Saturday, 26th May 2018  

Vijayavani

ನಾಮಪತ್ರ ವಾಪಸ್ ಪಡೆದ ಸುರೇಶ್​ಕುಮಾರ್​- ಅವಿರೋಧವಾಗಿ ರಮೇಶ್​ಕುಮಾರ್​ ಆಯ್ಕೆ- ಎರಡನೇ ಬಾರಿಗೆ ಸ್ಪೀಕರ್​ ಆಗಿ ನೇಮಕ        ಸದನದಲ್ಲಿ ವಿಶ್ವಾಮತ ಪರೀಕ್ಷೆ- ಮೂರು ಪಕ್ಷಗಳ ಎಲ್ಲಾ ಶಾಸಕರು ಹಾಜರ್​- ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಬಿಎಸ್​ವೈ        ಮೈತ್ರಿ ಸರ್ಕಾರದ ಪರ್ವ ಆರಂಭ- ಸಾಲ ಮನ್ನಾ ಮಾಡ್ತಾರಾ ಎಚ್​ಡಿಕೆ- ಕೊಟ್ಟ ಮಾತು ಉಳಿಸಿಕೊಳ್ತಾರಾ ಕಾಂಗ್ರೆಸ್​ ನಾಯಕರು        ಸಚಿವ ಸ್ಥಾನಕ್ಕಾಗಿ ಲಾಬಿ ಶುರು- ಕೆಪಿಸಿಸಿ ಅಧ್ಯಕ್ಷ ಸ್ಥಾನ, ಗೃಹಖಾತೆಗೆ ಡಿಕೆಶಿ ಪಟ್ಟು- ಹೈಕಮಾಂಡ್ ಭೇಟಿಗೆ ತೆರಳಲಿರುವ ಕೈ ನಾಯಕರು        ಮುಗಿದ ಬಹುಮತ ಸಾಬೀತಿನ ಪರೀಕ್ಷೆ- ಶಾಸಕರ ರೆಸಾರ್ಟ್​ ರಾಜಕೀಯ ಅಂತ್ಯ- ಇನ್ನಾದ್ರೂ ಕ್ಷೇತ್ರಗಳತ್ತ ತೆರಳ್ತಾರಾ ಎಂಎಲ್​ಎಗಳು        ಸಿಎಂಗೆ ಹೊಸ ಕಾರು ನೀಡಿದ ಡಿಪಿಎಆರ್- ಜಿಎ 6363 ಕಾರ್​ ನಂಬರ್​- ಹೊಸ ಕಾರು ಬಳಸಲು ಸಿಎಂ ನಿರ್ಧಾರ       
Breaking News

ಪರಮಹೇಡಿ ಭಯೋತ್ಪಾದಕರು, ಪರಮವೀರ ಸೈನಿಕರು

Monday, 17.07.2017, 3:05 AM       No Comments

|ಚಕ್ರವರ್ತಿ ಸೂಲಿಬೆಲೆ

ಸಣ್ಣಪುಟ್ಟ ಕೆಲಸ ಮಾಡಿಕೊಂಡು, ರಾಷ್ಟ್ರದ ನೆಮ್ಮದಿ-ಸಂಪತ್ತು ವರ್ಧಿಸುವಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಿದ್ದ ಸಾಮಾನ್ಯ ವ್ಯಕ್ತಿಯೊಬ್ಬ, ರಾಷ್ಟ್ರನಾಶದ ಹುನ್ನಾರವಿಟ್ಟುಕೊಂಡಿರುವ ಉಗ್ರಗಾಮಿ ಸಂಘಟನೆಯೊಂದಿಗೆ ಕೈಜೋಡಿಸುವಂತೆ ಆದದ್ದಾರೂ ಏಕೆ ಎಂದು ವಿಶ್ಲೇಷಿಸಿದರೆ ಕಾಶ್ಮೀರ ಸಮಸ್ಯೆಗೆ ಒಂದು ಹಂತದ ಪರಿಹಾರವಂತೂ ದಕ್ಕುತ್ತದೆ.

 

‘ಭೂಲೋಕದ ಸ್ವರ್ಗ’ ಎಂದು ಕರೆಸಿಕೊಳ್ಳುವ ಕಾಶ್ಮೀರಕ್ಕೆ ಯಾರೇ ಹೋದರೂ ಈ ಅನುಭವ ಪಕ್ಕಾ. ಗುಂಡಿನ ಮೊರೆತದ ಸದ್ದು ಪತ್ರಿಕೆಯಲ್ಲಿ ಕಾಣಿಸುವಷ್ಟು, ಟಿ.ವಿ.ಯಲ್ಲಿ ಕೇಳಿಸುವಷ್ಟು ಪ್ರತ್ಯಕ್ಷ ಕಾಶ್ಮೀರದ ನೆಲದಲ್ಲಿ ಕಾಣುವುದಿಲ್ಲ. ಹಾಗಂತ ಅಳುಕು ಇದ್ದದ್ದೇ. ಯಾವಾಗ ಏನಾಗುವುದೋ ಊಹಿಸುವುದು ಕಷ್ಟ. ಮುಂಬೈ ಫ್ಯಾಷನ್ ಮತ್ತು ಕಾಶ್ಮೀರದ ವಾತಾವರಣ ಯಾವಾಗ ಬದಲಾಗುವುದೆಂದು ಹೇಳಲು ಬರುವುದಿಲ್ಲ ಅಂತ ಅಲ್ಲಿನವರು ಆಡಿಕೊಂಡು ನಗುತ್ತಲೇ ಇರುತ್ತಾರೆ. ಲಾಲ್ ಚೌಕ್​ನ ಮುಂಭಾಗದಲ್ಲಿ ಹಾಸಿರುವ ಕಲ್ಲು ಬೆಂಚುಗಳ ಮೇಲೆ ಕುಳಿತ ನಿಮಗೆ ಇದ್ದಕ್ಕಿದ್ದಂತೆ ಅಸಹಜವಾಗಿ ಓಡಾಡುವ ಸೈನಿಕರು ಕಂಡರೆ ಗಾಬರಿಯಾಗುತ್ತದೆ, ಅವರ ಬಳಿಯೇ ಕೇಳಿದರೆ ‘ಸಹಜ ರಕ್ಷಣಾ ಕವಾಯತು, ಅಷ್ಟೇ’ ಎಂದು ಸುಮ್ಮನಾಗಿಬಿಡುತ್ತಾರೆ. ಪ್ರತಿ ಹತ್ತು ಮೀಟರಿಗೊಬ್ಬ ಸೈನಿಕ ನಿಂತು ಪಹರೆ ಕಾಯುತ್ತಿರುವ ದೃಶ್ಯವೇ ಅಳ್ಳೆದೆಯನ್ನು ನಡುಗಿಸಲು ಸಾಕು. ಈ ಸೈನಿಕರೊಡನೆ ನೀವು ಮಾತನಾಡಲು ನಿಂತರೆ ಅವರೇನೂ ನಗುನಗುತ್ತ ಸುದೀರ್ಘ ಸಂಭಾಷಣೆಗೆ ತೊಡಗುವವರಲ್ಲ. ನೀವು ಅದಕ್ಕಾಗಿ ಬೇಸರಿಸಿಕೊಳ್ಳುವಂತೆಯೂ ಇಲ್ಲ. ಹೀಗೆ ಮಾತನಾಡಲೆಂದು ಬಂದವರೇ ಬಂದೂಕು ತೆಗೆದು ಧನಾಧನ್ ಗುಂಡು ಹಾರಿಸಿದ ದೃಶ್ಯಗಳನ್ನು ಅವರು ಕಣ್ಣಾರೆ ಕಂಡವರಲ್ಲವೇ? ನಿಮ್ಮನ್ನು ನಂಬೋದು ಹೇಗೆ. ಒಬ್ಬ ಸೈನಿಕನ ಪಹರೆ ಎರಡು ಗಂಟೆಗಳ ಕಾಲ. ಅಷ್ಟರೊಳಗೆ ಮತ್ತೊಬ್ಬರು ಬಂದು ಇವನಿಗೆ ವಿರಾಮ ಕೊಡುತ್ತಾರೆ. ಅವರು ಬರಲಿಲ್ಲವೆಂದರೆ ಇನ್ನೆರಡು ಗಂಟೆಗಳ ಕಾಲ ಅದೇ ಜಾಗ, ಅದೇ ನಿಲುವು, ಅದೇ ಎಚ್ಚರಿಕೆ. ತಮ್ಮದೇ ಗುಂಪಿನವನೊಬ್ಬ ಮತ್ತೊಂದೆಡೆ ಪಹರೆ ಕಾಯಲು ಹೋಗಿ ಗುಂಡಿನ ದಾಳಿಗೆ ತುತ್ತಾಗಿರುವ ಸುದ್ದಿ ಕೇಳಿದಾಗಲೂ ಅವನು ಕುಪಿತನಾಗುವಂತಿಲ್ಲ, ತನ್ನ ಭಾವನೆಗಳನ್ನು ಹೊರಹಾಕುವಂತಿಲ್ಲ. ಏಕೆಂದರೆ ಭಾರತೀಯ ಸೇನೆ ಪಾಕೀ ಸೇನೆಯಂತಲ್ಲ. ಅದು ನಿಯಮಗಳಿಗೆ ಕಟಿಬದ್ಧ!

ಅನೇಕ ಬಾರಿ ಈ ನಿಯಮಗಳಿಂದಲೇ ಅವನು ಇತರರ ಅಪಹಾಸ್ಯಕ್ಕೆ ಗುರಿಯಾಗೋದು. ಸೈನಿಕ ಸಂಬಳಕ್ಕಾಗಿ ಕೆಲಸ ಮಾಡುತ್ತಾನೆ ಅಂದರು ಕೆಲವರು. ’ಅಊಖಕಅ’ (ಅಞಛಿಛ ಊಟ್ಟ್ಚಠ ಖಟಛ್ಚಿಜಿಚ್ಝ ಕಟಡಿಛ್ಟಿಠ ಅಠಿ) ಜಾರಿಯಲ್ಲಿಟ್ಟಿರುವುದರಿಂದ ಹೆಚ್ಚು ಸಂಬಳ ದೊರೆಯುತ್ತದೆ; ಆದ್ದರಿಂದ ಕಾಶ್ಮೀರದಲ್ಲಿ ಶಾಂತಿ ನೆಲೆಸದಿರುವಂತೆ ಆತನೇ ಪ್ರಚೋದಿಸುತ್ತಾನೆ ಅಂದರು ಮತ್ತಷ್ಟು ಜನ. ಕಾಶ್ಮೀರದ ಜನ ಒಳ್ಳೆಯವರೇ, ಈ ಸೈನಿಕರೇ ಅಲ್ಲಿನ ಹೆಣ್ಣುಮಕ್ಕಳನ್ನು ಚುಡಾಯಿಸಿ ಅವರ ಕೈಲಿ ಏಟು ತಿಂತಾರೆ ಅಂತ ಸುಳ್ಳು ಹಬ್ಬಿಸಿದರು. ಆಹ್! ಒಂದೇ ಎರಡೇ? ಹಾಗೇ ಸುಮ್ಮನೆ ಯೋಚಿಸಿ- ನೂರು ರೂಪಾಯಿ ಕೊಡ್ತೇನೆ, ಇಲಿ ಪಾಷಾಣ ತಿಂದು ಆಮೇಲೆ ಕಕ್ಕುಬಿಡಿರೆಂದರೆ ಸಾಹಸ ಮಾಡುವಿರೇನು? ಹಾಗಿದ್ದ ಮೇಲೆ ಸಾವಿನೊಂದಿಗೆ ಸರಸವಾಡುವ ಸಾಹಸದ ಬಯಕೆ ಅವನಿಗೆ ಮಾತ್ರ ಯಾಕೆ? ಮೋದಿ ಸರ್ಕಾರ ಬಂದ ಮೇಲಂತೂ ಭಯೋತ್ಪಾದಕರ ಮಾಡು-ಮಡಿ ಹೋರಾಟ ಶುರುವಾಗಿದೆ. ಕಾಶ್ಮೀರದ ಕಣಿವೆಯಲ್ಲಿ ಈಗ ದಿನಕ್ಕೊಂದು ಸುದ್ದಿ. ಒಂದೋ ಸೈನಿಕ ಅಥವಾ ಪೊಲೀಸು ಸಾಯಬೇಕು; ಇಲ್ಲವೇ ಭಯೋತ್ಪಾದಕ ಸಂಘಟನೆಯ ಸದಸ್ಯರನ್ನು ಹುಡು-ಹುಡುಕಿ ಕೊಲ್ಲಬೇಕು. ಈಗ ಕಣಿವೆಯಲ್ಲಿ ಸೈನಿಕನಿಗೆ ನಿಜವಾದ ಬೆಲೆ ಬಂದಿದೆ. ಅವನಿಗೀಗ ಅಲ್ಲಿ ಪರಮಾಧಿಕಾರ. ಭಾರತವನ್ನು ಸುಂದರ, ಶಾಂತ ರಾಷ್ಟ್ರವಾಗಿಸುವಲ್ಲಿ ಅವನದ್ದು ಮಹತ್ವದ ನಡೆ.

ಈ ಬಾರಿ ಭಾರತೀಯ ಸೇನೆಯದ್ದು ಸ್ಪಷ್ಟ ಹೆಜ್ಜೆ. ಗಡಿಯಲ್ಲಿ ಬಾಂಬ್ ದಾಳಿ ಮಾಡುತ್ತ ಪಾಕೀ ಪಡೆಯನ್ನು ಪೂರ್ಣ ನಡುಗಿಸಿ ಅತ್ತಲಿಂದ ನರಪಿಳ್ಳೆಯೂ ಗಡಿದಾಟದಂತೆ ಸೀಲ್ ಮಾಡಿಬಿಡುವುದು. ಒಮ್ಮೆ ನುಸುಳುಕೋರರು ಬರದಂತೆ ಮಾಡಿದರೆ, ಕಾಶ್ಮೀರದಲ್ಲಿ ಬೀಡುಬಿಟ್ಟಿರುವ ಭಯೋತ್ಪಾದಕರಿಗೆ ಪಾಕಿನ ಮಾತೃಸಂಘಟನೆಗಳೊಂದಿಗೆ ಸಂಪರ್ಕ ತಪ್ಪಿಹೋಗುತ್ತದೆ. ಆಗ ತಡಬಡಾಯಿಸುವ ಇವರು ತಾವಾಗಿಯೇ ಮಾಡುವ ತಪ್ಪುಗಳಿಂದ ತಾವಿರುವ ಸ್ಥಳದ ಗುಟ್ಟು ಬಿಟ್ಟುಕೊಡುತ್ತಾರೆ. ನೆಲೆಯನ್ನು ಅರಸಿಕೊಂಡು ಹೋಗಿ ಅವರನ್ನು ಹೊಸಕಿ ಹಾಕಿದರಾಯ್ತು. ಬುರ್ಹಾನ್ ವಾನಿಯ ಹತ್ಯೆಯೊಂದಿಗೆ ಈ ಪ್ರಥೆ ಶುರುವಾಯ್ತು. ಅದಕ್ಕೇ ಭಾರತದೊಳಗಿನ ಪ್ರತ್ಯೇಕತಾವಾದಿಗಳೆಲ್ಲ ತಮ್ಮ ಮನೆಯಲ್ಲಿಯೇ ಸೂತಕವಾದಂತೆ ಪ್ರತಿಭಟಿಸಿದರು. ಕಾಶ್ಮೀರದಲ್ಲೂ ಜನಸಾಗರ ಈತನ ಅಂತಿಮಯಾತ್ರೆಗೆ. ಆದರೆ ಬುರ್ಹಾನ್ ವಾನಿಯ ಅಂತಿಮ ಯಾತ್ರೆಯೊಂದಿಗೆ ಭಾರತದ ಬುದ್ಧಿಜೀವಿಗಳ ಕೊನೆಯ ಹೋರಾಟವೂ ಮುಗಿದುಹೋಯ್ತು. ಬಹುಸಂಖ್ಯಾತ ಭಾರತೀಯರು ಸೇನೆಯೊಂದಿಗೆ ನಿಂತ ಮೇಲೆ ಕಾಶ್ಮೀರದ ವಾತಾವರಣ ಬದಲಾಯ್ತು. ಈಗ ಅಲ್ಲಿ ದಿನನಿತ್ಯ ಭಯೋತ್ಪಾದಕರ ಮಾರಣಹೋಮ ನಡೆಯುತ್ತಿದೆ. ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದೆ ಪಾಕಿಸ್ತಾನ.

ಕಳೆದ ಮೇ ತಿಂಗಳಲ್ಲಿ 36 ಗಂಟೆಗಳಲ್ಲಿ 10 ಭಯೋತ್ಪಾದಕರ ಹುಟ್ಟಡಗಿಸಿದ ಸೇನೆಯ ಸಾಧನೆಯನ್ನು ಹೇಗೆ ಮರೆಯೋದು ಹೇಳಿ. ಬುರ್ಹಾನ್ ವಾನಿಯ ನಂತರ ಅಧಿಕಾರ ವಹಿಸಿಕೊಂಡಿದ್ದ ಮತ್ತು ಕಣಿವೆಯ ಹುಡುಗರನ್ನು ಪ್ರಚೋದಿಸಿ ಅವರ ಕೈಲಿ ಬಂದೂಕು ಕೊಡುವಲ್ಲಿ ನಿಸ್ಸೀಮನಾಗಿದ್ದ ಸಬ್ಝಾರ್ ಅಹಮದ್ ಸೇರಿದಂತೆ ಪ್ರಮುಖ ಉಗ್ರರನ್ನು ಕಿತ್ತೊಗೆದದ್ದು ಥೇಟು ಸಿನಿಮೀಯ ಶೈಲಿಯಲ್ಲಿಯೇ. ಕಳೆದ ನಾಲ್ಕಾರು ತಿಂಗಳಲ್ಲಿ ಉಗ್ರರ ಕುರಿತಂತೆ ಮಾಹಿತಿ ಪಡೆಯುವಲ್ಲಿ ಸ್ಥಳೀಯರನ್ನು ಮತ್ತು ನ್ಯಾಷನಲ್ ಟೆಕ್ನಿಕಲ್ ರಿಸರ್ಚ್ ಆರ್ಗನೈಸೇಷನ್​ನ ತಂತ್ರಜ್ಞಾನವನ್ನು ಸೇನೆ ಬಳಸಿಕೊಳ್ಳುತ್ತಿರುವ ಪರಿ ಸಾಕಷ್ಟು ಬದಲಾವಣೆ ತಂದಿದೆ. ಮೇ ತಿಂಗಳ ಕೊನೆಯ ಶುಕ್ರವಾರ ಸಂಜೆ ಭಯೋತ್ಪಾದಕರ ಅಡಗುತಾಣದ ಬಗ್ಗೆ ಸ್ಪಷ್ಟ ಮಾಹಿತಿ ಪಡೆದ ಸೇನೆ ಶನಿವಾರ ಬೆಳಗ್ಗೆ ಎಂಟು ಗಂಟೆಯ ವೇಳೆಗೆ ಭಯೋತ್ಪಾದಕರಿದ್ದ ಮನೆ ಸುತ್ತುವರೆಯಿತು. ಒಂದೆರಡು ಗಂಟೆಗಳ ಕಾರ್ಯಾಚರಣೆಯಲ್ಲಿಯೇ ಎಲ್ಲವನ್ನು ಮುಗಿಸಿತು. ಹಿಂದೆಯೇ ಮೂರ್ನಾಲ್ಕು ಕಡೆ ದಾಳಿ ನಡೆಸಿ ಹತ್ತು ಜನರನ್ನು ಯಮಲೋಕಕ್ಕೆ ಕಳಿಸಿತು. ಬುರ್ಹಾನ್ ವಾನಿಯ ಕಾಲಕ್ಕೆ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇರಿಸಲು ಮರೆತಿದ್ದ ಸೇನೆ, ಈ ಬಾರಿ ಇಂಟರ್ನೆಟ್ ಸೇವೆಯನ್ನೇ ಸ್ಥಗಿತಗೊಳಿಸಿಬಿಟ್ಟಿತ್ತು. ಹೀಗಾಗಿ ಪಾಪ, ಸಬ್ಝಾರ್, ಬುರ್ಹಾನ್​ನಷ್ಟು ಖ್ಯಾತಿ ಪಡೆಯಲಿಲ್ಲ. ಬರ್ಖಾರಂಥವರು ಅವನ ಬಗ್ಗೆ ಅನುಕಂಪ ಹುಟ್ಟಿಸುವಂತಹ ಟ್ವೀಟ್ ಮಾಡಲಾಗಲಿಲ್ಲ. ಭಯೋತ್ಪಾದಕರೂ ಇದಕ್ಕೆ ಪ್ರತಿಕ್ರಿಯೆ ಕೊಡದೇ ಸುಮ್ಮನೆ ಕೂರಲಿಲ್ಲ. ಲೆಫ್ಟಿನೆಂಟ್ ಉಮರ್ ಫಯಾಜ್​ರ ಹತ್ಯೆ ನೆನಪಿಸುವಂತೆ ಫಿರೋಜ್ ಅಹಮದ್ ದಾರ್​ರ ತಂಡವನ್ನು ಬರ್ಬರವಾಗಿ ಕೊಂದರು. ಅದಕ್ಕೂ ಮುನ್ನ ಎಂ.ಎ. ಪಂಡಿತರ ಹತ್ಯೆಯಾಯ್ತು. ಈಗ ಸೇನೆ ಹಿಂದಿನಂತಿರಲಿಲ್ಲ. ಈ ಹತ್ಯೆಗಳ ಬೆನ್ನಲ್ಲೇ ಚುರುಕಾಗಿ ಸಾತೋರಾದಲ್ಲಿ ಮನೆಯೊಂದರಲ್ಲಿ ಅಡಗಿದ್ದ ಇಬ್ಬರು ಉಗ್ರರನ್ನು ಮುಗಿಸಲಾಯ್ತು. ಮಸೀದಿಯ ಹೊರಗೆ ಮೊಹಮ್ಮದ್ ಅಯೂಬ್​ರನ್ನು ಕಲ್ಲು ಹೊಡೆದೇ ಕೊಲ್ಲುವಲ್ಲಿ ಮಹತ್ವದ ಪಾತ್ರವಹಿಸಿ ನಂತರ ಹಿಜ್ಬುಲ್ ಮುಜಾಹಿದೀನ್​ಗೆ ಸೇರಿಕೊಂಡಿದ್ದ ಸಜ್ಜಾದ್ ಅಹ್ಮದ್. ಅವನನ್ನು ಬೆನ್ನಟ್ಟಿದ ಸೇನೆ ಬಡ್ಗಾಮ್ೆ ಬಂತು. ಸಜ್ಜಾದ್ ಸೇರಿದಂತೆ ಅಡಗಿದ್ದ ಮೂವರು ಉಗ್ರರನ್ನು ಸದ್ದಿಲ್ಲದೇ ಹತ್ಯೆಗೈಯಲಾಯ್ತು. ಭಾರತೀಯ ಸೈನಿಕರೊಂದಿಗೆ ಚೆಲ್ಲಾಟ ಆಡೋದರ ಫಲವೇನೆಂಬುದು ಕಾಶ್ಮೀರದ ಜನತೆಗೆ ಈಗೀಗ ಅರಿವಿಗೆ ಬರುತ್ತಿದೆ. ಇದು ಅಬ್ದುಲ್ಲಾ ಕುಟುಂಬವನ್ನು ವೈಯಕ್ತಿಕ ಹಿತಾಸಕ್ತಿಗಾಗಿ ಪ್ರೀತಿಸುತ್ತಿದ್ದ ನೆಹರು ಕಾಲದ ಭಾರತವಲ್ಲ ಎಂಬುದಂತೂ ಅವರಿಗೆ ಸ್ಪಷ್ಟವಾಗಿದೆ.

ಹಾಗೆಂದೇ ಈ ಬಾರಿ ಕಾಶ್ಮೀರದ ನೆಲದಲ್ಲಿದ್ದ ಭಯೋತ್ಪಾದಕರು ಅಮರನಾಥ ಯಾತ್ರಿಕರಂತಹ ಸಾಫ್ಟ್ ಟಾರ್ಗೆಟ್​ಗಳನ್ನು ಆರಿಸಿಕೊಂಡಿದ್ದು. ಈ ಪಾಕ್-ಪ್ರೇರಿತ ಭಯೋತ್ಪಾದಕರು ಪರಮಹೇಡಿಗಳು. ಭಾರತೀಯ ಸೇನೆಯ ಎದುರು ಅರೆಕ್ಷಣವೂ ನಿಲ್ಲುವ ಧೈರ್ಯವಿಲ್ಲದವರು. ಅವರ ಪೌರುಷವೇನಿದ್ದರೂ ಚೆದುರಿಹೋದ ಪಂಡಿತರ ಮೇಲೆ, ಅನಾಥ ಮಂದಿರಗಳ ಮೇಲೆ, ಕೈಲಿ ಹೂ-ಹಣ್ಣು ಹಿಡಿದ ಭಕ್ತರ ಮೇಲೆ ಅಷ್ಟೇ. ಇತ್ತೀಚೆಗೆ ಗೃಹ ಇಲಾಖೆ ಬಿಡುಗಡೆ ಮಾಡಿರುವ ವರದಿಯಂತೆ 1986 ರಲ್ಲಿ 36, 88 ಮತ್ತು 90ರಲ್ಲಿ ಎಂಟೆಂಟು, 89ರಲ್ಲಿ 12 ಮತ್ತು 91ರಲ್ಲಿ 5 ಮಂದಿರಗಳ ಮೇಲೆ ಮುಸಲ್ಮಾನ ಭಯೋತ್ಪಾದಕರು ದಾಳಿಮಾಡಿದ್ದಾರೆ. 2002ರಲ್ಲಿ ಕರಸೇವೆ ಮುಗಿಸಿ ಭಜನೆ ಮಾಡಿಕೊಂಡು ಬರುತ್ತಿದ್ದ ಭಕ್ತರ ಮೇಲೆ ಗೋಧ್ರಾದಲ್ಲಿ ದಾಳಿ ಮಾಡಲಾಯ್ತು. ಅದೇ ವರ್ಷ ಜಮ್ಮು ರಘುನಾಥ ಮಂದಿರದ ಮೇಲೆ ದಾಳಿಮಾಡಿ 11 ಭಕ್ತರನ್ನು ಕೊಲ್ಲಲಾಯ್ತು. ಗುಜರಾತಿನ ಸ್ವಾಮಿ ನಾರಾಯಣ ಮಂದಿರದ ಮೇಲೆ ಆಕ್ರಮಣ ಮಾಡಿ ಹೆಂಗಸರು, ಮಕ್ಕಳನ್ನೂ ಬಿಡದೇ 30 ಜನರನ್ನು ಕೊಲ್ಲಲಾಯ್ತು. ಮುಂದಿನ ವರ್ಷಗಳಲ್ಲಿ ಅಯೋಧ್ಯೆ-ವಾರಣಾಸಿಗಳಲ್ಲಿ ಪದೇಪದೆ ನಡೆದ ದಾಳಿಗಳು ಇವೆಲ್ಲವೂ ಸಾಹಸದ ಪ್ರದರ್ಶನಗಳಲ್ಲ, ಬದಲಿಗೆ ಶಸ್ತ್ರವಿಲ್ಲದ ಸಾಮಾನ್ಯರ ಮೇಲೆ ನಡೆಸಿದ ಭೂತನರ್ತನಗಳಷ್ಟೇ. ಇದರ ಮುಂದುವರಿದ ಭಾಗವಾಗಿಯೇ ಕಾಶ್ಮೀರ ಕೊಳ್ಳದ ಭಯೋತ್ಪಾದಕರು ಯಾತ್ರಿಕರ ಮೇಲೆ ಪೌರುಷ ತೋರಿದ್ದು. ಗುಜರಾತಿನಿಂದ ಹೊರಟ ಬಸ್ಸಿನ ಮೇಲೆ ಅನಂತ್​ನಾಗ್ ಭಾಗದಲ್ಲಿ ಏಕಾಏಕಿ ದಾಳಿ ಮಾಡಿದ ಭಯೋತ್ಪಾದಕರು ಮಲಗಿದ್ದ ಏಳು ಯಾತ್ರಿಕರನ್ನು ಕೊಂದು ಪರಾರಿಯಾದರು. ಅಮರನಾಥ ಯಾತ್ರೆ ಮಾಡಿ ಬಂದವರಿಗೆ ಗೊತ್ತು, ಅಲ್ಲಿ ಒಂದೊಂದು ಬಸ್ಸು ಸಂಚರಿಸುವಾಗಲೂ ಮತ್ತೆ ಮತ್ತೆ ಅನುಮತಿಯನ್ನು ಪರೀಕ್ಷಿಸಲಾಗುತ್ತದೆ. ಏಳು ಗಂಟೆಯ ನಂತರ ನಿಗದಿತ ಸ್ಥಳವನ್ನು ದಾಟುವಂತಿಲ್ಲ. ಏಕೆಂದರೆ ಅಲ್ಲಿಂದಾಚೆಗೆ ಸೇನೆಯ ಪಹರೆ ಕಡಿಮೆಯಾಗುತ್ತದೆ. ಇಷ್ಟೆಲ್ಲ ನಿಯಮಗಳ ನಡುವೆಯೂ ಸಣ್ಣದೊಂದು ಎಡವಟ್ಟಾಯಿತು. ಈ ಬಸ್ಸು ಭಯೋತ್ಪಾದಕರಿಗೆ ಸುಲಭದ ತುತ್ತಾಯ್ತು. ಈ ಬಾರಿ ವಿಚಾರಣೆ ವೇಗವಾಗಿ ನಡೆದುದರಿಂದ, ಈ ಭಯೋತ್ಪಾದಕ ಕಾರ್ಯಾಚರಣೆಗೆ ಬೆಂಬಲ ನೀಡಿದ್ದ ಜಮ್ಮು-ಕಾಶ್ಮೀರದ ಪೊಲೀಸ್ ಪೇದೆಯಾಗಿದ್ದ ತೌಸಿಫ್ ಅಹ್ಮದ್​ನನ್ನು ಬಂಧಿಸಲಾಯ್ತು. ಆತ ಕೊಟ್ಟ ಮಹತ್ವದ ಸುಳಿವಿನಿಂದಾಗಿ ಅಲ್ಲಿನ ಶಾಸಕರೊಬ್ಬರು ಈ ಚಟುವಟಿಕೆಯಲ್ಲಿ ಮಹತ್ವದ ಪಾತ್ರವಹಿಸಿದ ಸುದ್ದಿ ಬೆಳಕಿಗೆ ಬಂತು. ಸೈನ್ಯದ ಕಾರ್ಯಾಚರಣೆಯ ವೇಗ ನೋಡಿದರೆ ಇದಕ್ಕೆ ಕಾರಣರಾದವರ ಬಲಿ ಪಡೆಯುವ ಕಾಲ ಬಹಳ ದೂರವಿಲ್ಲವೆನಿಸುತ್ತದೆ.

ಈ ನಡುವೆಯೇ ‘ಲಷ್ಕರ್-ಎ-ತೊಯ್ಬಾ’ ಸಂಘಟನೆಯ ಉಗ್ರ ಆದಿಲ್​ನನ್ನು ಜಮ್ಮು-ಕಾಶ್ಮೀರ ಪೊಲೀಸರು ಬಂಧಿಸಿದ್ದರು. ಮೂಲತಃ ಉತ್ತರ ಪ್ರದೇಶದವನಾಗಿದ್ದ ಈತನ ಮೊದಲ ಹೆಸರು ಸಂದೀಪ್ ಕುಮಾರ್ ಅಂತಿತ್ತು. ಹೌದು, ಆತ ಹಿಂದುವಾಗಿದ್ದ. ಉತ್ತರ ಪ್ರದೇಶದ ಮುಸಲ್ಮಾನ ಎಲೆಕ್ಟ್ರಿಕಲ್ ಕಾಂಟ್ರಾಕ್ಟರ್​ನಡಿಯಲ್ಲಿ ಕೆಲಸ ಮಾಡುತ್ತಿದ್ದ ಈತ ಸ್ವಲ್ಪ ದಿನ ದೆಹಲಿಯಲ್ಲಿ ಈ ಕೆಲಸ ಮಾಡಿ ತನ್ನೊಡೆಯನ ಆಜ್ಞೆಯಂತೆ ಕಾಶ್ಮೀರಕ್ಕೆ ಬಂದ. ಕೆಲಸ ಮುಗಿದ ಮೇಲೆ ಜತೆಗಿದ್ದ ಗೆಳೆಯರು ಊರಿಗೆ ಮರಳಿದರು. ಈತ ಅಲ್ಲಿಯೇ ಉಳಿದ. ಅಲ್ಲಿನ ನಿವೃತ್ತ ಅಧಿಕಾರಿಯೊಬ್ಬರ ಮಗಳೊಂದಿಗೆ ಆತ ಪ್ರೇಮಪಾಶಕ್ಕೆ ಸಿಲುಕಿದ್ದ. ಮದುವೆಯಾಗಬೇಕೆಂದರೆ ಮತಾಂತರವಾಗಬೇಕೆಂಬ ನಿಯಮ ಒಡ್ಡಿದರು ಹುಡುಗಿಯ ಮನೆಯವರು. ಆತ ಒಪ್ಪಿ ತನ್ನ ಮನೆಯವರಿಂದ ದೂರವಾಗಿ ನಿಕಾಹ್ ಮಾಡಿಕೊಂಡ. ದುಡಿಮೆ ನಿಂತಿತ್ತು, ಹಣ ಬೇಕಾಗುತ್ತಿತ್ತು. ಅನೇಕ ಕಾಶ್ಮೀರಿ ತರುಣರಂತೆ ದುಡ್ಡಿಗಾಗಿ ಲಷ್ಕರ್​ನ ಸಂಪರ್ಕಕ್ಕೆ ಬಂದ. ತನ್ನ ಹಳೆಯ ಸಂದೀಪ್ ಕುಮಾರ್​ನ ಐಡೆಂಟಿಟಿ ಕಾರ್ಡ್ ಉಳಿಸಿಕೊಂಡಿದ್ದರಿಂದ ಅವನ ಮೇಲೆ ಇಲಾಖೆಗಂತೂ ಅಪನಂಬಿಕೆ ಇರಲಿಲ್ಲ. ಅವನು ತನ್ನ ಬಂಧುಗಳನ್ನು ಕಾಶ್ಮೀರಕ್ಕೆ ಕರೆತಂದು ಲಷ್ಕರ್​ಗೆ ಸೇರಿಸುವುದರಲ್ಲಿದ್ದ. ಕಾಜಿಕುಂಡ್​ದಲ್ಲಿ ಸೇನೆಯ ಮೇಲೆ ದಾಳಿ ಮಾಡುವಲ್ಲಿ, ಅನಂತನಾಗ್​ನ ನ್ಯಾಯಾಧೀಶರ ಮನೆಯಿಂದ ಶಸ್ತ್ರ ಅಪಹರಿಸುವಲ್ಲಿ ಮತ್ತು ಜೀಪೊಂದನ್ನು ಪೊಲೀಸರೆಡೆಗೆ ನುಗ್ಗಿಸಿ ಅವರೆಡೆಗೆ ಬಂದೂಕಿನ ದಾಳಿ ಮಾಡುವಲ್ಲಿ ಅವನ ಪಾತ್ರ ಬಲು ಮಹತ್ವದ್ದಾಗಿತ್ತು. ಈಗ ಅಲ್ಲಿನ ಪೊಲೀಸು ಪಡೆ ಅವನನ್ನು ಬಂಧಿಸಿ ಹಾಜರು ಪಡಿಸಿದೊಡನೆ ಬುದ್ಧಿಜೀವಿಗಳೆಲ್ಲ ಚುರುಕಾಗಿಬಿಟ್ಟರು. ಆಂಗ್ಲ ಪತ್ರಿಕೆಯೊಂದು ‘ಭಯೋತ್ಪಾದಕ ಸಂಘಟನೆ ಸೇರಿದ ಹಿಂದೂ’ ಎಂದು ಶೀರ್ಷಿಕೆ ಕೊಟ್ಟುಬಿಟ್ಟಿತು. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತಂತೆ ವ್ಯಾಪಕ ಗದ್ದಲವೆಬ್ಬಿಸುವ ಪ್ರಯತ್ನವೂ ನಡೆಯಿತು. ಆದರೆ ರಾಷ್ಟ್ರೀಯವಾದಿಗಳು ಮುಲಾಜು ನೋಡಲಿಲ್ಲ. ಮುಸಲ್ಮಾನನಾಗಿ ಮತಾಂತರಗೊಂಡ ನಂತರ ಮಾಡಿದ ಕಾರ್ಯದ ಶ್ರೇಯವನ್ನೆಲ್ಲ ಅವನ ಹಿಂದೂ ಹೆಸರಿಗೇ ಕೊಡುವುದಾದರೆ, ಎ.ಆರ್. ರೆಹಮಾನರ ಶ್ರೇಯವನ್ನೆಲ್ಲ ಅವರ ಮತಾಂತರ-ಪೂರ್ವದ ಹೆಸರಾದ ದಿಲೀಪ್ ಎಂಬುದಕ್ಕೇಕೆ ಕೊಡಬಾರದು ಎಂದೆಲ್ಲ ಪ್ರಶ್ನಿಸಿ ಕಪಾಳಮೋಕ್ಷ ಮಾಡಲಾಯ್ತು.

ಒಟ್ಟಾರೆ ಈ ನೆಪದಲ್ಲಿ ಒಂದಂತೂ ಖಾತ್ರಿಯಾಯ್ತು. ಹಿಂದುವಾಗಿದ್ದಾಗ ವಿದ್ಯುತ್ ವಿಭಾಗದ ಸಣ್ಣಪುಟ್ಟ ಕೆಲಸ ಮಾಡಿಕೊಂಡು ನೆಮ್ಮದಿಯಿಂದಿದ್ದು ರಾಷ್ಟ್ರದ ಸಂಪತ್ತು ವೃದ್ಧಿಸುವಲ್ಲಿ ನಿರತನಾಗಿದ್ದವನೊಬ್ಬ, ಮುಸಲ್ಮಾನನಾದೊಡನೆ ರಾಷ್ಟ್ರವನ್ನು ನಾಶಮಾಡಬೇಕೆನ್ನುವ ಶಕ್ತಿಗಳೊಂದಿಗೆ ಕೈ ಜೋಡಿಸುವುದಾದರೂ ಏಕೆ? ಸಮಸ್ಯೆ ನಿಜವಾಗಿಯೂ ಎಲ್ಲಿದೆ? ಅದನ್ನು ಅರಿಯಲು ಶಕ್ತವಾದರೆ ಪರಿಹಾರವನ್ನು ಅಲ್ಲಿಯೇ ಹುಡುಕಬಹುದು. ನೆನಪಿಡಿ, ಕಳೆದುಕೊಂಡಲ್ಲಿಯೇ ಸೂಜಿ ಹುಡುಕಬೇಕೇ ಹೊರತು, ಬೆಳಕಿದೆ ಎಂಬ ಕಾರಣಕ್ಕೆ ಬೇರೆಲ್ಲೋ ಅಲ್ಲ.

(ಲೇಖಕರು ಖ್ಯಾತ ವಾಗ್ಮಿ, ಚಿಂತಕರು)

Leave a Reply

Your email address will not be published. Required fields are marked *

Back To Top