Monday, 22nd October 2018  

Vijayavani

ರಾಮನಗರ ಅಖಾಡ ಜಯಿಸಲು ರಣತಂತ್ರ - ದೋಸ್ತಿಗಳ ಮಿಡ್​​​ನೈಟ್​​​ ಮೀಟಿಂಗ್​ - ಸಿಎಂ ಎಚ್​ಡಿಕೆ, ಡಿಕೆಶಿ ನೇತೃತ್ವದಲ್ಲಿ ರಣತಂತ್ರ        ಮಲೆನಾಡ ರಣಕಣದಲ್ಲಿ ಬಿಜೆಪಿ ಅಬ್ಬರ-ಮಧು ಬಂಗಾರಪ್ಪ ಪರ ದಿಗ್ಗಜರ ಪ್ರಚಾರ - ಮಂಡ್ಯದಲ್ಲಿ ಕೈಗೆ ತಲ್ಲಣ ತಂದಿಟ್ಟ ಪರಾಜಿತರು        ಗಣಿನಾಡಿನಲ್ಲಿಂದು ‘ಕೈ’ ದಿಗ್ಗಜರ ದಂಡು - ಸಿದ್ದು, ಡಿಕೆಶಿ, ಜಾರಕಿಹೊಳಿ ಬ್ರದರ್ಸ್​​​​​​ ಕ್ಯಾಂಪೇನ್​ - ಮಾತನಾಡ್ತಾರಾ ನಾಯಕರು..?        ಆದೇಶವಿದ್ರೂ ಮುಚ್ಚಲಿಲ್ಲ ಘಟಕಗಳು - ಹೈಕೋರ್ಟ್​​​​ ಆದೇಶ ಮೀರಿ ನಡೆಯುತ್ತಿವೆ  ಶುದ್ಧ ನೀರಿನ ಘಟಕದ ಹೆಸರಲ್ಲಿ ದಂಧೆ        ವಾಣಿವಿಲಾಸ್​ ಆಸ್ಪತ್ರೆಯಲ್ಲಿ ಲೇಡಿ ಡಾನ್ಸ್​ - ಹಣ ಕೊಟ್ರೆ ಮಾತ್ರ ಒಳಗೆ ಪರ್ಮಿಷನ್​ - ಲಂಚ ಕೊಡದಿದ್ರೆ ಇಲ್ಲಿ ಏನೂ ನಡಿಯಲ್ಲ..!        20 ಜನರ ಉಳಿಸಿ, ಜೀವ ತೊರೆದ ಯೋಧ - ಹುತಾತ್ಮ ಉಮೇಶ್​ ದೇಹ ಇಂದು ರಾಜ್ಯಕ್ಕೆ - ಗೋಕಾಕ್​ ಪಟ್ಟಣದಲ್ಲಿ ಅಂತ್ಯಕ್ರಿಯೆ       
Breaking News

ಪಾಕಿಸ್ತಾನದಲ್ಲೂ ಮಹಾಮೈತ್ರಿಕೂಟ!

Sunday, 12.11.2017, 3:02 AM       No Comments

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೆಜ್ ಮುಷರಫ್ 23 ಪಕ್ಷಗಳ ಒಕ್ಕೂಟ ರಚಿಸಿದ್ದಾರೆ. ಪಾಕಿಸ್ತಾನ ಅವಾಮಿ ಇತ್ತೆಹಾದ್ (ಪಿಎಐ) ಎಂಬ ಹೆಸರಿನ ಒಕ್ಕೂಟಕ್ಕೆ ಮುಷರಫ್ ಅಧ್ಯಕ್ಷರಾಗಿದ್ದರೆ, ಇಕ್ಬಾಲ್ ಧರ್ ಮಹಾಪ್ರಧಾನ ಕಾರ್ಯದರ್ಶಿ ಆಗಿದ್ದಾರೆ.

ದೇಶದ್ರೋಹದ ಆರೋಪ ಎದುರಿಸುತ್ತಿರುವ ಮುಷರಫ್ ಸದ್ಯ ದುಬೈನಲ್ಲಿ ನೆಲೆಸಿದ್ದಾರೆ. ಅಲ್ಲಿಂದಲೇ ವಿಡಿಯೋ ಕಾನ್ಪರೆನ್ಸ್ ಮೂಲಕ ಪಾಕ್​ನ ಸುದ್ದಿಗಾರರ ಜತೆ ಶನಿವಾರ ಮಾತನಾಡಿ, ಪಿಎಐ ರಚನೆಯ ಘೋಷಣೆ ಮಾಡಿದ್ದಾರೆ.

ಮುಹಾಜಿರ್ ಸಮುದಾಯವನ್ನು (ವಲಸಿಗರು) ಪ್ರತಿನಿಧಿಸುವ ಎಲ್ಲ ಪಕ್ಷಗಳೂ ಪಿಎಐ ಅಡಿ ಒಂದಾಗಿ ಪಾಕ್​ನಲ್ಲಿ ಚುನಾವಣೆ ಎದುರಿಸಬೇಕು. ಪಿಎಐನ ಅಂಗಪಕ್ಷಗಳು ಪಿಎಐ ವತಿಯಿಂದಲೇ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

ಎಂಕ್ಯುಎಂ ನೇತೃತ್ವ ವಹಿಸಲ್ಲ: ಇದಕ್ಕೂ ಮುನ್ನ ಮುಷರಫ್ ಎಂಕ್ಯುಎಂ ಪಾರ್ಟಿಯನ್ನು ಪುನಶ್ಚೇತನಗೊಳಿಸಿ, ಚುನಾವಣಾ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಎಂಕ್ಯುಎಂ-ಪಾಕಿಸ್ತಾನ ವಿಭಜನೆಗೊಂಡಿದ್ದು, ಜನಪ್ರಿಯತೆ ಕಳೆದುಕೊಂಡಿದೆ. ಉಭಯ ಬಣಗಳು ಆಂತರಿಕ ಸಮಸ್ಯೆಗಳಿಂದ ಬಳಲುತ್ತಿವೆ. ಎಂಕ್ಯುಎಂ ಬಣಗಳ ಮುಖ್ಯಸ್ಥರಾದ ಫಾರೂಕ್ ಸತ್ತಾರ್ ಮತ್ತು ಮುಸ್ತಫಾ ಕಮಲ್ ಒಂದಾದರೂ, ಆ ಪಕ್ಷ್ವನ್ನು ಮುನ್ನಡೆಸುವ ಆಸಕ್ತಿ ನನಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇಮ್ರಾನ್ ಖಾನ್​ಗೂ ಆಹ್ವಾನ: ರಾಷ್ಟ್ರದ ಅಭಿವೃದ್ಧಿ ದೃಷ್ಟಿಯಿಂದ ಪಿಎಐ ಜತೆ ಸೇರುವಂತೆ ಮಾಜಿ ಕ್ರಿಕೆಟ್ ಆಟಗಾರ ಹಾಗೂ ಪಾಕಿಸ್ತಾನ ತೆಹ್ರೀಕ್ ಐ ಇನ್ಸಾಫ್​ನ ಮುಖ್ಯಸ್ಥ ಇಮ್ರಾನ್ ಖಾನ್, ಪಾಕಿಸ್ತಾನ ಮುಸ್ಲಿಂ ಲೀಗ್-ಖಐದಾದ ನಾಯಕರಾದ ಚೌಧರಿ ಶುಜಾತ್ ಮತ್ತು ಚೌಧರಿ ಪರ್ವೆಜ್ ಇಲಾಹಿ ಅವರನ್ನೂ ಮುಷರಫ್ ಆಹ್ವಾನಿಸಿದ್ದಾರೆ.

ವಾಜಪೇಯಿ ಪ್ರೇರಣೆ

ಕಾರ್ಗಿಲ್ ಯುದ್ಧದ ನಂತರದಲ್ಲಿ ಭಾರತದ ಆಗ್ರಾದಲ್ಲಿ ಆಯೋಜನೆಗೊಂಡಿದ್ದ ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ಆಗ ಪಾಕ್​ನ ಅಧ್ಯಕ್ಷ ಮತ್ತು ಸೇನಾಪಡೆ ಮುಖ್ಯಸ್ಥರಾಗಿದ್ದ ಪರ್ವೆಜ್ ಮುಷರಫ್ ಆಗಮಿಸಿದ್ದರು. ಆ ಸಂದರ್ಭದಲ್ಲಿ ಕಾಶ್ಮೀರ ಸಮಸ್ಯೆ, ಭಯೋತ್ಪಾದನೆ ಚಟುವಟಿಕೆ ಸೇರಿ ಹಲವು ವಿಷಯಗಳ ಕುರಿತು ಭಾರತದ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜತೆ ಮಾತುಕತೆ ನಡೆಸಿದ್ದರು. ಆದರೆ, ಹಠಾತ್ತನೆ ಶೃಂಗ ಸಭೆಯಿಂದ ಹೊರನಡೆದಿದ್ದ ಅವರು ಹೇಳದೆಕೇಳದೆ ತವರಿಗೆ ಮರಳಿದ್ದರು. ಆಗ ವಾಜಪೇಯಿ ಅವರು 20ಕ್ಕೂ ಹೆಚ್ಚು ಪಕ್ಷಗಳಿದ್ದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್​ಡಿಎ) ನೇತೃತ್ವದಲ್ಲಿ ಸರ್ಕಾರ ರಚಿಸಿದ್ದರು. ಆ ಘಟನೆಯಿಂದ ಪ್ರೇರಿತಗೊಂಡು ಪರ್ವೆಜ್ ಮುಷರಫ್, ಪಾಕಿಸ್ತಾನಕ್ಕೆ ಮರಳಿ ಆಡಳಿತ ಚುಕ್ಕಾಣಿ ಹಿಡಿಯಲು 23 ಪಕ್ಷಗಳ ಒಕ್ಕೂಟ ಪಿಎಐ ರಚಿಸಿದ್ದಾರೆ ಎನ್ನಲಾಗಿದೆ. ಆದರೆ, ಸದಾ ರಾಜಕೀಯ ಅಸ್ಥಿರತೆಯಿಂದ ಬಳಲುವ ಪಾಕಿಸ್ತಾನದಲ್ಲಿ ಪಿಎಐ ಅಧಿಕಾರಕ್ಕೆ ಬಂದಲ್ಲಿ, ಸ್ಥಿರ ಆಡಳಿತ ನೀಡಲು ಮುಷರಫ್​ಗೆ ಸಾಧ್ಯವಾಗುವ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ.

ಡಿಸೆಂಬರ್​ನಲ್ಲಿ ರ‍್ಯಾಲಿ

ಪಿಎಐ ಒಕ್ಕೂಟ ಡಿಸೆಂಬರ್​ನಲ್ಲಿ ಬೃಹತ್ ರ‍್ಯಾಲಿ ಆಯೋಜಿಸಲಿದೆ. ಈ ರ್ಯಾಲಿಯಲ್ಲಿ ಒಕ್ಕೂಟದ ಎಲ್ಲ ಪಕ್ಷಗಳ ಮುಖಂಡರೂ ಪಾಲ್ಗೊಳ್ಳಲಿರುವುದಾಗಿ ಪಿಎಐನ ಅಂಗಪಕ್ಷ ಎಪಿಎಂಎಲ್​ನ ಮಹಾಪ್ರಧಾನ ಕಾರ್ಯದರ್ಶಿ ಡಾ. ಅಮ್ಜದ್ ಹೇಳಿದ್ದಾರೆ. ಐವಾನ್-ಎ-ಇಕ್ಬಾಲ್ ಎಂಬ ಹೆಸರಿನ ರ‍್ಯಾಲಿ ಲಾಹೋರ್ ಮತ್ತು ಕರಾಚಿ ನಗರಗಳಲ್ಲಿ ಆಯೋಜನೆಗೊಳ್ಳಲಿರುವುದಾಗಿ ತಿಳಿಸಿದ್ದಾರೆ.

ಸೂಕ್ತ ಕಾಲದಲ್ಲಿ ಮರಳುವೆ

ಪಾಕಿಸ್ತಾನದಲ್ಲಿ ಸದ್ಯ ಪರಿಸ್ಥಿತಿ ಸುಧಾರಿಸಿದೆ. ನನ್ನ ಬರುವಿಕೆಯಿಂದ ರಾಷ್ಟ್ರದ ಅಭಿವೃದ್ಧಿ ಕೆಲಸಗಳಿಗೆ ತೊಡಕಾಗದ ರೀತಿ, ಸೂಕ್ತ ಸಮಯದಲ್ಲಿ ಮರಳುವೆ. ಅಲ್ಲಿಗೆ ಬಂದಾಗ ನನಗೆ ಯಾವುದೇ ಬಗೆಯ ರಕ್ಷಣೆಯೂ ಬೇಡ ಎಂದು ಮುಷರಫ್ ತಿಳಿಸಿದ್ದಾರೆ.

ವಿಚಾರಣೆ ಎದುರಿಸುವೆ

ತಮ್ಮ ವಿರುದ್ಧ ಹೊರಿಸಲಾಗಿರುವ ದೇಶದ್ರೋಹದ ಆರೋಪ ಸೇರಿ ಎಲ್ಲ ಪ್ರಕರಣಗಳ ವಿಚಾರಣೆಯನ್ನೂ ಎದುರಿಸುವುದಾಗಿ ಮುಷರಫ್ ಸ್ಪಷ್ಟಪಡಿಸಿದ್ದಾರೆ. ಪಾಕ್​ನ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಹತ್ಯೆ ಪ್ರಕರಣದಲ್ಲಿ ಪರಾರಿಯಾಗಿರುವ ಘೋಷಿತ ಅಪರಾಧಿ ಎಂದು ಪಾಕ್ ನ್ಯಾಯಾಲಯ ಘೋಷಿಸಿದೆ. ಆದರೀಗ ಪಾಕ್​ನ ಕೋರ್ಟ್​ಗಳು ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪ್ರಭಾವದಿಂದ ಮುಕ್ತವಾಗಿವೆ. ಹಾಗಾಗಿ, ವಿಚಾರಣೆ ಎದುರಿಸಲು ಯಾವುದೇ ಆತಂಕವಿಲ್ಲ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

Back To Top