Friday, 20th July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

ಪಾಕಿಸ್ತಾನದ ಬರ್ಬರತೆಗೆ ತಕ್ಕ ಉತ್ತರ ನೀಡಬೇಕು

Monday, 17.04.2017, 3:00 AM       No Comments

ನಾನು ಇತ್ತೀಚೆಗಷ್ಟೇ ಮಹಾರಾಷ್ಟ್ರದ ಪ್ರವಾಸ ಕೈಗೊಂಡಿದ್ದೆ. ಮಹಾರಾಷ್ಟ್ರದಲ್ಲಿ ಹನುಮಾನ್ ಜಯಂತಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಆದರೆ ಈ ಬಾರಿ ಅಲ್ಲಿಗೆ ತೆರಳಿದ್ದಾಗ ಹನುಮಾನ್ ಜಯಂತಿ ಆಚರಣೆಯ ಜತೆಜತೆಗೆ ಪಾಕಿಸ್ತಾನದಲ್ಲಿ ಬಂಧಿಯಾಗಿರುವ ಕುಲಭೂಷಣ್ ಜಾಧವ್ ಬಗ್ಗೆ ಚರ್ಚೆಗಳಾಗುತ್ತಿರುವುದನ್ನು, ಜನರು ಮರುಕಪಡುತ್ತಿರುವುದನ್ನು ಗಮನಿಸಿದೆ. ಆದರೆ ಕುಲಭೂಷಣ್ ಅವರು ಮಹಾರಾಷ್ಟ್ರದ ಸತಾರಾದ ನಿವಾಸಿ ಎಂಬ ಕಾರಣಕ್ಕಷ್ಟೇ ಜನರ ಮಧ್ಯೆ ಈ ಚರ್ಚೆ ನಡೆಯುತ್ತಿರಲಿಲ್ಲ. ಪಾಕಿಸ್ತಾನ ಭಾರತದ ವಿರುದ್ಧ ತೋರುತ್ತಿರುವ ಬರ್ಬರತೆ ಮಿತಿಮೀರುತ್ತಿದೆ ಎಂಬ ಕಾರಣಕ್ಕೆ ಹೆಚ್ಚಿನ ಚರ್ಚೆಗಳಾಗುತ್ತಿದ್ದವು. ವಾಸ್ತವದಲ್ಲಿ ಹೇಳುವುದಾದರೆ ಪಾಕಿಸ್ತಾನ ಸೇನಾ ನ್ಯಾಯಾಲಯ ಕುಲಭೂಷಣ್ ಅವರಿಗೆ ಮರಣದಂಡಣೆ ವಿಧಿಸಿ ಭಾರತದ ವಿರುದ್ಧ ಯುದ್ಧವನ್ನೇ ಘೊಷಿಸಿದೆ ಎಂದರೆ ಅತಿಶಯೋಕ್ತಿಯೇನಲ್ಲ.

ಪಾಕಿಸ್ತಾನದ ಇಂತಹ ಕ್ರೂರ ನಡೆ ಹೊಸದೇನು ಅಲ್ಲ. ಭಾರತ ವಿಭಜನೆಯ ಸಮಯದಲ್ಲಿಯೇ ಪಾಕ್​ನಲ್ಲಿ ಕ್ರೂರತೆ ಮತ್ತು ಹಿಂಸೆಯ ಬೀಜ ಬಿತ್ತಲಾಗಿತ್ತು. ಇದೀಗ ಅದು ಚಿಗುರೊಡೆದು ಬೃಹತ್ ಮರವಾಗಿ ವ್ಯಾಪಿಸುತ್ತಿದೆ. ಭಾರತ ಮತ್ತು ಪಾಕಿಸ್ತಾನ ಸ್ವಾತಂತ್ರ್ಯ ಪಡೆದ ಬೆನ್ನಲ್ಲೇ ಅಂದರೆ 1947ರ ಸೆಪ್ಟೆಂಬರ್​ನಲ್ಲೇ ಪಾಕಿಸ್ತಾನ ಆದಿವಾಸಿಗಳ ರೂಪದಲ್ಲಿ ದಾಳಿ ನಡೆಸಿತ್ತು. ಕಛ್ ದಾಳಿ, 1965ರ ಯುದ್ಧ, ಇದರಲ್ಲಿ ನಾವು ಗೆದ್ದರೂ ಹಾಜಿ ಪೀರ್ ಅನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಬೇಕಾಯಿತು. 1971ರಲ್ಲಿ ಭಾರತದ ಸೇನೆಯೆದುರು ಪಾಕಿಸ್ತಾನ ಆತ್ಮಸಮರ್ಪಣೆ ಮಾಡಿಕೊಂಡಿತ್ತು. ಈ ಸಮಯದಲ್ಲಿ 90 ಸಾವಿರ ಪಾಕಿಸ್ತಾನಿ ಸೈನಿಕರು ಭಾರತದ ಯುದ್ಧಬಂಧಿಗಳಾಗಿದ್ದರು. ಇಷ್ಟಾದರೂ ಪಾಕ್​ನ ಪಿತೂರಿ ನಿಲ್ಲಲಿಲ್ಲ. ಜಿಯಾ ಉಲ್ ಹಕ್ ನೇತೃತ್ವದಲ್ಲಿ ಖಲಿಸ್ತಾನಿ ಆತಂಕವಾದಿಗಳ ಮೂಲಕ ಭಾರತದ ಸಾವಿರಾರು ಗ್ರಾಮಗಳನ್ನು ರಕ್ತಸಿಕ್ತ ಮಾಡಿಬಿಟ್ಟಿತ್ತು. ನಂತರ ಐಎಸ್​ಐನ ಜಿಹಾದಿ ದಾಳಿಗಳಿಗೆ 86 ಸಾವಿರಕ್ಕೂ ಅಧಿಕ ಭಾರತೀಯರು ಸಾವನ್ನಪ್ಪಿದ್ದಾರೆ. ಹೀಗೆ ಪಾಕಿಸ್ತಾನದ ಕ್ರೂರತೆಯ ಕಥೆ ಬಹಳಷ್ಟಿದೆ.

ಮತ್ತೊಂದೆಡೆ, ಇಂದು ಜಗತ್ತಿನಲ್ಲಿ ಅತಿ ಹೆಚ್ಚು ಮುಸ್ಲಿಮರು ಮುಸ್ಲಿಮರಿಂದಲೇ ಹತರಾಗುತ್ತಿದ್ದಾರೆ ಎಂಬುದು ಕರಾಳ ವಾಸ್ತವ. ಪಾಕಿಸ್ತಾನವೂ ಇದರಿಂದ ಹೊರತಾಗಿಲ್ಲ. ಇದಕ್ಕೆ ಪ್ರಮುಖ ಕಾರಣವೆಂದರೆ ಶಿಯಾ ಮತ್ತು ಸುನ್ನಿಗಳ ನಡುವೆ ನಡೆಯುತ್ತಿರುವ ಘರ್ಷಣೆಗಳು, ಹಿಂಸೆಗಳು. ಪಾಕಿಸ್ತಾನದಲ್ಲಿ ನೆಲೆಸಿರುವ ಶಿಯಾ ಮುಸ್ಲಿಮರಿಗೆ ಸಂಬಂಧಿಸಿದ ನೂರಾರು ವೆಬ್​ಸೈಟ್​ಗಳಿವೆ. ಇವುಗಳತ್ತ ಕಣ್ಣು ಹಾಯಿಸಿದರೆ ಸುನ್ನಿಗಳು ಶಿಯಾಗಳ ಮೇಲೆ ನಡೆಸುತ್ತಿರುವ ಬರ್ಬರ ಹಲ್ಲೆಗಳು, ಪೈಶಾಚಿಕ ಕೃತ್ಯಗಳ ದೊಡ್ಡ ಪಟ್ಟಿಯೇ ಸಿಗುತ್ತದೆ.

ಪಾಕಿಸ್ತಾನ ಭಾರತೀಯರನ್ನು ಬಂಧಿಸಿ ಅವರ ಮೇಲೆ ಗೂಢಚಾರಿಕೆಯ ಆರೋಪ ಹೊರಿಸಿ ಬಂಧಿಯಾಗಿರಿಸುವುದು ಅಥವಾ ಗಲ್ಲುಶಿಕ್ಷೆ ವಿಧಿಸುವುದು ಹೊಸದೇನೂ ಅಲ್ಲ. ಈ ಹಿಂದೆಯೂ ಹಲವು ಬಾರಿ ಇಂತಹ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಇದೀಗ ಕುಲಭೂಷಣ್​ರ ಪ್ರಕರಣ ಇದರಲ್ಲಿ ಹೊಸಸೇರ್ಪಡೆ. ಮೂಲಗಳ ಪ್ರಕಾರ, ಪಾಕಿಸ್ತಾನದಲ್ಲಿ ಇನ್ನೂರಕ್ಕೂ ಹೆಚ್ಚು ಭಾರತೀಯರು ಕೈದಿಗಳಾಗಿದ್ದಾರೆ! ಇದರಲ್ಲಿ ಸರಬ್ಜಿತ್ ಸಿಂಗ್ ಮತ್ತು ಕಾಶ್ಮೀರ್ ಸಿಂಗ್​ರ ಕಥೆಯಷ್ಟೇ ಬೆಳಕಿಗೆ ಬಂದವು. ಆದರೆ 1971ರ ಯುದ್ಧದ ಸಮಯದಲ್ಲಿ ಬಂಧಿಗಳಾದ 54 ಭಾರತೀಯರ ಬಗೆಗೆ ಇಲ್ಲಿಯವರೆಗೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಮೂಲಗಳ ಪ್ರಕಾರ, ಆಗ ಬಂಧಿಗಳಾದ ಸೈನಿಕರಲ್ಲಿ ಇಂದಿಗೂ ಹಲವರು ಜೈಲಿನಲ್ಲಿ ಚಿತ್ರಹಿಂಸೆ ಅನುಭವಿಸುತ್ತಿದ್ದಾರೆ.

ಅಮಾನುಷವಾದ ಕ್ರೌರ್ಯ ಮತ್ತು ಹಿಂಸೆ ಪಾಕಿಸ್ತಾನದ ಕಣಕಣದಲ್ಲೂ ನೆಲೆಸಿವೆ. ಕ್ಯಾಪ್ಟನ್ ಸೌರಭ್ ಕಾಲಿಯಾ ಮತ್ತು ಅವರ ಜತೆಗಿದ್ದ ಜಾಟ್ ರೆಜಿಮೆಂಟಿನ ಐವರು ಸಿಪಾಯಿಗಳಾದ ಅರ್ಜುನ್ ರಾಮ ಬಾಸ್ವಾನಾ, ಮುಲಾರಾಂ, ನರೇಶ್ ಸಿಂಗ್, ಭಂವರ್ ಲಾಲ್ ಬಗಾಡಿಯಾ ಮತ್ತು ಮೀಕಾ ರಾಮ್ ಅವರ ಪಾರ್ಥೀವ ಶರೀರವನ್ನು ಪಾಕಿಸ್ತಾನ ಭಾರತಕ್ಕೆ ನೀಡಿದಾಗ, ಅವರ ಮೃತದೇಹವಿದ್ದ ಸ್ಥಿತಿ ನೋಡಿ ಭಾರತೀಯರಿಗೆ ಕರುಳುಕಿತ್ತು ಬರುವಂತಾಗಿತ್ತು. ಅವರು ಪಟ್ಟಿದ್ದ ಚಿತ್ರಹಿಂಸೆಯನ್ನು ಊಹಿಸಿಯೇ ರಕ್ತ ಕುದಿಯುತ್ತಿತ್ತು. 2013ರ ಜನವರಿಯಲ್ಲಿ ಲಾನ್ಸ್ ನಾಯಕ್ ಹೇಮರಾಜ್ ಮತ್ತು ಸುಧಾರಕ್ ಸಿಂಗ್ ಅವರ ರುಂಡವಿಲ್ಲದ ಶರೀರವನ್ನು ಭಾರತೀಯ ಸೇನೆಗೆ ಹಸ್ತಾಂತರಿಸಲಾಗಿತ್ತು. ಇದು ಇಡೀ ದೇಶವೇ ಪಾಕಿಸ್ತಾನದ ವಿರುದ್ಧ ದನಿ ಎತ್ತುವಂತೆ ಮಾಡಿತ್ತು. ಆದರೆ ಕೆಲದಿನಗಳಲ್ಲೇ ನಾವು ಎಲ್ಲ ಮರೆತೆವು, ಶಾಂತವಾಗಿಬಿಟ್ಟೆವು.

ವೀರಗೀತೆ ಹಾಡುವ ನಮ್ಮ ಸಮಾಜ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ನಮ್ಮ ಸೈನಿಕರಿಗೂ ಒಂದು ಪರಿವಾರವಿರುತ್ತದೆ. ಅವರಿಗೂ ತಂದೆ-ತಾಯಿ, ಪತ್ನಿ, ಮಕ್ಕಳು ಇರುತ್ತಾರೆ ಎನ್ನುವುದನ್ನು ಮರೆತೇ ಬಿಡುತ್ತದೆ. ಮಾಧ್ಯಮಗಳೂ ಅಷ್ಟೆ, ಭಯೋತ್ಪಾದಕರ ಮಕ್ಕಳ ಸಂದರ್ಶನಗಳನ್ನು ಪ್ರಕಟಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಇದೊಂದು ಫ್ಯಾಷನ್ ಆಗಿ ಬೆಳೆದುಬಿಟ್ಟಿದೆ. ಆದರೆ ಯಾವತ್ತಾದರೂ ಹುತಾತ್ಮ ಸೈನಿಕನೊಬ್ಬನ ತಾಯಿ, ತಂದೆ, ಹೆಂಡತಿ, ಮಗಳ ಅಥವಾ ಮಗನ ಸಂದರ್ಶನವನ್ನು ನೀವು ನೋಡಿದ್ದೀರೇನು?

ಸುಮ್ಮನೆ ಯೋಚಿಸಿ ನೋಡಿ, ಭಾರತೀಯ ಸೈನಿಕರ ಮೇಲೆ ನಡೆದಂಥ ಕ್ರೌರ್ಯದ ಪ್ರಕರಣಗಳು ಅಮೆರಿಕ ಅಥವಾ ಚೀನಾದ ಸೈನಿಕರ ಮೇಲೆ ನಡೆದಿದ್ದರೆ ಅದರ ಪ್ರತಿಕ್ರಿಯೆ ಹೇಗಿರುತ್ತಿತ್ತು? ಭಾರತದ ಸೈನಿಕರು ಕೇವಲ ಸಮವಸ್ತ್ರ ಧರಿಸಿಕೊಂಡು ಕೆಲಸ ಮಾಡುವವರಲ್ಲ. ಸಮವಸ್ತ್ರ ಧರಿಸುತ್ತಿದ್ದಂತೆಯೇ ಅವರು ನಮ್ಮ ಗಣತಂತ್ರ ವ್ಯವಸ್ಥೆಯ ಸಶಕ್ತ ಪ್ರತಿನಿಧಿಗಳಾಗುತ್ತಾರೆ. ಹೀಗಾಗಿ ತ್ರಿವರ್ಣ ಧ್ವಜ, ಸಂವಿಧಾನ ಮತ್ತು ರಾಷ್ಟ್ರಪತಿಗಳಿಗೆ ಸಿಗುವ ಗೌರವಕ್ಕೆ ಸರಿಸಮನಾದ ಗೌರವ ಸೈನಿಕರಿಗೂ ಸಲ್ಲಬೇಕು. ಕಾಶ್ಮೀರದಲ್ಲಿ ಕೇಂದ್ರೀಯ ಮೀಸಲು ಪಡೆ ಸೈನಿಕನ ಜತೆಗೆ ದೇಶದ್ರೋಹಿ ಯುವಕರು ನಡೆದುಕೊಂಡ ರೀತಿ ಇತ್ತೀಚೆಗೆ ಬಹಿರಂಗವಾಗಿರುವ ವಿಡಿಯೋ ದೃಶ್ಯಾವಳಿಗಳಲ್ಲಿ ಸ್ಪಷ್ಟವಾಗಿದೆ. ಸೈನಿಕನ ಮೇಲೆ ದೇಶದ್ರೋಹಿಗಳು ಹಲ್ಲೆ ನಡೆಸುತ್ತಾರೆ. ಈ ಘಟನೆಯನ್ನು ಖಂಡಿಸಿ ಕೆಲ ಕ್ರೀಡಾಪಟುಗಳು ಸೇರಿದಂತೆ ಹಲವರು ಟ್ವೀಟ್ ಮಾಡಿದರೇ ಹೊರತು ಬೇರೆ ಯಾವ ಪ್ರತಿಕ್ರಿಯೆಯೂ ವ್ಯಕ್ತವಾಗಲಿಲ್ಲ. ನಮ್ಮ ಕಾಶ್ಮೀರದಲ್ಲಿ ಮಾತೃಭೂಮಿಯ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿರುವ ಸೈನಿಕರ ರಕ್ಷಣೆಯನ್ನು ಮಾಡಲು ನಮಗೆ ಸಾಧ್ಯವಾಗುತ್ತಿಲ್ಲ ಎಂದಾದರೆ ಇದಕ್ಕೆ ಏನೆಂದು ಉತ್ತರಿಸಲು ಸಾಧ್ಯ? ಒಂದು ವೇಳೆ ಅದೇ ಸೈನಿಕ ತನ್ನ ಪ್ರಾಣರಕ್ಷಣೆಗಾಗಿ ದೇಶದ್ರೋಹಿಯನ್ನು ಗುಂಡಿಕ್ಕಿ ಹತ್ಯೆಗೈದಿದ್ದರೆ, ನಮ್ಮ ಮಾಧ್ಯಮಗಳಲ್ಲೆ ಸೆಕ್ಯುಲರ್ ಪತ್ರಕರ್ತರು ಎಂಬ ಹಣೆಪಟ್ಟಿ ಕಟ್ಟಿಕೊಂಡವರು ಕಣ್ಣೀರು ಸುರಿಸುತ್ತಾ ಆತನ ಬಗ್ಗೆ ಅನುಕಂಪದ ಲೇಖನಗಳನ್ನು ಪ್ರಕಟಿಸುತ್ತಿದ್ದರು. ಆದರೆ ಓರ್ವ ಭಾರತೀಯ ಸೈನಿಕನ ಅಪಮಾನವನ್ನು ಖಂಡಿಸಿ ಮಾಧ್ಯಮಗಳು ಲೇಖನ, ಸಂಪಾದಕೀಯ ಬರೆದದ್ದು ಕಾಣಲಿಲ್ಲ.

ಕುಲಭೂಷಣ ಜಾಧವ್ ವಿಚಾರಕ್ಕೆ ಬರುವುದಾದರೆ ಅವರಿಗೆ ಗಲ್ಲುಶಿಕ್ಷೆ ವಿಧಿಸಿರುವುದಲ್ಲ. ಶಿಕ್ಷೆ ವಿಧಿಸುವುದಕ್ಕೂ ಮೊದಲೇ ಅವರನ್ನು ಕೊಲ್ಲಬೇಕು ಎಂಬುದನ್ನು ನಿರ್ಣಯಿಸಲಾಗಿತ್ತು. ಆ ಬಳಿಕವಷ್ಟೇ ಪಾಕಿಸ್ತಾನದ ಫೈಲುಗಳಲ್ಲಿ ಜಾಧವ್ ಬಗ್ಗೆ ಉಲ್ಲೇಖಿಸಲಾಗಿದೆ. ಭಾರತೀಯ ರಾಯಭಾರಿಗಳಿಗೆ ಜಾಧವ್​ರನ್ನು ಭೇಟಿಯಾಗಲು ಅವಕಾಶ ಮಾಡಿಕೊಡಲಿಲ್ಲ. ಅಥವಾ ಭಾರತವು ಪಾಕಿಸ್ತಾನದ ಮುಂದಿರಿಸಿರುವ ಪ್ರಶ್ನೆಗಳಿಗೆ ಉತ್ತರಿಸುವ ಸೌಜನ್ಯವನ್ನೂ ತೋರಿಲ್ಲ.

ಭಾರತದ ರಾಯಭಾರಿಗಳು ಪಾಕಿಸ್ತಾದ ಮುಂದೆ 6 ಪ್ರಶ್ನೆಗಳನ್ನಿಟ್ಟಿದ್ದರು. ಅವುಗಳೆಂದರೆ:

  • ಒಂದು ವೇಳೆ ಕುಲಭೂಷಣ ಜಾಧವ್ ಭಾರತೀಯ ಗೂಢಚಾರ ಆಗಿದ್ದರೆ ಭಾರತದ ಪಾಸ್​ಪೋರ್ಟ್​ನೊಂದಿಗೆ ಅಲ್ಲಿಗೆ ತೆರಳುವ ಅಗತ್ಯವೇನಿತ್ತು?
  • ಕುಲಭೂಷಣ್ ವಿಚಾರ ಅಂತಾರಾಷ್ಟ್ರೀಯ ಸೇನಾ ದಾಖಲೆ ಒಪ್ಪಂದದ ಅಡಿಯಲ್ಲಿ ಬರುತ್ತದೆ. ಇದನ್ನು ಪಾಲಿಸಿ ಭಾರತದ ಹಿರಿಯ ಅಧಿಕಾರಿಗಳಿಗೆ ಕುಲಭೂಷಣ್​ರನ್ನು ಭೇಟಿಯಾಗಲು ಅವಕಾಶ ನೀಡಬೇಕಿತ್ತು. ಪಾಕಿಸ್ತಾನ ನೀಡಲಿಲ್ಲವೇಕೆ? ಇದಕ್ಕಾಗಿ ಭಾರತ ಪಾಕಿಸ್ತಾನಕ್ಕೆ 13 ಪತ್ರಗಳನ್ನು ಸಹ ಬರೆದಿತ್ತು.
  • ಕುಲಭೂಷಣ್ ತಾವೊಬ್ಬ ಭಾರತೀಯ ಗೂಢಚಾರ ಎಂಬುದನ್ನು ಒಪ್ಪಿಕೊಳ್ಳುತ್ತಿರುವಂತಹ ವಿಡಿಯೋವನ್ನು ಪಾಕಿಸ್ತಾನ ಬಿಡುಗಡೆ ಮಾಡಿದೆ. ಆದರೆ ಇದರಲ್ಲಿ ಹಲವು ಕಡೆಗಳಲ್ಲಿ ದೃಶ್ಯಾವಳಿಯನ್ನು ಕತ್ತರಿಸಿರುವುದು ಮತ್ತು ಫೋಟೋಶಾಪ್ ಮಾಡಿರುವುದೇಕೆ?
  • ಸಾಮಾನ್ಯವಾಗಿ ಇಂತಹ ಪ್ರಕರಣ ವಿಚಾರಣೆಯನ್ನು ಸಿವಿಲ್ ನ್ಯಾಯಾಲಯದಲ್ಲಿ ಮಾಡಲಾಗುತ್ತದೆ. ಆದರೆ ಇದೇ ಮೊದಲ ಬಾರಿ ಪಾಕಿಸ್ತಾನ ಕುಲಭೂಷಣ ಪ್ರಕರಣದ ವಿಚಾರಣೆಯನ್ನು ಮಾರ್ಷಲ್ ಕೋರ್ಟ್​ಗೆ ವಹಿಸಿದ್ದೇಕೆ?
  • 2016ರ ಡಿಸೆಂಬರ್​ನಲ್ಲಿ ನವಾಜ್ ಷರೀಫ್​ರ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಜ್ ಅಜೀಜ್ ಮಾತನಾಡಿ, ಕುಲಭೂಷಣ್ ವಿಚಾರದಲ್ಲಿ ಕೆಲ ಹೇಳಿಕೆಗಳು ನಮ್ಮ ಬಳಿ ಇವೆಯೇ ಹೊರತು, ನ್ಯಾಯಾಲಯದಲ್ಲಿ ಇದಕ್ಕೆ ಸಂಬಂಧಿಸಿದ ಸಾಕ್ಷ್ಯಳಿಲ್ಲ ಎಂದಿದ್ದರು. ಆದರೆ ಇದೀಗ ಇದ್ದಕ್ಕಿದ್ದಂತೆ ಕುಲಭೂಷಣ್ ವಿರುದ್ಧದ ಯಾವ ಸಾಕ್ಷ್ಯ ಆಧರಿಸಿ ಗಲ್ಲು ಶಿಕ್ಷೆ ವಿಧಿಸಲಾಗಿದೆ?
  • ಇರಾನ್​ನಲ್ಲಿ ತಮ್ಮ ವ್ಯಾಪಾರ ವಹಿವಾಟು ನಡೆಸಿಕೊಂಡಿದ್ದ ಕುಲಭೂಷಣ್ ಅವರನ್ನು ತಾಲಿಬಾನಿಗಳ ಮೂಲಕ ಹಿಡಿಯಲಾಯಿತು ಮತ್ತು ಅವರನ್ನು ಪಾಕಿಸ್ತಾನ ಸೇನೆಗೆ ಹಸ್ತಾಂತರಿಸಲಾಯಿತು ಎಂಬ ವಿಚಾರ ಸತ್ಯವೇ? ರಾಯಭಾರ ಕಚೇರಿ ಕೇಳಿರುವ ಈ ಪ್ರಶ್ನೆಗಳಿಗೆ ಪಾಕಿಸ್ತಾನ ಉತ್ತರಿಸಿಲ್ಲ.

ಕುಲಭೂಷಣ್ ವಿಚಾರದಲ್ಲಿ ನಾವು ಎಷ್ಟು ಚಿಂತಿತರಾಗಿದ್ದೇವೆಯೋ ಭಾರತ ಸರ್ಕಾರವೂ ಅಷ್ಟೇ ಚಿಂತಿತವಾಗಿದೆ. ನಾವು ಈ ವಿಚಾರದಲ್ಲಿ ನಮ್ಮ ಮನಸ್ಸಿನಲ್ಲಿರುವ ಭಾವನೆಗಳನ್ನು ಹೊರಹಾಕಬಹುದಷ್ಟೇ. ಆದರೆ ಸರ್ಕಾರವೇ ಮುಂದಡಿ ಇಡಬೇಕು. ಕುಲಭೂಷಣರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವುದಕ್ಕಾಗಿ ಸರ್ಕಾರದ ಕ್ರಮಗಳು ಮಾತ್ರ ಸಹಾಯಕಾರಿಯಾಗಿರಲಿವೆ. ಸರ್ಕಾರದ ಪ್ರಯತ್ನಗಳು ಸಫಲವಾಗಲಿ. ಕುಲಭೂಷಣ್ ಮತ್ತೆ ಭಾರತಕ್ಕೆ ಬರುವಂತಾಗಲಿ ಎನ್ನುವುದೇ ನಮ್ಮ ಹಾರೈಕೆ.

Leave a Reply

Your email address will not be published. Required fields are marked *

Back To Top