ್ನು ಕೈಗೊಳ್ಳುವುದಕ್ಕೆ ಕಾರಣವಾಗಿ, ಡಕಾಯಿತರು ಎಂದು ಹೇಳಲಾದ ಹಲವಾರು ವ್ಯಕ್ತಿಗಳು ವಿವಿಧ ‘ಎನ್​ಕೌಂಟರ್​ಗಳ‘ ಹಣೆಪಟ್ಟಿಯಡಿ ಪೊಲೀಸರಿಂದ ಕೊಲ್ಲಲ್ಪಟ್ಟರು ಎಂಬುದು ಈ ಆರೋಪದ ಮುಖ್ಯಾಂಶವಾಗಿತ್ತು.

ಈ ವಿಷಯಕ್ಕೆ ಸಂಬಂಧಿಸಿದಂತೆ, ಮುಂದೆ ಉಲ್ಲೇಖಿಸಲ್ಪಟ್ಟಿರುವ ಅಂಶಗಳನ್ನೂ ಒಳಗೊಂಡಂತಿರುವ ವಾದಾಂಶಗಳು ಇಂಥ ದಾವೆಗಳನ್ನು ಬಲವಾಗಿ ವಿರೋಧಿಸುತ್ತವೆ ಎಂಬುದು ಕಾನೂನಿನ ಸೂಚ್ಯಾರ್ಥ; ಅಂದರೆ, 1) ಎನ್​ಕೌಂಟರ್​ಗಳ ಸಾಚಾತನಕ್ಕೆ ಸಂಬಂಧಿಸಿದ ಪ್ರಶ್ನೆಗಳು, ಗೋಜಲಾದ ವಾಸ್ತವಿಕತೆಯ ವಿಷಯಗಳ ನಿರ್ಣಯವನ್ನು ಒಳಗೊಂಡ ಕಾರಣದಿಂದಾಗಿ, ಇಂಥ ಯಾವುದೇ ಅರ್ಜಿಯನ್ನು ಉನ್ನತ ನ್ಯಾಯಾಲಯವೊಂದರಲ್ಲಿ ಸಮರ್ಥಿಸಲಾಗುವುದಿಲ್ಲ ಮತ್ತು 2) ಇಂಥ ಅರ್ಜಿಗಳು ಸಾಮಾನ್ಯವಾಗಿ ರಾಜಕೀಯ ಸ್ವರೂಪದವು ಅಥವಾ ರಾಜಕೀಯ ಪ್ರೇರಿತವಾಗಿರುವಂಥವು ಆಗಿರುತ್ತವೆ ಎಂಬ ಅಂಶಗಳನ್ನು ಮುಂದುಮಾಡಿಕೊಂಡು ಇಂಥ ದಾವೆಗಳನ್ನು ವಿರೋಧಿಸಲಾಗುತ್ತದೆ ಎಂದರ್ಥ. ಇನ್ನು, ಇಂಥ ಯಾವುದೇ ದೂರಿನ ನಿವಾರಣೆ/ಪರಿಹಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಮಾಗೋಪಾಯಗಳನ್ನು ದಂಡಪ್ರಕ್ರಿಯಾ ಸಂಹಿತೆಯ ಒದಗಿಸಿರುವ ಕಾರಣದಿಂದಾಗಿ, ಇಂಥ ಪ್ರಕರಣಗಳಲ್ಲಿ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುವುದಕ್ಕೆ ಸಾಧ್ಯವಿಲ್ಲ ಎಂಬುದಾಗಿಯೂ ಸರ್ಕಾರ ತಾನು ಸಲ್ಲಿಸಿದ ಮನವಿಗಳಲ್ಲಿ ವಾದಿಸಿತು. ಕೊನೆಯದಾಗಿ, ಇಂಥ ಅರ್ಜಿಗಳನ್ನು ಪರಿಗಣಿಸುವ ಸೂಕ್ತ ಪ್ರಾಧಿಕಾರವು ಸ್ವತಃ ಆಯಾ ರಾಜ್ಯ ಸರ್ಕಾರವೇ ಆಗಿರುತ್ತದೆ ಎಂಬ ವಾದವನ್ನೂ ಈ ಸಂದರ್ಭದಲ್ಲಿ ಮಂಡಿಸಲಾಯಿತು. ‘ಸಾರ್ವಜನಿಕ ಸುವ್ಯವಸ್ಥೆ’ ಎಂಬುದು ಸಂವಿಧಾನಕ್ಕಿರುವ ಅನುಸೂಚಿ 7ರ 2ನೇ ಪಟ್ಟಿಯಡಿಯಲ್ಲಿನ ವಿಷಯವಾಗಿದ್ದು, ಈ ಕಾರಣದಿಂದಾಗಿ ಇಂಥ ಯಾವುದೇ ಪ್ರಶ್ನೆಯು ಕೇಂದ್ರ ಸರ್ಕಾರವನ್ನು ಹೊರತುಪಡಿಸಿದ ರಾಜ್ಯ ಸರ್ಕಾರಗಳ ಅಧಿಕಾರವ್ಯಾಪ್ತಿಗೆ ಬರುವಂಥದ್ದಾಗಿರುತ್ತದೆ ಎಂಬುದು ಎದುರಾಳಿಗಳ ವಾದವಾಗಿತ್ತು.

‘ಚೈತನ್ಯ ಕಲ್​ಬಾಗ್ ವರ್ಸಸ್ ಉತ್ತರಪ್ರದೇಶ ಸರ್ಕಾರ, (1989)’ ಪ್ರಕರಣದಲ್ಲಿ ಸವೋಚ್ಚ ನ್ಯಾಯಾಲಯವು ಸರ್ಕಾರದ ವಾದಗಳನ್ನು ಅನುಮೋದಿಸುವಾಗ, ಒಂದು ಎಚ್ಚರಿಕೆಯ ಮಾತನ್ನೂ ಹೇಳಿತು: ‘ಕಾನೂನು ಮತ್ತು ಸುವ್ಯವಸ್ಥೆಯ ಪರಿಪಾಲಕರೆನಿಸಿಕೊಂಡವರು ಅವರಿಂದ ನಿರೀಕ್ಷಿಸಲಾಗುವ ಶಿಷ್ಟಾಚಾರ ಸಂಹಿತೆಯನ್ನು ವಾಸ್ತವವಾಗಿ ಆಚರಿಸುತ್ತಾರೆಂಬುದನ್ನು ಹಾಗೂ ಅವರು ಅಮಾಯಕ ನಾಗರಿಕರ ಸಂರಕ್ಷಕರಾಗಿ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸುತ್ತಾರೆಂಬುದನ್ನು’ ಖಾತ್ರಿಪಡಿಸಿಕೊಳ್ಳುವುದು ಸಂವಿಧಾನದ ಕಡ್ಡಾಯ ಅವಶ್ಯಕತೆಯಾಗಿದೆ’. ‘99 ತಪ್ಪಿತಸ್ಥರು ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದು, ಆದರೆ ಒಬ್ಬನೇ ಒಬ್ಬ ನಿರಪರಾಧಿ/ಅಮಾಯಕನೂ ಶಿಕ್ಷೆಗೊಳಗಾಗುವಂತಾಗಬಾರರು’ ಎಂಬುದು ರೂಢಿಗತ ನ್ಯಾಯ-ನಿಯಮ. ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದವನ್ನು ಕಾಯ್ದುಕೊಂಡು ಹೋಗಲು ನೀತಿಗೇಡಿಗಳನ್ನು, ತಪ್ಪಿತಸ್ಥರನ್ನು ಶಿಕ್ಷಿಸಬೇಕಿರುವುದು ಅತ್ಯವಶ್ಯವೇ; ಆದರೆ ಅಮಾಯಕರನ್ನು ತಪ್ಪಿತಸ್ಥರೆಂದು ನಿರ್ಣಯಿಸಿದರೆ, ಅದಕ್ಕಿಂತ ಹೆಚ್ಚಾಗಿ ನಿಷ್ಕಾರಣವಾಗಿ ಶಿಕ್ಷೆ ನೀಡಿ ಅವರ ಜೀವನವನ್ನೇ ಕಸಿದುಕೊಳ್ಳುವಂತಾದರೆ, ಸಮಾಜವು ಒಂದಿಡೀ ವ್ಯವಸ್ಥೆಯ ಮೇಲಿನ ಗೌರವವನ್ನೇ ಕಳೆದುಕೊಳ್ಳುವುದು ದಿಟ.

ನಕಲಿ ಎನ್​ಕೌಂಟರ್​ಗಳೆಂದು ಸಮರ್ಥಿಸಲ್ಪಟ್ಟ ನಿದರ್ಶನಗಳನ್ನು ಪ್ರಶ್ನಿಸುವ ಇಂಥ ಹೆಚ್ಚೆಚ್ಚು ಅಹವಾಲುಗಳು ಸಲ್ಲಿಕೆಯಾಗುವುದಕ್ಕೆ ಮೇಲೆ ಉಲ್ಲೇಖಿಸಲಾಗಿರುವ ಅಭಿಪ್ರಾಯವು ಪ್ರೇರಕವಾಗಿ ಪರಿಣಮಿಸಿತೆನ್ನಬೇಕು. ನಿಜ ಹೇಳಬೇಕೆಂದರೆ, ಇಂಥದೊಂದು ಪ್ರಕರಣದಲ್ಲಿ, ಉತ್ತರಪ್ರದೇಶದ ಪಿಲಿಭಿತ್​ನಲ್ಲಿ ನಡೆದ ಪೊಲೀಸ್ ಎನ್​ಕೌಂಟರ್​ನಲ್ಲಿ ಹತ್ತು ಮಂದಿಯನ್ನು ಕೊಂದಿದ್ದರ ವಿಧಿಬದ್ಧತೆಯನ್ನು ದಿನಪತ್ರಿಕೆಯ ಲೇಖನವೊಂದರ ಬಲದ ಮೇಲೆ ಅಹವಾಲುದಾರರು ಪ್ರಶ್ನಿಸಿದ್ದರು. ‘ಆರ್.ಎಸ್. ಸೋಧಿ ವರ್ಸಸ್ ಉತ್ತರಪ್ರದೇಶ ಸರ್ಕಾರ, (1994)’ ಪ್ರಕರಣದಲ್ಲಿ, ಪ್ರಕರಣದ ವಾಸ್ತವಿಕ ಗುಣದೋಷಗಳ ಕುರಿತಾಗಿ ಯಾವುದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಬದಲು ಸವೋಚ್ಚ ನ್ಯಾಯಾಲಯವು, ಕೇಂದ್ರೀಯ ತನಿಖಾ ದಳ (ಸಿಬಿಐ)ದಂಥ ಸ್ವತಂತ್ರ ಸಂಸ್ಥೆಯೊಂದರಿಂದ ಈ ವಿಷಯದಲ್ಲಿ ತನಿಖೆಯಾಗಬೇಕು ಎಂದು ನಿರ್ದೇಶಿಸಿತು; ಸ್ವತಂತ್ರ ಸಂಸ್ಥೆಯೊಂದು ವಿಷಯವನ್ನು ಕೂಲಂಕಷ ಅವಲೋಕಿಸುತ್ತಿದ್ದು, ಸಾಂಸ್ಥಿಕ ವಿಶ್ವಾಸಾರ್ಹತೆಯನ್ನು ಅದು ಖಾತ್ರಿಪಡಿಸಲಿದೆ ಎಂಬ ಭರವಸೆಯನ್ನು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರೂ, ಅದರಲ್ಲೂ ನಿರ್ದಿಷ್ಟವಾಗಿ ಮೃತರ ಸಂಬಂಧಿಕರು ತಳೆಯುವಂತಾಗಬೇಕು ಎಂಬುದು ಈ ನಡೆಯ ಉದ್ದೇಶವಾಗಿತ್ತು. ಸದರಿ ಪ್ರಕರಣದ ತನಿಖೆಯನ್ನು ಸ್ಥಳೀಯ ಪೊಲೀಸರು ಅದೆಷ್ಟೇ ನಿಷ್ಠೆಯಿಂದ ನಿರ್ವಹಿಸಿದರೂ, ಅವರ ವಿರುದ್ಧವೂ ನಿರ್ದಿಷ್ಟ ಆರೋಪಗಳು ಹರಳುಗಟ್ಟಿರುತ್ತವೆಯಾದ್ದವರಿಂದ ಕಾರ್ಯದಲ್ಲಿ ವಿಶ್ವಾಸಾರ್ಹತೆಯ ಕೊರತೆಯಿರುತ್ತದೆ ಎಂಬ ಗ್ರಹಿಕೆಯಿಂದಾಗಿ ನ್ಯಾಯಾಲಯದಿಂದ ಇಂಥದೊಂದು ನಿರ್ದೇಶನ ಹೊಮ್ಮಿತು ಎನ್ನಬೇಕು.

ಸರ್ಕಾರದ ಸುರಕ್ಷತೆ ಮುಖ್ಯ ಎಂಬುದೇನೋ ಸರಿ, ಆದರೆ ಅದರಷ್ಟೇ ಮುಖ್ಯವಾಗಿರುವುದು ಜನರ ಸುರಕ್ಷತೆ. ಅದರಲ್ಲೂ ನಿರ್ದಿಷ್ಟವಾಗಿ ಏನೂ ತಪ್ಪೆಸಗದ ವ್ಯಕ್ತಿಗಳು, ಸರ್ಕಾರದ ಸಂರಕ್ಷಣೆಯ ಹೆಸರಿನಲ್ಲಿ ಅಕ್ರಮವಾಗಿ ಮತ್ತು ಕಾನೂನುಬಾಹಿರವಾಗಿ ಶಿಕ್ಷೆಗೊಳಗಾಗದಂತೆ ಸಂರಕ್ಷಿಸಲ್ಪಡಬೇಕು. ಅದೇನೇ ಇರಲಿ, ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವೆ ಒಂದು ಮಟ್ಟಿಗಿನ ವಿಶ್ವಾಸ ಅಸ್ತಿತ್ವದಲ್ಲಿದ್ದ ಕಾಲಾವಧಿ ಇದಾಗಿತ್ತು ಎಂಬುದನ್ನಿಲ್ಲಿ ಉಲ್ಲೇಖಿಸುವುದು ಸೂಕ್ತವಾದೀತು. ಆದ್ದರಿಂದ, ಪ್ರತಿಕೂಲವಾಗಿ ಪರಿಣಮಿಸಬಹುದಾದ ರೀತಿಯಲ್ಲಿ ದಾವೆಯನ್ನು ಬೆಳೆಸುವುದಕ್ಕೆ ಬದಲಾಗಿ, ಆಯಾ ರಾಜ್ಯ ಸರ್ಕಾರಗಳು ಮತ್ತು ಪೊಲೀಸ್ ಅಧಿಕಾರಿಗಳು ತಮಗಂಟಿದ ಕಳಂಕವನ್ನು ತೊಡೆದುಕೊಳ್ಳುವುದಕ್ಕೆ ಅನುವು ಮಾಡಿಕೊಡುವಂಥ ಮತ್ತೊಂದು ಅವಕಾಶ ನೀಡುವುದರೆಡೆಗೆ ನ್ಯಾಯಾಂಗ ಹೆಚ್ಚು ಒಲವು ತೋರಿತು. ಇದಕ್ಕೆ ಆಧಾರವಾಗಿ ಪರಿಣಮಿಸಿದ್ದು ಸರ್ಕಾರ-ಅಧಿಕಾರಿಗಳಿಂದ ಮಂಡಿಸಲ್ಪಟ್ಟ ವಾದಗಳೇ ಎಂಬುದಿಲ್ಲಿ ಗಮನಾರ್ಹ.

ನಾಗರಿಕನೊಬ್ಬನಿಗೆ ಅನ್ವಯವಾಗುವ ನಿಯಮ/ಕಾನೂನೇ ಸರ್ಕಾರಕ್ಕೂ ಸಮಾನವಾಗಿ ಅನ್ವಯವಾಗುತ್ತದೆ ಎಂಬುದು ಸುಸ್ಥಾಪಿತ ಸತ್ಯ. ಇದನ್ನು ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ನಾಗರಿಕನೊಬ್ಬ ಎಸಗಿದ ಕೃತ್ಯವೊಂದು ಅಪರಾಧ ಎನಿಸಿಕೊಳ್ಳುವುದು ಹೌದಾದಲ್ಲಿ, ಸರ್ಕಾರದ ವ್ಯವಸ್ಥೆಯೊಂದು ಅಂಥದೇ ಕೃತ್ಯವನ್ನು ಎಸಗಿದಲ್ಲಿ, ಅಂಥ ಅಪರಾಧವನ್ನು ಎಸಗಿದ್ದಕ್ಕಾಗಿ ಸರ್ಕಾರವು ಕೂಡ ಬಾಧ್ಯಸ್ತನಾಗಬೇಕಾಗುತ್ತದೆ. ಆದ್ದರಿಂದ, ಯಾರಾದರೊಬ್ಬರನ್ನು ಉದ್ದೇಶಪೂರ್ವಕವಾಗಿ ಕೊಲ್ಲುವುದು ಭಾರತೀಯ ದಂಡ ಸಂಹಿತೆಯಡಿ ಒಂದು ಅಪರಾಧವಾಗಿ ಪರಿಗಣಿತವಾಗಿದ್ದರೆ, ಆಗ ಅದೇ ಮಾನದಂಡವು ಪೊಲೀಸರಿಗೂ ಅನ್ವಯವಾಗುತ್ತದೆ. ‘ಕರ್ತವ್ಯ ನಿರ್ವಹಣೆ’ ಎಂಬ ನೆಪ ಅಥವಾ ಸೋಗಿನಡಿಯಲ್ಲಿ ಪೊಲೀಸ್ ಸಿಬ್ಬಂದಿಯೋರ್ವ ತನ್ನ ಸ್ಥಾನಮಾನವನ್ನು ದುರುಪಯೋಗಪಡಿಸಿಕೊಳ್ಳಲಾಗದು; ಅಷ್ಟೇಕೆ, ಉದ್ದೇಶಿತರ ಪ್ರಾಣಹರಣ ಅವಶ್ಯವಾಗಿದೆ ಮತ್ತು ಸಮರ್ಥನೀಯವಾಗಿದೆ ಎಂಬ ಪೊಲೀಸ್ ವ್ಯವಸ್ಥೆಯ ಅಭಿಪ್ರಾಯವನ್ನಾಧರಿಸಿ ಅಮಾಯಕ ಜನರ ಪ್ರಾಣವನ್ನು ಕಿತ್ತುಕೊಳ್ಳುವಂಥ ಕಾನೂನುಬಾಹಿರತೆ ಅಥವಾ ಸಂವಿಧಾನಬಾಹಿರತೆಯನ್ನು ಸಮರ್ಥಿಸಲಾಗದು. ಹಿಂದು-ಮುಂದು ಯೋಚಿಸದೆ ಇಂಥ ಕಾರ್ಯದಲ್ಲಿ ತೊಡಗಿಸಿಕೊಂಡು, ಅಪರಾಧಿಗಳನ್ನು ನಿರ್ನಾಮಗೊಳಿಸಿರುವ ಹಾಗೂ ಪ್ರತಿಯಾಗಿ ಸದರಿ ಘಟನೆಯನ್ನು ಎನ್​ಕೌಂಟರ್ ಎಂಬುದಾಗಿ ಬಿಂಬಿಸಿರುವ ಪೊಲೀಸ್ ಸಿಬ್ಬಂದಿಗೆ ಸುಪ್ರೀಂಕೋರ್ಟು ಮತ್ತೆಮತ್ತೆ ಛೀಮಾರಿ ಹಾಕುತ್ತಲೇ ಬಂದಿದೆ.

ಈ ಚರ್ಚಾವಿಷಯವನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಿದರೂ, ಅತೀವ ಭಯಹುಟ್ಟಿಸುವ ಅಪರಾಧಿ ಎಂಬ ಒಂದೇ ಕಾರಣಕ್ಕಾಗಿ ಆಪಾದಿತನೊಬ್ಬನನ್ನು ಪೊಲೀಸರು ಕೊಲ್ಲುವುದನ್ನು ಎಂದಿಗೂ ‘ಕರ್ತವ್ಯ’ ಎನ್ನಲಾಗದು. ನ್ಯಾಯಾಂಗವನ್ನು ಅವಲಂಬಿಸಿರುವ ವಿಷಯವಾದ ದಂಡಾರ್ಹತೆಯ ನಿರ್ಣಯ ಮತ್ತು ದಂಡನೆ/ಶಿಕ್ಷೆಯ ಘೋಷಿಸುವಿಕೆಯು, ಕಾನೂನನ್ನು ಕೈಗೆ ತೆಗೆದುಕೊಳ್ಳದಿರುವಂತೆ ಪೊಲೀಸ್ ಅಧಿಕಾರಿಗಳ ಮೇಲೆ ವಿಧಿಸಲಾಗುವ ಒಂದು ತಡೆಯಾಜ್ಞೆಯಾಗಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಇಂಥ ಯಾವುದೇ ಕೊಲ್ಲುವಿಕೆಗೆ ಅತ್ಯವಶ್ಯವಾಗಿ ಅಸಮ್ಮತಿಸಬೇಕಾಗುತ್ತದೆ. ಅದೇ ವೇಳೆಗೆ, ಮೂಲಭೂತ ಕರ್ತವ್ಯ ನಿರ್ವಹಣೆಯಲ್ಲಿ ತೊಡಗಿರುವ ಪೊಲೀಸ್ ಸಿಬ್ಬಂದಿಯ ಮೇಲೆ ದಾಳಿಗಳಾಗಿ ಕೊಲ್ಲಲ್ಪಟ್ಟಿದ್ದಾರೆ ಎಂಬುದು ಕೂಡ ಒಂದು ಬಲವಾದ ಮತ್ತು ನ್ಯಾಯಸಮ್ಮತವಾದ ಕಳವಳವಾಗಿದೆ ಎಂಬುದನ್ನಿಲ್ಲಿ ಮರೆಯುವಂತಿಲ್ಲ. ಈ ಕಾರಣದಿಂದಾಗಿಯೇ, ಇಂಥ ಯಾವುದೇ ಪೊಲೀಸ್ ಸಿಬ್ಬಂದಿಯ ಮೇಲೆ ಕಾನೂನುಕ್ರಮ ಜರುಗಿಸುವುದಕ್ಕೂ ಮೊದಲು ಸಂಬಂಧಿತ ಪ್ರಾಧಿಕಾರದಿಂದ/ಅಧಿಕಾರಿಯಿಂದ ಇಂಥ ಕ್ರಮಕ್ಕೆ ಅಧಿಕೃತ ಅನುಮೋದನೆ ಪಡೆಯಬೇಕೆಂಬುದು ಈ ನಿಟ್ಟಿನಲ್ಲಿನ ಒಂದು ಪೂರ್ವಭಾವಿ ಷರತ್ತಾಗಿದೆ.

ಈ ಚರ್ಚಾವಿಷಯಕ್ಕೆ ಸಂಬಂಧಿಸಿದ ಮತ್ತಷ್ಟು ಮಾಹಿತಿಗಳನ್ನು ಮುಂದಿನ ಕಂತಿನಲ್ಲಿ ತಿಳಿದುಕೊಳ್ಳೋಣ.

(ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)

Leave a Reply

Your email address will not be published. Required fields are marked *

Back To Top