Wednesday, 19th September 2018  

Vijayavani

ಗೌಡರ ಫ್ಯಾಮಿಲಿ ವಿರುದ್ಧ ಮತ್ತೆ ಸಿಡಿದೆದ್ದ ಮಂಜು- ಡಿಸಿ, ಕಂದಾಯ ಸಚಿವರಿಗೆ ನಾಳೆ  ದೂರು ನೀಡಲಿರುವ ಎ.ಮಂಜು        ಎದುರಾಳಿ ಇಲ್ದೇ ಚೆಸ್ ಆಡೋದೇಗೆ - ಡಿಕೆಶಿ ದರ್ಪದ ಮಾತಿಗೆ ಬಿಎಸ್​ವೈ ತಿರುಗೇಟು - ಇತ್ತ ಅಪ್ಪ-ಮಕ್ಕಳ ವಿರುದ್ಧವೂ ವಾಗ್ದಾಳಿ        ಬಿಜೆಪಿಗೆ ಹೋದ್ರೆ ಬೆಳೆಯಕ್ಕಾಗಲ್ಲ, ಪಕ್ಷದಲ್ಲಿದ್ರೆ ಹೆಚ್ಚು ಲಾಭ - ಬಂಡೆದ್ದಿದ್ದ ಬ್ರದರ್ಸ್ ಕೂಲ್ ಮಾಡಿದ್ದೇ ಸಹೋದರ ಲಖನ್        ದಿಲ್ಲಿಯಲ್ಲಿ ಸಂಪುಟ ವಿಸ್ತರಣೆ ಸರ್ಕಸ್ - ಖಾಲಿ ಇರೋ 6 ಸ್ಥಾನಗಳಿಗೆ ಲಾಬಿ ಜೋರು - ಭಿನ್ನಮತಕ್ಕೆ ರಾಹುಲ್ ಹಾಡ್ತಾರಾ ಇತಿಶ್ರೀ..?        ತ್ರಿವಳಿ ತಲಾಖ್ ಸುಗ್ರೀವಾಜ್ಞೆಗೆ ಅಸ್ತು - ಕೇಂದ್ರ ಸಚಿವ ಸಂಪುಟದಿಂದ ಒಪ್ಪಿಗೆ - ಮುಸ್ಲಿಂ ಮಹಿಳೆಯರಿಗೆ ಕೊನೆಗೂ ಸಿಕ್ತು ನ್ಯಾಯ       
Breaking News

ಪಟಾಕಿ ವಿವಾದದ ಕಿಡಿ 

Friday, 13.10.2017, 3:00 AM       No Comments

ಇರಲಿ ಆರೋಗ್ಯದ ಬಗೆಗೊಂದಿಷ್ಟು ಕಾಳಜಿ

ಬಣ್ಣ-ಬಣ್ಣದ ಕಿರಣಗಳನ್ನು ಸೂಸುವ, ಭಾರಿ ಶಬ್ದಗಳನ್ನು ಮಾಡುವ ಪಟಾಕಿಗಳಲ್ಲಿ ಜೀವಕ್ಕೆ ಕುತ್ತು ತರಬಹುದಾದ ಹಲವು ರಾಸಾಯನಿಕಗಳಿರುತ್ತವೆ. ಹಲವು ಅಧ್ಯಯನಗಳ ಪ್ರಕಾರ, ದೀಪಾವಳಿ ಸಮಯದಲ್ಲಿ ವಾತಾವರಣದಲ್ಲಿನ ಸಲ್ಪರ್ ಡೈಆಕ್ಸೈಡ್, ನೈಟ್ರೋಜನ್ ಡೈಆಕ್ಸೈಡ್, ಟಿಎಸ್​ಪಿ ಪ್ರಮಾಣ ತೀವ್ರಗತಿಯಲ್ಲಿ ಏರಿಕೆಯಾಗುತ್ತದೆ. ಪಟಾಕಿಗಳನ್ನು ಹೊತ್ತಿಸುವುದರಿಂದ ಸಲ್ಪರ್ ಡೈಆಕ್ಸೈಡ್(ಸಿಒ2), ಕಾರ್ಬನ್ ಮೊನಾಕ್ಸೖಡ್(ಸಿಒ), ಪಿಎಂ10, ಅಲ್ಯುಮೀನಿಯಂ, ಮ್ಯಾಂಗನೀಸ್, ಕ್ಯಾಡ್​ವಿುೕಯಂ ಮುಂತಾದ ಲೋಹಗಳ ಸಣ್ಣ ಕಣಗಳು ಗಾಳಿಯನ್ನು ಸೇರಿಕೊಳ್ಳುತ್ತಿದ್ದು, ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತವೆ.

ಎಸ್​ಒ2: ಹೆಚ್ಚಿನ ಪ್ರಮಾಣದಲ್ಲಿ ಎಸ್​ಒ2 ಮತ್ತು ಪಿಎಂ10 ಗಾಳಿಯನ್ನು ಸೇರಿಕೊಳ್ಳುವುದು ಅಪಾಯಕಾರಿಯಾಗಿದೆ. ಇದು ಗಾಳಿಯಲ್ಲಿ ಸುಲಭವಾಗಿ ಬೆರೆತುಕೊಳ್ಳಬಹುದಾಗಿದ್ದು, ಶ್ವಾಸಕೋಶಕ್ಕೆ ಸಮಸ್ಯೆ ಉಂಟುಮಾಡುತ್ತದೆ.

ಎನ್​ಒ2: ಇದು ಶ್ವಾಸಕೋಸದಲ್ಲಿ ಸಮಸ್ಯೆಯನ್ನುಂಟು ಮಾಡುವ ರಾಸಾಯನಿಕವಾಗಿದ್ದು, ಎಸ್​ಒ2 ಜತೆ ಸೇರಿದರೆ ಇದರ ಪ್ರಭಾವ ಇನ್ನಷ್ಟು ಅಪಾಯಕಾರಿಯಾಗಿರುತ್ತದೆ. ಇದು ಅಸ್ತಮಾ ರೋಗಿಗಳಲ್ಲಿ ಬ್ರಾಂಕೋಕನ್ಸ್​ಸ್ಟ್ರಿಕ್ಟಿವ್(ಶ್ವಾಸನಾಳಗಳ ಸೋಂಕುಂಟಾಗಿ ಕುಗ್ಗುವಿಕೆ) ಮುಂತಾದ ಸಮಸ್ಯೆಯನ್ನುಂಟು ಮಾಡಬಹುದು. ಇದರಿಂದ ಅಸ್ತಮಾ ರೋಗಿಗಳಲ್ಲಿ ಉಸಿರಾಟದ ಸಮಸ್ಯೆ ಹೆಚ್ಚಾಗುತ್ತದೆ.

ಪಿಎಂ10: ಇದು ಶ್ವಾಸಕೋಶದಾಳಕ್ಕೆ ಇಳಿಯಬಹುದಾಗಿದ್ದು, ಶ್ವಾಸಕೋಶದ ಸಮಸ್ಯೆ ಮತ್ತು ಹೃದಯ ಸಂಬಂಧಿ ರೋಗಗಳಿಂದ ಬಳಲುತ್ತಿರುವ ವಯೋವೃದ್ಧರಿಗೆ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.

ದೆಹಲಿ-ಎನ್​ಸಿಆರ್​ನಲ್ಲಿ ನವೆಂಬರ್ 1ರವರೆಗೆ ಪಟಾಕಿ ಮಾರಾಟ ಮಾಡದಂತೆ ಸುಪ್ರೀಂಕೋರ್ಟ್ ಹೇರಿರುವ ನಿಷೇಧ ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ. ಪಟಾಕಿ ಮಾರಾಟಕ್ಕಾಗಿ ಲೈಸೆನ್ಸ್ ಪಡೆದು ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿರುವ ವ್ಯಾಪಾರಿಗಳು ಚಿಂತಿತರಾಗಿದ್ದರೆ, ಮತ್ತೊಂದೆಡೆ ಪಟಾಕಿಯೇ ಇಲ್ಲದ ದೀಪಾವಳಿ ಎಂಥದ್ದು ಎಂಬ ಪ್ರಶ್ನೆಯೂ ಕೆಲವರಲ್ಲಿ ಕಾಡುತ್ತಿದೆ. ಈ ಆದೇಶ ಇತರ ರಾಜ್ಯಗಳಿಗೂ ವಿಸ್ತರಿಸಲಿದೆಯೇ ಎನ್ನುವ ಜಿಜ್ಞಾಸೆಯೂ ಹುಟ್ಟಿಕೊಂಡಿದೆ. ಈ ಎಲ್ಲ ಬೆಳವಣಿಗೆಗಳ ಸಮಗ್ರ ಮಾಹಿತಿ ಇಲ್ಲಿದೆ.

ದೆಹಲಿಯಲ್ಲಿ ವಾಯುಮಾಲಿನ್ಯ ನಿಯಂತ್ರಿಸುವ ಸಲುವಾಗಿ ಸುಪ್ರೀಂಕೋರ್ಟ್ ರಾಷ್ಟ್ರ ರಾಜಧಾನಿಯಲ್ಲಿ ಪಟಾಕಿ ಮಾರಾಟಕ್ಕೆ ನಿಷೇಧ ಹೇರಿ 2016ರ ನವೆಂಬರ್ 11ರಂದು ಆದೇಶ ಹೊರಡಿಸಿತ್ತು. 2017ರ ಸೆಪ್ಟೆಂಬರ್ 12ರಂದು ಈ ನಿಷೇಧವನ್ನು ತೆರವುಗೊಳಿಸಿತು. ಆದರೆ ಅಕ್ಟೋಬರ್ 9ರ ಆದೇಶದಲ್ಲಿ, ನವೆಂಬರ್ 1ರವರೆಗೂ ಪಟಾಕಿ ಮಾರಾಟ ಮಾಡುವಂತಿಲ್ಲ ಎಂದು ಸೂಚಿಸಿದೆ. ಈ ಬೆಳವಣಿಗೆ ಚರ್ಚೆಗೆ ಗ್ರಾಸವಾಗಿದ್ದು, ಪಟಾಕಿ ಮಾರಾಟಗಾರರು ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ.

ಆನ್​ಲೈನ್ ಖರೀದಿ ಜೋರು: ಸುಪ್ರೀಂಕೋರ್ಟ್ ದೆಹಲಿ-ಎನ್​ಸಿಆರ್​ನಲ್ಲಿ ಪಟಾಕಿ ಮಾರಾಟಕ್ಕೆ ನಿಷೇಧ ಹೇರುತ್ತಿದ್ದಂತೆಯೇ ಆನ್​ಲೈನ್​ನಲ್ಲಿ ಪಟಾಕಿ ಮಾರಾಟ ಜೋರಾಗಿದೆ. ಬೆರಳೆಣಿಕೆಯಷ್ಟು ವೆಬ್​ಸೈಟ್​ಗಳು ಮಾತ್ರ ‘ದೆಹಲಿಯಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶವಿಲ್ಲ’ ಎಂದು ನಮೂದಿಸಿದ್ದರೆ ಉಳಿದೆಲ್ಲ ವೆಬ್​ಸೈಟ್​ಗಳಲ್ಲಿ ಮಾರಾಟ ಜೋರಾಗಿ ಸಾಗಿದೆ. ಇನ್ನು ದೆಹಲಿಯ ಬಿಜೆಪಿ ವಕ್ತಾರ ಪಟಾಕಿ ಸಿಡಿಸುವ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಹರಿನಗರ ಸ್ಲಂನಲ್ಲಿ ನೆಲೆಸಿರುವ ಮಕ್ಕಳಿಗೆ 50 ಸಾವಿರ ರೂ. ಮೌಲ್ಯದ ಪಟಾಕಿಗಳನ್ನು ಕೊಡಿಸುವ ಇಚ್ಛೆ ಇರುವುದಾಗಿ ತಿಳಿಸಿದ್ದಾರೆ. ಅಲ್ಲದೆ ತಮ್ಮ ಈ ನಿರ್ಧಾರ ಸುಪ್ರೀಂಕೋರ್ಟ್ ಆದೇಶಕ್ಕೆ ವಿರುದ್ಧವಾದುದಲ್ಲ. ನ್ಯಾಯಾಲಯ ಪಟಾಕಿ ಮಾರಾಟ ನಿಷೇಧಿಸಿದೆ. ಪಟಾಕಿ ಖರೀದಿ ಮತ್ತು ಸಿಡಿಸುವುದನ್ನು ಬ್ಯಾನ್ ಮಾಡಲಾಗಿಲ್ಲ ಎಂದು ಅವರು ಹೇಳಿದ್ದಾರೆ.

ವೈದ್ಯರಿಂದ ಸ್ವಾಗತ: ದೆಹಲಿಯಲ್ಲಿ ಪಟಾಕಿ ಮಾರಾಟ ನಿಷೇಧ ಕ್ರಮವನ್ನು ವೈದ್ಯರು ಮತ್ತು ಪರಿಸರ ತಜ್ಞರು ಸ್ವಾಗತಿಸಿದ್ದಾರೆ. ಇದರಿಂದ ದೆಹಲಿಯಲ್ಲಿನ ವಾಯುಮಾಲಿನ್ಯ ಕೊಂಚ ಇಳಿಕೆಯಾಗಬಹುದು. ಮತ್ತು ಆರೋಗ್ಯ ಸಮಸ್ಯೆಗಳೂ ನಿಯಂತ್ರಣಕ್ಕೆ ಬರಲಿದೆ ಎಂದು ಹೇಳಿದ್ದಾರೆ. ಪಟಾಕಿ ಮಾತ್ರವಲ್ಲದೆ ವಾಯುಮಾಲಿನ್ಯಕ್ಕೆ ಕಾರಣವಾಗಿರುವ ಇತರ ಅಂಶಗಳ ಬಗ್ಗೆಯೂ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆಯೆಂದು ಅಭಿಪ್ರಾಯಪಟ್ಟಿದ್ದಾರೆ.

400 ಮಳಿಗೆಗಳ ಲೈಸೆನ್ಸ್ ರದ್ದು

ಸುಪ್ರೀಂಕೋರ್ಟ್ ಆದೇಶ ಹೊರಬಿದ್ದ ಮರುದಿನವೇ (ಅ.10) 400 ಪಟಾಕಿ ಮಳಿಗೆಗಳ ಲೈಸೆನ್ಸ್ ರದ್ದುಗೊಳಿಸಲಾಗಿದೆ. ಉಳಿದವರಿಗೂ ನೋಟಿಸ್ ನೀಡಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಮತ್ತೊಂದೆಡೆ ದೆಹಲಿ ಪಾಲಿಕೆ ಸದಸ್ಯರು ಸುಪ್ರೀಂ ಆದೇಶವನ್ನು ಬೆಂಬಲಿಸಿದ್ದಾರೆ. ಅಲ್ಲದೆ ಪಟಾಕಿಯಿಂದ ಪರಿಸರದ ಮೇಲಾಗುತ್ತಿರುವ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ.

ಪರ-ವಿರೋಧ ಚರ್ಚೆ

ದೆಹಲಿಯಲ್ಲಿ ಪಟಾಕಿ ಮಾರಾಟಕ್ಕೆ ನಿಷೇಧ ವಿಧಿಸಿರುವ ಸುಪ್ರೀಂಕೋರ್ಟ್ ನಿರ್ಧಾರಕ್ಕೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಬಿಜೆಪಿ ಈ ವಿಚಾರದಲ್ಲಿ ಇಬ್ಬಗೆ ನಿಲುವು ಹೊಂದಿದ್ದು, ಕೆಲ ನಾಯಕರು ಪರವಾದ ಅಭಿಪ್ರಾಯ ವ್ಯಕ್ತಪಡಿಸಿದರೆ ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಕೇಂದ್ರ ಪರಿಸರ ಸಚಿವ ಹರ್ಷವರ್ಧನ್ ಸುಪ್ರೀಂಕೋರ್ಟ್ ಆದೇಶವನ್ನು ಪ್ರಶಂಸಿಸಿ ಟ್ವೀಟ್ ಮಾಡಿದ್ದರಾದರೂ ಬಿಜೆಪಿ ಬೆಂಬಲಿಗರಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆ ತೆಗೆದು ಹಾಕಿದ್ದಾರೆ. ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ನಿಷೇಧವನ್ನು ಬೆಂಬಲಿಸಿದ್ದು, ‘ಶಬ್ದ ಮತ್ತು ಹೊಗೆ ರಹಿತ ದೀಪಾವಳಿ ಆಚರಿಸಲಿರುವ ಬಗ್ಗೆ ಸಂತೋಷವಾಗುತ್ತಿದೆ. ಪಟಾಕಿ ಉದ್ಯಮಕ್ಕೆ ತೊಂದರೆಯಾಗುತ್ತದೆ ನಿಜ, ಆದರೆ ಬೆಲೆ ತೆರದೆ ಉತ್ತಮ ಆರೋಗ್ಯ ಪಡೆಯಲು ಸಾಧ್ಯವಿಲ್ಲವಲ್ಲ’ ಎಂದಿದ್ದಾರೆ.

ತ್ರಿಪುರಾ ಗವರ್ನರ್ ತಥಾಗತ್ ರಾಯ್ ನಿಷೇಧವನ್ನು ಕಟುವಾಗಿ ಖಂಡಿಸಿದ್ದು, ‘ಅಂದು ದಹಿ ಹಂಡಿ, ಇಂದು ಪಟಾಕಿ. ಯಾರಿಗೆ ಗೊತ್ತು, ಅವಾರ್ಡ್ ವಾಪಸಿ ಗ್ಯಾಂಗ್ ಹಿಂದು ಸಂಪ್ರದಾಯದಂತೆ ಚಿತೆ ಹೊತ್ತಿಸಿ ಅಂತ್ಯಸಂಸ್ಕಾರ ಮಾಡುವುದರಿಂದಲೂ ಮಾಲಿನ್ಯವಾಗುತ್ತದೆ ಎಂದು ಹೇಳಬಹುದೇನೋ’ ಎಂದು ವ್ಯಂಗ್ಯವಾಡಿದ್ದಾರೆ. ಇನ್ನು ನಟಿ ಅನುಷ್ಕಾ ಶರ್ಮ ಶಬ್ದರಹಿತ ದೀಪಾವಳಿಗೆ ಆಗ್ರಹಿಸಿದರೆ, ಹಾಸ್ಯ ಕಲಾವಿದ ವೀರ್​ದಾಸ್ ಮಕ್ಕಳು ಆರೋಗ್ಯಪೂರ್ಣ ದೀಪಾವಳಿ ಆಚರಿಸಲಿದ್ದಾರೆಂಬ ಹೆಮ್ಮೆಯಿದೆ ಎಂದಿದ್ದಾರೆ.

ಚೇತನ್ ಭಗತ್ ತೀಕ್ಷ್ಣ ಪ್ರತಿಕ್ರಿಯೆ

‘ಪಟಾಕಿ ಮಾರಾಟವನ್ನು ನಿಯಂತ್ರಿಸಬಹುದು. ಆದರೆ ನಿಷೇಧ ಎಷ್ಟು ಸರಿ? ಪಟಾಕಿಯೇ ಇಲ್ಲದ ದೀಪಾವಳಿಯನ್ನು ಮಕ್ಕಳು ಊಹಿಸಿಕೊಳ್ಳುವುದಾದರೂ ಸಾಧ್ಯವೇ?’ ಎಂದಿದ್ದಾರೆ. ‘ದೀಪಾವಳಿ ಸಂದರ್ಭದಲ್ಲಿ ಪಟಾಕಿ ನಿಷೇಧಿಸಿದ್ದು ಕ್ರಿಸ್​ವುಸ್​ನಲ್ಲಿ ಕ್ರಿಸ್​ವುಸ್ ಟ್ರೀ ಮತ್ತು ಬಕ್ರೀದ್​ನಲ್ಲಿ ಆಡನ್ನೇ ನಿಷೇಧಿಸಿ ದಂತೆ. ನಮ್ಮ ಸಂಪ್ರದಾಯಗಳಿಗೂ ಗೌರವ ಕೊಡಿ. ಒಂದು ವೇಳೆ ವಾಯುಮಾಲಿನ್ಯ ಹತೋಟಿಗೆ ತರುವ ಉದ್ದೇಶದಿಂದಲೇ ಈ ಕ್ರಮ ಕೈಗೊಂಡಿದ್ದಲ್ಲಿ ಮೊಹರಂ ಸಂದರ್ಭದಲ್ಲಿ ರಕ್ತಪಾತ ತಡೆಯುವ ಸಲುವಾಗಿ ಆಡಿನ ಬಲಿಯನ್ನೂ ನಿಷೇಧಿಸಬೇಕು’ ಎಂದು ಲೇಖಕ ಚೇತನ್ ಭಗತ್ ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.

ಶುಕ್ರನೀತಿಯಲ್ಲಿದೆ ಸಿಡಿಮದ್ದು ತಯಾರಿಕೆ ರಹಸ್ಯ!

ವಾಯುಮಾಲಿನ್ಯದ ಕಾರಣ ನೀಡಿ ಸುಪ್ರೀಂಕೋರ್ಟ್ ದೀಪಾವಳಿ ಸಂದರ್ಭ ದೆಹಲಿಯಲ್ಲಿ ಪಟಾಕಿ ಮಾರಾಟಕ್ಕೆ ನಿಷೇಧ ಹೇರಿ ಬೆನ್ನಲ್ಲೇ ಪರ-ವಿರೋಧ ಚರ್ಚೆಗಳು ತಾರಕಕ್ಕೇರಿದೆ. ಪಟಾಕಿ ಆವಿಷ್ಕಾರ ಮಾಡಿದವರು ಚೀನೀಯರು; ಹೀಗಾಗಿ ನಿಷೇಧದಿಂದಾಗಿ ಭಾರತೀಯರು ಬೇಸರಿಸಬೇಕಾದ ಪ್ರಮೇಯವೇನಿಲ್ಲ ಎಂಬುದು ಕೆಲವರ ಸಾಂತ್ವನ. ಆದರೆ ಪ್ರಾಚೀನ ಭಾರತದ ಅನೇಕ ಗ್ರಂಥಗಳಲ್ಲಿ ಸಿಡಿಮದ್ದು (ಗನ್ ಪೌಡರ್) ತಯಾರಿಕೆ ಉಲ್ಲೇಖವಿದೆ ಎಂದು ಈ ವಾದಕ್ಕೆ ತಿರುಗೇಟು ನೀಡಲಾಗಿದೆ. ದೈತ್ಯರ ಗುರು ಶುಕ್ರಾಚಾರ್ಯ ವಿರಚಿತ ‘ಶುಕ್ರ ನೀತಿ’ಯಲ್ಲಿ ಸಸ್ಯಗಳಿಂದ ಇದ್ದಿಲು ತಯಾರಿಸಿ ನಂತರ ಸಿಡಿಮದ್ದಾಗಿ ಪರಿವರ್ತಿಸುವ ಬಗೆಯನ್ನು ವಿವರಿಸಲಾಗಿದೆ.

ಶುಕ್ರ ನೀತಿ ಹೇಳುವುದೇನು?: ಭಾರತದಲ್ಲಿ ಬೆಂಕಿ ಉಗುಳುವ ಶಸ್ತ್ರಗಳ ಬಳಕೆಯಿತ್ತು ಎಂದು ಶುಕ್ರನೀತಿಯಿಂದಲೇ ಮೊದಲ ಉಲ್ಲೇಖ ಸಿಗುತ್ತದೆ. ಬ್ರಹ್ಮನಿಂದ ರಚಿತವಾದ 1 ಲಕ್ಷ ಶ್ಲೋಕಗಳ ಕಟ್ಟಳೆಯನ್ನು ಶುಕ್ರಚಾರ್ಯರು 22 ಸಾವಿರಕ್ಕೆ ಇಳಿಸಿದರು ಎಂದು ಹೇಳಲಾಗುತ್ತದೆ. 5 ಭಾಗಗಳಷ್ಟು ಸಾಲ್ಟ್​ಪೆಟ್ರೆಗೆ (ಪೊಟಾಷಿಯಮ್ ನೈಟ್ರೇಟ್) 1 ಭಾಗ ತವರ (ಝಿಂಕ್ ಪೌಡರ್) ಮತ್ತು 1 ಭಾಗ ಇದ್ದಿಲು ಮಿಶ್ರಣ ಮಾಡಲಾಗುತ್ತಿತ್ತು. ಈ ಪುಡಿಗೆ ರಸೋನಾ ರಸವನ್ನು ಸೇರಿಸಿ ತೇವಾಂಶ ಆವಿಯಾಗುವವರೆಗೂ ಒಣಗಿಸಿ ನಂತರ ಸಕ್ಕರೆಯಂಥ ಸಿಡಿಮದ್ದು ಪುಡಿ ಸಿದ್ಧಗೊಳಿಸಲಾಗುತ್ತಿತ್ತು. ಈ ರೀತಿ ಪ್ರಾಚೀನ ಕಾಲದಲ್ಲಿಯೂ ಸಿಡಿಮದ್ದನ್ನು ಅನೇಕ ಸ್ಪೋಟಕಗಳಿಗೆ ಬಳಸುವ ಅಭ್ಯಾಸವಿತ್ತು ಎಂದು ಗ್ರಂಥ ಹೇಳುತ್ತದೆ. ಜತೆಗೆ ಅರ್ಕಾ, ಸ್ನುಹಿ ಮತ್ತು ಇತರೆ ಸಮಾನ ಗುಣಲಕ್ಷಣದ ಸಸ್ಯಗಳಿಂದ ಇದ್ದಿಲನ್ನು ತಯಾರಿಸಲಾಗುತ್ತಿತ್ತು. ಹೊಗೆ ಆಯುಧದಿಂದ ಹೊರಬಾರದಂತೆ ಈ ಇದ್ದಿಲು ಮಿಶ್ರಣ ನಿಯಂತ್ರಿಸುತ್ತದೆ ಎಂದು ಕೂಡ ಶುಕ್ರನೀತಿ ಉಲ್ಲೇಖಿಸುತ್ತದೆ.

ಅರ್ಜುನನ ಮೊಮ್ಮಗ ಜನಮೇಜಯನಿಗೆ ಮಹಾಭಾರತ ಮತ್ತು ಭಾಗವತ ಉಪದೇಶಿಸಿದ ವೈಶಂಪಾಯನರಿಂದ ವಿರಚಿತ ‘ನೀತಿ ಪ್ರಕಾಶಿಕೆ’ ಗ್ರಂಥವೂ ಸಿಡಿಮದ್ದು ತಯಾರಿಕೆ ಕುರಿತು ತಿಳಿಸುತ್ತದೆ. ಅಷ್ಟಲ್ಲದೇ ರಾಜಲಕ್ಷ್ಮೀ ನಾರಾಯಣ ಹೃದಯ ಶ್ಲೋಕದಲ್ಲಿ ಲಕ್ಷ್ಮೀ ಪೂಜೆಯಲ್ಲಿ ಪಟಾಕಿ ಸುಡುವ ಉಲ್ಲೇಖವಿರುವುದನ್ನು ಧಾರ್ವಿುಕ ತಜ್ಞರು ಪ್ರತಿಪಾದಿಸಿದ್ದಾರೆ.

ಮುಳುಗುವ ದೋಣಿಯಾದ ಉದ್ಯಮ?

ದೇಶಾದ್ಯಂತ ಸರಬರಾಜಾಗುವ ಶೇಕಡ 90 ರಷ್ಟು ಪಟಾಕಿಗಳು ತಯಾರಾಗುವುದು ತಮಿಳುನಾಡಿನ ಶಿವಕಾಶಿಯಲ್ಲಿ. ಆದರೆ ದೆಹಲಿಯಲ್ಲಿ ವಿಧಿಸಲಾಗಿರುವ ನಿಷೇಧ ಶಿವಕಾಶಿಯ ಪಟಾಕಿ ಉದ್ಯಮದ ಭವಿಷ್ಯವನ್ನೇ ಬುಡಮೇಲು ಮಾಡಲಿದೆಯೇ ಎನ್ನುವ ಅನುಮಾನ ಹುಟ್ಟಿಕೊಂಡಿದೆ.

ಶಿವಕಾಶಿಯಲ್ಲಿ ತಯಾರಾಗುವ ಶೇ.20-25ರಷ್ಟು ಪಟಾಕಿಗಳಿಗೆ ದೆಹಲಿಯೇ ಮಾರುಕಟ್ಟೆ. 2016ರ ನವೆಂಬರ್​ನಲ್ಲಿ ನಿಷೇಧ ಹೇರಿದ್ದರಿಂದ ಶಿವಕಾಶಿಯಿಂದ ದೆಹಲಿ ಮಾರುಕಟ್ಟೆಗೆ ಸರಬರಾಜಾಗಬೇಕಿದ್ದ 25 ಕೋಟಿ ರೂ. ಮೌಲ್ಯದ ಪಟಾಕಿಗಳು ಅಲ್ಲೇ ಉಳಿದಿದ್ದವು. ದೆಹಲಿ-ಎನ್​ಸಿಆರ್​ಗೆ ಪಟಾಕಿ ಸರಬರಾಜು ಮಾಡುವ ಡೀಲರ್​ಗಳು ತಮ್ಮ ಗೋದಾಮುಗಳಲ್ಲೇ 50 ಲಕ್ಷ ಕಿಲೋಗ್ರಾಂ ತೂಕದ ಪಟಾಕಿಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದರು. ಕಳೆದ ಸೆಪ್ಟೆಂಬರ್ 12ರಂದು ನಿಷೇಧ ತೆರವುಗೊಳಿಸಿದ್ದರಿಂದ ಡೀಲರ್​ಗಳಿಗೆ ದಾಸ್ತಾನು ಖಾಲಿ ಮಾಡಲು ಒಂದು ಅವಕಾಶ ಸಿಕ್ಕಿತ್ತು.

ದೆಹಲಿಯೊಂದರಲ್ಲೇ 450 ಶಾಶ್ವತ ಲೈಸೆನ್ಸ್ ಮತ್ತು 1,000 ತಾತ್ಕಾಲಿಕ ಲೈಸೆನ್ಸ್ ಹೊಂದಿರುವ ಮಳಿಗೆದಾರರಿದ್ದು, ಪಟಾಕಿಯ ಬಹುದೊಡ್ಡ ಮಾರುಕಟ್ಟೆ ಇದೆ. ಆದರೆ ಸುಪ್ರೀಂಕೋರ್ಟ್ ಮತ್ತೆ ಪಟಾಕಿ ಮಾರಾಟಕ್ಕೆ ನಿಷೇಧ ವಿಧಿಸಿದೆ. ಇದರಿಂದ ಅದಾಗಲೇ ಪಟಾಕಿಗಳನ್ನು ಸಂಗ್ರಹಿಸಿಟ್ಟುಕೊಂಡಿರುವ ಡೀಲರ್​ಗಳು ಸಂಕಷ್ಟಕ್ಕೀಡಾಗಿದ್ದಾರೆ. ಮಾರಾಟಗಾರರಿಗೆ ಪಟಾಕಿ ಮಾರುವಂತೆಯೂ ಇಲ್ಲ, ಶಿವಕಾಶಿಗೆ ಹಿಂತಿರುಗಿಸು ವಂತೆಯೂ ಇಲ್ಲ ಎನ್ನುವ ಪರಿಸ್ಥಿತಿ ನಿರ್ವಣವಾಗಿದೆ.

ಒಂದು ಅಂದಾಜಿನ ಪ್ರಕಾರ, ಶಿವಕಾಶಿಯ ಸಿಡಿಮದ್ದು ತಯಾರಕರಿಗೆ 1,000 ಕೋಟಿ ರೂ.ಗಳಷ್ಟು ನಷ್ಟವಾಗಲಿದ್ದು, ಬೇರೆ ರಾಜ್ಯಗಳೂ ಇಂತಹದ್ದೇ ಕ್ರಮ ಕೈಗೊಂಡರೆ ಅವರ ಪರಿಸ್ಥಿತಿ ಏನು ಎಂದು ಆತಂಕಕ್ಕೊಳಗಾಗಿದ್ದಾರೆ. ಅಲ್ಲಿನ ಸಿಡಿಮದ್ದು ತಯಾರಕರೇ ಹೇಳುವಂತೆ ದೀಪಾವಳಿ ಸಮಯದಲ್ಲಿಯೇ ಹೆಚ್ಚಿನ ಪ್ರಮಾಣದ ಪಟಾಕಿ ಮಾರಾಟವಾಗುತ್ತದೆ. ಪಟಾಕಿಗಳು ದೆಹಲಿಯಲ್ಲಿ ಮಾಲಿನ್ಯ ಹೆಚ್ಚಿಸುತ್ತವೆ ಎಂದಾದರೂ ಅದು ಕೇವಲ 1 ವಾರಕ್ಕೆ ಸೀಮಿತ. ಆದರೆ ವಾಹನಗಳ ಹೊಗೆಯಿಂದ ಉಂಟಾಗುತ್ತಿರುವ ಮಾಲಿನ್ಯ ವರ್ಷದ 365 ದಿನವೂ, ದಿನದ 24 ಗಂಟೆಯೂ ನಿರಂತರವಾಗಿರುತ್ತದೆ. ಇದಕ್ಕೆ ಏನು ಕ್ರಮ ಕೈಗೊಂಡಿದೆ ಎಂದು ತಯಾರಕರು ಪ್ರಶ್ನಿಸುವಂತಾಗಿದೆ. ಶಿವಕಾಶಿಯ ಪಟಾಕಿ ಉದ್ಯಮ ವಾರ್ಷಿಕ 7000 ಕೋಟಿ ರೂ. ವಹಿವಾಟು ನಡೆಸುತ್ತಿದೆ. ಪಟಾಕಿ ತಯಾರಿಕಾ ಘಟಕಗಳಲ್ಲಿ 3 ಲಕ್ಷ ಕಾರ್ವಿುಕರು ಕಾರ್ಯನಿರ್ವಹಿಸುತ್ತಿದ್ದರೆ, ಪಟಾಕಿಗಳ ಪ್ಯಾಕೇಜಿಂಗ್, ಪ್ರಿಂಟಿಂಗ್, ಪೇಪರ್ ರೋಲಿಂಗ್ ಮತ್ತು ರವಾನಿಸುವಿಕೆ ಕ್ಷೇತ್ರದಲ್ಲಿ 5 ಲಕ್ಷ ಜನರು ಕಾರ್ಯನಿರ್ವಹಿಸುತ್ತಿದ್ದಾರೆ. ಪಟಾಕಿಯ ಬೇಡಿಕೆ ಇದೇ ರೀತಿ ಕುಸಿಯುತ್ತ ಸಾಗಿದಲ್ಲಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಳ್ಳುವ ಭೀತಿ ಇದೆ. ಮತ್ತು ಸಾವಿರಾರು ಕುಟುಂಬಗಳು ಬೀದಿಗೆ ಬೀಳಲಿವೆ.

ಗಾಯದ ಮೇಲೆ ಬರೆ

ಶಿವಕಾಶಿಯ ಪಟಾಕಿ ಉದ್ಯಮ ಕಳೆದೊಂದು ವರ್ಷದಿಂದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಸರ್ಕಾರ 500 ಮತ್ತು 1,000 ರೂ. ನೋಟುಗಳನ್ನು ನಿಷೇಧಿಸಿದು, ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು. ಪ್ರತಿವರ್ಷ ದೀಪಾವಳಿ ಕಳೆಯುತ್ತಿದ್ದಂತೆಯೇ ಡೀಲರ್​ಗಳು ಮುಂಗಡ ಹಣ ಪಾವತಿಸಿ ಮುಂದಿನ ವರ್ಷಕ್ಕೆ ಎಷ್ಟು ಪಟಾಕಿ ಬೇಕೆಂದು ಆರ್ಡರ್ ನೀಡುತ್ತಾರೆ. ಆದರೆ ಈ ಬಾರಿ ನೋಟ್ ಬ್ಯಾನ್​ನಿಂದ ಮುಂಗಡ ಪಾವತಿ ಪ್ರಮಾಣ ಕಡಿಮೆಯಾಗಿತ್ತು. ಇದಾದ ಬೆನ್ನಲ್ಲೇ ಸರ್ಕಾರ ಪಟಾಕಿಗಳ ಮೇಲೆ ಶೇ.28ರಷ್ಟು ಜಿಎಸ್​ಟಿ ವಿಧಿಸಿತು. ಇದರಿಂದ ಹಲವು ಫ್ಯಾಕ್ಟರಿಗಳು ಮುಚ್ಚಿಹೋದವು. ಮತ್ತೊಂದೆಡೆ ತಮಿಳುನಾಡಿನಲ್ಲಿ ಮಳೆ ಕೊರತೆಯಿಂದ ರೈತರ ಆದಾಯದಲ್ಲಿ ತೀವ್ರ ಇಳಿಕೆಯಾಗಿದ್ದು, ಸ್ಥಳೀಯ ಮಾರುಕಟ್ಟೆಯಿಂದ ಪಟಾಕಿಗಳಿಗೆ ಬೇಡಿಕೆಯೇ ಇಲ್ಲದಂತಾಗಿದೆ. ಜತೆಗೆ ಚೀನಾದಲ್ಲಿ ತಯಾರಾಗುವ ಪಟಾಕಿಗಳ ಅಕ್ರಮ ಸಾಗಾಟ ಏರಿಕೆಯಾಗಿರುವುದರಿಂದ ಇಲ್ಲಿನ ಪಟಾಕಿ ಉದ್ಯಮ ಪ್ರಾಮುಖ್ಯ ಕಳೆದುಕೊಳ್ಳುತ್ತಿದೆ.

ಮಾಲಿನ್ಯ ಪ್ರಮಾಣ

ಕಳೆದ ವರ್ಷ ದೀಪಾವಳಿ ಸಂದರ್ಭದಲ್ಲಿ ದೆಹಲಿ ಎನ್​ಸಿಆರ್​ನ ಮಾಲಿನ್ಯ ಪ್ರಮಾಣ ಏರಿಕೆಯಾಗಿತ್ತು. ಪಂಜಾಬ್ ಮತ್ತು ಹರಿಯಾಣದಲ್ಲಿ ಕಳೆಬೆಳೆಗಳಿಗೆ ಹಾಕಲಾಗಿದ್ದ ಬೆಂಕಿಯೇ ಮಾಲಿನ್ಯ ಹೆಚ್ಚಳಕ್ಕೆ ಪ್ರಮುಖ ಕಾರಣ ಎನ್ನಲಾಗಿತ್ತು.

ಚೀನಾ ವಸ್ತುಗಳಿಗೆ ತಗ್ಗಿದ ಬೇಡಿಕೆ

ಅಸೋಚಾಮ್ ಅಕ್ಟೋಬರ್ 9ರಂದು ಬಿಡುಗಡೆ ಮಾಡಿರುವ ವರದಿಯಂತೆ, ಚೀನಾದಿಂದ ಭಾರತಕ್ಕೆ ಆಮದಾಗಿರುವ ವಸ್ತುಗಳ ಬೇಡಿಕೆ ಶೇ.40-45ರಷ್ಟು ಕುಸಿದಿದೆ. ಅಲಂಕಾರಿಕ ದೀಪಗಳು, ಲ್ಯಾಂಪ್ ಮತ್ತು ಉಡುಗೊರೆ ವಸ್ತುಗಳೂ ಇದರಲ್ಲಿ ಸೇರಿವೆ. ಜನರು ಶಿವಕಾಶಿಯಲ್ಲಿ ತಯಾರಾದ ಪಟಾಕಿಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದು, ಚೀನಾ ಪಟಾಕಿ ಎಂದು ತಿಳಿದ ಕೂಡಲೇ ನಿರಾಕರಿಸುತ್ತಾರೆ. ಇನ್ನು ಚೀನಾದಲ್ಲಿ ತಯಾರಾಗುವ ಎಲ್​ಸಿಡಿ ಮತ್ತು ಮೊಬೈಲ್ ಫೋನ್​ಗಳಂತಹ ಎಲೆಕ್ಟ್ರಾನಿಕ್ ವಸ್ತುಗಳ ಬೇಡಿಕೆಯೂ ಶೇ.15-20ರಷ್ಟು ಕುಸಿದಿದೆ.

ಮಹಾ ನಿಷೇಧದ ಭೀತಿ?

ದೆಹಲಿಯಲ್ಲಿ ಪಟಾಕಿ ಮಾರಾಟ ನಿಷೇಧಿಸಿದ ಬೆನ್ನಲ್ಲೇ ದೇಶದ ಬೇರೆ ರಾಜ್ಯಗಳಿಗೂ ಇದನ್ನು ವಿಸ್ತರಿಸಲಾಗುವುದೇ ಎನ್ನುವ ಅನುಮಾನ ಹುಟ್ಟಿಕೊಂಡಿದೆ. ಇದೀಗ ಮಹಾರಾಷ್ಟ್ರ ಸರ್ಕಾರ ರಾಜ್ಯದ ಜನತೆಯಲ್ಲಿ ಪಟಾಕಿ ರಹಿತ ದೀಪಾವಳಿ ಆಚರಿಸುವಂತೆ ಮನವಿ ಮಾಡಿದೆ. ಮಹಾರಾಷ್ಟ್ರದ ಪರಿಸರ ಸಚಿವ ರಾಮದಾಸ್ ಕದಂ ‘ಪರಿಸರದ ಬಗ್ಗೆ ಯೋಚಿಸಿ ಪಟಾಕಿಗಳ ಬಳಕೆ ನಿಲ್ಲಿಸಿ’ ಎಂದು ಮನವಿ ಮಾಡಿದ್ದಾರೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೂಡ ವಿದ್ಯಾರ್ಥಿಗಳು ಪಟಾಕಿರಹಿತ ದೀಪಾವಳಿ ಆಚರಿಸುವಂತೆ ಮನವಿ ಮಾಡಿದ್ದಾರೆ. ಕಾಂಗ್ರೆಸ್ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ‘ದೀಪಾವಳಿ ಸಮಯದಲ್ಲಿ ಪಟಾಕಿ ಸಿಡಿಸದೆ ಇನ್ಯಾವಾಗ ಪಟಾಕಿ ಸಿಡಿಸಬೇಕು? ಮಹಾರಾಷ್ಟ್ರದಲ್ಲಿ ಇಂತಹದ್ದೊಂದು ನಿಷೇಧ ಹೇರಲು ಸಾಧ್ಯವಿಲ್ಲ. ಅದಕ್ಕೆ ಅವಕಾಶ ನೀಡುವುದೂ ಇಲ್ಲ’ ಎಂದಿದೆ.

ರಾಜಸ್ಥಾನಕ್ಕೂ ಭಯ!

ಜೈಪುರದಲ್ಲಿರುವ ಮಾರಾಟಗಾರರಿಗೆ ಅಲ್ಲೂ ಪಟಾಕಿ ಮಾರಾಟ ನಿಷೇಧಿಸಿದರೆ… ಎನ್ನುವ ಆತಂಕ ಎದುರಾಗಿದೆ. ರಾಜಸ್ಥಾನದ ಅಲ್ವಾರ್ ಮತ್ತು ಭಾರತ್​ಪುರ್ ಜಿಲ್ಲೆಗಳು ಎನ್​ಸಿಆರ್ ಅಡಿಯಲ್ಲಿ ಬರುವುದರಿಂದ ಆ ಜಿಲ್ಲೆಗಳಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶವಿಲ್ಲ.

ಕೋರ್ಟ್ ಮೆಟ್ಟಿಲೇರಿದ ವರ್ತಕರು

ಸುಪ್ರೀಂ ನೀಡಿರುವ ಆದೇಶದ ಮರುಪರಿಶೀಲನೆಗೆ ಕೋರಿ ದೆಹಲಿಯ ವರ್ತಕರ ತಂಡ ಬುಧವಾರ ಮೇಲ್ಮನವಿ ಸಲ್ಲಿಸಿದೆ. ಸೆಪ್ಟೆಂಬರ್ 12ರಂದು ಪಟಾಕಿ ಮಾರಾಟದ ಮೇಲಿನ ನಿಷೇಧ ತೆರವುಗೊಳಿಸಿದ್ದರಿಂದ ಲೈಸೆನ್ಸ್ ನವೀಕರಣ ಮಾಡಲಾಗಿತ್ತು. ಅಲ್ಲದೆ ದೀಪಾವಳಿ ಸಂದರ್ಭದಲ್ಲಿ ಮಾರಾಟ ಮಾಡಲೆಂದು ಭಾರಿ ಪ್ರಮಾಣದ ಪಟಾಕಿಗಳನ್ನು ಖರೀದಿಸಲಾಗಿದ್ದು, ಸುಪ್ರೀಂನ ಈ ಆದೇಶದಿಂದ ತಮಗೆ ಭಾರಿ ನಷ್ಟವಾಗುವುದೆಂದು ಮನವಿಯಲ್ಲಿ ನಮೂದಿಸಲಾಗಿದೆ. ಈ ಬಗ್ಗೆ ಆದೇಶ ನೀಡಿರುವ ನ್ಯಾಯಾಧೀಶರೊಂದಿಗೆೆ ಚರ್ಚೆ ನಡೆಸಿ ಶೀಘ್ರವೇ ವಿಚಾರಣೆ ನಡೆಸಲಾಗುವುದೆಂದು ನ್ಯಾಯಾಧೀಶ ರಂಜನ್ ಗೊಗೋಯ್, ಸಪ್ರೆ ಮತ್ತು ನವೀನ್ ಸಿನ್ಹಾರನ್ನೊಳಗೊಂಡ ನ್ಯಾಯಪೀಠ ಭರವಸೆ ನೀಡಿದೆ.

ಪಟಾಕಿಗೂ ಇದೆ ನಿಯಮ

1884ರ ಸ್ಪೋಟಕ ಕಾಯ್ದೆ ಮತ್ತು 2008 ಸ್ಪೋಟಕ ನಿಯಮ ದಡಿ ಪಟಾಕಿಗಳ ಪ್ರದರ್ಶನ, ಸಂಗ್ರಹ, ಸಂಗ್ರಹ ಪ್ರದೇಶ ಮುಂತಾದವುಗಳ ಬಗ್ಗೆ ನಿಯಮಗಳನ್ನು ರೂಪಿಸಲಾಗಿದೆ. ಇದರಲ್ಲಿ ಪಟಾಕಿಯ ಸುತ್ತಮುತ್ತ ಬೆಂಕಿ ಕಿಡಿಗಳು ಉಂಟಾಗುವಂತಹ ವಸ್ತು ಇರಬಾರದು. ಬೆಂಕಿ ನಂದಿಸುವ ವಸ್ತುಗಳು, ನೀರು, ಬೆಂಕಿ ಅವಘಡ ಉಂಟಾದಲ್ಲಿ ತುರ್ತನಿರ್ಗಮನ ಬಾಗಿಲುಗಳು ಮುಂತಾದ ನಿಯಮಗಳನ್ನೂ ನಮೂದಿಸಲಾಗಿದೆ.

1999ರಲ್ಲಿ ಕೇಂದ್ರ ಸರ್ಕಾರ 1986ರ ಪರಿಸರ ಸಂರಕ್ಷಣಾ ಕಾಯ್ದೆಯಡಿ ಪಟಾಕಿಗಳ ಶಬ್ದ ನಿಯಂತ್ರಣಕ್ಕೆ ಸಂಬಂಧಿಸಿದ ನಿಯಮ ರೂಪಿಸಿತ್ತು. ರಾತ್ರಿ 10ರಿಂದ ಬೆಳಗ್ಗೆ 6 ಗಂಟೆವರಗೆ ಪಟಾಕಿ ಬಳಕೆ ನಿಷೇಧಿಸಿತ್ತು. 2008ರ ನಿಯಮದಲ್ಲೂ ಪಟಾಕಿಗಳ ಶಬ್ದ ಎಷ್ಟು ತೀವ್ರವಾಗಿರಬಹುದು ಎಂಬುದನ್ನು ಸೂಚಿಸಲಾಗಿದೆ.

ಖಾಸಗಿ ಮತ್ತು ಸಾರ್ವಜನಿಕ ಬಳಕೆಗೆ ಪ್ರತ್ಯೇಕವಾದ ನಿಯಮ ರೂಪಿಸಲಾಗಿದೆ. 2008ರ ಸ್ಪೋಟಕ ನಿಯಮದಂತೆ ಸ್ವ ಬಳಕೆಯ ಉದ್ದೇಶದಿಂದ 100 ಕೆಜಿಯಷ್ಟು ಪಟಾಕಿಗಳನ್ನು ಸಂಗ್ರಹಿಸಲು ಯಾವುದೇ ಪರವಾನಗಿಯ ಅಗತ್ಯವಿರುವುದಿಲ್ಲ. ಆದರೆ ಇದನ್ನು ಮಾರಾಟ ಮಾಡಲು ಅವಕಾಶವಿಲ್ಲ. ಜತೆಗೆ ಖಾಸಗಿ ಬಳಕೆಗಾಗಿ 5 ಕೆಜಿ ಗನ್ ಪೌಡರ್ ಸಂಗ್ರಹಿಸುವುದಕ್ಕೂ ಅವಕಾಶವಿದೆ. ಆದರೆ ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳದಲ್ಲಿ ಇದಕ್ಕೆ ಅವಕಾಶವಿಲ್ಲ. ಆದರೆ ಹೀಗೆ ಸಂಗ್ರಹಿಸಲು ಖರೀದಿಸುವ ಪಟಾಕಿಗಳು ಪರವಾನಗಿ ಹೊಂದಿರುವ ಮಳಿಗೆಗಳಿಂದಲೇ ಖರೀದಿಸಿದ್ದಾಗಿರಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಸಿಡಿಮದ್ದು ಪ್ರದರ್ಶನ ನಡೆಸುವುದಾದರೆ ಕಾರ್ಯಕ್ರಮ ನಡೆಯುವ ಕನಿಷ್ಠ ಏಳು ದಿನಗಳ ಮೊದಲೇ ಲೈಸೆನ್ಸ್ ಪಡೆದುಕೊಂಡಿರಬೇಕು. ಜಾತ್ರೆ, ರಾಮಲೀಲಾ ಮುಂತಾದವು ಇದರಡಿಯಲ್ಲಿ ಬರುತ್ತವೆ. ಆದರೆ ಸುರಕ್ಷತೆಗಾಗಿ ತೆಗೆದುಕೊಳ್ಳುವ ಕ್ರಮಗಳಲ್ಲಿ ಯಾವುದೇ ರಿಯಾಯಿತಿ ನೀಡಲಾಗುವುದಿಲ್ಲ. ಉದಾಹರಣೆಗೆ ಗಂಟೆಗೆ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದ್ದರೆ ಪಟಾಕಿ ಸಿಡಿಸುವಂತಿಲ್ಲ. ಪಟಾಕಿ ಪ್ರದರ್ಶನ ನಡೆಯುವ ಸ್ಥಳದ ನಿಗಾವಹಿಸಬೇಕು. ಪಟಾಕಿ ಪ್ರದರ್ಶನ ನಡೆಸುವ ವ್ಯಕ್ತಿಯ ಸುರಕ್ಷತೆಗೆ ಉಡುಪು, ಕಿವಿ ರಕ್ಷಣಾ ಸಾಧನ, ಸಂರಕ್ಷಣಾ ಗ್ಲಾಸ್ ಇನ್ನಿತರ ಸುರಕ್ಷತಾ ಸಾಧನಗಳಿರಬೇಕು.

15ರಿಂದ 500 ಕೆಜಿಗಳವರೆಗೆ ಪಟಾಕಿ ತಯಾರಿಸಲು ಸ್ಪೋಟಕ ನಿಯಂತ್ರಕರಿಂದ ಪರವಾನಗಿ ಪಡೆದುಕೊಂಡಿರಬೇಕು. ಅದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಪಟಾಕಿ ತಯಾರಿಸುವವರು ಮುಖ್ಯ ಸ್ಪೋಟಕ ನಿಯಂತ್ರಕರಿಂದಲೇ ಅನುಮತಿ ಪಡೆದುಕೊಳ್ಳಬೇಕು. ಪಟಾಕಿ ಮಾರಾಟಕ್ಕೆ ಸಂಬಂಧಿಸಿದ ಪರವಾನಗಿ ಪಡೆಯಲು ಹಲವು ವಿಭಾಗಗಳಿವೆ. 2008ರ ನಿಯಮಗಳಲ್ಲಿ ಪಟಾಕಿ ಮತ್ತು ಸ್ಪೋಟಕಗಳ ವ್ಯಾಖ್ಯಾನಗಳನ್ನೂ ನೀಡಲಾಗಿದೆ. ತಯಾರಕರು, ಸಂಗ್ರಹಕರು, ಪ್ರದರ್ಶನ ಮತ್ತು ಮಾರಾಟಕ್ಕೆ ಸಂಬಂಧಿಸಿದ ಬೇಕು ಬೇಡಗಳ ಪಟ್ಟಿಯನ್ನೂ ಮಾಡಲಾಗಿದೆ.

ಪಟಾಕಿಗಳಲ್ಲಿರಬೇಕಾದ ರಾಸಾಯನಿಕಗಳ ಪ್ರಮಾಣ, ಸುರಕ್ಷತಾ ಕ್ರಮಗಳುಒಂದು ಶೆಡ್​ನಿಂದ ಇನ್ನೊಂದು ಶೆಡ್​ಗೆ ಕನಿಷ್ಠ 3 ಮೀಟರ್ ಅಂತರವಿರಬೇಕು, ಪ್ರದರ್ಶನಾ ಸ್ಥಳಕ್ಕೂ ಶೆಡ್​ಗೂ ನಡುವೆ 50 ಮೀಟರ್ ಅಂತರವಿರಬೇಕು ಮುಂತಾದ ಮಾಹಿತಿಗಳಿವೆ.

ದೆಹಲಿಯಲ್ಲಿ ಪಟಾಕಿ ಮಳಿಗೆ ಆರಂಭಿಸಲು ಪೊಲೀಸರು, ಸ್ಥಳದ ಮಾಲೀಕರು ಮತ್ತು ಅಗ್ನಿಶಾಮಕ ಇಲಾಖೆಯಿಂದ ‘ನೋ ಆಬ್ಜೆಕ್ಷನ್’ ಸರ್ಟಿಫಿಕೇಟ್ ಪಡೆದುಕೊಂಡಿರಬೇಕು.

Leave a Reply

Your email address will not be published. Required fields are marked *

Back To Top