Tuesday, 16th January 2018  

Vijayavani

ಮತ್ತೊಂದು ಟ್ವೀಟ್‌ ಮಾಡಿ ಕೆಣಕಿದ ಪಾಲ್ಯೇಕರ್ - ಕಣಕುಂಬಿ ಕಾಮಗಾರಿ ಪರಿಶೀಲನೆಗೆ ನಾಲ್ವರ ತಂಡ ರಚನೆ - ಗೋವಾ ಸಚಿವನ ವಿರುದ್ಧ ಸಿಎಂ ಆಕ್ರೋಶ        ಪರಮೇಶ್ವರ್‌ಗೂ ಕಂಟಕವಾಯ್ತು ಸದಾಶಿವ ಆಯೋಗ - ವರದಿ ವಿರೋಧಿಸಿದ್ದಕ್ಕೆ ಸ್ವಕ್ಷೇತ್ರದಲ್ಲೇ ಆಕ್ರೋಶ - ಮತ ಹಾಕದಿರಲು ಮಾದಿಗ ಮುಖಂಡರ ನಿರ್ಧಾರ        ಬೆಂಗಳೂರಿನಲ್ಲಿ ಹೊಸ ವರ್ಷಕ್ಕೆ ಮತ್ತೆ ಕೀಚಕ ಕೃತ್ಯ - ಇಂದಿರಾನಗರ ಪೊಲೀಸರಿಂದ ಇಬ್ಬರು ಆರೋಪಿಗಳ ಸೆರೆ - ಗೃಹ ಸಚಿವರ ಬೇಜವಾಬ್ದಾರಿ ಹೇಳಿಕೆಗೆ ಆಕ್ರೋಶ        ಕೊನೆಗೂ ಮೌನ ಮುರಿದ ಸುಪ್ರೀಂಕೋರ್ಟ್‌ ಸಿಜೆ - ಬಂಡಾಯ ನ್ಯಾಯಮೂರ್ತಿಗಳ ಜತೆ ದೀಪಕ್‌ ಮಿಶ್ರ ಚರ್ಚೆ - 15 ನಿಮಿಷಗಳ ಕಾಲ ಸಂಧಾನ ಮಾತುಕತೆ        ಚೆಂಡು ನೆಲಕ್ಕೆ ಎಸೆದ ವಿರಾಟ್‌ಗೆ ಐಸಿಸಿ ತರಾಟೆ - ಟೆಸ್ಟ್‌ ಕ್ರಿಕೆಟ್‌ನಲ್ಲಿ ಸಿಟ್ಟಾದ ಕೊಹ್ಲಿಗೆ ದಂಡ - ಪಂದ್ಯದ 25 ಪರ್ಸೆಂಟ್‌ ಸಂಭಾವನೆ ಕಡಿತ       
Breaking News :

ಪುರುಷಪ್ರಧಾನ ವ್ಯವಸ್ಥೆಯ ವಿರುದ್ಧದ ಪ್ರತಿಭಟನೆಯ ದನಿ

Sunday, 01.10.2017, 3:04 AM       No Comments

ಎಲ್ಲೂ ನೆಲೆ ನಿಲ್ಲದೆ ಅಲೆಮಾರಿಯಂತಿದ್ದ ಮಿಲೆಟ್ ‘ಸಿವಿಲ್ ರೈಟ್ಸ್ ಮೂವ್​ವೆುಂಟ್’ನಲ್ಲಿ ಪಾಲ್ಗೊಂಡು ವ್ಯವಸ್ಥೆಯ ವಿರುದ್ಧದ ಪ್ರತಿಭಟನೆಯಲ್ಲಿ ಕ್ರಿಯಾಶೀಲಳಾಗಿದ್ದಳು. ‘ನ್ಯಾಷನಲ್ ಆರ್ಗನೈಸೇಷನ್ ಫಾರ್ ವುಮೆನ್’, ‘ನ್ಯೂಯಾರ್ಕ್ ರ್ಯಾಡಿಕಲ್ ವುಮೆನ್’ ಮೊದಲಾದ ಸಂಘಟನೆಗಳಲ್ಲಿ ಸಕ್ರಿಯವಾಗಿದ್ದ ಮಿಲೆಟ್ ಸ್ತ್ರೀವಾದಿ ಚಿಂತನೆಯನ್ನು ಒಂದು ಪ್ರಬಲ ಚಳವಳಿಯಾಗಿ ರೂಪಿಸಿದವರಲ್ಲಿ ಮುಖ್ಯಳು.

 ನಾವು ಓದಿದ ಪುಸ್ತಕಗಳಲ್ಲಿ ಕೆಲವು ನಮ್ಮ ಮನಸ್ಸಿನಲ್ಲಿ ಉಳಿದುಬಿಡುತ್ತವೆ. ಮತ್ತೆ ಮತ್ತೆ ಚಿಂತಿಸಲು ಅವಕಾಶ ಕಲ್ಪಿಸುತ್ತವೆ. ಹಲವು ಪುಸ್ತಕಗಳು ಹಾಗೇ ಮರೆಯಾಗಿಬಿಡುತ್ತವೆ. ಕೆಲವು ಸದ್ಯದಲ್ಲಿ ಸಲ್ಲುತ್ತವೆ. ಮತ್ತೆ ಕೆಲವು ಶಾಶ್ವತವಾಗಿ ನಮ್ಮೊಡನೆ ನಿಲ್ಲುತ್ತವೆ. ನನ್ನನ್ನು ಈಗಲೂ ಕಾಡುವ ಪುಸ್ತಕಗಳಲ್ಲೊಂದು ಇತ್ತೀಚೆಗೆ ನಿಧನಳಾದ ಕೇಟ್ ಮಿಲೆಟ್​ಳ ‘ಸೆಕ್ಷುಯಲ್ ಪಾಲಿಟಿಕ್ಸ್’. ಅನೇಕ ಶತಮಾನಗಳಿಂದ ನಡೆದುಬಂದ ಪುರುಷಪ್ರಧಾನ ವ್ಯವಸ್ಥೆಯ ವಿರುದ್ಧದ ಪ್ರತಿಭಟನೆಯ ದನಿಗಳಲ್ಲಿ ಮಿಲೆಟ್​ಳ ದನಿ ಅತ್ಯಂತ ಮುಖ್ಯವಾದದ್ದು. ಇದೇ ಸೆಪ್ಟೆಂಬರ್ 6ರಂದು ಕೇಟ್ ಮಿಲೆಟ್ ತನ್ನ ಎಂಭತ್ತೆರಡನೇ ವಯಸ್ಸಿನಲ್ಲಿ ಪ್ಯಾರಿಸ್​ನಲ್ಲಿ ತೀರಿಕೊಂಡಳು. ಸಿಮೊನ್ ದ ಬುವಾಳ ನಂತರ ಸ್ತ್ರೀವಾದಿ ಚಳವಳಿಯಲ್ಲಿ ಗಾಢ ಪ್ರಭಾವ ಬೀರಿದ ಚಿಂತಕಿ ಕೇಟ್ ಮಿಲೆಟ್.

‘ಮಹಿಳಾ ಪ್ರಜ್ಞೆ’, ‘ತನ್ನತನದ ಸಾಕ್ಷಾತ್ಕಾರ’, ‘ಸಮಗ್ರತೆಗಾಗಿ ಹುಡುಕಾಟ’, ‘ದುಃಖಾಭಿವ್ಯಕ್ತಿ’- ಹೀಗೆ ವಿವಿಧ ಪರಿಕಲ್ಪನೆಗಳ ಮೂಲಕ ಜಗತ್ತಿನ ಬೇರೆ-ಬೇರೆ ಭಾಗಗಳಲ್ಲಿ ಕಾಣಿಸಿಕೊಂಡ ಸ್ತ್ರೀವಾದಿ ಚಳವಳಿಯ ಆರಂಭದ ಹೊಳಹುಗಳನ್ನು 18ನೇ ಶತಮಾನದ ಲೇಡಿ ಮೇರಿ ವರ್ಟ್​ಲಿ ಮಾಂಟೆಗೊ ಹಾಗೂ ಮೇರಿ ವುಲ್​ಸ್ಟನ್ ಕ್ರಾಫ್ಟ್ ಇವರಲ್ಲಿ ಗುರ್ತಿಸುತ್ತಾರೆ. ಸಮಾನ ಶಿಕ್ಷಣಕ್ಕಾಗಿ ಆಗ್ರಹಿಸುವ ವುಲ್​ಸ್ಟನ್ ‘ಸ್ತ್ರೀಯರ ಹಕ್ಕುಗಳ ಸಮರ್ಥನೆ’ ಎಂಬ ತನ್ನ ಲೇಖನದಲ್ಲಿ ಪುರುಷನ ಆಧಾರವನ್ನು ಸದಾ ಬಯಸುವ ಪರಿಚಿತ ಸ್ತ್ರೀ ಮಾದರಿಯನ್ನು ತಿರಸ್ಕರಿಸುತ್ತಾಳೆ. ಜನಪ್ರಿಯ ಕಾದಂಬರಿಗಳಲ್ಲಿನ ಭಾವುಕ ಸ್ತ್ರೀ ಪಾತ್ರಗಳನ್ನು ಆಕೆ ಕಟುವಾಗಿ ಟೀಕಿಸುತ್ತಾಳೆ.

ಕಳೆದ ಶತಮಾನದಲ್ಲಿ ವರ್ಜೀನಿಯಾ ವುಲ್​ (1882-1941) ಸ್ತ್ರೀವಾದಿ ಚಿಂತನೆಯನ್ನು ಪರಿಣಾಮಕಾರಿಯಾಗಿ ಬೆಳೆಸಿದ ಮಹತ್ವದ ಲೇಖಕಿ. 1929ರಲ್ಲಿ ಪ್ರಕಟವಾದ ಅವಳ ‘ತನ್ನದೇ ಆದ ಸ್ವತಂತ್ರ ಕೊಠಡಿ’ ಎಂಬ ಲೇಖನ ಮುಂದೆ ಅನೇಕ ಬಗೆಯ ಚರ್ಚೆಗಳಿಗೆ ಅವಕಾಶ ಮಾಡಿಕೊಟ್ಟಿತು. ‘ಕಾಲ್ಪನಿಕವಾಗಿ ಮಹಿಳೆಗೆ ಅತ್ಯಂತ ಮಹತ್ವದ ಸ್ಥಾನವಿದೆ. ಆದರೆ ವಾಸ್ತವದಲ್ಲಿ ಅವಳು ಸಂಪೂರ್ಣವಾಗಿ ಕಡೆಗಣಿಸಲ್ಪಟ್ಟಿದ್ದಾಳೆ. ಕಾವ್ಯದಲ್ಲಿ ಮೊದಲಿನಿಂದ ಕಡೆವರೆಗೂ ಅವಳೇ ವ್ಯಾಪಿಸಿರುತ್ತಾಳೆ. ಆದರೆ ಚರಿತ್ರೆಯಿಂದ ಮಾತ್ರ ಅವಳು ಗೈರುಹಾಜರಾಗಿದ್ದಾಳೆ. ಕಾಲ್ಪನಿಕ ಬರಹಗಳಲ್ಲಿ ಆಕೆ ವಿಜೃಂಭಿಸಿದರೂ ವಾಸ್ತವದಲ್ಲಿ ಅವಳು ತನ್ನ ಗಂಡನ ಗುಲಾಮಳಾಗಿ ಆತನ ‘ಆಸ್ತಿ’ಯಾಗಿದ್ದಾಳೆ’ ಎಂದು ಸ್ತ್ರೀಯ ದಾರುಣ ಚಿತ್ರವನ್ನು ವುಲ್​ ಪರಿಣಾಮಕಾರಿಯಾಗಿ ವಿವರಿಸುತ್ತಾಳೆ. ಯಾವುದೇ ಸ್ತ್ರೀ ಯಶಸ್ಸು ಪಡೆಯಬೇಕಾದರೆ ಅವಳಿಗೆ ‘ತನ್ನದೇ ಆದ ಕೊಠಡಿ’ ಇರಬೇಕೆಂದು ರೂಪಕದ ಭಾಷೆಯಲ್ಲಿ ಹೇಳುವ ಅವಳ ಚಿಂತನೆ ಹೆಣ್ಣು ಅಧೀನ ಮನಸ್ಥಿತಿಯಿಂದ ಹೊರಬರಬೇಕಾದ ಅಗತ್ಯವನ್ನು ಪ್ರತಿಪಾದಿಸುತ್ತದೆ.

1949ರಲ್ಲಿ ಫ್ರೆಂಚ್ ಭಾಷೆಯಲ್ಲಿ ಪ್ರಕಟವಾಗಿ 1953ರಲ್ಲಿ ಇಂಗ್ಲಿಷಿಗೆ ಅನುವಾದವಾದ ಸಿಮೋನ್ ದ ಬುವಾ ಳ ‘ಸೆಕೆಂಡ್ ಸೆಕ್ಸ್’ ಸ್ತ್ರೀವಾದಿ ಚಿಂತನೆಯಲ್ಲಿ ಹೊಸ ಅಲೆ ಉಂಟುಮಾಡಿದ ಕೃತಿ. ಇದನ್ನು 2011ರಲ್ಲಿ ಎಚ್ ಎಸ್ ಶ್ರೀಮತಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಆಕೆಯ ಪ್ರಕಾರ ‘ಹೆಣ್ಣು’ ಮೂಲತಃ ರೂಪಿಸಲ್ಪಟ್ಟವಳು. ನಿರ್ದಿಷ್ಟ ಸಾಮಾಜಿಕ ಪ್ರಕ್ರಿಯೆಗಳಿಂದ ಹೆಣ್ಣು ‘ಆಗುತ್ತಾಳೆ’ಯೇ ಹೊರತು ಅವಳು ‘ಹೆಣ್ಣಾಗಿಯೇ’ ಹುಟ್ಟುವುದಿಲ್ಲ. ಜೈವಿಕವಾಗಿ ಅವಳು ಪುರುಷನಿಗಿಂತ ಭಿನ್ನ ನಿಜ. ಆದರೆ ಸಮಾಜ ಅವಳನ್ನು ‘ಹೆಣ್ಣಾಗಿ’ ರೂಪಿಸುತ್ತದೆ. ನಿರ್ದಿಷ್ಟ ಗುಣ ಲಕ್ಷಣಗಳನ್ನು ಆರೋಪಿಸಿ ಅವಳಿಗೆ ‘ಸ್ತ್ರೀತ್ವ’ವನ್ನು ಕೊಡಲಾಗುತ್ತದೆ. ಪುರುಷಪ್ರಧಾನ ಸಮಾಜ ಅವಳನ್ನು ಸ್ವತಂತ್ರ ವ್ಯಕ್ತಿಯನ್ನಾಗಿಯೇ ಕಂಡಿಲ್ಲ. ಗಂಡಿಗೆ ಪೂರಕವಾಗಿ ತಾಯಿ, ಹೆಂಡತಿ, ಮಗಳು, ವೇಶ್ಯೆ ಇತ್ಯಾದಿ ಪಾತ್ರಗಳಲ್ಲಿ ಅವಳನ್ನು ಗುರ್ತಿಸಿದೆಯೇ ಹೊರತು ಅವಳಿಗೂ ತನ್ನದೇ ಆದ ವ್ಯಕ್ತಿತ್ವವಿದೆ ಎಂಬಂತೆ ಯಾವ ದೇಶ ಕಾಲದಲ್ಲೂ ಚಿಂತಿಸಿದಂತಿಲ್ಲ. ಅವಳನ್ನು ಪರಾಧೀನ ಸ್ಥಿತಿಯಲ್ಲಿಯೇ ಬೆಳೆಸುವಂತೆ ಪುರುಷಪ್ರಧಾನ ಸಾಮಾಜಿಕ ರಚನೆಯಿದೆ. ಸಿಮೋನ್​ಳ ‘ಅನ್ಯತೆ’ಯ ಪರಿಕಲ್ಪನೆ ಇದನ್ನು ಪರಿಣಾಮಕಾರಿಯಾಗಿ ವಿವರಿಸುತ್ತದೆ. ಮಾನವ ಜಾತಿಯೆಂದರೆ ಪುರುಷ. ತನ್ನನ್ನು ಮಾನವ ಜಾತಿಯ ಪ್ರತಿನಿಧಿಯೆಂದು ಭಾವಿಸುವ ಪುರುಷ ಸ್ತ್ರೀಯನ್ನು ‘ಪುರುಷನಲ್ಲದವಳು’ ಎಂದು ವ್ಯಾಖ್ಯಾನಿಸುತ್ತಾನೆಯೇ ಹೊರತು ಅವಳಿಗೂ ಸ್ವತಂತ್ರ ಅಸ್ತಿತ್ವವಿದೆ ಎಂದು ಭಾವಿಸುವುದೇ ಇಲ್ಲ. ಪುರುಷ ಸ್ವಯಂಪೂರ್ಣ, ಮಹಿಳೆ ಅವನಿಗೆ ಅನುಬಂಧವಿದ್ದಂತೆ ಎಂಬ ನೆಲೆಯಲ್ಲಿ ಸ್ತ್ರೀಯನ್ನು ಗ್ರಹಿಸಲಾಗಿದೆ ಎಂದು ಬುವಾ ವಾದಿಸುತ್ತಾಳೆ. ಹೀಗಾಗಿಯೇ ಸ್ತ್ರೀಗೆ ಅವಳದೇ ಆದ ಅಸ್ತಿತ್ವವಿಲ್ಲ, ಚರಿತ್ರೆಯಿಲ್ಲ, ಅವಳು ಪುರುಷನ ನೆರಳಾಗಿ ಜೀವಿಸುತ್ತ ಪರತಂತ್ರಳಾಗಿಯೇ ಬದುಕುತ್ತ ಬಂದಿದ್ದಾಳೆ ಎಂದು ಪುರಾಣ-ಇತಿಹಾಸಗಳನ್ನು ವಿಶ್ಲೇಷಿಸಿ ಆಕೆ ಪ್ರತಿಪಾದಿಸುತ್ತಾಳೆ. ಬುವಾಳ ಪ್ರಕಾರ ಎಲ್ಲಿಯವರೆಗೆ ಪುರುಷ ನಿರ್ವಿುತ ವೈಚಾರಿಕ ಆಕೃತಿಗಳನ್ನು ಸ್ತ್ರೀ ನಿರಾಕರಿಸುವುದಿಲ್ಲವೋ ಅಲ್ಲಿಯವರೆಗೆ ಅವಳಿಗೆ ಸ್ವತಂತ್ರ ಬದುಕು ಸಾಧ್ಯವಿಲ್ಲ.

ಸಿಮೋನ್ ದ ಬುವಾಳ ನಂತರ ತನ್ನ ಕ್ರಾಂತಿಕಾರಕ ವಿಚಾರಗಳಿಂದ ಸ್ತ್ರೀವಾದವನ್ನು ಪರಿಣಾಮಕಾರಿಯಾಗಿ ಪ್ರತಿಪಾದಿಸಿದವಳೇ ಕೇಟ್ ಮಿಲೆಟ್.

ಕೇಟ್ ಮಿಲೆಟ್ 1934ರ ಸೆಪ್ಟೆಂಬರ್ 14ರಂದು ಮಿನೆಸೋಟದಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದವಳು. ತಂದೆ ಜೇಮ್್ಸ ಆಲ್ಬರ್ಟ್ ಕಂಡರೆ ಅವಳಿಗೆ ಭಯ, ಚಿಕ್ಕಂದಿನಲ್ಲಿ ಆತ ಅವಳನ್ನು ಹೊಡೆಯುತ್ತಿದ್ದನಂತೆ. ಕುಡುಕನಾಗಿದ್ದ ಆತ ಅವಳಿಗೆ ಹದಿನಾಲ್ಕು ವರ್ಷವಿದ್ದಾಗ ಕುಟುಂಬವನ್ನು ಬಿಟ್ಟು ಹೊರನಡೆದ. ಶಿಕ್ಷಕಿಯಾಗಿದ್ದ ತಾಯಿ ಹೆಲೆನ್ ಮಿಲೆಟ್ ಸಂಸಾರದ ಜವಾಬ್ದಾರಿಯನ್ನು ತಾನೇ ಹೊತ್ತು ತನ್ನ ಮೂವರು ಹೆಣ್ಣು ಮಕ್ಕಳನ್ನು ಬೆಳೆಸಿದ್ದನ್ನು ಕೇಟ್ ನೆನಪಿಸಿಕೊಳ್ಳುತ್ತಾಳೆ. ತನ್ನ ತಾಯಿಯ ಕಷ್ಟದ ಬದುಕು ಹಾಗೂ ಹೊಣೆಗಾರಿಕೆಯ ವ್ಯಕ್ತಿತ್ವ ಮಿಲೆಟ್​ಳ ಚಿಂತನೆಯನ್ನು ರೂಪಿಸಿದೆ. ಆಕ್ಸ್​ಫರ್ಡ್ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಆನರ್ಸ್ ಪದವಿಯನ್ನು ಪಡೆದ ಮಿಲೆಟ್ ಮುಂದೆ ಕೊಲಂಬಿಯ ವಿಶ್ವವಿದ್ಯಾಲಯದಲ್ಲಿ ತನ್ನ ಡಾಕ್ಟರೇಟ್ ಪದವಿಗೆ ಸಲ್ಲಿಸಿದ ಪ್ರಬಂಧವೇ ನಂತರ ‘ಸೆಕ್ಷುಯಲ್ ಪಾಲಿಟಿಕ್ಸ್’ ಪುಸ್ತಕವಾಗಿ ಪ್ರಕಟವಾಯಿತು. ಕೆಲಕಾಲ ಶಿಕ್ಷಕಿಯಾಗಿದ್ದ ಆಕೆ ನಂತರ ಚಿತ್ರಕಲೆ ಹಾಗೂ ಶಿಲ್ಪಕಲೆಯನ್ನು ಅಭ್ಯಾಸ ಮಾಡಲು ಕೆಲಸ ಬಿಟ್ಟಳು. ನ್ಯೂಯಾರ್ಕ್​ನಲ್ಲಿದ್ದವಳು ಅದಕ್ಕಾಗಿ ಅಲ್ಲಿಂದ ಜಪಾನ್​ಗೆ ಹೋದಳು. ಕಲಾಶಿಕ್ಷಣದ ನಂತರ ಮತ್ತೆ ನ್ಯೂಯಾರ್ಕ್​ಗೆ ಬಂದು ಸಮೀಪದಲ್ಲಿ ಜಮೀನು ಕೊಂಡು ಕಲಾ ಕಾಲನಿಯೊಂದನ್ನು ಸ್ಥಾಪಿಸಿದಳು. ಆತನ ಗಂಡನೂ ಶಿಲ್ಪಿಯಾಗಿದ್ದ. ಎಲ್ಲೂ ನೆಲೆ ನಿಲ್ಲದೆ ಅಲೆಮಾರಿಯಂತಿದ್ದ ಮಿಲೆಟ್ ‘ಸಿವಿಲ್ ರೈಟ್ಸ್ ಮೂವ್​ವೆುಂಟ್’ನಲ್ಲಿ ಪಾಲ್ಗೊಂಡು ವ್ಯವಸ್ಥೆಯ ವಿರುದ್ಧದ ಪ್ರತಿಭಟನೆಯಲ್ಲಿ ಕ್ರಿಯಾಶೀಲಳಾಗಿದ್ದಳು. ‘ನ್ಯಾಷನಲ್ ಆರ್ಗನೈಸೇಷನ್ ಫಾರ್ ವುಮೆನ್’, ‘ನ್ಯೂಯಾರ್ಕ್ ರ್ಯಾಡಿಕಲ್ ವುಮೆನ್’ ಮೊದಲಾದ ಸಂಘಟನೆಗಳಲ್ಲಿ ಸಕ್ರಿಯವಾಗಿದ್ದ ಮಿಲೆಟ್ ಸ್ತ್ರೀವಾದಿ ಚಿಂತನೆಯನ್ನು ಒಂದು ಪ್ರಬಲ ಚಳವಳಿಯಾಗಿ ರೂಪಿಸಿದವರಲ್ಲಿ ಮುಖ್ಯಳು. ಮುಂದೆ, 1979ರಲ್ಲಿ ಇರಾನ್​ನ ಮೊದಲ ಅಂತಾರಾಷ್ಟ್ರೀಯ ಮಹಿಳಾ ದಿನದಲ್ಲಿ ಪಾಲ್ಗೊಳ್ಳಲು ಅಲ್ಲಿಗೆೆ ಹೋದಾಗ ಅಯಾತೊಲ್ಲಾ ಖೊಮೇನಿ ಆಡಳಿತ ಆಕೆಯನ್ನು ಬಂಧಿಸಿತ್ತು. ಮುಂದೆ ಮಿಲೆಟ್ ‘ಗೋಯಿಂಗ್ ಟು ಇರಾನ್’ ಎಂಬ ತನ್ನ ಪುಸ್ತಕದಲ್ಲಿ ಈ ಅನುಭವವನ್ನು ವಿವರಿಸುತ್ತಾಳೆ. ಆಕೆಯ ಆತ್ಮಚರಿತ್ರೆ ‘ಫ್ಲೈಯಿಂಗ್’ ಹೆಣ್ಣೊಬ್ಬಳು ವೈಯಕ್ತಿಕ ಜಗತ್ತು ಹಾಗೂ ಸಾರ್ವಜನಿಕ ಬದುಕುಗಳ ನಡುವೆ ಎದುರಿಸುವ ಬಿಕ್ಕಟ್ಟು, ಸಂಕಟಗಳನ್ನು ನಮ್ಮ ಸಾಮಾಜಿಕ ರಚನೆಯ ಹಿನ್ನೆಲೆಯಲ್ಲಿ ಪರಿಣಾಮಕಾರಿಯಾಗಿ ನಿರೂಪಿಸುತ್ತದೆ.

ಬುವಾಳ ವಾದವನ್ನು ಸಮರ್ಥವಾಗಿ ಮುಂದುವರಿಸಿದ ಮಿಲೆಟ್ ಬೆಟ್ಟಿ ಫ್ರೀಡನ್ ಳ ‘ಫೆಮಿನೈನ್ ಮಿಸ್ಟಿಕ್’ನಿಂದಲೂ ಪ್ರಭಾವಿತಳಾಗಿದ್ದಂತೆ ತೋರುತ್ತದೆ. ಮಿಲೆಟ್​ಳ ಚಿಂತನೆಯಲ್ಲಿ ಎರಡು ಪ್ರಧಾನ ನೆಲೆಗಳಿವೆ: ಮೊದಲನೆಯದು ‘ಪಿತೃಪ್ರಧಾನ’ ವ್ಯವಸ್ಥೆಯಲ್ಲಿ ಹೆಣ್ಣು ಶೋಷಣೆಗೊಳಗಾಗುವ ಪರಿ. ಮತ್ತೊಂದು ಅಧಿಕಾರ ಕೇಂದ್ರವಾದ ರಾಜಕೀಯದಲ್ಲಿರುವ ಪುರುಷ ಪ್ರಾಧಾನ್ಯತೆ. ಡಿ ಎಚ್ ಲಾರೆನ್ಸ್ , ಹೆನ್ರಿ ಮಿಲ್ಲರ್ ಹಾಗೂ ನಾರ್ಮನ್ ಮೇಲರ್ ಮೊದಲಾದ ಪ್ರಸಿದ್ಧ ಕಾದಂಬರಿಕಾರರ ಕೃತಿಗಳನ್ನು ವಿಶ್ಲೇಷಿಸುತ್ತ ಅವರು ತಮ್ಮ ಕೃತಿಗಳಲ್ಲಿ ಚಿತ್ರಿಸುವ ಸ್ತ್ರೀ-ಪುರುಷ ಸಂಬಂಧಗಳು ಹೇಗೆ ‘ಲೈಂಗಿಕ ರಾಜಕೀಯ’ದಿಂದ ಪ್ರಭಾವಿತವಾಗಿವೆ ಎಂಬುದನ್ನು ಮಿಲೆಟ್ ಉದಾಹರಣೆಗಳೊಂದಿಗೆ ವಿವರಿಸುತ್ತಾಳೆ. ಬುವಾ ವಿವರಿಸಿದ ‘ಲಿಂಗಭೇದ’ ಹಾಗೂ ‘ಲಿಂಗಪ್ರಜ್ಞೆ’ಯನ್ನು ಕೇಟ್ ವಿವರವಾಗಿ ರ್ಚಚಿಸಿ ಅವುಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟಪಡಿಸುತ್ತಾಳೆ. ಲಿಂಗಭೇದವು ಜೈವಿಕವಾಗಿ ನಿರ್ಧಾರಿತವಾದರೆ ಲಿಂಗಪ್ರಜ್ಞೆಯನ್ನು ಶಿಕ್ಷಣ, ಸಂಸ್ಕೃತಿ, ಧರ್ಮ, ರಾಜಕೀಯ, ನಂಬಿಕೆ- ಇತ್ಯಾದಿ ರೂಪಿಸುತ್ತವೆ ಎಂಬುದನ್ನು ನಿರ್ದಿಷ್ಟ ಉದಾಹರಣೆಗಳೊಂದಿಗೆ ವಿವರಿಸುತ್ತಾಳೆ. ಎರಡು ಸಮುದಾಯಗಳ ನಡುವಿನ ಅಸಮಾನ ಅಧಿಕಾರಾಧಿತ ಸಂಬಂಧವೇ ರಾಜಕೀಯ ಎಂಬ ಮಿಲೆಟ್​ಳ ರಾಜಕೀಯದ ಬಗೆಗಿನ ವ್ಯಾಖ್ಯಾನ ಮುಂದೆ ಅನೇಕ ನೆಲೆಗಳಲ್ಲಿ ರ್ಚಚಿಸಲ್ಪಟ್ಟಿತು. ರಾಜಕೀಯವೆಂದರೆ ನಿಯಂತ್ರಣ ಎಂಬ ಹಿನ್ನೆಲೆಯಲ್ಲಿ ಮಿಲೆಟ್ ಸ್ತ್ರೀ-ಪುರುಷ ಸಂಬಂಧವನ್ನು ತನ್ನ ‘ಲೈಂಗಿಕ ರಾಜಕೀಯ’ದಲ್ಲಿ ವಿವರಿಸುತ್ತಾಳೆ. ಸಮೂಹ ಮಾಧ್ಯಮ, ಶಿಕ್ಷಣ, ರಾಜಕೀಯ , ಧರ್ಮ ಈ ಎಲ್ಲ ವಲಯಗಳಲ್ಲೂ ಹೆಣ್ಣು ನಿರ್ವಚನಗೊಳ್ಳುತ್ತಿರುವ ಬಗ್ಗೆಯೂ ಮಿಲೆಟ್ ನಮ್ಮ ಗಮನ ಸೆಳೆಯುತ್ತಾಳೆ.

‘ಜಗತ್ತು ಮಲಗಿತ್ತು, ಮಿಲೆಟ್ ಬಡಿದೆಬ್ಬಿಸಿದಳು’ ಎಂದು ಆಂಡ್ರಿಯಾ ಡ್ವಾರ್ಕಿನ್ ಹೇಳಿದ್ದು ಮಿಲೆಟ್ ಳ ಪ್ರಖರ ಚಿಂತನೆ ವಿಚಾರ ಜಗತ್ತಿನಲ್ಲಿ ಹೇಗೆ ಸಂಚಲನ ಉಂಟು ಮಾಡಿತ್ತು ಎಂಬುದನ್ನು ಸೂಚಿಸುತ್ತದೆ. ಆಲಿಸನ್ ಜಾಗರ್, ಜಮೇನ್ ಗ್ರಿಯರ್, ಶೋವಾಲ್ಟರ್ ಮೊದಲಾದ ಚಿಂತಕರನ್ನೂ ನಾವಿಲ್ಲಿ ನೆನಪಿಸಿಕೊಳ್ಳಬೇಕು.

ಸ್ತ್ರೀಯ ಪರಾಧೀನತೆಗೆ ಆರ್ಥಿಕ, ರಾಜಕೀಯ, ಸಾಮಾಜಿಕ, ಧಾರ್ವಿುಕ ಕಾರಣಗಳಿರುವಂತೆ ಪುರುಷನಿರ್ವಿುತ ಭಾಷೆಯೂ ಕಾರಣ ಎಂಬ ವಾದವೂ ಇದೆ. ಸಂವಹನವನ್ನು ಯಾರು ನಿಯಂತ್ರಿಸುತ್ತಾರೋ ಅವರು ಸತ್ಯದ ಪ್ರತಿಪಾದಕರಾಗಿಬಿಡುವ ಸಾಧ್ಯತೆಯಿರುತ್ತದೆ.

ಕನ್ನಡ ಮನಸ್ಸು ಈ ಎಲ್ಲ ಚಿಂತನೆಗಳಿಗೂ ಸ್ಪಂದಿಸುತ್ತಲೇ ತನ್ನೊಳಗಿನಿಂದಲೇ ವೈಚಾರಿಕ ಆಕೃತಿಗಳನ್ನು ರೂಪಿಸಿಕೊಳ್ಳಲು ಪ್ರಯತ್ನಿಸಿದೆ.

ಜಿ ಎಸ್ ಶಿವರುದ್ರಪ್ಪನವರು ಕನ್ನಡದಲ್ಲಿ ಸ್ತ್ರೀ ಚಿಂತನೆಯ ಎರಡು ಮಾದರಿಗಳನ್ನು ಗುರ್ತಿಸುತ್ತಾರೆ. ಒಂದು ಅಕ್ಕನ ಮಾದರಿ, ಮತ್ತೊಂದು ಸಂಚಿ ಹೊನ್ನಮ್ಮನ ಮಾದರಿ. ಅಕ್ಕನದು ಪುರುಷ ಪ್ರಧಾನ ಸಮಾಜವನ್ನು ಧಿಕ್ಕರಿಸಿ ನಡೆಯುತ್ತಲೇ ಅದಮ್ಯವಾದ ಪ್ರೀತಿಯನ್ನು ತುಂಬಿಕೊಂಡ ಹೆಣ್ಣಿನ ವ್ಯಕ್ತಿತ್ವಕ್ಕೆ ಘನತೆಯನ್ನೂ , ಆತ್ಮಪ್ರತ್ಯಯವನ್ನೂ ತಂದುಕೊಡುವ ರೀತಿ. ‘ಪೆಣ್ಣು ಪೆಣ್ಣೆಂದೇತಕೆ ಬೀಳುಗಳೆವಿರಿ ಕಣ್ಣು ಕಾಣದ ಗಾವಿಲರು’ ಎಂದು ಆಕ್ಷೇಪಿಸುತ್ತಲೇ ಭಾರತೀಯ ಸಾಂಸಾರಿಕ ಗೃಹಿಣಿಯ ಧರ್ಮವನ್ನು ಪ್ರತಿಪಾದಿಸುವ ಹೊನ್ನಮ್ಮನದು ಅನುನಯದ ಮಾರ್ಗ.

ಡಿ ಆರ್ ನಾಗರಾಜ್ ಸ್ತ್ರೀವಾದಿ ಚಿಂತನೆಯ ಎರಡು ಮಾದರಿಗಳನ್ನು ಕಾತ್ಯಾಯಿನಿಯ ಮಾದರಿ ಹಾಗೂ ಗಾರ್ಗಿಯ ಮಾದರಿ ಎಂದು ಗುರ್ತಿಸುತ್ತಾರೆ. ಉಪನಿಷತ್ತಿನಲ್ಲಿ ಬರುವ ಎರಡು ಪಾತ್ರಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಿದ ವೈಚಾರಿಕ ಆಕೃತಿಯಿದು. ಕಾತ್ಯಾಯಿನಿ ಮಾದರಿಯನ್ನು ಅವರು ಗೃಹವಾದಿನಿ ಮಾದರಿ ಎಂದು ಕರೆಯುತ್ತಾರೆ. ಈಕೆ ತಾಯಿ, ಸಖಿ, ಅಕ್ಕ, ತಂಗಿ, ಯಜಮಾನಿ- ಹೀಗೆ ಏನೇ ಆಗಿದ್ದರೂ ತನ್ನ ಪಾತ್ರವನ್ನು ತನ್ಮಯತೆಯಿಂದ ನಿರ್ವಹಿಸುತ್ತಾಳೆ. ಈಕೆಗೆ ವ್ಯವಸ್ಥೆಯ ಬಗ್ಗೆ ಅಂತಹ ಸಿಟ್ಟಿಲ್ಲ. ತನಗೆ ದತ್ತವಾಗಿರುವ ಪಾತ್ರವನ್ನು ಒಪ್ಪಿಕೊಂಡಿರುವಂಥವಳು. ಪ್ರಗತಿಪರ ಸ್ತ್ರೀವಾದಿಗಳಿಗೆ ಈಕೆಯನ್ನು ಕಂಡರೆ ಅಪಾರ ಸಿಟ್ಟು. ಆದರೆ ನಾಗರಾಜ್ ಪ್ರಕಾರ ಗೃಹವಾದಿನಿ ತರ್ಕ ಅತಿಗೆ ಹೋದರೆ ಅಲ್ಲೂ ಪುರುಷಾಧಿಕಾರಕ್ಕೆ ಪೆಟ್ಟು ಬೀಳುತ್ತದೆ. ಎಲ್ಲವನ್ನೂ ತೀವ್ರವಾಗಿ ಅನುಭವಿಸುವ ಇವಳು ಮದುವೆ ಎಂಬ ಸಂಸ್ಥೆಯನ್ನು ಆಳವಾಗಿ ಹಚ್ಚಿಕೊಂಡವಳು, ತಾನು ನಾಶವಾಗುವ ಸ್ಥಿತಿಗೆ ಬಂದರೆ, ಆ ಸಂಸ್ಥೆಯನ್ನೂ ಜತೆಗೇ ಕೊಂಡೊಯ್ಯುತ್ತಾಳೆ ಎಂದು ವ್ಯಾಖ್ಯಾನಿಸುತ್ತಾರೆ. ಇಬ್ಸನ್​ನ ‘ಡಾಲ್ಸ್ ಹೌಸ್’ನಲ್ಲಿ ನಾವು ಕಾಣುವುದು ಈ ಬಗೆಯ ಗೃಹವಾದಿನಿಯನ್ನು. ಮತ್ತೊಂದು ಮಾದರಿ ಗಾರ್ಗಿಯದು. ಇದರ ಪ್ರಖರ ವೈಚಾರಿಕತೆ ತನ್ನನ್ನು ತುಳಿಯುತ್ತಿರುವ, ಅವಮಾನಕ್ಕೀಡು ಮಾಡಿರುವ ಎಲ್ಲ ಅಧಿಕಾರಗಳನ್ನೂ ಉಗ್ರವಾಗಿ ಪ್ರತಿಭಟಿಸುತ್ತದೆ. ತಾನು ಪ್ರಜ್ಞಾವಂತೆ ಎಂಬ ಹೆಮ್ಮೆಯ ನೆಲೆಯಲ್ಲಿಯೇ ಈ ಪ್ರಜ್ಞೆ ಕೆಲಸ ಮಾಡುತ್ತದೆ.

ಮಿಲೆಟ್​ಳ ಸಾವಿನ ಸುದ್ದಿ ಈ ಎಲ್ಲ ಬಗೆಯ ಆಲೋಚನೆಗೆ ಹಾದಿ ಮಾಡಿಕೊಟ್ಟಿತು. ನಮ್ಮ ಸಂದರ್ಭದ ಗೌರಿಯ ಸಾವು ಈ ಸಹಜ ಸಾವಿನ ಸುದ್ದಿಯ ಜೊತೆ ಹೇಗೋ ತಳುಕು ಹಾಕಿಕೊಂಡಿತು.

ನಮ್ಮೆಲ್ಲ ಆಲೋಚನಾ ಕ್ರಮಗಳೂ ಯಾವುದನ್ನೋ ಗುರಿಯಾಗಿಟ್ಟುಕೊಂಡು ಅದಕ್ಕೆ ಪ್ರತಿರೋಧ ಎಂಬಂತೆಯೇ ಸಾಮಾನ್ಯವಾಗಿ ರೂಪುಗೊಳ್ಳುತ್ತವೆ. ಸ್ತ್ರೀವಾದಿ ಚಿಂತನೆಯ ಸ್ವರೂಪವನ್ನು ಗಮನಿಸಿದಾಗಲೂ ಹಾಗೇ ಅನ್ನಿಸುತ್ತದೆ. ಪುರುಷಪ್ರಧಾನ ವ್ಯವಸ್ಥೆಯನ್ನು ಕೇಂದ್ರವಾಗಿಟ್ಟುಕೊಂಡು ಅದನ್ನು ಪ್ರತಿರೋಧಿಸುತ್ತಲೇ ವಾದ ಮಂಡನೆಯಾಗಿದೆ. ಬಂಡಾಯದ ಸಹಜ ಸ್ವರೂಪವಿದು. ಇದು ತಪ್ಪಲ್ಲ. ಬಂಡಾಯದ ಶಕ್ತಿಯಿರುವುದೇ ವ್ಯವಸ್ಥೆಯನ್ನು ಎದುರಿಸುವುದರಲ್ಲಿ. ಆದರೆ ಈ ಪ್ರತಿರೋಧ ತನ್ನ ಸ್ವಾಯತ್ತ ಶಕ್ತಿಯತ್ತ ಚಿಂತಿಸಲು ಆರಂಭಿಸಿದರೆ ನಮ್ಮ ಆಲೋಚನಾ ಕ್ರಮದಲ್ಲಿಯೇ ಹೊಸ ಹೊಳಹುಗಳು ಸಾಧ್ಯ. ಇಲ್ಲವಾದರೆ ತೌಡು ಕುಟ್ಟುತ್ತಲೇ ಇರುತ್ತೇವೆ. ಹಲವೊಮ್ಮೆ ಹೈಮೈಮೆಟಿಕ್ ಆಲೋಚನಾ ಕ್ರಮಕ್ಕಿಂತ ಲೋಮೈಮೆಟಿಕ್ ಚಿಂತನಾಕ್ರಮವೇ ಹೆಚ್ಚು ಶಕ್ತಿಯುಳ್ಳದ್ದಾಗಿರುತ್ತದೆ. ಇದಕ್ಕೆ ರೂಢಿಯ ನಡಾವಳಿಗಳನ್ನು ಲೇವಡಿ ಮಾಡುವ, ಉಲ್ಲಂಘಿಸುವ ಛಾತಿ ಇರುತ್ತದೆ. ನಮ್ಮ ಸಾಹಿತ್ಯದಲ್ಲಿ ಇದಕ್ಕೆ ಅನೇಕ ನಿದರ್ಶನಗಳಿವೆ. ಆ ಜಾಡು ಹಿಡಿದರೆ ಹೊಸ ಹುಟ್ಟು ಸಾಧ್ಯ.

(ಲೇಖಕರು ಖ್ಯಾತ ವಿಮರ್ಶಕರು)

Leave a Reply

Your email address will not be published. Required fields are marked *

Back To Top