Monday, 18th June 2018  

Vijayavani

ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಚಾರ - ಕೆಲವೇ ಕ್ಷಣಗಳಲ್ಲಿ ಮೋದಿ, ಎಚ್​ಡಿಕೆ ಭೇಟಿ - ಕುತೂಹಲ ಕೆರಳಿಸಿದ ಮಾತುಕತೆ        ಸಮುದ್ರ ತೀರದಲ್ಲಿ ವಿಹಾರಕ್ಕೆ ಹೋದಾಗ ಅನಾಹುತ - ಅಲೆಗಳ ಅಬ್ಬರಕ್ಕೆ ಸಿಲುಕಿ ಇಬ್ಬರು ನೀರುಪಾಲು - ಗೋವಾದಲ್ಲಿ ದುರಂತ        ಶಾಸಕಿ, ಸಚಿವೆ ಮಧ್ಯೆ ಸೇವೆಯ ಸಮರ - ಅಪಾರ್ಥ ಬೇಡವೆಂದ ಲಕ್ಷ್ಮಿ ಹೆಬ್ಬಾಳ್ಕರ್ - ಜಯಮಾಲಾಗೆ ಹೊಗಳಿಕೆ        ಅಧಿಕಾರಕ್ಕೆ ಬಂದು ತಿಂಗಳಾದ್ರೂ ಭರವಸೆ ಈಡೇರಿಲ್ಲ - ಅಪ್ಪ-ಮಗ ರೈತರಿಗೆ ಕೊಟ್ಟ ಭರವಸೆ ಈಡೇರಿಸಿಲ್ಲ - ಬಿಎಸ್​ವೈ ಕಿಡಿ        ರಾಜ್ಯಕ್ಕೆ ಎಚ್​​ಡಿಕೆ ಸಿಎಂ, ನನಗೆ ಸಿದ್ದು ಸಿಎಂ - ಸಚಿವನಾಗಲು ಸಿದ್ದರಾಮಯ್ಯರೇ ಕಾರಣ - ಸಚಿವ ಪುಟ್ಟರಂಗಶೆಟ್ಟಿ        ಪೋಷಕರ ಡಾಟಾ ಲೀಕ್​ ಆರೋಪ - ಬಾಲ್ಡ್​​​ವಿನ್​ ಶಾಲೆ ಮಾನ್ಯತೆ ರದ್ದಿಗೆ ಶಿಫಾರಸು       
Breaking News

ನ.24ರಿಂದ ಮೈಸೂರಲ್ಲಿ ಕನ್ನಡ ನುಡಿ ಜಾತ್ರೆ

Wednesday, 13.09.2017, 3:03 AM       No Comments

ಬೆಂಗಳೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 26 ವರ್ಷಗಳ ನಂತರ ಆಯೋಜನೆಗೊಳ್ಳುತ್ತಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ದಿನಾಂಕ ಪ್ರಕಟವಾಗಿದ್ದು ನ.24ರಿಂದ 26ರವರೆಗೆ ನಡೆಯಲಿದೆ.

ಮೂರು ದಿನಗಳ ಸಾಹಿತ್ಯ ಜಾತ್ರೆಗಾಗಿ ಮೂರು ಸ್ಥಳಗಳನ್ನು ಗುರುತಿಸಲಾಗಿದೆ. ಮೈಸೂರು ಅರಮನೆ ಆವರಣ, ಮಹಾರಾಜ ಕಾಲೇಜು ಮೈದಾನ ಅಥವಾ ವಸ್ತು ಪ್ರದರ್ಶನ ಪ್ರಾಧಿಕಾರದಲ್ಲಿ ಯಾವುದಾದರೂ ಒಂದು ಅಂತಿಮಗೊಳ್ಳಲಿದೆ ಎಂದು ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಮ್ಮೇಳನಾಧ್ಯಕ್ಷರು ನಿಗದಿಯಾಗಿಲ್ಲ: ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಯೋಗ್ಯರಾದವರು ಅನೇಕರಿದ್ದಾರೆ. ಕಾರ್ಯಕಾರಿ ಸಮಿತಿಯಲ್ಲಿ ಒಕ್ಕೊರಲ ನಿರ್ಣಯ ಕೈಗೊಳ್ಳಲಾಗುತ್ತದೆ. ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ ಸ್ವಾಗತ ಸಮಿತಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಮ್ಮೇಳನದ ವಿಚಾರವಾಗಿ ಜನರು ನೀಡುವ ಸಲಹೆಯನ್ನು ಪರಿಗಣಿಸಲಾಗುತ್ತದೆ ಎಂದು ಮನು ಬಳಿಗಾರ್ ಭರವಸೆ ನೀಡಿದರು.

2 ಲಕ್ಷ ಜನ ಸೇರುವ ನಿರೀಕ್ಷೆ: ರಾಯಚೂರಿನಲ್ಲಿ ನಡೆದ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 1.50 ಲಕ್ಷ ಜನ ಸೇರಿದ್ದರು. ಅಚ್ಚುಕಟ್ಟಾಗಿ ಸಮ್ಮೇಳನ ಆಯೋಜಿಸಲಾಗಿತ್ತು. ಮೈಸೂರಿನಲ್ಲಿ ಸುಮಾರು 2 ಲಕ್ಷ ಜನ ಸೇರುವ ನಿರೀಕ್ಷೆ ಹೊಂದಿದ್ದು, ಊಟದ ವ್ಯವಸ್ಥೆಗೆ ಯಾವುದೇ ರೀತಿಯ ಸಮಸ್ಯೆ ಎದುರಾಗದಂತೆ ಯೋಜನೆ ರೂಪಿಸಲಾಗುತ್ತದೆ. ನೀರು ಹಾಗೂ ವಸತಿ ಸಮಸ್ಯೆ ಎದುರಾಗುವುದಿಲ್ಲ ಎಂದು ಮನು ಬಳಿಗಾರ್ ತಿಳಿಸಿದರು.

ಮೈಸೂರು ಜಿಲ್ಲಾ ಕಸಾಪ ಅಧ್ಯಕ್ಷ ಡಾ. ವೈ.ಡಿ. ರಾಜಣ್ಣ, ಕೋಶಾಧ್ಯಕ್ಷ ಮಲ್ಲಿಕಾರ್ಜುನಪ್ಪ, ಮೈಸೂರು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮಡ್ಡಿಕೇರಿ ಗೋಪಾಲ, ನಿಕಟಪೂರ್ವ ಅಧ್ಯಕ್ಷ ಎಂ. ಚಂದ್ರಶೇಖರ್, ಗೌರವಕಾರ್ಯದರ್ಶಿ ಕೆ.ಎಸ್. ನಾಗರಾಜ್, ಸಂಚಾಲಕ ವಸಂತಕುಮಾರ್ ಮತ್ತಿತರಿದ್ದರು.

5 ಜನ ಸದಸ್ಯರ ಸಮಿತಿ ರಚನೆ: ಸಮ್ಮೇಳನದಲ್ಲಿ ನಡೆಯುವ ವಿಚಾರಗೋಷ್ಠಿ, ಕಾರ್ಯಕ್ರಮದ ರೂಪುರೇಷೆಗಳನ್ನು ಮನು ಬಳಿಗಾರ್ ಅಧ್ಯಕ್ಷತೆಯಲ್ಲಿ ಐವರು ಸದಸ್ಯರು ತಯಾರಿಸಲಿದ್ದಾರೆ. ಸಮಿತಿಯಲ್ಲಿ ಡಾ. ಎಚ್.ಎಸ್. ವೆಂಕಟೇಶಮೂರ್ತಿ, ಡಾ. ಕೆ.ವೈ. ನಾರಾಯಣಸ್ವಾಮಿ, ಪ್ರೊ. ಎಂ. ಎಸ್. ಆಶಾದೇವಿ, ಕಾ.ತ. ಚಿಕ್ಕಣ್ಣ ಹಾಗೂ ಡಾ. ಮುಡ್ನಾಕೂಡು ಚಿನ್ನಸ್ವಾಮಿ ಇರಲಿದ್ದಾರೆ.

ಸಾಂಸ್ಕೃತಿಕ ನಗರಿಯಲ್ಲಿ 5ನೇ ಬಾರಿ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಈಗಾಗಲೇ ನಾಲ್ಕು ಬಾರಿ ನಡೆದಿದೆ. 1917ರಲ್ಲಿ 3ನೇ ಸಾಹಿತ್ಯ ಸಮ್ಮೇಳನ ಎಚ್.ವಿ. ನಂಜುಂಡಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು. 1930ರಲ್ಲಿ ಆಲೂರು ವೆಂಕಟರಾಯರ ಅಧ್ಯಕ್ಷತೆಯಲ್ಲಿ 16ನೇ ಸಾಹಿತ್ಯ ಸಮ್ಮೇಳನ, 1955ರಲ್ಲಿ ಶಿವರಾಮ ಕಾರಂತರ ಅಧ್ಯಕ್ಷತೆಯಲ್ಲಿ 37ನೇ ಸಾಹಿತ್ಯ ಸಮ್ಮೇಳನ ಹಾಗೂ 1991ರಲ್ಲಿ ಕೆ.ಎಸ್. ನರಸಿಂಹಸ್ವಾಮಿ ಅಧ್ಯಕ್ಷತೆಯಲ್ಲಿ 60ನೇ ಸಾಹಿತ್ಯ ಸಮ್ಮೇಳನ ಮೈಸೂರಿನಲ್ಲಿ ನಡೆದಿದೆ. ಇದೀಗ ಬರೋಬ್ಬರಿ 26 ವರ್ಷಗಳ ಬಳಿಕ 5ನೇ ಬಾರಿಗೆ ಸಾಹಿತ್ಯ ಸಮ್ಮೇಳನಕ್ಕೆ ಮೈಸೂರು ಸಾಕ್ಷಿಯಾಗಲಿದೆ.

2018ರಲ್ಲಿ ಹೊರದೇಶ ಕನ್ನಡಿಗರ ಸಮ್ಮೇಳನ

ಎರಡನೇ ಹೊರನಾಡು ಕನ್ನಡಿಗರ ಸಮ್ಮೇಳನ ಮುಂಬೈನಲ್ಲಿ ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿದೆ. 2018ರಲ್ಲಿ ಸಮ್ಮೇಳನವನ್ನು ಆಯೋಜಿಸಲು ಕಸಾಪ ಯೋಜನೆ ಹಾಕಿಕೊಂಡಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯ ಸಹಯೋಗದಲ್ಲಿ ದುಬೈ, ಸಿಂಗಾಪುರ ಅಥವಾ ಬಹ್ರೇನ್​ನಲ್ಲಿ ಮಾಡಲು ಚಿಂತನೆ ನಡೆದಿದೆ ಎಂದು ಮನು ಬಳಿಗಾರ್ ಮಾಹಿತಿ ನೀಡಿದರು.

Leave a Reply

Your email address will not be published. Required fields are marked *

Back To Top